ಔರಂಗಜೇಬ್, ಚಾವಾ ಸಿನೆಮಾ ಮತ್ತು ಕೋಮುವಾದಿ ರಾಜಕಾರಣ
ಬಲಪಂಥೀಯ ಇತಿಹಾಸಕಾರರು ಇತಿಹಾಸ ರಚನೆಗೆ ಬಳಸುವ ಮೂಲಗಳು ಸರಿಯಿರಬಹುದು. ಆದರೆ, ಅವರು ಅದಕ್ಕೆ ಹಾಕುವ ಚೌಕಟ್ಟು ಮಾತ್ರ ಕೋಮುವಾದದ ನಂಜಿನಿಂದ ಕೂಡಿದೆ. ಅವರು ರಾಜನನ್ನು ಆತನ ಧರ್ಮದಿಂದ ನೋಡುತ್ತಾರೆಯೇ ವಿನಾ ಆತ ಅಧಿಕಾರ ಮತ್ತು ಸಂಪತ್ತಿನ ವಿಸ್ತರಣೆಗಾಗಿ ಯುದ್ಧ ಮಾಡುತ್ತಿರುತ್ತಾನೆ ಎಂದು ನೋಡುವುದಿಲ್ಲ. ಸಾಮ್ರಾಜ್ಯ ಹಾಗೂ ಸಂಪತ್ತನ್ನು ವಿಸ್ತರಿಸಿಕೊಳ್ಳುವ ಅವರ ಗುರಿಯಲ್ಲಿ ಧರ್ಮವು ಕೇವಲ ಆಕಸ್ಮಿಕ ಎಂಬುದನ್ನು ಹೇಳುವುದಿಲ್ಲ.;

ರಾಜಕೀಯ ಹೋರಾಟದಲ್ಲಿ ಕೋಮು ದ್ವೇಷದ ಪ್ರಚಾರಕ್ಕೆ ಇತಿಹಾಸವನ್ನು ಬಳಸಿಕೊಳ್ಳಲಾಗುತ್ತದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅದಕ್ಕೆ ಹೊಸ ಆಯಾಮ ದೊರೆತಿದೆ. ಆರೆಸ್ಸೆಸ್ ಶಾಖೆ, ಸಾಮಾಜಿಕ ಜಾಲತಾಣ, ಬಿಜೆಪಿಯ ಐಟಿ ಸೆಲ್, ಮುಖ್ಯವಾಹಿನಿ ಮಾಧ್ಯಮ, ವಿಶೇಷವಾಗಿ ಹಲವು ಟೀವಿ ವಾಹಿನಿಗಳು ಬಿತ್ತುತ್ತಿರುವ ಪ್ರೊಪಗಾಂಡಗಳ ಜೊತೆಗೆ ಈಗ ಹಲವು ಸಿನೆಮಾಗಳ ಮೂಲಕ ಸಮಾಜದಲ್ಲಿ ಕೋಮು ದ್ವೇಷವನ್ನು ಹರಡಲಾಗುತ್ತಿದೆ.
ಇತ್ತೀಚಿನ ಕಾಲದಲ್ಲಿ ಬಿಡುಗಡೆಯಾಗಿದ್ದ ಕೇರಳ ಸ್ಟೋರಿ, ಕಾಶ್ಮೀರ ಫೈಲ್ಸ್ ಸಿನೆಮಾಗಳು ಸಮಾಜವನ್ನು ದ್ವೇಷದ ಉನ್ಮಾದದಲ್ಲಿ ಸಿಲುಕಿಸಿದ್ದವು. ಈ ವಿಭಾಗದ ಅಷ್ಟೇನು ಯಶಸ್ವಿಯಾಗದ ಸಿನೆಮಾಗಳೆಂದರೆ ಸ್ವಾತಂತ್ರ್ಯ ವೀರ ಸಾವರ್ಕರ್, 72 ಹುರೈನ್, ಸಾಮ್ರಾಟ್ ಪೃಥ್ವಿರಾಜ್. ಈಗ ದೇಶದಲ್ಲಿ, ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಚಾವಾ ಸಿನೆಮಾ ದ್ವೇಷ ಅಭಿಯಾನಕ್ಕೆ ಇನ್ನಷ್ಟು ವೇಗವನ್ನು ತುಂಬಿದೆ. ಇದು ಐತಿಹಾಸಿಕ ಸಿನೆಮಾ ಅಲ್ಲ, ಬದಲಾಗಿ ಶಿವಾಜಿ ಸಾಮಂತ್ ಅವರ ಚಾವಾ ಕಾದಂಬರಿ ಆಧಾರಿತವಾಗಿದೆ. ಸಿನೆಮಾದಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿದ್ದಕ್ಕೆ ಈಗಾಗಲೇ ನಿರ್ದೇಶಕರು ಕ್ಷಮೆಯನ್ನೂ ಕೇಳಿದ್ದಾರೆ.
