ಅಸ್ಪಶ್ಯರನ್ನು ಕೊಲ್ಲುವುದೆಂದರೆ ಕರುಣೆಯನ್ನು ಕೊಂದಂತೆ

ಹೆಣ್ಣು ತನಗೆ ಜನ್ಮ ಕೊಡುವ ಜನುಮದಾತೆ ಎಂದು ಗೊತ್ತಿದ್ದರೂ ಅವಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು ತಪ್ಪಲ್ಲ ಅನಿಸುವುದರಿಂದ ಇಂತಹ ಘಟನೆಗಳು ಮತ್ತೆ ಮತ್ತೆ ಕರುಣೆಯನ್ನು ಕೊಂದಂತೆ ಆಗುತ್ತದೆ. ಇಂತಹ ಘಟನೆಗಳು ನಿಲ್ಲಬೇಕೆನ್ನುವುದು ಸಾಮಾನ್ಯ ಜನರ ಆಶಯ. ಪ್ರಕೃತಿ ಹೇಗೆ ಜೀವಕೋಟಿಯನ್ನು ಸಮ ಸಮವಾಗಿ ಕಾಣುತ್ತದೆಯೋ ಹಾಗೆಯೇ ನಮ್ಮ ಸಂವಿಧಾನ ಕೂಡಾ ಎಲ್ಲರೂ ಸಮಾನವಾಗಿ ಬದುಕುವ ಆಶಯವನ್ನು ಹೊಂದಿದೆ.;

Update: 2025-02-24 12:53 IST
ಅಸ್ಪಶ್ಯರನ್ನು ಕೊಲ್ಲುವುದೆಂದರೆ ಕರುಣೆಯನ್ನು ಕೊಂದಂತೆ
  • whatsapp icon

ದೊಡ್ಡೇಗೌಡರ ಬಾಗಿಲಿಗೆ

ನಮ್ಮ ಮೂಳೆಯ ತೋರಣ

ನಮ್ಮ ಜನಗಳ ಕಾಲು ಕೈ

ಕಂಬ ಅವರ ಹಟ್ಟಿಗೆ

► ಸಿದ್ದಲಿಂಗಯ್ಯ

ಇವು ಈ ನೆಲದ 2000 ವರ್ಷಗಳ ದುಃಖ ನೋವು, ಸಾವು, ಸಂಕಟ ಅನುಭವಿಸಿದ ಮನದಾಳದ ಸಾಲುಗಳು. ‘ನಮ್ಮ ಜನಗಳ ಕಾಲು ಕೈ ಕಂಬ ಅವರಹಟ್ಟಿಗೆ’ ಎಂಬ ಸಾಲನ್ನು ಸಂಕಟ ದುಃಖ ಅಪಮಾನ ಅನುಭವಿಸಿದವರಿಗೆ ಮಾತ್ರ ಬರೆಯಲು ಸಾಧ್ಯ. ನೋಡಿ ಮಾತನಾಡುವವರಿಗೂ ಅನುಭವಿಸಿ ಮಾತನಾಡುವವರಿಗೂ ಅಜಗಜಾಂತರವಿದೆ. ಈ ದೇಶದ ಜಾತಿ ಬೇಟೆಗಾರನ ಕಣ್ಣು ಸದಾ ಜಿಂಕೆ ಮಾದರಿಯ ಪ್ರಾಣಿಗಳ ಮೇಲೆ ಇರುತ್ತದೆ. ಅರ್ಥಾತ್ ಹೆಣ್ಣು ಮಕ್ಕಳು ಮತ್ತು ದಲಿತರ ಮೇಲೆ ಇರುತ್ತದೆ.

ಮೊನ್ನೆ ಪವಿತ್ರ ಬಾಲರಾಮ ಪ್ರತಿಷ್ಠಾಪನೆಗೊಂಡ ಅಯೋಧ್ಯೆ ಕ್ಷೇತ್ರದಲ್ಲಿ ದಲಿತ ಯುವತಿ ಹೆಣ್ಣುಮಗಳ ಭೀಕರ ಹತ್ಯೆ ಎಂದು ಓದಿಕೊಳ್ಳುವಾಗ ಉಳಿದವರಿಗೆ ಏನು ಅನಿಸುತ್ತದೆಯೋ ನಾನರಿಯೆ. ನನ್ನಂಥವರಿಗೆಲ್ಲ ಸಂಕಟವಾಗುತ್ತದೆ. ಇಂತಹ ಪಾಶವೀ ಕೃತ್ಯ ನಡೆಸುವ ಮನಸ್ಸು ಎಷ್ಟು ವಿಕಾರವಾಗಿರಬಹುದು? ನೀನು ಮನುಷ್ಯ ಅಲ್ಲ ಮೃಗ ಅಂತ ಹೇಳುತ್ತಿರುತ್ತೇವೆ. ಆದರೆ ಆ ಮೃಗಗಳು ಆಹಾರಕ್ಕಾಗಿ ಮಾತ್ರ ಪ್ರಾಣಿಗಳನ್ನು ತಿನ್ನುತ್ತವೆ. ಒಂದು ನಾಗರಿಕ ಸಮಾಜದಲ್ಲಿ ಸಂವಿಧಾನಾತ್ಮಕ ಕಾನೂನು ಜಾರಿಯಾಗಿ ಎಪ್ಪತ್ತೈದು ವಷರ್ಗಳು ಕಳೆದು ಹೋದರೂ, ಒಂದು ತಳ ಸಮುದಾಯದ ಹೆಣ್ಣುಮಕ್ಕಳನ್ನು ಮತ್ತು ಉಳಿದ ಸಮುದಾಯದ ಹೆಣ್ಣು ಮಕ್ಕಳನ್ನು ಹೀಗೆ ನಡೆಸಿಕೊಳ್ಳಬಹುದೇ ಎಂದು ಪ್ರಶ್ನಿಸಿದರೆ ಉತ್ತರ ಮಾತ್ರ ಇವತ್ತಿಗೂ ಶೂನ್ಯವೇ. ಇಂತಹ ಘೋರ ಘಟನೆಗಳು ಈ ದೇಶದ ಅನೇಕ ಕಡೆ ನಡೆದಿವೆ, ನಡೆಯುತ್ತಲೇ ಇವೆ.

ಒಂದು ಹೆಣ್ಣು ಕುಲವನ್ನು ಅತ್ಯಂತ ಕನಿಷ್ಠವಾಗಿ ತುಂಬಾ ಹಗುರವಾಗಿ ನೋಡುವ ಮನಸ್ಸುಗಳು ಮತ್ತು ಕಣ್ಣುಗಳು ಬದಲಾಗಿಲ್ಲ. ಆಕೆಯ ಘನತೆಯನ್ನು ಇವತ್ತಿಗೂ ಅರ್ಥಮಾಡಿಕೊಳ್ಳುವಲ್ಲಿ ಈ ಸಮಾಜ ಸೋತಿದೆ. ಈ ನೆಲದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಹೆಣ್ಣು ಮಕ್ಕಳು ಹೀಗೆ ಇರಬೇಕೆನ್ನುವ ನಿರ್ಬಂಧಗಳು ಅಲಿಖಿತ ಕಟ್ಟಪ್ಪಣೆಗಳು ಈಗಲೂ ಚಾಲ್ತಿಯಲ್ಲಿವೆ. ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವದ ಅಮೃತವನ್ನೇ ಕುಡಿದು ಚಿರಂಜೀವಿಗಳಾಗುವ ಪ್ರಯತ್ನದಲ್ಲಿರುವ ಈ ದೇಶದಲ್ಲಿ ಅಸ್ಪಶ್ಯತೆ ಇನ್ನೂ ಆಚರಣೆಯಲ್ಲಿದೆ ಎನ್ನುವುದಾದರೆ, ಇವರ ತಲೆಯಲ್ಲಿರುವುದು ಕಸವೇ ಹೊರತು ಮಿದುಳಲ್ಲ. ಅಸ್ಪಶ್ಯತೆ ಎನ್ನುವುದು ಮುಟ್ಟಬೇಡ ಅಥವಾ ಮುಟ್ಟಿಸಿಕೊಳ್ಳಬೇಡ ಎನ್ನುವುದನ್ನು ಮೆದುಳು ಅಸ್ಪಶ್ಯತೆಯನ್ನು ಆಚರಣೆ ಮಾಡುವವರ ನಾಲಿಗೆಗೆ ರವಾನಿಸುತ್ತದೆ. ಭೀಮಾ ಸಾಹೇಬರು ಪ್ರಕೃತಿದತ್ತ ನೀರನ್ನು ಮುಟ್ಟಿದ ಚೌದಾರ್ ಕೆರೆಯ ಘಟನೆ ನಮ್ಮ ಎದೆಗಳಲ್ಲಿ ಬಿಸಿ ಬಿಸಿಯಾಗಿ ಈಗಲೂ ಆವಿಯಾಗುತ್ತಿದೆ. ಆದರೆ ಈ ದೇಶದ ಅಸ್ಪಶ್ಯ ಸಮುದಾಯಗಳು ಹಿಂಸೆಗೆ ಪ್ರತಿ ಹಿಂಸೆ ಮಾಡುವವರಲ್ಲ.

