ಮತದಾರರ ಪಟ್ಟಿಯಲ್ಲಿ ಆಗುತ್ತಿರುವ ಅಕ್ರಮ ಆರೋಪಗಳ ಬಗ್ಗೆ ಚುನಾವಣಾ ಆಯೋಗ ಸಮರ್ಪಕ ಉತ್ತರವೇಕೆ ನೀಡುತ್ತಿಲ್ಲ?
ದಿಲ್ಲಿಯಲ್ಲಿ ಚುನಾವಣೆ ಘೋಷಣೆಯಾಗಿದೆ. ಫೆಬ್ರವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಕಳೆದ ಒಂದು ತಿಂಗಳಿನಿಂದ, ಎಎಪಿ ದಿಲ್ಲಿಯ ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದೆ. ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗದಿಂದ ಇದುವರೆಗೂ ನಿಖರ ಉತ್ತರ ಸಿಕ್ಕಿಲ್ಲ.
ಕೆಲವರ ಚಹರೆ ಕದ್ದು ಸಾವಿರಾರು ಮಂದಿಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುತ್ತಿದೆ ಎಂಬ ಆಪ್ ಆರೋಪ ನಿಜವೇ ಆಗಿದ್ದರೆ ಅದು ಅತ್ಯಂತ ಕಳವಳಕಾರಿ ಸಂಗತಿ. ಚುನಾವಣಾ ಆಯೋಗ ಈ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಏನೆಂದು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು.
ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿಯೂ ಈ ಆರೋಪಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.
ಎಎಪಿ ಸುಳ್ಳು ಆರೋಪ ಮಾಡಿಲ್ಲ, ಸಾಕ್ಷಿ ಸಮೇತ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗಾದರೆ ಈ ವಿಚಾರದಲ್ಲಿ ಇನ್ನೂ ಸ್ಪಷ್ಟ ಕ್ರಮ ಏಕೆ ಕೈಗೊಂಡಿಲ್ಲ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ.
ಆಯೋಗದ ಸುದ್ದಿಗೋಷ್ಠಿಯಲ್ಲಿ ದಿಲ್ಲಿಯ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ, ಹೊಸ ಹೆಸರುಗಳನ್ನು ಸೇರಿಸುವ ಬಗ್ಗೆ ಎಎಪಿ ಎತ್ತಿದ ತಕರಾರುಗಳ ಬಗ್ಗೆ ಪತ್ರಕರ್ತರು ಯಾರೂ ಪ್ರಶ್ನೆ ಕೇಳಲೇ ಇಲ್ಲ.
ದಿಲ್ಲಿ ಮತದಾರರ ಪಟ್ಟಿಯಲ್ಲಿ 20 ದಿನಗಳ ಅಂತರದಲ್ಲಿ 5 ಲಕ್ಷ ಹೆಸರುಗಳುನ್ನು ಸೇರಿಸುವ ಅರ್ಜಿ ಬಂದಿರುವುದು ಎಲ್ಲಿಂದ? ಇದು ಪತ್ತೆಯಾಗಿಯೇ ಇಲ್ಲ. ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಕೋರಿರುವವರು ಕೂಡ ತಾವು ಹಾಗೆ ಮಾಡಿಲ್ಲ ಎಂದೇ ಹೇಳುತ್ತಿದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕು ಎಂಬುದು ಎಎಪಿ ಒತ್ತಾಯವಾಗಿದೆ.
ಡಿಸೆಂಬರ್ 16ರ ನಂತರ ಹೊಸದಾಗಿ ಹೆಸರು ಸೇರ್ಪಡೆ ಮಾಡುವುದು ಸುಲಭವಿಲ್ಲ. ಹಾಗಾದರೆ ತನಿಖೆಯಾಗಬೇಕಾಗುತ್ತದೆ.
