ಮನುಷ್ಯತ್ವವನ್ನೇ ಕೊಲ್ಲುವ ಜಾತಿ ಎಂಬ ವ್ಯಾಧಿ

Update: 2019-11-10 18:38 GMT

ಮ ನುಷ್ಯ ಇಷ್ಟು ಕ್ರೂರವಾಗಬಲ್ಲನೇ? ನಂಬಲು ಆಗುತ್ತಿಲ್ಲ. ಪ್ರಾಣಿಗಳಲ್ಲೂ ಕೂಡ ಇಂಥ ಕ್ರೌರ್ಯ ನಾವು ಕಾಣುವುದಿಲ್ಲ. ಆದರೆ, ಅದು ಮನುಷ್ಯನಲ್ಲಿದೆ. ಇದು ಸಂಪತ್ತಿನಿಂದ ಬಂದ ಕ್ರೌರ್ಯ ಮಾತ್ರವಲ್ಲ, ಜಾತಿಯಿಂದ ಬಂದಿದ್ದು ಹೌದು. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಎಷ್ಟು ಭಯಾನಕವಾಗಿದೆ ಎಂಬುದಕ್ಕೆ ಗದಗ ಜಿಲ್ಲೆಯಲ್ಲಿ ಇತ್ತೀಚೆಗೆ ಅಂತರ್ಜಾತಿ ವಿವಾಹವಾದ ದಂಪತಿಯ ಕಗ್ಗೊಲೆಯೇ ಉದಾಹರಣೆ.

 ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ಜಾತಿ ರಹಿತ ಸಮಾಜ ಕಟ್ಟಲು ಬಸವಣ್ಣನವರು ಮುಂದಾದರು. ರಕ್ತ ಸಂಬಂಧದ ಮೂಲಕ ಜಾತಿಯ ಅಡ್ಡಗೋಡೆಯನ್ನು ಕೆಡವಬಹುದೆಂದು ಅಂತರ್ಜಾತಿ ವಿವಾಹ ಮಾಡಿಸುವ ದಿಟ್ಟ ಹೆಜ್ಜೆ ಇಟ್ಟರು. ಆಗ ಕಲ್ಯಾಣದಲ್ಲಿ ಕೋಲಾಹಲವೇ ನಡೆಯಿತು. ನೆಂಟಸ್ತಿಕೆ ಮಾಡಿಕೊಳ್ಳಲು ತಯಾರಾದ ಮಧುವರಸ, ಹರಳಯ್ಯನವರನ್ನು ಊರಲ್ಲಿ ಮೆರವಣಿಗೆ ಮಾಡಿ ಆನೆಯ ಕಾಲಿನಿಂದ ತುಳಿಸಿ ಕೊಲ್ಲಿಸಲಾಯಿತು. ಬಸವಣ್ಣನವರು ಕೂಡಲ ಸಂಗಮಕ್ಕೆ ಬರಬೇಕಾಯಿತು. ಅವರ ಸಾವೂ ಸಹಜ ಸಾವಲ್ಲ ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ. ಇದೆಲ್ಲ ನಡೆದು 800 ವರ್ಷಗಳೇ ಗತಿಸಿದವು. ಬಸವಣ್ಣ ಬಯಸಿದ ಸಮಾಜ ನಿರ್ಮಾಣವಾಗಲಿಲ್ಲ. ಬಸವಣ್ಣನನ್ನು ಮೂರ್ತಿ ಮಾಡಿ ಗುಡಿಯಲ್ಲಿ, ನಗರದ ವರ್ತುಲಗಳಲ್ಲಿ ನಿಲ್ಲಿಸಿ ಆತನ ಸಂದೇಶವನ್ನು ಸಮಾಧಿ ಮಾಡಿದೆವು.