ಅವರು ಯಾವತ್ತೂ ಸಹನೆಯೇ ನಮ್ಮ ಧರ್ಮ ಎಂದುಕೊಳ್ಳುತ್ತ ಉಳಿದ ಸಮುದಾಯದವರನ್ನು ತಮ್ಮ ಬೊಗಸೆಯಲ್ಲಿಟ್ಟುಕೊಂಡು ಕಾಪಾಡಿದವರು. ಇಂತಹ ಸಹನೆಯ ಕುಲದವರನ್ನು ಹಿಂಸಿಸುವುದಕ್ಕೆ ಕೋಟಿ ದೇವರುಗಳು ಮತ್ತು ಇದನ್ನು ಪಾಲಿಸುವ ಶ್ರೇಷ್ಠ ಧರ್ಮದವರು ಇವರನ್ನೆಲ್ಲ ಕೊಂದು ಹಾಕಿ ಈ ಸಹನೆ ಕುಲವನ್ನೇ ನಾಶ ಮಾಡಿ ಎಂದು ಪ್ರೇರೇಪಿಸಿರಬಹುದು ಅಥವಾ ಆಜ್ಞಾಪಿಸಿರಬಹುದು. ಇಲ್ಲದಿದ್ದರೆ ಪವಿತ್ರ ಅಯೋಧ್ಯೆ ಕ್ಷೇತ್ರದ ಗ್ರಾಮದಲ್ಲಿ ನಡೆಯುತ್ತಿದ್ದ ಕಥಾ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಆ ಹೆಣ್ಣುಮಗಳನ್ನು ಇಷ್ಟು ಕ್ರೂರವಾಗಿ ನಡೆಸಿಕೊಳ್ಳಲು ಸಾಧ್ಯವೇ? ಆ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿ, ಕೈಕಾಲುಗಳನ್ನು ಮುರಿದು, ಕಣ್ಣುಗಳನ್ನು ಕೀಳಲಾಗಿದೆ. ಹೀಗೆ ಸಾಮೂಹಿಕ ಅತ್ಯಾಚಾರ ಮಾಡುವವರ ಮನಸ್ಸು ಎಷ್ಟು ಕ್ರೂರವಾಗಿರಬೇಡ. ಇಂತಹ ಘಟನೆ ನಡೆದಾಗ ಉಳಿದ ಸಮುದಾಯದವರಿಗೆ ಏನು ಅನಿಸುವುದಿಲ್ಲವೇ? ಇಂತಹ ಘಟನೆಗಳು ನಡೆದಾಗ ಅದನ್ನು ಖಂಡಿಸುವ ಅಥವಾ ಕನಿಕರಿಸುವ ಮನಸ್ಸಿಗೆ ದಾರಿದ್ರ್ಯ ಬಂದಿದೆಯೇ? ಮನುಷ್ಯ ಎನ್ನುವ ಪ್ರಾಣಿ ಉಳಿದ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಮಾನವನಿಗೆ ಸರಿ ತಪ್ಪುಗಳನ್ನು ವಿವೇಚಿಸುವ ಗುಣವಿದೆ. ಇವನ ಕೊರಳಿಗೆ ಕಟ್ಟಿಕೊಂಡ ದೇವರು, ಧರ್ಮಗಳು ಒಳ್ಳೆಯದನ್ನು ಮಾಡುವುದಕ್ಕೆ ಪ್ರೇರೇಪಿಸುವುದಿಲ್ಲವೇ?. ಇಲ್ಲದಿದ್ದರೆ ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಂಡ ಆ ದಲಿತ ಕೇರಿಯಲ್ಲಿ ಮತ್ತು ಅವರ ಕುಟುಂಬದಲ್ಲಿ ಎಷ್ಟು ದುಃಖ ಮಡುಗಟ್ಟಿರಬಹುದು. ಅವರ ಸಂಬಂಧಿಕರ ಅಳು, ಚೀತ್ಕಾರ ಯಾವ ದೇವರು ಹಾಗೂ ಧರ್ಮಗಳಿಗೂ ಕೇಳಿಸುವುದಿಲ್ಲವೇ?. ಈ ಸುದ್ದಿಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ಆ ಸಮುದಾಯದಲ್ಲಿ ಹುಟ್ಟಿದ ನನ್ನಂತಹ ಲಕ್ಷಾಂತರ ಜನರ ಮನಸ್ಸಿಗೆ ಸಾವಿನ ಸೂತಕದ ನೋವಾಗಿರುತ್ತದೆ. ಆ ಕೇರಿಯಲ್ಲಿ ಉಂಟಾಗುವ ಭಯ, ಆತಂಕ, ಸಿಟ್ಟು ಯಾವುದನ್ನೂ ಹೇಳುವುದಕ್ಕೆ ಶಬ್ದಗಳು ಸಾಲುವುದಿಲ್ಲ. ಇದೂ ಒಂದು ರೀತಿಯ ಸಾಮಾಜಿಕ ಭಯೋತ್ಪಾದನೆಯಲ್ಲವೇ?. ಇನ್ನು ಎಷ್ಟು ಶತಮಾನಗಳ ಕಾಲ ಹೀಗೆ ನಡೆಸಿಕೊಳ್ಳುತ್ತೀರಿ ? ‘‘ಕರಗಿ ನಮ್ಮಯ ಬಾಳ ಕತ್ತಲು, ಕಾಣಲಾರೇ ಹಗಲನು’’ ಎನ್ನುವ ಶಬ್ದಗಳು ನೆನಪಾಗುತ್ತದೆ.

