ಒಳ ಮೀಸಲಾತಿ ಜಾರಿ ಪರಿಶಿಷ್ಟರ ಭಾವನಾತ್ಮಕ ಸಹೋದರತ್ವವನ್ನು ನುಂಗುವುದಿಲ್ಲ

ಮೀಸಲಾತಿಯನ್ನು ಸಾಮಾಜಿಕ ಬದ್ಧತೆಯಡಿ ಕಾನೂನಿನ ಅಂಶವೆಂದು ಸಾರಿದ ನಾಲ್ವಡಿ ಕೃಷ್ಣರಾಜ ಒಡೆಯರ ಪುಣ್ಯ ಭೂಮಿಯಲ್ಲಿ ಸಮಾನ ಸಾಮಾಜಿಕ ನೆಮ್ಮದಿಗಾಗಿರುವ ಸಮಾಂತರ ಹಂಚಿಕೆಯ ಸಿದ್ಧಾಂತಗಳಿಗೆ ಬೆದರು ಗೊಂಬೆಗಳನ್ನಿಡುತ್ತಿರುವುದು ಯಕ್ಷಪ್ರಶ್ನೆಯಾಗಿದೆ. ಕೆಲವು ಬಲಗೈ ರಾಜಕಾರಣಿಗಳಿಗೆ ಮತ್ತು ಅಧಿಕಾರಿ-ನೌಕರರಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಮಾದಿಗರು ಹೆಚ್ಚಿದ್ದಾರೆಂದು ದೃಢೀಕರಿಸಲು ಅವರ ಮನಗಳು ಸಮ್ಮತಿಸುತ್ತಿಲ್ಲ. ಇನ್ನೂ ಸ್ಪಶ್ಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿರುದ್ಧದ ಬಹಿರಂಗ ರೋದನೆ ಯಾರಿಂದಲೂ ತಡೆಯಲಾಗುತ್ತಿಲ್ಲ.;

Update: 2025-03-26 11:54 IST
ಒಳ ಮೀಸಲಾತಿ ಜಾರಿ ಪರಿಶಿಷ್ಟರ ಭಾವನಾತ್ಮಕ ಸಹೋದರತ್ವವನ್ನು ನುಂಗುವುದಿಲ್ಲ
  • whatsapp icon

ಮೀಸಲಾತಿ ಒಳಗೆ ‘ಒಳ ಮೀಸಲಾತಿ’ ಬೇಕೆನ್ನುವ ಬೇಡಿಕೆಗೆ 30 ವರ್ಷಗಳ ಸುದೀರ್ಘವಾದ ಸಾಂವಿಧಾನಿಕ ಹೋರಾಟದ ಇತಿಹಾಸವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ವಿಭಿನ್ನ ಅಂತರ ಸಾಮಾಜಿಕ ಸ್ವರೂಪದವರು. ಆದರೆ, ‘ಕಾನೂನಿನ ವ್ಯಾಖ್ಯಾನದಡಿ ಸಾಮಾಜಿಕವಾಗಿ ಒಂದೇ ಕಕ್ಷೆಯಲ್ಲಿ ಸ್ವಜಾತಿಗಳಾಗಿ ನಿಲ್ಲುವವರು; ದೈನಂದಿನ ಸಾಮಾಜಿಕ ವ್ಯವಹಾರಗಳ ಮೂಲಕ ಉಸಿರಾಡುವಾಗ ವಿಜಾತಿಗಳಾಗಿ ನಿಲ್ಲುತ್ತಾರೆ’. ಭಾರತವೇ ಜಾತಿಗಳ ರಾಷ್ಟ್ರವಾಗಿರುವಾಗ, ಪ್ರತಿಯೊಂದು ಜಾತಿ ಮತ್ತು ಬುಡಕಟ್ಟಿನೊಳಗೆ ಉಪ ಜಾತಿ/ವರ್ಗಗಳು, ಮರಿ ಜಾತಿ/ವರ್ಗಗಳು, ಅತಿ ಸೂಕ್ಷ್ಮ ಜಾತಿ/ವರ್ಗಗಳು ವಿವಿಧ ಕಾರಣಗಳಿಗಾಗಿ ಹುಟ್ಟಿವೆ ಮತ್ತು ಹಾಗೆಯೇ ಬದುಕುತ್ತಾ ಬಂದಿವೆ. ಒಳ ಮೀಸಲಾತಿ ಜಾರಿ ಮೂಲಕ ಪರಿಶಿಷ್ಟ ಜಾತಿಗಳು ಹೊಂದಿರುವ ಅಪ್ಪುಗೆಯ ಸಾಮಾಜಿಕ ಸೆಳೆತ ಛಿದ್ರವಾಗುತ್ತವೆ ಎಂಬ ಹುಸಿ ಕೂಗು ಪರಿಶಿಷ್ಟರೊಳಗೆ ಕೀರಲು ಧ್ವನಿಯಂತೆ ಒಳಗೊಳಗೆ ಧ್ವನಿಸುತ್ತಿದೆ. ಈ ಗೊಂದಲಗಳಿಗೆ ಡಾ. ಬಿ.ಆರ್. ಅಂಬೇಡ್ಕರ್‌ರ ಅಭಿಮತಗಳಡಿ ಉತ್ತರ ಅನ್ವೇಷಣೆ ಈ ಲೇಖನದಲ್ಲಿ ನಡೆದಿದೆ.

