ಸ್ಥೂಲದೇಹಿ ಮಕ್ಕಳು ಮತ್ತು ಪ್ರಧಾನ ಮಂತ್ರಿ ಪೋಷಣ ಅಭಿಯಾನ

ಕೊಬ್ಬು ಮತ್ತು ಲಿಪಿಡ್‌ಗಳು ಮಕ್ಕಳ ಆಹಾರದಲ್ಲಿನ ಅತಿ ಮುಖ್ಯ ಪೋಷಕಾಂಶಗಳು. ಆಹಾರದಲ್ಲಿ ಅವು ಇರಲೇಬೇಕು. ಜೀವಕೋಶಗಳ ಹೊರಪದರ ಆರೋಗ್ಯಕರವಾಗಿರುವುದಕ್ಕೆ, ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೋಜೆನ್ ಹಾರ್ಮೋನುಗಳು ಸರಿಪ್ರಮಾಣದಲ್ಲಿ ಸೃವಿತವಾಗಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಕ್ಕೆ ಇದು ಬಹಳ ಮುಖ್ಯ. ಮನೆ ಅಥವಾ ಶಾಲೆಯಲ್ಲಿ ತಯಾರಿಸಿದ ಆಹಾರದಲ್ಲಿ ಇರುವ ಕೊಬ್ಬಿನಿಂದ ಮಕ್ಕಳಲ್ಲಿ ಕೊಬ್ಬು ಜಾಸ್ತಿಯಾಗುವುದರ ಬಗ್ಗೆ ಯಾವುದೇ ರೀತಿಯ ಅಧ್ಯಯನ, ಸಮೀಕ್ಷೆಗಳು ಆಗಿಲ್ಲ. ಪರಿಣತರನ್ನು ಕೇಳದೆಯೇ, ಅಧ್ಯಯನ ಮಾಡದೆಯೇ, ಇದ್ದಕ್ಕಿದ್ದಂತೆಯೇ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ ಎಂದು ಆದೇಶ ಹೊರಡಿಸುವುದು ಬೇಜವಾಬ್ದಾರಿತನದ ಹೇಳಿಕೆಯಾಗುತ್ತದೆ.;

Update: 2025-03-27 09:45 IST
ಸ್ಥೂಲದೇಹಿ ಮಕ್ಕಳು ಮತ್ತು ಪ್ರಧಾನ ಮಂತ್ರಿ ಪೋಷಣ ಅಭಿಯಾನ
  • whatsapp icon

ಶಾಲೆಗಳಲ್ಲಿ ಕೊಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಬಳಸುವ ಎಣ್ಣೆಯ ಪ್ರಮಾಣವನ್ನು ಶೇ. 10ರಷ್ಟು ಕಡಿಮೆ ಮಾಡಬೇಕೆಂದು ಪ್ರಧಾನಮಂತ್ರಿ ಪೋಷಣ ಅಭಿಯಾನದ ಸಲಹಾ ಸಮಿತಿಯು ಸಲಹೆ ಮಾಡಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲದೇಹವೇ ಇದಕ್ಕೆ ಕಾರಣವೆಂದು ಅದು ಹೇಳಿಕೊಂಡಿದೆ.

