ಏನಿದು ಟಾನ್ಸಿಲಿಟಿಸ್?: ಕಾರಣಗಳು ಮತ್ತು ಲಕ್ಷಣಗಳು ಇಲ್ಲಿವೆ

Update: 2019-10-25 14:43 GMT

ಟಾನ್ಸಿಲಿಟಿಸ್ ಸಾಮಾನ್ಯವಾಗಿ ಎಲ್ಲರಿಗೆ ಟಾನ್ಸಿಲ್ ಎಂಬ ಹೆಸರಿನಿಂದಲೇ ಪರಿಚಿತವಿರುವ, ಬಾಯಿಯ ಹಿಂಭಾಗದಲ್ಲಿ ಮತ್ತು ಗಂಟಲಿನ ಮೇಲ್ಭಾಗದಲ್ಲಿರುವ ಅಂಡಾಕಾರದ ಗಲಗ್ರಂಥಿಗಳ ಉರಿಯೂತವಾಗಿದೆ. ನಮ್ಮ ಶರೀರವು ಎರಡು ಜೋಡಿ ಟಾನ್ಸಿಲ್‌ಗಳನ್ನು ಹೊಂದಿದೆ. ಒಂದು ಜೋಡಿ ನಾಲಿಗೆಯ ಹಿಂದಿದ್ದರೆ ಇನ್ನೊಂದು ಜೋಡಿ ಗಂಟಲಿನ ಹಿಂದೆ ಇರುತ್ತದೆ. ಅಡೆನಾಯ್ಡೊಗಳು ಎಂಬ ಇದೇ ವರ್ಗಕ್ಕೆ ಸೇರಿದ ದುಗ್ಧಗ್ರಂಥಿಗಳು ಮೂಗಿನ ಹಿಂದೆ ಮತ್ತು ಗಂಟಲಿನ ಮೇಲೆ ಇರುತ್ತವೆ.

ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮ ಜೀವಿಗಳ ಸೋಸುವಿಕೆ ಟಾನ್ಸಿಲ್‌ಗಳ ಮುಖ್ಯ ಕೆಲಸವಾಗಿದೆ. ಟಾನ್ಸಿಲಿಟಿಸ್‌ನಲ್ಲಿ ಸಾಮಾನ್ಯವಾಗಿ ಗಂಟಲಿನ ಹಿಂದಿರುವ ಟಾನ್ಸಿಲ್‌ಗಳು ಉರಿಯೂತ ಅಥವಾ ಸೋಂಕಿಗೆ ಒಳಗಾಗುತ್ತವೆ. ಆದರೆ ಕೆಲವೊಮ್ಮೆ ನಾಲಿಗೆಯ ಹಿಂದಿರುವ ಟಾನ್ಸಿಲ್‌ಗಳು ಮತ್ತು ಗಂಟಲಿನ ಹಿಂದಿರುವ ಇತರ ದುಗ್ಧರಸ ಗ್ರಂಥಿಗಳೂ,ವಿಶೇಷವಾಗಿ ಅಡೆನಾಯ್ಡಿಗಳು ಸೋಂಕಿಗೊಳಗಾಗುತ್ತವೆ. ಗಂಟಲು ಮತ್ತು ಸುತ್ತಲಿನ ಜಾಗಗಳಲ್ಲಿಯೂ ಸೋಂಕು ಇರಬಹುದು ಮತ್ತು ಇದು ಫಾರಿಂಜಿಟಿಸ್ ಅಥವಾ ಕಂಠನಾಳದ ಉರಿಯೂತಕ್ಕೆ ಕಾರಣವಾಗುತ್ತದೆ.

►ಟಾನ್ಸಿಲಿಟಿಸ್‌ನ ಕಾರಣಗಳು

ಟಾನ್ಸಿಲಿಟಿಸ್ ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಉಂಟಾಗುತ್ತದೆ. ಸ್ಟ್ರೆಪ್ಟೊಕಾಕಸ್,ನ್ಯುಮೊಕಾಕಸ್ ಮತ್ತು ಹಿಮೊಫಿಲಸ್ ಬ್ಯಾಕ್ಟೀರಿಯಾಗಳು ಇವುಗಳಲ್ಲಿ ಮುಖ್ಯವಾಗಿವೆ. ಅಡೆನೊವೈರಸ್ ಮತ್ತು ಎಪ್‌ಸ್ಟೀನ್-ಬಾರ್‌ನಂತಹ ವೈರಾಣುಗಳೂ ಟಾನ್ಸಿಲಿಟಿಸ್‌ನ್ನು ಉಂಟು ಮಾಡಬಹುದು. ಟಾನ್ಸಿಲ್‌ಗಳ ಅಥವಾ ಕಂಠನಾಳದ ಸೋಂಕು ಹೊಂದಿರುವವರ ಸಂಪರ್ಕದಿಂದಾಗಿ,ಟಾನ್ಸಿಲಿಟಿಸ್ ಆಗಿ ಬದಲಾಗುವ ಗಂಟಲು ಕೆರೆತ,ಸೋಂಕಿಗೊಳಗಾಗಿರುವವರ ಪಾತ್ರೆಗಳು ಅಥವಾ ಟೂಥ್‌ ಬ್ರಷ್ ಬಳಕೆಯಿಂದ ,ಈಗಾಗಲೆ ಸ್ಟ್ರೆಪ್ಟೊಕಾಕಸ್ ಬ್ಯಾಕ್ಟೀರಿಯ ಅಥವಾ ಎಪ್‌ಸ್ಟೀನ್-ಬಾರ್ ವೈರಾಣುವುಳ್ಳವರಿಂದ ಈ ಸೋಂಕು ಹರಡುತ್ತದೆ.