ಡಾ. ಅಂಬೇಡ್ಕರ್ ರಾಜಕೀಯ ಹೋರಾಟದ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಜನತಾ ಪತ್ರಿಕೆಯ 1941 ಜೂನ್ 14ರ ಸಂಚಿಕೆಯಲ್ಲಿ ನಿಜಾಮರ ಆಡಳಿತದ ಮರಾಠವಾಡ ಮಾಂಗ್(ಮಾದಿಗ) ಮೊದಲ ವಿದ್ಯಾವಂತ ಎಂಬ ಶಿರೋನಾಮೆಯಡಿ ಅಂಬೇಡ್ಕರ್‌ರಿಗೆ ಶ್ರೀ ಡಿ.ಎನ್. ಕಾಂಬಳೆ ನಾಲ್ಕಾರು ಪ್ರಶ್ನೆಗಳನ್ನು ಮುಂದಿಟ್ಟು ಮಾಂಗರು ಸಹ ಮಹಾರ್ ಸಮುದಾಯದಂತೆ ಸಾಮಾಜಿಕವಾಗಿ ಶೋಷಿತರೆಂದು ಪ್ರತಿಪಾದಿಸುತ್ತಾ; ‘(1) ಮಹಾರರು ಮಾಂಗರನ್ನು ಸರಿ ಸಮಾನರಾಗಿ ಪರಿಗಣಿಸಬೇಕು, (2) ಮಾಂಗ್ ಯುವ ಜನತೆ ಮುಂದೆ ಬರಲು ಅವಕಾಶ ಒದಗಿಸಬೇಕು (3) ಮಾಂಗರ ವತನದಾರಿ ಹಕ್ಕುಬಾಧ್ಯತೆಗಳನ್ನು ಕಿತ್ತುಕೊಳ್ಳಬಾರದು (4) ಮಹಾರರು ಮಾಂಗರ ಸಂಪತ್ತಿಗೆ ತಡೆ ಒಡ್ಡಬಾರದು (5) ಮಹಾರರಿಗೆ ನೀಡುವ ಪ್ರಾಮುಖ್ಯತೆಯನ್ನು ಮಾಂಗರಿಗೂ ದಯಪಾಲಿಸಬೇಕು’ ಎಂದು ವಿನಂತಿಸಿದ್ದರು. ಆಗ, ಅಂಬೇಡ್ಕರ್ ಕಾಂಬಳೆಯ ಇಂಗಿತ ಅರಿತು ಮಾಡಿದ ಮೊದಲ ಕೆಲಸ ಜಲಗಾಂವ್‌ನಲ್ಲಿ ಮಾಂಗರ ಶಿಕ್ಷಣಕ್ಕಾಗಿ ವಿದ್ಯಾಸಂಸ್ಥೆ ಮತ್ತು ಪುಣೆಯ ಮಾಂಗ್ವಾಡಿಯಲ್ಲಿ ವಸತಿ ಶಾಲೆ ಆರಂಭಿಸಲು ಪ್ರಾಂತೀಯ ಸರಕಾರ ಜೊತೆ ದುಡಿದು ಯಶಸ್ವಿಯಾದರು.

ಡಾ.ಅಂಬೇಡ್ಕರ್ ಅವರ ಅನಾರೋಗ್ಯ ಹೆಚ್ಚಾದಾಗ ಪತ್ನಿ ರಮಾಬಾಯಿ ಜತೆ ಧಾರವಾಡದಲ್ಲಿ ತಂಗಿದ್ದಾಗ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯಿರುವ ಮಚೇಗಾರ ಚರ್ಮಕಾರ ಸಹಕಾರ ಸಂಘ ಪುನರ್‌ಸಂಘಟಿಸಲು ಸಹಾಯಹಸ್ತ ಚಾಚಿದ್ದರು (ಈಗ ಸರಿಯಾದ ನಿರ್ವಹಣೆಯಿಲ್ಲದೆ ಆಸ್ತಿಪಾಸ್ತಿ ಕಬಳಿಕೆಯಾಗಿ ಮೂಲೆ ಗುಂಪಾಗಿದೆ). 1939ರ ಚಮ್ಮಾರ ಸಮ್ಮೇಳನದಲ್ಲಿ ಡಾ.ಅಂಬೇಡ್ಕರ್‌ಮಹಾರ್ ನಾಯಕರೆಂದು ಪ್ರತಿಪಾದಿಸಲಾಗಿತ್ತು. ಈ ವಿಚಾರದ ಮೇಲೆ ಅಂಬೇಡ್ಕರ್ ಬಾಂಬೆ ಕ್ರಾನಿಕಲ್ ಪತ್ರಿಕೆಯಲ್ಲಿ ತಮ್ಮ ಮನದಾಳದ ಮಾತುಗಳನ್ನಾಡಿ, ‘‘ನನಗೇನು ಮಹಾರರ ಬಗ್ಗೆ ಯಾವುದೇ ವಿಶೇಷ ಅಕ್ಕರೆಯಿಲ್ಲ. ಜಾತಿಯ ಅವಕೃಪೆಯಿಂದ ಮುಕ್ತಿ ಹೊಂದಲು ಕೈಲಾದಷ್ಟು ಸಹಾಯ ಮಾಡುತ್ತೇನೆ. ಆದರೆ ಅವರೆಲ್ಲರೂ ಮನುಷ್ಯರಾಗಿ ವಿಕಸನ ಹೊಂದುವುದನ್ನು ಬಯಸುತ್ತೇನೆ’’ ಎಂದು ನುಡಿದ ಕಾರಣಕ್ಕೆ ಅಂಬೇಡ್ಕರ್ ವಿಶ್ವಮಾನ್ಯರಾದರು. ‘‘ಮಹಾರ್ ಆಗಿ ಹುಟ್ಟುವ ಆಯ್ಕೆ ನನ್ನ ಕೈಯಲ್ಲಿರಲಿಲ್ಲ. ಆದರೆ ವಿಕಸನರಾದ ನಾವು ಅದರಾಚೆ ನಿಲ್ಲಬೇಕು’’ ಎಂದು ಅಭಿವ್ಯಕ್ತಿಸಿದ್ದವರ ಅನುಯಾಯಿಗಳಾದ ‘ನಾವು’ ಒಳ ಮೀಸಲಾತಿ ಹೋರಾಟಕ್ಕೆ ಕೈ ಮರವಾಗಬೇಕಿದೆ.

