ಮಾನ್ಯ ಮುಖ್ಯಮಂತ್ರಿಗಳಿಗೊಂದು ಮನವಿ
ಜೈ ಭೀಮ್ ಸರ್
ತಾವು ನನಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವಾಗ ‘ಜೈ ಭೀಮ್ ಸರ್’ ಎಂದೆ. ಅದಕ್ಕೆ ಪ್ರತಿಯಾಗಿ ನೀವು ಕೂಡ ‘ಜೈ ಭೀಮ್’ ಎಂದು ಬೆನ್ನು ತಟ್ಟಿದ್ದೀರಿ. ನೀವು ಹೀಗೆ ಹೇಳಿದಾಗ ಪ್ರಶಸ್ತಿ ಪಡೆದಿದ್ದಕ್ಕಿಂತ ಹೆಚ್ಚು ರೋಮಾಂಚನಗೊಂಡೆ. ಡಾ. ಭೀಮಾ ಸಾಹೇಬ್ ಅಂಬೇಡ್ಕರ್ ಎಂದರೆ ಉಸಿರು, ಬೆಳಕು, ಅನ್ನ, ಅರಿವು, ಎಲ್ಲವೂ ಆಗಿದ್ದಾರೆ. ‘ಜೈ ಭೀಮ್’ಹೇಳುವಾಗ ನಾವೆಲ್ಲಾ ಆವೇಶದಿಂದ ಹೇಳುವುದಿಲ್ಲ, ನಾವೆಲ್ಲಾ ಭೀಮಾ ಸಾಹೇಬರಿಂದ ಪಡೆದುಕೊಂಡ ಅರಿವಿನಿಂದ ಹೇಳುತ್ತಿದ್ದೇವೆ. ನೀವು ಪ್ರಶಸ್ತಿ ಪ್ರದಾನ ಮಾಡಿದ ಮೇಲೆ ವೇದಿಕೆಯನ್ನು ತಿರುಗಿ ನೋಡಿದರೆ ಅಲ್ಲೊಂದು ಪುಟ್ಟ ‘ಅನುಭವ ಮಂಟಪ’ ಕಾಣುತ್ತದೆ.ಅಲ್ಲಿ ನಮ್ಮ ಜಗದ ಕವಿ ಕುವೆಂಪು ಹೇಳಿದ ‘ಸರ್ವಜನಾಂಗದ ಶಾಂತಿಯತೋಟ’ ಕಾಣುತ್ತದೆ. ನಮ್ಮ ಭೀಮಾ ಸಾಹೇಬರ ಆಶಯದ ಪ್ರಸ್ತಾವನೆಯ ಕನಸುಗಳ ದೃಶ್ಯ ಸ್ಪಷ್ಟವಾಗಿ ಕಾಣುತ್ತದೆ. ನೀವು ಮತ್ತೆ ಮತ್ತೆ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಇವರ ಆಶಯಗಳನ್ನು ನಿಮ್ಮ ಭಾಷಣದಲ್ಲಿ ಹೇಳಿರುತ್ತೀರಿ. ಇದೆಲ್ಲಾ ನಾನು ಮನವಿ ಮಾಡಲಿರುವ ವಿಷಯಗಳ ಪೀಠಿಕೆ ಎಂದು ಭಾವಿಸುತ್ತೇನೆ.
ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನ, ಈ ನೆಲದ ಸಕಲ ಜೀವರಾಶಿಗೆ ಲೇಸನ್ನು ಬಯಸಿದ ಬಸವಣ್ಣನವರ ಜಯಂತಿಯ ದಿನ, ನಿಮಗೆ ನಮಗೆಲ್ಲಾ ಅದೊಂದು ಅವಿಸ್ಮರಣೀಯ ದಿನ. ನನ್ನಂತಹವರಿಗೆಲ್ಲಾ ಹಿರಿಯರಾದ ಅಪಾರ ರಾಜಕಾರಣದ ಅನುಭವ ಹೊಂದಿರುವ ಶ್ರೀಯುತ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುತ್ತಾರೆಂದು ಕನಸಿತ್ತು. ಆದರೆ ಅವರಿಂದ ಏನು ನಿರೀಕ್ಷೆ ಮಾಡಿದ್ದೆವೋ ಅದನ್ನು ಈಗ ನೀವು ಮಾಡುತ್ತಿದ್ದೀರಿ ಎನ್ನುವುದು ಸಮಾಧಾನ ತಂದಿದೆ. ನಿಮಗಿದ್ದ ಸಾಮಾಜಿಕ ಬದ್ಧತೆಯಿಂದ ಆ ದಿನ ಮಹತ್ವದ ಘೋಷಣೆಗಳನ್ನು ಮಾಡಿದ್ದೀರಿ. ಅದು ಮುಂದಿನ ದಿನಗಳ ದಿಕ್ಸೂಚಿಯಾಗಿ ಮತ್ತು ದೂರದೃಷ್ಟಿಯ ಕಾಣಿಕೆಗಳಾಗಿ ಕಂಡವು.
