ಕುಸಿಯುತ್ತಿರುವ ನೈತಿಕತೆಯೂ ನಾಗರಿಕ ಜವಾಬ್ದಾರಿಯೂ

ರಾಜಕೀಯ ನಾಯಕರು ತಮ್ಮ ಹಿಂಬಾಲಕರಿಗೆ ನೈತಿಕ ಮಾದರಿಯನ್ನು ರೂಪಿಸಲು ವಿಫಲರಾಗಿದ್ದಾರೆ.

Update: 2024-10-21 05:11 GMT
Editor : Thouheed | Byline : ನಾ. ದಿವಾಕರ

ಒಂದು ಸಮಾಜ ಉನ್ನತಿಯೆಡೆಗೆ ಸಾಗುವ ಪ್ರಕ್ರಿಯೆಯಲ್ಲಿ ಅನೇಕ ರೀತಿಯ ಅಡಚಣೆಗಳನ್ನು ಎದುರಿಸುವುದು ಸಹಜ. ಜಗತ್ತಿನ ಭೂಪಟದಲ್ಲಿ ಯಾವುದೇ ದೇಶವನ್ನು ಗಮನಿಸಿದರೂ, ಶತಮಾನಗಳ ನಡಿಗೆಯಲ್ಲಿ ಅಲ್ಲಿನ ಸಮಾಜಗಳು ಹಲವು ಏಳುಬೀಳುಗಳನ್ನು ಸಹಿಸಿಕೊಳ್ಳುತ್ತಲೇ, ಔನ್ನತ್ಯ ಸಾಧಿಸಲು ಹೆಣಗಾಡುತ್ತಿರುವುದನ್ನು ಕಾಣುತ್ತೇವೆ. ನಿಜಾರ್ಥದಲ್ಲಿ ಯಾವುದೇ ದೇಶವೂ ಪರಿಪೂರ್ಣ ನಾಗರಿಕತೆಯನ್ನು ಸಾಧಿಸಿರುವ ಉದಾಹರಣೆಗಳು ನಮ್ಮ ಮುಂದಿಲ್ಲ. ಏಕೆಂದರೆ ಅಲ್ಲಿನ ಸಮಾಜಗಳು ಸೃಷ್ಟಿಸಿರುವ ಅಸಮಾನತೆಗಳು, ಅಸಮಾಧಾನಗಳು ಹಾಗೂ ಭ್ರಮಾಧೀನತೆಯ ನೆಲೆಗಳು, ಆಯಾ ಸಮಾಜದ ತಳಮಟ್ಟದವರೆಗೂ ಪ್ರಭಾವಿಸಿದ್ದು, ಸಾಮಾಜಿಕ ಸಮನ್ವಯತೆ ಮತ್ತು ಸಹಬಾಳ್ವೆಯ ಸೇತುವೆಗಳನ್ನು ಭಂಗಗೊಳಿಸುತ್ತಲೇ ಇರುತ್ತವೆ.

ಆಡಳಿತಾತ್ಮಕ ಪರಿಭಾಷೆಯಲ್ಲಿ ನಿರ್ವಚಿಸಲಾಗುವ ಭಯೋತ್ಪಾದನೆ, ಉಗ್ರವಾದ, ತೀವ್ರಗಾಮಿ ಚಿಂತನೆ ಅಥವಾ ಸಮಾಜಘಾತುಕತೆ ಇವೆಲ್ಲವನ್ನೂ ನಾಗರಿಕ ಪರಿಭಾಷೆಯಲ್ಲಿ ನಿಷ್ಕರ್ಷೆ ಮಾಡುವಾಗ ಕಾಣುವ ವಾಸ್ತವ ಎಂದರೆ, ಇವಾವುದೂ ನಿರ್ವಾತದಲ್ಲಿ ಸೃಷ್ಟಿಯಾಗುವುದಲ್ಲ. ಆಯಾ ಸಮಾಜದ ಜನಸಮುದಾಯಗಳನ್ನು ಬೌದ್ಧಿಕವಾಗಿ ಹಾಗೂ ಭೌತಿಕವಾಗಿ ಪ್ರಭಾವಿಸುವಂತಹ ಸಾಂಸ್ಕೃತಿಕ ಚಿಂತನೆಗಳು, ಸಾಮಾಜಿಕ ಧೋರಣೆ ಹಾಗೂ ರಾಜಕೀಯ ಮಾದರಿಗಳು ಈ ಅಪಸವ್ಯಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಹುಟ್ಟುಹಾಕುತ್ತವೆ. ಸಾಮಾನ್ಯವಾಗಿ ಭೌಗೋಳಿಕವಾಗಿ ಹಾಗೂ ಬೌದ್ಧಿಕವಾಗಿ ಇಡೀ ಸಮಾಜವನ್ನು ನಿರ್ದೇಶಿಸುವ ತಾತ್ವಿಕ ಚಿಂತನಾಧಾರೆಗಳು ಮತ್ತೊಂದು ಬದಿಯಲ್ಲಿ ಇರಬಹುದಾದ ಭಿನ್ನಭೇದಗಳನ್ನು ಅಥವಾ ಅಸಮತೆಗಳನ್ನು ಗುರುತಿಸಲು ವಿಫಲವಾದಾಗ, ಈ ನಕಾರಾತ್ಮಕ ನಡವಳಿಕೆಗಳ ಮಾದರಿಗಳು ವಿವಿಧ ಸ್ವರೂಪಗಳಲ್ಲಿ ಹುಟ್ಟಿಕೊಳ್ಳುತ್ತವೆ.

