ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಕೃತಿಗಳ ಮೆರುಗು

ಬೆಂಗಳೂರು: ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆ ಸುರಿಯಲು ಮತ್ತು ಪರಿಸರ ಸಮತೋಲನ ಕಾಪಾಡಲು ಸಹಾಯಕವಾಗುವ ಮರಗಳನ್ನು ಗೌರವಿಸುವ ಉದ್ದೇಶದಿಂದ ‘ನವರಸದ ಮರ’ ಕಲಾಕೃತಿಯನ್ನು ರಚಿಸಲಾಗಿದೆ. ಈ ಕಲಾಕೃತಿಗಳು ವಿಮಾನ ನಿಲ್ದಾಣಕ್ಕೆ ಮೆರುಗು ತಂದಿವೆ.
ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಕಲಾವಿದರಾದ ಅಲೆಕ್ಸ್ ಡೇವಿಸ್, ಕಾಯ್ ಝಿಸಾಂಗ್ ಅವರ ಪ್ರಯತ್ನದಿಂದ ಅನೇಕ ವಿಧದ ಕಲಾಕೃತಿಗಳು ಮೂಡಿಬಂದಿವೆ. ‘ನವರಸದ ಮರ’ ಕಲಾಕೃತಿಯನ್ನು ಅಲೆಕ್ಸ್ ಡೇವಿಸ್ ಅವರು ತುಕ್ಕುರಹಿತ ಸ್ಟೀಲ್‌ನಿಂದ ರಚಿಸಿದ್ದಾರೆ.
ಅತ್ಯಂತ ಪ್ರಸಿದ್ಧಿಯಾದ ಕನ್ನಡದ ಶಾಸ್ತ್ರೀಯ ಸಾಹಿತ್ಯ ಕೃತಿಗಳಲ್ಲಿನ ನವರಸಗಳಿಂದ ಸ್ಫೂರ್ತಿಯನ್ನು ಪಡೆದು ಕಲಾವಿದ ಈ ಕಲಾಕೃತಿಯನ್ನು ರಚಿಸಿದ್ದಾರೆ. ತುಕ್ಕುರಹಿತ ಸ್ಟೀಲ್‌ನಿಂದ ಹೊಳಪು ಪಡೆದು, ತುಂಡರಿಸಿದ ಕನ್ನಡಿಯ ಚೂರುಗಳಿಂದ ರಚನೆಯಾದ ಎಲೆಗಳ ಆಕಾರದಿಂದ ಕೂಡಿರುವ ಈ ಕಲಾಕೃತಿಯ ಮೇಲ್ಛಾವಣಿಯು, ಕನ್ನಡ ಲಿಪಿಯ ನವರಸಗಳಿಂದ ಸ್ಫೂರ್ತಿ ಪಡೆದಿದೆ.
ಇದರಲ್ಲಿ ಕನ್ನಡ ಲಿಪಿಯಲ್ಲಿನ ಪಠ್ಯಗಳನ್ನು ಹಿಮ್ಮುಖವಾಗಿ ಸ್ಥಾಪಿಸಲಾಗಿದ್ದು, ಕನ್ನಡಿಯಲ್ಲಿ ಸರಿಯಾಗಿ ಓದುವಂತೆ ರೂಪಿಸಲಾಗಿದೆ. ಈ ಕಲಾಕೃತಿಯನ್ನು ವೀಕ್ಷಿಸುವವರು ನವರಸಗಳ ಭಾವನೆಯಲ್ಲಿ ಮಿಂದೇಳಲು ಸಹಾಯ ಮಾಡಿಕೊಡುತ್ತದೆ.
ಸ್ಟೀಲ್‌ನಲ್ಲಿ ಮೂಡಿದ ನವಿಲು
ಸ್ಟೀಲ್‌ನಲ್ಲಿ ರಚಿಸಲಾದ ‘ದಿ ಸೋರಿಂಗ್’ ನವಿಲಿನ ಕಲಾಕೃತಿಯು, ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತದೆ. ಕಲಾವಿದ ಕಾಯ್ ಝಿಸಾಂಗ್ ಅವರು ಕಿನ್ ಮತ್ತು ಹ್ಯಾನ್ ರಾಜವಂಶಗಳಿಂದ ಸ್ಫೂರ್ತಿ ಪಡೆದು, ಸಾಂಪ್ರದಾಯಿಕ ಸೌಂದರ್ಯವನ್ನು ಸಮಕಾಲೀನ ರೂಪ, ಸಾಮಗ್ರಿ ಮತ್ತು ಪರಿಕಲ್ಪನೆಗಳೊಂದಿಗೆ ನವಿಲಿನ ಕಲಾಕೃತಿಯನ್ನು ರಚಿಸಿದ್ದಾರೆ. ಈ ಕಲಾಕೃತಿಯು ಪ್ರಾದೇಶಿಕತೆ, ಜಾಗತೀಕರಣ ಮತ್ತು ಸಾಂಸ್ಕೃತಿಕ ವಿನಿಮಯದ ವಿಷಯಗಳ ಬಗ್ಗೆ ವೀಕ್ಷಕರಲ್ಲಿ ಕಲ್ಪನೆ ಮೂಡಿಸುತ್ತದೆ.