ಕಾಡಿನ ‘ನಾಡಿ’ ಮಿಡಿತ

ತಾನೋರ್ವ ಮಹಾನ್ ಸಾಹಿತಿ ಎಂಬ ಭ್ರಮೆಯಿಂದ ಅವರು ಬದುಕಲಿಲ್ಲ. ಅತ್ಯಂತ ಸರಳ, ಪ್ರಾಮಾಣಿಕ ಬದುಕು ಅವರದು. ವೇಷ ಭೂಷಣದಲ್ಲಿಯೂ ಅವರು ಜನ ಸಾಮಾನ್ಯರನ್ನೇ ಪ್ರತಿನಿಧಿಸಿದರು. ಆಕರ್ಷಕ ಶರೀರ ಹಾಗೂ ಧ್ವನಿಯನ್ನು ಹೊಂದಿದ್ದ ಅವರು ಗ್ರಾಮಗಳಿಂದ ಹಿಡಿದು ಅಕಾಡಮಿಕ್ ವಲಯದ ಎಲ್ಲ ಬಗೆಯ ವೇದಿಕೆಗಳಲ್ಲಿಯೂ ಸಲ್ಲುವವರು. ಬರೆದುಕೊಂಡು ಮನೆಯಲ್ಲಿ ಕೂಡಲಿಲ್ಲ. ಜನರೊಂದಿಗೆ ಬೆರೆತರು. ಜನರ ಸಮಸ್ಯೆ, ಸಂಭ್ರಮಗಳಲ್ಲಿ ಭಾಗಿಯಾದರು. ಅಪ್ಪಟ ಮನುಷ್ಯ ಪ್ರೇಮಿಯಾಗಿ ಬದುಕಿದರು. ಸಾಮಾಜಿಕ ಬದ್ಧತೆ ತೋರಿದರು. ‘ನಾಡಿ’ ಅನಿರೀಕ್ಷಿತ ಸಾವಿನಿಂದ ನಾಡಿಗೆ ತುಂಬಲಾರದ ನಷ್ಟ, ಸಾಗರದ ಜನತೆಯ ಪಾಲಿಗೆ ಮಹಾ ಆಘಾತ.

Update: 2025-01-07 05:36 GMT

ನಾ. ಡಿಸೋಜ ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ಹೆಚ್ಚು ಜನಪ್ರಿಯ ಹೆಸರು. ಜನಮನ್ನಣೆ ಗಳಿಸಿದ ಲೇಖಕ. ಕನ್ನಡ ಸಾಹಿತ್ಯ ವಿಮರ್ಶೆಯ ಅವಜ್ಞೆಯನ್ನು ಮೀರಿ ಜನಮಾನಸದಲ್ಲಿ ಬೆಳೆದ ಡಿಸೋಜ ಅವರಂತಹ ಲೇಖಕ ಪ್ರಾಯಶಃ ಇನ್ನೊಬ್ಬರಿಲ್ಲ.

ಡಿಸೋಜ ನಿಜಾರ್ಥದಲ್ಲಿ ಜನ ಸಾಮಾನ್ಯರ ಲೇಖಕ. ಈ ಕಾರಣದಿಂದಾಗಿಯೇ ಅವರು ಸರಳವಾಗಿ ಬರೆದರು. ಸರಳವಾಗಿಯೇ ಬದುಕಿದರು. ಅವರ ಪಾಲಿಗೆ ಸಾಹಿತ್ಯ ಬೇರೆಯಲ್ಲ, ಸಮಾಜ ಬೇರೆಯಲ್ಲ. ಜನರ ಬೇಕು ಬೇಡಗಳಿಗೆ ಸ್ಪಂದಿಸುವ ಯಾವುದೇ ಹೋರಾಟವಾಗಿರಲಿ ಅಲ್ಲಿ ಅವರು ಮುಂದಿರುತ್ತಿದ್ದರು. ಹೋರಾಟಕ್ಕೆ ನಾಯಕತ್ವ ನೀಡುತ್ತಿದ್ದರು.