ಛತ್ರಪತಿ ಸಂಭಾಜಿ ಮಹಾರಾಜರ ಜೀವನದ ಆಯ್ದ ಕೆಲವು ಘಟನೆಗಳನ್ನು ತೆಗೆದುಕೊಂಡು ಈ ಸಿನೆಮಾ ಮಾಡಲಾಗಿದ್ದು, ಔರಂಗಜೇಬ್ ಅವರನ್ನು ಕ್ರೂರಿ ಮತ್ತು ಹಿಂದೂ ವಿರೋಧಿ ಎಂದು ಬಿಂಬಿಸುತ್ತದೆ. 126 ನಿಮಿಷಗಳಷ್ಟು ದೀರ್ಘವಾದ ಈ ಸಿನೆಮಾದಲ್ಲಿ 40 ನಿಮಿಷಗಳು ಸಂಭಾಜಿ ಮಹಾರಾಜರು ಅನುಭವಿಸುವ ಚಿತ್ರಹಿಂಸೆಯನ್ನು ತೋರಿಸಲಾಗಿದೆ. ಈ ಭಾಗದಲ್ಲಿ ನಿರ್ದೇಶಕ ಫಿಕ್ಸನ್ ಬರಹಗಾರನ ಹೆಚ್ಚಿನ ಸ್ವಾತಂತ್ರ್ಯ ಪಡೆದಿರಬಹುದು. ಒಟ್ಟಾರೆ ಈ ಸಿನೆಮಾ ಮಧ್ಯಕಾಲದ ಚರಿತ್ರೆಯನ್ನು ಕುಲೀನ ಹಿಂದೂ ರಾಜರು ಹಾಗೂ ದುಷ್ಟ ಮುಸ್ಲಿಮ್ ರಾಜರ ನಡುವಿನ ಕದನ ಎಂಬಂತೆ ಬಿಂಬಿಸುತ್ತದೆ.
ಸಂಭಾಜಿ ಮಹಾರಾಜರು ಶಿವಾಜಿ ಮಹಾರಾಜರ ಹಿರಿಯ ಪುತ್ರ. ಶಿವಾಜಿ ಮಹಾರಾಜರು ತಮ್ಮ ರಾಜ್ಯವನ್ನು ಸ್ಥಾಪಿಸಿದಾಗ ಅವರ ಜೊತೆಗೆ ಮುಸ್ಲಿಮ್ ಅಧಿಕಾರಿಗಳಿದ್ದರು. ಮೌಲಾನಾ ಹೈದರ್ ಅಲಿ ಅವರ ಕಾರ್ಯದರ್ಶಿಯಾಗಿದ್ದರು. ಸಿದ್ದಿ ಸಂಬಾಲ್, ಇಬ್ರಾಹೀಂ ಗರ್ದಿ ಮತ್ತು ದೌಲತ್ ಖಾನ್ ಸೇರಿದಂತೆ 12 ಮಂದಿ ಮುಸ್ಲಿಮ್ ಸೇನಾಧಿಕಾರಿಗಳು ಶಿವಾಜಿ ಸೈನ್ಯದಲ್ಲಿದ್ದರು.
