ಕರ್ನಾಟಕದಲ್ಲೂ ‘ಮೋದಿ ಈದ್ ಕಿಟ್’ ಹಂಚಲು ಬಿಜೆಪಿ ಸಜ್ಜು?

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು, ಮಾ.26: ಈ ಬಾರಿಯ ಪವಿತ್ರ ರಮಝಾನ್ ಹಬ್ಬ ಹಿನ್ನೆಲೆ ರಾಷ್ಟ್ರೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರ ಮಟ್ಟದಲ್ಲಿ ಹಮ್ಮಿಕೊಂಡಿರುವ ‘ಸೌಗಾತ್ ಎ ಮೋದಿ’ ಅಭಿಯಾನ ಕರ್ನಾಟಕದಲ್ಲೂ ಜಾರಿಗೆ ಬಿಜೆಪಿ ತಯಾರಿ ನಡೆಸುತ್ತಿದ್ದು, ಹಬ್ಬದ ಮೊದಲೇ ಆಯ್ದ ಬಡ ಮುಸ್ಲಿಮ್ ಕುಟುಂಬಗಳಿಗೆ ವಿಶೇಷ ಈದ್ ಕಿಟ್‌ಗಳು ಹಂಚಿಕೆ ಆಗಲಿವೆ ಎಂದು ಗೊತ್ತಾಗಿದೆ.
32 ಸಾವಿರಕ್ಕೂ ಅಧಿಕ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸಕ್ರಿಯ ಕಾರ್ಯಕರ್ತರು ಈ ‘ಸೌಗಾತ್ ಎ ಮೋದಿ’ ಅಭಿಯಾನ ರಾಷ್ಟ್ರಮಟ್ಟದಲ್ಲಿ ಕೈಗೊಂಡಿದ್ದು, ಬರೋಬ್ಬರಿ 32 ಲಕ್ಷ ಬಡ ಕುಟುಂಬಗಳಿಗೆ ವಿಶೇಷ ಈದ್ ಕಿಟ್‌ಗಳು ಹಂಚಿಕೆ ಮಾಡುವ ಗುರಿ ಹೊಂದಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಎ.1ರೊಳಗೆ ಆಯ್ಕೆಗೊಂಡ ಮುಸ್ಲಿಮ್ ಕುಟುಂಬಗಳಿಗೆ ಈದ್ ಕಿಟ್‌ಗಳು ಕೈ ಸೇರಲಿವೆ ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ ಕರ್ನಾಟಕ ವ್ಯಾಪ್ತಿಯಲ್ಲೂ ಬಡ ಮುಸ್ಲಿಮರಿಗೆ ವಿಶೇಷ ಈದ್ ಕಿಟ್‌ಗಳನ್ನು ತಲುಪಿಸುವ ಗುರಿ ಇಟ್ಟುಕೊಂಡಿದ್ದು, ಈ ಕುರಿತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಅನಿಲ್ ಥಾಮಸ್ ಅವರ ನೇತೃತ್ವದಲ್ಲಿ ಮಾ.27ರಂದು ರಾಷ್ಟ್ರೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಮುಖರೊಂದಿಗೆ ಝೂಮ್‌ನಲ್ಲಿ ಸಭೆ ನಡೆಸಲಿದ್ದಾರೆ. ಆನಂತರ, ‘ಸೌಗಾತ್ ಎ ಮೋದಿ’ ಅಭಿಯಾನ ಜಾರಿ ಸಂಬಂಧ ರೂಪರೇಷೆ ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕರೊಬ್ಬರು ಪ್ರತಿಕ್ರಿಯಿಸಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸೌಗಾತ್ ಎ ಮೋದಿ ಅಭಿಯಾನದ ಮೂಲಕ ಈಗಾಗಲೇ ಈದ್‌ಗೆ ಮುಂಚಿತವಾಗಿ ದೇಶಾದ್ಯಂತ 32 ಲಕ್ಷ ಹಿಂದುಳಿದ ಮುಸ್ಲಿಮರಿಗೆ ವಿಶೇಷ ಕಿಟ್‌ಗಳನ್ನು ವಿತರಿಸುವ ಗುರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಬಡ ಮುಸ್ಲಿಮ್ ಕುಟುಂಬಗಳು ಯಾವುದೇ ತೊಂದರೆಯಿಲ್ಲದೆ ಈದ್ ಹಬ್ಬವನ್ನು ಆಚರಿಸಲು ಈ ಅಭಿಯಾನವನ್ನು ಯಶಸ್ವಿಗೊಳಿಸಲಾಗುವುದು ಎಂದರು.
ಇದರಲ್ಲಿ ಯಾವುದೇ ರಾಜಕೀಯ, ವಿವಾದ ಹುಟ್ಟುಹಾಕುವ ಉದ್ದೇಶವಿಲ್ಲ. ಪವಿತ್ರ ರಮಝಾನ್, ಈದ್, ಗುಡ್ ಫ್ರೈಡೆ, ಈಸ್ಟರ್, ನೌರುಝ್ ಸಂದರ್ಭಗಳಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸೌಗಾತ್-ಎ-ಮೋದಿ ಅಭಿಯಾನದ ಮೂಲಕ ಅಗತ್ಯವಿರುವವರಿಗೆ ಕಿಟ್ ವಿತರಿಸಲಿದೆ. ಮುಂದಿನ ದಿನಗಳಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಆಯಾ ಜಿಲ್ಲಾ ಮಟ್ಟದಲ್ಲೂ ಈದ್ ಮಿಲನ್ ಆಚರಣೆಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ಕಿಟ್‌ನಲ್ಲಿ ಏನಿದೆ?
ಸೌಗಾತ್-ಎ-ಮೋದಿ ಅಭಿಯಾನದ ಅಡಿಯಲ್ಲಿ ವಿತರಿಸಲಾದ ಕಿಟ್‌ಗಳು ಆಹಾರ ಪದಾರ್ಥಗಳ ಜೊತೆಗೆ ಖರ್ಜೂರ, ಒಣ ಹಣ್ಣುಗಳು, ಸಕ್ಕರೆ ಮತ್ತು ಬಟ್ಟೆಗಳನ್ನು ಒಳಗೊಂಡಿರಲಿದೆ. ಮಹಿಳೆಯರ ಕಿಟ್‌ನಲ್ಲಿ ಸೂಟ್ ಬಟ್ಟೆ ಹಾಗೂ ಪುರುಷರ ಕಿಟ್‌ನಲ್ಲಿ ಕುರ್ತಾ-ಪೈಜಾಮ ಇರಲಿದೆ ಎಂದು ಗೊತ್ತಾಗಿದೆ.
ಸಮಾರಂಭದ ಮೂಲಕ ಚಾಲನೆ ಸಾಧ್ಯತೆ?
‘ಸೌಗಾತ್ ಎ ಮೋದಿ’ ಅಭಿಯಾನ ಕರ್ನಾಟಕದಲ್ಲಿ ಜಾರಿ ಮಾಡುವ ಸಂಬಂಧ ಬೆಂಗಳೂರಿನಲ್ಲಿಯೇ ಬೃಹತ್ ಸಮಾರಂಭವೊಂದನ್ನು ಏರ್ಪಾಡು ಮಾಡಲು ಕೆಲ ಬಿಜೆಪಿ ನಾಯಕರು ಸಲಹೆಗಳನ್ನು ನೀಡಿದ್ದು, ದೊಡ್ಡ ಸಂಖ್ಯೆಯಲ್ಲಿಯೇ ಬಡ ಮುಸ್ಲಿಮರಿಗೆ ಈದ್ ಕಿಟ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಪಕ್ಷದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.