ನೀವು ಹಿಂದುಳಿದ ಸಮುದಾಯದಿಂದ ಬಂದವರಾದ್ದರಿಂದ ನಿಮ್ಮ ಸಮೀಪ ಇರುವ ತಳ ಸಮುದಾಯಗಳ ಸುಖ ದುಃಖಗಳು, ರೈತರ ಬದುಕು ಬವಣೆಗಳು, ಅನೇಕ ಸಣ್ಣಪುಟ್ಟ ಸೂಕ್ಷ್ಮ ಸಮುದಾಯಗಳ ದುಃಖ ದುಮ್ಮಾನಗಳ ಕಂಡವರಾಗಿದ್ದೀರಿ ಮತ್ತು ಸಮಾಜವಾದದ ಹಿನ್ನೆಲೆ ಕೂಡ ನಿಮ್ಮ ಹೃದಯದಲ್ಲಿದೆ. ಈ ಸಾಮಾಜಿಕ ಕಳಕಳಿಯಿಂದಾಗಿ ನೀವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಬಲೀಕರಣಕ್ಕಾಗಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಅನುದಾನವಾಗಿ 2013ರಿಂದ ಪ್ರತೀ ಬಜೆಟ್‌ನಲ್ಲಿ ಸರಿಸುಮಾರು 25,000 ಕೋಟಿ ರೂ.ಯಿಂದ ಕಳೆದ 2024ರ ಸಾಲಿನಲ್ಲಿ 30,000 ಕೋಟಿ ಮೀಸಲಿಟ್ಟಿರುವುದು ಸರಿಯಷ್ಟೇ. ಕಳೆದ 12 ವರ್ಷದಿಂದ ಅಂದಾಜು 25,000 ಕೋಟಿ ರೂ. ಲೆಕ್ಕ ಹಾಕಿದರೆ, ಆ ಲೆಕ್ಕವನ್ನು ಹೇಳುವುದಕ್ಕೆ ಭಯವಾಗುತ್ತದೆ. ಇಷ್ಟು ಹಣವನ್ನು 12 ವರ್ಷಗಳಿಂದ ವ್ಯಯ ಮಾಡಿದ್ದರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರ ಜೀವನ ಎಷ್ಟರ ಮಟ್ಟಿಗೆ ಸುಧಾರಣೆ ಕಂಡಿದೆ ಎನ್ನುವುದನ್ನು ಒಂದು ‘ಸೋಶಿಯಲ್ ಆಡಿಟ್’ ಮಾಡಿಸಬೇಕಿದೆ. ಇಲ್ಲದೆ ಹೋದರೆ ಉಳಿದ ಸಮುದಾಯದವರಿಗೆ ಎಷ್ಟು ಹಣ ವ್ಯಯ ಮಾಡುತ್ತಿದ್ದಾರೆ ಎಂದು ಕಣ್ಣುರಿ ಬರುತ್ತದೆ ಮತ್ತು ಇಷ್ಟು ಹಣದ ಸೌಲಭ್ಯ ಪಡೆಯುತ್ತಿರುವ ಜನ, ನಮಗೆ ಸರಕಾರದಿಂದ ಹೆಚ್ಚಿನದು ಏನು ಸಿಕ್ಕೇಯಿಲ್ಲ ಎಂದು ನೋವು ವ್ಯಕ್ತಪಡಿಸುತ್ತಾರೆ. ಹಾಗಾದರೆ ಸರಕಾರ ಘೋಷಣೆ ಮಾಡಿದ ಹಣ ಏನಾಗುತ್ತಿದೆ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ಹಾಗಂತ ಸರಕಾರ ಏನೂ ಮಾಡುತ್ತಿಲ್ಲ ಎಂದು ಹೇಳುತ್ತಿಲ್ಲ.
