ಈ ದೇಶ ತಲುಪುವುದೆಲ್ಲಿಗೆ?
ಈಗ ಪ್ರತಿರೋಧವೇ ಇಲ್ಲದಂತಾಗಿದೆ. ಪ್ರತಿಧ್ವನಿಸಬೇಕಾದ ತರುಣರು ಪ್ರತಿಗಾಮಿ, ಫ್ಯಾಶಿಸ್ಟ್ ಪಡೆಯ ಬಲೆಗೆ ಬಿದ್ದಿದ್ದಾರೆ. ದಾಭೋಲ್ಕರ್, ಗೋವಿಂದ ಪನ್ಸ್ಸಾರೆ, ಡಾ.ಕಲಬುರ್ಗಿ, ಗೌರಿ ಲಂಕೇಶ್‌ರಂಥವರ ಹತ್ಯೆಗೆ ಸಂಭ್ರಮ ಪಡುವ ವಿಕೃತ ದೃಶ್ಯಗಳನ್ನು ನೋಡುತ್ತಿದ್ದೇವೆ. ಮುಂದೇನು? ಎಂಬ ಪ್ರಶ್ನೆಗೆ ತಾಳ್ಮೆಯಿಂದ ಉತ್ತರ ಹುಡುಕಬೇಕಿದೆ.
ಮಹಾತ್ಮಾ ಗಾಂಧೀಜಿಯನ್ನು ಕೊಂದು ದಕ್ಕಿಸಿಕೊಂಡಿದ್ದಾಯಿತು. ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ್ದಾಯಿತು. ಇನ್ನೂ ಇವರ ಹೊಟ್ಟೆ ತಣ್ಣಗಾಗಿಲ್ಲ. ದನ ಹತ್ಯೆಯ ನೆಪ ಮಾಡಿ, ಇಲ್ಲವೇ ಜೈ ಶ್ರೀ ರಾಮ್ ಎಂದು ಕೂಗಲಿಲ್ಲ ಎಂದು ಹಾದಿ ಬೀದಿಗಳಲ್ಲಿ ಗುಂಪು ದಾಳಿ ಮಾಡಿ ಅಮಾಯಕರನ್ನು ಹೊಡೆದು ಸಾಯಿಸಲಾಗುತ್ತಿದೆ. ಇದನ್ನು ಖಂಡಿಸಿ ಪ್ರಧಾನಿಗೆ ಪತ್ರ ಬರೆದ ರಾಮಚಂದ್ರ ಗುಹಾ, ಮಣಿರತ್ನಂ ಸೇರಿದಂತೆ 49 ಚಿಂತಕರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾದ ನಂತರ ಅದನ್ನು ಕೈ ಬಿಡಲಾಗಿದೆ.
ಗುಂಪು ದಾಳಿಯಿಂದ ಅಮಾಯಕರ ಹತ್ಯೆಯನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತರಿಗೆ ಈ ಗುಂಪು ದಾಳಿ ಎಂಬ ಶಬ್ದ ಬಳಕೆ ಯಾಕೋ ಇರಿಸು ಮುರಿಸನ್ನುಂಟು ಮಾಡಿದೆ. ಅವರು ಗುಂಪು ದಾಳಿಯ ಕೊಲೆಗಳನ್ನು ಖಂಡಿಸಲಿಲ್ಲ. ಆದರೆ, ಗುಂಪು ದಾಳಿ ಎಂದು ಕರೆದು ಖಂಡಿಸಿದವರನ್ನು ಖಂಡಿಸಿದರು.
‘ಭಾರತದ ಹೆಸರಿಗೆ ಮಸಿ ಬಲಿಯಲು ಗುಂಪು ದಾಳಿ ಎಂದು ಕರೆಯಲಾಗುತ್ತದೆ’ ಎಂದು ಟೀಕಿಸಿದರು. ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದ ಸಂದರ್ಭದಲ್ಲಿ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕೂಡ ಇದೇ ರೀತಿ ಹೇಳಿಕೆ ನೀಡಿದ್ದರು. 2002ರಲ್ಲಿ ನಡೆದ ಅಲ್ಪಸಂಖ್ಯಾತರ ನರಮೇಧವನ್ನು ಮೋದಿ ಖಂಡಿಸಲಿಲ್ಲ. ಆದರೆ, ಅದನ್ನು ಹತ್ಯಾಕಾಂಡ ಎಂದು ಕರೆದ ಮಾಧ್ಯಮಗಳನ್ನು, ಬುದ್ಧಿಜೀವಿಗಳನ್ನು ಬಲವಾಗಿ ಖಂಡಿಸಿ ಗುಜರಾತ್‌ನ ಹೆಸರನ್ನು ಕೆಡಿಸಲು ಅಪಪ್ರಚಾರ ನಡೆದಿದೆ ಎಂದು ಆರೋಪಿಸಿದ್ದರು. ಈಗ ಭಾಗವತರು ಅದನ್ನೇ ಮಾಡಿದ್ದಾರೆ.
ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಬಹುಸಂಖ್ಯಾತ ಕೋಮುವಾದದ ವಿಷ ಬೀಜ ಬಿತ್ತಿ ತಮ್ಮ ಜಾತಿ ಮತ್ತು ಕೋಮು ಹಿತಾಸಕ್ತಿ ಕಾಪಾಡಿಕೊಳ್ಳಲು ಭಾಗವತರು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಕೇಂದ್ರದ ಮೋದಿ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ಈಗ ಪರಿಸ್ಥಿತಿ ಕೈ ಮೀರಿದೆ. ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಹಿಂದೂರಾಷ್ಟ್ರ ನಿರ್ಮಾಣಕ್ಕೆ ಪೂರಕ ವಾತಾವರಣ ನಿರ್ಮಿಸಲು ಸಂಘ ಪರಿವಾರ ಅತ್ಯಂತ ವ್ಯವಸ್ಥಿತವಾಗಿ ತಂತ್ರ ರೂಪಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ನಂತರ ಅದು ಗೆಲುವಿನ ದುರಹಂಕಾರದಿಂದ ಸಂಭ್ರಮಿಸುತ್ತಿದೆ.
ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಸ್ವತಂತ್ರ ಭಾರತದ ದಿಕ್ಕನ್ನೇ ಬದಲಿಸಿದೆ. ಸ್ವಾತಂತ್ರಾನಂತರ ಜಾತ್ಯತೀತ, ಜನತಾಂತ್ರಿಕ ರಾಷ್ಟ್ರವಾಗಿ ಹೊರ ಹೊಮ್ಮಿದ್ದ ಭಾರತ ಈಗ ಮನುವಾದಿ ಹಿಂದೂರಾಷ್ಟ್ರವಾಗುವತ್ತ ದಾಪುಗಾಲಿಡುತ್ತ ಹೊರಟಿದೆ. ಕಳೆದ ಚುನಾವಣೆಯಲ್ಲಿ ಜಯಶಾಲಿಯಾಗಿರುವುದು ಬರೀ ಬಿಜೆಪಿ ಎಂಬ ರಾಜಕೀಯ ಪಕ್ಷವಲ್ಲ. ದೇಶಕ್ಕೆ ಸ್ವಾತಂತ್ರ ಬಂದಾಗ ಬಾಬಾ ಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ವಿರೋಧಿಸಿದ್ದ, ಜರ್ಮನಿ ನಾಝಿ ಸರ್ವಾಧಿಕಾರಿ ಫ್ಯಾಶಿಸ್ಟ್ ಹಿಟ್ಲರ್‌ನನ್ನು ಮಾದರಿಯಾಗಿಟ್ಟುಕೊಂಡಿದ್ದ ಮಾಧವ ಸದಾಶಿವ ಗೋಳ್ವಾಲ್ಕರ್ ಅವರ ಆರೆಸ್ಸೆಸ್ ನಿಯಂತ್ರಿತ ಕೂಟ ಭಾರತದ ಅಧಿಕಾರ ಸೂತ್ರ ಹಿಡಿದಿದೆ
ದೇಶದ ಸಂವಿಧಾನದ ಮೇಲೆ ನಂಬಿಕೆ ಹೊಂದಿರುವ ಪ್ರಗತಿಪರ, ಪ್ರಜಾತಾಂತ್ರಿಕ ಶಕ್ತಿಗಳ ಪಾಲಿಗೆ ಈ ಚುನಾವಣೆಯ ಸೋಲು ಅಂತಿಂಥ ಸೋಲಲ್ಲ. ಅದು ಮುಟ್ಟಿ ನೋಡಿಕೊಳ್ಳುವಂಥ ಚೇತರಿಸಲಾಗದಂಥ ಏಟು. ಬುದ್ಧನಿಂದ ಹಿಡಿದು ಬಸವಣ್ಣನವರ ವರೆಗೆ ನಂತರದ ಸಂತ ತುಕಾರಾಮ, ಚೋಕಾಮೇಳ, ಅವರ ನಂತರ ಬಂದ ಜ್ಯೋತಿಬಾ ಫುಲೆ, ಆಗರಕರ, ಶಾಹು ಮಹಾರಾಜರವರೆಗೆ ತದನಂತರ ನೆಹರೂ, ಅಂಬೇಡ್ಕರ್ ಕಾಲದವರೆಗೆ ಬೆಳೆದು ಬಂದ ಜಾತಿ ಮೀರಿದ ಮನುಷ್ಯ ಪ್ರೀತಿಯ ಪರಂಪರೆಗೆ ಉಂಟಾದ ಹಿನ್ನಡೆ ಅಂದರೆ ಅತಿಶಯೋಕ್ತಿಯಲ್ಲ. ಈಗ ರಾಜ್ಯಾಧಿಕಾರ ಕಾರ್ಪೊರೇಟ್, ಮನುವಾದಿ ಮೈತ್ರಿಕೂಟದ ಕೈಗೆ ಹೋಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಭಾರತದ ಇಂದಿನ ಬೆಳವಣಿಗೆ ಫ್ಯಾಶಿಸಂನ ಮೇಲುಗೈ ಎಂದು ಎಡಪಂಥೀಯ ವಲಯಗಳಲ್ಲಿ ಸಾಮಾನ್ಯವಾಗಿ ವರ್ಣಿಸಲಾಗುತ್ತದೆ. ಕಳೆದ ಶತಮಾನದ ಮೂರನೇ ದಶಕದಲ್ಲಿ ಜಾಗತಿಕವಾಗಿ, ವಿಶೇಷವಾಗಿ ಯುರೋಪಿನ ಹಿನ್ನೆಲೆಯಲ್ಲಿ ಕಮ್ಯುನಿಸ್ಟರು ಫ್ಯಾಶಿಸಂನ ವ್ಯಾಖ್ಯಾನ ಮಾಡಿದಷ್ಟು ಇದು ಸರಳವಾಗಿಲ್ಲ. ಆಗ ಬಂಡವಾಳಶಾಹಿ ಬಿಕ್ಕಟ್ಟು ಜರ್ಮನಿಯಲ್ಲಿ ಹಿಟ್ಲರ್‌ನನ್ನು ಮತ್ತು ಇಟಲಿಯಲ್ಲಿ ಮುಸ್ಸೋಲಿನಿಯನ್ನು ಸೃಷ್ಟಿಸಿತು. ಆದರೆ, ಜಾಗತೀಕರಣ ಮತ್ತು ಉದಾರೀಕರಣದ ಇಂದಿನ ಕಾಲ ಘಟ್ಟದಲ್ಲಿ ಭಾರತದಲ್ಲಿ ತಲೆ ಎತ್ತಿದ ಫ್ಯಾಶಿಸಂ ಅಂದಿನ ಫ್ಯಾಶಿಸಂನ ಯಾಥಾ ರೀತಿ ನಕಲಲ್ಲ. ಇದು ಅತ್ಯಂತ ವಿಭಿನ್ನವಾದ ಭಾರತದ ಜಾತಿ ಶ್ರೇಣೀಕರಣ ವ್ಯವಸ್ಥೆಯ ಹಿನ್ನೆಲೆಯಲ್ಲಿ ಹೊಸ ಅವತಾರ ತಾಳಿದ ಮನುವಾದಿ ಫ್ಯಾಶಿಸಂ. ಅಲ್ಲಿ ಜರ್ಮನಿಯಲ್ಲಿ ಹಿಟ್ಲರ್ ಇಟಲಿಯಲ್ಲಿ ಮುಸ್ಸೋಲಿನಿ ಅಂತ್ಯದೊಂದಿಗೆ ಫ್ಯಾಶಿಸಂ ಅಂತ್ಯವಾಯಿತು, ಆದರೆ ಇಲ್ಲಿನದು ಅಷ್ಟು ಸುಲಭಕ್ಕೆ ಸೋಲುವ ಫ್ಯಾಶಿಸಂ ಅಲ್ಲ.
ಇಲ್ಲಿ ಫ್ಯಾಶಿಸಂ ಪ್ರಜಾಪ್ರಭುತ್ವದ ನೆರಳಲ್ಲೆ ಬೆಳೆದು ನಿಂತಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಳಸಿಕೊಂಡೇ ರಾಜಕೀಯ ಅಧಿಕಾರ ಹಿಡಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಟ್ಟುಕೊಂಡೇ ಜನತಾಂತ್ರಿಕ ಹಕ್ಕುಗಳ ದಮನ ಕಾರ್ಯ ನಡೆದಿದೆ. ಅದಕ್ಕಾಗಿ ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಸಿಬಿಐ, ರಿಸರ್ವ್ ಬ್ಯಾಂಕ್, ನ್ಯಾಯಾಂಗ ಸೇರಿದಂತೆ ಎಲ್ಲಾ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಎಗ್ಗಿಲ್ಲದೆ ಬಳಸಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಚಳವಳಿಯನ್ನು ಹತ್ತಿಕ್ಕಿದ ರೀತಿ ಹಾಗೂ ಜಮ್ಮು ಕಾಶ್ಮೀರದ ಇಂದಿನ ಪರಿಸ್ಥಿತಿ ಇದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ.
