ಎಳೆಯರೊಂದಿಗೆ ಸಂವಿಧಾನ ದಿನದ ಸಂಭ್ರಮ

ನಮ್ಮ ಸಂವಿಧಾನವನ್ನು ರೂಪಿಸಿದವರ ಬುದ್ಧಿಮತ್ತೆ ವಿಶ್ವ ಜ್ಞಾನಕ್ಕೆ ಸಮನಾದದ್ದು. ಅವರ ಶ್ರಮ ಸಾರ್ಥಕವಾಗಬೇಕಾದರೆ ಸಂವಿಧಾನದಲ್ಲಿ ಅಡಕವಾಗಿರುವ ಕಾನೂನುಗಳನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು. ನಮ್ಮ ನಡೆ ನುಡಿಗಳನ್ನು ತಿದ್ದಿಕೊಳ್ಳಬೇಕು. ಹೀಗೆ ಸಂವಿಧಾನದ ಅರಿವು ಹೆಚ್ಚಿಸಿಕೊಳ್ಳುತ್ತಾ ಸಮೃದ್ಧ ಭಾರತಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದರಲ್ಲಿ ನಮ್ಮೆಲ್ಲರ ಒಳಿತಿದೆ. ನವೆಂಬರ್ 26 ಸಂವಿಧಾನದ ಸಮರ್ಪಣೆಯ ದಿನವಾದರೂ ನಿತ್ಯವೂ ಅದರ ಆಶಯಗಳನ್ನು ಅನುಷ್ಠಾನಕ್ಕೆ ತಂದುಕೊಂಡರೆ ಭಾರತ ಭಾಗ್ಯವಿಧಾತನ ಕನಸನ್ನು ನನಸುಮಾಡಿದಂತಾಗುತ್ತದೆ.

Update: 2024-12-02 07:40 GMT

‘‘ಸಂವಿಧಾನವನ್ನು ಸಮರ್ಪಿಸುವಾಗ ‘ಭಾರತೀಯರಾದ ನಾವುಗಳು’ ಎಂದು ನಮೂದಿಸಲಾಗಿದೆಯೇ ಹೊರತು ಅದರಲ್ಲಿ ಹಿಂದೂಗಳಾದ ನಾವು, ಮುಸ್ಲಿಮರಾದ ನಾವು, ಕ್ರೈಸ್ತರಾದ ನಾವು ಎಂದು ಎಲ್ಲಿಯೂ ಹೇಳಿಲ್ಲ . ಸಮಾಜಕಲ್ಯಾಣ ಇಲಾಖೆಯ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಮೇಲ್ಕಂಡ ಈ ಮಾತನ್ನು ಹೇಳುವಾಗ 26.11.2024 ರಂದು ಸಂವಿಧಾನ ದಿನಾಚರಣೆಯ ಅಂಗವಾಗಿ ಡಾ.ಭೀಮಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ಅತಿ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರೇ ತುಂಬಿದ್ದರು. ಸಭಾಂಗಣದಲ್ಲಿ ಭಾವೀ ಭಾರತದ ಪ್ರಜೆಗಳಾಗಿ ಈ ದೇಶವನ್ನು ರೂಪಿಸುವ ಕಣ್ಣು ಕಿವಿ ಮನಸ್ಸುಗಳು ಮತ್ತಷ್ಟು ಜಾಗೃತಿಯಿಂದ ಕುಳಿತಿದ್ದವು. ಮತ್ತಷ್ಟು ಎಚ್ಚರಗೊಳ್ಳುವಂತೆ ಈ ಮಾತುಗಳು ಅವರ ಎದೆಗಿಳಿಯುತ್ತಿದ್ದವು. ಸಚಿವರಾದ ಮಹದೇವಪ್ಪ ಅವರು ಮುಂದುವರಿದು ‘‘ನಮ್ಮಲ್ಲಿ ಯಾವ ಧರ್ಮವೂ ಶ್ರೇಷ್ಠವಲ್ಲ, ಎಲ್ಲರಿಗೂ ವೈಜ್ಞಾನಿಕತೆ ಮತ್ತು ವೈಚಾರಿಕತೆಯ ಆಧಾರದಲ್ಲಿ ತಮ್ಮ ತಮ್ಮ ಧರ್ಮಗಳನ್ನು ಆಚರಿಸಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ’’ ಎಂದರು.