ಬದಲಾಗಿರುವ ಇಂದಿನ ಜೀವನ ಪದ್ಧತಿಯಲ್ಲಿ ಅತಿಯಾದ ಸಕ್ಕರೆ ಇರುವ ತಂಪು ಪಾನೀಯ ಮತ್ತು ಸಂಸ್ಕರಿಸಿರುವ ಆಹಾರಗಳ ಬಳಕೆಯು ಅತಿಯಾಗಿದೆ. ಇದು ಮಕ್ಕಳ ಆರೋಗ್ಯಕ್ಕೆ ಮಾರಕವಾಗಿದೆ ಎಂದು ಹೇಳುತ್ತಲೇ ಅವುಗಳ ಮಾರಾಟವನ್ನು ನಿಯಂತ್ರಿಸುವ ಬಗ್ಗೆ ಮಾತಾಡುವ ಬದಲು, ಶಾಲೆಯಲ್ಲಿ ಮಾಡುವ ಅಡುಗೆಯಲ್ಲಿ ಎಣ್ಣೆ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಸಲಹೆ ಮಾಡಿದ್ದು ತೀರಾ ವಿಚಿತ್ರವೂ, ಹಾಸ್ಯಾಸ್ಪದವೂ ಆಗಿದೆ. ಪ್ರಧಾನ ಮಂತ್ರಿ ಪೋಷಣ ಅಭಿಯಾನದಲ್ಲಿ ಉಣಬಡಿಸುವ ಎಲ್ಲಾ ಊಟದಲ್ಲೂ ಎಣ್ಣೆಯ ಬಳಕೆ ಶೇ. 10 ಕಡಿಮೆ ಆಗಬೇಕು, ಅಡುಗೆ ತಯಾರಕರು ಮತ್ತು ಅವರ ಸಹಾಯಕಿಯರಿಗೆ ಇನ್ನೂ ಶೇ. 10 ಕಡಿಮೆ ಎಣ್ಣೆಯನ್ನು ಬಳಸಿ ಅಡಿಗೆ ಮಾಡುವುದರ ತರಬೇತಿಯನ್ನು ಕೊಡಬೇಕೆಂದು ಸಲಹೆ ಮಾಡಿದೆ. ಮಕ್ಕಳ ಆಹಾರದಲ್ಲಿ ಪೋಷಕಾಂಶವನ್ನು ಹೆಚ್ಚಿಸುವ ಕುರಿತು ಏನೂ ಹೇಳಿಕೆ ಇಲ್ಲ.

ಭಾರತದಲ್ಲಿ ಮಕ್ಕಳಲ್ಲಿ ಸ್ಥೂಲದೇಹವು ಹೆಚ್ಚುತ್ತಿರುವುದರ ಬಗ್ಗೆ ಅಂತರ್‌ರಾಷ್ಟ್ರೀಯ ಮ್ಯಾಗಝೀನ್ ‘ಲ್ಯಾನ್ಸೆಟ್’ ನಲ್ಲಿ ಅಂಕಿ ಅಂಶ ಸಮೇತ ಲೇಖನವೊಂದು ಪ್ರಕಟವಾಗಿತ್ತು. ಆ ಲೇಖನವನ್ನು ಉಲ್ಲೇಖಿಸಿ ಮಾನ್ಯ ಪ್ರಧಾನಿಗಳು ತಮ್ಮ ‘ಮನ್ ಕೀ ಬಾತ್’ನಲ್ಲಿ ಮಕ್ಕಳಲ್ಲಿ ಸ್ಥೂಲದೇಹಿಗಳು ಹೆಚ್ಚಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಪ್ರಧಾನ ಮಂತ್ರಿಗಳ ಈ ಕಳವಳದ ಭಾಷಣವೇ ಪಿ.ಎಂ.ಪೋಷಣ ಅಭಿಯಾನದ ಸಲಹಾಸಮಿತಿಯ ಸಲಹೆಗೆ ಕಾರಣ. ಜಾಗತಿಕ ಹಸಿವಿನ ಸೂಚ್ಯಂಕ ಬಂದಾಗ ಅದು ನಮ್ಮ ದೇಶದ ಹಿತಾಸಕ್ತಿಗೆ ವಿರುದ್ಧವಾದುದು ಎಂದು ತೀವ್ರವಾಗಿ ವಿರೋಧಿಸಿದ್ದ ಮಾನ್ಯ ಪ್ರಧಾನಿಗಳು ನಮ್ಮ ದೇಶದ ಮಕ್ಕಳ ಸ್ಥೂಲದೇಹದ ಬಗ್ಗೆ ಬಂದಾಗ ಮಾತ್ರ ಅದನ್ನು ಒಪ್ಪಿಕೊಂಡು ತಮ್ಮ ತೀವ್ರ ಕಳವಳವನ್ನು ವ್ಯಕ್ತಪಡಿಸಿರುವುದು ಆಶ್ಚರ್ಯವನ್ನುಂಟುಮಾಡುತ್ತದೆ.

ಕರಿದ ತಿಂಡಿ ತಿಂದು, ಪೇಯಗಳನ್ನು ಸೇವಿಸಿ ಸ್ಥೂಲದೇಹಿಗಳಾಗುತ್ತಿರುವ ಮಕ್ಕಳೇ ಬೇರೆ, ಪೌಷ್ಟಿಕಾಂಶದ ಅವಶ್ಯಕತೆ ಇರುವ ಮಕ್ಕಳೇ ಬೇರೆ. ರಾಷ್ಟ್ರೀಯ ಪೌಷ್ಟಿಕಾಂಶದ ಸರ್ವೇಯ ಪ್ರಕಾರ ನಮ್ಮ ದೇಶದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಶೇ. 6.5 ಇದೆ. ಮಧ್ಯಮ ಅಪೌಷ್ಟಿಕತೆ ಶೇ. 24 ಇದೆ. ಹೆಚ್ಚಿನ ತೂಕವಿರುವವರು ಶೇ. 4.8 ಇದ್ದರೆ ಸ್ಥೂಲದೇಹಿಗಳು ಶೇ. 1 ಇದ್ದಾರೆ. 2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಯ ಪ್ರಕಾರ ಶೇ. 36 ಮಕ್ಕಳು ಕಡಿಮೆ ಎತ್ತರವುಳ್ಳವರಾಗಿದ್ದಾರೆ. ಶೇ. 32 ಮಕ್ಕಳು ಕಡಿಮೆ ತೂಕದವರಾಗಿದ್ದಾರೆ. ಮತ್ತು ಶೇ. 3 ಮಕ್ಕಳು ಹೆಚ್ಚಿನ ತೂಕದವರಾಗಿದ್ದಾರೆ. ಶೇ. 3 ಮಕ್ಕಳ ತೂಕದ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿರುವ ಸರಕಾರಕ್ಕೆ ಶೇ. 36 ಮಕ್ಕಳ ಚಿಂತೆಯೇ ಇಲ್ಲವೇ? ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವನ್ನು ಕೊಡಬೇಕೆಂಬ ಬೇಡಿಕೆಯು ಮೂಲೆಗುಂಪಾಗಿ, ಕೆಲವೇ ಮಕ್ಕಳ ಹೆಚ್ಚಿನ ತೂಕದ್ದೇ ಚಿಂತೆಯಾಯಿತಲ್ಲ? ಅಥವಾ ‘ಲ್ಯಾನ್ಸೆಟ್’ ಪತ್ರಿಕೆಯ ಅಂಕಿಅಂಶಗಳನ್ನು ತಾನು ಬಜೆಟ್‌ನಲ್ಲಿ ಕಡಿಮೆ ಇರಿಸಿದ್ದನ್ನು ಸಮರ್ಥಿಸಿಕೊಳ್ಳುವ ತಂತ್ರವಾಗಿಯಷ್ಟೇ ಸರಕಾರ ಬಳಸಿಕೊಳ್ಳುತ್ತಿದೆಯೇ? ವಿದೇಶೀ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನವೇ ಒಂದು ನೆವವಾಗಿಬಿಟ್ಟಿತೇ? ಈಗಿನ ಬೆಲೆ ಏರಿಕೆಯ ದಿನಗಳಲ್ಲಿ ಮಕ್ಕಳಿಗೆ ಸಮತೂಕದ ಆಹಾರ ಒದಗಿಸಲು ಸರಕಾರ ಇರಿಸಿರುವ ಬಜೆಟ್ ಎಷ್ಟು ಕಡಿಮೆ ಇದೆಯೆಂದರೆ ಅದು ಶೇ. 10 ಅಲ್ಲ, ಒಂದೇ ಸಾರಿ ಶೇ. 40 ಪೋಷಕಾಂಶಗಳನ್ನೇ ಕಡಿಮೆ ಮಾಡಲು ಹೊರಟಿರುವಂತಿದೆ.

ಕೊಬ್ಬು ಮತ್ತು ಲಿಪಿಡ್‌ಗಳು ಮಕ್ಕಳ ಆಹಾರದಲ್ಲಿನ ಅತಿ ಮುಖ್ಯ ಪೋಷಕಾಂಶಗಳು. ಆಹಾರದಲ್ಲಿ ಅವು ಇರಲೇಬೇಕು. ಜೀವಕೋಶಗಳ ಹೊರಪದರ ಆರೋಗ್ಯಕರವಾಗಿರುವುದಕ್ಕೆ, ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೋಜೆನ್ ಹಾರ್ಮೋನುಗಳು ಸರಿಪ್ರಮಾಣದಲ್ಲಿ ಸೃವಿತವಾಗಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಕ್ಕೆ ಇದು ಬಹಳ ಮುಖ್ಯ. ಮನೆ ಅಥವಾ ಶಾಲೆಯಲ್ಲಿ ತಯಾರಿಸಿದ ಆಹಾರದಲ್ಲಿ ಇರುವ ಕೊಬ್ಬಿನಿಂದ ಮಕ್ಕಳಲ್ಲಿ ಕೊಬ್ಬು ಜಾಸ್ತಿಯಾಗುವುದರ ಬಗ್ಗೆ ಯಾವುದೇ ರೀತಿಯ ಅಧ್ಯಯನ, ಸಮೀಕ್ಷೆಗಳು ಆಗಿಲ್ಲ. ಪರಿಣತರನ್ನು ಕೇಳದೆಯೇ, ಅಧ್ಯಯನ ಮಾಡದೆಯೇ, ಇದ್ದಕ್ಕಿದ್ದಂತೆಯೇ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ ಎಂದು ಆದೇಶ ಹೊರಡಿಸುವುದು ಬೇಜವಾಬ್ದಾರಿತನದ ಹೇಳಿಕೆಯಾಗುತ್ತದೆ.

