ಸೆಪ್ಟಂಬರ್ ತಿಂಗಳಿನಲ್ಲಿ ಅಸ್ತಮಾ ಕಾಯಿಲೆ ಉಲ್ಬಣಿಸುವುದು ಏಕೆ?
ಸೆಪ್ಟಂಬರ್ ವಿಶ್ವಾದ್ಯಂತ ಹೆಚ್ಚಿನ ಅಸ್ತಮಾ ರೋಗಿಗಳನ್ನು ಕಾಡುವ ತಿಂಗಳಾಗಿದೆ. ಅಮೆರಿಕದಲ್ಲಿ ಈಗ ವಸಂತಕಾಲ,ಅಂದರೆ ಹೂವುಗಳು ನಳನಳಿಸುತ್ತಿರುತ್ತವೆ ಮತ್ತು ಅವುಗಳ ಪರಾಗ ವಾತಾವರಣದಲ್ಲಿ ಸೇರಿಕೊಂಡು ಅಸ್ತಮಾ ರೋಗಿಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಭಾರತದಲ್ಲಿ ಸೆಪ್ಟಂಬರ್ ತಿಂಗಳಿಗೆ ಮುಂಗಾರು ಮಳೆಯು ಅಂತ್ಯಗೊಳ್ಳುತ್ತದೆ ಮತ್ತು ವಾತಾವರಣವು ಅತ್ಯಂತ ಆರ್ದ್ರವಾಗಿರುತ್ತದೆ ಮತ್ತು ಇದೂ ಅಸ್ತಮಾ ರೋಗಿಗಳಿಗೆ ತೊಂದರೆಯನ್ನುಂಟು ಮಾಡುತ್ತದೆ.
ಒಟ್ಟಾರೆಯಾಗಿ ಹೆಚ್ಚು ಕಡಿಮೆ ವಿಶ್ವದ ಎಲ್ಲ ಭಾಗಗಳಲ್ಲಿ ಸೆಪ್ಟಂಬರ್ ಅಸ್ತಮಾ ರೋಗಿಗಳನ್ನು ಹೆಚ್ಚಾಗಿ ಕಾಡುವ ತಿಂಗಳಾಗಿದೆ.
ಅಸ್ತಮಾ ದೀರ್ಘಕಾಲಿಕ ರೋಗವಾಗಿದೆ. ಅದು ಶ್ವಾಸಕೋಶಗಳಲ್ಲಿ ತಡೆಯನ್ನುಂಟು ಮಾಡುವ ಮೂಲಕ ರೋಗಿಗಳಿಗೆ ಉಸಿರಾಟವನ್ನು ಕಷ್ಟವಾಗಿಸುತ್ತದೆ. ಅಸ್ತಮಾವನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಿಲ್ಲ,ಆದರೆ ಅಸ್ತಮಾ ತೊಂದರೆಯನ್ನು ಹೆಚ್ಚಿಸುವ ಕಾರಣಗಳನ್ನು ನಿವಾರಿಸುವ ಮೂಲಕ ಅದನ್ನು ನಿಯಂತ್ರಿಸಬಹುದಾಗಿದೆ.
ಅಸ್ತಮಾ ದಾಳಿಯಿಂದ,ವಿಶೇಷವಾಗಿ ಸೆಪ್ಟಂಬರ್ ತಿಂಗಳಿನಲ್ಲಿ,ಪಾರಾಗಲು ನೆರವಾಗುವ ಕೆಲವು ಟಿಪ್ಸ್ ಇಲ್ಲಿವೆ......
►ವಾಯುವಿನಲ್ಲಿಯ ಮಾಲಿನ್ಯಕಾರಕಗಳಿಂದ ರಕ್ಷಿಸಿಕೊಳ್ಳಿ
ಮೊಟ್ಟಮೊದಲ ಮತ್ತು ಅತ್ಯಂತ ಮಹತ್ವದ ಹೆಜ್ಜೆಯೆಂದರೆ ಮಾಲಿನ್ಯಭರಿತ ಮತ್ತು ಧೂಳಿನಿಂದ ಕೂಡಿದ ವಾತಾವರಣಕ್ಕೆ ಒಡ್ಡಿಕೊಳ್ಳವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು. ಇದು ಎಲ್ಲ ಅಸ್ತಮಾ ರೋಗಿಗಳಿಗೂ ಅನ್ವಯಿಸುತ್ತದೆ. ಮನೆಯಿಂದ ಹೊರಗೆ ಹೋಗುವುದಿದ್ದರೆ ಗಾಳಿಯಲ್ಲಿ ಮಾಲಿನ್ಯಗಳಿಂದ ರಕ್ಷಿಸಿಕೊಳ್ಳಲು ಮೂಗು ಮತ್ತು ಬಾಯಿಗೆ ಮಾಸ್ಕ್ ಧರಿಸಿ ಇಲ್ಲವೇ ಕರವಸ್ತ್ರದಿಂದ ಮುಚ್ಚಿಕೊಳ್ಳಿ. ಮನೆಯೊಳಗಿದ್ದಾಗ ಕೊಳೆ,ಧೂಳಿನಂತಹ ಅಲರ್ಜಿಕಾರಕಗಳ ಸಂಪರ್ಕವುಂಟಾಗುವುದನ್ನು ನಿವಾರಿಸಿ. ಈ ಕ್ರಮಗಳ ಮೂಲಕ ಅಸ್ತವಾ ದಾಳಿಗಳುಂಟಾಗುವುದನ್ನು ಮತ್ತು ಅದರ ತೀವ್ರತೆಯನ್ನು ನಿಯಂತ್ರಿಸಲು ಸಾಧ್ಯ.
