ಚಿಕ್ಕಮಗಳೂರು ನಗರದ ಸೌಂದರ್ಯ ಹೆಚ್ಚಿಸಿದ ಪುಷ್ಪರಾಶಿ

Update: 2025-03-24 10:45 IST
ಚಿಕ್ಕಮಗಳೂರು ನಗರದ ಸೌಂದರ್ಯ ಹೆಚ್ಚಿಸಿದ ಪುಷ್ಪರಾಶಿ
  • whatsapp icon

ಚಿಕ್ಕಮಗಳೂರು: ಬಿರು ಬೇಸಿಗೆಯಲ್ಲಿ ಸಾರ್ವಜನಿಕರು ಬಿಸಿಲ ಝಳಕ್ಕೆ ರೋಸಿ ಹೋಗುತ್ತಿದ್ದರೆ, ಪ್ರಾಕೃತಿಕ ವಿಸ್ಮಯ ಎಂಬಂತೆ ನಗರದ ಕೆಲ ಮರಗಿಡಗಳಲ್ಲಿ ಪುಷ್ಪಗಳು ಅರಳಿ ನಿಂತಿದ್ದು, ಪುಷ್ಪ ಪ್ರಿಯರ ಕಣ್ಮನ ಸೆಳೆಯುತ್ತಿವೆ.

ಚಿಕ್ಕಮಗಳೂರು ನಗರದ ಕೆಲವು ಬಡಾವಣೆಗಳಲ್ಲಿನ ವಿವಿಧ ಜಾತಿಯ ಮರಗಳಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ಹೂವುಗಳು ಅರಳಿ ನಿಂತಿದ್ದು, ನಗರದ ಸೊಬಗು ಹೆಚ್ಚಿಸಿವೆ. ಈ ಪುಷ್ಪಗಳ ಸೊಬಗು ನೋಡುಗರ ಗಮನ ಸೆಳೆಯುತ್ತಿವೆ. ಎಪ್ರಿಲ್ ತಿಂಗಳು ಆರಂಭವಾಗುತ್ತಿದ್ದು, ಅಲ್ಲಲ್ಲಿ ಮೇ ಪ್ಲವರ್ ಕಣ್ಮನ ಸೆಳೆಯುತ್ತಿವೆ. ಎಲ್ಲಿ ನೋಡಿದರಲ್ಲಿ ನೀಲಿ, ನೇರಳೆ, ಬೂದುಬಣ್ಣ, ಕೆಂಪು ಹೂವುಗಳು ಮರಗಳಲ್ಲಿ ಕಂಗೊಳಿಸುತ್ತಿವೆ. ಮರದ ಅಡಿಯಿಂದ ಮುಡಿಯವರೆಗೂ ಹೂವುಗಳು ಬಿಟ್ಟಿದ್ದು ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ.

ಹವಾಮಾನ ವೈಪರೀತ್ಯದಿಂದ ಮಾರ್ಚ್ ತಿಂಗಳಲ್ಲಿ ಸುಡುಬಿಸಿಲು, ಬಿಸಿಗಾಳಿ ಬೀಸುತ್ತಿದ್ದರೆ ದಾರಿಯಲ್ಲಿ ಸಾಗುವವರಿಗೆ ಈ ಮರಗಳು ನೆರಳು ನೀಡುವುದರ ಜತೆಗೆ ಮರದಲ್ಲಿ ಅರಳಿರುವ ಹೂವುಗಳು ಮನಸ್ಸಿಗೆ ಮುದ ನೀಡುತ್ತವೆ. ನಗರದ ನಗರಸಭೆ ಆವರಣದಲ್ಲಿ ನಾಗರಹಾವಿನಂತೆ ತಲೆ ಎತ್ತಿರುವ ಹೂವೊಂದು ಮರದ ತುಂಬಾ ಹರಡಿಕೊಂಡಿದ್ದು, ಜನರನ್ನು ಆಕರ್ಷಿಸುತ್ತಿದೆ. ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಮೇ ಪ್ಲವರ್ ಕಂಗೊಳಿಸುತ್ತಿವೆ. ಅಲ್ಲಲ್ಲಿ ವಿವಿಧ ಬಣ್ಣದ ಹೂವುಗಳು ಅರಳಿ ನಿಂತಿದ್ದು ವಾಯುವಿಹಾರಕ್ಕೆ ಬರುವವರನ್ನು ಸೆಳೆಯುತ್ತಿವೆ.

ಪಶು ಸಂಗೋಪನಾ ಇಲಾಖೆ ಕಚೇರಿ ಎದುರು ಹಳದಿ ಬಣ್ಣದ ಹೂವುಗಳು ಅರಳಿವೆ. ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ನೇರಳೆ ಬಣ್ಣದ ಹೂವುಗಳು ಅರಳಿ ನಿಂತಿವೆ. ಪ್ರಧಾನ ಅಂಚೆ ಕಚೇರಿಗೆ ಹೋಗುವ ರಸ್ತೆ ಬದಿಯಲ್ಲಿ ಬೂದು ಬಣ್ಣದ ಹೂವುಗಳು ಮರದ ತುಂಬೆಲ್ಲ ಅರಳಿದ್ದು ವಾಹನದಲ್ಲಿ ಸಾಗುವವರು ಮತ್ತು ಪಾದಚಾರಿಗಳ ಗಮನಸೆಳೆಯುತ್ತಿವೆ.

ಕಣಗಲ ಮರದಲ್ಲಿ ಬಿಳಿಯ ಹೂವುಗಳು ಅರಳಿದ್ದರೆ, ರಂಗೀನ ಹೂವು ಅರಳ ತೊಡಗಿವೆ. ಹೀಗೆ ವಿವಿಧ ಬಗೆಯ ಹೂವುಗಳು ರಸ್ತೆಗಳ ಇಕ್ಕೆಲಗಳಲ್ಲಿ ಅರಳಿ ನಿಂತಿದ್ದು, ಕಾಫಿನಾಡಿಗೆ ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ಗಿರಿ ಪ್ರದೇಶದಲ್ಲಿ ವಿವಿಧ ಬಗೆಯ ಹೂವುಗಳು ಪುಷ್ಪ ಪ್ರಿಯರನ್ನು ಆಕರ್ಷಿಸುತ್ತಿವೆ.

ಯುಗಾದಿ ಹಬ್ಬ ಸಮೀಪಿಸುತ್ತಿದ್ದು ವಸಂತ ಸಂವತ್ಸರಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲಿ ಮರಗಳು ಎಲೆಗಳನ್ನು ಉದುರಿಸಿ ಹೊಸ ಚಿಗುರು ಮೂಡುತ್ತಿದ್ದರೆ ಕೆಲವು ಮರಗಿಡಗಳು ಹೂಬಿಟ್ಟು ನಗರದ ಕಾನನ ಮತ್ತು ನಗರದ ಅಂದವನ್ನು ಹೆಚ್ಚಿಸುತ್ತಿರುವುದಲ್ಲದೆ ನೋಡುಗರ ಗಮನ ಸೆಳೆಯುತ್ತಿವೆ. ಒಟ್ಟಾರೆ ಚಿಕ್ಕಮಗಳೂರು ನಗರದ ವಿವಿಧ ಬಡಾವಣೆಗಳ ರಸ್ತೆ ಇಕ್ಕೆಲಗಳಲ್ಲಿ ಅರಳಿರುವ ಹೂವುಗಳು ನಗರದ ಅಂದವನ್ನು ಹೆಚ್ಚಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಲ್. ಶಿವು

contributor

Similar News