ಪರಿಸರ ಸ್ನೇಹಿ ‘ಸ್ಯಾನಿಟರಿ ಪ್ಯಾಡ್’ ಉದ್ಯಮ ಸೃಷ್ಟಿಸಿದ ಭಾರತಿ

ಕೊಪ್ಪಳ: ಮುಟ್ಟಿನ ಸಂದರ್ಭದಲ್ಲಿ ಅನುಭವಿಸುವ ನೋವು, ಸಂಕಟ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಮ್ಮದೇ ಆದ ಹೊಸ ಆಶಯ, ಕನಸುಗಳನ್ನು ಹೊತ್ತು ಆತ್ಮ ವಿಶ್ವಾಸದಿಂದಾಲೇ ಸೇವೆಗಿಳಿದಿದ್ದಾರೆ ಕೊಪ್ಪಳ ಜಿಲ್ಲೆಯ ವಿಶೇಷ ಮಹಿಳೆ ‘ಪ್ಯಾಡ್ ವುಮೆನ್’ ಎಂದು ಪ್ರಚಲಿತರಾದ ಭಾರತಿ ಗುಡ್ಲಾನೂರು.
ಮಹಿಳೆಯರಿಗೆ ಮಾಸಿಕ ಋತುಚಕ್ರ ನೈಸರ್ಗಿಕ ಮೂಲಭೂತ ಕ್ರಿಯೆಯಾಗಿದ್ದರೂ ಅನೇಕ ಸಂಪ್ರದಾಯ ಮೂಢನಂಬಿಕೆ, ಸಾಮಾಜಿಕ ವ್ಯವಸ್ಥೆಯು ಇದನ್ನು ಮುಜುಗರದ ಸಂಗತಿಯಾಗಿ ಸೃಷ್ಟಿ ಮಾಡಿದೆ. ಆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವಂತಿಲ್ಲ. ಪೂಜೆ ಪುನಸ್ಕಾರಗಳನ್ನು ಮಾಡುವಂತಿಲ್ಲ. ಚಿಕ್ಕ ಮಕ್ಕಳನ್ನು ಮುಟ್ಟುವಂತಿಲ್ಲ, ಗಿಡಗಳನ್ನು ಮುಟ್ಟುವಂತಿಲ್ಲ, ಅಡುಗೆ ಮನೆಗೆ ಪ್ರವೇಶವಿಲ್ಲ, ಸಂಡಿಗೆ ಹಪ್ಪಳ ಉಪ್ಪಿನಕಾಯಿಗಳನ್ನು ತಯಾರು ಮಾಡುವಂತಿಲ್ಲ ಮತ್ತು ಮುಟ್ಟುವಂತಿಲ್ಲ, ಕೆಲವು ಹಳ್ಳಿಗಳಲ್ಲಿ ಮತ್ತು ಸಮುದಾಯಗಳಲ್ಲಿ ಒಂದು ಮೂಲೆಯಲ್ಲಿ ಕೂರಿಸಿ ಊಟ ಬಟ್ಟೆ ಎಲ್ಲ ನೀಡುತ್ತಿದ್ದುದ್ದು, ಆಗಿನ ಭಾರದ ಕೆಲಸಗಳ ಒತ್ತಡಗಳ ಕಾರಣಕ್ಕೆ ಮಾಡುತ್ತಿರಬಹುದು ಎಂದು ಒಂದು ಬಗೆಯಲ್ಲಿ ಒಪ್ಪಿಕೊಳ್ಳಬಹುದಾದರೂ ಈ ಆಧುನಿಕ ಯುಗದಲ್ಲಿ ಮಹಿಳೆ ನಾಲ್ಕುಗೋಡೆಗಳಿಂದ ಹೊರಗಡೆ ಬಂದು ಸಾಮಾಜಿಕವಾಗಿ ಬಹಳಷ್ಟು ಮುಂದುವರಿಯುತ್ತಿದ್ದು ಮತ್ತು ಮುಟ್ಟಿನ ದಿನಗಳ ನಿರ್ವಹಣೆಗೆ ಸಾಕಷ್ಟು ಅವಕಾಶಗಳಿರುವುದರಿಂದ ಈ ರೀತಿಯ ಸಂಪ್ರದಾಯಗಳು ಹೆಣ್ಣು ಮಕ್ಕಳಿಗೆ ಒತ್ತಡದ ಪರಿಸ್ಥಿತಿಯನ್ನು ತಂದೊಡ್ಡುತ್ತದೆ.