ನಿಗದಿತ ದಿನಾಂಕದ ನಂತರವೂ 5 ಲಕ್ಷ ಜನ ಹೆಸರು ಸೇರಿಸಲು ಮನವಿ ಮಾಡಿಕೊಂಡಿರುವುದಾಗಿ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ. ಅಕ್ಟೋಬರ್ ನಂತರವೇ 3 ಲಕ್ಷ ಹೊಸ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.
‘ದಿ ಹಿಂದೂ’ ವರದಿಯ ಪ್ರಕಾರ 1,41,613 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಹೊಸದಿಲ್ಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಶೇ. 10 ಹೊಸ ಮತದಾರರನ್ನು ಸೇರಿಸಲಾಗಿದೆ ಹಾಗೂ ಶೇ. 5.5 ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ದಿಲ್ಲಿ ಸಿಎಂ ಆತಿಶಿ ಆರೋಪಿಸಿದ್ದಾರೆ.
ಈ ವಿಷಯದಲ್ಲಿ ಚುನಾವಣಾ ಆಯೋಗದ ನಡೆಯನ್ನು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆ ನಡೆಸದ ಕಾರಣ ಚುನಾವಣಾ ಆಯೋಗದ ಪಾತ್ರ ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ.
ಶೇ.10ರಷ್ಟು ಮತದಾರರನ್ನು ಸೇರಿಸಿ, ಶೇ.5.5ರಷ್ಟು ಮತದಾರರನ್ನು ತೆಗೆದುಹಾಕುವ ಈ ಕ್ರಮವೇ ಇಡೀ ಚುನಾವಣೆಯಲ್ಲಿ ಆಟ ಆಡಿಬಿಡುವ ಪಿತೂರಿಯಾಗಿದೆ ಎಂದು ಆತಿಶಿ ಹೇಳಿದ್ದಾರೆ. ಕೇವಲ 84 ಜನ 4 ಸಾವಿರಕ್ಕೂ ಹೆಚ್ಚು ಮತದಾರರ ಹೆಸರು ತೆಗೆದುಹಾಕಲು ಅರ್ಜಿ ಹಾಕಿದ್ದಾರೆ. ಈ ಜನರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮತದಾರರ ಪಟ್ಟಿಗಳ ಈ ತಿರುಚುವಿಕೆ ಇವಿಎಂ ತಿರುಚುವಿಕೆಗಿಂತಲೂ ಹೆಚ್ಚಿನ ಕಳವಳವನ್ನು ಹುಟ್ಟುಹಾಕಿದೆ.
ಕಳೆದ ವರ್ಷವೂ, ಇಂಥದೇ ದೂರು ಇದ್ದ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಆದರೆ, ಮತದಾರರಿಗೆ ಮುಂಚಿತವಾಗಿ ತಿಳಿಸದೆ ಹೆಸರುಗಳನ್ನು ತೆಗೆಯಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು. ಮತದಾರರ ಪಟ್ಟಿಗಳ ಪರಿಷ್ಕರಣೆ ಕುರಿತಾದ ಚುನಾವಣಾ ಆಯೋಗದ ಕೈಪಿಡಿಯಲ್ಲಿರುವುದನ್ನೇ ಆಯೋಗ ಉಲ್ಲೇಖಿಸಿತ್ತು. ಆದರೆ ನಿಜವಾಗಿಯೂ ಈ ನಿಯಮದ ಪಾಲನೆಯಾಗುತ್ತಿದೆಯೆ?
ಇದನ್ನು ಪತ್ತೆ ಮಾಡಲೆಂದೇ ‘ನ್ಯೂಸ್‌ಲಾಂಡ್ರಿ’ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆಗಳನ್ನು ನಡೆಸಿತ್ತು. ಮತದಾರರ ಪಟ್ಟಿ ತಿರುಚುವಿಕೆಯು ಬಿಜೆಪಿಗೆ ಲಾಭ ಮಾಡಿದೆ ಎಂದು ವರದಿ ಆರೋಪಿಸಿತ್ತು.
