ಕೆನೆಪದರೀಕರಣ, ಅರ್ಹ ಅಭ್ಯರ್ಥಿಗಳ ಕೊರತೆ ಮತ್ತು ಭರ್ತಿಯಾಗದ ಸ್ಥಾನಗಳು
ಮೀಸಲಾತಿಯನ್ನು ಮತ್ಸರದಿಂದ ಹೀಗಳೆಯುವ ಬದಲು ಮೇಲ್ಜಾತಿ-ವರ್ಗದ ಜನ ಎಲ್ಲರೊಳಗೆ ಮಾನವೀಯ ಸಮಾನತೆ ಕಲ್ಪಿಸಿ ಬದುಕಲು ಸರ್ವರ ಕ್ಷೇಮವನ್ನು ಬಯಸುವುದು ಲೇಸಲ್ಲವೇ; ಇದಕ್ಕೆ ವ್ಯತಿರಿಕ್ತವಾಗಿ ದ್ವೇಷಮಯ ವಾತಾವರಣ ನಿರ್ಮಿಸಿ ಯಾದವೀ ಕಲಹಕ್ಕೆ ಎಡೆ ಮಾಡಿಕೊಡ ಬಾರದಲ್ಲವೇ?.;

ಇಂದ್ರಾ ಸಹಾನಿ ಪ್ರಕರಣದ ನಂತರದಲ್ಲಿ ನ್ಯಾಯಾಂಗದ ಅಭಿಪ್ರಾಯ ಮೇಲುಗೈ ಪಡೆದು, ಯಾವುದೇ ಮೀಸಲಾತಿ ಯೋಜನೆಗೆ ಕೆನೆ ಪದರೀಕರಣ ಅಗತ್ಯವೆಂಬುದು ಸ್ಪಷ್ಟಪಟ್ಟಿದೆ. 16(4), (4-ಬಿ) ಮತ್ತು 15(5)ನೆಯ ವಿಧಿಗಳ ಸಾಂವಿಧಾನಿಕ ನಿಯಂತ್ರಣಗಳನ್ನೂ ಸಹ ಕೆನೆಪದರ ಸೂತ್ರದ ಬೆಳಕಿನಲ್ಲಿ ವ್ಯಾಖ್ಯಾನಿಸಲಾಗಿದೆ. ಎಂ. ನಾಗರಾಜ್ vs ಭಾರತ ಒಕ್ಕೂಟ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಎಸ್. ಎಚ್. ಕಪಾಡಿಯ ಅವರು ಮೀಸಲಾತಿ 16(4) ಮತ್ತು (4-ಬಿ) ವಿಧಿಗಳ ಅಡಿಯಲ್ಲಿ ನಾಲ್ಕು ಷರತ್ತುಗಳನ್ನು ಹೇಗೆ ಪಾಲಿಸುವುದು ಎಂಬುದನ್ನು ಹೇಳಿರುವರು. 1.ಶೇ. 50ರ ಮಿತಿ (ಪರಿಮಾಣಾತ್ಮಕ ಮಿತಿ), 2. ಕೆನೆಪದರದ ಪರಿಕಲ್ಪನೆ (ಗುಣಾತ್ಮಕವಾಗಿ ಹೊರಗಿಡುವಿಕೆ), 3. ಬಲವಾದ ಕಾರಣಗಳು ಅಂದರೆ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಅಸಮರ್ಪಕತೆ, ಮತ್ತು 4. ಒಟ್ಟಾರೆ ಆಡಳಿತಾತ್ಮಕ ದಕ್ಷತೆ. ಶೈಕ್ಷಣಿಕ ಪ್ರವೇಶಗಳಿಗೂ ಸಂಬಂಧಿಸಿದಂತೆ ಈ ಮಾನದಂಡಗಳು ಅನ್ವಯಿಸುವುದರಿಂದ, ವಿಧಿ15(5) ಕೆನೆಪದರೀಕರಣದ ಬಗ್ಗೆ ಏನೂ ಹೇಳುವುದಿಲ್ಲ. ಆದರೆ, ಇಂದ್ರಾ ಸಹಾನಿ ಪ್ರಕರಣದ ನಂತರದ ಅವಧಿಯಲ್ಲಿ ಈ ನಿಬಂಧನೆಯನ್ನು ಸೇರಿಸಲಾಗಿದ್ದರೂ, ಅಶೋಕ್ ಕುಮಾರ್ ಠಾಕೂರ್ vs ಭಾರತ ಒಕ್ಕೂಟ ಪ್ರಕರಣದಲ್ಲೂ ಸಂವಿಧಾನ ಪೀಠವು ಕೆನೆಪದರ ಹೊರಗಿಡುವ ವಿಷಯದಲ್ಲಿ ಒಂದು ವೇಳೆ ವಿಫಲವಾದರೆ, ಇತರ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿ ಅಸಾಂವಿಧಾನಿಕ ಎಂದು ತೀರ್ಪು ನೀಡಿತು.