2014 ಮತ್ತು 2019 ಹೀಗೆ ಎರಡೂ ಬಾರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಯಾಯಿತು. 2014ರಲ್ಲಿ ಜನರಿಗೆ ನೀಡಿದ ಯಾವ ಭರವಸೆಗಳನ್ನೂ ಈಡೇರಿಸಲಿಲ್ಲ. ಬದಲಾಗಿ ನೋಟು ಅಮಾನ್ಯೀಕರಣ, ಜಿಎಸ್‌ಟಿ, ಗುಂಪು ದಾಳಿ ಮಾಡಿ ಹತ್ಯೆ, ದಲಿತರ, ಅಲ್ಪಸಂಖ್ಯಾತರ ಮೇಲೆ ದಾಳಿ, ಕಡಿವಾಣವಿಲ್ಲದ ಬೆಲೆ ಏರಿಕೆ, ಹೆಚ್ಚಿದ ನಿರುದ್ಯೋಗ ಇವೆಲ್ಲವುಗಳಿಂದ ಜನ ಸಾಮಾನ್ಯರು ತೊಂದರೆಗೊಳಗಾದರು. ಇದರಿಂದ ರೋಸಿ ಹೋದ ಜನ 2019ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತಾರೆಂಬ ನಿರೀಕ್ಷೆ ಹುಸಿಯಾಯಿತು. ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದು ಮೋದಿ ಮತ್ತೆ ಪ್ರಧಾನಿಯಾದರು. ಇದಕ್ಕೆ ಪ್ರತಿಪಕ್ಷ ಗಳ ಅನೈಕ್ಯತೆಯೂ ಒಂದು ಕಾರಣ.
ಆರೆಸ್ಸೆಸ್ ಇಂದು ದೇಶದಲ್ಲಿ ಅತ್ಯಂತ ಬಲಿಷ್ಠ ಸಂಘಟನೆಯಾಗಿದೆ. ಅದು 10 ಲಕ್ಷ ಮಂದಿ ಸಶಸ್ತ್ರ ತರಬೇತಿ ಪಡೆದ ಕಾರ್ಯಕರ್ತರನ್ನು ಹೊಂದಿದೆ. ದೇಶದ ಅನೇಕ ಕಡೆ ಸಾವಿರಾರು ಶಾಲೆ, ಕಾಲೇಜು, ಆಸ್ಪತ್ರೆ ಗಳನ್ನು ನಡೆಸುತ್ತಿದೆ. ಆದಿವಾಸಿಗಳ ಪ್ರದೇಶದಲ್ಲಿ ಕೂಡ ನೂರಾರು ಏಕಲ (ಏಕೋಪಾಧ್ಯಾಯ) ವಿದ್ಯಾಲಯಗಳನ್ನು ಹೊಂದಿದೆ. ಅಲ್ಲೆಲ್ಲ ಎಂಥವರು ತಯಾರಾಗಿ ಬರುತ್ತಾರೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ.
ಬಿಜೆಪಿ ಗೆಲುವಿನಲ್ಲಿ ಫೇಸ್‌ಬುಕ್ ವಾಟ್ಸ್‌ಆ್ಯಪ್ ಮುಂತಾದ ಸಂವಹನ ಮಾಧ್ಯಮಗಳು, ದೇಶದ ಮುಂಚೂಣಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿದವು. ಇಂದಿನ ಬಹುತೇಕ ಯುವಕರು ವಾಟ್ಸ್‌ಆ್ಯಪ್ ಪ್ರಿಯರು. ಅಲ್ಲೇ ಅವರ ಮೆದುಳಿಗೆ ಅಫೀಮು ತಿಕ್ಕಲಾಗುತ್ತದೆ. ಮುಂಚೆ ನಗರ ಪ್ರದೇಶದ ಬ್ರಾಹ್ಮಣರ ಓಣಿಗೆ ಸೀಮಿತವಾಗಿದ್ದ ಆರೆಸ್ಸೆಸ್ ಶಾಖೆಗಳು ಗ್ರಾಮೀಣ ಪ್ರದೇಶಗಳ ಶೂದ್ರರ ಓಣಿಗಳನ್ನು ಪ್ರವೇಶಿಸಿವೆ. ಎಲ್ಲೆಡೆ ಹೊಸ ಪೀಳಿಗೆ ಜಾತಿ ಗೆರೆಗಳನ್ನು ದಾಟಿ ಕೋಮುವಾದದ ಬಲೆಗೆ ಬಿದ್ದಿದೆ. ಇದಕ್ಕೆ ಅಂಬೇಡ್ಕರ್ ಪ್ರಭಾವವಿರುವ ದಲಿತರು ಮಾತ್ರ ಅಪವಾದ. ಇದನ್ನು ತಡಯಬೇಕಾದ ಎಡ ಪಕ್ಷಗಳ ಸಾಮೂಹಿಕ ಸಂಘಟನೆಗಳು ಅದರಲ್ಲೂ ಸಂಘಟಿತ ನೌಕರ ವರ್ಗದ ಸಂಘಟನೆಗಳು ಆರ್ಥಿಕ ಹೋರಾಟಕ್ಕೆ ಸೀಮಿತಗೊಂಡಿವೆ. ಆರ್ಥಿಕ ಹೋರಾಟಗಳಲ್ಲಿ ಕೆಂಬಾವುಟ ಹಿಡಿಯುವ ಕಾರ್ಮಿಕರು ರಾಜಕೀಯ ಪ್ರಶ್ನೆ ಬಂದರೆ ಬಿಜೆಪಿ ಪರ ನಿಲುವು ತಾಳುತ್ತಾರೆ. ಎಲ್ಲರೂ ಅಲ್ಲದಿದ್ದರೂ ಹೆಚ್ಚಿನವರು ಹಾಗೇ ಇದ್ದಾರೆ. ಅಯೋಧ್ಯೆಯ ರಾಮ ಮಂದಿರ ಚಳವಳಿಯಲ್ಲೂ ಪಾಲ್ಗೊಳ್ಳುತ್ತಾರೆ.
ಜನತಾಂತ್ರಿಕ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವುದು ಸಂಘಪರಿವಾರದ ದೀರ್ಘ ಕಾಲೀನ ಕಾರ್ಯಕ್ರಮ. ಅದಕ್ಕೆ ಎದುರಾಗುವ ಪ್ರತಿರೋಧದ ಕೋಟೆಗಳನ್ನು ಅದು ಅತ್ಯಂತ ಜಾಣತನದಿಂದ, ಅತ್ಯಂತ ತಾಳ್ಮೆಯಿಂದ, ಛಿದ್ರಗೊಳಿಸುತ್ತ ಬಂದಿದೆ. ಸೈದ್ಧಾಂತಿಕ ಎದುರಾಳಿಗಳನ್ನು ಕಾಂಗ್ರೆಸ್ ವಿರೋಧಿ ರಂಗ ಎಂಬ ದೃತರಾಷ್ಟ್ರಾಲಿಂಗನದ ಮೂಲಕ ನಿರ್ನಾಮಗೊಳಿಸುತ್ತ, ಇದಕ್ಕೆ ಸಮಾಜವಾದಿಗಳು ಅದರಲ್ಲೂ ಲೋಹಿಯಾವಾದಿಗಳು ಹಾಗೂ ಜೆಪಿ ಚಳವಳಿಯ ಕೊಡುಗೆ ಅಪಾರವಾಗಿದೆ.
ಅರುವತ್ತರ ದಶಕದ ಕೊನೆಯಲ್ಲಿ ನೆಹರೂ ನಿಧನದ ನಂತರ ಕಾಂಗ್ರೆಸ್ ಪ್ರಭಾವ ಕ್ಷೀಣಿಸತೊಡಗಿತ್ತು. ಆಗ ಭಾರತೀಯ ಜನಸಂಘ ಅಷ್ಟು ಬಲಶಾಲಿಯಾಗಿರಲಿಲ್ಲ. ವಾಸ್ತವವಾಗಿ ಲೋಹಿಯಾರ ಸಂಯುಕ್ತ ಸಮಾಜವಾದಿ ಪಕ್ಷ ಮತ್ತು ಪ್ರಜಾ ಸಮಾಜವಾದಿ ಪಕ್ಷಗಳು ಪ್ರಭಾವಿಯಾಗಿದ್ದವು. ಇನ್ನೊಂದೆಡೆ ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ, ಬಿಹಾರ,ಆಂಧ್ರಪ್ರದೇಶಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳು ಬಲಿಷ್ಠವಾಗಿದ್ದವು. ಅಂತಲೇ 1967ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎಡಪಂಥೀಯರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿದ್ದರು. ಈ ಕಾಲಘಟ್ಟದಲ್ಲಿ ರಾಮ್ ಮನೋಹರ ಲೋಹಿಯಾ ಅವರು ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕೆ ಚಾಲನೆ ನೀಡಿದರು. ಜನಸಂಘ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಒಂದಾಗಿ ಕಾಂಗ್ರೆಸನ್ನು ಅಧಿಕಾರದಿಂದ ತೊಲಗಿಸಬೇಕೆಂದು ಕರೆ ನೀಡಿದರು. ಈ ಕಾಂಗ್ರೆಸ್ ವಿರೋಧಿ ರಂಗಕ್ಕೆ ಯಾವುದೇ ನಿರ್ದಿಷ್ಟವಾದ ಆರ್ಥಿಕ, ಸಾಮಾಜಿಕ ಕಾರ್ಯಕ್ರಮ ಇರಲಿಲ್ಲ. ಆಗ ಎದ್ದ ಕಾಂಗ್ರೆಸ್ ವಿರೋಧಿ ಅಲೆಯನ್ನು ಬಳಸಿಕೊಂಡು ಸಿದ್ಧಾಂತದ ನೆಲೆಯಲ್ಲಿ ಪಕ್ಷವನ್ನು ಕಟ್ಟಿ ವಿಸ್ತರಿಸುವ ಅವಕಾಶಗಳು ಸೋಶಿಯಲಿಸ್ಟರಿಗಿದ್ದವು. ಆದರೆ, ಅವರು ಕೈ ಚೆಲ್ಲಿದರು. ಮುಂದೆ 1975ರಲ್ಲಿ ದೇಶದ ಮೇಲೆ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು. ಆಗ ಲೋಹಿಯಾ ಇರಲಿಲ್ಲ. ಮತ್ತೊಬ್ಬ ಹಿರಿಯ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್(ಜೆಪಿ) ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದ ನೇತೃತ್ವ ವಹಿಸಿದರು. ಇದರಲ್ಲಿ ಆರೆಸ್ಸೆಸ್‌ನ್ನು ಸೇರಿಸಿಕೊಂಡರು. ಆಗ ಕೆಲ ಎಡಪಂಥೀಯರು ಕೋಮುವಾದಿಗಳು ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ ಕೆರಳಿ ಕೆಂಡವಾದ ಜೆಪಿ ‘ಆರೆಸ್ಸೆಸ್ ಕೋಮುವಾದಿಯಾದರೆ ನಾನೂ ಕೋಮುವಾದಿ. ಅದನ್ನು ಬಿಡಲು ಸಾಧ್ಯವಿಲ್ಲ’ ಎಂದು ಅಪ್ಪಿಕೊಂಡರು. 1948ರ ಗಾಂಧಿ ಹತ್ಯೆಯ ನಂತರ ಭಾರತದ ಜನರಿಂದ ಅಘೋಷಿತವಾಗಿ ಬಹಿಷ್ಕಾರಕ್ಕೆ ಒಳಗಾಗಿದ್ದ ಆರೆಸ್ಸೆಸ್, ಜೆಪಿ ಚಳವಳಿಯಲ್ಲಿ ಮತ್ತೆ ಸಾಮಾಜಿಕ ಮನ್ನಣೆ ಪಡೆಯಿತು. ಅದರ ಪ್ರಭಾವ ವಿಸ್ತರಿಸಿಕೊಂಡಿತು. ಇದಕ್ಕೆ ಗಾಂಧೀಜಿ ಶಿಷ್ಯರೇ ಆದ ಲೋಹಿಯಾ ಮತ್ತು ಜೆಪಿ ಕಾರಣ. ಹಿರಿಯ ಸಮಾಜವಾದಿಗಳಾದ ಇವರಿಗೆ ಆರೆಸ್ಸೆಸ್‌ನಂಥ ಫ್ಯಾಶಿಸ್ಟ್ ಸಂಘಟನೆಯ ಅಪಾಯದ ಬಗ್ಗೆ ಅರಿವಿರಬೇಕಿತ್ತು. ಆಗ ಆರೆಸ್ಸೆಸ್ ವರಿಷ್ಠರಾಗಿದ್ದ ಗೋಳ್ವಾಲ್ಕರ್ ಬರೆದ ಪುಸ್ತಕ ‘ಬಂಚ್ ಆಫ್ ಥಾಟ್ಸ್’ ಪ್ರಕಟವಾಗಿತ್ತು. ಅದರಲ್ಲಿ ಅವರು ಜರ್ಮನಿಯ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನನ್ನು ಹಾಡಿ ಹೊಗಳಿದ್ದರು. ಅಲ್ಲಿನ ಯಹೂದಿಗಳ ನರಮೇಧದ ಬಗ್ಗೆ ಮೌನವಾಗಿದ್ದ ಗೋಳ್ವಾಲ್ಕರ್, ‘ಹಿಟ್ಲರ್‌ನಿಂದ ಹಿಂದೂಗಳು ಸ್ಫೂರ್ತಿ ಪಡೆಯಬೇಕು’ ಎಂದು ಹೇಳಿದ್ದರು. ಇಂಥ ಫ್ಯಾಶಿಸ್ಟ್ ಸಂಘಟನೆ ಜೊತೆ ಸೇರಿ ಅದಕ್ಕೆ ಮಾನ್ಯತೆ ತಂದು ಕೊಡುವಾಗ ಹಿರಿಯ ಸಮಾಜವಾದಿಗಳಿಗೆ ಎಚ್ಚರ ಇರಬೇಕಾಗಿತ್ತು . ಇದೆಲ್ಲ ಮುಗಿದ ನಂತರ ಹಿರಿಯ ಸಮಾಜವಾದಿ ಚಿಂತಕ ಮಧುಲಿಮಯೆ ಈ ಬಗ್ಗೆ ವಿಮರ್ಶೆ ಮಾಡಿಕೊಂಡಿದ್ದರು.