►ಸಾಮಾನ್ಯ ಶೀತದಿಂದ ದೂರವಿರಿ
ಈ ಸಮಯದಲ್ಲಿ ವಾತಾವರಣದಲ್ಲಿನ ಶೀತವನ್ನುಂಟು ಮಾಡುವ ಸೂಕ್ಷ್ಮಜೀವಿಗಳು ಅಸ್ತಮಾ ರೋಗಿಗಳಿಗೆ ಹೆಚ್ಚಿನ ಸಮಸ್ಯೆಗಳನ್ನುಂಟು ಮಾಡುತ್ತವೆ. ಕೆಮ್ಮು ಮತ್ತು ಶೀತ ಅಸ್ತಮಾವನ್ನು ಹೆಚ್ಚಿಸುವ ಕಾರಣಗಳಲ್ಲಿ ಸೇರಿವೆ. ಸೆಪ್ಟಂಬರ್‌ನಲ್ಲಿ ಅಸ್ತಮಾ ದಾಳಿಗೆ ಸಿಲುಕದಂತೆ ರೋಗಿಗಳು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಕೆಮ್ಮು ಮತ್ತು ಶೀತದಿಂದ ಪೀಡಿತ ವ್ಯಕ್ತಿಯಿಂದ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು.
►ಸೂಕ್ತ ಔಷಧಿಗಳನ್ನು ಸೇವಿಸಿ
ಸೆಪ್ಟಂಬರ್ ತಿಂಗಳು ಅಸ್ತಮಾ ರೋಗಿಗಳಿಗೆ ಪಿಡುಗಾಗಿರುವುದರಿಂದ ಯಾವುದೇ ಗಂಭೀರ ಸಮಸ್ಯೆಯನ್ನು ನಿವಾರಿಸಲು ಸೂಕ್ತ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಇನ್‌ಹೇಲರ್ ಸದಾ ನಿಮ್ಮೆಂದಿಗಿರಲಿ. ಕೆಲವೊಮ್ಮೆ ವ್ಯದ್ಯರು ತೀವ್ರ ಅಸ್ತಮಾ ತೊಂದರೆಯಿರುವ ರೋಗಿಗಳಿಗೆ ಎರಡು ಇನ್‌ಹೇಲರ್ ಔಷಧಿಗಳನ್ನು ಸೂಚಿಸುತ್ತಾರೆ. ಔಷಧಿಗಳನ್ನೆಂದಿಗೂ ತಪ್ಪಿಸಬೇಡಿ ಮತ್ತು ಅತಿಯಾದ ಪ್ರಮಾಣದಲಿ ಔಷಧಿಗಳನ್ನು ತೆಗೆದುಕೊಳ್ಳಬೇಡಿ,ಇಲ್ಲದಿದ್ದರೆ ಸ್ಥಿತಿಯು ಇನ್ನಷ್ಟು ಹದಗೆಡಬಹುದು.
►ಸ್ಮಾರ್ಟ್ ಡಿವೈಸ್‌ವೊಂದು ನಿಮ್ಮ ಬಳಿಯಿರಲಿ
ಈಗ ಲಭ್ಯವಿರುವ ಸ್ಮಾರ್ಟ್ ಇನ್‌ಹೇಲರ್‌ಗಳು ಅಸ್ತಮಾ ಸ್ಥಿತಿಯ ಜಾಡನ್ನು ಕಂಡುಕೊಳ್ಳುವಲ್ಲಿ ನಿಜಕ್ಕೂ ಉಪಯುಕ್ತ ಸಾಧನಗಳಾಗಿವೆ. ಈ ಸಾಧನಗಳು ಮೊಬೈಲ್ ಆ್ಯಪ್‌ನೊಂದಿಗೆ ಸಂಪರ್ಕಿತ ಬ್ಲೂ ಟೂಥ್ ತಂತ್ರಜ್ಞಾನವನ್ನು ಬಳಸುತ್ತವೆ. ಇದು ವೈದ್ಯರು ಮತ್ತು ಹೆತ್ತವರಿಗೆ ನೈಜ ಕಾಲಿಕ ಮಾಹಿತಿಗಳನ್ನು ರವಾನಿಸುವುದರಿಂದ ವಿಶೇಷವಾಗಿ ಮಕ್ಕಳ ಪಾಲಿಗೆ ಹೆಚ್ಚು ಉಪಯುಕ್ತವಾಗಿದೆ. ಈ ಆ್ಯಪ್‌ನ್ನು ಬಳಸುವ ಮೂಲಕ ಅವರ ಸ್ಥಿತಿಯ ಮೇಲೆ ನಿಗಾಯಿರಿಸಬಹುದು. ವಾತಾವರಣದಲ್ಲಿಯ ಇತರ ಅಲರ್ಜಿಕಾರಕಗಳ ವಿರುದ್ಧ ಹೋರಾಡಲು ವಾಯು ಗುಣಮಟ್ಟವನ್ನು ಅಳೆಯುವ ಸೌಲಭ್ಯ ಹೊಂದಿರುವ ಇತರ ಸ್ಮಾರ್ಟ್ ಸಾಧನಗಳೂ ಲಭ್ಯವಿವೆ.