ಆದರೆ, ಶೇ. 27ರಷ್ಟು ಮೀಸಲು ಕೋಟಾವನ್ನು ಭರ್ತಿ ಮಾಡಲು ಸಾಕಷ್ಟು ಕೆನೆಪದರವಲ್ಲದ ಒಬಿಸಿಗಳು ಲಭ್ಯವಿಲ್ಲದಿದ್ದಾಗ ಏನು ಮಾಡಬೇಕು. ಶೇ.27ರಷ್ಟು ಉದ್ದೇಶಿತ ಕೋಟಾವನ್ನು ಭರ್ತಿ ಮಾಡಲು ಕೆನೆಪದರದವರಿಗೆ ಅವಕಾಶವಿಲ್ಲದಿದ್ದಾಗ ಮತ್ತು ಕನಿಷ್ಠ ಅರ್ಹತಾ ಅಂಕಗಳನ್ನೂ ಹೊಂದಿರುವ ಕೆನೆಪದರವಲ್ಲದ ಒಬಿಸಿಗಳೂ ಲಭ್ಯವಿಲ್ಲದ ಪರಿಸ್ಥಿತಿ ಉದ್ಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕೋಟಾ ಭರ್ತಿಯಾಗದೆ ಉಳಿಯಬಹುದು. ಭರ್ತಿ ಆಗದ ಒಬಿಸಿ ಸ್ಥಾನಗಳನ್ನು ಯಾವುದಾದರೂ ವ್ಯವಸ್ಥೆಯನ್ನು ಹುಡುಕುವ ಮೂಲಕ ಭರ್ತಿ ಮಾಡಬೇಕೇ ಅಥವಾ ಅವುಗಳನ್ನು ಕಾಯ್ದಿರಿಸದ ವರ್ಗದ ಕೋಟಾಕ್ಕೆ ಸೇರಿಸಬೇಕೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಕಾಯ್ದಿರಿಸದ ಕೋಟಾವನ್ನು ಆಯ್ಕೆ ಮಾಡಿಕೊಂಡರೆ ಒಬಿಸಿ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಂತಹ ಭರ್ತಿಯಾಗದ ಸ್ಥಾನಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು ಎಂಬುದು ನ್ಯಾಯಾಂಗದ ದೃಷ್ಟಿಕೋನವಾಗಿದೆ.