ಅದು ಹೋಗಲಿ, ಗದಗ ಜಿಲ್ಲೆಯ ರೋಣ ತಾಲೂಕಿನ ಲಕ್ಕಲಕಟ್ಟಿ ಎಂಬ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಯ ಕಗ್ಗೊಲೆ ಕಳೆದ ವಾರ ನಡೆದಿದ್ದು, ಇದರ ಬಗ್ಗೆ ಬರೆಯಲು ಸಂಕಟವಾಗುತ್ತದೆ. ಪರಸ್ಪರ ಪ್ರೀತಿಸಿ ಮದುವೆಯಾಗಿ ತಮ್ಮ ಪಾಡಿಗೆ ತಾವು ದುಡಿದು ಬದುಕು ಕಟ್ಟಿಕೊಂಡಿದ್ದ ಇವರನ್ನು ಈ ಸಮಾಜ ಬದುಕಲು ಬಿಡಲಿಲ್ಲ. ಮನುಷ್ಯ ವಿದ್ಯಾವಂತನಾದರೆ, ಅಕ್ಷರ ಕಲಿತರೆ ಆಧುನಿಕತೆ ಬಂದರೆ ಜಾತಿ ತನ್ನಿಂದ ತಾನೇ ಹೊರಟು ಹೋಗುತ್ತದೆ ಎಂಬ ನಂಬಿಕೆ ಮತ್ತೆ ಮತ್ತೆ ಹುಸಿಯಾಗುತ್ತಲೆ ಇದೆ.

ಈ ಲಕ್ಕಲಕಟ್ಟಿ ಎಂಬ ಹಳ್ಳಿಯ ರಮೇಶ ಮಾದರ ಮತ್ತು ಲಂಬಾಣಿ ಸಮಾಜದ ಗಂಗಮ್ಮ ಪರಸ್ಪರ ಇಷ್ಟಪಟ್ಟರು. ಇವರ ಮದುವೆಗೆ ಗಂಗಮ್ಮನ ಲಂಬಾಣಿ ಸಮಾಜದ ಹಿರಿಯರು, ಮುಖ್ಯವಾಗಿ ಆಕೆಯ ಮನೆಯವರು ಒಪ್ಪಲಿಲ್ಲ. ಆರಂಭದಲ್ಲೇ ಗೊತ್ತಾಗಿ ರಮೇಶನ ಮೇಲೆ ಹಲ್ಲೆ ಮಾಡಿ ಪೈಶಾಚಿಕವಾಗಿ ಥಳಿಸಿದರು. ಆದರೂ ಇದಾವುದಕ್ಕೂ ಮಣಿಯದ ರಮೇಶ ಮತ್ತು ಗಂಗಮ್ಮ ಕೊನೆಗೂ ವಿವಾಹವಾದರು. ಅಲ್ಲಿಗೆ ಈ ವಿರೋಧ ಮತ್ತು ದ್ವೇಷ ಕೊನೆಗೊಳ್ಳಬೇಕಾಗಿತ್ತು. ಆದರೆ, ಕೊನೆಗೊಂಡಂತೆ ಕಂಡರೂ ಒಳಗೊಳಗೆ ಲಾವಾರಸ ಕುದಿಯುತ್ತಿತ್ತು.

ಹಾಗೆ ನೋಡಿದರೆ ರಮೇಶ ಮತ್ತು ಗಂಗಮ್ಮ ಇಬ್ಬರೂ ದಮನಿತ ಸಮುದಾಯಕ್ಕೆ ಸೇರಿದವರೆ. ಇವರ ಜಾತಿಗಳು ಪರಿಶಿಷ್ಟ ಪಟ್ಟಿಯಲ್ಲಿ ಸೇರಿ ಮೀಸಲು ಸೌಕರ್ಯವನ್ನು ಪಡೆಯುತ್ತಿವೆ. ಆದರೆ, ತಮ್ಮ ಮಗಳು ಮಾದರ ಹುಡುಗನನ್ನು ಮದುವೆಯಾಗಿ ಮರ್ಯಾದೆ ಕಳೆದಳೆಂದು ಲಂಬಾಣಿ ಸಮಾಜದವರು ಅಂದರೆ ಆಕೆಯ ತಂದೆ ಮತ್ತು ಸೋದರರ ಆಕ್ರೋಶ. ಮೀಸಲಾತಿ ಸೌಕರ್ಯ ಪಡೆಯಲು ಎಸ್ಸಿ ಪಟ್ಟಿಯಲ್ಲಿ ತಮ್ಮ ಜಾತಿ ಸೇರ್ಪಡೆಯಾಗಬೇಕು. ಆದರೆ ತಮ್ಮ ಹುಡುಗಿ ಮಾದರ ಹುಡು ಗನನ್ನು ಮದುವೆಯಾದರೆ ಮರ್ಯಾದೆ ಹೋಗು ತ್ತದೆ. ಇದರ ಪರಿಣಾಮ ಇವರಿಬ್ಬರ ಕಗ್ಗೊಲೆ.