ಮಲೆನಾಡಿನ ಜನಸಾಮಾನ್ಯನ ಬದುಕನ್ನು ತೆರೆದ ಕಣ್ಣಿಂದ ನೋಡಿರುವ ಡಿಸೋಜ ಸದಾ ತಮ್ಮೊಳಗಿನ ಬರಹಗಾರನನ್ನು ಎಚ್ಚರವಾಗಿಟ್ಟುಕೊಂಡವರು. ಅವರನ್ನು ನದೀ ಮೂಲದ ಲೇಖಕ ಎಂದು ಗುರುತಿಸಲಾಗಿದೆ. ನಾಡಿ ಶರಾವತಿ ನದಿಯ ಇಕ್ಕೆಲಗಳ ಬದುಕನ್ನು ತಮ್ಮ ಬರಹದ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ನಿಜ, ಅವರ ಬರಹ ಶುರುವಾದದ್ದೇ ನದಿಗಳಿಗೆ ಅಡ್ಡಲಾಗಿ ವಡ್ಡು ಕಟ್ಟಿದ್ದರಿಂದ ಅಲ್ಲಿನ ಮೂಲ ನಿವಾಸಿಗಳ ಮೇಲೆ ಉಂಟಾದ ಪರಿಣಾಮವನ್ನು ಕಟ್ಟಿಕೊಡುವುದರಿಂದ. ‘ಮುಳುಗಡೆ’ ಅವರಿಗೆ ಹೆಸರು ತಂದುಕೊಟ್ಟ ಕಾದಂಬರಿ. ಸುಧಾ ವಾರ ಪತ್ರಿಕೆಯ ಸಾಹಿತ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ತರುವಾಯ ಡಿಸೋಜ ಹೆಸರು ಮನೆಮಾತಾಯಿತು. ಇದರ ನಂತರ ಅವರು ಶರಾವತಿ ನದಿಗೆ ಡ್ಯಾಮ್ ಕಟ್ಟಿದ್ದರಿಂದ ಮುಳುಗಡೆಯಾದ ಅನೇಕ ವಸ್ತು ವಿಷಯಗಳನ್ನು ದ್ವೀಪ, ವಡ್ಡು ಮೊದಲಾದ ಕೃತಿಗಳನ್ನು ಬರೆದರು. ಮನುಕುಲದ ಉದ್ಧಾರಕ್ಕೆ ಕಾರಣವಾದ ನದಿಗಳು ಮಾನವನ ಹಸ್ತಕ್ಷೇಪದಿಂದ ಅದು ಹೇಗೆ ವಿನಾಶದ ಕಥೆಗಳನ್ನು ಸೃಷ್ಟಿಸಬಲ್ಲವು ಎಂಬುದನ್ನು ಅವರ ನೀರಿನ ಸುತ್ತ ಇರುವ ಬರಹಗಳು ಹೇಳುತ್ತವೆ.

