ನೆರಳು ನೀಡಿದ ವೃಕ್ಷದ ರೆಂಬೆ ಕತ್ತರಿಸುವ ದುಷ್ಟತನ ಬೇಡ

Update: 2019-11-14 18:40 GMT

ನವೆಂಬರ್ 1936ರಲ್ಲಿ ಡಾ.ಅಂಬೇಡ್ಕರ್ ಅವರು ವಿದೇಶಕ್ಕೆ ತೆರಳುವವರಿದ್ದರು. ಅದಕ್ಕೂ ಮುನ್ನ ನವೆಂಬರ್ 7, 1936ರಂದು ‘ಜನತಾ’ದಲ್ಲಿ ಪ್ರಕಟಿಸಿದಂತೆ ನವೆಂಬರ್ 8ರಂದು ಬೆಳಗ್ಗೆ 9ಕ್ಕೆ ಮುಂಬೈನ ಪರೇಲ್‌ನಲ್ಲಿರುವ ದಾಮೋದರ್ ಹಾಲ್‌ನಲ್ಲಿ ಮುಂಬೈ ಸಮತಾ ಸೈನಿಕ ದಳದ ಸಭೆಯನ್ನು ಡಾ.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಪ್ರಚಂಡ ಕರತಾಡನದೊಂದಿಗೆ ಡಾ.ಅಂಬೇಡ್ಕರ್ ಅವರು ಮಾಡಿದ ತಮ್ಮ ಭಾಷಣದಲ್ಲಿ:
ಕೆಲವು ತುರ್ತು ಕಾರ್ಯನಿಮಿತ್ತ ನಾನು ನಾಳೆ ವಿದೇಶಕ್ಕೆ ತೆರಳುವವನಿದ್ದೇನೆ. ನನ್ನ ಅನುಪಸ್ಥಿತಿಯಲ್ಲಿ ನೀವು ಅತ್ಯಂತ ಪ್ರಮುಖ ಜವಾಬ್ದಾರಿ ನಿರ್ವಹಿಸಬೇಕಿದೆ. ತಮಗೆಲ್ಲರಿಗೂ ತಿಳಿದಿರುವಂತೆ ಜವಾಬ್ದಾರಿಯುತ ಸರಕಾರದಲ್ಲಿ ಅಸ್ಪಶ್ಯರಿಗೆ ಕಾನೂನು ಮಂಡಳಿಯಲ್ಲಿ 15 ಸ್ಥಾನಗಳನ್ನು ಮೀಸಲು ಇರಿಸಲಾಗಿದ್ದು, ಕಾನೂನು ಮಂಡಳಿಗೆ ಮುಂಬರುವ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ. ನಮಗೆ ಲಭಿಸಿರುವ 15 ಸ್ಥಾನಗಳನ್ನು ಪ್ರಾಂತದ ವಿವಿಧ ಜಿಲ್ಲೆಗಳ ನಡುವೆ ವಿಭಾಗ ಮಾಡಲಾಗಿದೆ. ಈ ಕ್ಷೇತ್ರಗಳಿಗೆ ನಾನು ಸ್ವತಂತ್ರ ಮಜೂರ ಪಕ್ಷದಿಂದ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇನೆ. ಈ ಚುನಾವಣೆಯನ್ನು ಎದುರಿಸುವುದಕ್ಕೆ ನಾನು ಮತ್ತು ನನ್ನ ಸಂಗಡಿಗರು ಸೇರಿ ಸ್ವತಂತ್ರ ಮಜೂರ ಪಕ್ಷವನ್ನೇಕೆ ಸ್ಥಾಪಿಸಿದ್ದೇವೆ ಎನ್ನುವುದನ್ನು ಇಲ್ಲಿ ಸ್ಪಷ್ಟಪಡಿಸುತ್ತೇನೆ. ಕಾಂಗ್ರೆಸ್‌ನಂತಹ ಬಲಾಢ್ಯ ಮತ್ತು ಸುಸಂಘಟಿತ ಪಕ್ಷವಿರುವಾಗ ಹೊಸ ಸಂಘಟನೆಯ ಅಗತ್ಯ ಏಕೆ ಬೇಕು