ಮೀಸಲು ಸೌಕರ್ಯ ಪಡೆಯುವವರಲ್ಲಿ ಅಸ್ಪಶ್ಯ ಮತ್ತು ಸ್ಪಶ್ಯ ಜಾತಿಗಳ ನಡುವೆ ದೊಡ್ಡ ಕಂದರವೆ ಇದೆ. ಕನಿಷ್ಠ ಮನುಷ್ಯತ್ವವನ್ನೂ ಕಳೆದುಕೊಂಡು ಜಾತಿ ಶ್ರೇಷ್ಠತೆಯ ಹುಸಿ ಅಹಂಕಾರ ವಿಜ್ರಂಭಿಸುತ್ತದೆ. ಹೀಗಾಗಿ ಸವಲತ್ತುಗಳಿಗಾಗಿ ಸರಕಾರದ ನೌಕರಿಗಾಗಿ ಹಾಗೂ ಎಂಎಲ್‌ಎ ಸೀಟಿಗಾಗಿ ಮಾತ್ರ ಎಸ್ಸಿ ಮತ್ತು ಎಸ್ಟಿ ಉಳಿದಂತೆ ಅಸ್ಪೃಶ್ಯ ಸಮುದಾಯ ಜನರನ್ನು ನೋಡುವ ದೃಷ್ಟಿ ಮೀಸಲಾತಿ ಪಡೆಯುವ ಸ್ಪಶ್ಯರಲ್ಲಿ ಭಿನ್ನ್ನವಾಗಿಲ್ಲ. ಈ ಸಮುದಾಯಗಳಿಗೆ ಅಂಬೇಡ್ಕರ್ ಅವರಂಥ ಐಕಾನ್‌ಗಳಿಲ್ಲ. ಅಂಬೇಡ್ಕರ್ ಇವರಿಗೆ ಮೀಸಲಾತಿಗೆ ಮಾತ್ರ ಬೇಕು ಎಂಬ ಟೀಕೆಗಳು ಕೇಳಿ ಬರುತ್ತಿವೆ.

 ಹಾಗೆಂದು ಲಂಬಾಣಿ, (ಬಂಜಾರ )ಸಮಾಜದ ಬಗ್ಗೆ ನನಗ್ಯಾವ ಪೂರ್ವಾಗ್ರಹ ಭಾವನೆಯೂ ಇಲ್ಲ. ಹಾಗೆ ನೋಡಿದರೆ, ನನ್ನ ಬೆಳವಣಿಗೆಯಲ್ಲಿ ನೆರವಾದವರು ಇದೇ ಸಮುದಾಯದ ಕೆ.ಟಿ.ರಾಠೋಡ ಅವರು. ದೇವರಾಜ ಅರಸು ಸಂಪುಟದಲ್ಲಿ ಮಂತ್ರಿಯಾಗಿದ್ದ ಅವರು ವಿಜಯಪುರ ಜಿಲ್ಲೆಯಲ್ಲಿ ಎಪ್ಪತ್ತರ ದಶಕದಲ್ಲಿ ನನ್ನಂಥ ಅನೇಕ ಯುವಕರನ್ನು ನಾವು ಎಡಪಂಥೀಯರೆಂದು ಗೊತ್ತಿದ್ದರೂ ಬೆಳೆಸಿದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಗದಗ ಜಿಲ್ಲೆಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸದಿದ್ದರೆ ನಾವು ಮನುಷ್ಯರಲ್ಲ. ಬಂಜಾರ ಸಮಾಜದ ಪ್ರಗತಿಪರ ಮುಖಂಡರು ತಮ್ಮ ಸಮುದಾಯದಿಂದ ಇಂಥ ಕ್ರೂರ ಕೃತ್ಯ ನಡೆಯದಂತೆ ನೋಡಿಕೊಳ್ಳಬೇಕು. ಗದಗದ ಈ ಹೇಯ ಕೃತ್ಯವನ್ನು ಖಂಡಿಸಬೇಕು. ಈವರೆಗೆ ನಾನು ಗಮನಿಸಿದಂತೆ ಖಂಡಿಸಿದಂತೆ ಕಾಣಲಿಲ್ಲ.

