ಮಧುಮೇಹಿಗಳು ಫ್ಲು ಲಸಿಕೆಯನ್ನು ತೆಗೆದುಕೊಳ್ಳಲೇಬೇಕು, ಏಕೆ?
ಮಧುಮೇಹದಿಂದ ಬಳಲುತ್ತಿರುವವರು ವಿವಿಧ ಆರೋಗ್ಯ ಸಮಸ್ಯೆಗಳು ಮತ್ತು ಸೋಂಕುಗಳಿಗೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿರುತ್ತಾರೆ ಎನ್ನುವುದು ತಿಳಿದಿರುವ ವಿಷಯವೇ ಆಗಿದೆ. ಇನ್‌ಫ್ಲುಯೆಂಝಾ ಅಥವಾ ಫ್ಲು ಮಧುಮೇಹಿಗಳನ್ನು ವಿಶೇಷವಾಗಿ ಕಾಡುವ ಸೋಂಕು ಆಗಿದೆ ಮತ್ತು ಅವರು ಪದೇ ಪದೇ ಅಸ್ವಸ್ಥತೆಗೆ ಗುರಿಯಾಗುವ ಅಪಾಯಗಳನ್ನು ಹೆಚ್ಚಿಸುತ್ತದೆ.
ಫ್ಲು ಲಸಿಕೆಯನ್ನು ತೆಗೆದುಕೊಳ್ಳುವುದು ಮಧುಮೇಹಿಗಳಲ್ಲಿ ಅಥವಾ ಮಧುಮೇಹಕ್ಕೆ ಗುರಿಯಾಗುವ ಅಪಾಯದಲ್ಲಿರುವವರಿಗೆ ಈ ಪೀಡೆಯನ್ನು ತಡೆಯುವ ಪರಿಣಾಮಕಾರಿ ಮತ್ತು ಸರಳ ಮಾರ್ಗವಾಗಿದೆ.
ಮಧುಮೇಹಿಗಳಿಗೇಕೆ ಫ್ಲು ಲಸಿಕೆ ಅಗತ್ಯ?
ಮಧುಮೇಹಿಗಳು ಫ್ಲುಗೆ ತುತ್ತಾದಾಗ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಆರೋಗ್ಯವಂತ ಜನರು ಫ್ಲುಗೆ ತುತ್ತಾದಾಗ ಜ್ವರ,ನೋವು ಮತ್ತು ನಿಶ್ಶಕ್ತಿಗಳಿಂತಹ ಲಕ್ಷಣಗಳನ್ನು ನಿಯಂತ್ರಿಸುತ್ತಿದ್ದರೆ ಸಾಕು. ಆದರೆ ಮಧುಮೇಹಿಗಳಲ್ಲಿ ಇದು ನೋವು,ನಿಶ್ಶಕ್ತಿಗಿಂತ ಹೆಚ್ಚಿನದಾಗಿದೆ. ಮಧುಮೇಹಿಗಳಲ್ಲಿ ಫ್ಲು ಲಕ್ಷಣಗಳು ತೀವ್ರವಾಗಿರುತ್ತವೆ ಮತ್ತು ಸುದೀರ್ಘ ಅವಧಿಗೆ ಕಾಡುತ್ತಿರುತ್ತವೆ,ಗಂಭೀರ ಪ್ರಕರಣಗಳಲ್ಲಿ ಸಾವಿಗೂ ಕಾರಣವಾಗಬಹುದು.
ಮಧುಮೇಹಿಗಳಲ್ಲದವರಿಗೆ ಹೋಲಿಸಿದರೆ ಮಧುಮೇಹಿಗಳು ಇನ್‌ಫ್ಲುಯೆಂಝಾಕ್ಕೆ ತುತ್ತಾದಾಗ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಆರು ಪಟ್ಟು ಹೆಚ್ಚಾಗಿರುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಧುಮೇಹವು ನಿರೋಧಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಮೂಲಕ ವಿವಿಧ ಉಸಿರಾಟ ಸೋಂಕುಗಳಿಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅದು ವೈರಲ್ ಪ್ರತಿಜನಕಗಳ ವಿರುದ್ಧ ಆ್ಯಂಟಿಬಾಡಿಗಳ ಚಟುವಟಿಕೆಗಳನ್ನು ತಗ್ಗಿಸುತ್ತದೆ. ಮಧುಮೇಹಿಗಳಲ್ಲದವರಿಗೆ ಹೋಲಿಸಿದರೆ ಮಧುಮೇಹಿಗಳು ಇನ್‌ಫ್ಲುಯೆಂಝಾದಿಂದ ಸಾವನ್ನಪ್ಪುವ ಸಾಧ್ಯತೆ ಶೇ.5ರಿಂದ 15ರಷ್ಟು ಹೆಚ್ಚಿರಲು ಇದು ಕಾರಣವಾಗಿದೆ.
ಮಧುಮೇಹಿಗಳು ವರ್ಷಕ್ಕೊಮ್ಮೆ ಫ್ಲ್ಲು ಲಸಿಕೆ ತೆಗೆದುಕೊಳ್ಳುವುದರಿಂದ ವೈರಾಣುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಲಸಿಕೆಯ ಸಾಮರ್ಥ್ಯ ಕಾಲಕ್ರಮೇಣ ಕಡಿಮೆಯಾಗುತ್ತದೆ ಮತ್ತು ಪ್ರತಿವರ್ಷ ವೈರಸ್‌ನ ಸ್ವರೂಪದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಹೀಗಾಗಿ ವರ್ಷಕ್ಕೊಮ್ಮೆ ಲಸಿಕೆಯನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು.