ಕೇಂದ್ರ ಸ್ಥಾನದಲ್ಲಿ ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ

Update: 2025-03-25 10:27 IST
ಕೇಂದ್ರ ಸ್ಥಾನದಲ್ಲಿ ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ
  • whatsapp icon

ಗುಡಿಬಂಡೆ : ತಾಲೂಕು ಕೇಂದ್ರ ಸ್ಥಾನದಲ್ಲಿ ಇರುವಂತಹ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಹಳೆಯದಾಗಿದ್ದು, ಸ್ಥಳಾವಕಾಶದ ಕೊರತೆಯನ್ನು ಹೊಂದಿದ್ದರೂ ಸುಸಜ್ಜಿತವಾದ ಸಾರ್ವಜನಿಕ ಗ್ರಂಥಾಲಯದ ಕಟ್ಟಡವನ್ನು ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ಹಾಗೂ ಕ್ಷೇತ್ರದ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.

ತಾಲೂಕು ಕೇಂದ್ರ ಸ್ಥಾನದಲ್ಲಿ ಇರುವಂತಹ ಸಾರ್ವಜನಿಕ ಕೇಂದ್ರ ಗ್ರಂಥಾಲಯ ತಾಲೂಕು ಶಾಖೆಯಲ್ಲಿ ಒಂದು ಕೊಠಡಿಯನ್ನು ಮಾತ್ರ ಹೊಂದಿದೆ. ಈ ಕೊಠಡಿಯಲ್ಲಿ ಕೇವಲ ಹತ್ತಕ್ಕೂ ಹೆಚ್ಚು ಜನ ಕುಳಿತು ಓದಲು ಸಾಧ್ಯವಿಲ್ಲದಂತಹ ಸ್ಥಳಾವಕಾಶವಿದೆ. ಸರಕಾರದಿಂದ ಓದುಗರಿಗೆ ಕಳಿಸಿಕೊಡುವಂತಹ ಪುಸ್ತಕಗಳನ್ನು ಇಡಲು ಸಹ ಸ್ಥಳದ ಅಭಾವ ಇದೆ.

ಇರುವಂತಹ ಅಲ್ಪಸ್ವಲ್ಪ ಪುಸ್ತಕಗಳನ್ನು ಮಾತ್ರ ಈ ಕೊಠಡಿಯಲ್ಲಿ ಪ್ರದರ್ಶನ ಮಾಡಲು ಸಾಧ್ಯವಾಗಿದೆ . ಓದುಗರು ನಿರಂತರವಾಗಿ ಕುಳಿತು ಅಧ್ಯಯನ ಮಾಡಲು ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಒಂದೇ ಸಲ ಹತ್ತಕ್ಕಿಂತ ಹೆಚ್ಚು ಜನರು ಪುಸ್ತಕ ಪತ್ರಿಕೆಗಳನ್ನು ಓದಲು ಬಂದರೇ ಸ್ಥಳದ ಅಭಾವವಿದೆ ಎಂಬುದು ಓದುಗರ ಆರೋಪವಾಗಿದೆ.