ರಾಜಕೀಯ ಸಂಸ್ಕೃತಿ-ಪರಂಪರೆ

ಒಂದು ದೇಶದ ರಾಜಕಾರಣ, ರಾಜಕೀಯ ಪರಿಭಾಷೆ ಮತ್ತು ನಾಗರಿಕ ಸಂಕಥನಗಳ ಮಾದರಿಗಳನ್ನು ನಿರ್ದೇಶಿಸುವ ಪ್ರಬಲ ಸಮಾಜವೊಂದು, ತನ್ನ ಚಾರಿತ್ರಿಕ ತಪ್ಪುಗಳಿಂದ ಪಾಠ ಕಲಿಯದೆ ಸ್ವ-ಕಲ್ಪಿತ ಶ್ರೇಷ್ಠತೆಯ ಹಮ್ಮು ಬೆಳೆಸಿಕೊಂಡಾಗ, ಅದು ತನ್ನ ಸುತ್ತಲೂ ಬೆಳೆಸುವ, ಪೋಷಿಸುವ ಹಾಗೂ ಸಲಹುವ ಒಂದು ಸಾಮಾಜಿಕ ವಾತಾವರಣವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಈ ಪರಿಸರದಲ್ಲೇ ಬದುಕುವ ಯುವ ಜನಾಂಗವು ಅತ್ತ ಹಿನ್ನೋಟವೂ ಇಲ್ಲದ ಇತ್ತ ಮುಂಗಾಣ್ಕೆಯೂ ಇಲ್ಲದೆ ದಿಕ್ಕು ತಪ್ಪುವಂತಾಗುತ್ತದೆ. ತಾವು ಬದುಕಲಿಚ್ಛಿಸುವ ಅಥವಾ ತಮ್ಮ ಮುಂದಿನ ತಲೆಮಾರು ಬದುಕಬೇಕಿರುವ ಸಾಮಾಜಿಕ ಪರಿಸರ ಹೇಗಿರಬೇಕು ಎಂಬ ಕಲ್ಪನೆಯೇ ಇಲ್ಲದ ಈ ಯುವ ಸಮೂಹ ತನ್ನನ್ನು ನಿಯಂತ್ರಿಸುವ ಅದೇ ‘ಪ್ರಬಲ ಸಮಾಜ’ದಿಂದ ನಿರ್ದೇಶಿಸಲ್ಪಡುತ್ತದೆ.