ಭಾರತದ ಜಾತಿ ವ್ಯವಸ್ಥೆ ತುಂಬಾ ವಿಚಿತ್ರವಾಗಿದೆ. ಪ್ರತಿಯೊಂದು ಜಾತಿಯೂ ಶ್ರೇಣೀಕೃತ ವ್ಯವಸ್ಥೆ ಮೇಲೆ ಇಲ್ಲವೆ ಕೆಳಗೆ ಇರುತ್ತದೆ. ಎಪ್ಪತ್ತರ ದಶಕದಲ್ಲಿ ನಾವು ಕಮ್ಯುನಿಸ್ಟ್ ಚಳವಳಿಗೆ ಬಂದಾಗ ವರ್ಗ ಸಂಘರ್ಷ ಜಾತಿಭೇದವನ್ನು ಅಳಿಸಿ ಹಾಕುತ್ತದೆ ಎಂದು ಭ್ರಮಿಸಿದ್ದೆವು. ಆದರೆ ವಾಸ್ತವ ಗೊತ್ತಾಗಿದ್ದು ಬಾಬಾಸಾಹೇಬರ ಸಾಹಿತ್ಯ ಓದಿದ ನಂತರ. ಕಾರ್ಲ್‌ಮಾರ್ಕ್ಸ್ ಕೂಡ ಭಾರತ ಜಾತಿ ಆಧಾರದಲ್ಲಿ ವಿಭಜನೆಗೊಂಡಿರುವ ಬಗ್ಗೆ ತಮಗೆ ಆ ಕಾಲದಲ್ಲಿ ಲಭ್ಯವಿದ್ದ ಮಾಹಿತಿಯ ಆಧಾರದಲ್ಲಿ ಉಲ್ಲೇಖಿಸಿದ್ದಾರೆ.

ಗದಗದ ಲಕ್ಕಲಕಟ್ಟಿ ಘಟನೆಯ ಬಗ್ಗೆ ಕೇಳಿದಾಗ ಎರಡು ವರ್ಷಗಳ ಹಿಂದೆ ವಿಜಯಪರದಲ್ಲಿ ನೋಡಿದ ಮರಾಠಿ ಸಿನೆಮಾ ‘ಸೈರಾಟ’ ನೆನಪಿಗೆ ಬಂತು. ಅದರಲ್ಲಿ ಮರಾಠಾ ಜಮೀನ್ದಾರ ಕುಟುಂಬದ ಯುವತಿ ದಲಿತ ಹುಡುಗನನ್ನು ಪ್ರೀತಿಸಿ ಮದುವೆಯಾಗಿ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳುತ್ತಾಳೆ. ಎರಡು ಮಕ್ಕಳಾಗುತ್ತವೆ. ಎರಡು ವರ್ಷಗಳ ನಂತರ ಜಮೀನ್ದಾರ್ ಕಡೆಯವರು ಬಂದು ಈ ದಂಪತಿಯನ್ನು ಕೊಚ್ಚಿ ಕೊಲೆ ಮಾಡುತ್ತಾರೆ. ಎಳೆಯ ಮಕ್ಕಳು ಅನಾಥವಾಗುತ್ತವೆ. ಅದು ಸಿನೆಮಾ. ಈಗ ಅದು ನಮ್ಮ ರಾಜ್ಯದಲ್ಲೇ ಕಣ್ಣೆದುರೇ ನಡೆದಿದೆ. ಗಂಡ ಹೆಂಡತಿ ಇಬ್ಬರೂ ಹಲ್ಲೆಯಿಂದ ಸಾವಿಗೀಡಾಗಿದ್ದಾರೆ. ಮೂರು ವರ್ಷದ ಮಗುವನ್ನೂ ಕೊಂದಿದ್ದಾರೆ. ಈ ಕ್ರೌರ್ಯಕ್ಕೆ ಏನೆನ್ನಬೇಕು . ಇಂಥವರಿಗೆ ಯಾವ ಮೀಸಲಾತಿ ಕೊಟ್ಟರೂ ಮನುಷ್ಯರಾಗುವುದಿಲ್ಲ. ಮನುಷ್ಯತ್ವ ಇಲ್ಲದ ಇಂಥವರಿಗೆ ಮೀಸಲು ಸೌಕರ್ಯ ರದ್ದುಗೊಳಿಸಿ ಜೈಲಿಗೆ ಹಾಕಬೇಕು.