ಆಗ ಅಸ್ತಿತ್ವ ಕಳೆದುಕೊಂಡ ಸಮಾಜವಾದಿ ಪಕ್ಷಗಳು ಮತ್ತೆ ಮೇಲೇಳಲಿಲ್ಲ. ಅವರ ಪ್ರಾಬಲ್ಯದ ನೆಲೆಗಳು ಸಂಘಪರಿವಾರದ ಪಾಲಾದವು. ಹೀಗೆ ಸೈದ್ಧಾಂತಿಕ ಎದುರಾಳಿಗಳನ್ನು ಹಿತವಾದ ಅಪ್ಪುಗೆಯ ಮೂಲಕವೇ ಹಿಸುಕಿ ಹಾಕಿದ ಸಂಘಪರಿವಾರ ಈಗ ಇಡೀ ದೇಶವನ್ನೇ ನಿಯಂತ್ರಿಸುತ್ತಿದೆ. ಸಮಾಜದಲ್ಲಿ ಸಮಾಜವಾದ ನಿರ್ಮಾಣದ ತಮ್ಮ ಗುರಿಗೆ ತಿಲಾಂಜಲಿ ನೀಡಿದ ಸೋಶಿಯಲಿಸ್ಟರು ಮನುವಾದಿ ಫ್ಯಾಶಿಸಂ ಈ ದೇಶದಲ್ಲಿ ತಲೆಎತ್ತಲು ಅಪ್ರಜ್ಞಾಪೂರ್ವಕವಾಗಿ ನೆರವಾಗಿರುವುದು ಸ್ವತಂತ್ರ ಭಾರತದ ಚರಿತ್ರೆಯ ವಿಷಾದಕರ ಅಧ್ಯಾಯ.
ತುರ್ತು ಪರಿಸ್ಥಿತಿ ಮುಗಿದ ನಂತರ ಕಾಂಗ್ರೆಸ್ ವಿರೋಧಿ ಪಕ್ಷಗಳೆಲ್ಲ ತಮ್ಮ ಪಕ್ಷಗಳನ್ನು ವಿಸರ್ಜಿಸಿ ಒಂದೇ ಪಕ್ಷವಾಗಬೇಕೆಂದು ಜೆಪಿ ಕರೆ ನೀಡಿದರು. ಅದನ್ನು ಒಪ್ಪಿಅಂದಿನ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಪಕ್ಷ, ಸಮಾಜವಾದಿ ಪಕ್ಷ ಹಾಗೂ ಜನಸಂಘಗಳು ವಿಸರ್ಜನೆ ಗೊಂಡು ಜನತಾ ಪಕ್ಷ ಉದಯಿಸಿತು. 1997ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು, ಜನತಾ ಪಕ್ಷ ಬಹುಮತ ಗಳಿಸಿತು. ಆಗ ಬಂದ ಹೊಸ ಸರಕಾರದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಜಾರ್ಜ್ ಫೆರ್ನಾಂಡಿಸ್, ವಾಜಪೇಯಿ, ಅಡ್ವಾಣಿ ಮುಂತಾದವರು ಮಂತ್ರಿಗಳಾದರು. ಮುಂದೆ ದ್ವಿಸದಸ್ಯತ್ವ ಪ್ರಶ್ನೆಯಲ್ಲಿ ಭಿನ್ನಾಭಿಪ್ರಾಯ ಬಂದು ಸರಕಾರ ಉರುಳಿತು. ಕಾಂಗ್ರೆಸ್ ವಿರೋಧಿಸಿ ಅಸ್ತಿತ್ವಕ್ಕೆ ಬಂದಿದ್ದ ಜನತಾ ಪಕ್ಷದಲ್ಲಿ ಜನಸಂಘವೇನೋ ವಿಲೀನವಾಯಿತು.