ಈ ಯುವ ಜನಾಂಗಕ್ಕೆ ಮುಂದಾರಿ ತೋರುವ ದೀವಿಗೆಯಾಗುವ ಔನ್ನತ್ಯವನ್ನು ‘ಪ್ರಬಲ ಸಮಾಜ’ ಪಡೆದುಕೊಳ್ಳದೇ ಹೋದರೆ ಸಾಮಾಜಿಕವಾಗಿ ಪ್ರಕ್ಷುಬ್ಧತೆ ಆವರಿಸುವುದಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿ ಹಿಂಚಲನೆಯೂ ಉಂಟಾಗುತ್ತದೆ. ವರ್ತಮಾನದ ಭಾರತ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಾರತವನ್ನು ಇಂದು ಸಾಂವಿಧಾನಿಕವಾಗಿ ಆಳುತ್ತಿರುವ ರಾಜಕೀಯ ಶಕ್ತಿಗಳೂ, ಬೌದ್ಧಿಕವಾಗಿ ನಿರ್ದೇಶಿಸುತ್ತಿರುವ ಸಾಂಸ್ಕೃತಿಕ ಶಕ್ತಿಗಳೂ ಮತ್ತು ಸಾಮಾಜಿಕವಾಗಿ ಪ್ರಭಾವಿಸುವ ಪ್ರಬಲ ಸಮಾಜವೂ ಒಂದೇ ಆಗಿರುವುದು ಈ ಸಂದಿಗ್ಧತೆಗೆ ಕಾರಣವಾಗಿದೆ. ಅಧಿಕಾರ ರಾಜಕಾರಣದ ಚೌಕಟ್ಟಿನಿಂದ ಹೊರನಿಂತು ನೋಡಿದಾಗ, ಈ ಆವರಣದಲ್ಲಿ ಕಾಣಬಹುದಾದ ರಾಜಕೀಯ ಸಾಮ್ಯತೆ ಗಮನಾರ್ಹವಾದುದು. ಭಾರತೀಯ ಸಮಾಜ ಎದುರಿಸುತ್ತಿರುವ ವೈಕಲ್ಯಗಳ ನೆಲೆಯಲ್ಲಿ ಯೋಚಿಸಿದಾಗ, ನವ ಉದಾರವಾದ, ಮಾರುಕಟ್ಟೆ ಕಾರ್ಪೊರೇಟೀಕರಣ, ಮತೀಯ ಚಿಂತನೆಗಳು ಮತ್ತು ಜಾತಿ ರಾಜಕಾರಣವನ್ನು ಮರುವಿಮರ್ಶೆಗೊಳಪಡಿಸಬೇಕಾದ ಅವಶ್ಯಕತೆ ಎದ್ದು ಕಾಣುತ್ತದೆ.

ಭಾರತದ ರಾಜಕೀಯ ವಲಯವನ್ನು ಕಾಡುತ್ತಿರುವ ಹಣಕಾಸು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮೇಲ್ವರ್ಗದ ಹಮ್ಮುಬಿಮ್ಮುಗಳು, ಜಾತಿರಾಜಕಾರಣ ಸಂಕುಚಿತತೆ ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ಸುಳ್ಳುಗಳನ್ನೇ ಪ್ರಮಾಣೀಕರಿಸುವ ಒಂದು ಅನೈತಿಕತೆಯ ವಾತಾವರಣ ಇವೆಲ್ಲವೂ ಸಹ ಇಂದು ಸಾರ್ವಜನಿಕ ಮರುವಿಮರ್ಶೆಗೊಳಗಾಗಬೇಕಿದೆ. ಇದರೊಟ್ಟಿಗೆ ಸೃಜನಾತ್ಮಕ ಮನಸ್ಸುಗಳನ್ನು ಕಾಡುವ ಅಂಶವೆಂದರೆ ಅಧಿಕಾರ ರಾಜಕಾರಣದಲ್ಲಿ ವಿಜೃಂಭಿಸುತ್ತಿರುವ ಸಿರಿವಂತಿಕೆ ಮತ್ತು ಶಿಥಿಲವಾಗುತ್ತಿರುವ ವ್ಯಕ್ತಿಗತ ನೈತಿಕತೆ. ಹರಿಯಾಣ ವಿಧಾನಸಭೆಗೆ ಚುನಾಯಿತರಾಗಿರುವ 90 ಶಾಸಕರ ಪೈಕಿ 86 ಕೋಟ್ಯಧಿಪತಿಗಳಿರುವುದು ಸಿರಿವಂತಿಕೆಯ ಸಂಕೇತವಾದರೆ, ಅಧಿಕಾರದ ಸ್ನೇಹಹಸ್ತದಿಂದ ಅಪರಾಧಿಗಳೂ ಮುಕ್ತರಾಗುತ್ತಿರುವುದು ನೈತಿಕತೆಯ ಅಧಃಪತನಕ್ಕೆ ಸಂಕೇತವಾಗಿ ಕಾಣುತ್ತದೆ.