►ಲಕ್ಷಣಗಳು

 ಟಾನ್ಸಿಲಿಟಿಸ್ ತೀವ್ರ,ಸಾಧಾರಣ ತೀವ್ರ ಅಥವಾ ದೀರ್ಘಕಾಲಿಕ ಸ್ವರೂಪದ್ದಾಗಿರಬಹುದು. ಕಾಲಕ್ರಮೇಣ ಹೆಚ್ಚುತ್ತ ಹೋಗುವ ಗಂಟಲು ಕೆರೆತ, ಸಾಧಾರಣದಿಂದ ಅತಿಯಾದ ಜ್ವರ, ನುಂಗುವಾಗ ಕಷ್ಟ ಮತ್ತು ನೋವು, ಕೆಂಪುಬಣ್ಣದಲ್ಲಿ ಊದಿಕೊಂಡ ಕೀವು ತುಂಬಿದ ಅಥವಾ ಕೀವು ತುಂಬಿರದ ಟಾನ್ಸಿಲ್‌ಗಳು, ದವಡೆಯ ಕೆಳಗೆ ಊದಿಕೊಂಡ ದುಗ್ಧರಸ ಗ್ರಂಥಿಗಳು, ಧ್ವನಿಯಲ್ಲಿ ಕರ್ಕಶತೆ, ಕಡಿಮೆ ಧ್ವನಿ ಅಥವಾ ಧ್ವನಿಯೇ ಇಲ್ಲದಿರುವಿಕೆ ಇವು ತೀವ್ರ ಟಾನ್ಸಿಲಿಟಿಸ್‌ನ ಲಕ್ಷಣಗಳಲ್ಲಿ ಸೇರಿವೆ.

ಸಾಧಾರಣ ತೀವ್ರ ಟಾನ್ಸಿಲಿಟಿಸ್‌ನ ಲಕ್ಷಣಗಳು ಮೂರು ವಾರಗಳಿಂದ ಮೂರು ತಿಂಗಳುಗಳವರೆಗೂ ಇರಬಹುದು. ಗಾತ್ರದಲ್ಲಿ ದೊಡ್ಡದಾದ ಟಾನ್ಸಿಲ್‌ಗಳು, ಟಾನ್ಸಿಲ್‌ನ ಕುಳಿಯಲ್ಲಿ ಸಂಗ್ರಹಗೊಳ್ಳುವ ಕೆಟ್ಟ ವಾಸನೆಯ ಪೇಸ್ಟ್‌ನಂತಹ ಸೋಂಕಿತ ವಸ್ತು, ಗಂಟಲು ಕೆರೆತ, ಕೆಟ್ಟ ಉಸಿರು ಮತ್ತು ನೋವು ಇವು ಈ ವಿಧದ ಟಾನ್ಸಿಲಿಟಿಸ್‌ನ ಲಕ್ಷಣಗಳಲ್ಲಿ ಸೇರಿವೆ.

ಊದಿಕೊಂಡ ಮತ್ತು ಕೆಂಪು ಛಾಯೆ ಪಡೆದ ದೊಡ್ಡ ಕುಳಿಗಳ ಕುರುಹುಗಳಿರುವ ಟಾನ್ಸಿಲ್‌ಗಳು, ಆಗಾಗ್ಗೆ ಗಂಟಲು ಕೆರೆತ ಇವು ದೀರ್ಘಕಾಲಿಕ ಟಾನ್ಸಿಲಿಟಿಸ್‌ನ ಲಕ್ಷಣಗಳಾಗಿವೆ.

►ಚಿಕಿತ್ಸೆ

 ಟಾನ್ಸಿಲಿಟಿಸ್‌ಗೆ ಚಿಕಿತ್ಸೆಯು ಸೋಂಕಿಗೆ ಕಾರಣವನ್ನು ಅವಲಂಬಿಸಿರುತ್ತದೆ. ಹೆಚ್ಚಾಗಿ ವೈರಾಣುಗಳು ಟಾನ್ಸಿಲಿಟಿಸ್‌ಗೆ ಕಾರಣವಾಗಿರುತ್ತವೆ,ಹೀಗಾಗಿ ಆ್ಯಂಟಿಬಯಾಟಿಕ್‌ ಗಳು ಪರಿಣಾಮಕಾರಿಯಾಗುವುದಿಲ್ಲ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ವೈರಾಣುವಿನಿಂದ ಉಂಟಾಗುವ ಟಾನ್ಸಿಲಿಟಿಸ್ ಪ್ರತಿರೋಧವನ್ನು ತಗ್ಗಿಸುತ್ತದೆ ಮತ್ತು ಬ್ಯಾಕ್ಟೀರಿಯಾಗಳಿಂದಲೂ ಸೋಂಕಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಆ್ಯಂಟಿಬಯಾಟಿಕ್‌ ಗಳು ಬ್ಯಾಕ್ಟೀರಿಯಾ ಸೋಂಕನ್ನು ಶಮನಗೊಳಿಸಬಹುದು.