ಸಾಮಾನ್ಯವಾಗಿ ರಾಜಕಾರಣಿಗಳ ಭಾಷಣಗಳು ತಮ್ಮ ಸರಕಾರದ ಮತ್ತು ವೈಯಕ್ತಿಕ ಸಾಧನೆಯನ್ನು ವಿವರಿಸಲು ಮತ್ತು ಜನಸಾಮಾನ್ಯರನ್ನು ಓಲೈಸುವುದಕ್ಕೆ ಸೀಮಿತವಾಗಿರುತ್ತವೆ. ಆದರೆ ಈ ಸಭೆ ಅದಕ್ಕೆ ಹೊರತಾಗಿತ್ತು. ಕಾರಣ ಎದುರಿಗೆ ಸಾಮಾನ್ಯ ಜನರಿಗಿಂತ ಹೆಚ್ಚಾಗಿ ಎಳೆಯರಾದ ವಿದಾರ್ಥಿ, ವಿದ್ಯಾರ್ಥಿನಿಯರೇ ತುಂಬಿ ತುಳುಕಿದ್ದರು. ಅವರಿಗೆ ರಾಜಕಾರಣದ ಭಾಷಣಕ್ಕಿಂತ ಸಂವಿಧಾನದ ಪ್ರಸ್ತಾವನೆಯ ಆಶಯಗಳು ಮತ್ತು ನಮ್ಮ ಪವಿತ್ರ ಸಂವಿಧಾನ ಎಷ್ಟೆಲ್ಲಾ ಶ್ರಮದಿಂದ ರೂಪಿತವಾಗಿದೆ, ಕಳೆದ 75 ವರ್ಷಗಳಲ್ಲಿ ಸಂವಿಧಾನ ಕೊಟ್ಟ ಹಕ್ಕು ಮತ್ತು ಕನಸುಗಳು ಹೇಗೆಲ್ಲಾ ಜಾರಿಯಾಗಿವೆ ಎಂಬುದನ್ನು ಹೇಳಲೇ ಬೇಕಾದ ಅನಿವಾರ್ಯವಿತ್ತು.

ಮಹದೇವಪ್ಪನವರು ಮುಂದುವರಿದು ‘‘ನಮ್ಮ ಪ್ರಜಾಪ್ರಭುತ್ವದ ಬೇರುಗಳು ನಮ್ಮ ಗುಡ್ಡಗಾಡು ಜನಾಂಗವಾದ ಆದಿವಾಸಿಗಳಲ್ಲಿ ಎಷ್ಟು ಗಟ್ಟಿಯಾಗಿ ರೂಪಿತಗೊಂಡಿದ್ದವು ಎನ್ನುವುದನ್ನು ನಾವು ಮರೆಯಬಾರದು. ಹಾಗೆಯೇ ಬುದ್ಧನಕಾಲದಲ್ಲಿ ಕೂಡಾ ಪ್ರಜಾಪ್ರಭುತ್ವವನ್ನು ಬುದ್ಧ ಮತ್ತು ಆತನ ಅನುಯಾಯಿಗಳು ಅನುಸರಿಸುತ್ತಿದ್ದರು. ಹಂಚಿ ತಿನ್ನುವ ಪದ್ಧತಿ ಮತ್ತು ಆಶಯಗಳು ನಮ್ಮ ಸಂವಿಧಾನಕ್ಕೆ ತಳಹದಿಯಾಗಿರುವುದನ್ನು ನಾವು ಗಮನಿಸಬೇಕು’’ ಎಂದರು. ಬಸವಾದಿ ಶರಣರ ಅನುಭವ ಮಂಟಪವು ಬಸವಣ್ಣನಿಂದ ರೂಪಿತವಾದ ಮೊದಲ ಸಂಸತ್ತು ಎಂದೇ ಕರೆಯಲ್ಪಡುತ್ತದೆ. ಇದನ್ನು ನೆನಪಿಸಿದ ಸಚಿವರು ರಶ್ಯ ಮತ್ತು ಫ್ರಾನ್ಸ್ ಕ್ರಾಂತಿಯನ್ನು ನೆನಪಿಸಿದರು.

ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರೂಪಿಸುವಾಗ ಎಷ್ಟೆಲ್ಲಾ ಶ್ರಮಿಸಿದರು ಎನ್ನುವುದನ್ನು ವಿವರಿಸಿದರು. ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸಂವಿಧಾನವನ್ನು ಸಮರ್ಪಿಸಿದ ಹಿಂದಿನ ದಿನ ಮಾಡಿದ ಭಾಷಣವನ್ನು ಪ್ರಸ್ತಾಪಿಸಿದರು. ‘‘ಸಂವಿಧಾನ ರಚನಾ ಸಭೆಯ ಸದಸ್ಯನಾಗಿ ನಾನು ಬಂದದ್ದು ಈ ದೇಶದ ಪರಿಶಿಷ್ಟ ಜಾತಿಗಳವರ ಹಿತಾಸಕ್ತಿಯನ್ನು ಕಾಪಾಡಲಿಕ್ಕಾಗಿ. ಆದರೆ, ಈ ಸಮಿತಿಯು ನನಗೆ ಇನ್ನೂ ಅತಿ ವಿಶಾಲವಾದ, ಉನ್ನತವಾದ ಮತ್ತು ರಾಷ್ಟ್ರಹಿತ ಸಾಧನೆಯ ಜವಾಬ್ದಾರಿಯನ್ನು ಒಪ್ಪಿಸಿತು.ನನ್ನನ್ನು ಕರಡು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನಿಯೋಜಿಸಿತು. ನನಗೆ ಇಂಥ ಯಾವುದೇ ಮಹತ್ವಾಕಾಂಕ್ಷೆ ಇರಲಿಲ್ಲ. ಹಾಗಾಗಿ, ಹೊಸ ಜವಾಬ್ದಾರಿಯನ್ನು ನನಗೆ ನೀಡಿದಾಗ ಸಹಜವಾಗಿಯೇ ನನಗೆ ಆಶ್ಚರ್ಯವಾಯಿತು.ಅಲ್ಲದೆ ಕರಡು ಸಂವಿಧಾನ ರಚನಾ ಸಮಿತಿಯಲ್ಲಿ ಅಲ್ಲಾಡಿ ಕೃಷ್ಣ ಸ್ವಾಮಿ ಅಯ್ಯರ್ ಅಂಥ ನನಗಿಂತ ಹಿರಿಯರು, ದೊಡ್ಡವರು, ತಿಳಿದವರು ಇದ್ದರು. ಹೀಗಿದ್ದರೂ ನನ್ನನ್ನು ಕರಡು ಸಂವಿಧಾನ ರಚನಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ದೇಶದ ಸೇವೆಯನ್ನು ಅರ್ಥಪೂರ್ಣವಾಗಿ ಮಾಡುವುದಕ್ಕೆ ನನಗೆ ಅವಕಾಶ ಒದಗಿಸಲಾಯಿತು. ಇದಕ್ಕಾಗಿ ನಾನು ಸಂವಿಧಾನ ರಚನಾ ಸಭೆಗೆ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಭಾರತಕ್ಕೆ ಕರಡು ಸಂವಿಧಾನವನ್ನು ರಚಿಸಿ ನೀಡಿದ್ದಕ್ಕಾಗಿ ನನಗೆ ಗೌರವ ಪ್ರಶಂಸೆ ಮತ್ತು ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ, ಇದಕ್ಕೆ ನಾನು ಪೂರ್ಣವಾಗಿ ಭಾಜನನಲ್ಲ. ಇದರಲ್ಲಿ ಒಂದು ಪಾಲು ಸಾಂವಿಧಾನಿಕ ಸಲಹೆಗಾರರಾದ ಸರ್ ಬಿ.ಎನ್.ರಾವ್ ಅವರಿಗೆ ಸಲ್ಲಬೇಕು. ಅವರು ನೀಡಿದ ಕರಡು ಸಂವಿಧಾನವನ್ನು ನನ್ನ ಅಧ್ಯಕ್ಷತೆಯ ಕರಡು ಸಂವಿಧಾನ ರಚನಾ ಸಮಿತಿಯು ಪರಿಶೀಲನೆಗಾಗಿ ಮತ್ತು ಪರಾಮರ್ಶೆಗಾಗಿ ಸ್ವೀಕರಿಸಿತು.

ನನಗೆ ಸಂದ ಗೌರವದಲ್ಲಿ ಇನ್ನೊಂದು ಪಾಲು ಕರಡು ಸಂವಿಧಾನ ರಚನಾ ಸಮಿತಿಯಲ್ಲಿ ಸದಸ್ಯರಾಗಿ ನನ್ನ ಜೊತೆಗೆ ಕೆಲಸ ಮಾಡಿದ ಎಲ್ಲ ಮಾನ್ಯ ಸದಸ್ಯರುಗಳಿಗೆ ಸಲ್ಲಬೇಕು. 141 ದಿನಗಳಲ್ಲಿ ಕೆಲಕಾಲವಾದರೂ ಈ ಸದಸ್ಯರು ನನ್ನೊಂದಿಗೆ ಕುಳಿತು ಕರಡು ಸಂವಿಧಾನ ಪ್ರತಿಯು ಸಿದ್ಧಗೊಳ್ಳುವಲ್ಲಿ ಶ್ರಮವಹಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಹೊಸ ವಿಚಾರಗಳಿಗೆ ಮನಸ್ಸು ತೆರೆದುಕೊಂಡಿದ್ದಾರೆ ; ವಿಭಿನ್ನ ಅಂಶಗಳ ಕುರಿತು ಹೃತ್ಪೂರ್ವಕ ಚರ್ಚೆಯನ್ನು ನಡೆಸಿದ್ದಾರೆ. ಇವರ ಸಹಕಾರ,ಸಲಹೆ,ಸಹಯೋಗ ಇಲ್ಲದೆ ಕರಡು ಸಂವಿಧಾನ ರಚನಾ ಕಾರ್ಯವು ಇಷ್ಟರಮಟ್ಟಿಗೆ ಯಶಸ್ವಿಯಾಗಿ ಮುಕ್ತಾಯವಾಗುತ್ತಿರಲಿಲ್ಲ.ಮತ್ತೊಬ್ಬ ಸಹೋದ್ಯೋಗಿಯ ಕೊಡುಗೆಯನ್ನು ನಾನು ವಿಶೇಷವಾಗಿ ಸ್ಮರಿಸಬೇಕು. ಅವರು ಶ್ರೀ ಎಸ್.ಎನ್. ಮುಖರ್ಜಿ. ಕ್ಲಿಷ್ಟ, ಸಂಕೀರ್ಣ ಮತ್ತು ಸ್ಪಷ್ಟ ಪದಗಳಲ್ಲಿ ಹಾಗೂ ಪದಪುಂಜಗಳಲ್ಲಿ ಅವರು ಕರಡು ಸಂವಿಧಾನ ಸಮಿತಿಯ ಸದಸ್ಯರುಗಳ ಭಾವನೆಗಳನ್ನು ನಿರ್ದಿಷ್ಟ ಶಬ್ದಗಳಲ್ಲಿ ಹಿಡಿದಿಟ್ಟವರು. ಕಾನೂನು ಪದಕೋಶಗಳಲ್ಲಿ ಅವರು ಸಿದ್ಧಹಸ್ತರು. ಅವರ ಕಠಿಣ ಪರಿಶ್ರಮಕ್ಕೆ ಸರಿಸಾಟಿ ಇಲ್ಲ ಎನ್ನಬಹುದು. ಅವರಿಗೆ ಸಂಪೂರ್ಣ ಸಹಕಾರ ನೀಡಿದವರು ಅವರ ಸಿಬ್ಬಂದಿ ವರ್ಗ. ಅವರು ಎಷ್ಟೋ ದಿನ ಮಧ್ಯರಾತ್ರಿವರೆಗೂ ಕೆಲಸ ಮಾಡಿದ್ದಾರೆ. ನನಗೆ ದೊರಕಿರುವ ಪ್ರಶಂಸೆಯಲ್ಲಿ ಅವರಿಗೂ ಪಾಲು ದೊರಕಬೇಕು’’- ಡಾ.ಬಿ.ಆರ್.ಅಂಬೇಡ್ಕರ್ ಅವರು 25 ನವೆಂಬರ್ 1949 ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣ.(ಅನುವಾದ :