ಈಗ ಸರಕಾರ ಘೋಷಣೆ ಮಾಡಿರುವ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ, ಮಹಿಳೆಯರಿಗೆ ಕೊಡುತ್ತಿರುವ 2,000 ರೂ.ಗಳು ಸ್ತ್ರೀ ಸಬಲೀಕರಣಕ್ಕೆ, ಕುಟುಂಬ ನಿರ್ವಹಣೆಗೆ ಉಸಿರಾಗಿದೆ. ವಿಶೇಷವಾಗಿ ಈ ಹೊತ್ತು ಹಸಿವು ಮುಕ್ತ ಕರ್ನಾಟಕ ಅನ್ನಭಾಗ್ಯ ಯೋಜನೆ, ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಹೀಗೆ ಎಸ್.ಸಿ.ಪಿ., ಟಿ.ಎಸ್.ಪಿ. ವಿಶೇಷ ಘಟಕ ಯೋಜನೆ ಕೂಡ ಜನರಿಗೆ ನೇರವಾಗಿ ತಲುಪುವಂತಿರಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಎದ್ದು ಕಾಣುತ್ತಿರುವ ಕೆಲಸವೆಂದರೆ ಹೋಬಳಿಗೊಂದು ವಸತಿ ಶಾಲೆ ಸರಕಾರ ಮಾಡಿರುವುದರಿಂದ ಸುಮಾರು ಮೂರುವರೆ ಲಕ್ಷಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿರುವುದು ಮತ್ತು ಅನೇಕ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವುದು, ಹೋಬಳಿ, ತಾಲೂಕು, ಜಿಲ್ಲೆಗೊಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡುತ್ತಿರುವುದು, ಹಾಸ್ಟೆಲ್‌ಗಾಗಿ ಹೊಸ ಕಟ್ಟಡಗಳು ಹೀಗೆ ಕಣ್ಣಿಗೆಕಾಣುವ ಕೆಲಸಗಳಾದರೆ ಇನ್ನುಳಿದ ಅನೇಕ ದೊಡ್ಡದೊಡ್ಡ ಇಲಾಖೆಗಳಲ್ಲಿ ಈ ಹಣ ಹೇಗೆ ಯಾವುದಕ್ಕೆ ಖರ್ಚಾಗುತ್ತದೆ ಎನ್ನುವುದು ಮಾತ್ರ ಕಾಣುವುದಿಲ್ಲ. ಕೆಲವು ಕೆಲಸಗಳಿಗೆ ಸರಕಾರವನ್ನು ಅಭಿನಂದಿಸಲೇಬೇಕು. ಇನ್ನು ಕೆಲವು ಕೆಲಸಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು.
ನಾನೊಬ್ಬ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತನಾಗಿ ‘ಹೆಂಡ ಬೇಡ ಭೂಮಿ ಬೇಕು’ ‘ಹೋಬಳಿಗೊಂದು ವಸತಿ ಶಾಲೆ ಬೇಕು’ ಎಂದು ಬೀದಿಗಳಲ್ಲಿ ಘೋಷಣೆ ಕೂಗಿದ್ದು, ಗೋಡೆ ಬರಹ ಬರೆದಿದ್ದು ಫಲ ಕೊಟ್ಟಿದೆ. ಆದರೆ ಭೂಮಿ ವಿಷಯದಲ್ಲಿ ದಲಿತರಿಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ. ಅದು ಶೇಕಡ 1.74 ಅಷ್ಟೇ ಇದೆ. ಇದೆಲ್ಲ ತಿಳಿಯದ ವಿಷಯವೇನಲ್ಲ. ಆದರೆ ನಿಮ್ಮ ಸಾಮಾಜಿಕ ಕಳಕಳಿಯ ಬುದ್ಧ, ಬಸವ,ಅಂಬೇಡ್ಕರ್ ಕಂಡ ಸಂವಿಧಾನದ ಆಶಯಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಕೆಲವು ದಿನಗಳ ಹಿಂದೆ ಗಾಂಧಿ ಭವನದಲ್ಲಿ ‘ಐಕ್ಯತಾ ದಸಂಸ’ ಒಂದು ಸಭೆ ನಡೆದಿತ್ತು. ಅಲ್ಲಿ ನಿಮಗೆ ಗೊತ್ತಿರುವ ದಲಿತ ಸಂಘರ್ಷ ಸಮಿತಿಯ ಎಲ್ಲಾ ನಾಯಕರು ಹಾಜರಿದ್ದರು ಮತ್ತು ಕರ್ನಾಟಕದ 31 ಜಿಲ್ಲೆ ಮತ್ತು ತಾಲೂಕುಗಳಿಂದ ದಸಂಸ ಕಾರ್ಯಕರ್ತರು, ಮುಖಂಡರು ಹಾಜರಾಗಿದ್ದರು. ಅವರೆಲ್ಲರ ಸಮಸ್ಯೆ ಮತ್ತು ಕೋರಿಕೆ ಈ ವಿಶೇಷ ಘಟಕದ ಅನುದಾನ ಸರಿಯಾಗಿ ಜಾರಿಯಾಗುತ್ತಿಲ್ಲ, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಡಿಮೆಯಾಗಿಲ್ಲ ಮತ್ತು ಪಿ.ಟಿ.ಸಿ.ಎಲ್. ಆ್ಯಕ್ಟ್ ಜಾಮೀನು ವಿವಾದ ಪರಿಹಾರವಾಗಿಲ್ಲ. ಹಿಂದೆ ದರ್ಕಾಸ್ತು ಭೂಮಿ, ಬಗರ್‌ಹುಕುಂ ಈಗ 53, 94 ಸಿ. ಈ ರೀತಿಯ ಅಲ್ಪ ಸ್ವಲ್ಪ ದಲಿತರು ಜಮೀನು ಹಿಡುವಳಿ ಮಾಡಿಕೊಂಡು ಕೃಷಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರಬಲ ಜಾತಿಗಳ ಪ್ರತಿರೋಧ ಮತ್ತು ದಬ್ಬಾಳಿಕೆಯಿಂದ ತತ್ತರಿಸಿ ಹೋಗಿದ್ದೇವೆ ಎಂದು ಇಂತಹವುಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕೆಂದು ಬಹುತೇಕ ಎಲ್ಲಾ ಜಿಲ್ಲೆಯ ಮುಖಂಡರು, ರಾಜ್ಯದ ಮುಖಂಡರಿಗೆ ಒತ್ತಾಯಿಸಿದರು.