ಸ್ಟ್ರೆಪ್ಟೊಕಾಕಸ್‌ ನಂತಹ ಬ್ಯಾಕ್ಟೀರಿಯಾಗಳು ಮಾತ್ರ ಟಾನ್ಸಿಲಿಟಿಸ್‌ ಗೆ ಕಾರಣವಾಗಿದ್ದರೆ ಸೋಂಕನ್ನು ಗುಣಪಡಿಸಲು ಆ್ಯಂಟಿಬಯಾಟಿಕ್‌ ಗಳನ್ನು ನೀಡಲಾಗುತ್ತದೆ. ನೋವು ಮತ್ತು ಜ್ವರವನ್ನು ನಿವಾರಿಸಲೂ ವೈದ್ಯರು ಔಷಧಿಗಳನ್ನು ನೀಡಬಹುದು. ಪದೇ ಪದೇ ಟಾನ್ಸಿಲಿಟಿಸ್ ಬಾಧಿಸುತ್ತಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ಟಾನ್ಸಿಲ್‌ ಗಳನ್ನು ತೆಗೆಯುವುದು ಅಗತ್ಯವಾಗಬಹುದು. ಆದರೆ ಟಾನ್ಸಿಲಿಟಿಸ್‌ಗೆ ಗುರಿಯಾದ ಹೆಚ್ಚಿನ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗುವುದಿಲ್ಲ. ವರ್ಷಕ್ಕೆ 4-5 ಕ್ಕಿಂತ ಹೆಚ್ಚು ಸಲ ತೀವ್ರವಾದ ಟಾನ್ಸಿಲಿಟಿಸ್ ಬಾಧಿಸಿದ್ದರೆ ಅಥವಾ ಮಗುವಿಗೆ ಉಸಿರಾಡಲು ಮತ್ತು ಆಹಾರ ಸೇವಿಸಲು ನಿರಂತರವಾಗಿ ಕಷ್ಟವಾಗುತ್ತಿದ್ದರೆ ಮಾತ್ರ ಅಥವಾ ವಯಸ್ಕರಲ್ಲಿ ಇಂಟ್ರಾವೀನಸ್ ಆ್ಯಂಟುಬಯಾಟಿಕ್‌ಗಳನ್ನು ಅಗತ್ಯವಾಗಿಸುವ ಪೆರಿಟಾನ್ಸಿಲರ್(ಕೀವು ತುಂಬಿದ) ಅಥವಾ ಟಾನ್ಸಿಲ್ ಸೋಂಕು ಉಂಟಾಗಿದ್ದರೆ ಮಾತ್ರ ಶಸ್ತ್ರಚಿಕಿತ್ಸೆಯನ್ನು ಸೂಚಿಸಲಾಗುತ್ತದೆ.

►ಟಾನ್ಸಿಲಿಟಿಸ್‌ನ್ನು ತಡೆಯುವುದು ಹೇಗೆ?

ಟಾನ್ಸಿಲಿಟಿಸ್‌ನ್ನುಂಟು ಮಾಡುವ ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ಸುಲಭವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲವು. ಹೀಗಾಗಿ ಈಗಾಗಲೇ ಸೋಂಕಿನಿಂದ ಅಥವಾ ಗಂಟಲು ಕೆರೆತದಿಂದ ಬಳಲುತ್ತಿರುವರ ಸಂಪರ್ಕದಿಂದ ಆದಷ್ಟು ದೂರವಿದ್ದರೆ ಸೋಂಕು ಹರಡುವ ಅಪಾಯವನ್ನು ತಗ್ಗಿಸಬಹುದು. ಅವರು ಬಳಸುವ ಲೋಟ, ತಾಟು ಇತ್ಯಾದಿಗಳನ್ನು ಹಂಚಿಕೊಳ್ಳಬಾರದು. ಸೋಂಕು ಮರುಕಳಿಸದಂತೆ ಹಳೆಯ ಟೂಥ್‌ಬ್ರಷ್‌ನ್ನು ಬದಲಿಸಬೇಕು. ಟಾನ್ಸಿಲಿಟಿಸ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡಿರುವವರು ಇತರರಿಗೆ ಸೋಂಕು ಹರಡದಿರಲು ಆಗಾಗ್ಗೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುತ್ತಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News