ಮತದಾರರ ಪಟ್ಟಿಯನ್ನು ತಿರುಚಲಾಗುತ್ತಿದೆ ಎಂಬ ಆರೋಪಗಳನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅಲ್ಲಗಳೆದಿದ್ದಾರೆ. ಸಮರ್ಪಕವಾದ ದಾಖಲೀಕರಣ, ಕ್ಷೇತ್ರ ಪರಿಶೀಲನೆ ಹಾಗೂ ಸಂಬಂಧಿತ ವ್ಯಕ್ತಿಗೆ ದೂರು ಸಲ್ಲಿಸುವ ಅವಕಾಶ ನೀಡದೆ ಮತದಾರರ ಹೆಸರನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮತದಾರರ ಹೆಸರು ಸೇರ್ಪಡೆ ಹಾಗೂ ಅಳಿಸುವಿಕೆ ಪ್ರಕ್ರಿಯೆ ಪಾರದರ್ಶಕ, ಕಠಿಣವಾಗಿದೆ. ದೋಷಪೂರಿತ ಬದಲಾವಣೆ ಸಾಧ್ಯವೇ ಇಲ್ಲ ಎಂದು ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮತದಾರರ ಪಟ್ಟಿ ಪ್ರಕ್ರಿಯೆಯ ಪ್ರತೀ ಹಂತವೂ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಹೊಂದಿದೆ. ಕಟ್ಟುನಿಟ್ಟಿನ ಶಿಷ್ಟಾಚಾರಕ್ಕೆ ಒಳಪಡದೆ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಅಸಾಧ್ಯ. ಈ ಕುರಿತು ಹಲವು ಹಂತಗಳಲ್ಲಿ ಆಕ್ಷೇಪಿಸಲು ಪ್ರತೀ ಪಕ್ಷಕ್ಕೂ ಅಧಿಕಾರವಿದೆ ಎಂದು ಅವರು ಹೇಳಿದ್ದಾರೆ.
ಆದರೆ ದಿಲ್ಲಿಯಲ್ಲಿ 20 ದಿನಗಳಲ್ಲಿ 5 ಲಕ್ಷ ಹೆಸರುಗಳ ಸೇರ್ಪಡೆಗೆ ಅರ್ಜಿ ಬಂದುದರ ಬಗ್ಗೆ ಏಕೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳೇ ಬರಲಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಒಂದು ದಿನ ಮುಂಚೆಯಷ್ಟೇ ಎಎಪಿ ಸುದ್ದಿಗೋಷ್ಠಿಯಲ್ಲಿ ಹೊಸ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸುವ ವಿಚಾರವಾಗಿ ಅರ್ಜಿ ಬಂದಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು ಮತ್ತು ಅನುಮಾನ ವ್ಯಕ್ತಪಡಿಸಿತ್ತು. ಹತ್ತು ಸಾವಿರ ಜನರು ತಮ್ಮ ಹೆಸರು ಸೇರಿಸುವಂತೆ ಅರ್ಜಿ ಹಾಕಿರುವ ಬಗ್ಗೆ ಕೇಸ್ ದಾಖಲಿಸಿ ತನಿಖೆ ನಡೆಸುವ ಬಗ್ಗೆ ಎಎಪಿ ಒತ್ತಾಯ ಮಾಡಿದೆ. ಹೀಗಿರುವಾಗ ಇದು ನಿಜವಾಗಿದ್ದಲ್ಲಿ, ಇದರ ಬಗ್ಗೆ ತನಿಖೆಯಾಗಬೇಕಲ್ಲವೆ ಅಥವಾ ಎಎಪಿ ಸುಳ್ಳು ಹೇಳುತ್ತಿದೆಯೇ ಎನ್ನುವಂಥ ಪ್ರಶ್ನೆಗಳೇ ಸುದ್ದಿಗೋಷ್ಠಿಯಲ್ಲಿ ಬರಲಿಲ್ಲ.