ಬಾಬಾ ಸಾಹೇಬರ ನಿರಂತರ ಹೋರಾಟ ಮತ್ತು ಪರಿಶ್ರಮದಿಂದ ಶತಮಾನಗಳಿಂದ ಶೋಷಣೆಗೊಳಗಾದ ಅಸ್ಪಶ್ಯ ಸಮುದಾಯದ ಜನರಿಗೆ ಮೀಸಲು ಸೌಕರ್ಯ ಬಂತು. ಆದರೆ, ಅದೂ ಕೂಡ ಸರಿಯಾಗಿ ಜಾರಿಯಾಗಿಲ್ಲ. ಇದರಿಂದ ದೊರೆಯುವ ಸೌಕರ್ಯಗಳಿಗಾಗಿ ಇದನ್ನೂ ಅಪಹರಿಸುವ ಹುನ್ನಾರ ನಡೆದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇಡ ಜಂಗಮ ಸರ್ಟಿಫಿಕೇಟ್ ನೀಡಿ ವೀರಶೈವ ಮಠಾಧೀಶರೊಬ್ಬರು ಮಹಾರಾಷ್ಟ್ರದ ಸೊಲ್ಲಾಪುರ ಕ್ಷೇತ್ರದಿಂದ ಚುನಾಯಿತರಾಗಿ ಬಂದರು. ನಿಜವಾದ ಅಸ್ಪಶ್ಯ ಸಮುದಾಯದ ಅಭ್ಯರ್ಥಿ ಸೋತರು

ಅದೇನೇ ಇರಲಿ ಅವಶ್ಯವಿರುವವರಿಗೆ ಅವಶ್ಯವಿರುವಷ್ಟು ಕಾಲ ಮೀಸಲು ಸೌಕರ್ಯ ಗಳಿರಲಿ. ಆದರೆ, ಮೀಸಲು ಸೌಲಭ್ಯಗಳನ್ನು ಪಡೆದವರೇ ಈ ರೀತಿ ಜಾತಿ ಶ್ರೇಷ್ಠತೆ ಹಾಗೂ ಮರ್ಯಾದೆ ಹೆಸರಿನಲ್ಲಿ ಕೊಲೆ ಮಾಡುತ್ತ ಹೋದರೆ ಇವರನ್ನು ಮನುಷ್ಯರೆನ್ನಬೇಕೇ?

ರಮೇಶ ಮಾದರ ಮತ್ತು ಗಂಗಮ್ಮನ ದುರಂತ ಎದೆ ನಡುಗಿಸುವ ಹತ್ಯೆ ನಮ್ಮೆಲ್ಲರ ಕಣ್ತೆರೆಸಬೇಕು. ಜಾತಿ ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಅದಕ್ಕೊಂದು ಅಡಿಪಾಯ ಕಲ್ಪಿಸಿದವರು, ಚಾತುರ್ವರ್ಣ ಪದ್ಧತಿ ಮಾಡಿದವರು ಈ ಎಲ್ಲ ಕಗ್ಗೊಲೆಗಳ ನಿಜವಾದ ಅಪರಾಧಿಗಳಾಗಿದ್ದಾರೆ. ಆದರೆ, ತಮ್ಮನ್ನು ತಾವು ಸುಟ್ಟುಕೊಂಡು ನಮಗೆ ಬೆಳಕಿನ ದಾರಿ ತೋರಿಸಿದ ಬುದ್ಧ, ಬಸವ, ಬಾಬಾಸಾಹೇಬರು, ಅಣ್ಣಾಭಾವು ಸಾಠೆ, ವಿವೇಕಾನಂದ, ಭಗತ್‌ಸಿಂಗ್, ಗಾಂಧಿ ಇಂಥವರನ್ನು ಮರೆತು ಜಾತಿ ವ್ಯಸನದಿಂದ ಒಬ್ಬರನ್ನೊಬ್ಬರು ಕೊಲ್ಲುತ್ತ ಹೋದರೆ ನಾವು ತಲುಪುವುದು ಎಲ್ಲಿಗೆ? ಸರಕಾರಿ ಸವಲತ್ತುಗಳಿಗಾಗಿ ಮೀಸಲಾತಿ ಅನುಭವಿಸುತ್ತ ಮನುಷ್ಯತ್ವ ಕಳೆದುಕೊಂಡರೆ ಹೇಗೆ?..

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News