ಪ್ರಜಾಪ್ರಭುತ್ವ ಮತ್ತು ನೈತಿಕತೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಸಂಸದೀಯ ಅಧಿಕಾರವೇ ಅಂತಿಮ ಗುರಿ ಎನಿಸುವುದು ಸಹಜವೇ ಆದರೂ, ಈ ಅಧಿಕಾರವನ್ನು ಪಡೆದುಕೊಳ್ಳುವ ಹಾದಿಯಲ್ಲಿ ಅನುಸರಿಸಬೇಕಾದ ಮಾರ್ಗಗಳು, ನಡವಳಿಕೆಗಳು, ತಾತ್ವಿಕ ಚಿಂತನೆಗಳು ಹಾಗೂ ನಾಗರಿಕ ವರ್ತನೆಗಳು ನಾಗರಿಕತೆಯನ್ನು ಪ್ರತಿಬಿಂಬಿಸುವ ನೈತಿಕ ನೆಲೆಗಟ್ಟಿನಲ್ಲಿರಬೇಕಾದ್ದು ಅವಶ್ಯ. ದುರಂತ ಎಂದರೆ ಭಾರತದ ರಾಜಕಾರಣ ಈ ನೈತಿಕ ನೆಲೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಬೆತ್ತಲಾಗಿದೆ. ಕರ್ನಾಟಕದ ಮುಡಾ ಹಗರಣವು ಭ್ರಷ್ಟಾಚಾರದ ಕೂಪದೊಳಗಿದ್ದ ಎಲ್ಲ ಭ್ರಷ್ಟ ಜಂತುಗಳನ್ನೂ ಒಂದೊಂದಾಗಿ ಹೊರತೆಗೆಯುತ್ತಿರುವುದು ಇಡೀ ರಾಜಕೀಯ ವ್ಯವಸ್ಥೆಯ ಅನೈತಿಕತೆಯ ಸಂಕೇತವಾಗಿ ಕಾಣುತ್ತದೆ. ಕೇಂದ್ರಸಚಿವ, ಬಿಜೆಪಿ ನಾಯಕ ಪ್ರಹ್ಲಾದ್ ಜೋಷಿ ಅವರ ಸೋದರನ ಮೇಲೆ ಹೊರಿಸಲಾಗಿರುವ ಟಿಕೆಟ್‌ಗಾಗಿ ಹಣ ಆರೋಪವು ಈ ಅನೈತಿಕತೆಯ ವಾಣಿಜ್ಯೀಕರಣದ ಸ್ವರೂಪವಾಗಿ ಕಾಣುತ್ತದೆ.

ನಾಗರಿಕರ ಸೃಷ್ಟಿಯಲ್ಲಿ ಭ್ರಷ್ಟಾಚಾರದ ಈ ವಿರಾಟ್ ರೂಪ ಅಚ್ಚರಿ ಮೂಡಿಸದೇ ಹೋದರೂ, ಈ ಅಪಸವ್ಯವನ್ನು ಸಮರ್ಥಿಸಿಕೊಳ್ಳುವ ರಾಜಕೀಯ ಸಂಕಥನಗಳು ಖಂಡಿತವಾಗಿಯೂ ಹೇಸಿಗೆ ಮೂಡಿಸುವಂತಿವೆ. ಯಾವುದೇ ರೀತಿಯ ಆರೋಪಗಳು ಕೇಳಿಬಂದ ಕೂಡಲೇ ತಮ್ಮ ಸೋದರ ಸಂಬಂಧವನ್ನೇ ನಿರಾಕರಿಸುವ ಅಥವಾ ಅಲ್ಲಗಳೆಯುವ ಹೊಸ ರಾಜಕೀಯ ವಿಧಾನವನ್ನೂ ಈ ಪ್ರಕರಣಗಳು ಹುಟ್ಟುಹಾಕಿವೆ. ಅಂದರೆ ಅಧಿಕಾರ ರಾಜಕಾರಣದ ಮಾರುಕಟ್ಟೆ ಜಗಲಿಯಲ್ಲಿ ಮನುಜ ಸಂಬಂಧಗಳು ಹೆಚ್ಚುಹೆಚ್ಚಾಗಿ ವ್ಯಾವಹಾರಿಕವಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ತಮ್ಮ ಮೇಲಿನ ಅಪರಾಧದ ಆರೋಪಗಳಿಂದ ಮುಕ್ತವಾಗಲು ಅಧಿಕಾರಪೀಠಕ್ಕೆ ಹತ್ತಿರವಾಗುವ ಮೂಲಕ ಸಂಸದೀಯ ಅಧಿಕಾರವನ್ನು ವಿನಿಮಯ ವಸ್ತುವನ್ನಾಗಿ ಮಾಡಿರುವ ವಿದ್ಯಮಾನವೂ ಸಮಾಜವನ್ನು ಕಾಡಬೇಕಿದೆ. ಯಾರು ಯಾರನ್ನು ದೂಷಿಸುತ್ತಿದ್ದಾರೆ ಅಥವಾ ಸಮರ್ಥಿಸುತ್ತಿದ್ದಾರೆ ಎನ್ನುವುದಕ್ಕಿಂತಲೂ, ನಮ್ಮ ರಾಜಕೀಯ ವ್ಯವಸ್ಥೆ ಏನನ್ನು ಸಮರ್ಥಿಸುತ್ತಿದೆ, ಎಂತಹ ನಡವಳಿಕೆಗಳನ್ನು ಪ್ರೋತ್ಸಾಹಿಸುತ್ತಿದೆ, ಎಂತಹ ವ್ಯಕ್ತಿಗಳನ್ನು ರಕ್ಷಿಸುತ್ತಿದೆ ಎಂಬ ಪ್ರಶ್ನೆಯೇ ನಾಗರಿಕ ಪ್ರಜ್ಞೆಯನ್ನು ಘಾಸಿಗೊಳಿಸುತ್ತದೆ.