ಡಿಸೋಜ ಅವರ ಸಾಹಿತ್ಯದ ಹರವು ವಿಶಾಲವಾದುದು. ಕಥೆ, ಕಾದಂಬರಿ, ನೀಳ್ಗತೆ, ಮಕ್ಕಳ ಸಾಹಿತ್ಯ, ನಾಟಕ, ಪ್ರಬಂಧ ಮೊದಲಾದಂತೆ ಕನ್ನಡದ ಬಹುತೇಕ ಸಾಹಿತ್ಯ ಪ್ರಕಾರಗಳಲ್ಲಿ ಬರೆದಿದ್ದಾರೆ. ಆದರೂ ಡಿಸೋಜ ಮುಖ್ಯವಾಗಿ ಕಥೆ ಹಾಗೂ ಕಾದಂಬರಿಕಾರ. ಅವರ ಬರಹದ ಹಿಂದೆ ಅನಕೃ, ಮಾಸ್ತಿ, ಕಾರಂತ, ಕುವೆಂಪು ಅವರ ಪ್ರಭಾವವಿದೆ. ಸಮುದಾಯದ ತುಡಿತದಿಂದ ಅಭಿವ್ಯಕ್ತಿಗೊಳ್ಳುವ ನಾಡಿ ಬರಹ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ. ‘‘ಸಾಹಿತಿ ತನ್ನ ನಾಡಿನ, ತನ್ನ ಸಮುದಾಯದ ಅನುಭೂತಿಯಾಗಿ, ಕಿವಿಯಾಗಿ, ಕಣ್ಣಾಗಿ, ಹೃದಯವಾಗಿ ತನ್ನ ಯುಗದ ವಾಣಿಯಾಗಿ ಇರುತ್ತಾನೆ’’ ಎನ್ನುವ ಮ್ಯಾಕ್ಸಿಮ್ ಗಾರ್ಕಿ ಹೇಳುವ ಮಾತಿಗೆ ನಾಡಿ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಜನಸಮುದಾಯದ ಸಂಕಟಗಳಿಗೆ ಅವರು ಯಾವತ್ತೂ ತೆರೆದ ಕಣ್ಣು, ತೆರೆದ ಹೃದಯದಿಂದ ಸ್ಪಂದಿಸಿದರು. ತಾವು ಕಂಡ ತವಕಗಳನ್ನು ಮಾರ್ಮಿಕವಾಗಿ ಓದುಗರಿಗೆ ತಲುಪಿಸಿದರು. ಇದನ್ನು ಕೆ.ವಿ. ಸುಬ್ಬಣ್ಣ ‘‘ನೆರೆಹೊರೆಯ ಆಪ್ತತೆ ಮತ್ತು ಕಾಳಜಿಗಳೇ ನಾಡಿ ಬರಹದ ಮೂಲ ದ್ರವ್ಯ’’ ಎಂದಿದ್ದಾರೆ. ಅವರ ಬರಹಗಳನ್ನು ವರದಿ ಡಾಕ್ಯುಮೆಂಟರಿ ಎಂದು ಗುರುತಿಸುವುದೂ ಉಂಟು. ಡಿಸೋಜ ಅವರ ಒಡನಾಡಿ ಹಾಗೂ ಹಿರಿಯ ವಿದ್ವಾಂಸ ಡಾ. ಜಿ.ಎಸ್. ಭಟ್‌ರವರು ಇದನ್ನು ನಿರಾಕರಿಸಿ ‘‘ನಾಡಿ ಕತೆ ಕಾದಂಬರಿಗಳು ಡಾಕ್ಯುಮೆಂಟರಿ ಬೇಸ್ಡ್... ವಾಸ್ತವ ಘಟನೆಗಳ ದಾಖಲೀಕರಣ ಉದ್ದೇಶದಿಂದ ತೊಡಗುವಂಥವು, ಆದರೆ ಅವು ಬೆಳೀತಾ ಬೆಳೀತಾ ಸಾಹಿತ್ಯ ಕೃತಿಗಳಾಗಿ ಬದಲಾಗೋದು ಅವರ ಬರವಣಿಗೆಯ ಪವಾಡ’’ ಎಂದಿರುವುದು ಸರಿಯಾಗಿದೆ.

ನದಿ ಚಲನಶೀಲತೆ, ಪರಿವರ್ತನೆ, ಪುನರ‌್ರಚನೆ ಹಾಗೂ ಶುಭ್ರತೆಯ ಸಂಕೇತ. ಈ ಗುಣ ನಾಡಿಯವರ ಬದುಕು ಬರಹಗಳೆರಡನ್ನೂ ಆವರಿಸಿದೆ ಮತ್ತು ರೂಪಿಸಿದೆ. ನಿಂತು ಪಾಚಿಗಟ್ಟುವ ಜಾಯಮಾನ ಅವರದಲ್ಲ. ಯುಗಧರ್ಮಕ್ಕೆ, ವಿಶ್ವಮುಖಿ ಚಿಂತನೆಗಳಿಗೆ ಅವರ ಸಾಹಿತ್ಯ ತನ್ನನ್ನು ಯಾವತ್ತೂ ತೆರೆದುಕೊಂಡಿದೆ. ಶರಾವತಿಯಂತೆಯೇ ನಾಡಿ ಸದಾ ಹರಿವ ನದಿ.

ಕುವೆಂಪು ಸಾಹಿತ್ಯದಲ್ಲಿನ ಪ್ರಕೃತಿಯ ಆರಾಧನೆ ತೇಜಸ್ವಿ ಸಾಹಿತ್ಯದ ವಿಸ್ಮಯ ಹಾಗೂ ಹುಡುಕಾಟ ಈ ಎರಡನ್ನೂ ನಾಡಿ ಸಾಹಿತ್ಯದಲ್ಲಿ ಗುರುತಿಸಬಹುದಾದ ಗುಣ. ಕುಂಜಾಲು ಕಣಿವೆಯ ಕೆಂಪು ಹೂವು ಮುಂತಾದ ಕೃತಿಗಳನ್ನು ಅವಲೋಕಿಸಬಹುದು.

ಡಿಸೋಜ ಮಹಾಕವಿ ಕುವೆಂಪು ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದವರು. ಅವರಂತೆ ಕೊನೆಯವರೆಗೂ ಜಾತಿ, ಮತ, ಧರ್ಮಗಳ ಮಿತಿಗಳನ್ನು ದಾಟಿ ಬರೆದರು, ಹಾಗೆಯೇ ಬದುಕಿದರು. ಕ್ರೈಸ್ತ ಧರ್ಮದಲ್ಲಿ ಹುಟ್ಟಿ ಬೆಳೆದರೂ ಚರ್ಚಿನ ನಿರ್ಬಂಧಗಳಿಂದ ಮುಕ್ತವಾಗಿದ್ದರು. ಹಾಗಾಗಿಯೇ ಅವರು ಎಲ್ಲ ಸಮುದಾಯದವರಿಗೂ ಬೇಕಾದವರಾದರು. ಇಗರ್ಜಿಯ ಸುತ್ತಲಿನ ಹತ್ತು ಮನೆಗಳು, ಬಾಮನ್, ನೆಲೆ, ಪ್ರೀತಿಯೊಂದೆ ಸಾಲದೆ ಮೊದಲಾದ ಅವರ ಕ್ರೈಸ್ತ ಸಂವೇದನೆಯ ಕಾದಂಬರಿಗಳನ್ನು ಈ ಮೀರುವಿಕೆಯ ನೆಲೆಯಿಂದಲೇ ನೋಡಬಹುದು. ತಮ್ಮದೇ ಧರ್ಮದ ಸರಿತಪ್ಪುಗಳನ್ನು ಟೀಕಿಸಲು ಹಿಂಜರಿಯಲಿಲ್ಲ.

ನಾಡಿನ ದುಡಿಯುವ ಜನರ ಸ್ವಾಭಿಮಾನಿ ಜನಾಂದೋಲನವಾದ ಕಾಗೋಡು ರೈತ ಹೋರಾಟದ ಸುತ್ತ ನಾಡಿ ಹಲವು ಸಂಕಥನಗಳನ್ನು ಸೃಷ್ಟಿದ್ದಾರೆ. ಕೊಳಗ ಈ ಹಿನ್ನೆಲೆಯಲ್ಲಿ ಉತ್ತಮ ಕೃತಿ. ಮುಳುಗಡೆಯ ಹಾಗೆಯೇ ಕೊಳಗ ಕೂಡ ಕಥೆಯ ಶೀರ್ಷಿಕೆ ಮಾತ್ರವಾಗದೆ ಅದೊಂದು ಶಕ್ತ ರೂಪಕವಾಗಿ ಬೆಳೆಯುತ್ತದೆ. ಭೂ ಹೋರಾಟದಿಂದ ಪ್ರೇರಿತವಾದ ಇನ್ನೊಂದು ಕಾದಂಬರಿ ‘ತಿರುಗೋಡಿನ ರೈತ ಮಕ್ಕಳು’ ಅಂತೆಯೇ ‘ಕುರ್ಚಿ’ ಮೊದಲಾದ ಕಥೆ, ಕಾದಂಬರಿಗಳೊಂದಿಗೆ ಹಲವಾರು ಬಿಡಿಲೇಖನಗಳನ್ನೂ ಬರೆದಿದ್ದಾರೆ. ಮಕ್ಕಳ ಸಾಹಿತ್ಯವನ್ನು ಅವರೆಂದೂ ನಿರ್ಲಕ್ಷಿಸಲಿಲ್ಲ. ಹಕ್ಕಿಗೊಂದು ಗೂಡು ಕೊಡಿ, ದೇವರಿಗೇ ದಿಕ್ಕು, ತಬ್ಬಲಿ, ಭೂತದ ಎದಿರು ಬೇತಾಳ ಮೊದಲಾದ ನಾಟಕಗಳನ್ನು ಬರೆದರು. ಹಲವು ಶಾಲೆಗಳಿಗೆ ಹೋಗಿ ಕಥೆ ಹೇಳಿದರು. ಅವರನ್ನು ಹುರಿದುಂಬಿಸಿದರು. ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಕೇಂದ್ರ ಸಾಹಿತ್ಯ ಅಕಾಡಮಿಯು ಗುರುತಿಸಿತು.

