ಚರ್ಮದ ಮೇಲಿನ ಗಡ್ಡೆಗಳು ಲೈಪೋಮಾವನ್ನು ಸೂಚಿಸಬಹುದು

Update: 2019-09-08 19:05 GMT

ನಮ್ಮ ಚರ್ಮದಲ್ಲಿ ಕೆಲವೊಮ್ಮೆ ಗಡ್ಡೆಗಳು ಅಥವಾ ಉಬ್ಬಿದ ಗಂಟುಗಳು ಕಾಣಿಸಿಕೊಳ್ಳುತ್ತವೆ. ಇವು ಕೊಬ್ಬಿನ ಗಡ್ಡೆಗಳು ಅಥವಾ ಚರ್ಮದ ಅಂಗಾಂಶದಲ್ಲಿಯ ಬೆಳವಣಿಗೆಯಂತಿರುತ್ತವೆ. ಇಂತಹ ಸ್ಥಿತಿಯನ್ನು ವೈದ್ಯಕೀಯವಾಗಿ ಲೈಪೋಮಾ ಎಂದು ಕರೆಯಲಾಗುತ್ತದೆ. ಇದು ನಿಧಾನವಾಗಿ ಬೆಳವಣಿಗೆಯಾಗುವ ಚರ್ಮರೋಗವಾಗಿದ್ದು, ಚರ್ಮ ಮತ್ತು ಸ್ನಾಯುವಿನ ಅತ್ಯಂತ ಒಳಗಿನ ಪೊರೆಯ ನಡುವೆ ಬೆಳೆಯುವ ಕೊಬ್ಬಿನಿಂದ ಕೂಡಿದ ಗಡ್ಡೆಯಾಗಿದೆ. ಈ ಚರ್ಮ ಸಮಸ್ಯೆಯನ್ನು ನಮ್ಮ ಬೆರಳತುದಿಗಳಿಂದಲೇ ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು,40ರಿಂದ 60 ವರ್ಷ ವಯೋಗುಂಪಿನವರಲ್ಲಿ ಇದು ಸಾಮಾನ್ಯವಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಒಂದಕ್ಕಿಂತ ಹೆಚ್ಚು ಗಡ್ಡೆಗಳು ಕಾಣಿಸಿಕೊಳ್ಳಬಹುದು. ಲೈಪೋಮಾ ಕ್ಯಾನ್ಸರ್‌ಕಾರಕವಲ್ಲ ಮತ್ತು ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಇದಕ್ಕೆ ಚಿಕಿತ್ಸೆಯೂ ಅತ್ಯಗತ್ಯವೇನಲ್ಲ,ಆದರೆ ಲೈಪೋಮಾ ನಿಮ್ಮನ್ನು ಚಿಂತೆಗೀಡುಮಾಡಿದ್ದರೆ,ನೋವುಂಟಾಗುತ್ತಿದ್ದರೆ ಅಥವಾ ದಿನೇದಿನೇ ಬೆಳೆಯುತ್ತಿದ್ದರೆ ಅದನ್ನು ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸಬಹುದಾಗಿದೆ.

ಲೈಪೋಮಾದ ಲಕ್ಷಣಗಳು:

 ಲೈಪೋಮಾ ಶರೀರದ ಯಾವುದೇ ಭಾಗದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಅದು ಚರ್ಮದ ಅಡಿಭಾಗದಲ್ಲಿ ಹೆಚ್ಚಾಗಿ ಉಂಟಾಗುತ್ತದೆ. ಈ ಗಡ್ಡೆಗಳು ಅಥವಾ ದದ್ದುಗಳಂತಹ ಉಬ್ಬುಗಳು ಕತ್ತು, ಭುಜಗಳು, ಹೊಟ್ಟೆ,ತೋಳುಗಳು ಮತ್ತು ತೊಡೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಸ್ಪರ್ಶಕ್ಕೆ ಮೃದುವಾಗಿರುವ ಈ ಗಡ್ಡೆಗಳು ಬೆರಳಿನಿಂದ ಒತ್ತಿದರೆ ಅತ್ತಿತ್ತ ಸರಿಯುತ್ತವೆ. ಈ ಗಡ್ಡೆಗಳು ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣಗಿದ್ದು,ಐದು ಸೆಂ.ಮೀ.ಗೂ ಕಡಿಮೆ ವ್ಯಾಸವನ್ನು ಹೊಂದಿರುತ್ತವೆ. ಆದರೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಗಾತ್ರವು ಇನ್ನಷ್ಟು ದೊಡ್ಡದಾಗಬಹುದು.

ಲೈಪೋಮಾ ಗಡ್ಡೆಗಳು ಬೆಳವಣಿಗೆಯಾಗಿ ಸಮೀಪದ ಅಭಿಧಮನಿಗಳನ್ನು ಒತ್ತುತ್ತಿದ್ದರೆ ಅಥವಾ ಅವು ಹಲವಾರು ರಕ್ತನಾಳಗಳನ್ನು ಒಳಗೊಂಡಿದ್ದರೆ ನೋವು ಉಂಟಾಗುತ್ತದೆ.

