ಕಣ್ಣುನೋವಿನ ಈ ಸಾಮಾನ್ಯ ಕಾರಣಗಳು ನಿಮಗೆ ಗೊತ್ತಿರಲಿ
ಕಣ್ಣುನೋವು ಕಣ್ಣುಗಳಲ್ಲಿ ಮತ್ತು ಅವುಗಳ ಸುತ್ತ ಕಿರಿಕಿರಿಯನ್ನುಂಟು ಮಾಡುವ ಸಾಮಾನ್ಯ ಸಮಸ್ಯೆಯಾಗಿದೆ. ನೋವು ಕಣ್ಣಿನ ಮೇಲ್ಮೈನಲ್ಲಿದ್ದರೆ ಅದನ್ನು ಒಕ್ಯುಲರ್ ಎಂದು ಮತ್ತು ನೋವು ಕಣ್ಣಿನೊಳಗೆ ಇದ್ದರೆ ಅದನ್ನು ಆರ್ಬಿಟಲ್ ಕಣ್ಣುನೋವು ಎಂದು ಕರೆಯಲಾಗುತ್ತದೆ.
ಹೆಚ್ಚಿನ ಪ್ರಕರಣಗಳಲ್ಲಿ ಕಣ್ಣುನೋವು ಯಾವುದೇ ಔಷಧಿ ಅಥವಾ ಚಿಕಿತ್ಸೆಯಿಲ್ಲದೆ ಶಮನಗೊಳ್ಳುತ್ತದೆ. ಆದರೆ ಅಪರೂಪದ ಪ್ರಕರಣಗಳಲ್ಲಿ ಅದು ಯಾವುದೋ ಗಂಭೀರ ಕಾಯಿಲೆಯನ್ನು ಸೂಚಿಸುತ್ತಿರಬಹುದು. ದೃಷ್ಟಿ ಸಮಸ್ಯೆಯೊಂದಿಗೆ ತೀವ್ರವಾದ ಕಣ್ಣುನೋವು ಕಾಡುತ್ತಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.
ಒಕ್ಯುಲರ್ ಕಣ್ಣುನೋವಿಗೆ ಕಾರಣಗಳು
ಬಾಹ್ಯ ವಸ್ತುಗಳು: ಬಾಹ್ಯವಸ್ತುವೊಂದು ಕಣ್ಣಿನ ಸಂಪರ್ಕಕ್ಕೆ ಬರುವುದು ಒಕ್ಯುಲರ್ ಕಣ್ಣುನೋವಿಗೆ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ಬಾಹ್ಯ ವಸ್ತುಗಳು ಕಣ್ಣಿನಲ್ಲಿ ಕೆರಳುವಿಕೆಯೊಂದಿಗೆ ಅದನ್ನು ಕೆಂಪಗಾಗಿಸುತ್ತವೆ ಮತ್ತು ನೋವಿಗೆ ಕಾರಣವಾಗುತ್ತವೆ. ಸೌಂದರ್ಯ ಸಾಧನಗಳು,ಕೃತಕ ಕಣ್ಣುರೆಪ್ಪೆಗಳು,ಧೂಳು ಇತ್ಯಾದಿಗಳು ಇಂತಹ ಬಾಹ್ಯವಸ್ತುಗಳಲ್ಲಿ ಸೇರಿವೆ. ಅಲ್ಲದೆ ರಾತ್ರಿಯಿಡೀ ಕಾಂಟ್ಯಾಕ್ಟ್ ಲೆನ್ಸ್‌ಗಳ ಧರಿಸುವಿಕೆ ಅಥವಾ ಅವುಗಳನ್ನು ಸೂಕ್ತವಾಗಿ ಸೋಂಕುಮುಕ್ತ ಗೊಳಿಸಿರದಿದ್ದರೂ ಕಣ್ಣುನೋವು ಕಾಡುತ್ತದೆ.