ಈ ನಡುವೆ ನಾನೇ ಬರೆದ ಕೆಲವು ಸಾಲುಗಳು ಹೀಗಿವೆ :

ಇನ್ನೆಷ್ಟು ನೆಕ್ಕುತೀರಿ ನಮ್ಮ ಜೀವಗಳನ್ನ

ನೆತ್ತರಲ್ಲಿ ಅದ್ದಿ ತೆಗೆದ ನಾಲಿಗೆಗಳಿಂದ

ಎಷ್ಟು ಹಸಿದಿರಬಹುದು ನಿಮ್ಮ ಕೈಗಳು

ಯಾವ ಗಂಗೆಯು ತೊಳೆಯಲಾರದಷ್ಟು

ಕರುಳ ಕಸವನ್ನು

ಮೇಲ್ಕಂಡ ಈ ಘಟನೆ ಸಾಂದರ್ಭಿಕವಾದರೂ, ಈ ಘಟನೆ ನಡೆದು 15 ದಿನಗಳಿಗಿಂತ ಹೆಚ್ಚಾಗಿರಬಹುದು. ನಾನು ಎಲ್ಲಿ ಹೋದರೂ ಬಂದರೂ ಕೂತರೂ ಇದು ಕಾಡಿಸುತ್ತಿದೆ. ಈ ಹೆಣ್ಣು ಮಗು ನನ್ನ ಮಗಳಾಗಿದ್ದರೆ ಅಥವಾ ಆಗಿರಬಹುದು. ನಾನೆಷ್ಟು ದುಃಖ, ತಪ್ತನಾಗಿದ್ದೇನೆಯೋ ಅಷ್ಟೇ ದುಃಖ ನೋವು, ಸಂಕಟ ಆಗಿದೆ. ಈ ಕ್ರೂರ ಘಳಿಗೆಯನ್ನು ಆ ಹೆಣ್ಣು ಮಗಳು ಹೇಗೆ ಎದುರಿಸಿರಬಹುದು ಎಂದು ನೆನೆಸಿಕೊಂಡರೇ ದೇಹ ನಡುಗುತ್ತದೆ. ಈ ಘಟನೆಗಳು ನಮ್ಮ ಸುತ್ತಮುತ್ತಲೇ ನಡೆದಿವೆ. ಧರ್ಮಸ್ಥಳದಲ್ಲಿ ಸೌಜನ್ಯಾ ಎಂಬ ಹೆಣ್ಣು ಮಗು ಇದೇ ರೀತಿ ಸಾವನ್ನಪ್ಪಿದೆ. ಆ ತಾಯಿಯ ದುಃಖ ಹೆತ್ತವರ ಕರುಳಿನ ಸಂಕಟ ಎಷ್ಟಿರಬೇಡ. ಅವರ ಎಷ್ಟು ನೋವನ್ನು ನುಂಗಿರಬೇಕು? ಇಂತಹ ಪ್ರಕರಣಕ್ಕೆ ನ್ಯಾಯ ಸಿಕ್ಕಿದೆಯೇ ಎಂದರೆ ಇಲ್ಲ ?