ಎನ್ನುವ ಪ್ರಶ್ನೆಗೆ ಉತ್ತರ ಅತ್ಯಂತ ಸರಳವಾಗಿದೆ. ಕಾಂಗ್ರೆಸ್‌ನ ಮುಖ್ಯ ಧ್ಯೇಯ ಅಂದರೆ ಸ್ವಾತಂತ್ರ, ನಾನಾಗಲಿ ಅಥವಾ ನನ್ನ ಸಂಗಡಿಗರಾಗಲಿ ಇದನ್ನು ಒಪ್ಪುವುದಿಲ್ಲ. ಸ್ವಾತಂತ್ರ ಸಾಧ್ಯವಾಗಿಸುವುದು ಅಷ್ಟು ಸರಳವಲ್ಲ. ಗಾಂಧೀಜಿ ಅವರ ಸತ್ಯಾಗ್ರಹದಂತಹ ಶಸ್ತ್ರಗಳು ಕೂಡ ಇಲ್ಲಿ ನಿರುಪಯುಕ್ತವಾಗಲಿವೆ. ಕಾನೂನು ಭಂಗದ ಮುಖಾಂತರ ಸ್ವಾತಂತ್ರ ಪಡೆಯುವುದು ಅಸಾಧ್ಯ ಮತ್ತು ಸಾಮರ್ಥ್ಯಕ್ಕೆ ಮೀರಿದ ಸಂಗತಿ ಎಂದು ಎಲ್ಲರಿಗೂ ಭಾಸವಾಗುತ್ತಿದೆ. ವಸ್ತುಸ್ಥಿತಿ ಹೀಗಿದ್ದರೂ ನಾವು ನಿಷ್ಫಲವಾಗುವ ಸ್ವಾಂತಂತ್ರದ ಹೇಳಿಕೆ ನೀಡುವುದರಲ್ಲಿ ಯಾವ ಅರ್ಥವಿದೆ? ಎಲ್ಲಿಯವರೆಗೆ ನಿಜವಾದ ಸ್ವಾತಂತ್ರ ಪಡೆಯುವ ಸಾಮರ್ಥ್ಯ ನಮ್ಮಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಕಾಯ್ದೆ ಮುಖಾಂತರ ನಮ್ಮ ಧ್ಯೇಯ ಮಾರ್ಗ ತಲುಪುವುದರಲ್ಲಿ ಹೆಚ್ಚಿನ ಹಿತವಿದೆ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ. ಅದರಲ್ಲಿಯೂ ಭಾರತ ಒಂದು ರಾಷ್ಟ್ರವಲ್ಲ. ಈ ದೇಶದಲ್ಲಿ ವೈವಿಧ್ಯಮಯವಾದ 4,000ಕ್ಕೂ ಹೆಚ್ಚು ಜಾತಿಗಳಿವೆ. ಈ ನೂರಾರು ಜಾತಿಗಳ ನಡುವೆ ವೈಷಮ್ಯ, ಜಾತಿಭೇದ, ಪ್ರಾಂತಭೇದಗಳಿಂದಾಗಿ ಜಗಳ, ವಿವಾದ ಮತ್ತು ಧರ್ಮಭೇದದಂತಹ ಗಂಭೀರ ಸಂಗತಿಗಳಿಂದಾಗಿ ಏಕತೆ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರ ನಡುವೆ ಒಂದೇ ಧ್ಯೇಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬ್ರಿಟಿಷ್ ಸರಕಾರದ ಆಡಳಿತದ ನೆರಳು ಇಲ್ಲದೇ ಹೋಗಿದ್ದಲ್ಲಿ ಜಾತ್ಯಾಭಿಮಾನಿ ಮತ್ತು ಧರ್ಮಾಭಿಮಾನಿಗಳು ತಮ್ಮ ತಮ್ಮ ನಡುವೆ ಕಾದಾಡಿ ತಮ್ಮ ಕೈಗೆ ಅಧಿಕಾರ ತೆಗೆದುಕೊಳ್ಳುವುದಕ್ಕೆ ಯತ್ನಿಸುತ್ತಿದ್ದರು.