ಗಾಯಗಳು: ಕಣ್ಣಿನಲ್ಲಿ ಅಥವಾ ಅದರ ಸುತ್ತಮುತ್ತ ಗಾಯವುಂಟಾದರೆ ಅದು ತೀವ್ರ ನೋವನ್ನುಂಟು ಮಾಡಬಲ್ಲದು.ಆಟವಾಡುವಾಗ ಚೆಂಡು ಬಡಿದು ಅಥವಾ ಅಪಘಾತದಿಂದಾಗಿ ಇಂತಹ ಗಾಯಗಳು ಸಂಭವಿಸಬಹುದು. ಬ್ಲೀಚ್,ಆ್ಯಸಿಡ್ ಅಥವಾ ಕ್ಷಾರೀಯ ಉತ್ಪನ್ನ ಇತ್ಯಾದಿಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಸುಟ್ಟ ಗಾಯಗಳು ಕಣ್ಣುಗಳಿಗೆ ಹಾನಿಯನ್ನುಂಟು ಮಾಡಬಹುದು ಮತ್ತು ಇಂತಹ ಸಂದರ್ಭದಲ್ಲಿ ತಕ್ಷಣವೇ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.
ಕಂಜಕ್ಟಿವೈಟಿಸ್: ಸಾಮಾನ್ಯವಾಗಿ ಮದ್ರಾಸ್ ಕಣ್ಣು ಅಥವಾ ಕೆಂಗಣ್ಣು ಎಂದು ಕರೆಯಲಾಗುವ ಈ ಸ್ಥಿತಿಯು ಕಣ್ಣಿನ ಬಿಳಿಭಾಗದ ಉರಿಯೂತವನ್ನುಂಟು ಮಾಡುತ್ತದೆ. ಇದಕ್ಕೆ ಅಲರ್ಜಿ ಅಥವಾ ಸೋಂಕು ಕಾರಣವಾಗಿರಬಹುದು. ಕಣ್ಣಿನಲ್ಲಿ ತುರಿಕೆಯೊಂದಿಗೆ ಅದನ್ನು ಕೆಂಪಗಾಗಿಸುತ್ತದೆ ಮತ್ತು ಕಣ್ಣಿನಲ್ಲಿ ನೀರು ತುಂಬಿರುವಂತೆ ಮಾಡುತ್ತದೆ.
ಬ್ಲೆಫಾರಿಟಿಸ್ ಮತ್ತು ಸ್ಟೈ: ಕಣ್ಣುಗುಡ್ಡೆಯಲ್ಲಿನ ತೈಲಗ್ರಂಥಿಗಳು ಉರಿಯೂತಕ್ಕೊಳಗಾಗಿದ್ದರೆ ಮತ್ತು ಸೋಂಕುಪೀಡಿತ ವಾಗಿದ್ದರೆ ಅಂತಹ ಸ್ಥಿತಿಯನ್ನು ಬ್ಲೆಫಾರಿಟಿಸ್ ಎಂದು ಮತ್ತು ಈ ಸೋಂಕು ಕಣ್ಣುಗುಡ್ಡೆಯ ಮೇಲೆ ಉಬ್ಬಿಗೆ ಕಾರಣವಾದರೆ ಅದನ್ನು ಸ್ಟೈ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಯಾತನಾದಾಯಕವಾಗಿರುತ್ತದೆ. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಇದು ಪುನರಾವರ್ತನೆಗೊಳ್ಳುತ್ತಿರುತ್ತದೆ.
ಅಕ್ಷಿಪಟಲ ಸವೆತ: ಅಕ್ಷಿಪಟಲಕ್ಕೆ ಹಾನಿಯುಂಟಾದಾಗ ಅಂತಹ ಸ್ಥಿತಿಯನ್ನು ಕಾರ್ನಿಯಲ್ ಅಬ್ರಾಸನ್ ಅಥವಾ ಅಕ್ಷಿಪಟಲ ಸವೆತ ಎಂದು ಕರೆಯಲಾಗುತ್ತದೆ. ಇದು ಕಣ್ಣಿನಲ್ಲಿ ನೋವು ಮತ್ತು ಕಿರಿಕಿರಿಯನ್ನುಂಟು ಮಾಡುತ್ತದೆ ಮತ್ತು ನೀರನ್ನು ಎರಚಿಕೊಂಡರೂ ಉರಿ ಕಡಿಮೆಯಾಗುವುದಿಲ್ಲ. ಇದಕ್ಕೆ ನೇತ್ರವೈದ್ಯರಿಂದ ಚಿಕಿತ್ಸೆ ಅಗತ್ಯವಾಗುತ್ತದೆ.
