ಕಲಬುರಗಿಯಲ್ಲಿ ಕಂಡ ಕನ್ಹಯ್ಯ

Update: 2019-10-21 07:24 GMT

ಕಲಬುರಗಿಯಲ್ಲಿ ಕನ್ಹಯ್ಯ ಕುಮಾರ್ ಸಭೆಗೆ ಬಂದವರೆಲ್ಲ, ಕಮ್ಯುನಿಸ್ಟರಲ್ಲ. ಕಮ್ಯುನಿಸ್ಟ್ ಸಾಮೂಹಿಕ ಸಂಘಟನೆಗಳಿಗೆ ಸೇರಿದವರಲ್ಲ. ಅಲ್ಲಿ ಬಂದವರು ಯಾವುದೇ ಪಕ್ಷಕ್ಕೆ ಸೇರದ ಜನ ಸಾಮಾನ್ಯರು, ವಿಶೇಷವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಯುವಕರು ಫ್ಯಾಸಿಸ್ಟ್ ಸರಕಾರದ ದಮನ ನೀತಿಯಿಂದ ಬೇಸತ್ತು ಹತಾಶರಾಗಿ ಹೊಸಬ ದಾರಿಯ ಹುಡುಕಾಟದಲ್ಲಿರುವವರು.


ಕಳೆದ ವಾರ ಅಕ್ಟೋಬರ್ 15 ನೇ ತಾರೀಕು ಕನ್ಹಯ್ಯೋ ಕುಮಾರ್ ಕಲಬುರಗಿಗೆ ಬಂದಿದ್ದರು. ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ಮೇಲೆ ರಾಜದ್ರೋಹದ ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ ನಂತರ ರಾಷ್ಟ್ರೀಯ ನಾಯಕನಾಗಿ ಹೊರ ಹೊಮ್ಮಿದ ಬಿಹಾರದ ಬೇಗುಸರಾಯ್‌ನ ಈ ಹುಡುಗ ಈಗ ಮನೆ ಮಾತಾಗಿದ್ದಾರೆ. ಕಲಬುರಗಿಯಂಥ ನಗರದಲ್ಲೂ ಇವರ ಭಾಷಣಕ್ಕೆ ಎಂಟು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು.

ಎರಡು ಕಾರಣಗಳಿಗಾಗಿ ಕನ್ಹಯ್ಯ ಕುಮಾರ್ ಎಲ್ಲರ ಗಮನ ಸೆಳೆದಿದ್ದಾರೆ. ದೇಶದಲ್ಲಿ ವಿರೋಧ ಪಕ್ಷ ಸಂಪೂರ್ಣ ನಿತ್ರಾಣಗೊಂಡಾಗ ಕನ್ಹಯ್ಯಾರ ಧ್ವನಿಯೊಂದೇ ಎಲ್ಲೆಡೆ ಕೇಳುತ್ತಿದೆ. ಎರಡನೆಯದು ಇವರ ವಾಕ್ಪಟುತ್ವ. ಸಭಿಕರನ್ನು ರೊಚ್ಚಿಗೆಬ್ಬಿಸಿ ಯೋಚಿಸುವಂತೆ ಮಾಡುವ ಇವರ ಮಾತಿನ ಶೈಲಿ ಆಕರ್ಷಕವಾಗಿದೆ. ಬಹುಶಃ ನಾನು ನೋಡಿದಂತೆ ಭಾರತದ ಕಮ್ಯುನಿಸ್ಟ್ ಚಳವಳಿಯಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂಥ ಅದ್ಬುತ ವಾಕ್ ಚಾತುರ್ಯವನ್ನು ಹೊಂದಿದ ಇನ್ನೊಬ್ಬ ನಾಯಕ ಬಂದಿಲ್ಲ. ಕಳೆದ ಶತಮಾನದ ಆರಂಭದ ದಿನಗಳಲ್ಲಿ ಜಾಗತಿಕ ಕಮ್ಯುನಿಸ್ಟ್ ಚಳವಳಿಯಲ್ಲಿ ಹೆಸರು ಮಾಡಿದ ಮಾನವೇಂದ್ರನಾಥ ರಾಯ್ ಅವರಿಗೆ ಇಂಥ ಅದ್ಬುತವಾದ ಆಕರ್ಷಕವಾದ ಶೈಲಿ ಇತ್ತು. ಈಗಂತೂ ದೇಶದಲ್ಲಿ ಕಮ್ಯುನಿಸ್ಟ್ ಆಂದೋಲನ ಜನಾಕರ್ಷಣೆ ಕಳೆದುಕೊಂಡಿದೆ. ಒಂದು ಕಾಲದಲ್ಲಿ ಲೋಕಸಭೆಯಲ್ಲಿ ಅರವತ್ತು ಸ್ಥಾನಗಳನ್ನು ಹೊಂದಿದ್ದ ಕಮ್ಯುನಿಸ್ಟ್ ಪಕ್ಷಗಳು ಈಗ ತಮಿಳುನಾಡಿನಿಂದ ಗೆದ್ದ ನಾಲ್ಕು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಇಂಥ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಚಳವಳಿಯಿಂದ ಬಂದ ಕನ್ಹಯ್ಯಾ ಕುಮಾರ್ ಈ ಪರಿ ಜನರ ಆಕರ್ಷಣೆ ಗಳಿಸುತ್ತಾರೆಂದರೆ ಸಾಮಾನ್ಯ ಸಂಗತಿಯಲ್ಲ.