ಇಂತಹ ಸಮಸ್ಯೆಗಳಿಗೆ ಕಾಲದ ಗಡುವು ಕೊಟ್ಟು ಪರಿಣಾಮಕಾರಿಯಾಗಿ ಅಧಿಕಾರಿಗಳಿಂದ ಕೆಲಸ ಮಾಡಿಸಬೇಕಾಗಿದೆ. ಸರಕಾರ ನಮ್ಮ ಪರ ಇದೆ ಅನ್ನಿಸುತ್ತದೆ. ಆದರೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಂತೆ ಕಾಣುತ್ತಿಲ್ಲ, ಅವರು ನಮ್ಮನ್ನು ಬೇರೆಯಾಗಿಯೇ ಕಾಣುತ್ತಾರೆ ಅನ್ನಿಸುತ್ತದೆ. ಮೊನ್ನೆ ಜನವರಿ 1ನೇ ತಾರೀಕಿನ ದಿನ ದಸಂಸ ನಾಯಕರಾಗಿದ್ದ ಲಕ್ಷ್ಮೀನಾರಾಯಣ ನಾಗವಾರ ಅವರು ನಮ್ಮನ್ನು ಅಗಲಿದರು. ಅವರನ್ನು ನೋಡಲು ಬಂದಾಗ ನಿಮ್ಮ ಬಳಿ ನಮ್ಮ ಡಾ.ಎಲ್. ಹನುಮಂತಯ್ಯ, ಮಾವಳ್ಳಿ ಶಂಕರ್, ಪಿಚ್ಚಳ್ಳಿ ಶ್ರೀನಿವಾಸ್ ನಾವೆಲ್ಲಾ ಲಕ್ಷ್ಮೀನಾರಾಯಣ್‌ಅವರಿಗೆ ಸರಕಾರದ ಕಡೆಯಿಂದ ಪೊಲೀಸ್ ಗೌರವಕೊಡಬೇಕೆಂದು ಕೇಳಿಕೊಂಡಾಗ ನೀವು ಇದನ್ನು ಯಾಕೆ ಯಾರು ಮುಂಜಾನೆಯೇ ನನ್ನ ಗಮನಕ್ಕೆ ತರಲಿಲ್ಲ ಎಂದು ಕೇಳಿ ತಕ್ಷಣವೇ ತಮ್ಮ ಸಿಎಸ್‌ಗೆ ಹೇಳಿ ಸರಕಾರಿ ಗೌರವಕೊಡಲು ತಕ್ಷಣ ಆದೇಶ ನೀಡಿದಿರಿ. ಲಕ್ಷ್ಮೀನಾರಾಯಣ ನಾಗವಾರ ಅವರಿಗೆ ಸೇರಿದಂತೆ ದಸಂಸದಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ನಮ್ಮನ್ನು ಅಗಲಿದ ಎಲ್ಲಾ ಸಂಗಾತಿಗಳಿಗೂ ಈ ಗೌರವ ಸಿಕ್ಕಿತಲ್ಲಾ ಎನ್ನುವ ಸಮಾಧಾನ ಅಲ್ಲಿದ್ದ ನಮ್ಮವರಿಗೆಲ್ಲರಿಗೂ ಬಂತು. ಇದು ತಮಗಿರುವ ಸಾಮಾಜಿಕ ಕಳಕಳಿ ಮತ್ತು ಬದ್ಧತೆ.
