ಏನಿದು ಥೈರಾಯ್ಡ್ ಸ್ಟಾರ್ಮ್?: ಕಾರಣಗಳು ಮತ್ತು ಲಕ್ಷಣಗಳು ಇಲ್ಲಿವೆ

Update: 2019-11-02 14:34 GMT

ಥೈರಾಯ್ಡ್ ಸ್ಟಾರ್ಮ್ ಒಂದು ಮಾರಣಾಂತಿಕ ಸ್ಥಿತಿಯಾಗಿದೆ,ಆದರೆ ಇದು ಕಡಿಮೆ ಜನರಲ್ಲಿ ಕಂಡು ಬರುತ್ತದೆ. ಇದು ಹೃದಯ ವೈಫಲ್ಯ,ಹೃದಯಾಘಾತ,ಅಷ್ಟೇ ಏಕೆ...ಸಾವಿಗೂ ಕಾರಣವಾಗಬಲ್ಲದು. ಹೈಪರ್‌ಥೈರಾಯ್ಡಿಸಂ ಅಂದರೆ ಥೈರಾಯ್ಡ್ ಗ್ರಂಥಿಯು ಅತಿಯಾದ ಥೈರಾಯ್ಡ್ ಹಾರ್ಮೋನ್‌ಗಳನ್ನು ಸ್ರವಿಸುವ ಸ್ಥಿತಿಯಿಂದ ಬಳಲುತ್ತಿರುವ ವ್ಯಕ್ತಿಯು ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದಾಗ ಥೈರಾಯ್ಡ್ ಸ್ಟಾರ್ಮ್ ಉಂಟಾಗುತ್ತದೆ. ಥೈರಾಯ್ಡ್ ಸ್ಟಾರ್ಮ್ ಸ್ಥಿತಿಯಲ್ಲಿ ವ್ಯಕ್ತಿಯಲ್ಲಿ ಅತಿಯಾದ ಜ್ವರ,ಅನಿಯಮಿತ ಹೃದಯಬಡಿತ,ಅಧಿಕ ರಕ್ತದೊತ್ತಡ,ವಾಂತಿ ಮತ್ತು ಅತಿಸಾರ ಇತ್ಯಾದಿಗಳು ಉಂಟಾಗುತ್ತವೆ.

► ಥೈರಾಯ್ಡ್ ಸ್ಟಾರ್ಮ್‌ನ ಲಕ್ಷಣಗಳು

 ಹೈಪರ್‌ಥೈರಾಯ್ಡಿಸಂ ಲಕ್ಷಣಗಳೇ ಥೈರಾಯ್ಡ್ ಸ್ಟಾರ್ಮ್‌ನಲ್ಲಿಯೂ ಕಂಡುಬರುತ್ತವೆ,ಆದರೆ ಹೆಚ್ಚು ತೀವ್ರವಾಗಿರುತ್ತವೆ ಮತ್ತು ದಿಢೀರ್‌ನೆ ಕಾಣಿಸಿಕೊಳ್ಳುತ್ತವೆ. ಇದೇ ಕಾರಣದಿಂದ ಈ ಸ್ಥಿತಿಯಿಂದ ಬಳಲುತ್ತಿರುವವರಿಗೆ ತಮ್ಮ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ನಿಮಿಷಕ್ಕೆ 140ಕ್ಕೂ ಅಧಿಕ ದರದಲ್ಲಿ ಹೃದಯಬಡಿತ(ಟಾಕಿಕಾರ್ಡಿಯಾ),ಅತಿಯಾದ ಜ್ವರ,ನಿರಂತರ ಬೆವರುವಿಕೆ, ಕಾಮಾಲೆ,ನಿರ್ಜಲೀಕರಣ,ನಡುಕ ಮತ್ತು ನಿಶ್ಶಕ್ತಿ,ವಾಂತಿ ಮತ್ತು ವಾಕರಿಕೆ,ಅತಿಸಾರ ಹಾಗೂ ಪ್ರಜ್ಞೆ ತಪ್ಪುವುದು ಇವು ಥೈರಾಯ್ಡ್ ಸ್ಟಾರ್ಮ್‌ನ ಪ್ರಮುಖ ಲಕ್ಷಣಗಳಾಗಿವೆ.