ಶಿವಾಜಿ ಸೈನ್ಯದ ಮೇಲೆ ದಾಳಿ ಮಾಡುವಾಗ ಔರಂಗಜೇಬ್ ಸೈನ್ಯವನ್ನು ರಾಜಾ ಜೈಸಿಂಗ್ ಮುನ್ನಡೆಸಿದ್ದನು. ಶಿವಾಜಿಯವರನ್ನು ಬಂಧಿಸಿ, ಔರಂಗಜೇಬ್‌ನ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಆದರೆ, ಅಲ್ಲಿಂದ ತಪ್ಪಿಸಿಕೊಳ್ಳಲು ಶಿವಾಜಿಗೆ ಸಹಾಯ ಮಾಡಿದ್ದು ಮುಸ್ಲಿಮ್ ರಾಜಕುಮಾರ ಮದಾರಿ ಮೆಹ್ತರ್.
ಸಂಭಾಜಿ ಮಹಾರಾಜರ ಮದ್ಯ ವ್ಯಸನ ಹಾಗೂ ಸ್ತ್ರೀ ಲಂಪಟತನವನ್ನು ಹಿಂದುತ್ವದ ಮೂಲಪುರುಷರಾದ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಟೀಕಿಸಿದ್ದಾರೆ. ಈ ಕಾರಣಕ್ಕೆ ಶಿವಾಜಿ ಆತನನ್ನು ಪನ್ಹಾಲ ಕೋಟೆಯಲ್ಲಿ ಬಂಧಿಸಿದ್ದರು. ನಂತರ ಶಿವಾಜಿಯ ವಿರುದ್ಧದ ಯುದ್ಧದಲ್ಲಿ ಸಂಭಾಜಿ ಔರಂಗಜೇಬ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರು. ಬಿಜಾಪುರದ ಆದಿಲ್ ಶಾಹಿಗಳ ವಿರುದ್ಧದ ಯುದ್ಧದಲ್ಲೂ ಸಂಭಾಜಿ ಔರಂಗಜೇಬ್‌ಗೆ ಸಹಾಯ ಮಾಡಿದ್ದರು.
ಶಿವಾಜಿಯ ನಂತರ ಪಟ್ಟಕ್ಕಾಗಿ ನಡೆದ ಹೋರಾಟದಲ್ಲಿ ಮಲ ಸಹೋದರ(ಶಿವಾಜಿಯ ಇನ್ನೋರ್ವ ಪತ್ನಿಯ ಮಗ) ಸಂಭಾಜಿಗೆ ವಿಷ ಹಾಕಿ ಕೊಲ್ಲುವ ಪ್ರಯತ್ನ ಮಾಡಿದ್ದನು. ಈ ಷಡ್ಯಂತ್ರ ಬಯಲಾಗುತ್ತಿದ್ದಂತೆ ಸಂಭಾಜಿ ಹಲವು ಹಿಂದೂ ಅಧಿಕಾರಿಗಳನ್ನು ಕೊಂದಿದ್ದರು.
