ಎಷ್ಟೊಂದು ಮಹಾತ್ಮರು ಈ ನಾಡಿನಲ್ಲಿ

ಇಷ್ಟು ಶತಮಾನಗಳ ಕಾಲ ಕಸ ಗುಡಿಸಿ ನೊಂದಿದ್ದ ಸಮುದಾಯ ಈ ಸಮಾಜದಲ್ಲಿ ಬೆರಳಿಲ್ಲದೆ ಹುಟ್ಟಿದ ಮಗುವನ್ನು ನೋಡಿ, ಇರುವ ಬೆರಳಲ್ಲೇ ಬರೆಯುವ ಅಕ್ಷರವಂತ ಜಗತ್ತಿಗೆ ತೆರೆದುಕೊಳ್ಳುವ ಪರಿಯಿದೆಯಲ್ಲಾ ಆ ಬದಲಾವಣೆಯ ಸಮಾಜಕ್ಕೆ ಕಣ್ಣಾಗುವ ಕನಸು ನಮ್ಮದು. ಚಲನೆ ಇಲ್ಲದ ಈ ಸಮಾಜಕ್ಕೆ ಭೀಮಾ ಸಾಹೇಬರು ಹುಟ್ಟಿದ್ದರಿಂದ ಈ ದೇಶಕ್ಕೆ ಪವಿತ್ರ ಸಂವಿಧಾನ ಕೊಟ್ಟಿದ್ದರಿಂದ ಚಲನೆ ಸಿಕ್ಕಿದೆ ಎಂದು ಭಾವಿಸಬೇಕಾಗಿದೆ. ವಂಚಿತ ಸಮುದಾಯಗಳು ಕಣ್ಣು ಬಿಡುವಂತಾಗಿದೆ.

Update: 2024-10-21 05:06 GMT

ರಾಜ್ಯದಲ್ಲಿ ಹಿಂಗಾರು ಮಳೆ ತನ್ನ ಸಿರಿಯನ್ನು ಭೂಮಿಗೆ ಇನ್ನಷ್ಟು ಉಳಿಸಿ ಈ ನೆಲ ಇನ್ನಷ್ಟು ಮೈದುಂಬುವಂತೆ ಮಾಡಿ ತನ್ನ ಋತುವನ್ನು ಪೂರ್ಣಮಾಡಿದೆ. ಆದರೆ ಮನುಷ್ಯನಿಗೆ ತನಗೆ ಎಲ್ಲವೂ ಅನುಕೂಲವಾಗಿರಬೇಕು. ಯಾವುದೂ ಸಾಸಿವೆ ಕಾಳಿನಷ್ಟು ಹೆಚ್ಚುಕಡಿಮೆಯಾದರೂ ಈ ಮನುಷ್ಯ ಸಹಿಸಿಕೊಳ್ಳುವುದಿಲ್ಲ. ತನಗೆ ಆಸರೆಯಾಗಿರುವ ನೆಲ, ತಾನು ಉಸಿರಾಡುವ ಗಾಳಿ, ಬೆಳಕು, ಮಳೆ, ಚಳಿ ಯಾವುದನ್ನು ಸಹಿಸುವುದಿಲ್ಲ ಈ ಮನುಷ್ಯ. ತುಸು ಹೆಚ್ಚಾದರೂ ಅಸಹನೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಈ ಪ್ರಕೃತಿ ಒಮ್ಮೊಮ್ಮೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಮತ್ತೆ ತನ್ನ ಸಹಜತೆಯ ನಡೆಯಾದ ಕ್ಷಮಯಾಧರಿತ್ರಿಯ ಗುಣವನ್ನು ಪ್ರದರ್ಶಿಸುತ್ತಾ ಜೀವಕೋಟಿಯನ್ನು ಸಲಹುತ್ತಿದೆ.

ಪ್ರಕೃತಿ ಒಮ್ಮೆಮ್ಮೆ ವಿಕೋಪಕೊಳ್ಳುವುದು ಮನುಷ್ಯನ ಅತಿಯಾಸೆಯಿಂದ. ಎಲ್ಲವೂ ನಮಗೆ ಬೇಕು. ಕಾಡಿನಲ್ಲಿರುವ ಪ್ರಾಣಿ, ಪಕ್ಷಿ ಅನೇಕ ಪ್ರಭೇದಗಳು ಈಗ ಕಾಣಿಸುತ್ತಿಲ್ಲ. ಆನೆ, ಚಿರತೆ, ಹುಲಿ ಇತ್ಯಾದಿ ಪ್ರಾಣಿಗಳು ಊರಿಗೆ ಬಂದರೆ ಹಾಹಾಕಾರ ಎಬ್ಬಿಸಿಬಿಡುತ್ತೇವೆ. ಆದರೆ ನಾವು ಅವುಗಳ ಜಾಗವನ್ನು ಅತಿಕ್ರಮಿಸಿಕೊಂಡಿದ್ದನ್ನು ಮರೆಯುತ್ತೇವೆ. ಇದು ದುರಾಲೋಚನೆಯ ಮರೆವಲ್ಲವೇ? ಇಂತಹ ಅನಾಹುತಗಳಿಗೆ ಈಗ ಮನುಷ್ಯ ಲೋಕಾಪರಾಧಿಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.

ಆದರೆ ಈ ಮಳೆಯಿಂದ ಎಷ್ಟೆಲ್ಲಾ ಅನುಕೂಲಗಳಿವೆ ಎಂಬುದನ್ನು ಕಂಡುಕೊಳ್ಳುವುದನ್ನು ಮರೆಯುತ್ತೇವೆ. ಈ ಹೊತ್ತು ಬೆಂಗಳೂರಿನಲ್ಲಿ ಮತ್ತು ನಗರ, ಪಟ್ಟಣ, ಹಳ್ಳಿಗಳಲ್ಲಿ ಬೋರ್ವೆಲ್‌ಗಳನ್ನು ಕೊರೆಯುವುದನ್ನು ನೋಡಿದರೆ ಭೂತಾಯಿ ಎದೆಯನ್ನೇ ಬಗೆಯುತ್ತೇವಲ್ಲಾ ಅನ್ನಿಸುತ್ತದೆ. ನಾವು ಆಸ್ಪತ್ರೆಗಳಿಗೆ ಯಾವ ಕಾಯಿಲೆಗಾದರೂ ಪರೀಕ್ಷೆಗೆ ಹೋಗಲಿ ಸೂಜಿ ತೆಗೆದುಕೊಂಡು ನಮ್ಮ ರಕ್ತವನ್ನು ಹೀರಿದಂತೆ ಭೂತಾಯಿಯ ದೇಹದಿಂದ ಅವಳಲ್ಲಿರುವ ಜಲವನ್ನು ಹೀರುತ್ತಿದ್ದೇವೆ ಅನ್ನಿಸುತ್ತದೆ.

ಸಹಜವಾದ ಮೋಡದಿಂದ ಮಳೆ ಬರುತ್ತದೆ. ಹಾಗೆ ಹಿಂದಿನ ಕಾಲದಲ್ಲಿ ಸಾರ್ವಜನಿಕವಾಗಿ ಬಳಸುವ ಬಾವಿಗಳಿದ್ದವು ಮತ್ತು ಮಳೆ ಹೆಚ್ಚಾದಾಗ ಭೂಮಿಯಿಂದಲೇ ನೀರು ಉಕ್ಕುತ್ತದೆ. ಇದು ಸಹಜ ಕ್ರಿಯೆ.

ಆದರೆ ನೀರಿನ ಸರಿಯಾದ ಬಳಕೆಯ ಅರಿವಿಲ್ಲದ ನಾವು ಇದನ್ನು ಮೀರಿದ ದುರಾಸೆಗೆ ನೀರನ್ನು ಕಲುಷಿತಗೊಳಿಸಿದ್ದೇವೆ.

ಮಳೆ ಎಲ್ಲಾ ಕಾರಣಗಳಿಂದ ಒಳ್ಳೆಯದನ್ನೇ ಮಾಡುತ್ತಿದೆ. ಜಲದ ಬಗ್ಗೆ ಗೌರವವಿಲ್ಲದ ನಾವು ಮಳೆ ಬಂದರೆ ಸಾಕು ಕೆಸರಾಯಿತು, ಹಾಗಾಯಿತು, ಹೀಗಾಯಿತು, ನಮ್ಮ ಬದುಕು ದುಸ್ತರವಾಯಿತು ಎಂದು ಬಡಬಡಿಸುತ್ತೇವೆ. ಭೂಮಿಯಲ್ಲಿ ಜಲ ಮುಗಿದರೆ ನಮ್ಮ ಪಾಡೇನು ಎಂದು ಯಾವತ್ತಾದರೂ ಯೋಚಿಸಿದ್ದೇವೆಯೇ? ಆದರೆ ಈ ಬಾರಿ ಒಳ್ಳೆಯ ಮಳೆ ಬಂದಿದೆ. ಈ ಮಳೆ ಉಳಿದ ಜೀವಚರಾಚರಗಳಿಗೆಲ್ಲಾ ತಂಪನ್ನೆರೆದಿರುವುದ ಕಂಡು ನಾವು ಸಂತೋಷ ಪಡಬೇಕು. ನಾವು ಸಾಯುವಾಗ ಕೇಳುವ ಕೊನೆಯ ಮಾತು ‘ಒಂದು ಗುಟುಕು ನೀರು ಬಿಡ್ರಪ್ಪ’ ಎಂದು. ಆ ಜಲದ ನೀತಿ ನಮ್ಮೆದೆಯಲ್ಲಿರಬೇಕು. ಇಲ್ಲದೆ ಹೋದರೆ ನಾವು ಜೀವವಿಲ್ಲದವರೆಂದು ಭಾವಿಸಬೇಕಾಗುತ್ತದೆ. ಹೀಗೆ ನಮ್ಮನ್ನು ನಾವೇ ಪರೀಕ್ಷೆಗೆ ಒಡ್ಡಿಕೊಳ್ಳಬೇಕು.

ಈ ಹಬ್ಬಗಳು, ಉತ್ಸವಗಳು ಬಂದಾಗ ಸಾವಿರಾರು, ಲಕ್ಷಾಂತರ ಜನರು ಸಭೆ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಅವು ಮುಗಿದು ಹೋದಾಗ ಅವು ಉಂಟುಮಾಡುವ ಪರಿಣಾಮ ಕಸ, ಕಡ್ಡಿ, ಪ್ಲಾಸ್ಟಿಕ್ ನೋಡಿದರೆ ಭಯವಾಗುತ್ತದೆ. ಆ ಕಸವೇ ಎಲ್ಲಿ ನಮ್ಮನ್ನು ನುಂಗಿಬಿಡುತ್ತದೋ ಅನ್ನಿಸುತ್ತದೆ. ಆದರೆ ನಮ್ಮ ಪೌರ ಕಾರ್ಮಿಕ ತಂದೆ ತಾಯಂದಿರು, ಸಹೋದರ ಸಹೋದರಿಯರು ಇದು ನಮ್ಮ ಮಕ್ಕಳು ಮಾಡಿರುವ ಕಸ ಕಡ್ಡಿಗಳು. ಅದನ್ನು ಸ್ವಚ್ಛಮಾಡುವುದು ನಮ್ಮ ಧರ್ಮ ಮತ್ತು ಕರ್ತವ್ಯ ಎಂದು ಸ್ವಚ್ಛಮಾಡಿ ರಾಶಿಹಾಕುತ್ತಾರೆ.

ಹಾಗೆ ರಾಶಿ ಹಾಕಿದ ಕಸ ನೋಡಿದಾಗ ಅಚ್ಚರಿಯಾಗುತ್ತದೆ. ಮನುಷ್ಯ ದೊಡ್ಡವನೋ? ಕಸದ ರಾಶಿ ದೊಡ್ಡದೊ? ಎಂದು ನಾವೇ ಪ್ರಶ್ನೆಮಾಡಿಕೊಳ್ಳಬೇಕು ಅನ್ನುವ ಹಾಗೆ ಕಾಣಿಸುತ್ತದೆ. ಅಕಸ್ಮಾತ್ ಮಳೆ ಬಂದುಬಿಟ್ಟರೆ ಕಸ ಕರಗಿ ಅದರ ವಾಸನೆಗೆ ತಲೆತಿರುಗಿ ಬಿದ್ದುಬಿಡುತ್ತೇವೆಯೋ ಅನ್ನಿಸುವಂತಿರುತ್ತದೆ. ಅಂತಹ ವಾಸನೆಯನ್ನು ಸಹಿಸಿಕೊಂಡು ನಮ್ಮ ಸೋದರ ಸೋದರಿಯರು ಲಾರಿಗೆ ಆ ಕಸವನ್ನು ಕೈಯಲ್ಲಿ ತುಂಬುತ್ತಾರೆ. ಹಾಗೆ ಅವರು ಸುಖಾ ಸುಮ್ಮನೆ ತುಂಬಲಿಕ್ಕಾಗುವುದಿಲ್ಲ, ವಿಂಗಡಿಸಬೇಕು. ಅದರಲ್ಲಿ ಹಸಿಕಸ, ಒಣಕಸ ಅದರಲ್ಲಿ ಹತ್ತಾರು ಬೆರಕೆಯಾಗಿರುತ್ತದೆ ಮತ್ತು ವಿಶೇಷವಾಗಿ ಗಾಜಿನ ಚೂರುಗಳಿದ್ದರೆ ಕಾಣಿಸುವುದೇ ಇಲ್ಲ. ಅಕಸ್ಮಾತ್ ಆಗಿ ಕೈಗೆ ಚುಚ್ಚಿದರೆ ಅದು ರಕ್ತ ಬಂದಾಗಲೇ ಗೊತ್ತಾಗುವುದು. ಕೆಲಸದಲ್ಲಿ ಅಷ್ಟು ಮಗ್ನರಾಗಿರುತ್ತಾರೆ. ಇದು ಸಮಾಜದ ಹೃದಯಕ್ಕೆ ಚುಚ್ಚುವಂತಿರಬೇಕು. ಆದರೆ ಇದ್ಯಾವುದೂ ಅವರಿಗೆ ತಾಕುವುದಿಲ್ಲ. ಅಷ್ಟೊಂದು ಜಡವಾಗಿದೆ ಈ ಸಮಾಜ. ಕೆಲವು ಕಸ ಕರಗಿ ಕೈಯಲ್ಲಿ ಎತ್ತಲು ಬಿಡಿ, ಅದರ ಬಳಿಯಲ್ಲಿ ಸುಳಿಯಲೂ ಸಾಧ್ಯವಿಲ್ಲ. ಅಕಸ್ಮಾತ್ ಮೂರುನಾಲ್ಕು

ದಿನವಾಗಿದ್ದರೆ ಆ ಕಸವೆಲ್ಲಾ ಕೊಳೆತು ನಾರುತ್ತದೆ ಮತ್ತು ಹುಳವಾಗಿರುತ್ತವೆ.

ಅದಕ್ಕೆ ಮುಖವಿಟ್ಟು, ಮೂಗಿಟ್ಟು ಸಹಿಸಿಕೊಳ್ಳುತ್ತಾ ಅದನ್ನು ಲಾರಿಗೆ ತುಂಬಿಸುವಾಗ ಕಣ್ಣೀರು ಬರುತ್ತದೆ. ಆದರೂ ಆ ಕೆಲಸವನ್ನು ಅತ್ಯಂತ ಪ್ರೀತಿಯಿಂದ, ಶ್ರದ್ಧೆಯಿಂದ, ಸಹನೆಯಿಂದ ಮಾಡುತ್ತಾರೆಂದರೆ ಅವರನ್ನು ನಾವು ಏನೆಂದು ಕರೆಯಬೇಕು? ನನಗೆ ಈ ಕ್ಷಣ ಅವರ ಪಾದಗಳು ಅವರ ಕೈಗಳನ್ನು ನೆನೆಸಿಕೊಂಡರೆ ಮುಗುಳುನಗೆಯ ಬುದ್ಧ ನೆನಪಾಗುತ್ತಾನೆ. ನೂರಾರು ಮೈಲಿಗಳು ನಡೆದ ಅವನ ಪಾದ ನೆನಪಾಗುತ್ತದೆ. ಅಪಾರ ಪ್ರೀತಿ, ಕರುಣೆ, ಸಹಿಷ್ಣುತೆಯಿಂದ ಭಿಕ್ಷುಪಾತ್ರೆಯನ್ನು ಹಿಡಿದು ಯಾರಾದರೂ ಕೊಟ್ಟರಷ್ಟೇ ಸೇವಿಸಿದ್ದ ಅಪಾರ ತಾಳ್ಮೆಯ ಬುದ್ಧನ ಕೈಗಳು ನೆನಪಾಗುತ್ತದೆ.

ಇವರನ್ನು ಯಾರಿಗೆ ಹೋಲಿಸಿದರೂ ಕಮ್ಮಿಯೇ! ಮಹಾತ್ಮರಿಗಿಂತ ಮಹಾತ್ಮರು ಈ ನಮ್ಮ ಸಮುದಾಯ. ಇದನ್ನೆಲ್ಲ ನಾವು ಎದೆಗಿಳಿಸಿಕೊಳ್ಳದಿದ್ದರೆ ಮನುಷ್ಯರು ಎಂದೆನಿಸಿಕೊಳ್ಳುವುದಕ್ಕೆ ನಾವು ಯೋಗ್ಯರಲ್ಲ.

ಈ ಕೆಲಸ ಮುಗಿದ ಮೇಲೆ ಕಾರ್ಮಿಕರ ಕೈಕಾಲುಗಳನ್ನು ನೋಡಬೇಕು, ವಾಸನೆಯನ್ನು ಕುಡಿದು ಮನೆಗೆ ಮರಳಿದವರಿಗೆ ಊಟ ಮಾಡಲು ಸಾಧ್ಯವೇ ಎಂದು ಯೋಚಿಸಿದರೆ, ಈ ದೇಶದ ಸಾಮಾಜಿಕ ಸ್ಥಿತಿ ಮತ್ತು ಈ ಪೌರ ಕಾರ್ಮಿಕರನ್ನು ಹೇಗೆಲ್ಲಾ ಕಾಣುತ್ತಿದ್ದೇವೆ, ಅವರಿಗೆ ಕೊಡುತ್ತಿರುವ ಸಂಬಳ ಎಷ್ಟು? ಬೆಳಗಾಗುತ್ತಲೇ ಸೂರ್ಯ ಹುಟ್ಟುವ ಮುಂಚೆ ಪ್ರತೀ ಬೀದಿಗಳ ಮನೆಗಳಲ್ಲಿರುವ ಮುದ್ದು ಮಕ್ಕಳ ಪಾಡೇನು? ತಂದೆತಾಯಿಯರು ಇಬ್ಬರೂ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ, ಆ ಮಕ್ಕಳ ಊಟ, ತಿಂಡಿಯ ಕಥೆ ಏನು? ಶಿಕ್ಷಣ ಪಡೆಯುವ ರೀತಿ, ಅವರ ಮನೆ ಹೇಗಿರಬಹುದು? ಯಾರಿಗೂ ಇದು ಕಾಣಿಸಿಕೊಳ್ಳದ ಸೆರೆಹಿಡಿಯಲಾಗದ ಚಿತ್ರಗಳು. ಆದರೂ ಎಲ್ಲವನ್ನು ಮೀರಿ ಅವರು ಏನು ಆಗಿಯೇ ಇಲ್ಲ ಎನ್ನುವ ಹಾಗೆ ನಮ್ಮೊಟ್ಟಿಗೆ ಬದುಕುತ್ತಿದ್ದಾರೆ.

ಉಳಿದವರೆಲ್ಲರ ಸುಖ ಸಂತೋಷಗಳಿಗೆ ಸಾಮಾಜಿಕವಾಗಿ ತಂದೆ ತಾಯಿಗಳಾಗಿದ್ದಾರೆ. ಇಂತಹವರನ್ನು ಹೇಗೆ ನಡೆಸಿಕೊಳ್ಳಬೇಕೆಂಬ ಕನಿಷ್ಠ ಜ್ಞಾನ ಈ ಸಮಾಜಕ್ಕೆ ಇಲ್ಲದಂತಾಗಿದೆ.

ಸ್ವಚ್ಛಭಾರತ ಆಗಬೇಕು ನಿಜ. ಆದರೆ ಸ್ವಚ್ಛ ಭಾರತವನ್ನು ನಿರ್ಮಿಸುವವರ ಬದುಕು ಹೇಗಿರಬೇಕು ಎನ್ನುವುದು ಯಾರಿಗೂ ಅರ್ಥವಾದಂತೆ ಕಾಣಿಸುತ್ತಿಲ್ಲ. ಹಿಂದೆಲ್ಲಾ ಜಾಡಮಾಲಿಗಳಾಗಿ ಮಲ ಹೊತ್ತವರು, ಜಲಗಾರರಾಗಿದ್ದವರು ಈಗ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ದುರಂತ ಎಂದರೆ, ಈ ನಾಡಿನಲ್ಲಿ ಮಲ ತಿನ್ನಿಸಲಾಯಿತು ಮತ್ತು ಮೂತ್ರ ಕುಡಿಸಲಾಯಿತು. ಸಮಾಜದ ಮೆದುಳು ಮತ್ತು ಹೃದಯ ಹೇಗಿದೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕಾ? ಇದು ನಮ್ಮ ಶ್ರೇಷ್ಠ ಭಾರತ. ಇವರನ್ನು ಎಷ್ಟು ಕೀಳಾಗಿ ಕಾಣುತ್ತಿದ್ದಾರೆಂದರೆ, ನಗರದ ಬೀದಿಗಳಲ್ಲಿ ಇವರ ಶ್ರಮವನ್ನು ನೋಡಿಯೂ ಇವರನ್ನು ಕಸದವರು ಎಂದು ಏಕವಚನದಲ್ಲಿ ಮಾತನಾಡಿ ಇವರ ಮೇಲೆ ಹಲ್ಲೆ ಮಾಡುತ್ತಾರೆ. ಇದನ್ನು ಈ ಕ್ಷಣಕ್ಕೂ ಕೇಳುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ.

ಒಮ್ಮೊಮ್ಮೆ ಕುಡಿಯಲು ನೀರು ಕೇಳಿದರೂ ಕೊಟ್ಟಿರುವುದಿಲ್ಲ. ಜನಕ್ಕೆ ಅರ್ಥಮಾಡಿಸಲು ಪ್ರಯತ್ನಿಸಿದಷ್ಟೂ ಎಲ್ಲವೂ ವ್ಯರ್ಥವಾಗುತ್ತಿದೆಯಲ್ಲಾ ಅನ್ನಿಸುತ್ತದೆ. ಈ ನಾಡಿನ ಸಾಮಾಜಿಕ ಚಿಂತನೆಯ ದಾರಿದ್ರ್ಯ ಯಾವತ್ತೂ ಎಷ್ಟು ಕಠೋರವಾಗಿದೆ ಮತ್ತು ಹಾಗೇಯೇ ಇದೆ.

ಆದರೆ ನಾವು ಭ್ರಮನಿರಸನಗೊಳ್ಳಬೇಕಿಲ್ಲ. ಪ್ರಕೃತಿ ಸಮನಾಗಿರುವ ನಾವು ಉಳಿದವರಿಗೆ ಪ್ರಕೃತಿಯ ಪಾಠ ಹೇಳಿಕೊಡಬೇಕಾಗಿದೆ.

ಇಷ್ಟೊಂದು ದೀರ್ಘ ಟಿಪ್ಪಣಿಯನ್ನು ಬರೆಯಲು ಕಾರಣ ಕನ್ನಡದ ನೆಲದಲ್ಲೇ ಅರಳಿದ ಸೃಜನಶೀಲತೆಯ ಮಾನವೀಯ ಸಂವೇದನೆಯ ಕೆಲವು ಮನಸ್ಸುಗಳು. ಈ ಸೃಜನಶೀಲ ಮನಸ್ಸುಗಳು ಇಲ್ಲದೆ ಹೋಗಿದ್ದರೆ ಇನ್ನಷ್ಟು ಹಿಂಸೆ ರಕ್ತಪಾತಗಳು ಈ ನೆಲದಲ್ಲಿ ನಡೆಯುತ್ತಿದ್ದವು ಅನ್ನಿಸುತ್ತದೆ. ಆದರೆ ಒಳ್ಳೆಯದನ್ನು ಹೇಳಿದ ಕ್ರಿಸ್ತ,

ಬಸವಣ್ಣ, ಗಾಂಧಿ ಹಿಂಸೆಗೆ ಬಲಿಯಾದರು, ಇದು ತರವೇ? ಎಂದು ಕೇಳಿದರೆ ಸರಿ ಎನ್ನುವವರ ಗಂಟಲು ಈಗ ದೊಡ್ಡದಾಗಿದೆ. ಆದರೂ ನಾವು ಈ ಸಂವಿಧಾನ ಮತ್ತು ಪ್ರಕೃತಿ ಹೇಳಿದಂತೆ ಬದುಕೋಣ.

