ರಾಜ್ಮಾದ ಈ ಆರೋಗ್ಯ ಲಾಭಗಳು ಗೊತ್ತಾದರೆ ಖಂಡಿತ ಅದನ್ನು ಇನ್ನಷ್ಟು ಇಷ್ಟಪಡುತ್ತೀರಿ
ಅವರೆ ಕುಟುಂಬಕ್ಕೆ ಸೇರಿದ ರಾಜ್ಮಾ ರುಚಿಕರ ಮಾತ್ರವಲ್ಲ,ಪೌಷ್ಟಿಕವೂ ಹೌದು. ಅಗತ್ಯ ವಿಟಾಮಿನ್‌ಗಳು ಮತ್ತು ಖನಿಜಗಳ ಆಗರವಾಗಿರುವ ರಾಜ್ಮಾ ನಮ್ಮ ಶರೀರಕ್ಕೆ ಸರ್ವಾಂಗೀಣ ಆರೋಗ್ಯ ಲಾಭಗಳನ್ನು ಒದಗಿಸುತ್ತದೆ. ಈ ಕುರಿತು ಮಾಹಿತಿಯಿಲ್ಲಿದೆ.
►ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ರಾಜ್ಮಾದಲ್ಲಿ ಕರಗಬಲ್ಲ ಮತ್ತು ಕರಗದ ನಾರು ಅಧಿಕ ಪ್ರಮಾಣದಲ್ಲಿವೆ. ಕರಗಬಲ್ಲ ನಾರು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾದರೆ,ಕರಗದ ನಾರು ಪಚನ ಕ್ರಿಯೆಯನ್ನು ಮತ್ತು ಕರುಳಿನ ಚಲನವಲನವನ್ನು ಹೆಚ್ಚಿಸುತ್ತದೆ.
►ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಹೃದಯ ಸ್ನೇಹಿಯಾಗಿರುವ ರಾಜ್ಮಾ ಶರೀರದಲ್ಲಿಯ ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಂತ್ರಿಸುತ್ತದೆ. ಅದರಲ್ಲಿರುವ ಫಾಲಿಯೇಟ್ ಎಂಬ ಸಂಯುಕ್ತವು ಅಮಿನೊ ಆಮ್ಲವಾಗಿರುವ ಹೊಮೊಸಿಸ್ಟೈನ್‌ನ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ತನ್ಮೂಲಕ ಹೃದಯಾಘಾತ ಮತ್ತು ಇತರ ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ತಗ್ಗಿಸುತ್ತದೆ.
►ಮೊಡವೆಗಳನ್ನು ಕಡಿಮೆ ಮಾಡುತ್ತದೆ
ರಾಜ್ಮಾದಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಸತುವು ಚರ್ಮಕ್ಕೆ ಮುಖ್ಯವಾದ ಪೋಷಕಾಂಶವಾಗಿದೆ. ಸತುವು ಮೇದೋಗ್ರಂಥಿಗಳಿಂದ ಎಣ್ಣೆಯ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ. ಅಲ್ಲದೆ ರಾಜ್ಮಾ ಹೊಸ ಚರ್ಮಕೋಶಗಳ ಉತ್ಪಾದನೆಗೂ ನೆರವಾಗುವ ಮೂಲಕ ಮೊಡವೆಗಳುಂಟಾಗುವ ಸಾಧ್ಯತೆಯನ್ನು ತಗ್ಗಿಸುತ್ತದೆ.
►ಅಲ್‌ಝೈಮರ್ಸ್ ಕಾಯಿಲೆ
ಮಿದುಳಿನ ಕೋಶಗಳಿಗೆ ಹಾನಿಯು ಅಲ್‌ಝೈಮರ್ಸ್ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ರಾಜ್ಮಾದಲ್ಲಿರುವ ವಿಟಾಮಿನ್ ಬಿ ಮಿದುಳು ಕೋಶಗಳನ್ನು ಪೋಷಿಸುವ ಮೂಲಕ ಅವುಗಳಿಗೆ ಅಕಾಲಿಕ ಹಾನಿಯನ್ನು ತಡೆಯುತ್ತದೆ. ಮಿದುಳಿನ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಮೂಲಕ ಅರಿವು,ಮಿದುಳಿನ ಶಕ್ತಿ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
►ರುಮಟೈಡ್ ಸಂದಿವಾತಕ್ಕೆ ಒಳ್ಳೆಯದು
ರುಮಟೈಡ್ ಸಂದಿವಾತವು ಗಂಭೀರ ರೋಗವಾಗಿದ್ದು,ಸಂದುಗಳ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಚಲನವಲನವನ್ನು ಕಷ್ಟವಾಗಿಸುತ್ತದೆ. ರಾಜ್ಮಾದಲ್ಲಿ ಪರಿಣಾಮಕಾರಿ ಉರಿಯೂತ ನಿರೋಧಕ ಗುಣಗಳಿರುವುದರಿಂದ ಇದರ ಸೇವನೆಯು ಈ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರಲ್ಲ್ಲಿರುವ ತಾಮ್ರವು ಕಿಣ್ವಗಳ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಮತ್ತು ಇದು ಸಂದುಗಳು ಹಾಗೂ ಅಸ್ಥಿರಜ್ಜುವಿನ ಸ್ಥಿತಿಸ್ಥಾಪಕ ಗುಣಗಳನ್ನು ಹೆಚ್ಚಿಸುತ್ತದೆ.