ಚಾವಾ ಸಿನೆಮಾದಲ್ಲಿ ಔರಂಗಜೇಬ್‌ನನ್ನು ಕ್ರೂರಿಯಾಗಿ ಚಿತ್ರಿಸಲಾಗಿದೆ. ಆ ಕಾಲದಲ್ಲಿ ಎಲ್ಲಾ ರಾಜರುಗಳು ಶತ್ರುಗಳೊಂದಿಗೆ ಕ್ರೂರವಾಗಿಯೇ ವರ್ತಿಸುತ್ತಿದ್ದುದು ಇತಿಹಾಸದಲ್ಲಿ ದಾಖಲಾಗಿದೆ. ಚೋಳ ಸಾಮ್ರಾಜ್ಯವು ಚಾಲುಕ್ಯರ ಸೇನೆಯನ್ನು ಸೋಲಿಸಿದಾಗ ಅವರು ಚಾಲುಕ್ಯರ ಸೇನಾಧಿಪತಿ ಸಮುದ್ರರಾಜನ ತಲೆ ಕಡಿದಿದ್ದರು. ಆತನ ಸುಂದರಿ ಮಗಳ ಮೂಗು ಕತ್ತರಿಸಿದ್ದರು ಎಂದು ಇತಿಹಾಸಕಾರ್ತಿ ರುಚಿಕಾ ಶರ್ಮಾ ಹೇಳುತ್ತಾರೆ. ಅಶೋಕನ ಕಳಿಂಗಾ ಯುದ್ಧವಂತೂ ಅತಿಕ್ರೂರವಾದುದೆಂದು ಇತಿಹಾಸದಲ್ಲಿ ದಾಖಲಾಗಿದೆ. ಅಂದಿನ ರಾಜರು ಶತ್ರುಗಳ ವಿರುದ್ಧ ತೋರಿಸುತ್ತಿದ್ದ ಕ್ರೌರ್ಯಗಳನ್ನು ನಮ್ಮ ಇಂದಿನ ದೃಷ್ಟಿಕೋನದ ಮೂಲಕ ಅಳೆಯಲಾಗದು. ಹಾಗಾದರೆ, ನ್ಯಾಯಾಲಯದಲ್ಲೂ ವಿಚಾರಣೆಯಾಗದ ಪ್ರಕರಣಗಳಲ್ಲಿ ಮುಸ್ಲಿಮರ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ಧ್ವಂಸಗೊಳಿಸುವುದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ?
ಶಿವಾಜಿಯ ಸೈನ್ಯ ಸೂರತ್ ಮೇಲೆ ದಾಳಿ ಮಾಡಿದಾಗ ತೋರಿದ ಕ್ರೌರ್ಯಗಳನ್ನು ಬಾಲ್ ಸಾಮಂತ್ ತಮ್ಮ ಪುಸ್ತಕ ದಲ್ಲಿ ವಿವರಿಸುತ್ತಾರೆ. ಸೈನ್ಯಕ್ಕೂ ಅತಿಕ್ರಮಣಗಳಿಗೂ ಹತ್ತಿರದ ನಂಟಿದೆ. ಶತ್ರುಗಳ ವಿರುದ್ಧದ ಕ್ರೌರ್ಯ ಖಂಡನೀಯ ನಿಜ. ಆದರೆ, ಆ ಕಾಲದಲ್ಲಿ ಅದು ಸಾಮಾನ್ಯವಾಗಿತ್ತು.
ಔರಂಗಜೇಬ್ ಹಿಂದೂ ವಿರೋಧಿಯಾಗಿದ್ದರೆ? ವಾಸ್ತವದಲ್ಲಿ ಔರಂಗಜೇಬ್ ಅಕ್ಬರ್ ಅಥವಾ ದಾರಾಶಿಕೋರಂತಿರಲಿಲ್ಲ. ಅವರು ಯಥಾಸ್ಥಿತಿವಾದಿಯಾಗಿದ್ದರು. ಒಂದು ಕಡೆ ಅವರು ಹಿಂದೂಗಳನ್ನು ಹಾಗೂ ಕೆಲವು ಮುಸ್ಲಿಮ್ ವಿಭಾಗಗಳನ್ನು ಒಪ್ಪಿಕೊಂಡಿರಲಿಲ್ಲ. ಇನ್ನೊಂದು ಕಡೆಯಲ್ಲಿ ಅವರ ಆಡಳಿತದಲ್ಲಿ ಹಲವು ಹಿಂದೂ ಅಧಿಕಾರಿಗಳಿದ್ದರು. ಮೈತ್ರಿಯಲ್ಲಿ ಔರಂಗಜೇಬ್ ಅಗ್ರಗಣ್ಯರಾಗಿದ್ದರು. ಪ್ರೊಫೆಸರ್ ಅಥರ್ ಅಲಿ ಅವರು ಹೇಳಿರುವಂತೆ, ಔರಂಗಜೇಬ್ ಅತೀ ಹೆಚ್ಚು(ಶೇ.33) ಹಿಂದೂ ಅಧಿಕಾರಿಗಳನ್ನು ಹೊಂದಿದ್ದರು.