ಕೊಪ್ಪಳದ ಭಾರತಿ ಗುಡ್ಲಾನೂರು ಇವರು ಕೊಪ್ಪಳ ಜಿಲ್ಲೆಗೆ ಒಂದು ವರವಾಗಿ ಮಹಿಳೆಯರ ನೈಸರ್ಗಿಕ ಅಂತರ್ ವೇದನೆಗೊಂದು ಹೊಸ ಬಗೆಯ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಗತರಾಗಿದ್ದಾರೆ. ಇದರಲ್ಲಿ ವಾಣಿಜ್ಯ ಉದ್ದೇಶವಿಲ್ಲದೇ ಮಹಿಳಾ ಸ್ವಾಭಿಮಾನ ಹಾಗೂ ಸಮಾಜ ಸೇವೆಯ ಉದ್ದೇಶವಿರುವುದು ಗಮನಾರ್ಹ.
ಹಿಂದಿ ಚಿತ್ರ ನಟ ಅಕ್ಷಯ್ ಕುಮಾರ್ ಅವರ ಜನಪ್ರಿಯ ಸಿನೆಮಾ ಪ್ಯಾಡ್‌ಮ್ಯಾನ್ ಇದರಿಂದ ಪ್ರಭಾವಿತರಾದ ಇವರು ಹೆಣ್ಣಿನ ಸೂಕ್ಷ್ಮತೆಯನ್ನು ಹೆಣ್ಣು ಮಕ್ಕಳಿಗೆ ತಿಳಿಸುವ ಜವಾಬ್ದಾರಿಯನ್ನು ತಲೆಯ ಮೇಲೆ ಹೊತ್ತುಕೊಂಡವರು. ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಸಿಎಸ್‌ಸಿ ಮೂಲಕ ಜಾರಿಗೊಂಡ ಸ್ತ್ರಿ ಸ್ವಾಭಿಮಾನ್ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಂಡು, ಮುದ್ರಾಲೋನ್‌ನ ಮುಖಾಂತರ ಸ್ವಂತ ಸಂಗಿನಿ ಪಿಂಕ್ ಪ್ಯಾಡ್ ಎನ್ನುವ ಸ್ಯಾನಿಟರಿ ಪ್ಯಾಡ್ ಘಟಕ ಆರಂಭಿಸಿದರು. ಇದರೊಂದಿಗೆ ಜಿಲ್ಲಾ ಉದ್ಯಮ ಕೇಂದ್ರದಲ್ಲಿ ಮಹಿಳೆಯರಿಗೆ ಸಿಗುವ ವಿಶೇಷ ಅನುದಾನವನ್ನು ಸಹ ಪಡೆದಿರುತ್ತಾರೆ. ಅಂತೆಯೇ ತಮ್ಮ ಘಟಕದಲ್ಲಿ ಬಹಳಷ್ಟು ಹೆಣ್ಣುಮಕ್ಕಳಿಗೆ ಉದ್ಯೋಗವಕಾಶವನ್ನೂ ನೀಡಿದ್ದು, ಮುಖ್ಯವಾಗಿ ಒಂಟಿ ಮಹಿಳೆ ಮತ್ತು ವಿಶೇಷಚೇತನರಿಗೆ ಪ್ರಾಮುಖ್ಯತೆ ನೀಡಲಾಗಿದೆ.
ಸುಮಾರು 8 ಪದರಗಳ ಮೂಲಕ ತಯಾರಾಗುವ ಈ ಪ್ಯಾಡ್‌ಗಳು ಜೈವಿಕ ವಿಘಟನೀಯ (ಬಯೋಡಿಗ್ರೇಡೆಬಲ್)ಗಳಾಗಿದ್ದು ಕೈಗೆಟಕುವ ಬೆಲೆಯಲ್ಲಿ ಮಾರಾಟವನ್ನು ಮಾಡುತ್ತಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಹಾಗೂ ಸ್ವಚ್ಛ ಭಾರತ್ ಕನಸನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು 2018 ಅಕ್ಟೋಬರ್ 2 (ಸ್ವಚ್ಛ ಭಾರತ್ ದಿವಸ್) ಅಂದು ಸೇವೆ ಆರಂಭಿಸಿದ್ದಾರೆ.