ನೀವು ಕಳೆದ ಕೆಲವು ದಿನಗಳ ಹಿಂದೆ ನಾಡಿನ ಪ್ರಮುಖ ದಿನಪತ್ರಿಕೆಯಾದ ವಾರ್ತಾಭಾರತಿಯ 22ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಮಾಡಿದಿರಿ. ಈ ವಿಶೇಷಾಂಕದ ವಿಶೇಷವೇನೆಂದರೆ ಇದರಲ್ಲಿ ಬಂದಿರುವ ಸಂಪಾದಕೀಯ. ಒಂದು ಗಂಭೀರ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಆ ಸಾಲುಗಳು ಹೀಗಿವೆ ‘‘...ಗುಲಾಮಗಿರಿಗಿಂತಲೂ ಹೀನಾಯವಾದ, ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದ ಅಸ್ಪಶ್ಯತೆ ಎಂಬ ನೀಚ ಪದ್ಧತಿಯನ್ನು ಕಾನೂನು ಪ್ರಕಾರ ಕಟ್ಟು ನಿಟ್ಟಾಗಿ ನಿಷೇಧಿಸಿ ಏಳು ದಶಕಗಳು ಕಳೆದವೆ ಆದರೂ ಆ ಅನಿಷ್ಟ ಪದ್ಧತಿಯನ್ನು ಅಳಿಸಲು ಕಾನೂನಿಗೆ ಸಾಧ್ಯವಾಗಿಲ್ಲ. ವಿಶ್ವಾಸಾರ್ಹ ಸಮೀಕ್ಷೆ ಪ್ರಕಾರ ಇಂದಿನ ಭಾರತದಲ್ಲಿ ಗ್ರಾಮೀಣ ಪ್ರದೇಶದ 30 ಶೇಕಡ ಮಂದಿ ಮತ್ತು ನಗರ ಪ್ರದೇಶಗಳ 20 ಶೇಕಡ ಮಂದಿ ತಾವು ಅಸ್ಪಶ್ಯತೆಯನ್ನು ಆಚರಿಸುತ್ತಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಆಚರಿಸುತ್ತಿದ್ದರೂ ಒಪ್ಪಿಕೊಳ್ಳದವರ ಸಂಖ್ಯೆ ಅಜ್ಞಾತವಾಗಿದೆ. ಅಸ್ಪಶ್ಯರೆಂದು ಪರಿಗಣಿಸಿ ಅಮಾನುಷ ಅಪಮಾನಕ್ಕೆ ಗುರುಪಡಿಸಲಾದವರ ಸಂಖ್ಯೆಯು ಕೂಡ ಇದಕ್ಕಿಂತ ಕೆಲವು ಪಟ್ಟಾದರೂ ಹೆಚ್ಚಿರಬಹುದು.
ಅಸ್ಪಶ್ಯತೆ ಎಂಬ ದೌರ್ಜನ್ಯ ಸಾಲದಕ್ಕೆ ದಲಿತರಿಗೆ ಮಾನವೀಯ ಗಣತಿಯನ್ನು ನಿರಾಕರಿಸುವ ಧೋರಣೆ ಬೇರೆ ಹಲವು ವಿಧಗಳಲ್ಲೂ ಪ್ರಕಟವಾಗುತ್ತಿರುತ್ತದೆ’’. ಈ ವಿಷಯ ನಿಮಗೂ ತಿಳಿದಿದ್ದು ನಿಮ್ಮ ಭಾಷಣಗಳಲ್ಲಿ ಮತ್ತೆ ಮತ್ತೆ ಹೇಳಿದ್ದೀರಿ. ಇತ್ತೀಚಿನ ದಿನಗಳಲ್ಲಿ ಒಂದು ರೂಪಕದಂತೆ ಒಂದು ಬಾವಿ ಕತೆ ಹೇಳುತ್ತೀರಿ. ‘‘ಊರುಗಳಲ್ಲಿ ಸೇದುವ ನೀರಿನ ಬಾವಿಗಳು ಇರುತ್ತವೆ, ಪಕ್ಷಿಗಳು ಕಸಕಡ್ಡಿ ತಂದು ಹಾಕಿರುತ್ತವೆ, ಗಾಳಿಯಲ್ಲಿ ಹಾರಿ ಬಂದ ಕಸ ಕಡ್ಡಿಗಳು ನೀರ ಮೇಲೆ ತೇಲಾಡುತ್ತಿರುತ್ತವೆ. ನಾವು ನೀರು ಸೇರುವಾಗ ಬಿಂದಿಗೆಯಿಂದ ಕಸ ಕಡ್ಡಿಗಳನ್ನು ದೂರ ಮಾಡಿ ಬಿಂದಿಗೆಯಲ್ಲಿ ನೀರನ್ನು ಮಾತ್ರ ತುಂಬಿಕೊಳ್ಳುವಂತೆ ಜನರು ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸಿಕೊಂಡು ಉತ್ತಮ ಪ್ರಜೆ ಆಗಬೇಕು’’ ಎಂದು ಹೇಳುತ್ತೀರಿ. ಇಂತಹ ಅನೇಕ ಸಂಗತಿಗಳನ್ನು ನೀವು ನಿಮ್ಮ ಮಾತುಗಳಲ್ಲಿ ಮತ್ತೆ ಮತ್ತೆ ಹೇಳುತ್ತೀರಿ. ಸಮಾಜದಲ್ಲಿ ಅಸಮಾನತೆ, ಅಸ್ಪಶ್ಯತೆ ಇನ್ನೂ ಜೀವಂತವಾಗಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಕಳೆದ ಹತ್ತು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ ಮತ್ತು ಶಿಕ್ಷೆ ಪ್ರಮಾಣ ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಅತ್ಯಂತ ಕನಿಷ್ಠ ಶೇಕಡ 3.7 ರಷ್ಟು ಇದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರಕಾರ ಎಸ್.ಸಿ-ಎಸ್.ಟಿ. ದೌರ್ಜನ್ಯ ತಡೆ ಡಿಸಿಆರ್‌ಗೆ ಇನ್ನಷ್ಟು ಬಲ ತುಂಬಿ ಪ್ರತೀ ಜಿಲ್ಲೆಗೂ ಒಂದರಂತೆ ( ಬೆಂಗಳೂರಿಗೆ 2)ಒಟ್ಟು 33 ವಿಶೇಷ ಪೊಲೀಸ್‌ಠಾಣೆ ಸ್ಥಾಪಿಸಲು ತಾವು ನಿರ್ಧರಿಸಿದ್ದೀರಿ ಮತ್ತು ಇದರ ಆದೇಶ ಹೊರಡಿಸಿದ್ದೀರಿ. ಈ ಠಾಣೆಗಳಲ್ಲಿ ಎ್.ಐ.ಆರ್ ಅನ್ನು ಈ ಠಾಣೆಗಳಲ್ಲಿ ಸ್ವತಂತ್ರ್ಯವಾಗಿ ದಾಖಲಿಸಲು ಅಧಿಕಾರ ಕೊಟ್ಟಿದ್ದೀರಿ.ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾನ, ಪ್ರಾಣ ಕಾಪಾಡಿಕೊಳ್ಳುವ ಮತ್ತು ಘನತೆಯನ್ನು ಹೆಚ್ಚಿಸುವ ದೊಡ್ಡ ಕೊಡುಗೆ ಎನ್ನಬಹುದು. ಈ ರೀತಿಯ ಪೊಲೀಸ್ ಠಾಣೆಗಳನ್ನು ಸ್ಥಾಪಿಸಬೇಕೆಂಬುದು ದಸಂಸದ ಒತ್ತಾಯ ಕೂಡ ಇತ್ತು.
ನೀವು ಕೊಟ್ಟ 5 ಗ್ಯಾರಂಟಿಗಳಿಗಿಂತ ಈ ಗ್ಯಾರಂಟಿ ನಮ್ಮ ಸ್ವಾಭಿಮಾನವನ್ನುಎತ್ತಿ ಹಿಡಿಯುತ್ತದೆ. ಆದರೆ ಇದು ಹತ್ತರಲ್ಲಿ 11 ಆಗದೆ, ಪೊಲೀಸ್ ಅಧಿಕಾರಿಗಳು ತಮ್ಮ ಇಚ್ಛಾಶಕ್ತಿಯನ್ನು ತೋರಿಸಬೇಕು, ಪ್ರಬಲ ಜಾತಿಗಳ ಮತ್ತು ರಾಜಕಾರಣಿಗಳ ಒತ್ತಡದಿಂದ ಮುಕ್ತವಾಗಿರಬೇಕು ಆಗ ಸಾಮಾನ್ಯ ಮತ್ತು ಕಟ್ಟಕಡೆಯ ಮನುಷ್ಯನಿಗೆ ನ್ಯಾಯಕೊಡಿಸುವಂತೆ ಆಗುತ್ತದೆ. ಭೀಮಾ ಸಾಹೇಬರ ನ್ಯಾಯದ ಕನಸು ನನಸಾದಂತಾಗುತ್ತದೆ. ನಿಮ್ಮ ಆಶಯ ಕೂಡ ಇದೇ ಆಗಿದೆ. ಬಹುಶಃ ನಿಮಗೆ ಗೊತ್ತಿರುವಂತೆ ನನ್ನ ಸಣ್ಣ ಅರಿವಿನಿಂದ ತಿಳಿಸುವುದಾದರೆ, ಕರ್ನಾಟಕದ 33,000 ಹಳ್ಳಿಗಳಲ್ಲಿ ಕನಿಷ್ಠ ಒಂದು ಹಳ್ಳಿಯಲ್ಲಾದರೂ ಅಸ್ಪೃಶ್ಯ ಮುಕ್ತ ಗ್ರಾಮವನ್ನು ನೋಡುವ ಕನಸು ನಮ್ಮೆಲ್ಲರದ್ದು. ಆದರೆ ಅಸ್ಪೃಶ್ಯತೆ ಉಳಿದ ಸಮುದಾಯದವರ ಕಣ್ಣಲ್ಲಿ, ಹೃದಯದಲ್ಲಿ, ಕೈಯಲ್ಲಿ ಮುಟ್ಟಬಾರದೆನ್ನುವುದನ್ನು ಹೊತ್ತುಕೊಂಡು ತಿರುಗಾಡುತ್ತಿದ್ದಾರೆ. ಭೀಮಾ ಸಾಹೇಬರು ಒಮ್ಮೆ ‘‘ಅಸ್ಪೃಶ್ಯತೆ ಉಳಿದ ಸಮುದಾಯದ ಜೊತೆ ಹೊರದೇಶಕ್ಕೂ ವಲಸೆ ಹೋಗುತ್ತದೆ’’ಎಂದು ಅಸ್ಪೃಶ್ಯತೆ ಕುರಿತು ಹೇಳಿದ್ದು ನೆನಪಾಗುತ್ತದೆ.