ಡಾ. ಸಾಧನಾ ದೇವಿ vs ಯು.ಪಿ. ರಾಜ್ಯ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರ ವಿಭಾಗೀಯ ಪೀಠದ ನ್ಯಾಯಾಧೀಶ ನ್ಯಾ. ಸುಹಾಸ್ ಸಿ. ಸೆನ್ ಹೀಗೆ ಹೇಳಿದ್ದಾರೆ: ‘‘ವಿಶೇಷ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅವರಿಗೆ ಮೀಸಲಾದ ಸ್ಥಾನಗಳನ್ನು ತುಂಬಲು ಕಡಿಮೆ ಅಂಕಗಳನ್ನು ಪಡೆದರೂ ಸಹ ಅವರಿಗೆ ಪ್ರವೇಶ ನೀಡಲು ಸರಕಾರ ಮುಕ್ತವಾಗಿದೆ’’. ನ್ಯಾಯಾಧೀಶರು ಮುಂದುವರಿದು ಹೀಗೆ ಹೇಳುತ್ತಾರೆ- ‘‘ಅವರು ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಲು ವಿಫಲವಾದವರಿಗೆ ಕಾಯ್ದಿರಿಸದ ಸ್ಥಾನಗಳನ್ನು ಕೊಡುವುದಾದರೆ ಅವು ವ್ಯರ್ಥವಾದಂತೆಯೇ ಸರಿ. ಬದಲಿಗೆ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಲಭ್ಯವಾಗುವಂತೆ ಮಾಡಬೇಕು’’ ಎಂದು. ಆ ಪ್ರಕಾರ ನ್ಯಾಯಾಲಯ ಆದೇಶ ಹೊರಡಿಸಿತು. ಈ ದೃಷ್ಟಿಕೋನವು ಅಶೋಕ್ ಕುಮಾರ್ ಠಾಕೂರ್ vs ಭಾರತ ಒಕ್ಕೂಟ ಪ್ರಕರಣದಲ್ಲಿ ಪ್ರತಿಧ್ವನಿಸಿತು. ನ್ಯಾ. ಆರ್.ವಿ.ರವೀಂದ್ರನ್ ‘‘ಯಾವುದೇ ಮಾನದಂಡಗಳನ್ನು ಅಳವಡಿಸಿಕೊಂಡ ನಂತರ ಯಾವುದೇ ಸ್ಥಾನಗಳು ಖಾಲಿಯಾಗಿದ್ದರೆ ಅವುಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು’’ ಎಂದು ತೀರ್ಪು ನೀಡಿದರು.
ಓರ್ವ ನ್ಯಾಯಾಧೀಶರು, ಪದವಿ ಪಡೆಯುವುದರಿಂದ, ಕೆನೆಪದರಕ್ಕೆ ಅರ್ಹತೆ ಬರುವುದಾದರೆ, ಅದರಿಂದ ಯಾವುದೇ ಮೀಸಲಾತಿ ಪ್ರಯೋಜನವನ್ನು ಪಡೆಯುವುದಿಲ್ಲ ಎಂಬ ವಿಚಿತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಅಶೋಕ್ ಕುಮಾರ್ ಠಾಕೂರ್ ಪ್ರಕರಣದಲ್ಲಿ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಹೀಗೆ ಹೇಳಿರುವರು. ‘‘ಕೆನೆಪದರಕ್ಕೆ ಸೇರದ ಒಬಿಸಿಗಳು ಮಾತ್ರ ಕಾಲೇಜು ಪ್ರವೇಶದಲ್ಲಿ ಮೀಸಲಾತಿ ಪಡೆಯಬಹುದು ಮತ್ತು ಅವರು ಕಾಲೇಜಿನಿಂದ ಪದವಿ ಪಡೆದ ನಂತರ ಇನ್ನು ಮುಂದೆ ಸ್ನಾತಕೋತ್ತರ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಒಬಿಸಿ ಮೀಸಲಾತಿಗೆ ಶೇ. 27ರಷ್ಟು ಗರಿಷ್ಠ ಕೋಟಾ ಮಿತಿ ಇದೆ ಸರಿ. ಆದರೆ ಸರಕಾರ ಯಾವಾಗಲೂ ಗರಿಷ್ಠ ಕೋಟಾ ಮಿತಿಯನ್ನು ಅವರಿಗೇ ಒದಗಿಸಬೇಕಾಗಿಲ್ಲ. ಶ್ರೇಷ್ಠತೆಯ ಮಾನದಂಡಗಳು ಹೆಚ್ಚು ಪರಿಣಾಮ ಬೀರುವಂತೆ ಸಮಂಜಸವಾದ ಕಟ್ ಆಫ್ ಅಂಕಗಳನ್ನು ನಿಗದಿಪಡಿಸಬೇಕು. ಭರ್ತಿಯಾಗದ ಸೀಟು ಸಾಮಾನ್ಯ ವರ್ಗಕ್ಕೆ ಹೋಗಬೇಕು’’.
