ಎನ್‌ಡಿಎ ಮತ್ತು ‘ಇಂಡಿಯಾ’ ಮೈತ್ರಿಕೂಟಗಳಲ್ಲಿ ಬದಲಾವಣೆಯ ಸಾಧ್ಯತೆ?
ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣ ಮತ್ತು ಎನ್‌ಸಿಪಿ ಶರದ್ ಪವಾರ್ ಬಣ ಎರಡೂ ಫಡ್ನವೀಸ್‌ಗೆ ಹತ್ತಿರವಾಗುತ್ತ, ಹೊಗಳುತ್ತ ಇರುವುದು ಏನನ್ನು ಸೂಚಿಸುತ್ತದೆ? ಏಕನಾಥ್ ಶಿಂದೆಯನ್ನು ಹೊರ ಕಳಿಸಿ, ನಾವು ನಿಮ್ಮ ಜೊತೆ ಇರುತ್ತೇವೆ ಎಂಬ ಸಂದೇಶವನ್ನೇ ಅದು ಸ್ಪಷ್ಟವಾಗಿ ತಲುಪಿಸುತ್ತಿರುವ ಹಾಗಿದೆ. ಮುಂದೆ ನಡೆಯಲಿರುವ ಬಿಎಂಸಿ ಚುನಾವಣೆಯಲ್ಲೂ ಜೊತೆಯಾಗುವ ಸುಳಿವನ್ನು ನೀಡಿದ ಹಾಗಿದೆ ಅದು. ತೆರೆಯ ಹಿಂದಿನ ಈ ಆಟ ‘ಇಂಡಿಯಾ’ ಒಕ್ಕೂಟಕ್ಕೆ ದೊಡ್ಡ ಹೊಡೆತವಾಗುವಂತೆ ಕಾಣಿಸುತ್ತಿದೆ. ಇಂಥದೇ ರಾಜಕೀಯ ವೇದಿಕೆ ಬಿಹಾರದಲ್ಲಿಯೂ ರೂಪುಗೊಳ್ಳುತ್ತಿದೆಯೆ?
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂದೆ ಬಲವನ್ನು ಬಳಸಿಕೊಂಡೇ ಭಾರೀ ಗೆಲುವು ಸಾಧಿಸಿದ್ದ ಬಿಜೆಪಿ ಈಗ ಅವರನ್ನೇ ಬದಿಗೆ ಸರಿಸಿ ಸಿಎಂ ಪಟ್ಟ ತನ್ನದಾಗಿಸಿಕೊಂಡಿದೆ. ಬಿಹಾರದಲ್ಲಿಯೂ ಬಿಜೆಪಿ ಅಂಥದೇ ತಂತ್ರ ಅನುಸರಿಸಲಿದೆಯೇ ಎಂಬ ಅನುಮಾನಗಳೂ ಮೂಡಿವೆ.
ಮಹಾರಾಷ್ಟ್ರದಲ್ಲಿ ಶಿಂದೆಗೆ ಆದ ಸ್ಥಿತಿಯೆ 2025ರ ಚುನಾವಣೆ ನಂತರ ತಮಗೂ ಆಗಬಹುದೆ ಎಂಬ ಪ್ರಶ್ನೆ ನಿತೀಶ್ ಅವರನ್ನೂ ಕಾಡದೆ ಇರಲಾರದು. ಈಗ ಅವರೆದುರು ಇರುವ ದಾರಿ ಮತ್ತೊಮ್ಮೆ ಮೈತ್ರಿ ಬದಲಾಯಿಸುವುದೇ ಅಥವಾ ಇದ್ದಲ್ಲಿಯೇ ಇದ್ದು ತನ್ನದೇ ಆದ ರೀತಿಯಲ್ಲಿ ಆಟವಾಡುವುದೆ?
ಇದೆಲ್ಲದರ ನಡುವೆ ಅಲ್ಲಿ ವಿದ್ಯಾರ್ಥಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತಲೇ ಇದೆ. ಅದೀಗ ಸುಪ್ರೀಂ ಕೋರ್ಟ್ ಮುಟ್ಟಿದೆ. ಜ.7ರಂದು ವಿಚಾರಣೆ ನಡೆಯಲಿದೆ.
ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿಯೂ ವಿದ್ಯಾರ್ಥಿಗಳ ಅಸಮಾಧಾನವನ್ನು ಸರಕಾರಗಳು ಎದುರಿಸುತ್ತಲೇ ಇವೆ. ಈ ಹೊತ್ತಲ್ಲಿ ಅವುಗಳ ಲಾಭ ಪಡೆಯಬಲ್ಲಂಥ ನಾಯಕತ್ವ ವಿಪಕ್ಷಗಳಲ್ಲಿ ಇದೆಯೆ? ಅಥವಾ ವಿಪಕ್ಷಗಳನ್ನೇ ತನ್ನ ಬುಟ್ಟಿಗೆ ಹಾಕಿಕೊಳ್ಳಲು ಅಧಿಕಾರಸ್ಥ ಬಿಜೆಪಿ ಹೊಂಚು ಹಾಕುತ್ತಿದೆಯೇ ?
ದಿಲ್ಲಿಯ ಸ್ಥಿತಿ ನೋಡಿದರೆ, ಅಲ್ಲಿ ಅರವಿಂದ ಕೇಜ್ರಿವಾಲ್ ಬಿಜೆಪಿ ಎದುರು ಗೆಲ್ಲಬಲ್ಲ ವಿಶ್ವಾಸ ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಕೂಡ ವಿರುದ್ಧವಾದರೆ ಗೆಲುವು ಕಷ್ಟ.
ಇನ್ನು ಮಹಾರಾಷ್ಟ್ರಕ್ಕೆ ಬಂದರೆ, ಅಲ್ಲಿ ಮೊನ್ನೆಮೊನ್ನೆಯವರೆಗೂ ದೇವೇಂದ್ರ ಫಡ್ನವೀಸ್ ವಿರುದ್ಧ ಶಿವಸೇನೆ ಉದ್ಧವ್ ಠಾಕ್ರೆ ಬಣ ಮತ್ತು ಎನ್‌ಸಿಪಿ ಶರದ್ ಪವಾರ್ ಬಣ ಹರಿಹಾಯುತ್ತಿದ್ದವು. ಆದರೆ ಅವೆರಡೂ ಪಕ್ಷಗಳು, ಆ ಪಕ್ಷಗಳ ಸಂಜಯ್ ರಾವುತ್, ಸುಪ್ರಿಯಾ ಸುಳೆ ಇಬ್ಬರೂ ದೇವೇಂದ್ರ ಫಡ್ನವೀಸ್ ಅವರನ್ನು ಈಗ ಹೊಗಳತೊಡಗಿರುವುದನ್ನು ಕಾಣಬಹುದು.
ನಕ್ಸಲ್ ಪೀಡಿತ ಗಡ್ಚಿರೋಲಿ ಜಿಲ್ಲೆಯನ್ನು ಉಕ್ಕಿನ ನಗರವನ್ನಾಗಿ ನಿರ್ಮಿಸುವ ದೇವೇಂದ್ರ ಫಡ್ನವೀಸ್ ಅವರ ಪ್ರಯತ್ನಗಳನ್ನು ಶಿವಸೇನೆ ಉದ್ಧವ್ ಠಾಕ್ರೆ ಬಣ ಶ್ಲಾಘಿಸಿದೆ.
ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ, ಫಡ್ನವೀಸ್ ಅವರನ್ನು ‘ದೇವ ಭಾವು’ ಎಂದು ಅದು ಉಲ್ಲೇಖಿಸಿದೆ.
ಅವರು ಹೊಸ ವರ್ಷದ ಮುನ್ನಾದಿನ ವಿದರ್ಭದ ಮಹಾರಾಷ್ಟ್ರದ ಅತ್ಯಂತ ದೂರದ ಜಿಲ್ಲೆಯಾದ ಗಡ್ಚಿರೋಲಿಗೆ ಭೇಟಿ ನೀಡಿ ಅಭಿವೃದ್ಧಿಯ ಅಧ್ಯಾಯವನ್ನು ಪ್ರಾರಂಭಿಸಿದರು ಎಂದು ಹೇಳಿದೆ.
ಫಡ್ನವೀಸ್ ಜಿಲ್ಲೆಯಲ್ಲಿ ಏನಾದರೂ ಹೊಸದನ್ನು ಮಾಡುತ್ತಾರೆ ಮತ್ತು ಅಲ್ಲಿನ ಆದಿವಾಸಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತಾರೆ ಎಂದು ತೋರುತ್ತಿದೆ ಎಂದು ಹಾಡಿ ಹೊಗಳಿದೆ.
ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ನಾಗ್ಪುರದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಸುಮಾರು ಎರಡು ವಾರಗಳ ನಂತರ ಈ ಅಪರೂಪದ ಪ್ರಶಂಸೆ ಬಂದಿದೆ. ಹೀಗಿರುವಾಗ ಏಕನಾಥ್ ಶಿಂದೆ ಕಥೆಯೇನು? ಅವರು ಮಾಯವಾದಂತೆ ಆಗಿದ್ದಾರೆ.
ಇನ್ನೊಂದೆಡೆ ‘ಇಂಡಿಯಾ’ ಒಕ್ಕೂಟದ ಕಥೆಯೇನು ಎಂಬ ಪ್ರಶ್ನೆಯೂ ಎದ್ದಿದೆ.
‘ಇಂಡಿಯಾ’ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ನಾಯಕಿಯಾಗಬೇಕು ಎಂದು ಶುರವಾದದ್ದು, ದಿಲ್ಲಿಯಲ್ಲಿ ಕಾಂಗ್ರೆಸ್ ಜೊತೆಗೆ ಎಎಪಿ ಮೈತ್ರಿ ಮಾಡಿಕೊಳ್ಳದೇ ಇರುವ ನಿರ್ಧಾರದವರೆಗೂ ಹೋಗಿದೆ.
ಎನ್‌ಡಿಎಯಲ್ಲಿ ಕೂಡ ಇರುವ ಮೈತ್ರಿ ಪಕ್ಷಗಳು ನಾಳೆ ಬದಲಾಗಬಹುದು, ಹೊಸ ಪಕ್ಷಗಳು ಬಂದು ಸೇರಬಹುದು.
ನಿತೀಶ್ ಕುಮಾರ್ ಕೂಡ ಹೊರ ಹೋಗುವವರಲ್ಲಿ ಒಬ್ಬರಾದರೆ ಅಚ್ಚರಿಯೇನಿಲ್ಲ. ಉದ್ಧವ್ ಠಾಕ್ರೆ, ನಿತೀಶ್ ಕುಮಾರ್, ಏಕನಾಥ್ ಶಿಂದೆ, ಸಂಜಯ್ ರಾವುತ್ ಇವರೆಲ್ಲರೂ ಈಗ ಯೋಚನೆಗೆ ಬಿದ್ದಿದ್ದಾರೆ.
ಶರದ್ ಯಾದವ್ ಕೂಡ ಯೋಚಿಸುತ್ತಿದ್ದಾರೆ.
ನಾಳೆ ಆಗಬಹುದಾದ ಬದಲಾವಣೆಗಳು ರಾಜಕೀಯ ಸಮೀಕರಣವನ್ನೇ ಬದಲಿಸಬಹುದು.
ಬಿಹಾರದಲ್ಲಿ ಇದೇ ವೇಳೆ ಪ್ರಶಾಂತ್ ಕಿಶೋರ್ ರಾಜಕೀಯವೂ ಶುರುವಾಗಿದೆ. ಬಿಹಾರ ಲೋಕಸೇವಾ ಆಯೋಗ(ಬಿಪಿಎಸ್‌ಸಿ) ಇತ್ತೀಚೆಗೆ ನಡೆಸಿದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಆಮರಣಾಂತ ಉಪವಾಸ ಆರಂಭಿಸಿದ್ದಾರೆ.
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸುವಂತೆ ನಿತೀಶ್ ಕುಮಾರ್ ಸರಕಾರಕ್ಕೆ 48 ಗಂಟೆಗಳ ಡೆಡ್‌ಲೈನ್ ನೀಡಿದ ಮೂರು ದಿನಗಳ ನಂತರ, ರಾಜ್ಯದ ರಾಜಧಾನಿಯ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಶಾಂತ್ ಕಿಶೋರ್ ಆಮರಣಾಂತ ಉಪವಾಸ ಆರಂಭಿಸಿದ್ದಾರೆ.
ಡಿಸೆಂಬರ್ 13 ರಂದು ನಡೆದ ಪರೀಕ್ಷೆ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸುವುದು ನನ್ನ ಪ್ರಮಖ ಬೇಡಿಕೆಯಾಗಿದೆ. ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳನ್ನು ಹಣಕ್ಕೆ ಮಾರಾಟ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅಂತಹ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಪ್ರಶಾಂತ್ ಕಿಶೋರ್ ಒತ್ತಾಯಿಸಿದ್ದಾರೆ.
