ಗತಕಾಲದ ಐತಿಹ್ಯವನ್ನು ನೆನಪಿಸುವ ‘ಸಂತ ಪೌಲ್ ಚರ್ಚ್’

ಮಂಗಳೂರು: ನಗರದ ನೆಹರೂ ಮೈದಾನದ ಸುತ್ತ ಸಂಚರಿಸುವಾಗ ಬಹುತೇಕರು ಕ್ಲಾಕ್ ಟವರ್‌ನೊಂದಿಗೆ ಚರ್ಚ್ ಒಂದನ್ನು ಗಮನಿಸಿರಬಹುದು. ಬ್ರಿಟಿಷರ ಕಾಲದ ಪಳೆಯುಳಿಕೆಯಾಗಿ ಗತಕಾಲದ ಐತಿಹ್ಯವನ್ನು ನೆನಪಿಸುವ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ ಈ ‘ಸಂತ ಪೌಲ ಚರ್ಚ್’ ಸದ್ಯ ಐತಿಹಾಸಿಕ ಸ್ಮಾರಕವಾಗಿ ಗುರುತಿಸಿಕೊಂಡಿದೆ. ಹಲವು ವಿಶೇಷತೆಗಳಿಂದ ಕೂಡಿದ ಈ ಚರ್ಚ್‌ನ ಜೊತೆ ಇದಕ್ಕೆ ಸೇರಿದ ಸಮಾಧಿ (ಸ್ಮಶಾನ) 225 ವರ್ಷಗಳ ಇತಿಹಾಸವನ್ನು ಹೊಂದಿದೆ ಎನ್ನುವುದು ಬಹುತೇಕರಿಗೆ ತಿಳಿದಿರದು.
ನೆಹರೂ ಮೈದಾನದ ಬಳಿ ಇರುವ ಸಂತ ಪೌಲ ಚರ್ಚ್, ಕರಾವಳಿಯ ಮೊದಲ ಪ್ರೊಟೆಸ್ಟೆಂಟ್ ಚರ್ಚ್ ಆಗಿ ಗುರುತಿಸಿಕೊಂಡಿರುವುದು ಮಾತ್ರವಲ್ಲದೆ, ಮಂಗಳೂರಿನಲ್ಲಿ ಬ್ರಿಟಿಷ್ ಸೈನಿಕರಿಗಾಗಿ ನಿರ್ಮಾಣಗೊಂಡ ಮೊದಲ ಚರ್ಚ್ ಕೂಡಾ ಇದಾಗಿದೆ. 1837ರ ಅಮರ ಸುಳ್ಯ ದಂಗೆಯ ಮೂಲಕ ದ.ಕ. ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ಧದ ಪ್ರತಿರೋಧ ಬಲಪಡೆದಂತೆಯೇ, ಮಂಗಳೂರಿನ ಬ್ರಿಟಿಷ್ ಅಧಿಕಾರಿಗಳು ಮತ್ತು ಸೈನಿಕರಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯದ ಅಗತ್ಯತೆಗಾಗಿ ಇಲ್ಲಿ ಚರ್ಚ್ ನಿರ್ಮಾಣದ ಬೇಡಿಕೆ ವ್ಯಕ್ತವಾಗಿತ್ತು. ಹೀಗಾಗಿ 1841ರಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ರೆ.ಆರ್.ಡಬ್ಲ್ಯೂ.ವಿಟ್ಫೋರ್ಡ್ ಗ್ಯಾರಿಸನ್ ಚಾಪ್ಲಿನ್, ಮದ್ರಾಸ್ ಸರಕಾರಕ್ಕೆ ಚರ್ಚ್ ನಿರ್ಮಿಸುವಂತೆ ಮನವಿಯೊಂದನ್ನು ಸಲ್ಲಿಸುತ್ತಾರೆ. ಆ ಪ್ರಕಾರ ಅಂದಿನ ಮದ್ರಾಸ್ ಸರಕಾರವು ಕೈದಿಗಳನ್ನು ಕಾರ್ಮಿಕರಾಗಿ ಬಳಸಿಕೊಂಡು 1842ರಲ್ಲಿ ಈ ಚರ್ಚ್ ಅನ್ನು ನಿರ್ಮಿಸಿತ್ತು. ಭಾರತ ಸ್ವಾತಂತ್ರ್ಯದ ನಂತರ ಈ ಚರ್ಚ್ ಉತ್ತರ ಕೇರಳ ಡಯಾಸಿಸ್‌ನ ಅಡಿಯಲ್ಲಿ ದಕ್ಷಿಣ ಭಾರತಕ್ಕೆ ಒಳಪಟ್ಟಿತು. ಬಳಿಕ 1971ರಲ್ಲಿ ಇದನ್ನು ಕರ್ನಾಟಕ ದಕ್ಷಿಣ ಧರ್ಮಪ್ರಾಂತಕ್ಕೆ ವರ್ಗಾಯಿಸಲಾಯಿತು.