ಆರ್ಬಿಟಲ್ ಕಣ್ಣುನೋವಿಗೆ ಕಾರಣಗಳು
ಸೈನುಸಿಟಿಸ್: ಇದು ಸೈನಸ್‌ಗಳ ಅಂಗಾಂಶಗಳ ಭಿತ್ತಿಯ ಉರಿಯೂತ ಮತ್ತು ಊದಿಕೊಳ್ಳುವಿಕೆಯನ್ನುಂಟು ಮಾಡುವ ಸೋಂಕು ಆಗಿದೆ. ಈ ಸ್ಥಿತಿಯಲ್ಲಿ ಕಣ್ಣುಗಳ ಹಿಂಭಾಗದಲ್ಲಿ ಒತ್ತಡವುಂಟಾಗುತ್ತದೆ ಮತ್ತು ಕಣ್ಣುನೋವಿಗೆ ಕಾರಣವಾಗುತ್ತದೆ. ಇದು ಸೈನಸ್ ಸೋಂಕಿನ ತಾಣ ಮತ್ತು ತೀವ್ರತೆಯನ್ನು ಅವಲಂಬಿಸಿ ಒಂದು ಅಥವಾ ಎರಡೂ ಕಣ್ಣುಗಳಲ್ಲಿ ನೋವನ್ನುಂಟು ಮಾಡಬಹುದು.
ಮೈಗ್ರೇನ್: ಮೈಗ್ರೇನ್ ತಲೆನೋವಿನಿಂದ ಬಳುತ್ತಿರುವ ಹೆಚ್ಚಿನವರು ಕಣ್ಣುನೋವನ್ನೂ ಅನುಭವಿಸುತ್ತಿರುತ್ತಾರೆ. ಗ್ಲಾಕೋಮಾ: ಕಣ್ಣುಗಳಲ್ಲಿನ ಒತ್ತಡ ಹೆಚ್ಚಾದಾಗ ಅದು ಗ್ಲಾಕೋಮಾವನ್ನುಂಟು ಮಾಡುತ್ತದೆ. ಮಧುಮೇಹಿಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿರುವ ಇದು ಆಪ್ಟಿಕ್ ನರಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಶಾಶ್ವತ ಅಂಧತ್ವಕ್ಕೆ ಕಾರಣವಾಗಬಹುದು.
ಆಪ್ಟಿಕ ನ್ಯುರಿಟಿಸ್: ಇದು ಕಣ್ಣುಗುಡ್ಡೆಯನ್ನು ಮಿದುಳಿಗೆ ಸಂಪರ್ಕಿಸುವ ಆಪ್ಟಿಕ್ ನರದ ಉರಿಯೂತದ ಸ್ಥಿತಿಯಾಗಿದೆ. ಇದಕ್ಕೆ ವೈರಲ್ ಅಥವಾ ಬ್ಯಾಕ್ಟೀರಿಯಾ ಸೋಂಕು ಅಥವಾ ಮಲ್ಟಿಪಲ್ ಸ್ಲೆರೋಸಿಸ್‌ನಂತಹ ಕಾಯಿಲೆ ಕಾರಣವಾಗಿ ರಬಹುದು. ಕಣ್ಣಿನಲ್ಲಿ ಸೌಮ್ಯವಾಗಿ ಆರಂಭಗೊಳ್ಳುವ ನೋವು ಕಣ್ಣುಗುಡ್ಡೆಗಳನ್ನು ಚಲಿಸಿದಂತೆಲ್ಲ ತೀವ್ರಗೊಳ್ಳುತ್ತದೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಭಾಗಶಃ ಅಥವಾ ಸಂಪೂರ್ಣ ದೃಷ್ಟಿನಾಶವನ್ನುಂಟು ಮಾಡಬಹುದು.
ಕೆರಾಟಿಟಿಸ್: ಅಕ್ಷಿಪಟಲದ ಉರಿಯೂತ ಅಥವಾ ಸೋಂಕು ಆಗಿರುವ ಕೆರಾಟಿಟಿಸ್ ಎರಡೂ ಕಣ್ಣುಗಳಿಗೆ ತೊಂದರೆಯನ್ನುಂಟು ಮಾಡಬಲ್ಲದು. ಸುದೀರ್ಘ ಸಮಯದಿಂದ ಕಾಂಟ್ಯಾಕ್ಟ್ ಲೆನ್ಸ್ ಧರಿಸುವಿಕೆ ಅಥವಾ ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಸೋಂಕು ಇದಕ್ಕೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಒಂದೇ ಕಣ್ಣನ್ನು ಬಾಧಿಸುತ್ತದೆ.