ಬಿಹಾರದಲ್ಲಿನ ವಾಸ್ತವ ಏನೆಂಬುದು ಗೊತ್ತಿದೆ. 80-90 ಲಕ್ಷ ನೋಂದಾಯಿತ ನಿರುದ್ಯೋಗಿಗಳಿದ್ದಾರೆ. ಆದರೆ ಅವರ ನಿಜವಾದ ಸಂಖ್ಯೆ ಕೋಟಿಗೂ ಅಧಿಕವಿದೆ.
ಈ ವಿಚಿತ್ರ ರಾಜಕೀಯದಲ್ಲಿ ಈಗ ವಿಪಕ್ಷಗಳೇ ಇಲ್ಲವಾಗುತ್ತಿರುವ ಸ್ಥಿತಿ ಬಂದಿದೆಯೆ?
ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣ ಮತ್ತು ಎನ್‌ಸಿಪಿ ಶರದ್ ಪವಾರ್ ಬಣ ಎರಡೂ ಫಡ್ನವೀಸ್‌ಗೆ ಹತ್ತಿರವಾಗುತ್ತ, ಹೊಗಳುತ್ತ ಇರುವುದು ಏನನ್ನು ಸೂಚಿಸುತ್ತದೆ? ಏಕನಾಥ್ ಶಿಂದೆಯನ್ನು ಹೊರ ಕಳಿಸಿ, ನಾವು ನಿಮ್ಮ ಜೊತೆ ಇರುತ್ತೇವೆ ಎಂಬ ಸಂದೇಶವನ್ನೇ ಅದು ಸ್ಪಷ್ಟವಾಗಿ ತಲುಪಿಸುತ್ತಿರುವ ಹಾಗಿದೆ. ಮುಂದೆ ನಡೆಯಲಿರುವ ಬಿಎಂಸಿ ಚುನಾವಣೆಯಲ್ಲೂ ಜೊತೆಯಾಗುವ ಸುಳಿವನ್ನು ನೀಡಿದ ಹಾಗಿದೆ ಅದು. ತೆರೆಯ ಹಿಂದಿನ ಈ ಆಟ ‘ಇಂಡಿಯಾ’ ಒಕ್ಕೂಟಕ್ಕೆ ದೊಡ್ಡ ಹೊಡೆತವಾಗುವಂತೆ ಕಾಣಿಸುತ್ತಿದೆ.
ಇಂಥದೇ ರಾಜಕೀಯ ವೇದಿಕೆ ಬಿಹಾರದಲ್ಲಿಯೂ ರೂಪುಗೊಳ್ಳುತ್ತಿದೆಯೆ?
ಇದರಲ್ಲಿ ಪ್ರಶಾಂತ್ ಕಿಶೋರ್ ನಿರ್ವಹಿಸುವ ಪಾತ್ರವೇನು?
ಈ ಹಂತದಲ್ಲಿ ಚಿರಾಗ್ ಪಾಸ್ವಾನ್ ಮತ್ತು ಜೀತನ್ ರಾಮ್ ಮಾಂಝಿ ನಿರ್ವಹಿಸಲಿರುವ ಪಾತ್ರವೂ ಮುಖ್ಯವಾಗುತ್ತಿದೆ.
ಯಾರೇ ಇರಲಿ, ಯಾರೇ ಹೋಗಲಿ ಎನ್ನುವ ಹಂತದಲ್ಲಿ ಬಿಜೆಪಿ ಇರುವ ಹಾಗಿದೆ. ನಿತೀಶ್ ಹೊರಹೋಗಿ ಏಕಾಂಗಿಯಾಗಿ ಚುನಾವಣೆ ಎದುರಿಸಿದರೂ, ಲಾಲೂ-ನಿತೀಶ್ ಹೋರಾಟದಲ್ಲಿ ತಾನು ರಾಜಕೀಯ ಲಾಭ ಮಾಡಿಕೊಳ್ಳಲು ಅದು ಬಯಸಿದೆ.
ಹೀಗೆ ಎನ್‌ಡಿಎ ಮತ್ತು ‘ಇಂಡಿಯಾ’ ಎರಡು ಮೈತ್ರಿಕೂಟಗಳಲ್ಲಿ ಹಲವು ಬದಲಾವಣೆಗಳು ಕಾಣಬಹುದಾದ ಸಾಧ್ಯತೆ ಮೊದಲ ಬಾರಿಗೆ ತೋರುತ್ತಿದೆ.