ಭ್ರಷ್ಟಾಚಾರ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಕ್ರಮ ಭೂ ಕಬಳಿಕೆ, ಸೌಜನ್ಯ-ಸಭ್ಯತೆ ಇಲ್ಲದ ಮಾತುಗಳು, ಅಮಾನುಷ-ಹಿಂಸಾತ್ಮಕ-ದ್ವೇಷಾಸೂಯೆಯ ಪರಿಭಾಷೆ, ಸಾಮಾಜಿಕ ಸೌಹಾರ್ದಕ್ಕೆ ಭಂಗ ಉಂಟುಮಾಡುವ ಹೇಳಿಕೆಗಳು, ಈ ಎಲ್ಲ ಅವಗುಣಗಳು ಒಂದು ಸಮಾಜದಲ್ಲಿರುವುದು ಸ್ವಾಭಾವಿಕ. ಏಕೆಂದರೆ ಸಮಾಜ ಎನ್ನುವುದೇ ಅಂತಹ ವಿಭಿನ್ನ ಗುಣಲಕ್ಷಣಗಳನ್ನು ಒಳಗೊಳ್ಳುವಂತಹ ಒಂದು ವಿಶಾಲ ಸಮೂಹ. ಈ ಅವಗುಣಗಳನ್ನು ಅಥವಾ ಅವಲಕ್ಷಣಗಳನ್ನು ಸರಿಪಡಿಸುವ ಜವಾಬ್ದಾರಿ ಯಾರದು? ರಾಜಕಾರಣಿಗಳದ್ದೇ?

ರಾಜಕೀಯ ಪಕ್ಷಗಳದ್ದೇ? ನಾಗರಿಕ ಸಂಸ್ಥೆಗಳದ್ದೇ?, ಸಾಮಾಜಿಕ ಸಂಘಟನೆಗಳದ್ದೇ? ಅಥವಾ ಕ್ರಾಂತಿಕಾರಿ ಆಲೋಚನೆಗಳನ್ನು ಹೊತ್ತ ಬೌದ್ಧಿಕ ವಲಯಗಳದ್ದೇ? ಇವುಗಳಲ್ಲಿ ರಾಜಕೀಯದಿಂದ ಹೊರತಾದ ಉಳಿದೆಲ್ಲಾ ಸಾಂಸ್ಥಿಕ ನೆಲೆಗಳಲ್ಲೂ ಇಂತಹ ಪ್ರಯತ್ನಗಳು ನಡೆಯುತ್ತಿರುತ್ತವೆ. ಆದರೆ ಈ ಎಲ್ಲ ಪ್ರಯತ್ನಗಳನ್ನೂ ನಿರರ್ಥಕಗೊಳಿಸುವ ರೀತಿಯಲ್ಲಿ ಅಧಿಕಾರ ರಾಜಕಾರಣದ ವಾರಸುದಾರರು ವರ್ತಿಸುತ್ತಿದ್ದಾರೆ. ಇದು ನಮ್ಮ ನಡುವಿನ ದುರಂತ.

ರಾಜಕೀಯ ಪರಿಭಾಷೆಯ ವಕ್ರಗತಿ

ಪಕ್ಷಾತೀತವಾಗಿ ನೋಡಿದರೂ, ರಾಜಕೀಯ ನಾಯಕರು ಬಳಸುತ್ತಿರುವ ಭಾಷೆ ಮತ್ತು ಸಾರ್ವಜನಿಕ ಭಾಷಣಗಳಲ್ಲಿ ಆಡುತ್ತಿರುವ ಸುಳ್ಳುಗಳು, ಮಾಡುತ್ತಿರುವ ಮಿಥ್ಯಾರೋಪಗಳು, ಸಮಾಜದಲ್ಲಿ ಒಡಕು ಉಂಟುಮಾಡುವಂತಹ ದ್ವೇಷಾಸೂಯೆಯ ಮಾತುಗಳು, ಪರಸ್ಪರ ನಿಂದನೆಯಲ್ಲಿ ಬಳಸುವ ಅಸಭ್ಯ ಪರಿಭಾಷೆ ಮತ್ತು ಲಿಂಗಸೂಕ್ಷ್ಮತೆಯಿಲ್ಲದಂತಹ ನುಡಿಗಳು ಇವೆಲ್ಲವೂ ಸಹ ನಾಗರಿಕತೆಯನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಕಳೆದ ಹತ್ತು ವರ್ಷಗಳ ರಾಜಕೀಯ ಸಂವಾದಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಕಾಣಬಹುದಾದ ಅಸಭ್ಯತೆ, ಅಸೂಕ್ಷ್ಮತೆ ಮತ್ತು ಸಂವೇದನೆಯಿಲ್ಲದ ಭಾಷಾ ಬಳಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸುವಾಗಲೂ ಮುಜುಗರವಾಗುತ್ತದೆ. ತಮ್ಮ ಸುಳ್ಳನ್ನು ಸಮರ್ಥಿಸಲು ಸತ್ಯವನ್ನೇ ತಲೆಕೆಳಗು ಮಾಡುವ ರಾಜಕೀಯ

