ಮಧುಮೇಹಿಗಳಿಗೆ ಐದು ಅತ್ಯುತ್ತಮ ಅಡುಗೆ ಎಣ್ಣೆಗಳು
ಅಡುಗೆ ಎಣ್ಣೆಯು ಶರೀರವು ನಾವು ಸೇವಿಸಿದ ಆಹಾರವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಹೃದ್ರೋಗ,ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ನರಳುತ್ತಿರುವವರ ಪಾಲಿಗೆ ಇದು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಅಡಿಗೆ ಎಣ್ಣೆಗಳ ಜೊತೆಯಲ್ಲಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಲ್ಲ ಕಲಬೆರಕೆ ಎಣ್ಣೆಗಳೂ ದೊರೆಯುತ್ತವೆ. ಹೀಗಾಗಿ ಅಡಿಗೆ ಎಣ್ಣೆಯನ್ನು ಖರೀದಿಸುವಾಗ ನಮ್ಮ ಆರೋಗ್ಯಕ್ಕೆ ಪೂರಕವಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳುವುದು ಅಗತ್ಯ.
ಒಂದೇ ಅಡುಗೆ ಎಣ್ಣೆಯನ್ನು ಬಳಸುವ ಬದಲು ಅತ್ಯುತ್ತಮ ಗುಣಮಟ್ಟದ ಕೊಬ್ಬು ಶರೀರಕ್ಕೆ ದೊರೆಯುವಂತಾಗಲು ವಿವಿಧ ಸಸ್ಯಜನ್ಯ ಎಣ್ಣೆಗಳನ್ನು ಬಳಸುವುದು ಒಳ್ಳೆಯದು.. ವಿವಿಧ ಅಡಿಗೆಗಳಿಗಾಗಿ ಬೆಣ್ಣೆ,ತುಪ್ಪ,ಆಲಿವ್ ತೈಲ,ಸಾಸಿವೆ ಎಣ್ಣೆ, ಸೋಯಾ ಎಣ್ಣೆ,ಎಳ್ಳೆಣ್ಣೆ ಮತ್ತು ಕಡಲೆಕಾಯಿ ಎಣ್ಣೆಗಳನ್ನು ಬಳಸಬಹುದು. ಸಂಸ್ಕರಿತ ಎಣ್ಣೆಯ ಬದಲು ಸಂಸ್ಕರಿತವಲ್ಲದ ಅಥವಾ ಕೋಲ್ಡ್ ಪ್ರೆಸ್ಡ್ ಎಣ್ಣೆಯನ್ನು ನೆಚ್ಚಿಕೊಳ್ಳುವುದು ಒಳ್ಳೆಯದು.
ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ,ಏಕೆಂದರೆ ಆಹಾರದಿಂದಾಗಿ ರಕ್ತದಲ್ಲಿಯ ಸಕ್ಕರೆಯ ಮಟ್ಟದಲ್ಲಿ ವ್ಯತ್ಯಯವು ನೇರವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ನೆರವಾಗುವ ಐದು ಅಡಿಗೆ ಎಣ್ಣೆಗಳ ಬಗ್ಗೆ ಮಾಹಿತಿಯಿಲ್ಲಿದೆ.
► ಕನೋಲಾ ಎಣ್ಣೆ
ಕನೋಲಾ ಬೀಜಗಳಿಂದ ತಯಾರಿಸಲಾಗುವ ಈ ಎಣ್ಣೆಯು ಒಂದು ವಿಧದ ಒಮೆಗಾ-3 ಫ್ಯಾಟಿ ಆ್ಯಸಿಡ್ ಆಗಿರುವ ಆಲ್ಫಾ-ಲಿನೊಲೆನಿಕ್ ಆಮ್ಲವನ್ನು ಸಮೃದ್ಧವಾಗಿ ಒಳಗೊಂಡಿದೆ. ಅದರಲ್ಲಿ ಆರೋಗ್ಯಕರವಾದ ಮೊನೊಸ್ಯಾಚ್ಯುರೇಟೆಡ್ ಫ್ಯಾಟಿ ಆ್ಯಸಿಡ್‌ಗಳೂ ಇವೆ. ಕನೋಲಾ ಎಣ್ಣೆಯು ಟೈಪ್-2 ಮಧುಮೇಹಿಗಳಲ್ಲಿ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಮತ್ತು ಕೆಟ್ಟ ಕೊಲೆಸ್ಟ್ರಾಲ್‌ವನ್ನು ತಗ್ಗಿಸಲು ನೆರವಾಗುತ್ತದೆ ಎನ್ನುವುದನ್ನು ಅಧ್ಯಯನವೊಂದು ತೋರಿಸಿದೆ.
