ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಕಾಫಿನಾಡಿನ ಕಬಡ್ಡಿ ಕ್ರೀಡಾಪಟು ಸಿಂಧು

ಚಿಕ್ಕಮಗಳೂರು, ಮಾ.23: ಕಾಫಿನಾಡಿನ ಕುಗ್ರಾಮದ, ಕೂಲಿ ಕಾರ್ಮಿಕ ಕುಟುಂಬದ ಯುವತಿಯೊಬ್ಬಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಮೆಂಟ್‌ಗಳಲ್ಲಿ ತನ್ನದೇಯಾದ ಛಾಪು ಮೂಡಿಸುತ್ತಿದ್ದು, ಪ್ರತಿಭಾವಂತ ಕ್ರೀಡಾಪಟುವಾಗಿ ಹೊರಹೊಮ್ಮುತ್ತಿದ್ದಾಳೆ.
ಚಿಕ್ಕಮಗಳೂರು ತಾಲೂಕಿನ ಬಾಬಾ ಬುಡಾನ್‌ಗಿರಿ ಸಮೀಪದ ಮಹಲ್ ಗ್ರಾಮದ ನಿವಾಸಿಗಳಾದ ಹಾಗೂ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ನೀಲಾ ಹಾಗೂ ಈಶ್ವರ್ ದಂಪತಿಯ ಪುತ್ರಿ ಸಿಂಧು ಕಬಡ್ಡಿ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸುತ್ತಿರುವ ಗ್ರಾಮೀಣ ಪ್ರತಿಭೆ. ತನ್ನ ಪೋಷಕರ ನಾಲ್ವರು ಹೆಣ್ಣು ಮಕ್ಕಳ ಪೈಕಿ ಓರ್ವಳಾದ ಸಿಂಧು ಈಶ್ವರ್ ಸದ್ಯ ನಗರದ ಎಸ್‌ಟಿಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಬಹುಮುಖ ಪ್ರತಿಭೆ. ಶಾಲಾ ದಿನಗಳಲ್ಲೇ ಕಬಡ್ಡಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಸಿಂಧು ಹಲವಾರು ಪ್ರಶಸ್ತಿ, ಬಹುಮಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಳು.
ನಗರದ ಕ್ರೀಡಾ ತರಬೇತುದಾರರಾದ ಎಂ.ಡಿ.ಕುಮಾರ್ ಹಾಗೂ ಮಂಜುನಾಥ್ ರಾಜ್ ಅರಸ್ ಅವರ ಗರಡಿಯಲ್ಲಿ ಕಬಡ್ಡಿ ತರಬೇತಿ ಪಡೆಯುತ್ತಿರುವ ಸಿಂಧು, ರಾಷ್ಟ್ರಮಟ್ಟದ ಕ್ರೀಡಾ ತರಬೇತಿಯಲ್ಲೂ ಭಾಗವಹಿಸಿ ಕಬಡ್ಡಿ ಆಟವನ್ನು ಕರಗತ ಮಾಡಿಕೊಂಡಿದ್ದಾಳೆ. 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆಯೇ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಸಬ್ ಜೂನಿಯರ್ ಕಬಡ್ಡಿ ವಿಭಾಗದಲ್ಲಿ ಕರ್ನಾಟಕ ಮಹಿಳಾ ತಂಡಕ್ಕೆ ಆಯ್ಕೆಯಾಗಿ ಬಿಹಾರ ರಾಜ್ಯದ ಪಾಟ್ನಾದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನ್‌ಮೆಂಟ್‌ನಲ್ಲಿ ಭಾಗವಹಿಸಿ ತನ್ನ ಆಟದಿಂದ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಳು.