ಆದರೆ ಆರೆಸ್ಸೆಸ್ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡಿತು. ಹೀಗೆ ಪ್ರತ್ಯೇಕವಾಗಿ ಉಳಿದ ಆರೆಸ್ಸೆಸ್ ಪರೋಕ್ಷವಾಗಿ ಮೊರಾರ್ಜಿ ದೇಸಾಯಿ ಸರಕಾರವನ್ನು ನಿಯಂತ್ರಿಸತೊಡಗಿತು. ಸರಕಾರದಲ್ಲಿದ್ದ ತನ್ನ ಸ್ವಯಂ ಸೇವಕರ ಮೂಲಕ ತನ್ನ ಅಜೆಂಡಾ ಜಾರಿಗೆ ತರತೊಡಗಿತು. ಇದನ್ನು ಪ್ರತಿಭಟಿಸಿ ಮಧು ಲಿಮಯೆ ಮುಂತಾದ ಸೋಶಿಯಲಿಸ್ಟರು ದ್ವಿಸದಸ್ಯತ್ವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಜನತಾ ಪಕ್ಷದಲ್ಲಿ ಇದ್ದ ವಾಜಪೇಯಿ, ಅಡ್ವಾಣಿ ಮುಂತಾದವರು ಆರೆಸ್ಸೆಸ್‌ನಿಂದ ದೂರವಾಗಬೇಕು. ಅದರ ಸದಸ್ಯತ್ವ ಬಿಡಬೇಕೆಂದು ಒತ್ತಡ ಹೇರಿದರು. ಆದರೆ, ಸಂಘಕ್ಕೆ ನಿಷ್ಠರಿರುವುದಾಗಿ ವಾಜಪೇಯಿ ಮುಂತಾದ ಜನಸಂಘದವರು ಹೊರಗೆ ಬಂದು ಬಿಜೆಪಿಯನ್ನು ಕಟ್ಟಿಕೊಂಡರು.
ಈಗ ಕಾಲ ಮಿಂಚಿ ಹೋಗಿದೆ. ನಡೆಯಬಾರದ್ದು ನಡೆದು ಹೋಗಿದೆ. ಈಗ ಸಂವಿಧಾನ ಬದಲಾವಣೆ, ಸನಾತನ ಹಿಂದೂರಾಷ್ಟ್ರ ನಿರ್ಮಾಣದ ಮಾತು ಬಲವಾಗಿ ಕೇಳಿಬರುತ್ತಿದೆ. ಭಿನ್ನಮತವನ್ನು ನಿರ್ದಯವಾಗಿ ದಮನ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಜಿಡಿಪಿ ಪಾತಾಳಕ್ಕೆ ಹೋಗಿದೆ. ಕೈಗಾರಿಕೆಗಳು ದಿವಾಳಿಯಾಗುತ್ತಿವೆ. ನಿರುದ್ಯೋಗ ಉಲ್ಬಣಗೊಂಡಿದೆ. ಈಗ ಎಮರ್ಜೆನ್ಸಿ ಹೇರಿಲ್ಲ. ಅದನ್ನು ಹೇರದೆ ಭಯಾನಕ ದಮನ ಸತ್ರ ನಡೆದಿದೆ. ಈಗ ಪ್ರತಿರೋಧವೇ ಇಲ್ಲದಂತಾಗಿದೆ. ಪ್ರತಿಧ್ವನಿಸಬೇಕಾದ ತರುಣರು ಪ್ರತಿಗಾಮಿ, ಫ್ಯಾಶಿಸ್ಟ್ ಪಡೆಯ ಬಲೆಗೆ ಬಿದ್ದಿದ್ದಾರೆ. ದಾಭೋಲ್ಕರ್, ಗೋವಿಂದ ಪನ್ಸ್ಸಾರೆ, ಡಾ.ಕಲಬುರ್ಗಿ, ಗೌರಿ ಲಂಕೇಶ್‌ರಂಥವರ ಹತ್ಯೆಗೆ ಸಂಭ್ರಮ ಪಡುವ ವಿಕೃತ ದೃಶ್ಯಗಳನ್ನು ನೋಡುತ್ತಿದ್ದೇವೆ. ಮುಂದೇನು? ಎಂಬ ಪ್ರಶ್ನೆಗೆ ತಾಳ್ಮೆಯಿಂದ ಉತ್ತರ ಹುಡುಕಬೇಕಿದೆ.
ಆದರೆ ಲೋಹಿಯಾವಾದಿಗಳು, ಜೆಪಿ ವಾದಿಗಳು ಮಾಡಿದ ತಪ್ಪನ್ನು ಅಂಬೇಡ್ಕರ್‌ವಾದಿಗಳು, ಮಾರ್ಕ್ಸ್‌ವಾದಿಗಳು ಮಾಡಲಿಲ್ಲ. ಅವರು ತಮ್ಮ ಅಸ್ತಿತ್ವ ಉಳಿಸಿಕೊಂಡು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಈಗಲೂ ಸೆಣಸುತ್ತಿದ್ದಾರೆ.