ಈ ಕುರಿತು ಬಗೆದಷ್ಟು ನಮ್ಮೆದೆಗಳಲ್ಲಿ ಅಡಗಿರುವ ನೋವು,ಅಸಮಾನತೆ, ದೌರ್ಜನ್ಯ ದಿಂದಆದ ಗಾಯಗಳು ಮುಗಿಯುವುದಿಲ್ಲ. ಇನ್ನೊಂದು ಮುಖ್ಯ ವಿಷಯ ನಿಮ್ಮ ಗಮನಕ್ಕೆ ತಂದು ನನ್ನ ಮನವಿಯನ್ನು ಮುಗಿಸುತ್ತೇನೆ. ಕೆಲವು ದಿನಗಳ ಹಿಂದೆ ನಮ್ಮ ದೇಶದ ಹೆಮ್ಮೆಯ ಆರ್ಥಿಕ ತಜ್ಞರು, ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡೆವು. ಇವರ ಬಗ್ಗೆ ಎಲ್ಲರಿಗಿಂತ ಹೆಚ್ಚು ನಿಮಗೆ ಅರಿವಿದೆ. ಅವರು ಈ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹೇಗೆಲ್ಲಾ ಸುಧಾರಿಸಿದ್ದರು ಎಂದು ದಾಖಲೆಯ ಬಜೆಟ್ಟನ್ನು ಮಂಡಿಸಿರುವ ನಿಮಗೆ ಇದು ತಿಳಿದಿದೆ ಇಂತಹ ಮಹಾನ್ ವ್ಯಕ್ತಿಯ ಹೆಸರು ನಮ್ಮ ರಾಜ್ಯದಲ್ಲೂ ಅಸ್ಮಿತೆಯಾಗಿ ಉಳಿಸಿಕೊಳ್ಳುವ ಅವಕಾಶ ನಮಗೆ ಇದೆ ಎಂದು ಅನಿಸುತ್ತದೆ.
ನಾನು ನಿಮ್ಮಲ್ಲಿ ಕೋರಿಕೊಳ್ಳುವುದೇನೆಂದರೆ ನೀವೀಗಾಗಲೇ ಎ.ಸಿ.ಪಿ ಟಿ.ಎಸ್.ಪಿ. ಅನುದಾನ ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಎನ್ನುವುದನ್ನು ಪ್ರಾರಂಭದಲ್ಲಿ ತಮ್ಮ ಗಮನಕ್ಕೆ ತಂದಿದ್ದೇನೆ. ಈ ನಾಡಿನಲ್ಲಿ ಅಸ್ಪೃಶ್ಯತೆ ಆಚರಣೆ ಕಡಿಮೆಯಾಗಬೇಕೆನ್ನುವುದು ನಮ್ಮ ಹಂಬಲವಾದರೆ, ಶತಮಾನಗಳ ಕನಸು ಮತ್ತು ಹೆಬ್ಬಯಕೆ ನನ್ನಂತಹವರದ್ದು. ಈ ಗೊಡ್ಡು ಆಚರಣೆಗಳನ್ನು ಒಂದಿಷ್ಟು ಪ್ರಮಾಣದಲ್ಲಿ ಆದರೂ ಕಡಿಮೆ ಮಾಡುವುದಕ್ಕೆ ನನ್ನದೊಂದು ಕೋರಿಕೆ ಇದೆ. ಕರ್ನಾಟಕದಲ್ಲಿ 224 ಮತಕ್ಷೇತ್ರಗಳಿವೆ. ಯಾವ ಕ್ಷೇತ್ರದ ಶಾಸಕರೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಶಾಸಕರು ಕೂಡ, ದಲಿತರ ಮೇಲೆ ದೌರ್ಜನ್ಯ ನಡೆದಾಗ ಅವರ ಪರವಾಗಿ ನಿಲ್ಲುವುದಿಲ.್ಲ ಕೊನೆ ಪಕ್ಷ ಸಾಂತ್ವನ ಕೂಡ ಹೇಳುವುದಿಲ.್ಲ ಎಲ್ಲಾ ಪಕ್ಷದ ನಾಯಕರು ಉಳಿದ ಸಮುದಾಯದ ಮತಗಳ ಆತಂಕದಲ್ಲಿ ಇರುತ್ತಾರೆ. ಬೆರಳೆಣಿಕೆಯ ಶಾಸಕರು ಸ್ಪಂದಿಸಬಹುದು. ಇದರಿಂದ ಇವರ ಪರವಾಗಿ ನಿಲ್ಲುವುದು ಅಂತಿಮವಾಗಿ ದಲಿತ ಸಂಘಟನೆಗಳು ಮಾತ್ರ. ಇದನ್ನು ಕಳೆದ ಐದು ದಶಕಗಳಿಂದ ನಾನು ಕಂಡಿದ್ದೇನೆ.