►ವಯಸ್ಸಾಗುವುದನ್ನು ತಡೆಯುವ ಗುಣ ಹೊಂದಿದೆ
ರಾಜ್ಮಾದಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್‌ಗಳು ಶರೀರಕ್ಕುಂಟು ಮಾಡುವ ಹಾನಿಯನ್ನು ತಡೆಯುವ ಮೂಲಕ ವಯಸ್ಸಾಗುವುದನ್ನು ವಿಳಂಬಿಸುತ್ತದೆ. ಪಾರಿಸರಿಕ ಕಾರಣಗಳಿಂದಾಗಿ ಅಕಾಲಿಕ ಮುಪ್ಪನ್ನೂ ತಡೆಯುವ ಸಾಮರ್ಥ್ಯ ರಾಜ್ಮಾಕ್ಕಿದೆ.
►ದಣಿವನ್ನು ನಿವಾರಿಸುತ್ತದೆ
ನಿಮ್ಮಲ್ಲಿ ಪದೇಪದೇ ದಣಿವು ಮತ್ತು ನಿಶ್ಶಕ್ತಿ ಕಾಣಿಸಿಕೊಳ್ಳುತ್ತಿದ್ದರೆ ನಿಯಮಿತವಾಗಿ ರಾಜ್ಮಾ ಸೇವನೆಯನ್ನು ಆರಂಭಿಸಿ. ಅದರಲ್ಲಿ ಗಣನೀಯ ಪ್ರಮಾಣದಲ್ಲಿರುವ ಮ್ಯಾಗ್ನೀಷಿಯಂ ದಣಿವಿಗೆ ಪರಿಹಾರವನ್ನು ನೀಡುತ್ತದೆ. ನಿಯಮಿತ ರಾಜ್ಮಾ ಸೇವನೆಯು ಅಸ್ತಮಾ,ಮೈಗ್ರೇನ್ ಮತ್ತು ಸ್ನಾಯು ನೋವುಗಳಿಗೂ ಚಿಕಿತ್ಸೆ ನೀಡುತ್ತದೆ ಎನ್ನಲಾಗಿದೆ.
►ಮೂಳೆಗಳನ್ನು ಬಲಗೊಳಿಸುತ್ತದೆ
ರಾಜ್ಮಾದಲ್ಲಿರುವ ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ ಅಸ್ಥಿರಂಧ್ರತೆಯನ್ನು ತಡೆಯುವ ಮೂಲಕ ಮೂಳೆಗಳನ್ನು ಬಲಗೊಳಿಸುತ್ತವೆ. ಮೂಳೆಗಳ ಆರೋಗ್ಯಕ್ಕೆ ಪೂರಕವಾಗಿರುವ ವಿಟಾಮಿನ್ ಕೆ ಕೂಡ ರಾಜ್ಮಾದಲ್ಲಿದೆ. ಅದು ಮೂಳೆಗಳನ್ನು ಸದೃಢಗೊಳಿಸುವ ಮೂಲಕ ಮೂಳೆ ಮುರಿತಗಳ ಅಪಾಯವನ್ನು ತಗ್ಗಿಸುತ್ತದೆ.
►ಋತುಮಾನಕ್ಕನುಗುಣವಾದ ಸೋಂಕುಗಳನ್ನು ತಡೆಯುತ್ತದೆ
ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಋತುಮಾನಕ್ಕನುಗುಣವಾದ ಅನಾರೋಗ್ಯಗಳನ್ನು ತಡೆಯುವಲ್ಲಿ ರಾಜ್ಮಾ ಪರಿಣಾಮಕಾರಿ ಪಾತ್ರವನ್ನು ಹೊಂದಿದೆ. ಸಾಮಾನ್ಯ ಶೀತ ಮತ್ತು ಜ್ವರಕ್ಕೆ ಶರೀರದ ಪ್ರತಿರೋಧವನ್ನು ಅದು ಹೆಚ್ಚಿಸುತ್ತದೆ. ಅದರಲ್ಲಿರುವ ಕಬ್ಬಿಣ ಇಂತಹ ಸೋಂಕುಗಳು ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.