ಕಲಬುರಗಿಯಲ್ಲಿ ಕನ್ಹಯ್ಯ ಕುಮಾರ್ ಸಭೆಗೆ ಬಂದವರೆಲ್ಲ, ಕಮ್ಯುನಿಸ್ಟರಲ್ಲ. ಕಮ್ಯುನಿಸ್ಟ್ ಸಾಮೂಹಿಕ ಸಂಘಟನೆಗಳಿಗೆ ಸೇರಿದವರಲ್ಲ. ಅಲ್ಲಿ ಬಂದವರು ಯಾವುದೇ ಪಕ್ಷಕ್ಕೆ ಸೇರದ ಜನ ಸಾಮಾನ್ಯರು, ವಿಶೇಷವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಯುವಕರು ಫ್ಯಾಸಿಸ್ಟ್ ಸರಕಾರದ ದಮನ ನೀತಿಯಿಂದ ಬೇಸತ್ತು ಹತಾಶರಾಗಿ ಹೊಸ ದಾರಿಯ ಹುಡುಕಾಟದಲ್ಲಿರುವವರು. ಅವರಿಗೆ ಕನ್ಹಯ್ಯ್ ಕುಮಾರ್ ಕಮ್ಯುನಿಸ್ಟ್ ಎಂಬುದು ಮುಖ್ಯವಲ್ಲ. ಆದರೆ ಕನ್ಹಯ್ಯ್‌ರ ಹೊಸ ಭಾಷೆ ಅವರಿಗೆ ಇಷ್ಟವಾಗಿದೆ. ನೊಂದವರೆಲ್ಲರನ್ನು ಕರೆದುಕೊಂಡು ಹೋಗುವ ಆಪ್ತವಾದ ಮಾತುಗಳು ಇಷ್ಟವಾಗಿವೆ. ಅವರ ಜೈ ಭೀಮ್, ಲಾಲ್ ಸಲಾಮ್ ಘೋಷಣೆ ಇಷ್ಟವಾಗಿದೆ ಅಂತಲೆ ಯಾವುದೋ ದೂರದ ಊರಿನ ಹುಡುಗನ ಸಭೆಗೆ ಇಷ್ಟೊಂದು ಜನ ಹೇಗೆ ಸೇರಲು ಸಾಧ್ಯ?