ಮಂಗ್ಳೂರು ವಿಜಯ). ಹೀಗೆ ಬಾಬಾ ಸಾಹೇಬರ ಸಂವಿಧಾನ ಸಮರ್ಪಣೆಯ ದಿನದಂದು ಮಾಡಿದ ಭಾಷಣವನ್ನು ವಿವರಿಸುತ್ತಾ ನಾವು ವೈವಿಧ್ಯಮಯ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎನ್ನುವುದನ್ನು ನೆನಪಿಸಿದರು.

ಹೀಗೆ ಒಂದು ಅಪರೂಪದ ಕಾರ್ಯಕ್ರಮದಲ್ಲಿ ಸಚಿವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಜಗತ್ತಿನ ಶ್ರೇಷ್ಠ ಸಂವಿಧಾನದ ಪ್ರಸ್ತಾವನೆಯ ಪ್ರತೀ ಪದಗಳನ್ನು ಮಕ್ಕಳಿಗೆ ಬಿಡಿಸಿಟ್ಟರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಹಾಗೂ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾವು ಅಭಿನಂದಿಸಲೇ ಬೇಕು. ಇದೊಂದು ಮಹತ್ ಕಾರ್ಯವಾಗಿದ್ದು ಕರ್ನಾಟಕ ಇತಿಹಾಸದ ಪುಟಗಳಲ್ಲಿ ಬೆಳ್ಳಿ ಗೆರೆಗಳನ್ನು ಮೂಡಿಸಿದೆ.

ಸಂವಿಧಾನ ದಿನದ ಹಿಂದಿನ ದಿನವಷ್ಟೇ 1976 ರ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಮಾಡಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖಿತವಾಗಿರುವ ಸಮಾಜವಾದಿ, ಜಾತ್ಯತೀತ, ಸಮಗ್ರತೆ ಪದಗಳು ಸಂವಿಧಾನದಲ್ಲಿ ಇರಬೇಕು ಎಂದು ಅನುಮೋದಿಸಿದೆ. ಬಹುಶಃ ಕುವೆಂಪು ಹೇಳಿದ ನಮ್ಮ ಭಾರತ ‘‘ಸರ್ವ ಜನಾಂಗದ ಶಾಂತಿಯ ತೋಟ’’ವಾಗ ಬೇಕೆಂಬ ಆಶಯವನ್ನು ನಮ್ಮ ಸಂವಿಧಾನವೂ ಆಶಿಸಿದಂತೆ ಸುಪ್ರೀಂ ಕೋರ್ಟ್ ಆಶಯ ಕೂಡಾ ಇದೇ ಆಗಿದೆ.

