ಸಿಹಿ ನಿಮಗೆ ತುಂಬ ಇಷ್ಟವೇ?: ಎಚ್ಚರಿಕೆ, ಅದು ಈ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಬಹುದು…
ಹೆಚ್ಚಿನವರು ಸಿಹಿತಿಂಡಿಗಳನ್ನು ಇಷ್ಟಪಡುತ್ತಾರೆ,ಕೆಲವರಂತೂ ಸದಾ ಕಾಲವೂ ಸಿಹಿತಿಂಡಿಗಳನ್ನೇ ತಿನ್ನುತ್ತಿರುತ್ತಾರೆ. ಆದರೆ ಬಿಳಿ ಸಕ್ಕರೆ ಅಥವಾ ಸಂಸ್ಕರಿತ ಸಕ್ಕರೆಯ ಅತಿಯಾದ ಸೇವನೆಯು ನಮ್ಮ ಶರೀರಕ್ಕೆ ಅಪಾಯಕಾರಿಯಾಗಬಹುದು. ಸಿಹಿತಿಂಡಿಗಳ ಸೇವನೆಯು ಬೊಜ್ಜು ಅಥವಾ ಮಧುಮೇಹಕ್ಕೆ ಕಾರಣವಾಗುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಹೀಗಾಗಿ ಸಿಹಿ ಸೇವನೆಯ ಗೀಳು ಹೊಂದಿರುವವರು ಎಚ್ಚರಿಕೆಯಿಂದಿರಬೇಕು. ಇಲ್ಲಿವೆ ಸಕ್ಕರೆಯ ಅತಿಯಾದ ಸೇವನೆಯು ಉಂಟು ಮಾಡುವ ಆರೋಗ್ಯ ಸಮಸ್ಯೆಗಳು.....
► ಮಧುಮೇಹ
ಸಕ್ಕರೆಯು ಬೊಜ್ಜಿಗೆ ಕಾರಣವಾಗುತ್ತದೆ ಮತ್ತು ಬೊಜ್ಜು ಮಧುಮೇಹವನ್ನುಂಟು ಮಾಡುವ ಪ್ರಮುಖ ಅಪಾಯವಾಗಿದೆ. ಹೆಚ್ಚು ದೈಹಿಕ ಚಟುವಟಿಕೆಗಳಿಲ್ಲದೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಶರೀರದಲ್ಲಿ ವಿವಿಧ ಚಯಾಪಚಯ ಮತ್ತು ಹಾರ್ಮೋನ್ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ ಮತ್ತು ಮೇದೋಜ್ಜೀರಕ ಗ್ರಂಥಿಯ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇದು ವ್ಯಕ್ತಿಯು ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಸೃಷ್ಟಿಸುತ್ತದೆ.
► ಹೃದಯಾಘಾತ
ಅತಿಯಾಗಿ ಸಕ್ಕರೆ ಸೇವಿಸುವವರಲ್ಲಿ ಟ್ರೈಗ್ಲಿಸರೈಡ್‌ಗಳ ಮಟ್ಟವು ಹೆಚ್ಚಾಗುತ್ತದೆ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್‌ನ ಮಟ್ಟ ಕಡಿಮೆಯಾಗುತ್ತದೆ. ಎಚ್‌ಡಿಎಲ್ ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು,ಹೃದಯಾಘಾತದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಹೆಚ್ಚಿನ ಟ್ರೈಗ್ಲಿಸರೈಡ್‌ಗಳು ಮತ್ತು ಕಡಿಮೆ ಎಚ್‌ಡಿಎಲ್ ಹೃದಯಾಘಾತ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ.