7,215 ರೂ.ಗಳಲ್ಲಿ ನಿರ್ಮಾಣಗೊಂಡ ಚರ್ಚ್!: 120 ಮಂದಿ ಸಾಮರ್ಥ್ಯದ ಚರ್ಚ್‌ಅನ್ನು 5,128 ರೂ. ಬಜೆಟ್‌ನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಹಣದ ಕೊರತೆಯ ಕಾರಣ ಚರ್ಚ್‌ನ ಸಾಮರ್ಥ್ಯವನ್ನು 100ಕ್ಕೆ ಇಳಿಕೆ ಮಾಡಿ ಅಂದಿನ ಮದ್ರಾಸ್ ಸರಕಾರ ರೆ.ಆಲ್ಫ್ರೆಡ್ ಫೆನ್ನೆಲ್ ನೇತೃತ್ವದಲ್ಲಿ, 7,215ರೂ. ವೆಚ್ಚದಲ್ಲಿ ಚರ್ಚ್ ನಿರ್ಮಾಣ ಮಾಡಿತ್ತು.
ಈ ಚರ್ಚ್‌ನ ಮುಕುಟಪ್ರಾಯ ದಂತಿರುವುದು ಕ್ಲಾಕ್ ಟವರ್. 1897ರಲ್ಲಿ ಸಂತ ಪೌಲ ಚರ್ಚ್‌ನ ದುರಸ್ತಿ ಕಾರ್ಯದ ವೇಳೆ ಚರ್ಚ್ ನ ಟವರ್‌ಗೆ ಮಂಗಳೂರಿನಲ್ಲಿದ್ದ ಬಾಸೆಲ್ ಮಿಷನ್‌ನ ಕಾರ್ಖಾನೆಯಿಂದ ಗಡಿಯಾರವನ್ನು ನಿರ್ಮಿಸಲಾಯಿತು. ಬಳಿಕ ಜರ್ಮನ್ ಮಿಷನರಿಗಳು ಅದನ್ನು ಸ್ಥಾಪಿಸಿದರು. ಅತ್ಯಂತ ವಿಶೇಷವಾದ 128 ವರ್ಷ ಹಳೆಯ ಈ ಗಡಿಯಾರ ಈಗಲೂ ಕಾರ್ಯ ನಿರ್ವಹಿಸುತ್ತಿದೆ. ಈ ಗಡಿಯಾರವನ್ನು ವಾರಕೊಮ್ಮೆ ನಿರ್ವಹಣೆ ಮಾಡಲಾಗುತ್ತದೆ. ಈ ನಿರ್ವಹಣೆ ಕಾರ್ಯ ಮಾಡಲು ಒಬ್ಬರೆ ವ್ಯಕ್ತಿ ಇರುವುದರಿಂದ ಅವರ ನಂತರ ಇದರ ನಿರ್ವಹಣೆ ಹೇಗೆ ಎಂಬುವುದರ ಬಗ್ಗೆ ಚರ್ಚ್‌ನ ಕಾರ್ಯದರ್ಶಿ ಡಾ.ಪ್ರವೀಣ್ ಜಾನ್ ಅವರ ಆತಂಕ.