ಈಗ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಯಾವ ಕ್ಷೇತ್ರದಲ್ಲಿಅತಿ ಹೆಚ್ಚು ದೌರ್ಜನ್ಯ ನಡೆದಿದೆಯೋ ಮತ್ತು ಯಾವ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆಯೋ, ಆ ಎರಡು ಮತ ಕ್ಷೇತ್ರಗಳಿಗೆ ಆಯಾಮತ ಕ್ಷೇತ್ರಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮಹಿಳೆಯರಿಗೆ ಮತ್ತು ನಿರುದ್ಯೋಗಿಗಳ ಆರ್ಥಿಕ ಸಬಲೀಕರಣಕ್ಕೆ ಪ್ರತಿ ವರ್ಷದ ಬಜೆಟ್ಟಿನಲ್ಲಿ ಕನಿಷ್ಠ 100 ಕೋಟಿ ಯಿಂದಗರಿಷ್ಠ 500 ಕೋಟಿ ರೂ. ವರೆಗೆ ಹಣವನ್ನು ಮೀಸಲಿಟ್ಟು,ಅದನ್ನು ಪರಿಣಾಮಕಾರಿಯಾಗಿಜಾರಿ ಮಾಡುವ ಉಸ್ತುವಾರಿಯನ್ನು ಮುಖ್ಯಮಂತ್ರಿಗಳೇ ನೋಡಿಕೊಳ್ಳಬೇಕು. ಆಯೋಜನೆ ಆಹಾರದ ಹಕ್ಕು ತಂದ ಧೀಮಂತ ಪ್ರಧಾನಿಗಳಾಗಿದ್ದ ಡಾಕ್ಟರ್ ಮನಮೋಹನ್ ಸಿಂಗ್ ಅವರ ಹೆಸರನ್ನೇ ಇಡಬೇಕು.
ಸ್ವಾತಂತ್ರ್ಯ ಪಡೆದು ನೂರು ವರ್ಷವನ್ನು ಆಚರಿಸುವಾಗ ಕರ್ನಾಟಕದಲ್ಲಿ 50 ಮತಕ್ಷೇತ್ರಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ವಿಶೇಷವಾಗಿ ಅಸ್ಪೃಶ್ಯ ಮುಕ್ತವಾಗಿ, ಕುವೆಂಪು ಹೇಳಿದ ‘ಸರ್ವಜನಾಂಗದ ಶಾಂತಿಯ ತೋಟ’ವಾಗಿ ಪ್ರಜಾಪ್ರಭುತ್ವದ ಸಂವಿಧಾನದ ಆಶಯಗಳು ಈಡೇರಿದ ಈ ಕ್ಷೇತ್ರಗಳನ್ನು ಮುಂಬರುವ ನಮ್ಮ ತಲೆಮಾರುಗಳು ನೆಮ್ಮದಿಯಾಗಿ ಸುಖ ಸಂತೋಷದಿಂದ ಬಾಳುವ ನಾಡನ್ನಾಗಿಸುವ ಕನಸು ನಮ್ಮೆಲ್ಲರದ್ದು. ಅದರ ಇಚ್ಛಾಶಕ್ತಿಗೆ ನಿಮ್ಮಿಂದ ಅಡಿಗಲ್ಲು ಇಡುವಂತಾಗಲಿ. ಇದಿಷ್ಟು ನನ್ನ ಕೋರಿಕೆ ಮತ್ತು ನನ್ನಂಥವರೆಲ್ಲರ ಕನಸು. ಈ ದೇಶದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಸಾಮಾನ್ಯ ಜನರು ಪೋಸ್ಟ್‌ಕಾರ್ಡಿನಲ್ಲಿ ಬರೆದ ಸಲಹೆ ಸೂಚನೆಗಳನ್ನು ಗಮನಿಸುತ್ತಿದ್ದರಂತೆ ಮತ್ತು ತಮ್ಮ ತಮ್ಮ ಕಾರ್ಯ ಯೋಜನೆಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರಂತೆ. ಹಾಗೆ ನಾನು ಸುದೀರ್ಘವಾಗಿ ತಮ್ಮಲ್ಲಿ ಇಂತಹ ಒಂದು ಮನವಿಯನ್ನು ಅರಿಕೆ ಮಾಡಿಕೊಳ್ಳುತ್ತಿದ್ದೇನೆ. ಹಾಗೆಯೇ 2025 ಎಪ್ರಿಲ್ 14 ಡಾ. ಭೀಮಾ ಸಾಹೇಬರ ಹುಟ್ಟು ಹಬ್ಬಕ್ಕೆ ಒಳ ಮೀಸಲಾತಿ ಜಾರಿ ಮಾಡುವ ಸಿಹಿ ಸುದ್ದಿ ಪ್ರಕಟಿಸುತ್ತೀರಿ ಎಂದು ಭಾವಿಸುತ್ತಾ, ನೀವು ಗಮನಿಸಿರುತ್ತೀರಿ ಎಂದು ನಂಬಿದ್ದೇನೆ.