ಮಾವಿನ ಗೊರಟು ನೀಡುವ ಆರೋಗ್ಯಲಾಭಗಳು ಗೊತ್ತೇ?
ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವಿನ ಹಣ್ಣು ಅದ್ಭುತ ಸವಿಯ ಜೊತೆಗೆ ಹಲವಾರು ಆರೋಗ್ಯಲಾಭಗಳನ್ನೂ ನೀಡುತ್ತದೆ. ಆದರೆ ಅದರ ಗೊರಟು ಕೂಡ ಪೌಷ್ಟಿಕ ಗುಣಗಳನ್ನು ಹೊಂದಿದೆ ಎನ್ನುವುದು ನಿಮಗೆ ಗೊತ್ತೇ?
ಹೌದು,ಸಾಮಾನ್ಯವಾಗಿ ಮಾವಿನ ಹಣ್ಣು ತಿಂದ ಮೇಲೆ ತಿಪ್ಪೆಗೆ ಎಸೆಯಲಾಗುವ ಅದರ ಗೊರಟು ವಿವಿಧ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಗಟ್ಟಿಯಾದ,ನಾರಿನಿಂದ ಕೂಡಿದ ಮೇಲ್ಮೈ ಹೊಂದಿರುವ ಗೊರಟಿನ ಒಳಗಿರುವ ತಿರುಳು ತೈಲ, ಪ್ರೋಟಿನ್, ನಾರು, ಕಾರ್ಬೊಹೈಡ್ರೇಟ್, ರಂಜಕ, ಮ್ಯಾಗ್ನೀಷಿಯಂ, ಸೋಡಿಯಂ ಮತ್ತು ಕ್ಯಾಲ್ಸಿಯಂ ಅನ್ನು ಒಳಗೊಂಡಿರುತ್ತದೆ. ಅದು ಹಲವಾರು ಜೈವಿಕ ಸಕ್ರಿಯ,ಫೆನಾಲಿಕ್,ಅನ್‌ಸ್ಯಾಚ್ಯುರೇಟೆಡ್ ಫ್ಯಾಟಿ ಆ್ಯಸಿಡ್‌ಗಳು ಮತ್ತು ಉತ್ಕರ್ಷಣ ನಿರೋಧಕ ಸಂಯುಕ್ತಗಳನ್ನೂ ಒಳಗೊಂಡಿರುತ್ತದೆ.
ಚೆನ್ನಾಗಿ ಪಕ್ವವಾಗಿರುವ ಮಾವಿನ ಹಣ್ಣಿನ ಗೊರಟನ್ನು ಪುಡಿ ಮಾಡಿಟ್ಟುಕೊಂಡು ಸೇವಿಸಬಹುದು. ಅದನ್ನು ತೈಲ,ಬಟರ್ ಅಥವಾ ಕ್ಯಾಪ್ಸೂಲ್ ರೂಪದಲ್ಲಿಯೂ ಸೇವಿಸಬಹುದಾಗಿದೆ.
ಮಾವಿನ ಗೊರಟು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿ ಇಲ್ಲಿದೆ.....
►ಮಧುಮೇಹವನ್ನು ನಿಯಂತ್ರಿಸುತ್ತದೆ
ಮಾವಿನ ಗೊರಟಿನಿಂದ ತೆಗೆದ ಎಥೆನಾಲ್ ಸಾರವು ಮಧುಮೇಹ ನಿಗ್ರಹ ಗುಣಗಳನ್ನು ಹೊಂದಿದ್ದು,ಇವು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿವೆ ಮತ್ತು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಗಣನೀಯವಾಗಿ ತಗ್ಗಿಸುತ್ತವೆ ಎನ್ನುವುದನ್ನು ಅಧ್ಯಯನವೊಂದು ತೋರಿಸಿದೆ. ಮಧುಮೇಹಿಗಳು ಮತ್ತು ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಎದುರಿಸುತ್ತಿರುವವರಿಗೆ ಗೊರಟಿನ ಸಾರದ ಸೇವನೆಯು ಲಾಭದಾಯಕವಾಗುತ್ತದೆ.
►ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ
ಮಾವಿನ ಗೊರಟು ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಮತ್ತು ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ಅದರಲ್ಲಿಯ ಹೆಚ್ಚಿನ ಪಾಲಿಫಿನಾಲ್ ಉತ್ಕರ್ಷಣ ನಿರೋಧಕದ ಚಟುವಟಿಕೆಗಳು ಕಾರಣವಾಗಿವೆ.