ಭಾರತದಲ್ಲಿ ಶೇಕಡಾ 71 ರಷ್ಟು ಹೆಣ್ಣು ಮಕ್ಕಳಿಗೆ ತಾವು ಮೊದಲ ಬಾರಿಗೆ ಮುಟ್ಟಾಗುವವರೆಗೂ ಮುಟ್ಟಿನ ಅರಿವು ಇರುವುದಿಲ್ಲ. ಶೇಕಡಾ 70 ರಷ್ಟು ತಾಯಂದಿರು ಮುಟ್ಟಿನ ಕುರಿತು ಮಾತನಾಡುವುದು ಅಸಹ್ಯ ಎಂದು ಭಾವಿಸಿದ್ದಾರೆ. ಶೇಕಡಾ 20ರಷ್ಟು ಹುಡುಗಿಯರು ಮುಟ್ಟಿನ ದಿನಗಳಲ್ಲಿ ಶಾಲೆಗಳಿಗೆ ಹೋಗುವುದೇ ಇಲ್ಲ. ಶೇ.18ರಷ್ಟು ಮಹಿಳೆಯರು ಮಾತ್ರ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಪ್ರತಿಯೊಬ್ಬ ಮಹಿಳೆ ಜೀವನದಲ್ಲಿ ಒಂದು ಬಾರಿಯಾದರೂ ಪ್ಯಾಡ್ ಖರೀದಿಯ ಸಂದರ್ಭದಲ್ಲಿ ಮುಜುಗರಕ್ಕೆ ಈಡಾಗುತ್ತಾಳೆ. ಹಾಗೆಯೇ ಅಂಗಡಿಯವನು ಮುಚ್ಚಿಟ್ಟು, ಪೇಪರ್‌ಗಳಲ್ಲಿ ಸುತ್ತಿ, ಕಪ್ಪುಬಣ್ಣದ ಪ್ಲಾಸ್ಟಿಕ್ ಹಾಳೆಯಲ್ಲಿ ಯಾರಿಗೂ ಕಾಣದಂತೆ ಕಟ್ಟಿಕೊಡುವುದು ಹಾಗೂ ಅದೇ ರೀತಿ ಶಾಲೆಗಳಲ್ಲಿ ಸರಕಾರದ ಮಟ್ಟದಲ್ಲಿ ಹೆಣ್ಣು ಮಕ್ಕಳನ್ನು ಪ್ರತ್ಯೇಕ ಕೋಣೆಗೆ ಕರೆದು ಬ್ಯಾಗಿಗೆ ತುಂಬಿಸಿ ಕಳಿಸುತ್ತಿರುವುದು ವಿಷಾದನೀಯ. ಎಲ್ಲಿಯ ತನಕ ಮುಜುಗರ ಹಿಂಜರಿಕೆಗೆ ಒಳಗಾಗಿರುತ್ತೇವೆಯೋ ಅಲ್ಲಿಯವರೆಗೂ ಈ ಹಿಂಸೆಯ ಕೂಪದಿಂದ ಹೊರಬರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಭಾರತಿ.
ಆಂದೋಲನ: ಮುಟ್ಟಿನ ಸಂದರ್ಭದಲ್ಲಿ ಕೇವಲ ರಕ್ತ ಸ್ರಾವ ಮಾತ್ರ ಆಗದೇ ಮಾನಸಿಕ ಒತ್ತಡಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಭಯ, ಒಂಟಿತನ, ಆತಂಕ, ಸಿಟ್ಟು, ಉದ್ವೇಗ ಮುಂತಾದ ಭಾವನೆಗಳು ಹೆಣ್ಣಿನ ಬದುಕಿನ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಇವುಗಳ ಅರಿವು ಇಲ್ಲದೇ ಇರುವುದು ಸಹ ಹಲವಾರು ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನು ಅರಿತ ಭಾರತಿಯವರು ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಿಗೆ, ಹಳ್ಳಿಗಳಿಗೆ ಭೇಟಿಕೊಟ್ಟು ನೈಸರ್ಗಿಕ
ಪ್ರಕ್ರಿಯೆ ಬಗೆಗೆ ಇರುವ ಮುಜುಗರ ಹಿಂಜರಿಕೆ ಮನೋಭಾವವನ್ನು ಹೋಗಲಾಡಿಸಲು ಹದಿಹರೆಯದ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಆಪ್ತ ಸಮಾಲೋಚನೆಯ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಕೊಪ್ಪಳದಲ್ಲಿ ಜಾಗೃತಿ ಕಾರ್ಯಕ್ರಮ, ಸಂವಾದ ಕಾರ್ಯಕ್ರಮಗಳು, ಶಿಬಿರಗಳು, ತರಬೇತಿಗಳು, ಬೀದಿನಾಟಕಗಳು, ವಿಚಾರ ಸಂಕಿರಣ, ಪ್ರಭಂದ ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ಯಾಡ್ ಬ್ಯಾಂಕ್‌ಗಳ ರಚನೆ, ವೆಂಡಿಂಗ್ ಮಿಷಿನ್‌ಗಳ ಅಳವಡಿಕೆಗಳು, ಮಹಿಳಾ ದಿನಾಚರಣೆಯಂದು ಕೊಪ್ಪಳದ ಯುವಕ ಯುವತಿಯರು ಮಹಿಳೆಯರು ಸೇರಿ ಮುಟ್ಟಿನ ಘೋಷಣೆಗಳ ಮೂಲಕ ಜಾಥಾ ಕಾರ್ಯಕ್ರಮ, ಕಾರ್ಯಾಗಾರಗಳು ಮುಂತಾದ ಚಟುವಟಿಕೆಗಳ ಮುಖಾಂತರ ಕೊಪ್ಪಳ ಜಿಲ್ಲೆಯ 85 ಹಳ್ಳಿಗಳಲ್ಲಿ 115 ಕಾರ್ಯಕ್ರಮಗಳನ್ನು ಏರ್ಪಡಿಸಿ, ಒಟ್ಟಾರೆ 17,829 ಕಿಶೋರಿಯರು ಮತ್ತು ಮಹಿಳೆಯರಿಗೆ ಜಾಗೃತಿ ಯನ್ನು ಮೂಡಿಸಿರುತ್ತಾರೆ. ಇಂತಹ ವಿನೂತನ ಪ್ರಯತ್ನಕ್ಕೆ ಕೈ ಹಾಕಿದವರಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಇವರೇ ಮೊದಲಿಗರು.
ಕನಸು ಹಾಗೂ ಸವಾಲುಗಳು: ಭಾರತಿಯವರು ಶಾಲೆ ಕಾಲೇಜುಗಳಿಗೆ ಭೇಟಿಕೊಟ್ಟು ವಿದ್ಯಾರ್ಥಿನಿಯರು ಮತ್ತು ಮಹಿಳೆಯರಲ್ಲಿ ಋತು ಚಕ್ರದ ಬಗ್ಗೆ ಸಕಾರಾತ್ಮಕ ಮನೋಭಾವ ಮೂಡಿಸಿ ಆಧುನಿಕ ನಿರ್ವಹಣಾ ಕ್ರಮಗಳ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಪ್ರತೀ ಹಳ್ಳಿಯಲ್ಲಿ ಕನಿಷ್ಟ ಒಬ್ಬ ಮಹಿಳೆಗೆ ಪ್ಯಾಡ್ ತಯಾರಿಕೆಯ ಉದ್ಯೋಗ ಕಲ್ಪಿಸಿ ಅವರ ಮೂಲಕ ತಳ ಮಟ್ಟದಲ್ಲಿ ಪ್ಯಾಡ್ ಬಳಕೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತೀ ಹಳ್ಳಿಯಲ್ಲೂ ಸದಾ ಕಾಲ ಪ್ಯಾಡ್‌ಗಳು ಲಭ್ಯವಾಗುವಂತೆ ಮಾಡುವುದು ಇವರ ಕನಸು.
ರೈಲು ನಿಲ್ದಾಣ, ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ವೆಂಡಿಂಗ್ ಮೆಷಿನ್‌ಗಳ ಮೂಲಕ ಸುಲಭವಾಗಿ ಕಡಿಮೆ ದರಗಳಲ್ಲಿ ಪ್ಯಾಡ್ ದೊರೆಯುವಂತೆ ವ್ಯವಸ್ಥೆ ಕಲ್ಪಿಸುವ ಯೋಜನೆಯಲ್ಲಿದ್ದಾರೆ.
ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ, ನಗರ ಸಭೆಯ ಆಯುಕ್ತರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿಗಳು, ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ತಾಪಕ ನಿರ್ದೇಶಕರ ಗಮನಕ್ಕೆ ತರಲಾಗಿದೆ. ಮಹಿಳೆಯರ ಋತು ಚಕ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಮ್ಮದೇ ಅದ ಹೊಸ ಆಶಯ ಕನಸುಗಳನ್ನು ಹೊತ್ತು ಸೇವೆಗಿಳಿದಿರುವ ಇವರ ಕಾರ್ಯ ಮಹಿಳಾಲೋಕದಲ್ಲಿ ಆಶಾಕಿರಣ ಹುಟ್ಟಿಸುತ್ತಿದೆ.