► ಆಲಿವ್ ಎಣ್ಣೆ
ಆಲಿವ್ ಎಣ್ಣೆಯು ಹೃದಯ ಸ್ನೇಹಿಯಾಗಿದ್ದು ಮಧುಮೇಹಿಗಳ ಆರೋಗ್ಯಕ್ಕೆ ಲಾಭದಾಯಕವಾಗಿದೆ. ಅದರಲ್ಲಿರುವ ಟೈರೊಸಾಲ್ ಎಂಬ ಉತ್ಕರ್ಷಣ ನಿರೋಧಕವು ಇನ್ಸುಲಿನ್ ಪ್ರತಿರೋಧ ಮತ್ತು ಮಧುಮೇಹಕ್ಕೆ ಚಿಕಿತ್ಸಕವಾಗಿ ಕೆಲಸ ಮಾಡುತ್ತದೆ.
► ಲಿನ್‌ಸೀಡ್ ಎಣ್ಣೆ
ಲಿನ್‌ಸೀಡ್ ಅಥವಾ ನಾರಗಸೆ ಸಾಕಷ್ಟು ನಾರನ್ನು ಹೊಂದಿದ್ದು,ಇದು ಜೀರ್ಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಆಹಾರದಲ್ಲಿಯ ಗ್ಲುಕೋಸ್ ಜೀರ್ಣಗೊಳ್ಳಲು ಮತ್ತು ರಕ್ತದಲ್ಲಿ ನಿಧಾನವಾಗಿ ಬಿಡುಗಡೆಗೊಳಿಸಲು ಅವಕಾಶವನ್ನು ಕಲ್ಪಿಸುತ್ತದೆ. ಇದರಿಂದಾಗಿ ರಕ್ತದಲ್ಲಿಯ ಸಕ್ಕರೆ ಮಟ್ಟ ದಿಢೀರ್ ಆಗಿ ಏರಿಕೆಯಾಗುವುದಿಲ್ಲ.
► ಅಕ್ರೋಟ್ ಎಣ್ಣೆ
ಈ ಎಣ್ಣೆಯಲ್ಲಿ ಅಧಿಕ ಪ್ರಮಾಣದಲ್ಲಿರುವ ಟ್ರೈಗ್ಲಿಸರೈಡ್‌ಗಳು ಹೃದಯಸ್ನೇಹಿ ಒಮೆಗಾ-3 ಫ್ಯಾಟಿ ಆ್ಯಸಿಡ್ ಮತ್ತು ಪಾಲಿಅನ್‌ಸ್ಯಾಚ್ಯುರೇಟೆಡ್ ಕೊಬ್ಬುಗಳಾಗಿವೆ. ಇವು ಮಧುಮೇಹಿಗಳಲ್ಲಿ ಇನ್ಸುಲಿನ್ ಸಂವೇದನಾಶೀಲತೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಮಹಿಳೆಯರು ನಿಯಮಿತವಾಗಿ ಅಕ್ರೋಟ್ ಎಣ್ಣೆಯನ್ನು ಬಳಸುವುದರಿಂದ ಟೈಪ್-2 ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.
► ಎಳ್ಳೆಣ್ಣೆ
ಎಳ್ಳೆಣ್ಣೆಯಲ್ಲಿ ವಿಟಾಮಿನ್ ಇ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವೆರಡೂ ಮಧುಮೇಹಿಗಳಿಗೆ ಲಾಭಕಾರಿಯಾಗಿವೆ. ರೈಸ್ ಬ್ರಾನ್(ಅಕ್ಕಿಯ ತೌಡು) ಎಣ್ಣೆ ಮತ್ತು ಸಾಸಿವೆ ಎಣ್ಣೆಗಳನ್ನು ಜೊತೆಯಾಗಿ ಬಳಸುವುದು ಟೈಪ್-2 ಮಧುಮೇಹಿಗಳಲ್ಲಿ ರಕ್ತದಲ್ಲಿಯ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯ ಮಟ್ಟದ ನಿಯಂತ್ರಣಕ್ಕಾಗಿ ಈ ಆರೋಗ್ಯಕರ ಅಡಿಗೆ ಎಣ್ಣೆಗಳನ್ನು ಬಳಸಬಹುದು. ಆದರೆ ವೈದ್ಯರ ಸಲಹೆ ಪಡೆದುಕೊಂಡೇ ಮುಂದುವರಿಯಬೇಕು.