ಜಾಣ್ಮೆ ಅಧಿಕಾರ ಗಳಿಸಲು ನೆರವಾಗಬಹುದು. ಅದರೆ ಅದು ಭವಿಷ್ಯದ ಪೀಳಿಗೆಯ ಮೇಲೆ ಎಂತಹ ಭೀಕರ ಪರಿಣಾಮ ಬೀರುತ್ತದೆ ಎಂಬ ಪರಿಜ್ಞಾನ ಇರಬೇಕಲ್ಲವೇ? ಇದನ್ನೇ ಭಾಷಾ ಬಳಕೆಗೂ ವಿಸ್ತರಿಸಿ ನೋಡಿದಾಗ, ಇಂದಿನ ಯುವ ಜನಾಂಗವನ್ನು

ಈ ಅಸಭ್ಯತೆ ಎತ್ತ ಕರೆದೊಯ್ಯುತ್ತದೆ ಎಂಬ ಪರಿವೆಯೂ ಇರಬೇಕಲ್ಲವೇ ? ಈ ಅರಿವು ಮತ್ತು ಪರಿವೆ ಮರೆಯಾಗಿರುವುದೇ ಪ್ರಸಕ್ತ ರಾಜಕೀಯ ವಲಯ ತನ್ನ ನೈತಿಕ ಅವನತಿಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ.

ಪ್ರಜಾಪ್ರಭುತ್ವ ಒಂದು ಸುಂದರವಾದ ಆಡಳಿತ ವ್ಯವಸ್ಥೆ. ಇಲ್ಲಿ ಸಮಾಜವನ್ನು ಬೌದ್ಧಿಕವಾಗಿ ಔನ್ನತ್ಯದೆಡೆಗೆ ಕರೆದೊಯ್ಯುವ ಅಧಿಕಾರವನ್ನು ಜನರೇ ನೀಡುತ್ತಾರೆ. ಸಮಾಜದ ಎಲ್ಲ ಸ್ತರಗಳ ಜನರಿಗೂ ಭೌತಿಕವಾಗಿ ಮೇಲ್ ಚಲನೆಯನ್ನು ಪಡೆಯುವ ಹಕ್ಕು ಮತ್ತು ಅವಕಾಶವನ್ನು ಈ ವ್ಯವಸ್ಥೆ ಒದಗಿಸುತ್ತದೆ. ಆದರೆ ಈ ಮೇಲ್ ಚಲನೆಯ ಚಾಲಕ ಶಕ್ತಿ ಇರುವುದು ನಮ್ಮ ಚುನಾಯಿತ ಅಧಿಕಾರ ಕೇಂದ್ರಗಳಲ್ಲಿ ಮತ್ತು ಅದನ್ನು ನಿಯಂತ್ರಿಸುವ, ನಿರ್ದೇಶಿಸುವ ರಾಜಕೀಯ ಪಕ್ಷಗಳಲ್ಲಿ. ಹಾಗಾಗಿಯೇ ಪಕ್ಷ ರಾಜಕಾರಣದ ವಾರಸುದಾರರಲ್ಲಿ ಪ್ರಾಮಾಣಿಕತೆ, ನಿಷ್ಠೆ, ಜನಬದ್ಧತೆ, ಸೌಜನ್ಯ, ಸಭ್ಯತೆ, ಮನುಜ-ಲಿಂಗ ಸೂಕ್ಷ್ಮತೆ, ಸಂವೇದನೆ, ಸಹಾನುಭೂತಿ ಮತ್ತು ಪಾರದರ್ಶಕತೆ ಇವೆಲ್ಲವೂ ಇರಬೇಕು ಎಂದು ಜನಸಾಮಾನ್ಯರು ಬಯಸುತ್ತಾರೆ. ಜನತೆಯ ಈ ನಿರೀಕ್ಷೆಗೆ ನಿಲುಕುವ ಒಂದೇ ಒಂದು ಮಾದರಿಯನ್ನಾದರೂ ಭಾರತದ ಸಮಕಾಲೀನ ರಾಜಕೀಯ ವ್ಯವಸ್ಥೆ ನೀಡಲು ಸಾಧ್ಯವಾಗಿದೆಯೇ?