ಭಾರತಿಯವರು ತಂಡವೊಂದನ್ನು ಕಟ್ಟಿಕೊಂಡು ಹೊಸಬಗೆಯ ಪರಿಸರ ಸ್ನೇಹಿ ಹಾಗೂ ಮಹಿಳಾ ಸ್ನೇಹಿ ಆರೋಗ್ಯ ಪೂರಕ ನ್ಯಾಪ್ಕಿನ್‌ಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಇವು ಸುಮಾರು 8 ಪದರಗಳನ್ನು ಹೊಂದಿದ್ದು, ಯಾವುದೇ ರಾಸಾಯನಿಕ ಅಂಶಗಳ ಬಳಕೆ ಮತ್ತು ಸುಗಂಧ ದ್ರವ್ಯಗಳನ್ನು ಬಳಸುತ್ತಿಲ್ಲ. ಬಳಸಿದ ಈ ಪ್ಯಾಡ್‌ಗಳನ್ನು ಸಂಗ್ರಹಿಸಿ ಗಿಡಗಳಿಗೆ ಹಾಕಿ ಮಣ್ಣನ್ನು ಸುರಿದರೆ ಸಾಕು, ಸುಮಾರು 3 ತಿಂಗಳಲ್ಲಿ ಅದು ಕೊಳೆತು ಸಸ್ಯಗಳಿಗೆ ಕಾಂಪೋಸ್ಟ್ ಗೊಬ್ಬರವಾಗುತ್ತದೆ. ಇದರಲ್ಲಿ ಬಳಸಿರುವ ಜೆಲ್‌ಶೀಟ್ ಮಾರುಕಟ್ಟೆಯ ಪ್ಯಾಡ್‌ಗಳಿಗಿಂತ 5 ಪಟ್ಟು ಹೆಚ್ಚು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಕೆಲಸಕ್ಕೆ ಹೋಗುವ ಮಹಿಳೆಯರು ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ಬಟ್ಟೆಯ ಮೇಲೆ ಕಲೆಯಾಗುವ ಭಯವಿಲ್ಲದೇ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಇಲ್ಲಿ ಬಳಸಿರುವ ಮೇಲಿನ ಪದರ ತೆಳುವಾದ ಗಾಳಿಯಾಡುವ ಹತ್ತಿಯಿಂದ ತಯಾರಾಗಿರುವುರಿಂದ ಅಲ್ಲಿ ಗರ್ಭಕೋಶದ ಸೋಂಕು ಆಗುವುದಿಲ್ಲ. ಇಲ್ಲಿನ ನೀಲಿಯಾದ ಅನಿಯನ್ ಶೀಟ್ ಕೀಟಾಣುಗಳು ಮತ್ತು ಸೂಕ್ಷ್ಮಾಣು ಜೀವಿಗಳಿಂದಾಗುವ ಸಮಸ್ಯೆಯನ್ನು ತಡೆಗಟ್ಟುತ್ತದೆ. ಹಿಂಬದಿಗೆ ಹಾಕಿರುವ ಪದರವು ಸೋರಿಕೆಯನ್ನು ತಡೆಗಟ್ಟುತ್ತದೆ. ಇದರೊಂದಿಗೆ ಎರಡು ಪದರು ವುಡ್ ಪಲ್ಪ್ ಶೀಟ್‌ನ್ನು ಕೂಡಾ ಬಳಸಲಾಗುತ್ತದೆ. ಬೀಳದೆ ಗಟ್ಟಿಯಾಗಿ ಅಂಟಿಕೊಳ್ಳಲು ಸಾವಯವ ರಿಲೀಸ್ ಪೇಪರ್ ಬಳಸಲಾಗುತ್ತದೆ. ಇದನ್ನು ಯುವಿ ಸ್ಟೆರಲಾಯ್‌ಜ್ಡ್ ಮಾಡಿ ಪ್ಯಾಕಿಂಗ್ ಮಾಡಲಾಗುತ್ತದೆ.
ನಂತರ ಅದು ಬಳಕೆಗೆ ಯೋಗ್ಯವಾಗಿರುತ್ತದೆ. ಅತಿ ತೆಳ್ಳಗಿನ ಹಾಗು ಹಗುರವಾಗಿಯೂ ಇರುವ ಕಾರಣ ಪ್ರಯಾಣ ಸಮಯದಲ್ಲಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೂ ಬಳಕೆಗೆ ಯೋಗ್ಯವಾಗಿದೆ ಎನ್ನುವುದು ಬಳಸಿದವರ ಅಭಿಪ್ರಾಯ. ಈ ಪ್ಯಾಡ್‌ಗಳ ಕುರಿತು ಪ್ರಚಲಿತ ಸ್ತ್ರೀ ರೋಗ ತಜ್ಞೆಯೊಬ್ಬರ ಮುಖಾಂತರ ವಿದೇಶದಲ್ಲೂ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ.