ಆ್ಯಕ್ಯುಪಂಕ್ಚರ್ ಚಿಕಿತ್ಸೆ ಮಧುಮೇಹವನ್ನು ನಿಯಂತ್ರಿಸುತ್ತದೆಯೇ?

Update: 2019-10-09 15:52 GMT

ಆ್ಯಕ್ಯುಪಂಕ್ಚರ್ ಪರ್ಯಾಯ ಚಿಕಿತ್ಸಾ ಪದ್ಧತಿಯಾಗಿದ್ದು ದೀರ್ಘಕಾಲಿಕ ನೋವು, ಬಂಜೆತನ, ತಲೆನೋವುಗಳಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಉಪಯೋಗಿಯಾಗಿದೆ. ಆದರೂ ಅದರ ಕ್ಷಮತೆಯ ಬಗ್ಗೆ ಈಗಲೂ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಈ ಸಾಂಪ್ರದಾಯಿಕ ಚೀನಿ ಚಿಕಿತ್ಸಾ ಪದ್ಧತಿಯು ಟೈಪ್-2 ಮಧುಮೇಹಕ್ಕೆ ಚಿಕಿತ್ಸೆಯಲ್ಲಿ ಅತ್ಯಂತ ಲಾಭದಾಯಕವಾಗಿದೆ ಎನ್ನುವುದು ಹಲವಾರು ತಜ್ಞರ ಅಭಿಪ್ರಾಯವಾಗಿದೆ. ಕೆಲವು ವಿಶೇಷ ಸೂಜಿಗಳಿಂದ ಚರ್ಮದ ಮೇಲೆ ಚುಚ್ಚುವುದರಿಂದ ಶರೀರದ ನಿಗದಿತ ಅಂಗಾಂಗಗಳಿಗೆ ವಿಶೇಷ ವಿಧದ ಶಕ್ತಿಯು ರವಾನೆಯಾಗುತ್ತದೆ.

ಆ್ಯಕ್ಯುಪಂಕ್ಚರ್ ಕಾಯಿಲೆಗಳ ಲಕ್ಷಣಗಳ ನಿವಾರಣೆಗೆ ಒತ್ತು ನೀಡುವ ಚಿಕಿತ್ಸಾ ಪದ್ಧತಿಯಾಗಿದೆ. ಮಧುಮೇಹವು ನಮ್ಮ ಅಂತಃಸ್ರಾವಕ ವ್ಯವಸ್ಥೆಯಲ್ಲಿ ಹಾರ್ಮೋನ್‌ಗಳ ಅಸಮತೋಲನದಿಂದ ಉಂಟಾಗುವ ಸಮಸ್ಯೆಯಾಗಿದೆ. ಮಧುಮೇಹಿಗಳು ಕಾಲುನೋವು ಇತ್ಯಾದಿಗಳಿಂದ ಬಳಲುವುದು ಸಾಮಾನ್ಯವಾಗಿದೆ. ಆ್ಯಕ್ಯುಪಂಕ್ಚರ್‌ಗೆ ಬಳಸಲಾಗುವ ಸೂಜಿಯು ಒಂದೇ ವಿಧದ ಎಂಡಾರ್ಫಿನ್‌ಗಳನ್ನು ಪ್ರಚೋದಿಸುವ ಮೂಲಕ ಧನಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ ಮತ್ತು ಯಾವುದೇ ವಿಧದ ನೋವನ್ನು ಕಡಿಮೆಗೊಳಿಸುತ್ತದೆ. ಕೆಲವು ತಜ್ಞರ ಅಭಿಪ್ರಾಯದಂತೆ ಆ್ಯಕ್ಯುಪಂಕ್ಚರ್ ಮಧುಮೇಹದ ಹಲವಾರು ಅಪಾಯಗಳು ಮತ್ತು ಅಡ್ಡ ಪರಿಣಾಮಗಳ ವಿರುದ್ಧ ಹೋರಾಡಲು ನೆರವಾಗುತ್ತದೆ,ಮೇದೋಜ್ಜೀರಕ ಗ್ರಂಥಿಯ ಕಾರ್ಯವನ್ನು ನಿಯಂತ್ರಿಸುತ್ತದೆ ಮತ್ತು ಇನ್ಸುಲಿನ್ ಮಟ್ಟಗಳನ್ನು ಕಾಯ್ದುಕೊಳ್ಳುತ್ತದೆ. ಇದರ ಜೊತೆಗೆ ನಿಯಮಿತವಾಗಿ ಆ್ಯಕ್ಯುಪಂಕ್ಚರ್ ಚಿಕಿತ್ಸೆಯು ಬೊಜ್ಜಿನ ವಿರುದ್ಧ ಹೋರಾಟದಲ್ಲಿಯೂ ನೆರವಾಗುತ್ತದೆ.

ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ ಆ್ಯಕ್ಯುಪಂಕ್ಚರ್ ನಿಯಮಿತವಾಗಿ ತೂಕವನ್ನು ಹೆಚ್ಚಿಸಿಕೊಳ್ಳಲು ಮತ್ತು ಅದನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುತ್ತದೆ. ಅದು ಮಧುಮೇಹಿಗಳ ರಕ್ತದಲ್ಲಿಯ ಗ್ಲುಕೋಸ್ ಮಟ್ಟಗಳನ್ನು ಕ್ರಮಬದ್ಧಗೊಳಿಸುತ್ತದೆ. ಅದು ಮೇದೋಜ್ಜೀರಕ ಗ್ರಂಥಿಯನ್ನು ರಕ್ಷಿಸುತ್ತದೆ ಮತ್ತು ಹೆಚ್ಚಿನ ಇನ್ಸುಲಿನ್ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ಇನ್ಸುಲಿನ್ ಪ್ರತಿರೋಧವನ್ನು ನಿಭಾಯಿಸುವ ಅದು ಮೆಲಟಾನಿನ್, ಇನ್ಸುಲಿನ್, ಗ್ಲುಕೊಕಾರ್ಟಿಕಾಯಿಡ್ ಗಳಂತಹ ಶರೀರಕ್ಕೆ ಅಗತ್ಯವಾಗಿರುವ ಹಾರ್ಮೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಆ್ಯಕ್ಯುಪಂಕ್ಚರ್ ಹೇಗೆ ಕೆಲಸ ಮಾಡುತ್ತದೆ?

ಮಧುಮೇಹಿಗಳಿಗೆ ಆ್ಯಕ್ಯುಪಂಕ್ಚರ್ ಚಿಕಿತ್ಸೆಯು ಸಾಮಾನ್ಯವಾಗಿ 20ರಿಂದ 30 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ವಾರಕ್ಕೆರಡು ಬಾರಿ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗಿಯ ಇತಿಹಾಸ ಮತ್ತು ರೋಗದ ಸ್ಥಿತಿಯನ್ನು ಅವಲಂಬಿಸಿ ಚಿಕಿತ್ಸೆಯ ಅವಧಿಯನ್ನು ಒಂದು ಅಥವಾ ಹೆಚ್ಚು ವಾರಗಳ ಕಾಲ ಮುಂದುವರಿಸಬಹುದು. ಮಧುಮೇಹದ ನಿರ್ವಹಣೆಗಾಗಿ ಮತ್ತು ಅದು ಬಿಗಡಾಯಿಸುವುದನ್ನು ಹಾಗೂ ಅಗತ್ಯ ಶಾರೀರಿಕ ಕಾರ್ಯಗಳಿಗೆ ವ್ಯತ್ಯಯವಾಗುವುದನ್ನು ತಡೆಯಲು ಹೆಚ್ಚಿನ ತಜ್ಞರು ಎರಡು ವಿಧಗಳ ಆ್ಯಕ್ಯುಪಂಕ್ಚರ್ ಚಿಕಿತ್ಸೆಯನ್ನು ಬಳಸತ್ತಾರೆ.

 ಎಲೆಕ್ಟ್ರೊಆ್ಯಕ್ಯುಪಂಕ್ಚರ್ ಇದು ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಆ್ಯಕ್ಯುಪಂಕ್ಚರ್ ವಿಧವಾಗಿದ್ದು,ಸೂಜಿಗಳನ್ನು ನಿಗದಿತ ಬಿಂದುಗಳಿಗೆ ಚುಚ್ಚಲಾಗುತ್ತದೆ ಮತ್ತು ಒಂದು ಸೂಜಿಯಿಂದ ಇನ್ನೊಂದು ಸೂಜಿಗೆ ಕಡಿಮೆ ತೀವ್ರತೆಯ ವಿದ್ಯುತ್ ಏರಿಳಿತಗಳನ್ನು ಹಾಯಿಸಲಾಗುತ್ತದೆ. ಇದು ಇನ್ಸುಲಿನ್‌ಪ್ರತಿರೋಧವನ್ನು ತಗ್ಗಿಸಲು ಮತ್ತು ಇನ್ಸುಲಿನ್ ಸಂವೇದನಾಶೀಲತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಮಣಿಗಂಟು ಮತ್ತು ಕಣಕಾಲು ಚಿಕಿತ್ಸೆ

 ಮಣಿಗಂಟು ಮತ್ತು ಕಣಕಾಲು ಚಿಕಿತ್ಸೆಯು ಆ್ಯಕ್ಯುಪಂಕ್ಚರ್‌ನ ಇನ್ನೊಂದು ರೂಪವಾಗಿದ್ದು,ಇದು ನಿಗದಿತ ಬಿಂದುವಿನಲ್ಲಿ ಆಳವಾದ ಪ್ರಚೋದನೆಯನ್ನು ನೀಡುತ್ತದೆ. ಇದರಿಂದ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸಲು ಮತ್ತು ತನ್ಮೂಲಕ ಜೀವನಮಟ್ಟವನ್ನು ಉತ್ತಮಗೊಳಿಸಲು ನೆರವಾಗುತ್ತದೆ.

ಹರ್ಬಲ್ ಆ್ಯಕ್ಯುಪಂಕ್ಚರ್

ಇದು ಆ್ಯಕ್ಯುಪಂಕ್ಚರ್‌ನ ಇತ್ತೀಚಿನ ರೂಪವಾಗಿದೆ. ಈ ಚಿಕಿತ್ಸೆಯಲ್ಲಿ ಆ್ಯಕ್ಯುಪಂಕ್ಚರ್ ಬಿಂದುಗಳನ್ನು ನೇರವಾಗಿ ಗುರಿಯಿಟ್ಟುಕೊಂಡು ವಿಶೇಷ ವಿಧಗಳ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News