ನಾ. ಡಿಸೋಜ ಅವರನ್ನು ಮೃದು ಹೃದಯದ ಬಂಡಾಯಗಾರ ಎಂದು ಅನೇಕರು ಬಣ್ಣಿಸಿದ್ದಿದೆ. ಮೇಲ್ನೋಟಕ್ಕೆ ಈ ಮಾತು ನಿಜ. ಅವರ ಒಳಗಿನ ವ್ಯಕ್ತಿ ಒಬ್ಬ ಮಹಾ ಬಂಡಾಯಗಾರ ಎಂಬುದೇ ಸತ್ಯ. ಸಾಹಿತ್ಯ, ಸಂಗೀತ, ಸಂಸ್ಕೃತಿ, ರಂಗಭೂಮಿ, ಸಾಮಾಜಿಕ ಹೋರಾಟದ ನೆಲೆವೀಡಾಗಿರುವ ಸಾಗರದ ನೆಲದಲ್ಲಿ 2005ನೇ ಇಸವಿ ಸಾಗರದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ. ಗಣೇಶಹಬ್ಬದ ಹೊತ್ತಲ್ಲಿ ಇಲ್ಲಿನ ಕೆಲವು ಶಕ್ತಿಗಳು ಊರಿಗೆ ಬೆಂಕಿ ಹಚ್ಚಿ ಸಂಭ್ರಮಿಸಿದರು. ಇದೊಂದು ರಾಜಕೀಯ ಪ್ರೇರಿತ ದೊಂಬಿಯಾಗಿತ್ತು. ಆಗ ಸಾಗರದ ಸಜ್ಜನರೆಲ್ಲರೂ ಸೇರಿ ‘ನನ್ನ ಪ್ರೀತಿಯ ಸಾಗರ’ ಎಂಬ ಹೆಸರಿನಲ್ಲಿ ಸೌಹಾರ್ದ ಸಭೆ ಜಾಥಾ ಆಯೋಜಿಸಲಾಯಿತು. ಆ ಸಂಧರ್ಭದಲ್ಲಿ ಯು.ಆರ್. ಅನಂತಮೂರ್ತಿ, ರಾಜೇಂದ್ರ ಚೆನ್ನಿ ಹಾಗೂ ನಾ. ಡಿಸೋಜ ಮಾತಾಡಿದರು. ಒಂದರ್ಥದಲ್ಲಿ ಸಾಗರದ ಸೌಹಾದರ್ ಚರಿತ್ರೆಗೆ ಕೊಳ್ಳಿ ಹಚ್ಚಿದವರ ವಿರುದ್ಧ ಗುಡುಗಿದ್ದರು. ಜಾತಿ ಧರ್ಮ ರಾಜಕಾರಣ ಇವು ಯಾವುದೂ ನಮ್ಮ ಸಾಮಾಜಿಕ ಆರೋಗ್ಯಕ್ಕೆ ಧಕ್ಕೆ ತರಬಾರದು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಸಾಗರದಂತಹ ಊರಲ್ಲಿ ಹೀಗಾಗಿ ಹೋಯಿತಲ್ಲ ಎಂಬ ಆಕ್ರೋಶ, ಹತಾಶೆ, ಸಂಕಟ ಅವರ ಮಾತಿನ ಉದ್ದಕ್ಕೂ ವ್ಯಕ್ತಗೊಂಡಿತು. ಸಾಗರದಲ್ಲಿ ಇದೆಲ್ಲಾ ಸಂಭವಿಸುತ್ತಿದ್ದಾಗ ಸಮೀಪದ ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ ರಾಜ್ಯ, ರಾಷ್ಟ್ರ, ಅಂತರ್‌ರಾಷ್ಟ್ರೀಯ ಖ್ಯಾತಿಯ ಸಾಹಿತಿ, ಬುದ್ಧಿಜೀವಿಗಳು ಚರ್ಚೆ, ಗೋಷ್ಠಿ ಸಂವಾದಗಳಲ್ಲಿ ತಣ್ಣಗೆ ಭಾಗವಹಿಸಿದ್ದರು. ಕಲೆಗೂ ಬದುಕಿಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ.

ಯಾವುದೇ ಮತ, ಧರ್ಮಗಳ ಹಬ್ಬ, ಹರಿದಿನಗಳಲ್ಲಿ ಅವರ ತಾಯಿ ಪಾಯಸ ಮಾಡಿ ಓಣಿಯ ಮಕ್ಕಳಿಗೆ ಹಂಚುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಿದ್ದರು.