101 ಉಪಜಾತಿಗಳ ಆಂತರಿಕ ಸಾಮಾಜಿಕತೆಗಳನ್ನು ಅವಲೋಕನ ಮಾಡಿದಾಗ ಅವರೊಳಗೆ ಸ್ಮಶಾನ ಕೆಲಸದವರು, ಸತ್ತ ಪ್ರಾಣಿಗಳನ್ನು ಸಾಗಿಸುವವರು, ಮಲ ಹೊರುವವರು, ದೇವದಾಸಿಯರು, ಹಂದಿ ಸಾಕಣೆದಾರರು, ಸಾಗರದ ಹವಳಗಳಿಂದ ಸುಣ್ಣ ಸುಡುವವರು, ಉಪ್ಪು ತಯಾರಕರು, ಅರಣ್ಯ ಕಿರು ಉತ್ಪಾದನೆ ಸಂಗ್ರಹಕರು, ಸರೀಸೃಪಗಳ ಔಷಧಿ ಮಾರುವವರು, ಸೇಂದಿ ಸಾಗಿಸುವವರು, ಚಪ್ಪಲಿ ತಯಾರಕರು ಮತ್ತು ರಿಪೇರಿ ಮಾಡುವವರು, ಚರ್ಮ ಹದಮಾಡುವವರು, ಪ್ರಾಣಿಗಳ ಮೂಳೆ ಸಂಗ್ರಹಕರು, ಬೀದಿಗುಡಿಸುವವರು, ಹಗ್ಗ ಹೊಸೆಯುವವರು, ಬುಟ್ಟಿ ನೇಯುವವರು, ದನಕರುಗಳ ಪಾಲಕರು, ಪೊರಕೆ ಮತ್ತು ಚಾಪೆ ಕಟ್ಟುವವರು, ಮರಗೆಲಸದವರು, ಬಿಟ್ಟಿ ಚಾಕರಿ ಮಾಡುವವರು, ಬ್ಯಾಗಾರಿಗಳು, ಜೀತಗಾರಿಕೆ ಮಾಡುವವರು, ಕೋರಾ ಬಟ್ಟೆ ನೇಯುವವರು, ಶುಭ ಮತ್ತು ಅಶುಭಗಳಿಗೆ ವಾದ್ಯ, ತಮಟೆ ನುಡಿಸುವವರು ಹಾಗೂ ಪಂಥಾನುಯಾಯಿ ಧಾರ್ಮಿಕ ಭಿಕ್ಷಾಟನೆಕಾರರು ಇತ್ಯಾದಿ ಸಾಂಪ್ರದಾಯಿಕ ವೃತ್ತಿದಾರರಿದ್ದಾರೆ. ಇವರ ಹೊರತಾಗಿ ಅತ್ಯಧಿಕ ಸಂಖ್ಯೆಯಲ್ಲಿ ಕೃಷಿ ಕಾರ್ಮಿಕರು ಮತ್ತು ಉಳುಮೆಗಾರರು ಹಾಗೂ ಅಸಂಘಟಿತ ವಲಯದವರಾಗಿದ್ದಾರೆ. ರಾಜ್ಯದ ಕೃಷಿ ಹಿಡುವಳಿಯಲ್ಲಿ ಅತ್ಯಲ್ಪ ಹೊಂದಿದವರು. ಸಾರ್ವಜನಿಕ ವಲಯದ ನೌಕರರು ಮತ್ತು ಇತರ ಖಾಸಗಿ ವಲಯದಲ್ಲಿ ದುಡಿಯುವವರು ಸಹ ಸೇರಿದ್ದಾರೆ. ಇವರೆಲ್ಲರ ಉಪ ಸಮುದಾಯಗಳ ಅಥವಾ ವೈಯಕ್ತಿಕ ಆಂತರಿಕ ಬಂಡವಾಳ ಮೌಲ್ಯವರ್ಧನೆಯನ್ನು (Community Internal capital value addition) ಪ್ರತಿಯೊಂದು ಜಾತಿ ಮತ್ತು ಉಪ ಜಾತಿಗಳು ಸಾರ್ವಜನಿಕ ಕ್ಷೇತ್ರದಿಂದ ಪಡೆದಿರುವ ಎಲ್ಲಾ ಬಗೆಯ ಸೌಲಭ್ಯಗಳ ಗರಿಷ್ಠತೆ ಮತ್ತು ಉದ್ಯೋಗಗಳ ಗರಿಷ್ಠತೆ ಮುಖೇನ ಅಳೆಯಬಹುದು ಅಥವಾ ಅವರು ವಾಸಿಸುವ ಪ್ರದೇಶಗಳೇ ಈ ನಗ್ನ ಸತ್ಯಗಳನ್ನು ಬಿಚ್ಚಿಡುತ್ತವೆ. ಹಾಗಾದರೆ, ಒಳ ಮೀಸಲಾತಿ ಈ ಸಮಸ್ಯೆಗಳಿಗೆ ಸಿದ್ಧೌಷಧವೇ ಎಂದಾಗ ಹೌದೆನ್ನಬಹುದು. ಹೇಗೆಂದರೆ; ಇದು ಜಾರಿಯಾದ ಮೇಲೆ ಎಲ್ಲಾ ಬಗೆಯ ಸೌಲಭ್ಯಗಳು ನೇರವಾಗಿ ಉಪಜಾತಿಗಳ ಮಡಿಲಿಗೆ ಬೀಳುವುದರಿಂದ ಪ್ರಭಾವಿಗಳ ಮೇಲಿಂದ ಮೇಲೆ ಪ್ರಲೋಭನೆಗಳ ಮೂಲಕ ಸೂರೆಗೊಳ್ಳುವ ಸಂಸ್ಕೃತಿ ನಿಧಾನವಾಗಿ ನಿಲ್ಲುತ್ತದೆ. ಆಗ ಸಮಾಜೋಆರ್ಥಿಕ ಧಾರುಣತೆಗಳಿಂದ ಹೊರಬರಲು ಆಂಶಿಕ ಊರುಗೋಲಾಗುತ್ತದೆ.

ಇಂತಹ ಜನ ಸಮುದಾಯಗಳನ್ನು ಸಮಾನ ಶ್ರೇಣಿಯಲ್ಲಿ ಸಬಲೀಕರಣ ಮಾಡಲು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಒಳ ಮೀಸಲಾತಿಯ ತೀರ್ಪು ಸಹ 1950 ಮತ್ತು 1956 ಸಾಂವಿಧಾನಿಕ ಆದೇಶಗಳ ಆಶಯಗಳಡಿ ಕಾಲಂ 341 (1) (2)ಕ್ಕೆ ಯಾವುದೇ ತಿದ್ದುಪಡಿ ಅನವಶ್ಯವೆಂದಿದೆ. ಪ್ರಸಕ್ತ ಅನುಸೂಚಿಯಲ್ಲಿರುವ ಜಾತಿ ಮತ್ತು ಉಪ ಜಾತಿಗಳನ್ನು ಅವುಗಳ ಆಂತರಿಕ ಹಿಂದುಳಿದಿರುವಿಕೆ ಮಾನದಂಡದಡಿ ಗುಂಪುಗಳಾಗಿ ಸೃಜಿಸಬಹುದೆಂದು ಘೋಷಿಸಿದೆ. ಒಂದುವೇಳೆ, ಇದೇ ತೀರ್ಪು ರಾಜ್ಯಗಳ ಸಮ್ಮತಿಯೊಂದಿಗೆ ಕೇಂದ್ರ ಸಂಸತ್ತು 341 (1) (2) ಕಲಂಗಳಿಗೆ ಅಗತ್ಯ ತಿದ್ದುಪಡಿ ಅವಶ್ಯವಾಗಿದೆ ಎಂದಿದ್ದರೆ, ರಾಜಕೀಯ ಮೇಲಾಟ, ಕೀಳಾಟ, ದೈನೇಸಿಯ ಬೇಡಾಟಗಳಿಗೆ ವೇದಿಕೆ ಸಿದ್ಧವಾಗುತ್ತಿದ್ದವು. ಇಂದು ಅವುಗಳಿಗೆ ಯಾವುದೇ ಆಸ್ಪದವಿಲ್ಲದಂತಾಗಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ರಾಜಕೀಯ ಬದ್ಧತೆ ಮೂಲಕ ಸಾಂವಿಧಾನಿಕ ಅಂಕಿತಗಳ ಮೂಲಕ ಶಾಸನ ಸಭೆಯ ಅಂಗೀಕಾರ ಪಡೆದಿವೆ. ಹಾಗಾದರೆ ಅಲ್ಲಿನ ಅಂಬೇಡ್ಕರ್ ವಾದಿಗಳು ಪ್ರತಿರೋಧಿಸಿಲ್ಲವೆ? ಅಲ್ಲಿಂದಲೇ ಅಲ್ಲವೇ ಇ.ವಿ. ಚನ್ನಯ್ಯ ದಾವೆಯಡಿ ಒಳ ಮೀಸಲಾತಿ ಕೊಡಲು ಆಗದೆಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತೀರ್ಪು ಬಂದಿದ್ದು. ಇವೆರಡೂ ರಾಜ್ಯಗಳಿಗೆ ಒಳಮೀಸಲಾತಿ ಜಾರಿ ಮಾಡದೆ ನುಣಚಿಕೊಳ್ಳುವ ಸಣ್ಣ ಅವಕಾಶವೂ ಇರಲಿಲ್ಲ. ಚಂದ್ರಬಾಬು ನಾಯ್ಡು ಮತ್ತು ರೇವಂತ ರೆಡ್ಡಿ ತಮ್ಮ ಸುತ್ತಲೂ 30 ವರ್ಷಗಳಿಂದ ಬೀಸುತ್ತಿದ್ದ ಸೌಲಭ್ಯ ವಂಚಿತರ ಸುಂಟರಗಾಳಿ ನಂದಿಸಲು ಸಾಂವಿಧಾನಿಕ ಹಾದಿ ತುಳಿದಿದ್ದಾರೆ.