ನಾವು ಅನ್ನ ಕೊಡುವ ಭೂಮಿಗೆ ಎಷ್ಟು ಗೌರವ ಕೊಡುತ್ತೇವೆಯೋ ಅಷ್ಟೇ ಗೌರವವನ್ನು ನಮ್ಮ ಸಂವಿಧಾನಕ್ಕೂ ಕೊಡಬೇಕು. ನಮ್ಮ ಸಂವಿಧಾನ ಸರ್ವರನ್ನೂ ಸಮಾನವಾಗಿ ಕಾಣುತ್ತದೆ. ಪ್ರಕೃತಿ ಹಾಗೂ ಮನುಷ್ಯೇತರ ಪ್ರಾಣಿ ಜಗತ್ತಿಗೂ ಬದುಕುವ ಹಕ್ಕನ್ನು ನಮ್ಮ ಸಂವಿಧಾನ ಕೊಟ್ಟಿದೆ. ಆದರೆ ತಮ್ಮನ್ನು ತಾವು ಜಗದ್ಗುರುಗಳು ಎಂದು ಹೇಳಿಕೊಳ್ಳುತ್ತಲೇ ‘ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ’ ಎಂದು ಹೇಳಿಕೆ ಕೊಟ್ಟಿರುವವರಿಗೆ ಸಂವಿಧಾನ ಪೀಠಿಕೆಯ ಅರ್ಥವೇ ಗೊತ್ತಿಲ್ಲ ಎಂದೆನಿಸುತ್ತದೆ.

ಕೆಲವರು ಸನಾತನ ಆಲೋಚನೆಗಳಿಂದ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಬಹಳ ಜ್ಞಾನಿಗಳು ಎಂದುಕೊಂಡವರಿಗೆ ಈ ದೇಶದ ಕಟ್ಟಕಡೆಯ ಮನುಷ್ಯನೆಂದು ಭಾವಿಸಿದ್ದ ಅಸ್ಪಶ್ಯರ ಬದುಕು ಬವಣೆಗಳು ಏನು ಎನ್ನುವುದು ಗೊತ್ತಿಲ್ಲದ ವಿಷಯವೇನಲ್ಲ. ಈ ಸಂವಿಧಾನದ ಬಲದಿಂದ ಅವರು ಕಣ್ಣು ಬಿಟ್ಟಿದ್ದಾರೆ. ನಡೆಯುತ್ತಿದ್ದಾರೆ. ಅವರ ಚಲನ ಶೀಲತೆಯನ್ನು ಸಹಿಸಿಕೊಳ್ಳದ ಅಸಹಿಷ್ಣುಗಳು. ಅಸ್ಪಶ್ಯರು ಈಗಲೂ ಶಿಲುಬೆಯಲ್ಲಿರಬೇಕು ಎನ್ನುವುದು ಅವರ ಆಶಯ. ಸಂವಿಧಾನ ಸಮರ್ಪಣೆಯಾದ ದಿನಂದಲೇ ಇಂತಹ ಅಪಸ್ವರಗಳು ಹೊಸದೇನಲ್ಲ.

ಈ ಜ್ಞಾನಿಗಳ ಮಿದುಳಲ್ಲಿ ಅಸ್ಪಶ್ಯತೆ ತುಂಬಿ ತುಳುಕುತ್ತಿದೆ. ಇದು ಹೊರಲಾರದ ಭಾರವಾಗಿದ್ದರೂ ಅದನ್ನು ಈಗಲೂ ನಿಭಾಯಿಸುತ್ತಿದ್ದಾರೆ ಎನ್ನುವುದು ಪರಮಾಶ್ಚರ್ಯ. ಆದರೆ ಸುಂದರ ನಾಳೆಗಳಿಗಾಗಿ ನಮ್ಮ ಸಂವಿಧಾನ ನಿರಾತಂಕವಾಗಿ ಚಲಿಸುತ್ತದೆ. ಇದು ಅದನ್ನು ರೂಪಿಸಿದವರ ಕನಸಾಗಿತ್ತು.

ಅಂಬೇಡ್ಕರ್ ಅವರ ಜನ್ಮ ದಿನವಾದ ಡಿಸೆಂಬರ್ 6 ಭೀಮಾ ಸಾಹೇಬರು ಪರಿನಿಬ್ಬಾಣವಾದ ದಿನ ವಿಧಾನ ಸೌಧದ ಭೀಮಾ ಸಾಹೇಬರ ಪುತ್ಥಳಿಗೆ ನಮಸ್ಕಾರ ಮಾಡುವುದು ನಾನು ಬೆಂಗಳೂರಿಗೆ ಬಂದಾಗಿನಿಂದ ಆಚರಿಸುವ ಕರ್ತವ್ಯವಾಗಿದೆ. ಸರಕಾರ ಮೊದಲಬಾರಿಗೆ ಸಂವಿಧಾನ ದಿನಾಚರಣೆಯನ್ನು ಸಾರ್ವಜನಿಕವಾಗಿ ಅರಿವು ಮೂಡಿಸುವ ಕಾರ್ಯಕ್ರಮವಾಗಿ ರೂಪಿಸುವಾಗ ನಾನು ಹಾಜರಿದ್ದೆ. ಮೊದಲಬಾರಿಗೆ ವಿಧಾನಸೌಧದ ಮೆಟ್ಟಿಲುಗಳ ಮುಂದೆ ನಿಂತು ಮಂತ್ರಿ ಮಹೋದಯರು, ನೌಕರರು, ವಿದ್ಯಾರ್ಥಿಗಳು, ಜನಸಾಮಾನ್ಯರು, ಎಲ್ಲರೂ ಒಟ್ಟಾಗಿ ಪ್ರಸ್ತಾವನೆಯನ್ನು ಬಲಗೈ ಮುಂದಕ್ಕೆ ಮಾಡಿ ಓದಿದಾಗ ಆದ ರೋಮಾಂಚನವನ್ನು ನಾನು ಮರೆಯಲಾರೆ. ಆನಂತರದ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಅದನ್ನು ಓದುತ್ತಾ ಅದರ ಅರಿವಿನ ವಿಸ್ತಾರವನ್ನು ಮನನ ಮಾಡುತ್ತಾ ಬಂದಿದ್ದೇನೆ.