► ಥೈರಾಯ್ಡ್ ಸ್ಟಾರ್ಮ್‌ಗೆ ಸಂಬಂಧಿಸಿದ ಅಪಾಯಗಳು

ಥೈರಾಯ್ಡ್ ಸ್ಟಾರ್ಮ್ ಶರೀರದ ಅಂಗಾಂಗಗಳ ಕಾರ್ಯ ನಿರ್ವಹಣೆಗೆ ತೊಡಕನ್ನುಂಟು ಮಾಡುವುದರಿಂದ ಸಾಕಷ್ಟು ಅಪಾಯಕಾರಿಯಾಗಿದೆ. ಹೃದಯಾಘಾತ ಮತ್ತು ಹೃದಯ ವೈಫಲ್ಯದ ಜೊತೆಗೆ ರೋಗಿಯಲ್ಲಿ ಉಸಿರಾಟಕ್ಕೆ ತೊಂದರೆ,ಕಾಲುಗಳ ಕೆಳಭಾಗದಲ್ಲಿ ಊತ,ಹೊಟ್ಟೆನೋವು ಮತ್ತು ಯಕೃತ್ತಿಗೆ ಹಾನಿ ಕಂಡು ಬರಬಹುದು. ಕೆಲವೊಮ್ಮೆ ಥೈರಾಯ್ಡ್ ಸ್ಟಾರ್ಮ್‌ನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಶ್ವಾಸನಾಳದ ಮೇಲ್ಭಾಗದಲ್ಲಿ ವೈರಾಣು ಸೋಂಕು ಮತ್ತು ನ್ಯುಮೋನಿಯಾದಂತಹ ಸಮಸ್ಯೆಗಳೂ ಉಂಟಾಗಬಹುದು.

►ಕಾರಣಗಳು

ಹೈಪರ್‌ಥೈರಾಯ್ಡಿಸಮ್‌ಗೆ ಅಪೂರ್ಣ ಚಿಕಿತ್ಸೆಯು ಥೈರಾಯ್ಡೆ ಸ್ಟಾರ್ಮ್‌ಗೆ ಪ್ರಮುಖ ಕಾರಣವಾಗಿದೆ. ಹೈಪರ್‌ಥೈರಾಯ್ಡಿಸಮ್‌ಗೆ ಚಿಕಿತ್ಸೆ ಪಡೆದುಕೊಳ್ಳದಿದ್ದಾಗ ಅಥವಾ ಆ್ಯಂಟಿ ಥೈರಾಯ್ಡ್ ಔಷಧಿಗಳ ಸೇವನೆಯನ್ನು ನಿಲ್ಲಿಸಿದಾಗ ವ್ಯಕ್ತಿಯು ಥೈರಾಯ್ಡ್ ಸ್ಟಾರ್ಮ್‌ಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾನೆ. ಹೈಪರ್‌ಥೈರಾಯ್ಡಿಸಂ ಜೊತೆ ಗುರುತಿಸಿಕೊಂಡಿರುವ ಥೈರಾಯ್ಡಿ ಗ್ರಂಥಿಯ ಸೋಂಕಿಗೆ ಚಿಕಿತ್ಸೆ ಪಡೆಯದಿರುವುದು ಥೈರಾಯ್ಡೆ ಸ್ಟಾರ್ಮ್‌ಗೆ ಮುಖ್ಯ ಕಾರಣವಾಗಿದೆ.