ಆದರೆ ಕರ್ನಾಟಕದಲ್ಲಿ ಮಾತ್ರ ದೀರ್ಘ ಸ್ವರ ಮತ್ತು ಸಣ್ಣ ಸ್ವರಗಳ ನಡುವಿನ ಹೊಂದಾಣಿಕೆಗಾಗಿ ಮತ್ತಷ್ಟು ಬೀದಿ ಹೋರಾಟ ಆರಂಭವಾಗಿದೆ. ಅಂದು ಅಂಬೇಡ್ಕರ್‌ರಿಗೆ ಒಳಮೀಸಲಾತಿಯ ಅವಶ್ಯಕತೆ ಅಥವಾ ಅನಿವಾರ್ಯತೆಗಳ ಒಂದು ಸಣ್ಣ ಸುಳಿವು ಸಿಕ್ಕಿದ್ದರೂ ಒಂದು ವೈಜ್ಞಾನಿಕ ಒಪ್ಪಿತ ಸೂತ್ರ ನೀಡುತ್ತಿದ್ದರು. ಏಕೆಂದರೆ, ಅವರಿಗೆ ಸಾಮಾಜಿಕವಾಗಿ ಶೋಷಿತರಾದವರ ಉದ್ಧಾರವೇ ಉಸಿರಾಗಿತ್ತು. ಅವರ ನಡೆ ನುಡಿಗಳಲ್ಲಿ ಕಪಟತೆ ಇರದಿದ್ದ ಕಾರಣಕ್ಕೆ ವಿಶ್ವ ಮಾನವರಾಗಿದ್ದಾರೆ. ಇಲ್ಲೊಂದು ಪೂರಕ ಪ್ರಸಂಗ ಪ್ರಸ್ತಾಪಿಸಬೇಕಿದೆ: ಅವರ ಭರತ ಭೂಷಣ ಪ್ರೆಸ್ ಮಾಲಕತ್ವವನ್ನು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ಪರಭಾರೆ ಮಾಡಿದ್ದರು. ಅವರ ಮಗ ಯಶವಂತ್ ಇದು ತನ್ನ ಜೀವನೋಪಾಯಕ್ಕೆ ಬೇಕೆಂದು ಹಠ ಹಿಡಿದಾಗ, ಮಗನ ಮೇಲೆ ಕ್ರಿಮಿನಲ್ ದಾವೆ ಹೂಡುವ ಎಚ್ಚರಿಕೆಯ ಪತ್ರ ಬರೆದರು. ಈ ಕಾರಣಗಳಿಗಾಗಿಯೇ ಅಂಬೇಡ್ಕರ್ ನಮ್ಮ ನಡುವೆ ಅಭೌತಿಕವಾಗಿ ಉಸಿರಾಡುತ್ತಿದ್ದಾರೆ. ಹಾದಿಬೀದಿಯಲ್ಲಿ ಅಂಬೇಡ್ಕರ್‌ರನ್ನು ಗಂಟಲು ಹರಿಯುವ ತನಕ ನಾವೆಲ್ಲರೂ ಹೊಗಳುತ್ತಿದ್ದೇವೆ. ಹಾಗಾದರೆ, ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಗೆ ಅಪಶಕುನವನ್ನು ಯಾರು ನುಡಿಯುತ್ತಿದ್ದಾರೆ? ಇಂತಹವರು ಅಂತರಂಗ ಮತ್ತು ಬಹಿರಂಗಗಳಲ್ಲಿ ಅಂಬೇಡ್ಕರರನ್ನು ವಿಭಿನ್ನ ನೆಲೆಯಲ್ಲಿ, ವಿವಿಧ ಕಾರಣಗಳಿಗಾಗಿ ಸ್ಮರಿಸುತ್ತಿರುವವರೆಂದು ಅರ್ಥೈಸಿಕೊಳ್ಳಬಹುದು. ಸಾಮಾಜಿಕ ಜಡತ್ವನ್ನು ಹೋಗಲಾಡಿಸಲಿಕ್ಕೆ ಅಂಬೇಡ್ಕರ್ ಎಂಬ ಮನ್ವಂತರದ ತಿಳುವಳಿಕೆ ಇಂದಿನ ತುರ್ತು ಆಗಬೇಕಿದೆ.