ಈ ಕಟ್ಟಡವು ತುಂಬಾ ಹಳೇ ಕಾಲದ ಕಟ್ಟಡವು ಆಗಿದ್ದು, ಅಲ್ಲಲ್ಲಿ ಬಿರುಕು ಸಹ ಬಿಟ್ಟಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಇರುವಂತಹ ಗ್ರಂಥಾಲಯ ಕಟ್ಟಡಗಳು ಸ್ವಲ್ಪ ಪ್ರಮಾಣದಲ್ಲಿ ಸುಸಜ್ಜಿ ತವಾಗಿವೆ. ಜೊತೆಗೆ ಡಿಜಿಟಲ್ ಗ್ರಂಥಾಲಯಗಳನ್ನಾಗಿ ಗ್ರಾಪಂ ಮಟ್ಟಗಳಲ್ಲಿ ಮಾಡಿದ್ದಾರೆ .ಆದರೇ ತಾಲೂಕು ಕೇಂದ್ರ ಸ್ಥಾನದಲ್ಲಿ ಇರುವಂತಹ ಏಕೈಕ ಗ್ರಂಥಾಲಯ ಕಟ್ಟಡವು ಸರಿಯಾಗಿ ಇಲ್ಲದೇ ಹೋದರೇ ಹೇಗೆ ಎಂಬುದು ಓದುಗರ ಪ್ರಶ್ನೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಗ್ರಂಥಾಲಯಗಳನ್ನು ನಿರ್ಮಾಣ ಮಾಡುವುದಲ್ಲದೇ, ಹಲವು ಕಡೆ ಹಳೇ ಕಟ್ಟಡಗಳ ದುರಸ್ಥಿ ಮಾಡಿಸಿ ಸಾರ್ವಜನಿಕರಿಗೆ ಓದುಗರಿಗೆ ಅನುಕೂಲಗಳನ್ನು ಮಾಡಿಕೊಡುತ್ತಿದ್ದಾರೆ. ಆದರೇ ಇಲ್ಲಿನ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಈ ಕಟ್ಟಡವನ್ನು ದುರಸ್ತಿ ಮಾಡಿಸುವಲ್ಲಿ ಮುತುವರ್ಜಿಯನ್ನು ತೋರಿಸದೇ ನಿರ್ಲಕ್ಷ್ಯವಹಿಸಿರುವುದನ್ನು ಕಾಣಬಹುದಾಗಿದೆ.

ತಾಲೂಕು ಕೇಂದ್ರ ಸ್ಥಾನದಲ್ಲಿರುವ ಗ್ರಂಥಾಲಯಕ್ಕೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಪತ್ರಿಕೆ, ಪುಸ್ತಕಗಳನ್ನು ಓದಲು ಬರುವಂತವರು ಇದ್ದಾರೆ. ಆದರೇ ಸ್ಥಳದ ಅಭಾವದಿಂದ ಆ ಗ್ರಂಥಾಲಯದ ಕಡೆ ಮುಖಮಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಕ್ಷೇತ್ರದ ಜನಪ್ರತಿನಿಧಿಗಳು, ಗ್ರಂಥಾಲಯದ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ, ಗ್ರಂಥಾಲಯದ ಆವರಣದಲ್ಲಿ ಇರುವಂತಹ ಖಾಲಿ ಜಾಗದಲ್ಲಿ ಸುಸಜ್ಜಿತ ವಾದ ಗ್ರಂಥಾಲಯ ಕಟ್ಟಡವನ್ನು ನಿರ್ಮಾಣ ಮಾಡಿ ತಾಲೂಕಿನ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲ ಕಲ್ಪಿಸಬೇಕೆಂಬುದು ಸಾರ್ವಜನಿಕರ ಮನವಿಯಾಗಿದೆ.

ಗುಡಿಬಂಡೆ ತಾಲೂಕು ಕೇಂದ್ರ ಸ್ಥಾನದಲಿರುವ ಗ್ರಂಥಾಲಯದ ಕಟ್ಟಡ ಹಳೆಯದಾಗಿದ್ದು, ಗ್ರಂಥಾಲಯದ ಬಳಿ ಇರುವಂತಹ ಖಾಲಿ ಜಾಗದ ಇ-ಸ್ವತ್ತು ತಹಶೀಲ್ದಾರ್ ಅವರ ಹೆಸರಲ್ಲಿ ಇದೆ. ಅದನ್ನು ನಮ್ಮ ಕೇಂದ್ರ ಗ್ರಂಥಾಲಯ ಹೆಸರಿಗೆ ಮಾಡಿಸಿ ಎಂದು ಪತ್ರವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಬರೆಯಲಾಗಿದೆ. ನಮ್ಮ ಇಲಾಖೆಗೆ ಈ ಬಗ್ಗೆ ಮಾಹಿತಿ ಬಂದ ಕೂಡಲೇ ಸರಕಾರದ ಗಮನಕ್ಕೆ ತಂದು ಉತ್ತಮವಾದ ಗ್ರಂಥಾಲಯ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು.

-ಶಂಕರಪ್ಪ.ಎಂ, ಮುಖ್ಯ ಗ್ರಂಥಾಲಯ ಅಧಿಕಾರಿ, ಗುಡಿಬಂಡೆ

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ಲಕ್ಕೇನಹಳ್ಳಿ ಈಶ್ವರಪ್ಪ

contributor

Similar News