ಸಂತ ಪೌಲ ಚರ್ಚ್ ಇಂಗ್ಲಿಷ್ ಬಾರೊಕ್ ವಾಸ್ತುಶಿಲ್ಪ ಶೈಲಿಯಲಿದೆ. ಯುರೋಪ್ ಖಂಡದ ಬಾರೊಕ್ ವಾಸ್ತುಶಿಲ್ಪ ಶೈಲಿಯನ್ನ ಇದು ಹೋಲುತ್ತಿದ್ದು, 1666ರಿಂದ 1720ರ ಸುಮಾರಿಗೆ ಜನಪ್ರಿಯವಾಗಿದ್ದ ಈ ವಾಸ್ತುಶಿಲ್ಪ ಶೈಲಿಯು ಭಾರೀ ರಚನೆಗಳು, ವಿಸ್ತಾರವಾದ ಅಲಂಕಾರಗಳನ್ನು ಒಳಗೊಂಡಿದ್ದು ಕಾಂಟಿನೆಂಟಲ್ ಬಾರೊಕ್ ಶೈಲಿಗಿಂತ ಹೆಚ್ಚು ಸೂಕ್ಷ್ಮವಾದ ಕಲಾಪ್ರಕಾರಗಳಿಂದ ಕೂಡಿದೆ.
225 ವರ್ಷಗಳ ಹಳೆಯ ಸಮಾಧಿ: ಚರ್ಚ್‌ಗಿಂತಲೂ ಹಳೆಯದ್ದು, ಚರ್ಚ್‌ಗೊಳಪಟ್ಟ ಸಮಾಧಿ. ಬ್ರಿಟಿಷರ ಕಾಲದಲ್ಲಿ ಯುದ್ಧದಲ್ಲಿ ಮರಣ ಹೊಂದಿದ ಸೈನಿಕರನ್ನು ಹಡಗಿನಲ್ಲಿ ತರಲಾಗುತ್ತಿತ್ತು. ಆ ರೀತಿಯಾಗಿ ತರಲಾಗುತ್ತಿದ್ದ ಕೆಲ ಸೈನಿಕರ ಸಮಾಧಿ ಇಲ್ಲಿದೆ. ಟೆಲಿಕಾಮ್ ಹೌಸ್ ರಸ್ತೆಯ ಅಗ್ನಿ ಶಾಮಕ ಕಚೇರಿ ಬಳಿ ಇರುವ ಈ ಸ್ಮಶಾನದಲ್ಲಿ ಮೋರ್ಗನ್ಸ್ ಕುಟುಂಬ ಸದಸ್ಯರ ಸಮಾಧಿಯಲ್ಲದೆ, ಮಂಗಳೂರಿನ ಐದನೇ ಕಲೆಕ್ಟರ್ ಮೈಕಲ್ ಥಾಮಸ್ ಹ್ಯಾರಿಸ್‌ನವರ ಸಮಾಧಿಯನ್ನೂ ಹೊಂದಿದೆ.
ಇಲ್ಲಿ 1761ರಲ್ಲಿ ಶಾ ಝದ್ದಾರ್‌ನನ್ನು ಸೋಲಿಸಿದ್ದ ಬಂಗಾಳದ ಕಮಾಂಡರ್ ಇನ್‌ಚೀಫ್ ಬ್ರಿಗೇಡಿಯರ್ ಜನರಲ್ ಜಾನ್ ಕಾರ್ನಾಕ್‌ರವರ ಸಮಾಧಿಯು ಇಲ್ಲಿದ್ದು, ಇವರು 1800ರಲ್ಲಿ 84 ವರ್ಷದವರಾಗಿದ್ದಾಗ ಮಂಗಳೂರನಲ್ಲಿ ನಿಧನರಾಗಿದ್ದರು. ಇವರ ಸಮಾಧಿಯು 20 ಅಡಿ ಎತ್ತರವಾದ ಗೋಪುರದಂತಿದ್ದು, ಇಲ್ಲಿನ ಅತ್ಯಂತ ಹಳೆಯ ಸಮಾಧಿ ಎಂದು ಹೇಳಲಾಗಿದೆ. ಇಲ್ಲಿ ಸುಮಾರು 80ಕ್ಕಿಂತಲೂ ಹೆಚ್ಚು ಬ್ರಿಟಿಷ್ ಸೈನಿಕರ ಸಮಾಧಿಗಳಿದ್ದು, ಅದರಲ್ಲಿ ಕೆಲವು ಹಾನಿಗೊಳಗಾಗಿವೆ. ಈ ಸಮಾಧಿಗಳು ಲೈನ್‌ಸ್ಟೋನ್ (ರೇಖಾ ಕಲ್ಲು)ನಿಂದ ಮಾಡಲ್ಪಟ್ಟಿದ್ದು ಹಣಕಾಸಿನ ಕೊರತೆಯಿಂದ ಇವುಗಳನ್ನು ಸಂರಕ್ಷಿಸಿಡುವುದು ಕಷ್ಟಕರವಾಗುತ್ತಿದೆ ಎನ್ನುತ್ತಾರೆ ಚರ್ಚ್‌ನ ಹಿರಿಯ ಸದಸ್ಯ, ಪ್ರಸಕ್ತ ಸಮಾಧಿಯನ್ನು ನೋಡಿಕೊಳ್ಳುತ್ತಿರುವ ಎಡ್ವರ್ಡ್ ಜೋಸೆಫ್.