ಕನ್ನಡದ ಕಥಾ ಲೋಕ ಬಹಳ ವಿಶಿಷ್ಟ ಸಂವೇದನೆಯಿಂದ ಕೂಡಿದೆ. ಈ ಕ್ಷಣಕ್ಕೆ ನಿಮಗನ್ನಿಸುವ ಕನ್ನಡದ ಮಹತ್ವದ ಕಥೆಯಾವುದು ಎಂದು ಕೇಳಿದರೆ ನನಗಿಷ್ಟವಾದ ಅನೇಕ ಲೇಖಕರು, ಕಥೆಗಾರರು ಕಣ್ಣ ಮುಂದೆ ಬಂದು ಹೋಗುತ್ತಾರೆ. ಆದರೆ ಈ ಕಥೆಯನ್ನು ಮೊದಲಬಾರಿಗೆ ಕವಿ ಸತ್ಯಮಂಗಲ ಮಹಾದೇವ ಹೇಳಿದಾಗ ಅಂತಃಕರಣವನ್ನು ಕಲಕಿಬಿಟ್ಟಿತು. ಈ ದೇಶದ ಎಲ್ಲ ನನ್ನ ಅವ್ವಂದಿರು ನನ್ನ ಒಳಗೊಂಡು ಎಲ್ಲಾ ಪೌರಕಾರ್ಮಿಕ ತಾಯಂದಿರು ನೆನಪಾದರು. ತಾಯಿಗಿರುವ ಈ ಭೂಮಿಯ ಸಹನೆ ಇನ್ಯಾರಿಗೂ ಇಲ್ಲ ಅನ್ನಿಸಿತು. ಆ ಕಥೆಯ ಹೆಸರು

‘ಬಚ್ಚಿಸು’. ಲೇಖಕಿ, ಪತ್ರಕರ್ತೆ, ಕವಿ, ನಟಿ, ನಿರ್ದೇಶಕಿ, ವಿಶೇಷವಾಗಿ ಪೌರಕಾರ್ಮಿಕರ ಪರವಾಗಿ ಗಟ್ಟಿ , ಪ್ರಾಮಾಣಿಕವಾಗಿ ಹೋರಾಟಕ್ಕಿಳಿಯುವ ಹೋರಾಟಗಾರ್ತಿ ದು.ಸರಸ್ವತಿ. ಈ ಕಥೆಯನ್ನು ಮತ್ತೆ ಹುಲಿಕುಂಟೆ ಮೂರ್ತಿ ನನಗೆ ವಾಟ್ಸ್‌ಆ್ಯಪ್ ಕಳಿಸಿದಾಗ ಓದಿ, ದೇಹ ಮಂಜುಗಡ್ಡೆಯಂತೆ ನಿಧಾನವಾಗಿ ಕರಗುತ್ತಿದೆ ಅನ್ನಿಸಿತು. ಅಷ್ಟೊಂದು ಮನಕಲಕಿದ ಕಥೆಯೆಯನ್ನು ನಾನು ಇದುವರೆಗೂ ಓದಿಲ್ಲ . ಒಬ್ಬ ಸಮರ್ಥ ಚಿಂತನಾಶೀಲ ಸೂಕ್ಷ್ಮಮತಿ ಹೆಣ್ಣುಮಗಳು ಮಾತ್ರ ಇಂತಹ ಮಹತ್ವದ ಕಥೆ ಬರೆಯಲು ಸಾಧ್ಯ.

ಒಮ್ಮೆ ಸಂಸ್ಕೃತಿ ಇಲಾಖೆ ಕೊಡಮಾಡುವ ಮಹತ್ವದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾನು ಇದ್ದೆ. ಅದರ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು, ಅಪಾರ ತಾಳ್ಮೆಯ ನಾ ಡಿಸೋಜ ವಹಿಸಿದ್ದರು. ಅದು ವಿಶೇಷವಾಗಿ ಮಹಿಳೆಯರಿಗೆ ಕೊಡುವ ಪ್ರಶಸ್ತಿಯಾಗಿತ್ತು.