ಕರ್ನಾಟಕ ಸರಕಾರ ಕೊಟ್ಟ ಭರವಸೆಗಳನ್ನು ಈಡೇರಿಸುವುದಷ್ಟೇ ಅಲ್ಲ, ಬಹಳ ಮುಖ್ಯವಾಗಿ ಶಿಕ್ಷಣ, ವೈದ್ಯಕೀಯ, ಕೃಷಿ ಜೊತೆಗೆ ಈಗ ಹೆಚ್ಚು ಪ್ರಚಲಿತವಿರುವ ಸಂವಿಧಾನದ ಜಾಗೃತಿ ಕೂಡಾ ಬಹಳ ಮುಖ್ಯವಾದ ವಿಷಯವಾಗಿದೆ. ಕೆಲವು ವರ್ಷಗಳ ಹಿಂದೆ ವಿಧಾನ ಸಭೆಯಲ್ಲಿ ಒಂದು ವಾರಗಳ ಸಂವಿಧಾನ ಕುರಿತ ಚರ್ಚೆ-ಸಂವಾದಗಳು ಸಾರ್ವಜನಿಕರ ಗಮನಸೆಳೆದವು. ಆದರೆ ಸಾರ್ವಜನಿಕವಾಗಿ ಸಂವಿಧಾನದ ಅರಿವು ಕಡಿಮೆಯಿದೆ. ಇತ್ತೀಚಿನ ದಿನಗಳಲ್ಲಿ ನಗರ, ಊರು, ಹಳ್ಳಿ ಪ್ರದೇಶಗಳಲ್ಲಿ ಕೂಡಾ ಸಂವಿಧಾನದ ಓದು, ಜಾಗೃತಿ ಸಮಾವೇಶಗಳು ನಿರಂತರವಾಗಿ ನಡೆಯುತ್ತವೆ. ಸರಕಾರ ಕೂಡ ಸಂವಿಧಾನ ಜಾಗೃತಿ ಅಭಿಯಾನವನ್ನು ಕರ್ನಾಟಕದ ಮೂಲೆ ಮೂಲೆಗೂ ಮುಟ್ಟಿಸಿದೆ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಕೂಡಾ ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿದಿನ ಓದಿಸುತ್ತಿದೆ. ಬಹಳ ಮುಖ್ಯವಾಗಿ ಸರಕಾರ ಸಂವಿಧಾನ ದಿನಾಚರಣೆಯನ್ನು ಕಾಲೇಜುಗಳಲ್ಲಿ ಯುವಜನರು ಆಚರಿಸಿ, ಪ್ರತಿಜ್ಞಾವಿಧಿ ಸ್ವೀಕರಿಸಿ, ಸಂವಿಧಾನದ ಅರಿವನ್ನು ಪಡೆಯುವಂತೆ ಆದೇಶಿಸಿ ಸುತ್ತೋಲೆ ಹೊರಡಿಸಿದೆ. ಸರಕಾರ ಸಂವಿಧಾನವನ್ನು ಜನಪದಗೊಳಿಸುವ ಕಾರ್ಯಕ್ರಮ ಒಂದು ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬೇಕು.

ವಿಶೇಷವಾಗಿ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನದಾಸ್ ಅಂತಹವರು ಕರ್ನಾಟಕದ ಅನೇಕ ಕಡೆ ಸಂವಿಧಾನ ಅರಿವನ್ನು ಹೆಚ್ಚಿಸುವಲ್ಲಿ ಬಹಳ ದೊಡ್ದ ಕೆಲಸ ಮಾಡಿದ್ದಾರೆ. ಮೊನ್ನೆ ಮಲೆನಾಡಿನ ಪ್ರದೇಶವಾದ ಸಕಲೇಶಪುರ ಆಲೂರು ಕ್ಷೇತ್ರದಲ್ಲಿ ಎರಡು ದಿನದ ಸಂವಿಧಾನ ಓದು ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿರುವುದನ್ನು ಗಮನಿಸಬಹುದು. ನಮ್ಮ ನಾಡಿನ ಹೆಸರಾಂತ ಕವಿ, ಸಂಗೀತ ಸಂಯೋಜಕ, ನಾದಬ್ರಹ್ಮ ಎಂದೇ ಪ್ರಖ್ಯಾತವಾಗಿರುವ ಡಾ. ಹಂಸಲೇಖ ಕೂಡಾ ಸಂವಿಧಾನದ ಪ್ರಸ್ತಾವನೆಯನ್ನು ಸಂಗೀತಕ್ಕೆ ಅಳವಡಿಸಿ ಸಂಯೋಜನೆ ಮಾಡಿರುವ ಹಾಡು ಎಲ್ಲಾ ಕಡೆ ಹರಿದಾಡುತ್ತಿದೆ. ಹೆಸರಾಂತ ಗಾಯಕರಾದ ಪಿಚ್ಚಳ್ಳಿ ಹಾಗೂ ಜನ್ನಿ ಕೂಡಾ ಸಂವಿಧಾನದ ಪ್ರಸ್ತಾವನೆಯನ್ನು ಹಾಡುವ ಮೂಲಕ ಜನಮನದ ಎದೆಗೆ ಹಂಚಿದ್ದಾರೆ.

21ನೇ ಶತಮಾನ ಸಂವಿಧಾನದ ಜಾಗೃತಿ ಮತ್ತು ಕಾಲಮಾನ ಎಂದೇ ಹೇಳಬಹುದು. ಸಂವಿಧಾನದ ಬೇರುಗಳು ಗಟ್ಟಿಯಾದಷ್ಟೂ ಜನಸಾಮಾನ್ಯರ ವಿಶ್ವಾಸ ವೃದ್ಧಿಯಾಗುತ್ತದೆ. ಇದರಲ್ಲೂ ವಿಶೇಷವಾಗಿ ಶೋಷಿತ ತಳ ಸಮುದಾಯದ ಅಸ್ಪಶ್ಯ ಸಮುದಾಯ ಮತ್ತು ಮಹಿಳೆಯರು ಸಂವಿಧಾನದ ಭೀಮ ಬಲದಿಂದ ಎದ್ದುನಿಂತು ಮುಗುಳುನಗುವ ಕಾಲ ಇದಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಸಂವಿಧಾನವನ್ನು ಸಡಿಲಮಾಡುವ ಜನ ತಮ್ಮ ದುರ್ಬಲ ಮಾತುಗಳಿಂದ ಜನರನ್ನು ದಾರಿತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೆ ಇರುತ್ತಾರೆ. ಆದರೆ ವಿವೇಕವಂತ ಭಾರತೀಯರಾದ ನಾವು ಅದಕ್ಕೆ ಆಸ್ಪದ ಕೊಡಬಾರದು. ‘ಸಂವಿಧಾನವನ್ನು ನಾವು ರಕ್ಷಣೆ ಮಾಡಿದರೆ ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತದೆ’ ಎನ್ನುವುದನ್ನು ಮರೆಯಬಾರದು.

‘ಒಂದು ಓಟು ಒಂದು ಮೌಲ್ಯ’ ಪ್ರತೀ ಶೇಕಡವಾರು ಹೆಚ್ಚಾಗುತ್ತಲೇ ಇದೆ. ಇದರಿಂದ ನಾವು ಆತಂಕ ಪಡುವ ಅಗತ್ಯವಿಲ್ಲ , ನಮ್ಮ ಸಂವಿಧಾನ ಭದ್ರವಾಗಿದೆ ಎನ್ನುವುದಕ್ಕೆ ಬೇರೆ ಪುರಾವೆಗಳು ಬೇಕಿಲ್ಲ. ಈ ಓಟಿನ ವಿಷಯ ಹೇಳುವಾಗ ನನ್ನದೇ ಒಂದು ಘಟನೆ ನೆನಪಾಗುತ್ತದೆ. ‘ನಮ್ಮ ಅವ್ವನಿಗೆ ಓಟಿನ ದಿನ ಅತ್ಯಂತ ಸಂಭ್ರಮದ ದಿನ. ನಮ್ಮ ಅವ್ವನಿಗೆ ಯಾವುದೇ ಹಬ್ಬ ಹರಿದಿನಗಳಿಗಿಂತ ಮತಚಲಾಯಿಸುವ ದಿನ ಬಂತೆಂದರೆ ಎಲ್ಲಿಲ್ಲದ ಸಡಗರ. ಬೆಳಗ್ಗೆ ಎದ್ದು ಸ್ನಾನಮಾಡಿ ಮನೆಯನ್ನು ಸಗಣಿಯಿಂದ ಸಾರಿಸಿ ಇರುವ ಬಟ್ಟೆಯನ್ನೇ ಒಗೆದು ಸರಿಮಾಡಿಕೊಂಡು ಧರಿಸಿ ಓಟು ಹಾಕುವುದಕ್ಕೆ ಹೋಗಿ ಸಾಲಿನಲ್ಲಿ ನಿಂತ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಆ ಸಾಲಿನಲ್ಲಿ ಕೂಲಿ ಮಾಡಿಸುವ ಜಮೀನ್ದಾರನೋ ಊರ ಗೌಡನೋ ಇನ್ಯಾರೋ ಇದ್ದರೂ ಓಟು ಕೊಡುವ ಸಾಲಿನಲ್ಲಿ ಎಲ್ಲರೂ ಒಂದೇ. ಪ್ರತಿಯೊಂದು ಓಟಿನ ಮೌಲ್ಯವೂ ಒಂದೇ, ಇದು ಪ್ರಜಾಪ್ರಭುತ್ವದ, ಸಂವಿಧಾನದ ಬಹಳ ದೊಡ್ದ ಸೌಂದರ್ಯವೆಂದು ನಾವು ತಿಳಿಯಬಹುದು. ಇಂತಹದ್ದನ್ನೆಲ್ಲಾ ಆಗುಮಾಡಿದ ನಮ್ಮ ಸಂವಿಧಾನಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಸಂವಿಧಾನ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತುಗಳನ್ನು ಕೇಳುತ್ತಿದ್ದ ಮಕ್ಕಳ ಕಣ್ಣುಗಳಲ್ಲಿ ಅಪಾರವಾದ ಭರವಸೆಯಿತ್ತು. ಅವರ ಪ್ರತೀ ಮಾತಿಗೂ ಚಪ್ಪಾಳೆ, ಘೋಷಣೆಗಳು ಅಂಬೇಡ್ಕರ್ ಭವನ ಒಂದು ಕಟ್ಟಡವಲ್ಲ ಅದು ನಾಳಿನ ಕನಸಿನ ಭವಿಷ್ಯದ ತಳಹದಿ ಎನ್ನುವಂತಿತ್ತು. ಭಾಷಣವನ್ನು ನಿಶ್ಯಬ್ದವಾಗಿ ಕೇಳುತ್ತಿದ್ದ ಮಕ್ಕಳು ಮುಖ್ಯಮಂತ್ರಿಗಳ ಮಾತನ್ನು ಗುರುಗಳ ಪಾಠದಂತೆ ಕೇಳಿಸಿಕೊಳ್ಳುತ್ತಿದ್ದರು.