ಜನ ಹೊಸದನ್ನು ಬಯಸುತ್ತಿದ್ದಾರೆ, ಹೊಸ ಮಾತು ಅವರಿಗೆ ಬೇಕಾಗಿದೆ. ಹಳೆಯ ಮುಖಗಳು, ನೋಡಿ ಹಳಸಿದ ಮಾತುಗಳನ್ನು ಕೇಳಿ ಅವರಿಗೆ ಸಾಕಾಗಿದೆ, ಈ ವರೆಗೆ ಕಮ್ಯುನಿಸ್ಟ್ ಪಾರ್ಟಿ ಅಂದರೆ ಕಾರ್ಖಾನೆ ಕಾರ್ಮಿಕರ ಪಾರ್ಟಿ ಅವರ ಸಭೆಗಳಲ್ಲಿ ಕಾರ್ಮಿಕರ ಸಂಬಳ, ಭತ್ತೆಗಳ ಬಗ್ಗೆ ಮಾತ್ರ ಮಾತಾಡುತ್ತಾರೆ ಎಂದು ಕಮ್ಯುನಿಸ್ಟರ ಸಭೆಗಳಿಗೆ ಬೇರೆ ಜನ ಬರುತ್ತಿರಲಿಲ್ಲ. ಆದರೆ ಕನ್ಹಯ್ಯಿ ಕುಮಾರ್ ಆ ಸಂಪ್ರದಾಯ ಮುರಿದು ಬಾಬಾಸಾಹೇಬ್ ಅಂಬೇಡ್ಕರ್, ಜ್ಯೋತಿ ಬಾ ಫುಲೆ, ಕಬೀರ,ಇಂಥವರ ಮಾತುಗಳನ್ನು ಉಲ್ಲೇಖಿಸತೊಡಗಿದಾಗ ಅವರ ಭಾಷಣ ಜನಪ್ರಿಯವಾಯಿತು.

ಕಲಬುರಗಿಯಲ್ಲಿ ಕೂಡ ಕನ್ಹಯ್ಯ ಕುಮಾರ್ ಬಹುಮುಖಿ ಭಾರತದ ಸೌಂದರ್ಯದ ಬಗ್ಗೆ ಮಾತಾಡಿದರು. ಕಲಬುರಗಿಯನ್ನೇ ಉದಾಹರಣೆಯಾಗಿ ತೆಗೆದುಕೊಂಡು ಇಲ್ಲಿ ಶರಣ ಬಸವೇಶ್ವರ ದೇವಾಲಯವಿದೆ, ಬಂದೇ ನವಾಜ ದರ್ಗಾ ಇದೆ, ಬೌದ್ಧ್ದ ವಿಹಾರವಿದೆ, ಚರ್ಚ್ ಇದೆ ಇವೆಲ್ಲ ಸೇರಿಯೇ ಭಾರತವಾಗಿದೆ ಎಂದಾಗ ಸೇರಿದ ಜನ ಜಯ ಘೋಷ ಮಾಡಿದರು.

ಯುವ ಭಾರತದ ಭರವಸೆಯ ಬೆಳಕು ಕನ್ಹಯ್ಯ ಕುಮಾರ್ ಅವರಿಗೆ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಎಷ್ಟೊಂದು ಹೆದರಿವೆ ಅಂದರೆ ಅವರ ಉಪನ್ಯಾಸ ಭಾಷಣಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಹಾಗೂ ತಾಕತ್ತು ಈ ಫ್ಯಾಶಿಸ್ಟ್ ಸರಕಾರಗಳಿಗೆ ಇಲ್ಲ. ಕಲಬುರಗಿಯಲ್ಲಿ ಪೂರ್ವ ನಿಗದಿತ ಕಾರ್ಯಕ್ರಮದಂತೆ ಮಂಗಳವಾರ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಭವನದಲ್ಲಿ ಕನ್ಹಯ್ಯಾಕುಮಾರ್ ಉಪನ್ಯಾಸ ಏರ್ಪಡಿಸಲಾಗಿತ್ತು. ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದಿಂದ ಈ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಕನ್ಹಯ್ಯಾ ಕುಮಾರ್ ಅವರು ಅಂಬೇಡ್ಕರ್ ಕಂಡ ಆಧುನಿಕ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ಮಾಡಲಿದ್ದರು. ಈ ಬಗ್ಗೆ ಶ್ರೀ ರಾಮಸೇನೆ ಸೇರಿದಂತೆ ಸಂಘ ಪರಿವಾರದ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ವಿರೋಧದ ನಡುವೆಯೂ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ವಿಶೇಷ ಸಭೆ ನಡೆಸಿ ಕನ್ಹಯ್ಯಾ ಕುಮಾರ್ ಉಪನ್ಯಾಸಕ್ಕೆ ಅನುಮತಿ ನೀಡಿತ್ತು.