ವಿಷಯದ ಬಗ್ಗೆ ಹೆಚ್ಚು ಆಳವಾದ ಅಧ್ಯಯನದ ಅಗತ್ಯವಿದೆ. ಈಗ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಯು ವಾರ್ಷಿಕವಾಗಿ 2,50,000 ರೂ. ಗಳನ್ನು ಪಾವತಿಸಬೇಕಾಗುತ್ತದೆ. ಕೆನೆಪದರ ಗುರುತಿಸುವಿಕೆಗೆ ನಿಗದಿಪಡಿಸಿರುವ ಆರ್ಥಿಕ ಗುರಿಯು ಕೆನೆಪದರವನ್ನು ಪತ್ತೆಹಚ್ಚಲು ಮತ್ತು ನಿರ್ಲಕ್ಷಿಸಲು ಸೂಕ್ತವಲ್ಲದಿರಬಹುದು. ಅದಕ್ಕಾಗಿ, ಅಂದಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ‘‘ಸಂವಿಧಾನದ 15(5)ನೇ ವಿಧಿಯ ಅಡಿಯಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿಯನ್ನು ಒದಗಿಸಲು ಕೆನೆಪದರವನ್ನು ನಿರ್ಧರಿಸುವ ಅದೇ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿಲ್ಲ’’ ಎಂದು ಸ್ಪಷ್ಟಪಡಿಸಿದರು. ಕಾರಣವೆಂದರೆ ‘‘ಕೆನೆ ಪದರವನ್ನು ಗುರುತಿಸಲು ಕಟ್ಟುನಿಟ್ಟಾದ ಆದಾಯ ನಿರ್ಬಂಧವನ್ನು ವಿಧಿಸಿದರೆ ನಿರ್ದಿಷ್ಟ ಜಾತಿಯ ಉಳಿದಿರುವವರಲ್ಲಿ 2007ರ ಕಾಯ್ದೆ 5ರ ಪ್ರಕಾರ ಕೇಂದ್ರೀಯ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸಾಕಷ್ಟು ಸಂಖ್ಯೆಯ ಅಭ್ಯರ್ಥಿಗಳು ಸಿಗದಿರಬಹುದು’’.
ಸರಕಾರವು ಈ ವಿಷಯದಲ್ಲಿ ಸಡಿಲಿಕೆ ಮಾಡಬಹುದೆಂದು ಭಾರತದ ಮುಖ್ಯ ನ್ಯಾಯಾಧೀಶರು ಗಮನ ಸೆಳೆದಿರುವರು. ಆದರೆ, ಸಾಮಾನ್ಯ ಸೂತ್ರವನ್ನು ಅನ್ವಯಿಸಿದ ನಂತರವೂ ಇನ್ನೂ ಅಭ್ಯರ್ಥಿಗಳು ಲಭ್ಯವಿಲ್ಲದ ಸಂದರ್ಭಗಳನ್ನು ಎದುರಿಸಲು ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ಅನುಷ್ಠಾನಗೊಳಿಸಲು ರಾಜ್ಯವು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬಹುದು.
ಮೇಲಿನ ಹಿನ್ನೆಲೆಯಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಅವರು ಸೂಚಿಸಿದ ‘ಅವಲಂಬನೆ’ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ರಕ್ಷಿಸಲು ಪ್ರಯೋಜನವಾಗುವುದಿಲ್ಲವೇ?
ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಉದ್ಭವಿಸುವ ಕೆನೆಪದರದ ನೀತಿಯಿಂದ ಆ ವರ್ಗಗಳಿಗೆ ಉಂಟಾಗುವ ಅಥವಾ ಉಂಟಾಗಿರುವ ಬಾಧಕಗಳ ಬಗ್ಗೆ ಚಿಂತನೆ ಮಾಡಲಾಗಿದೆ. ನ್ಯಾಯಾಲಯದ ನಿರ್ಣಯಗಳೂ ಕೂಡ ಹೆಚ್ಚು ಕಡಿಮೆ ಕೆನೆಪದರದ ಪರವಾಗಿಯೇ ಒಲವು ವ್ಯಕ್ತಪಡಿಸಿವೆ ಎಂಬುದೂ ಚರ್ಚೆಯಲ್ಲಿ ಕಂಡು ಕೊಂಡ ಅಂಶ.
ಕೆನೆಪದರದ ಪರಿಣಾಮದ ಬಗ್ಗೆ ಒಂದು ಚಿಕ್ಕ ಉದಾಹರಣೆ ಎಂದರೆ: ಕೇಂದ್ರ ಸರಕಾರದಲ್ಲಿ, 2018ರ ತನಕ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಅರ್ಹ ಅಭ್ಯರ್ಥಿಗಳಿಲ್ಲದೆ 2,855 ಹುದ್ದೆಗಳು ಭರ್ತಿಯಾಗದೆ ಖಾಲಿ ಬಿದ್ದಿವೆ(ಮೂಲ-ಪಿಐಬಿ ಪ್ರೆಸ್).
ಪ್ರೊ. ರವಿವರ್ಮ ಕುಮಾರ್ ಆಯೋಗ ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ಕೆನೆಪದರ ಎಂಬ ವಿಷಯದ ಮೇಲೆ ಗಹನವಾದ ಚರ್ಚೆ ನಡೆಸಿ, ಒಂದು ವಿಚಾರಪೂರ್ಣ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಆ ವರದಿಯ ಕೆಲವು ಉದ್ಧರಣಗಳನ್ನು ಲೇಖನದ ಭಾಗವಾಗಿ ಕೊಡಲಿಚ್ಛಿಸುವೆ:
ಕೆನೆಪದರಕ್ಕೆ ತೆರಬೇಕಾದ ಬೆೆ
ಸಂವಿಧಾನದ ಯಾವುದೇ ಉಪಬಂಧವು, ಕೆನೆ ಪದರವನ್ನು ತೆಗೆದುಹಾಕುವುದರ ಬಗ್ಗೆ ನಿರ್ದೇಶಿಸುವುದಿಲ್ಲ. 15(4) ಮತ್ತು 16(4)ನೆಯ ಅನುಚ್ಛೇದಗಳು ಕೇವಲ ಸಮರ್ಥಗೊಳಿಸುವ ಉಪಬಂಧಗಳಾಗಿವೆ ಎಂದು ದೃಢವಾಗಿ ಅರ್ಥೈಸಿರುವುದು ಕಂಡು ಬರುತ್ತದೆ. ಸದರಿ ಉಪಬಂಧಗಳಿಗೆ ಕೊಡಲಾಗಿರುವ ನ್ಯಾಯಿಕ ಅರ್ಥ ವಿವರಣೆ ಎಂದರೆ ಅವು ಸಮರ್ಥಗೊಳಿಸುವ ಉಪಬಂಧಗಳು ಮಾತ್ರವಾಗಿದ್ದು, ಅಂತಹ ಉಪ ಬಂಧಗಳನ್ನು ಮಾಡುವಂತೆ ರಾಜ್ಯವನ್ನು ಒತ್ತಾಯ ಪಡಿಸುವುದಿಲ್ಲ ಎಂಬುದಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳವರ ಏಳಿಗೆಗಾಗಿ ವಿಶೇಷ ಉಪಬಂಧವನ್ನು ಅಧಿನಿಯಮಿಸುವ ಅಥವಾ ಹಿಂದುಳಿದ ವರ್ಗಗಳಿಗೆ ಹುದ್ದೆಗಳನ್ನು ಮತ್ತು ನೇಮಕಾತಿಗಳನ್ನು ಮೀಸಲಿರಿಸುವಂತೆ ನ್ಯಾಯಿಕ ಪರಮಾದೇಶಕ್ಕೆ (man domus)ಆಸ್ಪದವಿರುವುದಿಲ್ಲ. ಹಿಂದುಳಿದ ವರ್ಗಗಳ ಪ್ರಯೋಜನಕ್ಕಾಗಿ ಸ್ಪಷ್ಟ ಭಾಷೆಯಲ್ಲಿ ಹೇಳಲಾಗಿರುವಂಥ 15(4) ಮತ್ತು 16(4)ನೆಯ ಅನುಚ್ಛೇದಗಳು ಸಮರ್ಥಗೊಳಿಸುವ ಉಪಬಂಧಗಳು ಮಾತ್ರವಾಗಿದ್ದಲ್ಲಿ, ಅವುಗಳನ್ನು ನ್ಯಾಯಾಲಯದ ಮೂಲಕ ಜಾರಿಗೊಳಿಸಲಾಗುವುದಿಲ್ಲ. ಇತರ ಯಾವುದೇ ಸಂವಿಧಾನಾತ್ಮಕ ಉಪಬಂಧವನ್ನು ಕೆನೆಪದರವನ್ನು ತೆಗೆದು ಹಾಕುವಂತೆ ನಿರ್ದೇಶಿಸುತ್ತದೆ ಎಂದು ಅರ್ಥೈಸಿದಲ್ಲಿ ಅದು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದಂತಾಗಿದೆ. ಸಂವಿಧಾನವು ಜಾರಿಗೆ ಬಂದು 43 ವರ್ಷಗಳವರೆಗೂ ಅನುಚ್ಛೇದ 16(4) ಕೇಂದ್ರ ಸೇವೆಗಳಲ್ಲಿ ಹಿಂದುಳಿದ ವರ್ಗಗಳ ಪಾಲಿಗೆ ಆಚರಣೆಯಲ್ಲಿಲ್ಲದ ಒಂದು ಕಾನೂನಾಗಿಯೇ ಉಳಿದಿತ್ತು. ವಸ್ತುಸ್ಥಿತಿ ಹೀಗಿರುವಾಗ, ಕೆನೆಪದರವನ್ನು ಒಂದು ಕಡ್ಡಾಯವಾದ ವಿಷಯವೆಂದು ಪರಿಗಣಿಸುವುದಾದರೂ ಹೇಗೆ?
ನೀವು ಕೆನೆಪದರದ ಹೆಸರಿನಲ್ಲಿ ಹಿಂದುಳಿದ ವರ್ಗಗಳಲ್ಲಿನ ಪ್ರತಿಭಾವಂತರನ್ನು ಹೊರಗಿಟ್ಟಲ್ಲಿ, ಮುಕ್ತ ಸ್ಪರ್ಧೆಯ ಅತ್ಯುತ್ತಮ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಾ ಕಣಕ್ಕಿಳಿದ ಹಿಂದುಳಿದ ವರ್ಗಗಳಲ್ಲಿನ ಕೆಳ ಪದರದ ವ್ಯಕ್ತಿಗಳಿಂದ ನೀವು ಯಾವ ರೀತಿಯ ಸ್ಪರ್ಧೆಯನ್ನು ನಿರೀಕ್ಷಿಸುತ್ತೀರಿ? ನೀವು ಕೆನಪದರದ ನೆಪದಲ್ಲಿ ಹಿಂದುಳಿದ ವರ್ಗಗಳಲ್ಲಿನ ಪ್ರತಿಭಾವಂತರನ್ನು ಹೊರಹಾಕುವ ಮೂಲಕ ಮುಕ್ತ ಸ್ಪರ್ಧೆ ಅಭ್ಯರ್ಥಿಗೆ ಒಂದು ಸುಗಮ ದಾರಿ, ಖಚಿತ ಆಯ್ಕೆ ಅವಕಾಶ ಮತ್ತು ಸುರಕ್ಷಿತ ಮಾರ್ಗ ದೊರೆಯುವಂತೆ ಮಾಡುತ್ತಿದ್ದೀರಲ್ಲವೇ ಮತ್ತು ಇದು ಸ್ಪರ್ಧೆಯಲ್ಲವೇ. ಕೆ.ಸಿ.ವಸಂತ್ ಕುಮಾರ್ ಪ್ರಕರಣದಲ್ಲಿ ಸ್ವತಃ ಸರ್ವೋಚ್ಚ ನ್ಯಾಯಾಲಯವೇ ಈ ಬಗ್ಗೆ ಸೂಕ್ತ ಉತ್ತರವನ್ನು ನೀಡಿದೆ.