ಬಿ.ಆರ್. ಭಾಸ್ಕರ ಪ್ರಸಾದ್ ನೇತೃತ್ವದ ಪಾದಯಾತ್ರೆ ಸಂಘ ಪರಿವಾರದ ಕೃಪಾಪೋಷಿತ ಮಂಡಳಿ ಎಂಬ ಆರೋಪಗಳೂ ಕೇಳಿಬಂದಿವೆ. ವಾಸ್ತವಿಕವಾಗಿ ಈ ಆಲೋಚನೆ ರೋಸಿದ ಮನಸ್ಸುಗಳ ಅಂತಿಮ ಹೋರಾಟದ ಹೆಜ್ಜೆಗಳಾಗಿದ್ದವು. ವಾದಿರಾಜ್ ಸಂಘದ ತಂತ್ರಗಾರಿಕೆಯಂತೆ ಹೇಗಾದರೂ ಮಾಡಿ ಮಾಧುಸ್ವಾಮಿ ಸೂತ್ರ ಪ್ರಚುರಗೊಳಿಸಿ ಅನುಷ್ಠಾನಕ್ಕೆ ನಾಂದಿಯಿಡಲು ಹೆಣೆದ ಪ್ರಚಾರ ಸರಕಾಗಿದೆ. ಅಂದು ನೆರೆದಿದ್ದವರ ಪೈಕಿ ಬಹುಸಂಖ್ಯಾತರು ಕಾಂಗ್ರೆಸ್ ಬೆಂಬಲಿಸಿದವರೂ ಇದ್ದರು. ಮಾಧುಸ್ವಾಮಿ ವರದಿ ಬಗ್ಗೆ ಬಹುತೇಕ ಪ್ರಜ್ಞಾವಂತರು 2023 ವಿಧಾನ ಸಭಾ ಚುನಾವಣೆಯಲ್ಲಿ ತೀರ್ಪು ನೀಡಿದ್ದಾರೆ. ಆದರೆ ಕಾಂಗ್ರೆಸ್‌ನ ತಳವಿಲ್ಲದ ಕೊಳಗದ ಮನಃಸ್ಥಿತಿಯ ದಲಿತ ನಾಯಕರು ಸಮಸ್ಯೆಗಳ ಮಹಾಪೂರವನ್ನು ಜಾರಿಯ ಹಾದಿಗೆ ಹಾಕುತ್ತಿದ್ದಾರೆ. ಮುಂದೆ ಅದು ಅವರ ತಲೆಹೊರೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಒಳ ಮೀಸಲಾತಿ ಜಾರಿಯಿಂದ ದಲಿತರ ಆಂತರಿಕ ಐಕ್ಯತೆಗಳು ಯಾವ ಕಾರಣಕ್ಕೂ ಮುರಿಯುವುದಿಲ್ಲ ಅಥವಾ ಹಾಳಾಗುವುದಿಲ್ಲ. ಒಂದುವೇಳೆ, ಅವರ ಸಾಮಾಜಿಕ ಅಸ್ತಿತ್ವಕ್ಕೆ ಸಾಂಸ್ಥಿಕ ಮೂಲಗಳಿಂದ ಏನಾದರೂ ಕಂಟಕ ಎದುರಾದರೆ ಮೊದಲು ಧ್ವನಿಗೂಡಿಸುವವರು ಹೊಲೆಯ-ಮಾದಿಗರೇ ಆಗಿರುತ್ತಾರೆ. ಇದು ಸರ್ವವಿಧಿತ ಸತ್ಯವಾಗಿದೆ. ಒಳ ಮೀಸಲಾತಿ ಇಲ್ಲದಿದ್ದಾಗ ಹೇಗೆ ಭಾವನಾತ್ಮಕ ಬಂಧುತ್ವ ಮತ್ತು ಸ್ನೇಹ ಪಸರಿಸಿತ್ತೋ ಹಾಗೆಯೇ ಅದು ಜಾರಿ ಆದಮೇಲೆಯೂ ಮುಂದುವರಿಯುತ್ತದೆ. ಇಂತಹ ವಿಚಾರಗಳನ್ನು ಮುಂದುಮಾಡಿ ಒಳ ಮೀಸಲಾತಿ ಜಾರಿಗೆ ಮುಳ್ಳಾಗುವವರು ನೈಜ ಅಂಬೇಡ್ಕರ್‌ವಾದಿಗಳಾಗಲು ಸಾಧ್ಯವಿಲ್ಲ. ಅಂಬೇಡ್ಕರ್ ವಾದ ಎಂದರೆ ‘ಪ್ರಜಾಪ್ರಭುತ್ವದ ಸಾಂವಿಧಾನಿಕ ವ್ಯವಸ್ಥೆಯನ್ನು ಉಳಿಸಿ ಬೆಳೆಸಲು ಬೆಂಬಲಿಸುತ್ತಾ; ಅದರೊಳಗಿರುವ ಜನಕೋಟಿಗಳನ್ನು ಸಮಾನವಾಗಿ ಸಾಮಾಜಿಕ ಸುರಕ್ಷತೆಗಳಡಿ ಕಾಪಾಡುವುದೆಂದರ್ಥ’. ಸಂವಿಧಾನದ ಕೆಲವೇ ಕಲಂಗಳಲ್ಲಿ ಪರಿಶಿಷ್ಟರ ಮತ್ತು ಹಿಂದುಳಿದವರ ಬಗ್ಗೆ ಪ್ರಸ್ತಾಪಿಸಿದ್ದರೂ ಇನ್ನುಳಿದಂತೆ ಎಲ್ಲರಿಗೂ ಸಿಗುವ ಸಮಾನ ಅವಕಾಶಗಳನ್ನು ಇತರ ಕಲಂಗಳಡಿ ಇವರೂ ಸಹ ಪಡೆಯುತ್ತಾರೆ. ಇದು ಭಾರತೀಯ ಸಂವಿಧಾನದ ಸಮಷ್ಠಿ ಋಜುತ್ವವಾಗಿವೆ.