ನಮ್ಮ ಆಹಾರದ ಶೇ. 25-30 ಭಾಗವು ಕೊಬ್ಬಿನಿಂದ ಕೂಡಿರಬೇಕು. ಎ,ಡಿ,ಇ,ಕೆ ಮುಂತಾದ ವಿಟಮಿನ್ ಗಳು ಕರಗುವುದೇ ಕೊಬ್ಬಿನಲ್ಲಿ. ಪ್ರತಿದಿನದ ಆಹಾರದಲ್ಲಿ 15-25 ಗ್ರಾಂನಷ್ಟು ಎಣ್ಣೆ ಇರಲೇಬೇಕು. ನಮ್ಮ ಇಂದಿನ ಶಾಲಾಬಿಸಿಯೂಟದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ 5 ಮಿ.ಲೀ., ಹೈಸ್ಕೂಲ್ ಮಕ್ಕಳಿಗೆ 7.5 ಮಿ.ಲೀ. ಹೆಚ್ಚು ಸೇರಿಸಿದರೆ ಮಕ್ಕಳ ಅವಶ್ಯಕತೆಗೆ ಸರಿದೂಗುತ್ತದೆ ಎಂದು ಬಿಸಿಯೂಟದ ಮಾರ್ಗದರ್ಶಿಕೆಯೇ ಹೇಳುತ್ತದೆ. ಬೆಲೆಗಳು ಗಗನಕ್ಕೇರಿರುವಾಗ, ಬಜೆಟ್ ಕೊಡಮಾಡಿರುವ ಹಣದಲ್ಲಿ ಇಷ್ಟು ಎಣ್ಣೆಯನ್ನು ಸೇರಿಸುವುದೇ ಕಷ್ಟವಾಗಿರುವಾಗ ಇರುವ ಪ್ರಮಾಣವನ್ನೂ ಕಡಿಮೆಮಾಡಲು ಸರಕಾರ ಆದೇಶಿಸುತ್ತಿರುವುದು ವಿಪರ್ಯಾಸವೇ ಸರಿ.

ಮಕ್ಕಳಿಗೆ ಈಗ ಸಿಗುತ್ತಿರುವುದಕ್ಕಿಂತಲೂ ಹೆಚ್ಚಿಗೆ ಕೊಬ್ಬಿನಂಶ ಸಿಗಬೇಕಾದದ್ದು ಇಂದಿನ ಅವಶ್ಯಕತೆಯಾಗಿದೆ. ಆದರೆ ಬಡಮಕ್ಕಳಿಗೆ ಮತ್ತು ದೊಡ್ಡವರಿಗೂ ಕೂಡ ದಿನಕ್ಕೆ ಎಷ್ಟು ಎಣ್ಣೆ ಅವಶ್ಯಕವೋ ಅಷ್ಟನ್ನು ಪೂರೈಸಲು ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ.