ಅರವಿಂದ ಕೇಜ್ರಿವಾಲ್ ಸ್ಪರ್ಧಿಸುತ್ತಿರುವ ಹೊಸದಿಲ್ಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂಬುದು ಎಎಪಿ ಆರೋಪವಾಗಿದೆ. ಆದರೆ ಇದಾವುದರ ಬಗ್ಗೆಯೂ ಪ್ರಶ್ನೆಗಳೇ ಬರದಿದ್ದುದು ವಿಪರ್ಯಾಸ.
‘‘ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ದಿಲ್ಲಿಯಾದ್ಯಂತ ಡಿ.15ರಿಂದ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸುತ್ತಿದೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರ ಮತದಾರರ ಹೆಸರನ್ನು ಅಳಿಸಿ ಹಾಕಲು ಯತ್ನಿಸಿದೆ’’ ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದ್ದರು.
‘‘ಹೊಸದಾಗಿ 7,500 ಮತದಾರರ ಹೆಸರನ್ನು ಸೇರ್ಪಡೆ ಮಾಡಲು ಸಂಚು ರೂಪಿಸಲಾಗಿದೆ. ನಾನು ಪ್ರತಿನಿಧಿಸುವ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಇಂಥ ಪ್ರಯತ್ನಗಳು ನಡೆಯುತ್ತಿದ್ದು, ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಶೇ. 12ರಷ್ಟು ಮತದಾರರ ಹೆಸರನ್ನು ಅಕ್ರಮದ ಹೆಸರಿನಲ್ಲಿ ತೆಗೆದು ಹಾಕಲು ಮುಂದಾಗಿದೆ’’ ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದ್ದರು.
ಎಎಪಿ ನಾಯಕ ರಾಘವ್ ಛಡ್ಡಾ ಕೂಡ ಈ ವಿಚಾರವಾಗಿ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ. ಆಕ್ಷೇಪ ಎತ್ತಿರುವವರು ಕೇಳಿರುವುದು ಸರಿಯಿದೆಯೇ ಇಲ್ಲವೇ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ವಿಳಾಸ ಬದಲಾವಣೆ ಇತ್ಯಾದಿಗಳ ಕಾರಣಕ್ಕೆ ಸ್ವತಃ ಒಬ್ಬರು ವಿನಂತಿಸುವುದು ಒಂದು ಬಗೆಯಾದರೆ, ಇನ್ನಾರೋ ಮತದಾರರ ಹೆಸರಿನ ಬಗ್ಗೆ ಆಕ್ಷೇಪವೆತ್ತಿ ಹೆಸರು ತೆಗೆಯಲು ಕೇಳುವುದು ಇನ್ನೊಂದು ಬಗೆ. ಹಾಗೆ ತಕರಾರೆತ್ತುವ ವ್ಯಕ್ತಿ ಚುನಾವಣಾ ಆಯೋಗಕ್ಕೆ ಆ ಬಗ್ಗೆ ಫಾರ್ಮ್ 7ರ ಮೂಲಕ ದೂರುತ್ತಾನೆ. ಆತನನ್ನು ಆಯೋಗ ಕರೆದು ವಿಚಾರಿಸಬೇಕಾಗುತ್ತದೆ. ಆದರೆ ದಿಲ್ಲಿಯಲ್ಲಿ ಜನವರಿ 2, 3 ಮತ್ತು 4ರಂದು ಆಯೋಗದ ವಿಚಾರಣೆ ಹೊಸದಿಲ್ಲಿ ವಿಧಾನಸಭೆ ಕ್ಷೇತ್ರದ ಸಂಬಂಧ ನಡೆಯಿತು.
ಮತದಾರರ ಹೆಸರುಗಳ ಬಗ್ಗೆ ಆಕ್ಷೇಪವೆತ್ತಿದ್ದ 11 ಮಂದಿ ತಾವು ಯಾರದೇ ಹೆಸರು ತೆಗೆಯಲು ಅರ್ಜಿ ಹಾಕಿಯೇ ಇಲ್ಲ ಎಂದು ಹೇಳಿರುವ ಬಹಳ ವಿಲಕ್ಷಣ ಘಟನೆ ನಡೆದಿದೆ ಎಂಬ ವಿಚಾರವನ್ನು ರಾಘವ್ ಛಡ್ಡಾ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.