ಕನ್ಹಯ್ಯಕುಮಾರ್ ಭಾಷಣಕ್ಕೆ ಅನುಮತಿ ದೊರೆತಿದೆ ಎಂದು ಸಭೆಗೆ ಸಿದ್ಧ್ದತೆ ಮಾಡಲಾಯಿತು.ಆದರೆ ಮಧ್ಯರಾತ್ರಿ ನಂತರ ಯಾರಿಗೂ ಗೊತ್ತಾಗದಂತೆ ಬೆಂಗಳೂರಿನಲ್ಲಿ ಆರೆಸ್ಸೆಸ್ ಮೂಲಗಳು ಸರಕಾರದ ಮೇಲೆ ಒತ್ತಡ ತಂದು ರಾಜ್ಯಪಾಲರ ಅಧಿಕಾರ ಬಳಸಿಕೊಂಡು ಏಕಾಏಕಿ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿ ರದ್ದುಗೊಳಿಸಲಾಯಿತು.

ಕನ್ಹಯ್ಯ ಕುಮಾರ್ ಉಪನ್ಯಾಸವನ್ನು ರದ್ದುಗೊಳಿಸಿದ್ದನ್ನು ಪ್ರತಿಭಟಿಸಿ ಅಂಬೇಡ್ಕರ್ ಅಧ್ಯಯನ ಪೀಠದ ಸಂಶೋಧನಾ ವಿದ್ಯಾರ್ಥಿಗಳು, ದಲಿತ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡಿದ ನಂತರ ವಿಶ್ವವಿದ್ಯಾನಿಲಯ ಸಿಂಡಿಕೇಟ್ ತುರ್ತು ಸಭೆ ಸೇರಿ ಸಭೆಗೆ ಒಪ್ಪಿಗೆ ನೀಡಿತು.

ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ನಂತರ ಅಂಬೇಡ್ಕರ್ ಅಧ್ಯಯನ ಪೀಠದ ಕಾರ್ಯಕ್ರಮವನ್ನು ನಗರದ ಕೇಂದ್ರ ಭಾಗದಲ್ಲಿರುವ ವಿಶ್ವೇಶ್ವರಯ್ಯ ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು. ಆದರೆ ಪೊಲೀಸರು ಅಲ್ಲಿ ಸಭೆ ನಡೆಸಲು ಅನುಮತಿ ನೀಡಲಿಲ್ಲ. ಪೊಲೀಸರ ಮೇಲೆ ಜಿಲ್ಲಾ ಉಸ್ತುವಾರಿ ಮಂತ್ರಿ, ಸ್ಥಳೀಯ ಸಂಸದ ಹಾಗೂ ಶ್ರೀ ರಾಮಸೇನೆಯಂಥ ಕೋಮುವಾದಿ ಸಂಘಟನೆಗಳು ವಿಪರೀತ ಒತ್ತಡ ತಂದವು. ಹೀಗಾಗಿ ಸಭೆಗೆ ಅನುಮತಿ ದೊರಕಲಿಲ್ಲ. ಕೊನೆಗೆ ಸಂಜೆ ಬಹಿರಂಗ ಸಭೆಗೆ ಮಾತ್ರ ಅನುಮತಿ ದೊರಕಿದೆ.