ಉತ್ತರ ಕರ್ನಾಟಕದ ದಾನಮ್ಮ ಎಂಬ ಹೆಣ್ಣು ಮಗಳಿಗೆ ಆದ ಅನ್ಯಾಯ, ಕನ್ನಡದ ಖ್ಯಾತ ಕವಯಿತ್ರಿಯೊಬ್ಬರ ಮಗಳ ಕೊಲೆ, ಇಂತಹ ನೂರಾರು ಘಟನೆಗಳು ನಡೆಯುತ್ತಲೇ ಇವೆ. ಈ ದೇಶದಲ್ಲಿ ಅಸ್ಪಶ್ಯರನ್ನು ಮತ್ತು ಮಹಿಳೆಯರನ್ನು ನೋಡುವ ಕಣ್ಣು, ಮನಸ್ಸುಗಳು ಬದಲಾಗಿಲ್ಲ. ಇದು ಎರಡು ಸಾವಿರ ವರ್ಷಗಳಿಂದ ಬೇರುಬಿಟ್ಟಿರುವ ವಿಷವೃಕ್ಷಗಳು.

2000 ವರ್ಷಗಳಿಂದ ಮಹಿಳೆಯರು, ದುರ್ಬಲರನ್ನು ಮತ್ತು ಅಸ್ಪಶ್ಯರನ್ನು ಇರುವೆಯಂತೆ ಹೊಸಕಿ ಹಾಕಲಾಗಿದೆ. ಎಲ್ಲರಿಗೂ ಬದುಕುವ ಹಕ್ಕಿದೆ ಅನ್ನೋದನ್ನು ಮರೆಯಬಾರದು. ಇಂತಹ ಸಾವು ನೋವುಗಳಿಗೆ ಲೆಕ್ಕವುಂಟೇ ಎಂದು ಕೇಳಿದರೆ, ಇದು ಧರ್ಮ-ದೇವರ ಲೆಕ್ಕ ಅಂತ ಹೇಳುತ್ತಾರೆ. ಇನ್ನೂ ಮುಂದೆ ಹೋಗಿ ಇದೆಲ್ಲ ಅವರ ಹಣೆಬರಹ ಎಂದು ಸಾರಾಸಗಟಾಗಿ ತಿಪ್ಪೇಸಾರಿಸುತ್ತಾರೆ. ಹಾಗಾದರೆ ನಾವೂ ನೀವೆಲ್ಲಾ ತಾಯಿ ಮಕ್ಕಳು ಎನ್ನುವ ಕನಿಷ್ಠ ಜ್ಞಾನ ಕೂಡಾ ಈ ಸಮಾಜಕ್ಕೆ ಬರಲಿಲ್ಲವೆಂದರೆ ಇನ್ನೆಷ್ಟುದಿನ ಹೀಗೆ ಕೊಳೆಯುತ್ತೀರಿ?