ಆ 11 ಮಂದಿ ತಮ್ಮ ಹೆಸರನ್ನು ದುರ್ಬಳಕೆ ಮಾಡಲಾಗಿದೆ, ತಾವು ಈ ಫಾರ್ಮ್ ಭರ್ತಿ ಮಾಡಿಯೂ ಇಲ್ಲ, ಸಹಿ ಹಾಕಿಯೂ ಇಲ್ಲ, ಯಾರದೇ ಹೆಸರಿನ ಬಗ್ಗೆ ತಮಗೆ ಆಕ್ಷೇಪವೂ ಇಲ್ಲ ಎಂದಿರುವ ಬಗ್ಗೆ ಛಡ್ಡಾ ಹೇಳಿದ್ದಾರೆ.
ಛಡ್ಡಾ ಮಾಡಿರುವ ಈ ಆರೋಪ ಗಂಭೀರವಾದುದಾಗಿದೆ.
ಹಾಗಾದರೆ ಯಾರು ಯಾರದೋ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ? ಯಾರು ಯಾರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ? ಇದರ ಬಗ್ಗೆ ತನಿಖೆಯಾಗಬೇಕಿರುವುದು ಅಗತ್ಯ.
ಒಂದು ತಿಂಗಳಿಂದ ಎಎಪಿ ಈ ಪ್ರಶ್ನೆಯನ್ನು ಎತ್ತುತ್ತಲೇ ಇದೆ. ರಾಘವ್ ಛಡ್ಡಾ ಈ ಆರೋಪಗಳನ್ನು ಸುಮ್ಮನೆ ಮಾಡುತ್ತಿಲ್ಲ. ಆಯಾ ವ್ಯಕ್ತಿಗಳ ಹೆಸರು ತೆಗೆದುಕೊಂಡೇ ಯಾರ್ಯಾರ ಹೆಸರಲ್ಲಿ ಎಷ್ಟೆಷ್ಟು ಅರ್ಜಿಗಳು ಬಂದಿವೆ ಎಂಬುದನ್ನು ಹೇಳಿದ್ದಾರೆ.
ಅವರೆಲ್ಲರ ಹೆಸರು, ವಿಳಾಸ, ಗುರುತಿನ ಪತ್ರ ದುರ್ಬಳಕೆ ಮಾಡಿ, ಅವರ ಹೆಸರಿನಲ್ಲಿ ಮತದಾರರ ಹೆಸರಿನ ಬಗ್ಗೆ ಆಕ್ಷೇಪವೆತ್ತಿ ಹೆಸರು ತೆಗೆದುಹಾಕಲು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬುದನ್ನು ಛಡ್ಢಾ ಬಹಿರಂಗಪಡಿಸಿದ್ದಾರೆ.
ಎಎಪಿ ನಾಯಕ ಸಂಜಯ್ ಸಿಂಗ್ ಅವರ ಪತ್ನಿಯ ಹೆಸರು ತೆಗೆಯಲು ಕೂಡ ಅರ್ಜಿ ಬಂದಿರುವ ಬಗ್ಗೆ ಛಡ್ಡಾ ಪ್ರಸ್ತಾಪಿಸಿದ್ದಾರೆ. ಇದು ಬಹಳ ವ್ಯವಸ್ಥಿತವಾಗಿ ನಡೆಯುತ್ತಿರುವ ಅಕ್ರಮವಾಗಿದೆ ಎಂದು ಅವರು ಆರೋಪಿಸಿದ್ಧಾರೆ.
ಎಎಪಿ ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಹತಾಶೆಯಿಂದ ಹೀಗೆಲ್ಲಾ ಮಾಡುತ್ತಿರುವುದಾಗಿ ಪ್ರತಿ ಆರೋಪ ಮಾಡಿದೆ.