ಒಳ ಮೀಸಲಾತಿ ಹೋರಾಟ ಆರಂಭದ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರ ಮಾದಿಗ ನಾಯಕರೆಲ್ಲರೂ ದುಡಿದಿದ್ದಾರೆ. ರಮೇಶ್ ಜಿಗಜಿಣಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಮಾಜೋಆರ್ಥಿಕ ಸಮೀಕ್ಷೆಯನ್ನು (1995-96) ಮಾಡಲಾಗಿತ್ತು. ಆಗ, ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರೇ ಉದಾರವಾಗಿ ಹಣಕಾಸು ನೀಡಿದ್ದರು. ಆದರೆ, ಅದರ ಸೊಂಟವನ್ನು ರಾಜ್ಯಾದ್ಯಂತ ಅನೇಕ ಸಕ್ಷಮ ಪ್ರಾಧಿಕಾರಿಗಳು ಮುರಿದರು. ಅದರ ವಿಶ್ಲೇಷಣಾ ವರದಿಯಲ್ಲಿಯೂ ಸಹ ಆಧಾರ ರಹಿತವಾಗಿ ‘ಆದಿ ಕರ್ನಾಟಕ’ ಅಂದರೆ ಅರ್ಥಾತ್ ಹೊಲೆಯರು; ಆದಿ ದ್ರಾವಿಡರೆಂದರೆ ಮಾದಿಗರು ಎಂದು ಷರಾ ಬರೆದರು(2003). ಒಟ್ಟಾರೆ, ಡೋಲಾಯಮಾನ ಮನಃಸ್ಥಿತಿಯ ಜನರಿಂದಲೇ ಒಳ ಮೀಸಲಾತಿ ಜಾರಿ ಗೊಂದಲಗೂಡಾಗಿದೆ. ಒಳ ಮೀಸಲಾತಿ ಹೋರಾಟ ಆರಂಭದ ದಿನಗಳಲ್ಲಿ ಮಾದಿಗ ಮತ್ತು ಅದರ ಉಪ ಜಾತಿಗಳ (ಶೇ. 57.2) ಸಂಖ್ಯೆ ಬಲವನ್ನು ಹಾವನೂರು ವರದಿ ಮೂಲಕ ಹೆಚ್ಚಾಗಿ ಪ್ರತಿಪಾದಿಸಲಾಗುತ್ತಿತ್ತು. ಆಗ, ಪರಿಶಿಷ್ಟರ ಮೇಲಿದ್ದ ಪ್ರಾದೇಶಿಕ ನಿಬಂಧನೆ (Area Restriction) ಸಡಿಲವಾಗಿರಲಿಲ್ಲ. ಇದಾದ ಮೇಲೂ ಮಾದಿಗ ಮತ್ತು ಅದರ ಉಪಜಾತಿಗಳ ಸಾಮರ್ಥ್ಯ ಒಂದಷ್ಟು ಇಳಿದಿರಬಹುದಷ್ಟೇ. ತರುವಾಯ ಭೋವಿ, ಲಂಬಾಣಿ, ಕೊರಚ, ಕೊರಮ ಜಾತಿಗಳ ಉಪ ಜಾತಿಗಳೆಲ್ಲವೂ ರಾಜ್ಯಾದ್ಯಂತ ಸಾರ್ವತ್ರಿಕವಾಗಿ ಕ್ರೋಡೀಕರಣವಾದವು. ಆದುದರಿಂದ, ಅವುಗಳ ಸಂಖ್ಯಾಬಲಗಳಲ್ಲಿ ಗೊಂದಲಗಳಿಲ್ಲ. ಇನ್ನುಳಿದ 97 ಜಾತಿಗಳ ಪೈಕಿ ಅತ್ಯಂತ ಕ್ಲಿಷ್ಟವಾಗಿರುವುದು ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಪದಗಳು. ಆದುದರಿಂದಲೇ ತೆಲಂಗಾಣ ರಾಜ್ಯ ಈ ಪದಗಳನ್ನು ಬದಿಗೆ ಸರಿಸಿ ಮೂಲ ಜಾತಿಗಳ ಮೂಲಕ ಸಮೀಕ್ಷೆ ಮಾಡಿದೆ.

ಬಿ.ಆರ್. ಭಾಸ್ಕರ ಪ್ರಸಾದ್ ಪಾದಯಾತ್ರೆ ಸಮಾವೇಶದಲ್ಲಿಯೂ ಅನೇಕರಿಂದ ಮಾಧುಸ್ವಾಮಿ ವರದಿ ಪ್ರಕಾರ ಮಾದಿಗರಿಗೆ ಶೇ.6ರಷ್ಟು ಮೀಸಲಾತಿ ಪ್ರತಿಪಾದನೆಗಳು ತೂರಿಬಂದವು. ಒಂದುವೇಳೆ, ಪ್ರಜ್ಞಾವಂತ ಮಾದಿಗ ಸಮುದಾಯ ಅದನ್ನು ಅಕ್ಷರಶಃ ಒಪ್ಪಿ ಬೆಂಬಲಿಸಿದ್ದರೆ, ಭಾಜಪ ನಾಯಕ ಗೋವಿಂದ ಕಾರಜೋಳ ಗೆಲ್ಲುವುದರ ಜೊತೆಗೆ ಇನ್ನಷ್ಟು ಶಾಸಕರು ಗೆಲ್ಲುತ್ತಿದ್ದರು. ಮಾಧುಸ್ವಾಮಿ ವರದಿಯಲ್ಲಿ ಕೇವಲ ಮೀಸಲಾತಿಯ ಬಣ್ಣವಿದೆ; ಆದರೆ ಸಂವಿಧಾನದ ಗಮಲನ್ನು ಬೆಂಬಲಿಸುವ ಯಾವುದೇ ನೈಜ ದತ್ತಾಂಶವಿಲ್ಲ ಅನ್ನುವುದು ಲೋಕಸತ್ಯವಾಗಿದೆ. ಮೀಸಲಾತಿಯನ್ನು ಸಾಮಾಜಿಕ ಬದ್ಧತೆಯಡಿ ಕಾನೂನಿನ ಅಂಶವೆಂದು ಸಾರಿದ ನಾಲ್ವಡಿ ಕೃಷ್ಣರಾಜ ಒಡೆಯರ ಪುಣ್ಯ ಭೂಮಿಯಲ್ಲಿ ಸಮಾನ ಸಾಮಾಜಿಕ ನೆಮ್ಮದಿಗಾಗಿರುವ ಸಮಾಂತರ ಹಂಚಿಕೆಯ ಸಿದ್ಧಾಂತಗಳಿಗೆ ಬೆದರು ಗೊಂಬೆಗಳನ್ನಿಡುತ್ತಿರುವುದು ಯಕ್ಷಪ್ರಶ್ನೆಯಾಗಿದೆ. ಕೆಲವು ಬಲಗೈ ರಾಜಕಾರಣಿಗಳಿಗೆ ಮತ್ತು ಅಧಿಕಾರಿ-ನೌಕರರಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಮಾದಿಗರು ಹೆಚ್ಚಿದ್ದಾರೆಂದು ದೃಢೀಕರಿಸಲು ಅವರ ಮನಗಳು ಸಮ್ಮತಿಸುತ್ತಿಲ್ಲ. ಇನ್ನೂ ಸ್ಪಶ್ಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿರುದ್ಧದ ಬಹಿರಂಗ ರೋದನೆ ಯಾರಿಂದಲೂ ತಡೆಯಲಾಗುತ್ತಿಲ್ಲ.