► ಯಕೃತ್ತಿನ ಕಾಯಿಲೆಗಳು
ಸಕ್ಕರೆಯು ಫ್ರುಕ್ಟೋಸ್‌ನ್ನು ಒಳಗೊಂಡಿದೆ. ನಾವು ಈ ಫ್ರುಕ್ಟೋಸ್‌ನ್ನು ಸೇವಿಸಿದಾಗ ಶರೀರಕ್ಕೆ ಶಕ್ತಿಯ ಅಗತ್ಯವಿದ್ದಾಗ ಬಳಸಿಕೊಳ್ಳಲು ಯಕೃತ್ತು ಅದನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಹೆಚ್ಚಿನ ಪರಿಶ್ರಮ ಪಡದೆ ಸಕ್ಕರೆಯನ್ನು ಅತಿಯಾಗಿ ಸೇವಿಸುತ್ತಿದ್ದರೆ ಯಕೃತ್ತಿನಲ್ಲಿ ಅತಿಯಾದ ಪ್ರಮಾಣದಲ್ಲಿ ಫ್ರುಕ್ಟೋಸ್ ಸಂಗ್ರಹಗೊಳ್ಳುತ್ತದೆ. ಹೀಗಾದಾಗ ಯಕೃತ್ತು ಅದನ್ನು ಕೊಬ್ಬನ್ನಾಗಿ ಪರಿವರ್ತಿಸಲು ಆರಂಭಿಸುತ್ತದೆ. ಇದು ದೀರ್ಘಾವಧಿಯಲ್ಲಿ ಫ್ಯಾಟಿ ಲಿವರ್ ಅಥವಾ ಕೊಬ್ಬಿನಿಂದ ಕೂಡಿದ ಯಕೃತ್ತು ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ.
► ಕ್ಯಾನ್ಸರ್
ಕ್ಯಾನ್ಸರ್ ಇಂದಿಗೂ ವಿಶ್ವದಲ್ಲಿ ಸಾವುಗಳಿಗೆ ಅತ್ಯಂತ ಪ್ರಮುಖ ಕಾರಣವಾಗಿದೆ. ಇನ್ಸುಲಿನ್ ಹಾರ್ಮೋನ್ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಹೀಗಾಗಿ ಸಕ್ಕರೆಯ ಬಳಕೆಯಿಂದಾಗಿ ಇನ್ಸುಲಿನ್ ಮಟ್ಟದಲ್ಲಿ ನಿರಂತರ ಏರಿಕೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹಲವಾರು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಕ್ಕರೆಯು ಹಲವಾರು ಚಯಾಪಚಯ ಸಮಸ್ಯೆಗಳನ್ನೂ ಉಂಟು ಮಾಡಬಲ್ಲದು ಮತ್ತು ಇದು ಕ್ಯಾನ್ಸರ್‌ಗೆ ಇನ್ನೊಂದು ಸಂಭಾವ್ಯ ಅಪಾಯವಾಗಿದೆ.
► ಬೊಜ್ಜು
ಸಕ್ಕರೆಯು ಸುಕ್ರೋಸ್ ಮತ್ತು ಫ್ರುಕ್ಟೋಸ್‌ಗಳನ್ನು ಒಲಗೊಂಡಿರುತ್ತದೆ ಮತ್ತು ಅದರಲ್ಲಿ ಕ್ಯಾಲರಿಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಅಲ್ಲದೆ ಸಕ್ಕರೆಯು ಶರೀರದಲ್ಲಿ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಅತಿಯಾದ ಸಕ್ಕರೆಯ ಸೇವನೆಯು ಬೊಜ್ಜು ಉಂಟಾಗುವ ಅಪಾಯವನ್ನು ಹೆಚ್ಚಿಸಲು ಇದು ಕಾರಣವಾಗಿದೆ.
► ಇತರ ಸಮಸ್ಯೆಗಳು
ತೂಕ ಹೆಚ್ಚಳ,ಹಸಿವು ಮತ್ತು ನಿದ್ರೆಯ ತೊಂದರೆ ಇತ್ಯಾದಿಗಳನ್ನು ನಿಯಂತ್ರಿಸುವಲ್ಲಿ ಲೆಪ್ಟಿನ್ ಹಾರ್ಮೋನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಸಕ್ಕರೆಯು ಲೆಪ್ಟಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಅತಿಯಾದ ಸಕ್ಕರೆ ಸೇವನೆಯು ಜ್ಞಾಪಕ ಶಕ್ತಿ ಸಮಸ್ಯೆಗಳನ್ನೂ ಉಂಟು ಮಾಡಬಲ್ಲದು. ಅತಿಯಾದ ಸಿಹಿ ಸೇವನೆಯು ದಂತಸಮಸ್ಯೆಗಳಿಗೂ ಕಾರಣವಾಗುತ್ತದೆ.