ಎಲ್ಲರಿಗೂ ಇಷ್ಟದ ಪಪ್ಪಾಯಿ ಅಡ್ಡಪರಿಣಾಮಗಳನ್ನೂ ಹೊಂದಿದೆ ಎನ್ನುವುದು ನಿಮಗೆ ಗೊತ್ತೇ?
ಪಪ್ಪಾಯಿ ಹಣ್ಣನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಪೋಷಕಾಂಶಗಳ ಆಗರವಾಗಿರುವ ಈ ಹಣ್ಣು ಕಡಿಮೆ ಕ್ಯಾಲರಿಗಳನ್ನು ಮತ್ತು ಹೆಚ್ಚು ನಾರನ್ನು ಹೊಂದಿದೆ. ಹೀಗಾಗಿ ಪಪ್ಪಾಯಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು,ಆದರೆ ಅದು ಕೆಲವು ಅಡ್ಡ ಪರಿಣಾಮಗಳನ್ನೂ ಹೊಂದಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಶರೀರದಲ್ಲಿಯ ವಿಷವಸ್ತುಗಳ ನಿವಾರಣೆ,ತೂಕ ಇಳಿಕೆ,ಉರಿಯೂತ ನಿಗ್ರಹ ಇತ್ಯಾದಿಗಳೊಂದಿಗೆ ಪಪ್ಪಾಯಿ ಗುರುತಿಸಿಕೊಂಡಿದೆಯಾದರೂ ಪ್ರತಿದಿನ ಅದರ ಸೇವನೆಯು ಕೆಲವು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಈ ಕುರಿತು ಮಾಹಿತಿಗಳು ಇಲ್ಲಿವೆ.....
►ಅತಿಯಾದ ಪಪ್ಪಾಯಿ ಸೇವನೆ ಅನ್ನನಾಳದಲ್ಲಿ ತಡೆಗೆ ಕಾರಣವಾಗುತ್ತದೆ
ಪಪ್ಪಾಯಿ ಸೇವನೆ ನಿಜಕ್ಕೂ ಒಳ್ಳೆಯದು,ಆದರೆ ಸೀಮಿತ ಪ್ರಮಾಣದಲ್ಲಿರಬೇಕು. ಅದರ ಅತಿಯಾದ ಸೇವನೆ ಅನ್ನನಾಳದಲ್ಲಿ ತಡೆಯನ್ನುಂಟು ಮಾಡಬಲ್ಲದು. ಅನ್ನನಾಳವು ನಾವು ಸೇವಿಸಿದ ಆಹಾರವನ್ನು ಜಠರಕ್ಕೆ ತಲುಪಿಸುತ್ತದೆ. ಇದಕ್ಕೆ ತಡೆಯುಂಟಾದರೆ ಅದು ಜೀರ್ಣಾಂಗದ ಮೇಲೂ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ.
►ಅಲರ್ಜಿಗೆ ಕಾರಣವಾಗಬಹುದು
ಹಸಿರು ಬಣ್ಣದ ಅಥವಾ ಸರಿಯಾಗಿ ಪಕ್ವಗೊಂಡಿರದ ಪಪ್ಪಾಯಿ ಸೇವನೆಯು ಕೆಲವರಲ್ಲಿ ಅಲರ್ಜಿಗೆ ಕಾರಣವಾಗಬಹುದು. ಅದರಲ್ಲಿಯ ಲೇಟೆಕ್ಸ್ ತುರಿಕೆ,ಚರ್ಮ ಕೆಂಪಾಗುವಿಕೆ,ಬಾಯಿ ಹುಣ್ಣುಗಳು,ಅಜೀರ್ಣ ಇತ್ಯಾದಿಗಳಿಗೆ ಕಾರಣವಾಗುವ ಅಲರ್ಜಿಯನ್ನುಂಟು ಮಾಡುತ್ತದೆ. ಹೀಗಾಗಿ ಪಕ್ವಗೊಂಡಿರದ ಪಪ್ಪಾಯಿಯ ಸೇವನೆಯನ್ನು ನಿವಾರಿಸುವುದು ಒಳ್ಳೆಯದು,ತಿನ್ನಲೇಬೇಕಿದ್ದರೆ ಕಾಳಜಿ ವಹಿಸುವುದು ಇನ್ನೂ ಒಳ್ಳೆಯದು.
►ಗರ್ಭಪಾತದ ಅಪಾಯ
ಪಪ್ಪಾಯಿ ಹಣ್ಣು ಗರ್ಭಪಾತವನ್ನುಂಟು ಮಾಡುವ ಅಪಾಯದೊಂದಿಗೆ ಗುರುತಿಸಿಕೊಂಡಿದೆ,ಹೀಗಾಗಿ ಗರ್ಭಿಣಿಯರು ಅದನ್ನು ಸೇವಿಸಬಾರದು. ಅದು ಗರ್ಭಕೋಶದ ಸಂಕುಚನಗಳಿಗೆ ಕಾರಣವಾಗುತ್ತದೆ ಮತ್ತು ಇದು ಗರ್ಭದಲ್ಲಿನ ಭ್ರೂಣದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಹೀಗಾಗಿ ಗರ್ಭಿಣಿಯರು ಮತ್ತು ಎದೆಹಾಲು ಉಣ್ಣಿಸುತ್ತಿರುವ ತಾಯಂದಿರು ಹಣ್ಣಾದ ಅಥವಾ ಅಪಕ್ವ ಪಪ್ಪಾಯಿಯಿಂದ ದೂರವಿರಬೇಕು.
