ಸ್ಮಾರ್ಟ್‌ಫೋನ್ ಮತ್ತು ಹೆಲ್ತ್-ಆ್ಯಪ್ ಬಳಕೆದಾರರು ಹೃದ್ರೋಗಗಳಿಗೆ ಗುರಿಯಾಗುವ ಅಪಾಯ ಕಡಿಮೆ

Update: 2019-10-23 12:36 GMT

 ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಿಂದ ಆರೋಗ್ಯ ಹಾಳಾಗುತ್ತದೆ ಎನ್ನಲಾಗಿದೆ,ಆದರೆ ಈ ಸಾಧನವು ಹೃದಯದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನೂ ಹೊಂದಿದೆ. ಸರಳ ಆ್ಯಪ್‌ವೊಂದು ರೋಗಿಗಳು ಸಮಯಕ್ಕೆ ಸರಿಯಾಗಿ ತಮ್ಮ ಔಷಧಿಗಳನ್ನು ಸೇವಿಸಲು ನೆರವಾಗುವ ಮೂಲಕ ಹೃದ್ರೋಗಗಳಿಂದ ಅವರ ಅಕಾಲಿಕ ಸಾವಿನ ಸಂಭವವನ್ನು ತಗ್ಗಿಸುತ್ತದೆ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

  ವ್ಯಕ್ತಿಯೋರ್ವ ಹೃದಯಾಘಾತಕ್ಕೆ ಗುರಿಯಾಗಿ ಚೇತರಿಸಿಕೊಳ್ಳುತ್ತಿದ್ದರೆ ಮೊದಲ 30 ದಿನಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಇಂತಹ ಪ್ರತಿ ನಾಲ್ವರು ರೋಗಿಗಳ ಪೈಕಿ ಓರ್ವ ಕನಿಷ್ಠ ಒಂದು ಔಷಧಿಯ ಸೇವನೆಯನ್ನು ನಿಲ್ಲಿಸಿರುತ್ತಾನೆ. ಇದರಿಂದಾಗಿ ಆತ ಮತ್ತೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಮತ್ತು ಅಕಾಲಿಕ ಸಾವನ್ನಪ್ಪುವ ಅಪಾಯವು ಹೆಚ್ಚುತ್ತದೆ. ರೋಗಿಯು ಔಷಧಿ ಸೇವನೆಗೆ ಅಂಟಿಕೊಳ್ಳುವಂತೆ ಮಾಡುವ ಮಿತವ್ಯಯದ ಮತ್ತು ಖಚಿತ ಕಾರ್ಯತಂತ್ರಗಳೇನೂ ಇಲ್ಲ.

 ಇಂತಹ ರೋಗಿಗಳಿಗೆ ಔಷಧಿಗಳು ಮತ್ತು ಅವುಗಳ ಸೇವನೆಯ ಸೂಕ್ತ ಸಮಯಗಳ ಬಗ್ಗೆ ಯಾರಾದರೂ ನಿರಂತರವಾಗಿ ನೆನಪಿಸುವಂತಿದ್ದರೆ? ಯಾವುದೇ ಸ್ಮಾರ್ಟ್‌ಫೋನ್ ಆ್ಯಪ್ ರಿಮೈಂಡರ್‌ನ್ನು ಬಳಸುವ ಹೃದ್ರೋಗಿಗಳು ವೈದ್ಯರಿಂದ ಸೂಚಿತ ಚೀಟಿಯನ್ನು ಹೊಂದಿರುವ ರೋಗಿಗಳಿಗೆ ಹೋಲಿಸಿದರೆ ಸಕಾಲದಲ್ಲಿ ತಮ್ಮ ಔಷಧಿಗಳನ್ನು ಸೇವಿಸುವ ಸಾಧ್ಯತೆಗಳು ಹೆಚ್ಚು ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ತೋರಿಸಿದೆ.

ಆರೋಗ್ಯಯುತ ಮತ್ತು ಶೀಘ್ರ ಚೇತರಿಕೆಗಾಗಿ ಹೆಚ್ಚಿನ ಹಾರ್ಟ್-ಆ್ಯಪ್‌ಗಳು ಹೃದ್ರೋಗಿಗಳಿಗೆ ಒದಗಿಸುವ ಕೆಲವು ಲಾಭಗಳು ಹೀಗಿವೆ:

ಫೋನಿನ ಕ್ಯಾಮರಾ ಲೆನ್ಸ್ ಮೇಲೆ ಬೆರಳಿಟ್ಟರೆ ಸಾಕು,ಈ ಆ್ಯಪ್‌ಗಳು ರೋಗಿಯ ನಾಡಿಮಿಡಿತವನ್ನು ಲೆಕ್ಕ ಹಾಕುತ್ತವೆ. ಅವು ಹೃದಯ ಬಡಿತ ದರವನ್ನೂ ಅಳೆಯುತ್ತವೆ.

