ಪ್ರಜ್ಞಾಶೂನ್ಯತೆಯ ಕಾರಣಗಳು ಮತ್ತು ಲಕ್ಷಣಗಳು

Update: 2019-10-20 14:25 GMT

ಕೆಲವರು ಆಗಾಗ್ಗೆ ಬವಳಿ ಬಂದು ಬಿದ್ದು ಕೆಲವು ಸಮಯದವರೆಗೆ ಭಾಗಶಃ ಅಥವಾ ಸಂಪೂರ್ಣವಾಗಿ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ. ವೈದ್ಯಕೀಯವಾಗಿ ಈ ಸ್ಥಿತಿಯನ್ನು ‘ಸಿಂಕಪಿ’ ಎಂದು ಕರೆಯುತ್ತಾರೆ.

► ಕಾರಣಗಳು

ಮಿದುಳಿನ ಕಾರ್ಯನಿರ್ವಹಣೆಗೆ ಅಗತ್ಯವಾದಷ್ಟು ರಕ್ತ ಪೂರೈಕೆಯಾಗದಿದ್ದಾಗ ವ್ಯಕ್ತಿ ಬವಳಿ ಬಂದು ಬೀಳುತ್ತಾನೆ ಮತ್ತು ಪ್ರಜ್ಞಾಶೂನ್ಯನಾಗುತ್ತಾನೆ. ಹೃದಯ ಕವಾಟಗಳ ಸಮಸ್ಯೆ,ಹೃದಯ ಬಡಿತದ ದರ ಅತಿ ನಿಧಾನ ಅಥವಾ ಅತಿ ವೇಗವಾಗಿರುವಂತಹ ಯಾವುದೇ ಸ್ಥಿತಿಯಲ್ಲಿ ಮಿದುಳಿಗೆ ಸಾಕಷ್ಟು ರಕ್ತವನ್ನು ಪೂರೈಸಲು ಹೃದಯಕ್ಕೆ ಸಾಧ್ಯವಾಗದಿದ್ದಾಗ ಈ ಸ್ಥಿತಿಯುಂಟಾಗಬಹುದು. ವ್ಯಕ್ತಿ ತುಂಬ ಹೊತ್ತು ಹಸಿದುಕೊಂಡ ಪರಿಣಾಮ ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿದಾಗ ಅಥವಾ ವ್ಯಕ್ತಿಯು ಮಧುಮೇಹದಿಂದ ನರಳುತ್ತಿದ್ದರೆ ಆಗಲೂ ಆತ ಪ್ರಜ್ಞಾಶೂನ್ಯತೆಗೆ ತುತ್ತಾಗಬಹುದು.

► ಲಕ್ಷಣಗಳು

ವ್ಯಕ್ತಿಯು ಬವಳಿ ಬಂದು ಬೀಳುವ ಮುನ್ನ ಹೃದಯ ವೇಗವಾಗಿ ಹೊಡೆದುಕೊಳ್ಳುವುದು,ವಾಕರಿಕೆ,ತಲೆ ಸುತ್ತುವಿಕೆ,ನಿಶ್ಶಕ್ತಿ ಮತ್ತು ಕಣ್ಣು ಕತ್ತಲಾದಂತಹ ಲಕ್ಷಣಗಳು ಅನುಭವಕ್ಕೆ ಬರಬಹುದು.

► ರೋಗನಿರ್ಧಾರ ಹೇಗೆ?

ಇಂತಹ ಸ್ಥಿತಿಯುಂಟಾದಾಗ ಕಾರಣವನ್ನು ಕಂಡುಕೊಳ್ಳಲು ತಕ್ಷಣವೇ ವೈದ್ಯರನ್ನು ಕಾಣಬೇಕಾಗುತ್ತದೆ. ರೋಗಿಯ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಿದ ನಂತರ ರಕ್ತದೊತ್ತಡ ಮತ್ತು ನಾಡಿ ಪರೀಕ್ಷೆ ನಡೆಸಲಾಗುತ್ತದೆ. ವೈದ್ಯರು ಕೆಲವು ಪ್ರಯೋಗಾಲಯ ಪರೀಕ್ಷೆಗಳು ಮತ್ತು ಇಸಿಜಿಗೂ ಸೂಚಿಸಬಹುದು. ಹೃದಯದ ಕವಾಟದಲ್ಲಿ ದೋಷಗಳಿವೆಯೇ ಎನ್ನುವುದನ್ನು ತಿಳಿದುಕೊಳ್ಳಲು ಎಕೋಕಾರ್ಡಿಯಾಗ್ರಾಮ್ ಪರೀಕ್ಷೆಯನ್ನೂ ಅವರು ಮಾಡಬಹುದು.

► ಚಿಕಿತ್ಸೆ

ಬವಳಿ ಬಂದು ಬೀಳುವುದಕ್ಕೆ ಕಾರಣವನ್ನು ಆಧರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಹೃದಯವು ಅಸಹಜವಾಗಿ ಬಡಿದುಕೊಳ್ಳುತ್ತಿದ್ದರೆ ಔಷಧಿಗಳನ್ನು ಸೂಚಿಸಲಾಗುತ್ತದೆ. ರಕ್ತನಾಳಗಳಲ್ಲಿಯ ಸಮಸ್ಯೆಗಳಿಂದಾಗಿ ಮಿದುಳಿಗೆ ರಕ್ತ ಪೂರೈಕೆ ಕಡಿಮೆಯಾಗುತ್ತಿದ್ದರೆ ರಕ್ತ ಸಂಚಲನವನ್ನು ಹೆಚ್ಚಿಸುವ ನಿರ್ದಿಷ್ಟ ಔಷಧಿಗಳನ್ನು ವೈದ್ಯರು ಶಿಫಾರಸು ಮಾಡಬಹುದು.

► ನೀಡಬೇಕಾದ ಪ್ರಥಮ ಚಿಕಿತ್ಸೆ ಏನು?

ಬವಳಿ ಬಂದು ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯು ಮಿದುಳಿಗೆ ರಕ್ತದ ಹರಿವು ಮತ್ತೆ ಸಹಜಗೊಂಡಾಗ ಪ್ರಜ್ಞೆಯನ್ನು ಮರಳಿ ಪಡೆದುಕೊಳ್ಳುತ್ತಾನೆ. ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯನ್ನು 10-15 ನಿಮಿಷಗಳ ಕಾಲ ಮಲಗಿಸಬೇಕು ಮತ್ತು ಕಾಲುಗಳು ಎತ್ತರಿಸಿದ ಭಂಗಿಯಲ್ಲಿರಬೇಕು. ರೋಗಿಯು ಸಹಜವಾಗಿ ಉಸಿರಾಡುತ್ತಿದ್ದರೆ ಕಾಲುಗಳನ್ನು ಎದೆಯ ಮಟ್ಟಕ್ಕಿಂತ ಮೇಲಕ್ಕೆತ್ತಬೇಕು,ಇದು ಮಿದುಳಿಗೆ ಹೆಚ್ಚಿನ ರಕ್ತ ಪೂರೈಕೆಗೆ ಮತ್ತು ರೋಗಿಯು ಸಹಜ ಸ್ಥಿತಿಗೆ ಮರಳಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News