ಬಹಳ ಕಾಲದಿಂದ ಪೌರಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿರುವ ದು.ಸರಸ್ವತಿ ಅವರ ಹೆಸರನ್ನು ಸೂಚಿಸಿದೆ. ಇನ್ನುಳಿದವರು ಬೇರೆ ಬೇರೆ ಹೆಸರುಗಳನ್ನೂ ಸೂಚಿಸಿದರು. ಕೆಲವು ಲೇಖಕಿಯರು ಕೂಡ ನಾನು ಹೇಳಿದ ಹೆಸರಿಗೆ ಸಹಮತ ವ್ಯಕ್ತಪಡಿಸಿದರು. ಕೆಲವು ಪುರುಷರು ಗೊತ್ತು ಗೊತ್ತಿಲ್ಲದ ಹಾಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ನಾನು ನನ್ನ ಗಟ್ಟಿ ಧ್ವನಿಯಲ್ಲಿ ಕಾವ್ಯ, ನಾಟಕ, ಸಾಹಿತ್ಯ ಮತ್ತು ಹೋರಾಟ ಈ ಎಲ್ಲಾ ದೃಷ್ಟಿಯಿಂದ ಈ ಪ್ರಶಸ್ತಿಯನ್ನು ದು.ಸರಸ್ವತಿಯವರಿಗೆ ಕೊಡಬೇಕೆಂದು ಹಠಮಾಡಿದೆ. ನನ್ನ ಪಕ್ಕದಲ್ಲೇ ಕುಳಿತಿದ್ದ ಅಣ್ಣ ಕೆ.ಬಿ. ಸಿದ್ದಯ್ಯನವರು ನನ್ನ ಜೋರು ಧ್ವನಿಯನ್ನು ನೋಡಿಯೂ ನಗುತ್ತಿದ್ದರು. ‘ಇದನ್ನೇ ಸಮಾಧಾನವಾಗಿ ಹೇಳು ಸುಬ್ಬು’ ಎಂದರು. ಇದನ್ನೆಲ್ಲಾ ಗಮನಿಸುತ್ತಿದ್ದ ನಾ ಡಿಸೋಜ ಅವರು ನನ್ನ ಆಯ್ಕೆ ಕೂಡಾ ಸುಬ್ಬು ಹೇಳಿದ ಹೆಸರಿಗೆ ಆಗಲಿ ಎಂದರು. ನನಗೆ ತುಂಬಾ ಖುಷಿ ಆಯಿತು. ಈಗ ಈ ಕಥೆ ಓದಿದ ಮೇಲೆ ನಾನು ಒಬ್ಬ ಜೀವ ಸ್ಪರ್ಶದ ಸಂವೇದನೆಯುಳ್ಳ ಕಥೆಗಾರ್ತಿಗೆ ಪ್ರಯತ್ನ ಮಾಡಿದೆನಲ್ಲಾ ಅಂತ ಸಂತೋಷವಾಗುತ್ತದೆ. ಇದನ್ನು ಬರೆಯುವಾಗ ನೀವು ಸಮಾಜದ ಕಣ್ಣು ತೆರೆಸುವ ಬೆಳಕಿನ ಕಥೆ ಬರೆದಿದ್ದೀರಿ ಅಭಿನಂದನೆಗಳು ಸರಸ್ವತಿ ಮೇಡಂ ಅವರೇ ಎಂದು ಹೇಳಲೇ ಬೇಕು.

ಈ ಕಥೆ ಕೆಲವು ವರ್ಷಗಳ ಹಿಂದೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಬಿಕಾಂ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಆ ಪಠ್ಯವನ್ನು ಬೋಧಿಸುತ್ತಿದ್ದ ಕವಿ ಸತ್ಯಮಂಗಲ ಮಹಾದೇವ್ ತುಂಬಾ ಭಾವುಕರಾಗಿ ಹೇಳುವ ಸಂದರ್ಭದಲ್ಲಿ, ಒಬ್ಬ ವಿದ್ಯಾರ್ಥಿನಿ ಎದ್ದು ನಿಂತು ‘ಪ್ಲೀಸ್ ಮುಂದಕ್ಕೆ ಹೇಳಬೇಡಿ ಸರ್ ಕೇಳಲು ಕಷ್ಟವಾಗುತ್ತದೆ’ ಎಂದು ಕೇಳಿದ್ದಕ್ಕೆ ಸ್ವತಃ ಮಹಾದೇವ್ ಅವರು ‘ನಿಮಗೆ ಕೇಳುವುದಕ್ಕೆ ಇಷ್ಟು ಕಷ್ಟವಾದರೆ, ಇದನ್ನು ದಿನವೂ ಅನುಭವಿಸುವವರ ಬದುಕು ಹೇಗಿರುತ್ತದೆ ಎನ್ನುವುದನ್ನು ನೀವು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಿ ಮತ್ತು ಅವರನ್ನು ಪ್ರೀತಿಯಿಂದ ಗೌರವದಿಂದ ನಿಮ್ಮ ಕುಟುಂಬದವರೇ ಎಂದು ಭಾವಿಸಿ’ ಎಂದು ಹೇಳಿದ್ದು ಈಗ ನೆನಪಾಗುತ್ತಿದೆ.