ಸಂತ ಪೌಲ್ ಚರ್ಚ್‌ನ ಗಡಿಯಾರವೂ ವಿಶೇಷವಾದದ್ದು. ಗಡಿಯಾರವು 2 ಮುಳ್ಳುಗಳನ್ನು ಮಾತ್ರ ಹೊಂದಿದ್ದು, ಅದು ಬ್ಯಾಟರಿ ತಂತ್ರಜ್ಞಾನದಿಂದಲ್ಲ ಬದಲಾಗಿ ತೂಕದ ಸಹಾಯದಿಂದ ನಡೆಯುತ್ತವೆ. ಸುಮಾರು 25 ಕೆ.ಜಿ.ಯ ಸಣ್ಣ ಅಲ್ಯುಮೀನಿಯಂ ತುಂಡನ್ನು ಹಗ್ಗದ ಮುಖಾಂತರ ಕೆಳಗೆ ನೇತುಹಾಕಲಾಗಿದೆ. ಇದು ಕೆಳಗೆ ಇಳಿಯುತ್ತಾ ಹೋದಂತೆ ಸಮಯ ಬದಲಾಗುತ್ತಿರುತ್ತದೆ. ಮೂರು ದಿನಗಳಿಗೊಮ್ಮೆ ಈ ಸಣ್ಣ ಕಬ್ಬಿಣದ ತುಂಡನ್ನು ಮೇಲಕ್ಕೆ ಎಳೆದು ಬಿಡಲಾಗುತ್ತದೆ. ಚರ್ಚ್‌ಗಿಂತಲೂ ಪುರಾತನವಾದ ಸಮಾಧಿ ಮತ್ತು ಇಲ್ಲಿನ ವಿಶೇಷವಾದ ಗಡಿಯಾರದ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಚರ್ಚ್‌ನಲ್ಲಿ ಸಂಗ್ರಹಿಸಲಾಗುವ ಹಣವೊಂದೇ ನಿರ್ವಹಣೆಯ ಆಧಾರ. ಮುಂದೆ ಬ್ರಿಟೀಷರ ಸಮಾಧಿಗಳ ಮಾಹಿತಿಯನ್ನು ಸೋಲ್ಜರ್ ಡೆಟಾಬೆಸ್ ಎಂಬ ಆನ್‌ಲೈನ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಹಾಕುವ ಯೋಜನೆಯು ಇದೆ.
-ಡಾ.ಪ್ರವೀಣ್ ಜಾನ್, ಚರ್ಚ್‌ನ ಕಾರ್ಯದರ್ಶಿ
ಸಂತ ಪೌಲ ಚರ್ಚ್ ಮತ್ತು ಇದರ ಸಮಾಧಿಯು ಐತಿಹಾಸಿಕ ಸ್ಮಾರಕ ವಾಗಿ ಗುರುತಿಸಿದೆ. ಕೊರೋನಾದ ಮೊದಲು ಹೊರದೇಶದಿಂದೆಲ್ಲಾ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಆದರೆ ಈಗ ಪ್ರವಾಸಿಗರ ಸಂಖ್ಯೆ ತುಂಬಾ ಕಡಿಮೆಯಾಗಿದೆೆ.
-ಸ್ಟೀವನ್ ಡಿಸೋಜಾ, ಚರ್ಚ್‌ನ ನಿರ್ವಾಹಕರು (ಕೇರ್‌ಟೇಕರ್)