ಮುಖ್ಯಮಂತ್ರಿಗಳು ಭಾಷಣಗಳಲ್ಲಿ ಸಾಮಾನ್ಯವಾಗಿ ಬಸವಾದಿ ಶರಣರು, ಬುದ್ಧ, ಅಂಬೇಡ್ಕರ್ ಅವರ ಹೆಸರುಗಳಿಲ್ಲದೆ ಪೂರ್ಣವಾಗುವುದಿಲ್ಲ. ಅಲ್ಲಿ ಬಂದಿದ್ದ ಮಕ್ಕಳೆಲ್ಲಾ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳೇ ಆಗಿದ್ದರು. ಅವರು ತಮ್ಮ ನಾಳೆಗಳನ್ನು ಸೃಷ್ಟಿಮಾಡಿಕೊಳ್ಳಲಿಕ್ಕೆ ಇಂತಹ ಭರವಸೆಯ ಮಾತುಗಳ ಅಗತ್ಯವಿತ್ತು. ಮೂರು ಜನ ಮಹನೀಯರ ಮಾತುಗಳು ಅವರ ವಿಶ್ವಾಸವನ್ನು ಹೆಚ್ಚಿಸಿದಂತಿತ್ತು. ಕಾರ್ಯಕ್ರಮಗಳೆಂದರೆ ಎಷ್ಟೊತ್ತಿಗೆ ಮುಗಿಯುತ್ತದೆ ಎನ್ನುವ ತರಾತುರಿ ಇರಲಿಲ್ಲ. ಸಭೆ ಮತ್ತು ವೇದಿಕೆ ಅಷ್ಟೊಂದು ಗಂಭೀರವಾಗಿತ್ತು ಮತ್ತು ಅರ್ಥಪೂರ್ಣವಾಗಿತ್ತು.

ನಮ್ಮ ಸಂವಿಧಾನವನ್ನು ರೂಪಿಸಿದವರ ಬುದ್ಧಿಮತ್ತೆ ವಿಶ್ವ ಜ್ಞಾನಕ್ಕೆ ಸಮನಾದದ್ದು. ಅವರ ಶ್ರಮ ಸಾರ್ಥಕವಾಗಬೇಕಾದರೆ ಸಂವಿಧಾನದಲ್ಲಿ ಅಡಕವಾಗಿರುವ ಕಾನೂನುಗಳನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು. ನಮ್ಮ ನಡೆ ನುಡಿಗಳನ್ನು ತಿದ್ದಿಕೊಳ್ಳಬೇಕು. ಹೀಗೆ ಸಂವಿಧಾನದ ಅರಿವು ಹೆಚ್ಚಿಸಿಕೊಳ್ಳುತ್ತಾ ಸಮೃದ್ಧ ಭಾರತಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದರಲ್ಲಿ ನಮ್ಮೆಲ್ಲರ ಒಳಿತಿದೆ. ನವೆಂಬರ್ 26 ಸಂವಿಧಾನದ ಸಮರ್ಪಣೆಯ ದಿನವಾದರೂ ನಿತ್ಯವೂ ಅದರ ಆಶಯಗಳನ್ನು ಅನುಷ್ಠಾನಕ್ಕೆ ತಂದುಕೊಂಡರೆ ಭಾರತ ಭಾಗ್ಯವಿಧಾತನ ಕನಸನ್ನು ನನಸುಮಾಡಿದಂತಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಸುಬ್ಬು ಹೊಲೆಯಾರ್

contributor

Similar News