►ಪುರುಷರ ಫಲವತ್ತತೆಯನ್ನು ಕುಂದಿಸುತ್ತದೆ
ಪಪ್ಪಾಯಿ ಹಣ್ಣಿನ ಸೇವನೆಯು ಪುರುಷರಲ್ಲಿ ಫಲವತ್ತತೆಯನ್ನು ಕುಂದಿಸಬಲ್ಲದು ಎನ್ನಲಾಗಿದೆ. ಕೆಲವು ಪ್ರಕರಣಗಳಲ್ಲಿ ಅದು ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣುಗಳ ಚಲನಶೀಲತೆಯನ್ನು ಕಡಿಮೆಗೊಳಿಸುತ್ತದೆ. ಆದರೆ ಇದು ಎಲ್ಲ ಪುರುಷರಿಗೂ ಅನ್ವಯಿಸುವುದಿಲ್ಲ. ಈ ಅಂಶವು ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ಶರೀರದ ಆಂತರಿಕ ಕಾರ್ಯ ನಿರ್ವಹಣೆಗಳನ್ನು ಅವಲಂಬಿಸಿರುತ್ತದೆ.
►ರಕ್ತದಲ್ಲಿ ಸಕ್ಕರೆ ಮಟ್ಟವನ್ನು ತಗ್ಗಿಸಬಹುದು
ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಪಪ್ಪಾಯಿ ಸುರಕ್ಷಿತವಲ್ಲ. ಅಲ್ಲದೆ ಅಧಿಕ ರಕ್ತದೊತ್ತಡ ಮಾತ್ರೆಗಳನ್ನು ಸೇವಿಸುತ್ತಿರುವವರು ಪಪ್ಪಾಯಿಯಿಂದ ದೂರವಿರುವುದರಿಂದ ಇತರ ಗಂಭೀರ ಆರೋಗ್ಯ ಅಪಾಯಗಳನ್ನು ನಿವಾರಿಸಬಹುದು. ಅದು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ ಮತ್ತು ಇದು ಆರೋಗ್ಯಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.
►ವಿಷಕಾರಿಯೂ ಆಗಬಹುದು
ಪಪ್ಪಾಯಿಯಲ್ಲಿರುವ ಬೆಂಝಿಲ್ ಐಸೊಥಾಯೊಸೈನೇಟ್ ವಿಷಕಾರಿಯಾಗಿದೆ. ಸಣ್ಣ ಪ್ರಮಾಣದಲ್ಲಿ ತಿಂದರೆ ಇದು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ,ಆದರೆ ಅತಿಯಾಗಿ ಸೇವಿಸಿದರೆ ಇಡೀ ಶರೀರಕ್ಕೆ ಈ ವಿಷ ಹರಡಬಲ್ಲದು. ಇದೇ ಕಾರಣದಿಂದ ಪಪ್ಪಾಯಿಯನ್ನು ಅತಿಯಾಗಿ ತಿನ್ನಬಾರದು ಎನ್ನುತ್ತಾರೆ.
►ಮಕ್ಕಳಲ್ಲಿ ಆರೋಗ್ಯ ದೋಷಗಳಿಗೆ ಕಾರಣವಾಗಬಹುದು
ಪಪ್ಪಾಯಿ ಎಲೆಗಳಲ್ಲಿರುವ ಪಪೈನ್ ಎಂಬ ರಾಸಾಯನಿಕವು ಮಕ್ಕಳಲ್ಲಿ,ವಿಶೇಷವಾಗಿ ಶಿಶುಗಳಲ್ಲಿ ಜನ್ಮಜಾತ ದೋಷಗಳೊಂದಿಗೆ ಗುರುತಿಸಿಕೊಂಡಿದೆ. ಇದು ಗರ್ಭಿಣಿಯರು ಮತ್ತು ಬಾಣಂತಿಯರು ಪಪ್ಪಾಯಿ ತಿನ್ನಬಾರದು ಎನ್ನುವುದಕ್ಕೆ ಕಾರಣಗಳಲ್ಲೊಂದಾಗಿದೆ. ಎದೆಹಾಲು ಉಣ್ಣಿಸುತ್ತಿರುವ ತಾಯಂದಿರು ಪಪ್ಪಾಯಿ ಸೇವಿಸಬಾರದು ಎಂದು ಕೆಲವು ವೈದ್ಯರೂ ಸೂಚಿಸುತ್ತಾರೆ.