ಕಳೆದ ಕೆಲವು ಚುನಾವಣೆಗಳಿಂದಲೂ ಮತದಾನದ ಅಂಕಿ ಅಂಶ, ಸಂಜೆ 5ರ ನಂತರದ ಮತದಾನದ ಪ್ರಮಾಣದಲ್ಲಿ ತೀವ್ರ ಏರಿಕೆ, ಚಲಾವಣೆಯಾಗಿರುವ ಮತಗಳ ಪ್ರಮಾಣಕ್ಕೂ ಎಣಿಕೆಯಾಗಿರುವ ಪ್ರಮಾಣಕ್ಕೂ ನಡುವೆ ಕಂಡಿರುವ ವ್ಯತ್ಯಾಸ ಹೀಗೆ ಹತ್ತು ಹಲವು ಬಗೆಯಲ್ಲಿ ಗಂಭೀರ ಪ್ರಶ್ನೆಗಳು ಎದ್ದಿವೆ.
ಪರಕಾಲ ಪ್ರಭಾಕರ್ ಕೂಡ ಈ ಬಗ್ಗೆ ಆಕ್ಷೇಪವೆತ್ತಿದ್ದರಲ್ಲದೆ, ಸಂಜೆ 5ರ ನಂತರ ಎಷ್ಟು ಮತದಾರರಿದ್ದರೆಂಬುದನ್ನು ಮತಗಟ್ಟೆಗಳ ವೀಡಿಯೊ ದಾಖಲೆ ಮೂಲಕ ತಿಳಿಯಬಹುದು ಎಂದಿದ್ದರು.
ಆದರೆ ಈಗ ಆಯೋಗದ ನಿಯಮವನ್ನೇ ಬದಲಿಸಿದ್ದು, ಅದರ ಪ್ರಕಾರ, ವೀಡಿಯೊ ದಾಖಲೆ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಹೀಗಿರುವಾಗ ಹೇಗೆ ಚುನಾವಣೆಯಲ್ಲಿ ಪಾರದರ್ಶಕತೆ ಸಾಧ್ಯ?
ಚಂಡಿಗಡ ಮೇಯರ್ ಚುನಾವಣೆಯಲ್ಲಿ ಏನಾಯಿತು ಎನ್ನುವುದನ್ನು ನೊಡಿದ್ದೇವೆ. ಬಿಜೆಪಿ ಜೊತೆ ಸಂಪರ್ಕವಿದ್ದ ಅನಿಲ್ ಮಸ್ಸಿ ಆಡಿದ್ದ ಆಟ ಸಿಸಿಟಿವಿ ಕಾರಣಕ್ಕೇ ಬಯಲಿಗೆ ಬಂದಿತ್ತು. ಅಲ್ಲಿ ಎಎಪಿಯೇ ಬಲಿಪಶುವಾಗಿತ್ತು.
ಹಾಗಾಗಿಯೇ ಅದು ಮತದಾರರ ಪಟ್ಟಿಯ ಬಗ್ಗೆ ಇಷ್ಟೊಂದು ಗಂಭೀರವಾಗಿ ಪ್ರಶ್ನೆಗಳನ್ನು ಎತ್ತುವುದಕ್ಕೆ ಶುರು ಮಾಡಿದೆ.
ಆದರೆ ಬಿಜೆಪಿ ದಿಲ್ಲಿಯಲ್ಲಿ ತಂಗಿರುವ ಅಕ್ರಮ ರೊಹಿಂಗ್ಯಾ ಮತ್ತು ಬಾಂಗ್ಲಾದೇಶೀಯರನ್ನು ಚುನಾವಣೆಯಲ್ಲಿ ಮತಬ್ಯಾಂಕ್‌ಗಳಾಗಿ ಬಳಸಿಕೊಳ್ಳಲು ದಾಖಲೆಗಳು ಮತ್ತು ಹಣದ ಮೂಲಕ ಎಎಪಿ ಮತ್ತು ಕೇಜ್ರಿವಾಲ್ ಸಹಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತದೆ.