‘‘.....ಮೀಸಲಿರಿಸದ ಹುದ್ದೆಗಳನ್ನು ಸಮಾಜದ ಕೆನೆಪದರದಲ್ಲಿ ಮೇಲುಪದರಿನವರು ಕಸಿದುಕೊಳ್ಳುವುದು ತಪ್ಪಲ್ಲವೆಂದಾದರೆ ಮೀಸಲಿರಿಸಿದ ಸ್ಥಾನಗಳು ಮತ್ತು ಹುದ್ದೆಗಳನ್ನು ಹಿಂದುಳಿದ ವರ್ಗಗಳ ಕೆನೆಪದರ ಕಸಿದುಕೊಳ್ಳುವುದು ಹೇಗೆ ತಪ್ಪಾಗುತ್ತದೆ’’.(ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ; 1985, ಎಸ್‌ಸಿಸಿ 714)
ಆದ್ದರಿಂದ ಎಲ್ಲಾ ಹುದ್ದೆಗಳನ್ನು ಮತ್ತು ಸ್ಥಾನಗಳನ್ನು ಒಂದು ಏಕರೂಪದ ತತ್ವದ ಮೇಲೆ ತುಂಬುವ ಹಾಗೆ ಕೆನೆಪದರ ತತ್ವವನ್ನು ಎಲ್ಲರಿಗೂ ಏಕರೂಪವಾಗಿ ಅನ್ವಯಿಸುವುದು ಅಗತ್ಯ. ಹಾಗೆ ಮಾಡುವವರೆಗೆ ಹಿಂದುಳಿದ ವರ್ಗಗಳಿಗೆ ವಿರುದ್ಧವಾಗಿ ಮಾತ್ರವೇ ಕೆನಪದರ ತತ್ವವನ್ನು ಅನ್ವಯಿಸುವುದು 14,15 (1) ಮತ್ತು 16(1)ನೇ ಅನುಚ್ಛೇದಗಳನ್ನು ಉಲ್ಲಂಘಿಸುವ ಒಂದು ಭೇದಕಾರಕ ಪಕ್ಷಪಾತವಾಗುತ್ತದೆ.