ಔರಂಗಜೇಬ್ ಕೆಲವು ದೇವಸ್ಥಾನಗಳನ್ನು ಧ್ವಂಸಗೊಳಿಸಿರುವುದು ನಿಜ. ಆದರೆ, ಕಾಮಾಕ್ಯ ದೇವಿ(ಗುವಾಹಟಿ), ಮಹಾ ಕಾಳೇಶ್ವರ್(ಉಜ್ಜೈನ್), ಚಿತ್ರಕೂಟ್ ಬಾಲಾಜಿ, ವೃಂದಾವನದ ಶ್ರೀಕೃಷ್ಣ ಮೊದಲಾದ ಹಲವು ದೇವಸ್ಥಾನಗಳಿಗೆ ಸಹಾಯ ಮಾಡಿದ್ದಾರೆ. ಶಿವಾಜಿಯವರೂ ಕೂಡ ಹಝ್ರತ್ ಬಾಬಾ ಬಹುತ್ ಥೋರವಾಲೆ ದರ್ಗಾಕ್ಕೆ ಸಂಭಾವನೆ ನೀಡಿದ್ದಾರೆ. ಶತ್ರು ರಾಜನನ್ನು ಅವಮಾನಿಸಲು ಆತನ ಅಧೀನದಲ್ಲಿರುವ ದೇವಸ್ಥಾನಗಳ ಮೇಲೆ ದಾಳಿ ಮಾಡುವುದು ಅಂದಿನ ಕಾಲದ ರಾಜರ ವಾಡಿಕೆಯಾಗಿತ್ತು ಎಂದು ರಿಚರ್ಡ್ ಈಟನ್ ದಾಖಲಿಸಿದ್ದಾರೆ(Frontline December- January 1996).
ಆದರೆ, ಇಂದು ಕೋಮುವಾದಿ ಇತಿಹಾಸಕಾರರು ಮುಸ್ಲಿಮ್ ರಾಜರು ದೇವಸ್ಥಾನಗಳ ಮೇಲೆ ದಾಳಿ ಮಾಡಿರುವುದನ್ನು ವೈಭವೀಕರಿಸಿ, ಅವರು ದೇವಸ್ಥಾನಗಳಿಗೆ ಸಹಾಯ ಮಾಡಿರುವುದನ್ನು ಮರೆ ಮಾಚುವ ಮೂಲಕ ವಿಕೃತ ಆನಂದ ಅನುಭವಿಸುತ್ತಿದ್ದಾರೆ.
ಔರಂಗಜೇಬ್ ಅಧಿಕಾರ ಹಿಡಿದ 22 ವರ್ಷಗಳ ನಂತರ ಜಿಝಿಯಾ ತೆರಿಗೆ ಹೇರಿದ್ದರು. ಆದರೆ, ಇದರಿಂದ ಬ್ರಾಹ್ಮಣರು, ಅಂಗವಿಕಲರು ಹಾಗೂ ಮಹಿಳೆಯರಿಗೆ ವಿನಾಯಿತಿ ನೀಡಿದ್ದರು. ಇದು ಆಧುನಿಕ ಕಾಲದ ಆಸ್ತಿ ತೆರಿಗೆಯಂತಹ ಒಂದು ತೆರಿಗೆಯಾಗಿತ್ತೇ ವಿನಹ ಮತಾಂತರ ಮಾಡುವ ಷಡ್ಯಂತ್ರವಾಗಿರಲಿಲ್ಲ. ಜಿಝಿಯಾ ಕೇವಲ ಶೇ. 1.25 ಆಗಿದ್ದರೆ, ಮುಸ್ಲಿಮರು ಪಾವತಿಸಬೇಕಿದ್ದ ಝಕಾತ್ ಶೇ. 2.5 ಆಗಿತ್ತು.