ಸಹಜ ಸಾವಿಗೂ ಕೊಲ್ಲಲ್ಪಟ್ಟ ಸಾವಿಗೂ ವ್ಯತ್ಯಾಸವಿಲ್ಲವೇ, ಕೊಲ್ಲಲ್ಪಟ್ಟವರು ಇನ್ನೂ ಬದುಕಿ ಬಾಳುವ ಕನಸು ಕಟ್ಟಿರುವ ಜೀವಿಗಳಾಗಿರುತ್ತವೆ. ಈ ಧರ್ಮವನ್ನು ಪ್ರತಿಪಾದಿಸುವವರು ಇವರನ್ನೆಲ್ಲಾ ಗುಡಿಸಿ ಹಾಕುವ ಹುನ್ನಾರ ನಿರಂತರವಾಗಿ ಮಾಡುತ್ತಲೇ ಇದ್ದಾರೆ.

ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುವಂತೆ ಇಂತಹ ಅನಾಗರಿಕ ಕೊಲೆ ದೌರ್ಜನ್ಯಕ್ಕೂ ಪರಿಹಾರವಿದೆ ಎಂದು ಮೊಟ್ಟಮೊದಲ ಬಾರಿಗೆ ಕನಸು ಕಂಡವರು ಡಾ. ಭೀಮಾ ಸಾಹೇಬರು. ಅವರ ಅಪಾರ ಓದು, ಚಿಂತನೆ, ಬರವಣಿಗೆ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯಾ ನಂತರದಲ್ಲಿ ಜಗತ್ತಿನಲ್ಲಿ ಅಪರೂಪದ ಸಂವಿಧಾನ ರಚಿಸಿದರು. ಇವರು ಹುಟ್ಟಿದ್ದರಿಂದ ಸಂವಿಧಾನ ರಚಿಸಿದ್ದರಿಂದ ಯಾರೆಲ್ಲಾ ನೋವು, ಅವಮಾನ ಅನುಭವಿಸಿದ್ದರೋ ಅವರಿಗೆಲ್ಲ ನಾವು ಬದುಕಿದ್ದೇವೆ ಎನ್ನುವ ಅರಿವು ಬಂತು. ಈ ಅರಿವು ಯಥಾಸ್ಥಿತವಾದಿಗಳು ಅರ್ಥಾತ್ ಶ್ರೇಷ್ಠ ಧರ್ಮದವರಿಗೆ ಇದು ಅಪಥ್ಯ ಅನಿಸತೊಡಗಿತು.್ತ ಜಡ ಸಮುದಾಯವನ್ನು ಒಪ್ಪಿಕೊಂಡವರು ಚಲನಶೀಲ ಸಮಾಜವನ್ನು ಒಪ್ಪಿಕೊಳ್ಳುವುದಿಲ್ಲ. ಆದರೂ ಇಂತಹವರೇ ಅಧಿಕಾರ ಸ್ಥಾನದಲ್ಲಿದ್ದು ಸಂವಿಧಾನವನ್ನು ಅಪಮಾನಿಸುತ್ತಲೇ, ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿದ್ದಾರೆ. ಈ ದೇಶದ ಸಂವಿಧಾನವು ಜನರಿಂದ ಜನರಿಗಾಗಿ ನಿರಂತರವಾಗಿ ಉಸಿರಾಡುತ್ತಲೇ ಬಂದಿದೆ. ಇಂತಹ ಉಸಿರ ಕತ್ತನ್ನು ಹಿಸುಕುವ ಕೆಲಸವನ್ನು ಸಂವಿಧಾನ ರಚನೆ ಅದಾಗಿನಿಂದಲೂ ನಿರಂತರವಾಗಿ ಮಾಡುತ್ತಲೇ ಬಂದಿರುವ ಜನವಿರೋಧಿ, ಜೀವವಿರೋಧಿ ಮನಸ್ಸುಗಳನ್ನು ಕಟ್ಟಿ ಹಾಕದಿದ್ದರೆ, ಮಹಿಳೆಯರು ಮತ್ತು ತಳಸಮುದಾಯ ಮತ್ತು ದುರ್ಬಲ ಜೀವಗಳನ್ನು ನಡೆಸಿಕೊಳ್ಳುವ ಕ್ರೌರ್ಯ ನಿಲ್ಲುವುದಿಲ್ಲ. ಇವರಿಗೆಲ್ಲಾ ಪ್ರೀತಿ, ಕರುಣೆ, ಸಹನೆ, ಭ್ರಾತೃತ್ವ, ಘನತೆ, ಗೌರವ ಅರ್ಥವಾಗುವುದಿಲ್ಲವೇ?