►ಉರಿಯೂತವನ್ನು ತಗ್ಗಿಸುತ್ತದೆ
ಮಾವಿನ ಗೊರಟಿನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳಿಗೆ ಅದರಲ್ಲಿರುವ ಫಿನಾಲಿಕ್ ಸಂಯುಕ್ತಗಳು ಕಾರಣವಾಗಿವೆ. ಈ ಉರಿಯೂತ ನಿರೋಧಕ ಗುಣವು ಸಂಧಿವಾತ,ಜೀರ್ಣಾಂಗ ಮತ್ತು ಇತರ ದೀರ್ಘಕಾಲಿಕ ರೋಗಗಳೊಂದಿಗೆ ಗುರುತಿಸಿಕೊಂಡಿರುವ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ.
►ತೂಕ ಇಳಿಸಲು ನೆರವಾಗುತ್ತದೆ
ಗೊರಟಿನ ತಿರುಳಿನ ಸಾರವು ಗ್ಲುಕೋಸ್ ಸಹಿಷ್ಣುತೆ ಮತ್ತು ಲಿಪಿಡ್ ಪ್ರೊಫೈಲ್‌ನ್ನು ಹೆಚ್ಚಿಸುತ್ತದೆ ಮತ್ತು ಬೊಜ್ಜನ್ನು ತಗ್ಗಿಸುತ್ತದೆ. ಈ ಸಾರದ ಸೇವನೆಯು ಬೊಜ್ಜುದೇಹಿಗಳಿಗೆ ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿಕೊಳ್ಳಲು ನೆರವಾಗುತ್ತದೆ.
►ಅತಿಸಾರದ ಅಪಾಯವನ್ನು ಕಡಿಮೆ ಮಾಡುತ್ತದೆ
ಮಾವಿನ ಗೊರಟಿನಲ್ಲಿರುವ ಅತಿಸಾರ ನಿರೋಧಕ ಗುಣದಿಂದಾಗಿ ಅದನ್ನು ಭಾರತೀಯ ಸಾಂಪ್ರದಾಯಿಕ ವೈದ್ಯಪದ್ಧತಿಯಲ್ಲಿ ಬಳಸಲಾಗುತ್ತದೆ. ಗೊರಟಿನಿಂದ ತೆಗೆದ ಸಾರವು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿದ್ದು, ಸ್ಟ್ರೆಪ್ಟೊಕಾಕಸ್ ಆರಿಯಸ್ ಬ್ಯಾಕ್ಟೀರಿಯಾಗಳನ್ನು ಪ್ರತಿಬಂಧಿಸುತ್ತದೆ.
►ಕ್ಯಾನ್ಸರ್‌ನ್ನು ತಡೆಯುತ್ತದೆ
ಗೊರಟು ಉತ್ಕರ್ಷಣ ನಿರೋಧಕಗಳು,ಫೈಟೊಕೆಮಿಕಲ್‌ಗಳು ಮತ್ತು ಗ್ಯಾಲಿಕ್ ಆ್ಯಸಿಡ್‌ನ್ನು ಒಳಗೊಂಡಿರುತ್ತದೆ. ಗೊರಟಿನಿಂದ ತೆಗೆದ ಎಥೆನಾಲ್ ಸಾರವು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ತಡೆಯುತ್ತದೆ ಮತ್ತು ಸ್ತನ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುವಲ್ಲಿ ಧನಾತ್ಮಕವಾಗಿ ಕಾಯ ನಿರ್ವಹಿಸುತ್ತದೆ ಎನ್ನುವುದನ್ನು ಅಧ್ಯಯನವೊಂದು ತೋರಿಸಿದೆ.
►ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ
ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿ ಒಳಗೊಂಡಿರುವ ಗೊರಟನ್ನು ವಿಶೇಷವಾಗಿ ಹುಡಿಯ ರೂಪದಲ್ಲಿ ಬಳಸಿದರೆ ಚರ್ಮಕ್ಕೆ ಹೊಳಪು ನೀಡುತ್ತದೆ,ವಯಸ್ಸಾಗುವುದನ್ನು ವಿಳಂಬಿಸುತ್ತದೆ,ಮೊಡವೆಗಳ ಕಲೆಗಳನ್ನು,ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.*
►ತಲೆಗೂದಲನ್ನು ಆರೋಗ್ಯಯುತವಾಗಿರಿಸುತ್ತದೆ
ಮಾವಿನ ಗೊರಟು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ,ಹೊಟ್ಟನ್ನು ಕಡಿಮೆ ಮಾಡುತ್ತದೆ ಮತ್ತು ಅಕಾಲದಲ್ಲಿ ಕೂದಲು ನೆರೆಯುವಿಕೆಯನ್ನು ನಿಯಂತರಿಸುತ್ತದೆ. ಗೊರಟಿನಿಂದ ತಯಾರಿಸಿದ ಬಟರ್ ಕೂದಲಿನ ಕುಳಿಗಳನ್ನು ಬಲಗೊಳಿಸುವ ಮೂಲಕ ಕೂದಲು ಉದುರುವುದನ್ನು ತಡೆಯುತ್ತದೆ.