ಕನ್ಹಯ್ಯ ಕುಮಾರ್ ಮೂವತ್ತರೊಳಗಿನ ಯುವಕ. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದವರು. ಅದ್ಭುತ ಮಾತುಗಾರ, ದಣಿವರಿಯದ ಹೋರಾಟಗಾರ ಇದರಿಂದ ಹೆದರಿದ ಈ ದೇಶದ ಐವತ್ತಾರು ಇಂಚಿನ ಎದೆಯ ಪ್ರಧಾನಿ ಮಾತ್ರವಲ್ಲ ಅವರನ್ನು ನಿಯಂತ್ರಿಸುವ ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರ ಕನ್ಹಯ್ಯ ಕುಮಾರ್ ಮೇಲೆ ಸುಳ್ಳು ರಾಜದ್ರೋಹದ ಆರೋಪ ಹೊರಿಸಿ ಜೈಲಿಗೆ ತಳ್ಳಿತು. ಜಿಹಾದಿ ಘೋಷಣೆ ಕೂಗಲಾಗಿದೆ ಎಂದು ನಕಲಿ ಸಿಡಿ ತಯಾರಿಸಿತು. ಆದರೆ ಪೊಲೀಸರು ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ನಡೆಸಿದ ಸಮಗ್ರ ತನಿಖೆಯಲ್ಲಿ ಕನ್ಹಯ್ಯಾ ಕುಮಾರ್ ದೋಷಮುಕ್ತರಾಗಿ ಹೊರಗೆ ಬಂದಿದ್ದಾರೆ. ಕಳೆದ ವರ್ಷ ಅವರು ಸಲ್ಲಿಸಿದ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಕೂಡ ದೊರಕಿತು. ಇಂಥ ದೇಶಪ್ರೇಮಿ ಯುವಕನನ್ನು ಸಹಿಸಲು ಈ ಫ್ಯಾಶಿಸ್ಟ್ ಸರಕಾರಕ್ಕೆ ಆಗುತ್ತಿಲ್ಲ. ಕನ್ಹಯ್ಯಿಕುಮಾರ್ ಹೋದ ಕಡೆಗೆಲ್ಲ ಅವರ ಮೇಲೆ ಹಲ್ಲೆ ನಡೆಸುವ ಯತ್ನಗಳೂ ನಡೆದಿವೆ. ನ್ಯಾಯಾಲಯದ ಆವರಣದಲ್ಲೇ ಪೊಲೀಸರ ಎದುರಲ್ಲೇ ಅವರ ಮೇಲೆ ಹಲ್ಲೆ ನಡೆಯಿತು. ಇದ್ಯಾವುದಕ್ಕೂ ಕನ್ಹಯ್ಯಾ ಕುಮಾರ್ ಹೆದರಿಲ್ಲ. ಅದೇ ಬಿಜೆಪಿ ಸರಕಾರದ ಅಸಹನೆಗೆ ಕಾರಣ.

ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾಗಿ ಇರುತ್ತವೆ. ಈ ಭಿನ್ನಾಭಿಪ್ರಾಯಗಳೇ ಜನತಂತ್ರದ ಸೌಂದರ್ಯ. ದೇಶದ ಮೊದಲ ಪ್ರಧಾನಿ ಪಂಡಿತ ನೆಹರೂ ಅವರು ಭಿನ್ನಾಭಿಪ್ರಾಯಗಳನ್ನು ಟೀಕೆಗಳನ್ನು ತುಂಬ ಗೌರವಿಸುತ್ತಿದ್ದರು. ಅಂತಲೇ ರಾಮ ಮನೋಹರ ಲೋಹಿಯಾ, ಎ.ಕೆ.ಗೋಪಾಲನ್, ಭೂಪೇಶ ಗುಪ್ತ, ವಾಜಪೇಯಿ ಅವರಂಥ ನಾಯಕರು ಸಂಸತ್ತನ್ನು ಪ್ರವೇಶಿಸಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈ ಸಂಪ್ರದಾಯ ವಾಜಪೇಯಿ ಕಾಲದಲ್ಲೂ ಇತ್ತು. ಈ ದೇಶದ ಯಾವ ಪ್ರಧಾನಿಯೂ ಈಗಿನಷ್ಟು ತಾನಾಶಾಹಿ ಮನೋಭಾವ ಹೊಂದಿರಲಿಲ್ಲ. ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಜಾರಿಗೊಳಿಸಿದರೂ ನಂತರ ತಾವೇ ಅದನ್ನು ಹಿಂತೆಗೆದುಕೊಂಡರು. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಭಿನ್ನಮತವನ್ನು ಹತ್ತಿಕ್ಕಲು ಬ್ರಿಟಿಷ್ ಕಾಲದ ರಾಜದ್ರೋಹದ ಕಾನೂನನ್ನು ಬಳಸಿಕೊಳ್ಳುತ್ತಿದೆ. ರಾಜಕೀಯ ವಿರೋಧಿಗಳನ್ನು ಹಣಿಯಲು ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ಅನೈತಿಕವಾಗಿ ಬಳಸಿಕೊಳ್ಳುತ್ತಿದೆ.

ಕನ್ಹಯ್ಯ ಕುಮಾರ್ ಮಾತು ಯಾರಿಗೂ ಕೇಳಬಾರದು ಎಂದು ಅವರ ಮಾತಿಗೆ ಹೆದರಿದ ರಾಜ್ಯದ ಬಿಜೆಪಿ ಸರಕಾರ ವಿಶ್ವವಿದ್ಯಾನಿಲಯದ ಮೇಲೆ ಒತ್ತಡ ತಂದು ಮುಂಚೆ ನೀಡಿದ ಅನುಮತಿಯನ್ನು ರದ್ದುಗೊಳಿಸುತ್ತಿದೆ. ಆರೆಸ್ಸೆಸ್ ಬಿಜೆಪಿ ನಾಯಕರಿಗೆ ಬೌದ್ಧಿಕ ಸಾಮರ್ಥ್ಯ ವಿದ್ದರೆ ಕನ್ಹಯ್ಯಿ ಕುಮಾರ್ ಜೊತೆ ಬಂದು ಚರ್ಚಿಸಲಿ. ಸಂವಾದದಲ್ಲಿ ಪಾಲ್ಗೊಳ್ಳಲಿ. ಪ್ರಶ್ನೆ ಕೇಳಿ ಉತ್ತರ ಪಡೆಯಲಿ, ಆದರೆ ಸಂವಾದ ಸಂಸ್ಕೃತಿಯಲ್ಲಿ ನಂಬಿಕೆಯನ್ನು ಕಳೆದುಕೊಂಡ ಫ್ಯಾಶಿಸ್ಟ್ ಪ್ರಭುತ್ವ ಪೊಲೀಸ್ ಬಲ ಬಳಸಿ, ರಾಜ ಭವನವನ್ನು ಉಪಯೋಗಿಸಿ ಕನ್ಹಯ್ಯ್‌ರ ಧ್ವನಿಯನ್ನು ಅಡಗಿಸಲು ಹೊರಟಿದೆ. ಕನ್ಹಯ್ಯ್‌ರ ಮಾತಿಗೆ ಹೆದರುವ ಪುಕ್ಕಲು ರಣ ಹೇಡಿ ಸರಕಾರದಿಂದ ಈ ದೇಶದ ಸುರಕ್ಷತೆ ಕಾಪಾಡಲು ಸಾಧ್ಯವಿಲ್ಲ. ಕನ್ಹಯ್ಯ್‌ಕುಮಾರ್‌ರಂಥ ಯುವಕರು ಭಾರತದ ಭವಿಷ್ಯ. ಹೊಸ ಭಾರತ ಕಟ್ಟುವ ಕನಸು ಕಟ್ಟಿಕೊಂಡವರು. ಇಂತಹವರ ಮಾತಿಗೆ ನಿರ್ಬಂಧ ಹೇರುವುದು ಸರಿಯಲ್ಲ.

ಆದರೆ ವ್ಯಕ್ತಿ ಸ್ವಾತಂತ್ರವನ್ನೇ ನಾಶ ಮಾಡಿ ಅಭಿವ್ಯಕ್ತಿ ಯನ್ನು ದಮನ ಮಾಡಲು ಹೊರಟ ಫ್ಯಾಶಿಸ್ಟ್ ಸರಕಾರ ಕನ್ಹಯ್ಯ್ ಮಾತನ್ನು ಹೇಗೆ ಸಹಿಸಲು ಸಾಧ್ಯ? ಹಿಟ್ಲರ್ ಕೂಡ ತನ್ನನ್ನು ಪ್ರಶ್ನಿಸುವ ಚಿಂತಕರನ್ನು ಕವಿಗಳನ್ನು ಸಹಿಸುತ್ತಿರಲಿಲ್ಲ, ಭಾರತದಲ್ಲೀಗ ಮರಿ ಹಿಟ್ಲರನ ಉದ್ಭವವಾಗಿದೆ. ಜನದ್ವೇಷದ ಹಗೆಯಿಂದ ಬಂದ ಈ ಉದ್ಬವ ಮೂರ್ತಿಯನ್ನು ಕಟ್ಟಿ ಹಾಕಲು ಒಬ್ಬ ಕನ್ಹಯ್ಯಿ ಅಲ್ಲ ಸಾವಿರಾರು ಕನ್ಹಯ್ಯಿಗಳು ಬರಬೇಕಾಗಿದೆ. ಬಿಸಿ ರಕ್ತದ ಯುವಕರಿಂದ ಮಾತ್ರ ಈ ಬಹುಮುಖಿ ಭಾರತವನ್ನು ಕಾಪಾಡಲು ಸಾಧ್ಯ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News