ತಾನೋರ್ವ ಮಹಾನ್ ಸಾಹಿತಿ ಎಂಬ ಭ್ರಮೆಯಿಂದ ಅವರು ಬದುಕಲಿಲ್ಲ. ಅತ್ಯಂತ ಸರಳ, ಪ್ರಾಮಾಣಿಕ ಬದುಕು ಅವರದು. ವೇಷ ಭೂಷಣದಲ್ಲಿಯೂ ಅವರು ಜನ ಸಾಮಾನ್ಯರನ್ನೇ ಪ್ರತಿನಿಧಿಸಿದರು. ಆಕರ್ಷಕ ಶರೀರ ಹಾಗೂ ಧ್ವನಿಯನ್ನು ಹೊಂದಿದ್ದ ಅವರು ಗ್ರಾಮಗಳಿಂದ ಹಿಡಿದು ಅಕಾಡಮಿಕ್ ವಲಯದ ಎಲ್ಲ ಬಗೆಯ ವೇದಿಕೆಗಳಲ್ಲಿಯೂ ಸಲ್ಲುವವರು. ಬರೆದುಕೊಂಡು ಮನೆಯಲ್ಲಿ ಕೂಡಲಿಲ್ಲ. ಜನರೊಂದಿಗೆ ಬೆರೆತರು. ಜನರ ಸಮಸ್ಯೆ, ಸಂಭ್ರಮಗಳಲ್ಲಿ ಭಾಗಿಯಾದರು. ಅಪ್ಪಟ ಮನುಷ್ಯ ಪ್ರೇಮಿಯಾಗಿ ಬದುಕಿದರು. ಸಾಮಾಜಿಕ ಬದ್ಧತೆ ತೋರಿದರು. ‘ನಾಡಿ’ ಅನಿರೀಕ್ಷಿತ ಸಾವಿನಿಂದ ನಾಡಿಗೆ ತುಂಬಲಾರದ ನಷ್ಟ, ಸಾಗರದ ಜನತೆಯ ಪಾಲಿಗೆ ಮಹಾ ಆಘಾತ.

ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಿಸೋಜ ಹೆಸರು ಘೋಷಣೆಯಾದ ಸಂದರ್ಭ. ಸಾಗರದ ಗಾಂಧಿ ಮೈದಾನದಲ್ಲಿ ಅವರಿಗೊಂದು ನಾಗರಿಕ ಸನ್ಮಾನವನ್ನು ಏರ್ಪಡಿಸಲಾಗಿತ್ತು. ಗಾಂಧಿ ಮೈದಾನ ಅಕ್ಷರಶಃ ತುಂಬಿ ತುಳುಕಾಡಿತು. ಇಷ್ಟೊಂದು ಜನಪ್ರಿಯತೆ ಗಳಿಸಲು ಒಬ್ಬ ಲೇಖಕನಿಗೆ ಹೇಗೆ ಸಾಧ್ಯವಾಯಿತು? ಅವರೊಬ್ಬ ಬರಹಗಾರ ಮಾತ್ರವಾಗಿದ್ದರೆ ಈ ಗೌರವಾದರ ಸಿಗುತ್ತಿತ್ತೆ? ನಾಡಿ ಒಬ್ಬ ಬರಹಗಾರನಾಗಿ, ಸಂಘಟಕನಾಗಿ, ಮಾತುಗಾರನಾಗಿ, ಹೋರಾಟಗಾರನಾಗಿ - ಎಲ್ಲಕ್ಕಿಂತ ಮುಖ್ಯವಾಗಿ ಘನವಾದ ಬದುಕನ್ನು ಜೀವಿಸಿದ ಸಂತನಾಗಿ ಕಂಡಿರಬೇಕು. ಆದ್ದರಿಂದಲೇ ಎಲ್ಲ ಸಮುದಾಯಗಳಿಂದ ಅವರ ಅಭಿಮಾನಿಗಳು ಸಾಗರದಲ್ಲಿ ಸಾಗರವಾಗಿ ಸೇರಿದ್ದರು. ಸನ್ಮಾನಿಸಿ ಸಂಭ್ರಮಿಸಿದರು. ‘ಇವ ನಮ್ಮವ’ನೆಂದು ಅಭಿಮಾನಪಟ್ಟರು. ಎಣೆಯಿಲ್ಲದ ಈ ಜನಪ್ರೀತಿಯನ್ನು ‘ಜನಪ್ರಿಯತೆಯ’ ಹೆಸರಲ್ಲಿ, ಸಾಹಿತ್ಯದ ಅತಿ ಗಂಭೀರ ಮಾತುಗಳಿಂದ ತಳ್ಳಿ ಹಾಕುವುದು ಉಚಿತವೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಸರ್ಫ್ರಾಜ್ ಚಂದ್ರಗುತ್ತಿ, ಸಾಗರ

contributor

Similar News