ಈ ರಾಜ್ಯದ ಸಮಗ್ರ ಚಮ್ಮಾರರು ಅರ್ಥಾತ್ ಮಾದಿಗರು ಮೂಲತಃ ಅಂಬೇಡ್ಕರ್‌ವಾದಿಗಳು ಆಗಿಲ್ಲದಿದ್ದರೆ ದಸಂಸದ ರಥಕ್ಕೆ ಕೀಲೆಣ್ಣೆ ಆಗುತ್ತಿರಲಿಲ್ಲ. ಬಲಗೈ ಸಮುದಾಯವಿಲ್ಲದ ರಾಜ್ಯಗಳಲ್ಲಿ ಚಮ್ಮಾರ ಮತ್ತು ಅದರ ಸಹವರ್ತಿಗಳೇ ಅಂಬೇಡ್ಕರ್ ವಾದ ಮೆರೆದಿದ್ದಾರೆ ಹಾಗೂ ಇಂದಿಗೂ ಬದುಕಿಸಿದ್ದಾರೆ. ಅಂಬೇಡ್ಕರ್ ಮಾನವೀಯತೆಯ ಅಮೂರ್ತರೂಪವಾಗಿದ್ದ ಕಾರಣಕ್ಕೆ ಡಿ.ಎನ್.ಕಾಂಬಳೆ ಪತ್ರಕ್ಕೆ ಅವರ ಹೃದಯ ಮಿಡಿದಿದೆ. ಅವರ ಆರ್‌ಪಿಐ ಪಕ್ಷದ ಮೊದಲ ಅಧ್ಯಕ್ಷ ಚಮ್ಮಾರನಾಗಿರುತ್ತಿರಲಿಲ್ಲ. ಇಂದು ಸಹ ಎಡ-ಬಲಗಳ ಅಂಬೇಡ್ಕರ್‌ವಾದಿಗಳು ಯಾವುದೇ ಕುಂಟು ನೆಪಗಳಡಿ ಒಳ ಮೀಸಲಾತಿ ಮುಂದೂಡಿದರೆ, ಅದರ ಒಳ ಪರಿತಾಪಗಳು ವಿವಿಧ ಮಗ್ಗಲುಗಳಲ್ಲಿ ಅವರನ್ನೇ ಸುಡುತ್ತದೆ. ಕಾಂಗ್ರೆಸ್ ಸರಕಾರದ ನಾಯಕರು ಒಳ ಮೀಸಲಾತಿ ಮೂಲಕ ಕೈ ಕಾಯಿಸಿಕೊಳ್ಳಲು ಮುಂದಾದರೆ ಭಾಜಪ ಈ ಅವಕಾಶವನ್ನು ಚೆನ್ನಾಗಿ ಸದುಪಯೋಗ ಮಾಡಿಕೊಳ್ಳುತ್ತದೆ.

ಒಳಮೀಸಲಾತಿ ಬೇಡಿಕೆಯ ನಿರಂತರ ಗದ್ದಲಗಳಿಂದ ರಾಜ್ಯದ ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ಬೀಳುತ್ತಿದೆ. ಮತ್ತೊಂದು ಕಡೆ ಪರ ವಿರೋಧಗಳ ಜನರ ಹೋರಾಟ, ಪಾದಯಾತ್ರೆ ಇತ್ಯಾದಿಗಳಿಂದ ಪರಿಶಿಷ್ಟರ ಮಾನವ ಶಕ್ತಿ ವ್ಯರ್ಥವಾಗುತ್ತಿದೆ. ಆದುದರಿಂದ, ಒಳ ಮೀಸಲಾತಿ ಜಾರಿಯಿಂದ ಯಾರೂ ಅನಭಿಷಿಕ್ತರಾಗುವುದಿಲ್ಲ. ಹಾಗೆಯೇ ಬಿಟ್ಟರೂ ಚಿರಂಚೀವಿಗಳಾಗುವುದಿಲ್ಲ. ಒಟ್ಟಾರೆ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವಿಚಾರಣಾ ಆಯೋಗದ ಕಾರ್ಯವೈಖರಿ ಪರಿಪೂರ್ಣವಾಗಿ ಬದಲಾಗಬೇಕು. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ತನ್ನ ಜಡತ್ವದಿಂದ ಹೊರಬರಬೇಕಿದೆ. 101 ಜಾತಿಗಳ ಸಮಾನ ಬಾಳ್ವೆಗಾಗಿ ಜರೂರು ಅನುಷ್ಠಾನ ಆಗಬೇಕಿದೆ. ಇದೊಂದು ಆಂಶಿಕ ಊರುಗೋಲು. ‘ಒಳ ಮೀಸಲಾತಿ’ ಬಂದ ಮೇಲೆಯೂ ಪರಿಶಿಷ್ಟರೆಲ್ಲರಿಗೂ ದೈನಂದಿನ ಬದುಕಿಗೆ ನಿರಂತರವಾಗಿ ರಾಗಿ ಬೀಸುವ ಕಾಯಕ ಮಾತ್ರ ತಪ್ಪುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದಾಸನೂರು ಕೂಸಣ್ಣ

ಸಮುದಾಯ ಚಿಂತಕರು

Similar News