ಈ ಆರೋಪ ನಿಜವೊ ಅಲ್ಲವೊ ಎನ್ನುವುದು ಕೇಂದ್ರ ಗೃಹ ಸಚಿವಾಲಯಕ್ಕೇ ಗೊತ್ತಿರುತ್ತದೆ. ಆಯೋಗಕ್ಕೂ ಗೊತ್ತಿರುತ್ತದೆ. ಆರೋಪ ಸುಳ್ಳಾಗಿದ್ದರೆ, ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಹೇಳುವ ದಿಟ್ಟತನವನ್ನೂ ತೋರಿಸಬೇಕಲ್ಲವೆ?
ಲೋಕಸಭೆ ಚುನಾವಣೆಗೆ ಹೋಲಿಸಿಕೊಂಡರೆ ಈಗ ದಿಲ್ಲಿ ವಿಧಾನಸಭೆ ಚುನಾವಣೆ ವೇಳೆ ದಿಲ್ಲಿಯಲ್ಲಿ 8 ಲಕ್ಷ ಮತದಾರರ ಹೆಚ್ಚಳವಾಗಿದೆ. ಇದು ಹೇಗೆ? ಇದರ ಬಗ್ಗೆ ತನಿಖೆಯಾಗುವುದಿಲ್ಲವೆ?
ಎಎಪಿ ಈಗ ಒಂದೊಂದೇ ಪ್ರಕರಣವನ್ನು ಎತ್ತಿಕೊಂಡು ಜನರ ಮುಂದಿಡುತ್ತಿದೆ. 2024ರ ಡಿಸೆಂಬರ್ 6ರಿಂದ ಕೇಜ್ರಿವಾಲ್ ಇದನ್ನು ಆರಂಭಿಸಿದ್ದಾರೆ.
ಮತದಾರರಿಗೆ ಯಾವುದೇ ಬದಲಾವಣೆ ಬಗ್ಗೆ ಮಾಹಿತಿ ನೀಡುವ ಮತ್ತು ಆ ಕ್ಷಣವೇ ಮತದಾರರು ಅದರ ಬಗ್ಗೆ ಪರಿಶೀಲನೆ ಮಾಡಲು ಅವಕಾಶವಾಗುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ತರಬೇಕಿರುವುದು ಅವಶ್ಯ. ಆಗ ಮತದಾರರ ಪಟ್ಟಿ ಪರಿಶೀಲನೆಯ ಪ್ರಕ್ರಿಯೆ ನಿಜವಾಗಿಯೂ ಪೂರ್ಣಗೊಳ್ಳಲು ಸಾಧ್ಯವಿದೆ.
ಒಬ್ಬೊಬ್ಬ ಮತದಾರನನ್ನೂ ರಕ್ಷಿಸುವ ಹೊಣೆ ಚುನಾವಣಾ ಆಯೋಗದ್ದೇ ಆಗಿದೆ. ಯಾರದೋ ಹೆಸರನ್ನು ಇನ್ಯಾರೋ ಮತದಾರರ ಪಟ್ಟಿಯಿಂದ ತೆಗೆದುಹಾಕುವುದಕ್ಕೆ ಅವಕಾಶವಾಗದಂಥ ವ್ಯವಸ್ಥೆಯನ್ನು ಅದು ತರಬೇಕಿದೆ.
ಅದರ ಬದಲು, ಮತದಾರರ ಪಟ್ಟಿಯಲ್ಲಿ ಆಗುತ್ತಿರುವ ಅಕ್ರಮಗಳ ಬಗ್ಗೆ ಪ್ರಶ್ನೆ ಎತ್ತುವ ವಿಪಕ್ಷವನ್ನೇ ಅನುಮಾನದ ಕಣ್ಣಿಂದ ನೋಡುವ ಗೋದಿ ಮೀಡಿಯಾಗಳ ಅವಸ್ಥೆ ಚುನಾವಣಾ ಆಯೋಗದ್ದಾಗಬಾರದು.