ಸಿಖ್ ಗುರುಗಳ ಮೇಲಿನ ದೌರ್ಜನ್ಯವನ್ನು ಖಂಡಿತ ಒಪ್ಪಲಾಗದು. ಆದರೆ, ಅದಕ್ಕೆ ಸಿಖ್ ಗುರುಗಳ ಹಾಗೂ ಮೊಗಲ್ ದೊರೆಗಳ ನಡುವಿನ ಅಧಿಕಾರ ಕದನ ಕಾರಣವಾಗಿತ್ತೇ ವಿನಹ ಧಾರ್ಮಿಕ ಕಾರಣಗಳಿರಲಿಲ್ಲ.
ರಾಜರುಗಳ ಕಾಲಘಟ್ಟ, ಸಂದರ್ಭವನ್ನು ವಿವರಿಸದೆ, ದ್ವೇಷ ಹುಟ್ಟಿಸಲು ಸಾಧ್ಯವಾಗುವ ಬಿಡಿ ಬಿಡಿ ಘಟನೆಗಳನ್ನು ಹೆಕ್ಕಿ ತೆಗೆಯುವುದರಲ್ಲಿ ಕೋಮುವಾದಿ ಇತಿಹಾಸಕಾರರು ನಿರತರಾಗಿದ್ದಾರೆ. ಹಿಂದಿನ ರಾಜರುಗಳು ಶತ್ರುಗಳ ಜೊತೆಗಿನ ಯುದ್ಧದಲ್ಲಿ ಸೈನಿಕರಲ್ಲಿ ಆವೇಶ ತುಂಬಿಸಲು ಧರ್ಮವನ್ನು ಬಳಸುತ್ತಿದ್ದರು. ಹಿಂದೂ ರಾಜರು ಧರ್ಮ ಯುದ್ಧವನ್ನು ಬಳಸಿದರೆ, ಮುಸ್ಲಿಮ್ ರಾಜರು ಜಿಹಾದ್ ಅನ್ನು ಬಳಸಿಕೊಂಡರು.
ಬಲಪಂಥೀಯ ಇತಿಹಾಸಕಾರರು ಇತಿಹಾಸ ರಚನೆಗೆ ಬಳಸುವ ಮೂಲಗಳು ಸರಿಯಿರಬಹುದು. ಆದರೆ, ಅವರು ಅದಕ್ಕೆ ಹಾಕುವ ಚೌಕಟ್ಟು ಮಾತ್ರ ಕೋಮುವಾದದ ನಂಜಿನಿಂದ ಕೂಡಿದೆ. ಅವರು ರಾಜನನ್ನು ಆತನ ಧರ್ಮದಿಂದ ನೋಡುತ್ತಾರೆಯೇ ವಿನಾ ಆತ ಅಧಿಕಾರ ಮತ್ತು ಸಂಪತ್ತಿನ ವಿಸ್ತರಣೆಗಾಗಿ ಯುದ್ಧ ಮಾಡುತ್ತಿರುತ್ತಾನೆ ಎಂದು ನೋಡುವುದಿಲ್ಲ.
ಸಾಮ್ರಾಜ್ಯ ಹಾಗೂ ಸಂಪತ್ತನ್ನು ವಿಸ್ತರಿಸಿಕೊಳ್ಳುವ ಅವರ ಗುರಿಯಲ್ಲಿ ಧರ್ಮವು ಕೇವಲ ಆಕಸ್ಮಿಕ ಎಂಬುದನ್ನು ಹೇಳುವುದಿಲ್ಲ. ಕೋಮುವಾದಿ ಇತಿಹಾಸಕಾರರ ಈ ರೀತಿಯ ವಿವರಣೆಗಳು ಭಾರತದ ಸಂವಿಧಾನಕ್ಕೆ ಅತೀ ದೊಡ್ಡ ಅಪಾಯವಾಗಿರುವ ಕೋಮುವಾದಿ ರಾಜಕಾರಣಕ್ಕೆ ಶಕ್ತಿ ತುಂಬುತ್ತವೆ.