ಮೇಲ್ಜಾತಿ-ವರ್ಗಗಳ ಕುಹಕ
ಮೇಲ್ಜಾತಿ-ವರ್ಗಗಳ ಜನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕೊಡಮಾಡಿರುವ ಮೀಸಲಾತಿಯಲ್ಲಿನ ಕೆನೆಪದರ ಹೊರಗಿಡದಿರುವುದನ್ನು ಲೋಕಾಭಿರಾಮವಾಗಿ ಗೇಲಿ ಮಾಡುತ್ತಾರೆ. ಆ ವರ್ಗಗಳಿಗೆ ಸೇರಿದ ಮಂತ್ರಿ ಅಥವಾ ಐಎಎಸ್ ಅಧಿಕಾರಿಯ ಮಕ್ಕಳಿಗೂ ಮೀಸಲಾತಿ ಏಕೆ ಬೇಕು? ಅಂತಹವರು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಬಹುದಲ್ಲವೇ ಎಂಬುದು ಅವರ ಗೇಲಿಯ ಹಿಂದಿನ ಕುತಂತ್ರ ಮತ್ತು ಒಳಮರ್ಮದ ಮಾತುಗಳು. ಪ್ರಬಲ ಕಾರಣವಿಲ್ಲದೆ ಈ ಮಾತುಗಳನ್ನು ಅವರು ಆಡುವುದಿಲ್ಲ. ಆ ವರ್ಗಗಳಿಗೆ ಸೇರಿರುವ ಅಭ್ಯರ್ಥಿಗಳು ಯಾವುದೇ ಒಂದು ತಾಂತ್ರಿಕ ಹುದ್ದೆಗೆ ಲಭ್ಯವಿಲ್ಲದಿದ್ದಾಗ, ಕೆಲವು ತೀರ್ಪಿನ ಅನುಸಾರ, ನಿಗದಿತ ಅವಧಿಯೊಳಗೆ ಆ ವರ್ಗಗಳಿಂದ ಖಾಲಿ ಸ್ಥಾನಗಳನ್ನು ತುಂಬದಿದ್ದಲ್ಲಿ, ಆ ಸ್ಥಾನಗಳು ಸಹಜವಾಗಿ ಮೀಸಲಿರಿಸದ ಸ್ಥಾನಗಳಾಗಿ ಪರಿವರ್ತಿತವಾಗಿ, ಸಾಮಾನ್ಯ ವರ್ಗದ ಪಾಲಾಗುವುದನ್ನು ಬಯಸುತ್ತಾರೆ. ಇನ್ನೂ ಮುಂದೆ ಹೋಗಿ, ಬಾಬಾ ಸಾಹೇಬರೇ ಮೀಸಲಾತಿ ಕೇವಲ ಹತ್ತು ವರ್ಷಗಳಿಗಷ್ಟೇ ಸೀಮಿತವಾಗಬೇಕು ಎಂದು ಹೇಳಿದ್ದರು ಎಂಬ ಹಸಿ ಹಸಿ ಸುಳ್ಳನ್ನೇ ಹೇಳುತ್ತಾ ಬರುತ್ತಿದ್ದಾರೆ. ವಾಸ್ತವವಾಗಿ, 330 ಮತ್ತು 332 ಅನುಚ್ಛೇದಗಳಿಗೆ ಅನ್ವಯಿಸುವ ರಾಜಕೀಯ ಮೀಸಲಾತಿ ಅದು. (2009ರಲ್ಲಿ ಸಂವಿಧಾನದ ತಿದ್ದುಪಡಿ 95ರ ಅನ್ವಯ ಅದು 70 ವರ್ಷಕ್ಕೆ ಏರಿಸಲ್ಪಟ್ಟಿದೆ). ಮೀಸಲಾತಿಯನ್ನು ಮತ್ಸರದಿಂದ ಹೀಗಳೆಯುವ ಬದಲು ಮೇಲ್ಜಾತಿ-ವರ್ಗದ ಜನ ಎಲ್ಲರೊಳಗೆ ಮಾನವೀಯ ಸಮಾನತೆ ಕಲ್ಪಿಸಿ ಬದುಕಲು ಸರ್ವರ ಕ್ಷೇಮವನ್ನು ಬಯಸುವುದು ಲೇಸಲ್ಲವೇ; ಇದಕ್ಕೆ ವ್ಯತಿರಿಕ್ತವಾಗಿ ದ್ವೇಷಮಯ ವಾತಾವರಣ ನಿರ್ಮಿಸಿ ಯಾದವೀ ಕಲಹಕ್ಕೆ ಎಡೆ ಮಾಡಿಕೊಡ ಬಾರದಲ್ಲವೇ?.