ಖಂಡಿತ ಅರ್ಥವಾಗುತ್ತದೆ. ಅವರು ಧರ್ಮ, ದೇವರು, ಜಾತಿಗಳ ಹೆಸರಿನಲ್ಲಿ ಶೋಷಣೆ ಮಾಡುವುದನ್ನೇ ಧರ್ಮ ಕಾಪಾಡುವುದು ಎಂದುಕೊಂಡಿದ್ದಾರೆ. ಅಸ್ಪಶ್ಯತೆಯನ್ನು ಕೊಲ್ಲಬೇಕಾದವರು ಅಸ್ಪಶ್ಯರನ್ನು ಕೊಲ್ಲುತ್ತಿದ್ದಾರೆ ಇದು ಇವರ ಧರ್ಮದ ನೀತಿ ನಿಯಮಗಳು. ಹೆಣ್ಣು ತನಗೆ ಜನ್ಮ ಕೊಡುವ ಜನುಮದಾತೆ ಎಂದು ಗೊತ್ತಿದ್ದರೂ ಅವಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು ತಪ್ಪಲ್ಲ ಅನಿಸುವುದರಿಂದ ಇಂತಹ ಘಟನೆಗಳು ಮತ್ತೆ ಮತ್ತೆ ಕರುಣೆಯನ್ನು ಕೊಂದಂತೆ ಆಗುತ್ತದೆ. ಇಂತಹ ಘಟನೆಗಳು ನಿಲ್ಲಬೇಕೆನ್ನುವುದು ಸಾಮಾನ್ಯ ಜನರ ಆಶಯ. ಪ್ರಕೃತಿ ಹೇಗೆ ಜೀವಕೋಟಿಯನ್ನು ಸಮ ಸಮವಾಗಿ ಕಾಣುತ್ತದೆಯೋ ಹಾಗೆಯೇ ನಮ್ಮ ಸಂವಿಧಾನ ಕೂಡಾ ಎಲ್ಲರೂ ಸಮಾನವಾಗಿ ಬದುಕುವ ಆಶಯವನ್ನು ಹೊಂದಿದೆ. ಇಂತಹ ಸಂವಿಧಾನ ವಿರೋಧಿಗಳನ್ನು ಹತೋಟಿಯಲ್ಲಿಡದಿದ್ದರೆ ಮುಂದಿನ ದಿನಗಳು ಹೆಣ್ಣುಮಕ್ಕಳು ಮತ್ತು ತಳ ಸಮುದಾಯಗಳು ಉಸಿರಾಡುವುದೂ ಕಷ್ಟವಾಗುತ್ತದೆ.

ಯಾರಿಗೆ ಜೀವ ಕೊಡುವ ಶಕ್ತಿ, ಸಾಮರ್ಥ್ಯವಿಲ್ಲವೋ ಹಾಗೆಯೇ ಜೀವ ಹಾನಿ ಮಾಡುವುದಕ್ಕೂ ಅವಕಾಶವಿಲ್ಲ

ಇರುವೆ ಕಾಲಿಗೂ ಗಾಯವಾಗದ ಹಾಗೆ

ಕಾಯುತ್ತಾ ಕಡಲೆಕಾಯಿ ಮಾರುತ್ತ

ಕವಿತೆಗಳ ಹಾಡುತ ಕಾಯುತ್ತಿದ್ದೇನೆ

ವಧಾಸ್ಥಾನ ಕೊನೆ ಆಗಲಿ ಎಂದು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಸುಬ್ಬು ಹೊಲೆಯಾರ್

contributor

Similar News