ವೀಳ್ಯದೆಲೆಯ ಈ ಆರೋಗ್ಯ ಲಾಭಗಳ ಬಗ್ಗೆ ಕೇಳಿದ್ದೀರಾ?

Update: 2019-11-12 15:07 GMT

ವೀಳ್ಯದೆಲೆ ಎಲ್ಲರಿಗೂ ಗೊತ್ತು. ಅದನ್ನು ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿ ತಾಂಬೂಲವಾಗಿ ತಿನ್ನಲಾಗುತ್ತದೆ, ಜೊತೆಗೆ ಧಾರ್ಮಿಕ ವಿಧಿಗಳಲ್ಲಿಯೂ ಅದು ಬಳಕೆಯಾಗುತ್ತದೆ. ಆದರೆ ಔಷಧೀಯ ಗುಣಗಳನ್ನು ಹೊಂದಿರುವ ಅದು ಹಲವಾರು ಆರೋಗ್ಯ ಲಾಭಗಳನ್ನೂ ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಇಲ್ಲಿದೆ ಈ ಕುರಿತು ಮಾಹಿತಿ.....

►ಗಾಯಗಳನ್ನು ಗುಣಪಡಿಸುತ್ತದೆ

   ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ವೀಳ್ಯದೆಲೆಯು ಗಾಯಗಳು ಬೇಗನೆ ಗುಣವಾಗಲು ನೆರವಾಗುತ್ತದೆ. ಗಾಯವು ಒಳಗಿನಿಂದ ಮಾಯಲು ಪ್ರತಿ ದಿನ ವೀಳ್ಯದೆಲೆಯನ್ನು ತಿನ್ನಬಹುದಾಗಿದೆ. ಹೊರಭಾಗದ ಗಾಯಕ್ಕೆ ವೀಳ್ಯದೆಲೆಯ ರಸವನ್ನು ಲೇಪಿಸಿ ಬಳಿಕ ವೀಳ್ಯದೆಲೆಯಿಂದಲೇ ಮುಚ್ಚಿ ಬ್ಯಾಂಡೇಜ್ ಹಾಕಿದರೆ ಗಾಯವು ಬೇಗ ಮಾಯುತ್ತದೆ.

►ಸಂದುನೋವನ್ನು ಶಮನಗೊಳಿಸುತ್ತದೆ

ವೀಳ್ಯದೆಲೆಯು ತನ್ನಲ್ಲಿರುವ ಉರಿಯೂತ ನಿರೋಧಕ ಗುಣದಿಂದಾಗಿ ಕೀಲುಗಳ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಸಂದುನೋವಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತದೆ. ಇದಕ್ಕಾಗಿ ವೀಳ್ಯದೆಲೆಯ ರಸವನ್ನು ಪೀಡಿತ ಜಾಗದಲ್ಲಿ ಲೇಪಿಸಿದರೆ ಸಾಕು.

►ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ

   ಹೊಟ್ಟೆಯ ಆರೋಗ್ಯಕ್ಕೆ ಮತ್ತು ಜೀರ್ಣಕ್ರಿಯೆಗೆ ವೀಳ್ಯದೆಲೆಯು ನೆರವಾಗುತ್ತದೆ. ವಾಯ ನಿವಾರಕ ಮತ್ತು ವಾತಹರ ಗುಣಗಳನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಉದರಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಅಲ್ಲದೆ ಶರೀರವು ಅಗತ್ಯ ವಿಟಾಮಿನ್‌ಗಳನ್ನು ಮತ್ತು ಖನಿಜಗಳನ್ನು ಸೂಕ್ತವಾಗಿ ಮತ್ತು ತ್ವರಿತವಾಗಿ ಹೀರಿಕೊಳ್ಳಲು ನೆರವಾಗುತ್ತದೆ.

►ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ

ವೀಳ್ಯದೆಲೆಯು ಉರಿಯೂತ ನಿರೋಧಕ ಗುಣದೊಂದಿಗೆ ಸೂಕ್ಷ್ಮಜೀವಿ ನಿರೋಧಕ ಗುಣವನ್ನೂ ಹೊಂದಿದೆ. ಇದು ಬಾಯಿಯಲ್ಲಿ ಕೆಟ್ಟವಾಸನೆಯನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಿರ್ಮೂಲಿಸುವ ಮೂಲಕ ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ. ಜೊತೆಗೆ ಉತ್ತಮ ಬಾಯಿ ಆರೋಗ್ಯಕ್ಕಾಗಿ ಬಾಯಿಯ ಪಿಎಚ್ ಮಟ್ಟವನ್ನೂ ಕಾಯ್ದುಕೊಳ್ಳುತ್ತದೆ.

►ತೂಕವನ್ನು ತಗ್ಗಿಸಲು ನೆರವಾಗುತ್ತದೆ

 ವೀಳ್ಯದೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರು ಶರೀರದ ತೂಕವನ್ನು ಇಳಿಸಿಕೊಳ್ಳಲು ಪೂರಕವಾಗಿದೆ. ವೀಳ್ಯದೆಲೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಶರೀರದ ಚಯಾಪಚಯ ದರ ಹೆಚ್ಚುತ್ತದೆ ಮತ್ತು ಬಳಲಿಕೆಯನ್ನು ದೂರವಿರಿಸುತ್ತದೆ. ದಿನಕ್ಕೊಂದು ವೀಳ್ಯದೆಲೆಯನ್ನು ತಿನ್ನುತ್ತಿದ್ದರೆ ತೂಕದಲ್ಲಿ ಇಳಿಕೆಯನ್ನು ಕಾಣಬಹುದು. ಅದು ಶರೀರವು ಹೆಚ್ಚು ಜೀರ್ಣರಸಗಳನ್ನುಉತ್ಪಾದಿಸುವಂತೆ ಮಾಡುತ್ತದೆ ಮತ್ತು ಈ ರಸಗಳು ಜೀರ್ಣಕ್ರಿಯೆಯಲ್ಲಿ ನೆರವಾಗುವ ಜೊತೆಗೆ ಶರೀರದಲ್ಲಿಯ ನಂಜನ್ನು ನಿವಾರಿಸುತ್ತವೆ.

►ಗಂಟಲು ಕೆರೆತವನ್ನು ನಿವಾರಿಸುತ್ತದೆ

ವೀಳ್ಯದೆಲೆಯಲ್ಲಿನ ಬ್ಯಾಕ್ಟೀರಿಯಾ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳು ಗಂಟಲು ಕೆರೆತವನ್ನು ಶಮನಗೊಳಿಸುತ್ತವೆ. ಇದಕ್ಕಾಗಿ ವೀಳ್ಯದೆಲೆಯನ್ನು ಜಗಿಯಬಹುದು ಇಲ್ಲವೇ ವೀಳ್ಯದೆಲೆಯ ರಸವನ್ನು ಸೇವಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News