► ಲೈಪೋಮಾಕ್ಕೆ ಕಾರಣಗಳು:

ಲೈಪೋಮಾಕ್ಕೆ ಕಾರಣಗಳೇನು ಎನ್ನುವುದು ಸಂಪೂರ್ಣವಾಗಿ ಗೊತ್ತಾಗಿಲ್ಲ. ಅದು ವಂಶವಾಹಿಯ ಮೂಲಕ ಬರಬಹುದು ಅಥವಾ ತನ್ನಿಂತಾನೇ ಕಾಣಿಸಿಕೊಳ್ಳಬಹುದು. ಗಡ್ಡೆಗಳ ಸಂಖ್ಯೆ ಹೆಚ್ಚಾಗಿದ್ದರೆ ಹೆಚ್ಚಿನ ಪ್ರಕರಣಗಳಲ್ಲಿ ವಂಶವಾಹಿ ಕಾರಣವಾಗಿರುತ್ತದೆ. ಹಲವಾರು ಅಂಶಗಳು ಲೈಪೋಮಾಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸಬಲ್ಲವು. ಲೈಪೋಮಾ ಯಾವುದೇ ವಯಸ್ಸಿನಲ್ಲಿಯೂ ಕಾಣಿಸಿಕೊಳ್ಳಬಹುದಾಗಿದ್ದರೂ,40ರಿಂದ 60 ವರ್ಷ ವಯೋಮಾನದವರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಕುಟುಂಬದ ಇತಿಹಾಸದಲ್ಲಿ ಲೈಪೋಮಾ ಇದ್ದರೂ ಅದು ಕಾಡಬಹುದು.

ಹಾಗೆಂದು ಲೈಪೋಮಾ ಅಂತಹ ಗಂಭೀರ ವೈದ್ಯಕೀಯ ಸ್ಥಿತಿಯೇನಲ್ಲ. ಆದರೆ ಶರೀರದ ಯಾವುದೇ ಭಾಗದಲ್ಲಿ ಗಡ್ಡೆಗಳು ಅಥವಾ ಊತ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಅಗತ್ಯವಾದರೆ ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಅವುಗಳನ್ನು ನಿವಾರಿಸಬಹುದು.

ರೋಗನಿರ್ಧಾರ ಹೇಗೆ?:

 ಲೈಪೋಮಾದ ಬೆಳವಣಿಗೆ ಮತ್ತು ಅದರ ವಿಧವನ್ನು ಅರಿತುಕೊಳ್ಳಲು ವೈದ್ಯರು ಕೆಲವು ರೋಗನಿರ್ಧಾರ ಪರೀಕ್ಷೆಗಳನ್ನು ಕೈಗೊಳ್ಳುತ್ತಾರೆ. ಅವರು ಬಯಾಪ್ಸಿಯ ಮೂಲಕ ಗಡ್ಡೆಯ ಸಣ್ಣ ತುಣುಕನ್ನು ತೆಗೆದು ಪ್ರಯೋಗಾಲಯದ ಪರೀಕ್ಷಗೆ ಕಳುಹಿಸಬಹುದು. ಶರೀರದೊಳಗೆ ಲೈಪೋಮಾ ಬೆಳವಣಿಗೆಯನ್ನು ತಿಳಿದುಕೊಳ್ಳಲು ಅಲ್ಟ್ರಾಸೌಂಡ್ ಅಥವಾ ಸಿಟಿ ಸ್ಕಾನ್ ಅಥವಾ ಎಂಆರ್‌ಐ ಅನ್ನು ನಡೆಸಬಹುದು.

► ಚಿಕಿತ್ಸೆ:

ಸಾಮಾನ್ಯವಾಗಿ ಲೈಪೋಮಾಕ್ಕೆ ಚಿಕಿತ್ಸೆಯ ಅಗತ್ಯವಿಲ್ಲ. ಆದರೆ ಅದು ನಿಮ್ಮನ್ನು ಚಿಂತೆಗೀಡು ಮಾಡಿದ್ದರೆ, ನೋವುಂಟಾಗುತ್ತಿದ್ದರೆ ಅದನ್ನು ತೆಗೆಸಿಕೊಳ್ಳುವಂತೆ ವ್ಯೆದ್ಯರು ಸಲಹೆ ನೀಡಬಹುದು.

ಹೆಚ್ಚಿನ ಲೈಪೋಮಾಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಿ ತೆಗೆಯಲಾಗುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ಇವು ಮತ್ತೆ ಕಾಣಿಸಿಕೊಳ್ಳುವುದು ಅಪರೂಪ. ಲಿಪೋಸಕ್ಷನ್ ವಿಧಾನದ ಮೂಲಕವೂ ಲೈಪೋಮಾವನ್ನು ನಿವಾರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News