► ರೋಗನಿರ್ಧಾರ

ಥೈರಾಯ್ಡ್ ಸ್ಟಾರ್ಮ್ ಎಂದು ನಿರ್ಧರಿಸಲು ಯಾವುದೇ ನಿರ್ದಿಷ್ಟ ಪ್ರಯೋಗಾಲಯ ಪರೀಕ್ಷೆಗಳಿಲ್ಲ. ಇದನ್ನು ಪತ್ತೆ ಹಚ್ಚಲು ವೈದ್ಯರು ರೋಗಿಯಲ್ಲಿಯ ಲಕ್ಷಣಗಳಿಗೆ ವಿಶೇಷ ಗಮನವನ್ನು ನೀಡುತ್ತಾರೆ. ಜೊತೆಗೆ ರಕ್ತಪರೀಕ್ಷೆಗಳ ಮೂಲಕ ರೋಗಿಯ ಶರೀರದಲ್ಲಿಯ ಹಾರ್ಮೋನ್ ಮಟ್ಟಗಳನ್ನು ಅಳೆಯುತ್ತಾರೆ. ಥೈರಾಯ್ಡಾ ಸ್ಟಾರ್ಮ್‌ನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಟಿ3 ಮತ್ತು ಟಿ4 ಹಾರ್ಮೋನ್‌ಗಳು ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿರುತ್ತವೆ.

► ಚಿಕಿತ್ಸೆ

ಥೈರಾಯ್ಡ್ ಸ್ಟಾರ್ಮ್ ದಿಢೀರನೆ ಉಂಟಾಗುತ್ತದೆ ಮತ್ತು ಶರೀರದಲ್ಲಿಯ ಎಲ್ಲ ಅಂಗಾಂಗಗಳನ್ನು ಬಾಧಿಸುತ್ತದೆ. ವ್ಯಕ್ತಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆಯು ಅಗತ್ಯವಾಗುತ್ತದೆ ಮತ್ತು ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿಯನ್ನು ತಗ್ಗಿಸಲು ಆ್ಯಂಟಿ ಥೈರಾಯ್ಡ್ ಔಷಧಿಗಳನ್ನು ನೀಡಲಾಗುತ್ತದೆ. ಜೊತೆಗೆ ಹೈಪೊಥೈರಾಯ್ಡಿಸಮ್‌ಗೆ ಚಿಕಿತ್ಸೆ ವೇಳೆ ರೋಗಿಯ ಬಗ್ಗೆ ನಿರಂತರ ಕಾಳಜಿಯು ಅಗತ್ಯವಾಗಿರುತ್ತದೆ.

ಹೈಪರ್‌ಥೈರಾಯ್ಡಿಸಂ ರೋಗಿಗಳಿಗೆ ರೇಡಿಯೊಆ್ಯಕ್ಟಿವ್ ಅಯೊಡಿನ್ ಮೂಲಕ ಚಿಕಿತ್ಸೆಯನ್ನು ನೀಡಬಹುದಾಗಿದ್ದು,ಇದು ಥೈರಾಯ್ಡ್ ನ್ನು ನಾಶಗೊಳಿಸುತ್ತದೆ. ಆದರೆ ಇದು ಭ್ರೂಣಕ್ಕೆ ಹಾನಿಯನ್ನುಂಟು ಮಾಡುವುದರಿಂದ ಹೈಪರ್‌ಥೈರಾಯ್ಡಿಸಮ್‌ನಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಈ ಚಿಕಿತ್ಸೆಯನ್ನು ನೀಡುವಂತಿಲ್ಲ. ಅಂತಹ ಸಂದರ್ಭದಲ್ಲಿ ಅವರ ಥೈರಾಯ್ಡೆನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಗುತ್ತದೆ.

ಶಸ್ತ್ರಚಿಕಿತ್ಸೆಯ ಮೂಲಕ ಥೈರಾಯ್ಡೆನ್ನು ತೆಗೆದರೆ ಬಳಿಕ ಕೃತಕ ಹಾರ್ಮೋನ್‌ಗಳನ್ನು ಸೇವಿಸುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News