ಈ ಪ್ರಶ್ನೆಗೆ ಹೌದು ಎಂದು ಉತ್ತರಿಸುವುದು ಆತ್ಮದ್ರೋಹ ವಾಗುತ್ತದೆ. ತಾನು, ತನ್ನ ಕುಟುಂಬ, ತನ್ನ ಆಪ್ತೇಷ್ಟರು ಮತ್ತು ತನ್ನದೇ ಆದ ಪ್ರಭಾವಿ ವಲಯ ಈ ಚೌಕಟ್ಟುಗಳನ್ನು ದಾಟಿ ಹೊರನೋಡುವ ಮನಸ್ಥಿತಿಯನ್ನೇ ಕಳೆದುಕೊಂಡಿರುವ ಭಾರತದ ರಾಜಕಾರಣದಲ್ಲಿ ‘ಕುಟುಂಬ ರಾಜಕಾರಣ’ ಎಂಬ ದೋಷ ಈಗ ರೂಪಾಂತರಗೊಂಡು ಸಹಜ ಪ್ರವೃತ್ತಿಯಾಗಿದೆ. ಈ ‘ತನ್ನವರನ್ನು ಕಾಪಾಡುವ’ ಸ್ವಾರ್ಥ ಮನೋಭಾವವೇ ಅಧಿಕಾರ ವಿಸ್ತರಣೆಗೆ ಹೊಸ ಆಯಾಮಗಳನ್ನು ರೂಪಿಸುತ್ತಿವೆ. ಆದರೆ ಮತ್ತೊಂದೆಡೆ ‘ಕಳಂಕ ಮೆತ್ತಿಕೊಂಡ’ ತನ್ನವರ ಕರುಳ ಸಂಬಂಧವನ್ನೇ ನಿರಾಕರಿಸುವ ನಿರ್ದಾಕ್ಷಿಣ್ಯ

ಹೃದಯ ಕಾಠಿಣ್ಯವನ್ನೂ ಇದೇ ಅಧಿಕಾರ ರಾಜಕಾರಣ ನಿರೂಪಿಸುತ್ತಿದೆ. ಇದು ಏನನ್ನು ಸೂಚಿಸುತ್ತದೆ? ಅಂತಿಮವಾಗಿ ರಾಜಕೀಯ ಅಧಿಕಾರವನ್ನು ವ್ಯಕ್ತಿಗತ ನೆಲೆಯಲ್ಲಿ ಕೋಶೀಕರಣಗೊಳಿಸುವ (Cellularisation)ಪ್ರವೃತ್ತಿಯನ್ನು ತೋರುವುದಿಲ್ಲವೇ?

ಈ ಕೋಶೀಕರಣಕ್ಕೊಳಗಾದ ವ್ಯಕ್ತಿನಿಷ್ಠ ಪ್ರತಿಮೆಯನ್ನು ಮತ್ತಷ್ಟು ಸುರಕ್ಷಿತವಾಗಿರಿಸಲು ಪ್ರಬಲ ರಾಜಕೀಯ ನಾಯಕರು ಅಸಂಖ್ಯಾತ ಹಿಂಬಾಲಕರ ಪಡೆಗಳನ್ನೇ ಸಿದ್ಧಪಡಿಸುತ್ತಿದ್ದಾರೆ. ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟರ್ (ಎಕ್ಸ್), ಟೆಲಿಗ್ರಾಮ್ ಮುಂತಾದ ಡಿಜಿಟಲ್ ಮಾಧ್ಯಮಗಳ ಮೂಲಕ ತಮ್ಮ ನಾಯಕರನ್ನು ಆರಾಧಿಸುವ, ನಾಗರಿಕ ಟೀಕೆಗಳಿಂದ ರಕ್ಷಿಸುವ ಮತ್ತು ವೈಭವೀಕರಿಸುವ ವಂದಿಮಾಗಧ ಸಮಾಜವೊಂದನ್ನು ರಾಜಕೀಯ ನಾಯಕರು ಸದ್ದಿಲ್ಲದೆ ಸೃಷ್ಟಿಸುತ್ತಿದ್ದಾರೆ. ಹೊರ ಸಮಾಜದಲ್ಲಿ ಬದುಕು ಸಾಗಿಸಲು ಕನಿಷ್ಠ ವರಮಾನದ ಉದ್ಯೋಗವನ್ನೂ ಪಡೆಯಲಾಗದ ಅರೆ ಅಕ್ಷರಸ್ಥರು, ನಿರಕ್ಷರಸ್ಥರು ಹಾಗೂ ಕೆಳಮಧ್ಯಮ ವರ್ಗಗಳ ಯುವ ಜನಾಂಗ ಈ ಸಮಾಜದ ಪ್ರಧಾನ ಧಾರೆಯಾಗಿ ನೆಲೆ ಕಂಡುಕೊಳ್ಳುತ್ತಿದೆ. ಈ ವಂದಿಮಾಗಧ ಪಡೆಗಳೇ, ರಾಜಕೀಯ ನಿಷ್ಠೆಯ ಕಾರಣದಿಂದ ಅತ್ಯಾಚಾರಿಗಳನ್ನೂ, ಪಾತಕಿಗಳನ್ನೂ, ಅಪರಾಧಿಗಳನ್ನೂ, ಕಳಂಕಿತರನ್ನೂ ಸನ್ಮಾನಿಸುವ ಮೂಲಕ ಇಡೀ ಸಮಾಜದ ಸ್ವಾಸ್ಥ್ಯವನ್ನು ಕಲುಷಿತಗೊಳಿಸುತ್ತಿವೆ. ಇದನ್ನು ನೋಡಿಯೂ ನೋಡದಂತಿರುವ ಮೇಲ್ಪದರದ ಒಂದು ಸಾಮಾಜಿಕ ವಲಯ ತನ್ನದೇ ಆದ ಸೈದ್ಧಾಂತಿಕ-ತಾತ್ವಿಕ ಚೌಕಟ್ಟುಗಳಿಗೆ ಸಿಲುಕಿ, ಸಾಮಾಜಿಕ ಅವನತಿಗೆ, ನೈತಿಕ ಅಧಃಪತನಕ್ಕೆ ಮೌನ ಪ್ರೇಕ್ಷಕ ಗಣವಾಗಿ ಪರಿಣಮಿಸಿದೆ.

ಈ ಅಪಾಯವನ್ನು ಮನಗಾಣಬೇಕಾದ ಒಂದು ಸಮಾಜ ನಮ್ಮ ನಡುವೆ ಇರಲೇಬೇಕಲ್ಲವೇ?

ಸಾಂಘಿಕ ನೆಲೆಯಲ್ಲಿ, ಸಾಂಸ್ಥಿಕವಾಗಿ ಸದಾ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ತುಡಿಯುವ ಮನಸ್ಸಿರುವ ಲಕ್ಷಾಂತರ ಜನರನ್ನು ಈ ಸಮಾಜ ಪ್ರತಿನಿಧಿಸುತ್ತಿರಬೇಕಲ್ಲವೇ ? ಆ ಸಮಾಜ ಯಾವುದು? ಜಾತಿ-ಮತ-ಧರ್ಮ-ಸಿದ್ಧಾಂತಗಳ ಸೋಂಕಿಲ್ಲದ ಇಂತಹ ಒಂದು ಸಮಾಜವನ್ನು ನಾವು ಈವರೆಗೂ ರೂಪಿಸಿಲ್ಲ ಎಂದರೆ ಅದು ನಮ್ಮ ನಾಗರಿಕತೆಯ ವೈಫಲ್ಯವೆಂದೇ ಹೇಳಬೇಕಾಗುತ್ತದೆ. 21ನೆಯ ಶತಮಾನದ ಡಿಜಿಟಲ್ ಯುಗದಲ್ಲಿರುವ ನಾವು ವರ್ತಮಾನದ ಯುವ ಜನಾಂಗಕ್ಕೆ, ಭವಿಷ್ಯದ ತಲೆಮಾರಿಗೆ ಏನಾದರೂ ಬಿಟ್ಟುಹೋಗುವುದಿದ್ದರೆ ಇಂತಹ ಒಂದು ಉದಾತ್ತ ಸಮಾಜವನ್ನು ಮಾತ್ರ. ಏನಾದರೂ ಕೊಟ್ಟುಹೋಗುವುದಿದ್ದರೆ ಸಹೃದಯ ಮಾನವೀಯ ಮೌಲ್ಯಗಳನ್ನು ಮಾತ್ರ. ರಾಜಕೀಯ ಮಸೂರಗಳನ್ನು ತೆಗೆದಿಟ್ಟು, ಒಳಗಣ್ಣಿನ ಮೂಲಕ ನೋಡಿದರೆ ನಾವು ಇಂತಹ ಔದಾತ್ಯವನ್ನು ಸಾರ್ಥಕಗೊಳಿಸಲು ಸಾಧ್ಯವಾದೀತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಾ. ದಿವಾಕರ

contributor

Similar News