10ನೇ ತರಗತಿಯಲ್ಲಿದ್ದ ವೇಳೆ ಸ್ಕೂಲ್ ಮೀಟ್ ಸ್ಪೋರ್ಟ್ಸ್‌ನಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸಿ ಮಂಡ್ಯದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಳು. ಪದವಿ ಹಂತದಲ್ಲಿ ಕುವೆಂಪು ವಿವಿ ಕಬಡ್ಡಿ ತಂಡಕ್ಕೆ ಆಯ್ಕೆಯಾಗುವ ಮೂಲಕ ತಮಿಳುನಾಡು ರಾಜ್ಯದಲ್ಲಿ ನಡೆದ ಅಂತರ್ ಕಾಲೇಜು ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿ ತನ್ನ ತಂಡ ಬಹುಮಾನ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾಳೆ. ಅಲ್ಲದೇ ದಕ್ಷಿಣ ಭಾರತ ಅಂತರ್ ವಿವಿ ಕಬಡ್ಡಿ ಟೂರ್ನ್‌ಮೆಂಟ್‌ಗಳಲ್ಲೂ ಭಾಗವಹಿಸಿ ಕುವೆಂಪು ವಿವಿ ತಂಡದ ನಾಯಕಿಯಾಗಿ ಬಹುಮಾನ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾಳೆ.
2025, ಫೆಬ್ರವರಿಯಲ್ಲಿ ಹರಿಯಾಣ ರಾಜ್ಯದಲ್ಲಿ ನಡೆದ ರಾಷ್ಟ್ರಮಟ್ಟದ ಸೀನಿಯರ್ ಮಹಿಳಾ ಕಬಡ್ಡಿ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಸಿಂಧು ಈ ಕ್ರೀಡಾ ಕೂಟದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾಳೆ. ಪ್ರತೀ ವರ್ಷ ನಡೆಯುವ ದಸರಾ ಕ್ರೀಡಾಕೂಟದಲ್ಲೂ ಸಿಂಧು ಬಿಸಿಆರ್ ಅಕಾಡಮಿಯಿಂದ ಪ್ರತಿನಿಧಿಸಿ ಸಾಧನೆ ಮಾಡುತ್ತಿದ್ದು, ಈ ಅಕಾಡಮಿಯಿಂದಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಕಬಡ್ಡಿ ಕ್ರೀಡೆಯಲ್ಲಿ ಸಿಂಧು ಅಪಾರ ಪ್ರತಿಭೆ ಹೊಂದಿದ್ದು, ಎಸ್‌ಟಿಜೆ ಕಾಲೇಜಿನ ಆಡಳಿತ ಮಂಡಳಿ ಆಕೆಯ ಪ್ರತಿಭೆಯನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದೆ. ಕಾಲೇಜಿನ ಪ್ರಾಂಶುಪಾಲೆ ಭಾರತಿ ಕಬಡ್ಡಿ ಆಟಕ್ಕೆ ಅಗತ್ಯವಾಗಿರುವ ತರಬೇತಿ, ಕ್ರೀಡಾ ಸಾಮಗ್ರಿ ಸೇರಿದಂತೆ ಸಿಂಧುಳನ್ನು ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟುವನ್ನಾಗಿಸಲು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಇದರೊಂದಿಗೆ ತರಬೇತುದಾರರಾದ ರಮೇಶ್ ಹಾಗೂ ಮಂಜುನಾಥ್ ರಾಜ್ ಅರಸ್ ಅವರ ತರಬೇತಿ ಸಿಂಧು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತಾಗಿದ್ದು, ಕಾಫಿನಾಡಿನ ಕುಗ್ರಾಮದ ಈ ಕಬಡ್ಡಿ ಪ್ರತಿಭೆ ಅಂತರ್‌ರಾಷ್ಟ್ರೀಯ ಮಟ್ಟದ ಪ್ರತಿಭಾವಂತ ಕ್ರೀಡಾಪಟು ಆಗಿ ಹೊರಹೊಮ್ಮಲಿ ಎಂದು ಕಾಫಿನಾಡಿನ ಕಬಡ್ಡಿ ಕ್ರೀಡಾ ಪ್ರೇಮಿಗಳು ಹಾಗೂ ಸಾರ್ವಜನಿಕರು ಹಾರೈಸುತ್ತಿದ್ದಾರೆ.