ಆ ಕಥೆಯನ್ನು ನೀವೆಲ್ಲರೂ ಓದಲೇ ಬೇಕು. ಆ ಕಥೆಯ ಪುಟ್ಟ ಸಾರಾಂಶ ಹೇಳುವುದದಾರೆ ಅದು ಹೀಗಿದೆ.

ಪೌರಕಾರ್ಮಿಕಳಾದ ತಾಯಿ, ಚೊಚ್ಚಲ ಹೆರಿಗೆಗೆಂದು ಮನೆಗೆ ಬಂದಿದ್ದ ತನ್ನ ಮಗಳಿಗೆ ಮಾಂಸದ ಅಡುಗೆ ಮಾಡಿ ಬಡಿಸುತ್ತಾಳೆ. ಮಗಳು ‘ಅವ್ವ ನೀನು ಊಟ ಮಾಡು’ ಅಂದಾಗ, ಸತ್ತ ನಾಯಿಯನ್ನು ಎಳೆದು ಹಾಕುವಾಗ ಆ ವಾಸನೆಯನ್ನು ತಡೆಯಲಾರದೆ, ಅವಳ ಆಹಾರ ಒಂದು ಕಪ್ ಟೀ ಮಾತ್ರ ಆಗಿತು. ಇಂತಹ ಸಹನೆ ಯಾರಿಗಿದೆ? ಹಿಂಗೆ ಮುಂದುವರಿದ ಕಥೆಯಲ್ಲಿ ತನ್ನ ಮಗಳಿಗೆ ಮಗು ಹುಟ್ಟಿದಾಗ ಆ ಕಂದಮ್ಮನಿಗೆ ಕೆಲವು ಬೆರಳುಗಳು ಇರುವುದಿಲ್ಲ. ತಾಯಿ ಮಗಳಿಗೆ ಸಮಾಧಾನ ಮಾಡುತ್ತಾ, ಶತಮಾನಗಳಿಂದ ಬೆರಳುಗಳಿದ್ದರೆ ನಮ್ಮ ಹಾಗೆ ಮುಂದೆ ಪೊರಕೆ ಹಿಡಿಯುತ್ತದೆ. ಇರುವ ಬೆರಳುಗಳು ಅಕ್ಷರ ತಿದ್ದಲು ಸಾಕು ಎಂದು ಹೇಳುತ್ತಾಳೆ.

ಇದು ಸಂಕಷ್ಟದಲ್ಲೂ ಜೀವನ ಪ್ರೀತಿಯನ್ನು ಹೊಂದುವ ಬಡವರ ಬದುಕು. ಇಷ್ಟು ಶತಮಾನಗಳ ಕಾಲ ಕಸ ಗುಡಿಸಿ ನೊಂದಿದ್ದ ಸಮುದಾಯ ಈ ಸಮಾಜದಲ್ಲಿ ಬೆರಳಿಲ್ಲದೆ ಹುಟ್ಟಿದ ಮಗುವನ್ನು ನೋಡಿ, ಇರುವ ಬೆರಳಲ್ಲೇ ಬರೆಯುವ ಅಕ್ಷರವಂತ ಜಗತ್ತಿಗೆ ತೆರೆದುಕೊಳ್ಳುವ ಪರಿಯಿದೆಯಲ್ಲಾ ಆ ಬದಲಾವಣೆಯ ಸಮಾಜಕ್ಕೆ ಕಣ್ಣಾಗುವ ಕನಸು ನಮ್ಮದು. ಚಲನೆ ಇಲ್ಲದ ಈ ಸಮಾಜಕ್ಕೆ ಭೀಮಾ ಸಾಹೇಬರು ಹುಟ್ಟಿದ್ದರಿಂದ ಈ ದೇಶಕ್ಕೆ ಪವಿತ್ರ ಸಂವಿಧಾನ ಕೊಟ್ಟಿದ್ದರಿಂದ ಚಲನೆ ಸಿಕ್ಕಿದೆ ಎಂದು ಭಾವಿಸಬೇಕಾಗಿದೆ. ವಂಚಿತ ಸಮುದಾಯಗಳು ಕಣ್ಣು ಬಿಡುವಂತಾಗಿದೆ. ಈ ಬೆಳಕಿನ ಸಮಾಜ ಅಂಬೇಡ್ಕರ್ ತೋರಿದ ತೋರು ಬೆರಳಿನ ಹಾದಿಯಲ್ಲಿ ಅಕ್ಷರದ ಅರಿವನ್ನು ಕಲಿಯುವ ಹಂಬಲಕ್ಕೆ ಲೋಕಸ್ಪರ್ಶಕ್ಕೆ ತನ್ನನ್ನು ತೆರೆದು ಕೊಳ್ಳುವ ಹಂಬಲದಲ್ಲಿದೆ. ಅದು ಸಾಧ್ಯವಾದಾಗ ಸಮಾನತೆ ಸಾಧ್ಯವಾಗಬಹುದೇನೋ .....

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸುಬ್ಬು ಹೊಲೆಯಾರ್

contributor

Similar News