ಕೋವಿಡ್ ನಂತರದ ದಿನಗಳಲ್ಲಿ ಜನರ ಆರ್ಥಿಕ ಪರಿಸ್ಥಿತಿಯು ಭೂಮಿಗಿಳಿದಿರುವ ಕಾರಣದಿಂದಾಗಿ ಜನರ ಆಹಾರ ಸೇವನೆ, ಪೋಷಕಾಂಶಗಳ ಸೇವನೆಯು ಕಡಿಮೆಯಾಗಿದೆ. ಪರಿಸ್ಥಿತಿ ಹೀಗಿರುವಾಗಿ ಸರಕಾರವು ಜನರ ಆಹಾರದ ಸ್ಥಿತಿಗತಿ ಏನಿದೆ, ಹೆಚ್ಚು ಪೌಷ್ಟಿಕ ಆಹಾರವು ತಲುಪುವಂತೆ ಮಾಡಲು ಏನು ಮಾಡಬೇಕು ಎಂದು ವಿಚಾರ ಮಾಡಲಿಕ್ಕಾಗಿ ಒಂದು ಸಮೀಕ್ಷೆಯನ್ನು ಮಾಡಬೇಕಾಗಿತ್ತು. ಹೆಚ್ಚೆಚ್ಚು ಪೌಷ್ಟಿಕ ಆಹಾರ ಜನರಿಗೆ ತಲುಪುವಂತೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಶಾಲಾಬಿಸಿಯೂಟದಲ್ಲಿ ಬಳಸುವ ಎಣ್ಣೆಯ ಪ್ರಮಾಣ ಜಾಸ್ತಿಯಿದೆ, ಅದರ ಕಾರಣದಿಂದಾಗಿ ಮಕ್ಕಳಲ್ಲಿ ಕೊಬ್ಬು ಸಂಗ್ರಹವಾಗುತ್ತಿದೆಯೆನ್ನಲು ಯಾವುದೇ ಆಧಾರವಿಲ್ಲ. ಬದಲಿಗೆ ಶಾಲೆಯಿಂದ ಹೊರಗಡೆ ಪೌಷ್ಟಿಕವಲ್ಲದ ಅತಿ ಉಪ್ಪಿನ, ಕರಿದ ಪದಾರ್ಥಗಳನ್ನು ಮಕ್ಕಳು ತಿನ್ನುತ್ತಿರುವುದು ಮಕ್ಕಳಲ್ಲಿ ಸ್ಥೂಲದೇಹ ಹೆಚ್ಚುತ್ತಿರುವುದಕ್ಕೆ ಕಾರಣವಾಗಿದೆಯೆನ್ನಲು ಬೇಕಾದಷ್ಟು ಅಧ್ಯಯನಗಳಿವೆ.

ಸರಕಾರಿ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳಿಗಂತೂ ಹೆಚ್ಚಿನ ರಾಜ್ಯಗಳಲ್ಲಿ ಒಂದಲ್ಲಾ ಒಂದು ಕಾರಣಗಳಿಂದ ಮೊಟ್ಟೆಯನ್ನು ನಿರಾಕರಿಸಲಾಗುತ್ತಿದೆ. ಮಕ್ಕಳಿಗೆ ಹೆಚ್ಚು ಪೋಷಕಾಂಶಗಳನ್ನು ಒದಗಿಸಬೇಕೆಂಬ ಬೇಡಿಕೆಯು ಸರಕಾರದ ಕಿವಿಯ ಮೇಲೆ ಬೀಳುತ್ತಿಲ್ಲ. ಶಾಲೆಗಳಲ್ಲಿ ಮೈದಾ ಹಿಟ್ಟಿನ ಬಿಸ್ಕಿಟ್ ಗಳನ್ನು ಕೊಡಲಾಗುತ್ತಿದೆ. ಕಂಪೆನಿ ಉತ್ಪನ್ನಗಳಾದ ಅಂತಹವನ್ನು ಹೆಚ್ಚು ಸೇವಿಸಿದರೆ ಆಗುವ ಅಪಾಯಗಳ ಬಗ್ಗೆ ಎಚ್ಚರಿಕೆಯ ಲೇಬಲ್ ಗಳನ್ನು ಹಚ್ಚಬೇಕೆಂಬ ಬೇಡಿಕೆಗೂ ಸರಕಾರ ಎಂದೂ ಕಿವಿಯಾಗಿಲ್ಲ. ಇಂತಿರುವಾಗ ಸರಕಾರವು ಒಮ್ಮೆಲೇ ಬಿಸಿಯೂಟದಲ್ಲಿ ಬಳಸುವ ಎಣ್ಣೆಯನ್ನೇ ಕಡಿಮೆ ಮಾಡಹೊರಟಿರುವುದು ಮಕ್ಕಳ ಹಿತಾಸಕ್ತಿಯಲ್ಲಂತೂ ಇಲ್ಲ. ಈ ಸಲಹೆಯನ್ನು ಸರಕಾರವು ಪರಿಗಣಿಸಲೇಕೂಡದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಾರದಾ ಗೋಪಾಲ

contributor

Similar News