  ಹೆಚ್ಚಿನ ಈ ಆ್ಯಪ್‌ಗಳು ಅವುಗಳಲ್ಲಿ ಇತ್ತೀಚಿನ ರೀಡಿಂಗ್‌ನ್ನು ದಾಖಲಿಸಿದರೆ ರಕ್ತದೊತ್ತಡವನ್ನು ಅಳೆಯಲೂ ಅನುಕೂಲ ಕಲ್ಪಿಸುತ್ತವೆ. ಅಲ್ಲದೆ ಕೆಲವು ಆ್ಯಪ್‌ಗಳಲ್ಲಿ ನೈಜ ಸಮಯದ ರೀಡಿಂಗ್‌ಗಳಿಗಾಗಿ ಬಾಹ್ಯ ಬಿಪಿ ಮಾನಿಟರ್ ಸಾಧನವನ್ನು ಸ್ಮಾರ್ಟ್‌ಫೋನ್‌ಗೆ ಜೋಡಿಸಬಹುದಾಗಿದೆ. ಮಾಹಿತಿಯನ್ನು ಸಂಗ್ರಹಿಸಿಡಲು ಮತ್ತು ಅದಕ್ಕೆ ಅನುಗುಣವಾಗಿ ಆಹಾರ ಕ್ರಮವನ್ನು ಸೂಚಿಸಲು ಹಾಗೂ ಔಷಧಿಗಳ ಸೇವನೆಯ ಬಗ್ಗೆ ಕಾಲಕಾಲಕ್ಕೆ ಎಚ್ಚರಿಸಲು ಈ ಆ್ಯಪ್‌ಗಳು ಸಮರ್ಥವಾಗಿರುತ್ತವೆ.

 ಅನಿಯಮಿತ ಹೃದಯ ಬಡಿತವನ್ನೂ ಆ್ಯಪ್ ಮೂಲಕ ತಪಾಸಣೆ ಮಾಡಬಹುದು,ಇದಕ್ಕಾಗಿ ಸ್ಮಾರ್ಟ್ ಫೋನ್‌ಗೆ ಜೋಡಿಸಲಾಗುವ ಬಾಹ್ಯ ಸಾಧನವೊಂದು ಅಗತ್ಯವಾಗುತ್ತದೆ. ಇದರಿಂದ ಮಾಹಿತಿಯನ್ನು ದಾಖಲಿಸಿಕೊಳ್ಳಲು ಮತ್ತು ಸಕಾಲಿಕ ಚಿಕಿತ್ಸೆಗಾಗಿ ಅದನ್ನು ನಿಮ್ಮ ವೈದ್ಯರೊಂದಿಗೆ ಹಂಚಿಕೊಳ್ಳುವುದು ಸುಲಭವಾಗುತ್ತದೆ.

ಹೃದಯದ ಕಾಳಜಿಗಾಗಿ ಧರಿಸಬಲ್ಲ ತಂತ್ರಜ್ಞಾನ

 ಸ್ಮಾರ್ಟ್‌ವಾಚ್‌ಗಳಂತಹ ಹಲವಾರು ಧರಿಸಬಲ್ಲ ತಂತ್ರಜ್ಞಾನಗಳನ್ನೂ ರೋಗಿಗಳು ಬಳಸಿಕೊಳ್ಳಬಹುದು. ಜನರು ಕೇವಲ ತಮ್ಮ ಮಣಿಗಂಟಿನತ್ತ ನೋಡುವ ಮೂಲಕ ತಮ್ಮ ಆರೋಗ್ಯದ ಮೇಲೆ ನಿಗಾಯಿರಿಸುವುದನ್ನು ಸಾಧ್ಯವಾಗಿಸುವ ಇಂತಹ ಧರಿಸಬಲ್ಲ ಸಾಧನಗಳ ಮಾರುಕಟ್ಟೆಯು ಎರಡಂಕಿಗಳ ಬೆಳವಣಿಗೆಯನ್ನು ಕಾಣಲಿದೆ ಎನ್ನುತ್ತಾರೆ ವಿಶ್ಲೇಷಕರು. 2018ರ ವೇಳೆಗೆ ವಿಶ್ವದಲ್ಲಿ ಇಂತಹ ಧರಿಸಬಲ್ಲ ಸಾಧನಗಳ ಬಳಕೆದಾರರ ಸಂಖ್ಯೆ 81.7 ಮಿಲಿಯಕ್ಕೇರಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News