ಇನ್ನೊಂದು ನಿಟ್ಟಿನಲ್ಲಿ ವಿಚಾರ ಮಾಡಿದರೆ ಕಾಂಗ್ರೆಸ್ ಮತ್ತು ನಮ್ಮ ಸಂಘಟನೆಯ ನಡುವೆ ಅನೇಕ ರೀತಿಯ ಭೇದಗಳಿವೆ. ಕಾಂಗ್ರೆಸ್‌ಗೆ ಇಂದಿನ ಸುಧಾರಣೆಗಳು ಅಪೂರ್ಣ ಎಂದು ಭಾಸವಾಗುತ್ತಿವೆ. ಹೀಗಾಗಿ ಕಾಯ್ದೆ ಮಂಡಳಿಗೆ ಹೋಗಿ ಈ ಸುಧಾರಣೆಗಳ ವಿರೋಧದ ಉದ್ದೇಶದಿಂದ ಮಂಡಳಿಯನ್ನೇ ವಿಸರ್ಜಿಸುವುದು ಅವರಿಗೆ ಇಷ್ಟವಾಗಿರುವ ಸಂಗತಿ. ಆದರೆ ನಮಗೆ ಈ ಸುಧಾರಣೆಗಳು ಅಪೂರ್ಣ ಎಂದು ಭಾಸವಾಗಿದ್ದರೂ ಕೂಡ ಕಾನೂನು ಮಂಡಳಿಯಲ್ಲಿ ಕುಳಿತು ಸುಧಾರಣೆಯ ಕೆಲಸ ಮಾಡಿದ ಅಧಿಕಾರದ ಬಲದಿಂದ ಇನ್ನಷ್ಟು ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಶ್ರಮಿಸುವುದು ಇಷ್ಟ. ಕಾಯ್ದೆ ಮಂಡಳಿ ವಿಸರ್ಜಿಸುವಂತಹ ಮಕ್ಕಳಾಟ ಮಾಡುವುದಕ್ಕೆ ಇಂದಿನ ದಿನಮಾನಗಳಲ್ಲಿ ಸರಿಯಲ್ಲ. ನಿಜವಾದ ಸ್ವಾತಂತ್ರ ಪಡೆಯುವುದಕ್ಕೆ ನಮ್ಮಲ್ಲಿ ಶಕ್ತಿ ಸಾಮರ್ಥ್ಯ ಇಲ್ಲದಂತಹ ಸಂದರ್ಭದಲ್ಲಿ, ಸ್ವಾತಂತ್ರವೇ ಬೇಕು ಎಂಬ ಹಠಮಾರಿ ಮನೋಭಾವ ಕೊನೆಗೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು.

ಅಂತಹದ್ದರಲ್ಲಿ ಕಾಂಗ್ರೆಸ್ ಕಲಸುಮೇಲೋಗರದಂತಿದೆ. ಅದರಲ್ಲಿ ನಿರುದ್ಯೋಗಿಗಳು, ಕಾರ್ಮಿಕರು, ಬಂಡವಾಳಶಾಹಿಗಳು, ಶ್ರೀಮಂತರು, ರೈತರು, ಕೂಲಿಗಳು, ಜಮೀನ್ದಾರರು, ಚಿಕ್ಕಪುಟ್ಟ ವ್ಯಾಪಾರಿಗಳು, ಮಧ್ಯಮ ವರ್ಗ ಹೀಗೆ ನಾನಾ ರೀತಿಯ ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಇರಿಸಿಕೊಂಡಿರುವ ದೊಡ್ಡ ಗುಂಪು ಇದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಕಾಂಗ್ರೆಸ್ ಅಮೃತ-ವಿಷದ ಮಿಶ್ರಣದಂತಿದೆ. ರಕ್ತ ಶೋಷಣೆ ಮಾಡುವವರು ಮತ್ತು ರಕ್ತ ಶೋಷಣೆಗೊಳಪಟ್ಟವರು ಕೂಡಿ ಹೇಗೆ ಹೋಗಲಿಕ್ಕಾಗುತ್ತದೆ? ಇಂದು ಕಾಂಗ್ರೆಸ್ ಶ್ರೀಮಂತರ ಮೊಸಳೆಯ ಬಿಗಿ ಹಿಡಿತದಲ್ಲಿ ಇದೆ. ಅದು ದೀನ ದಲಿತರ, ರೈತರು-ಕಾರ್ಮಿಕ ಜನತೆಯ ಹಿತ ಹೇಗೆ ಕಾಯಬಲ್ಲದು? ಅದು ಬಂಡವಾಳಶಾಹಿಗಳ ಬೆನ್ನೆಲುಬು ಆಗಿದೆ. ಅದರ ಕೈಯಿಂದ ಬಹುಜನ ಎನಿಸಿಕೊಂಡಿರುವ ಶ್ರಮಿಕ ವರ್ಗದ ಹಿತ ರಕ್ಷಣೆಯಾಗುವುದು ಕಠಿಣ. ಇದಕ್ಕೆ ವಿರುದ್ಧವಾಗಿ ನಮ್ಮ ಸ್ವತಂತ್ರ ಮಜೂರ ಪಕ್ಷ, ದುರ್ಬಲ ವರ್ಗದ ತತ್ವಗಳ ಆಧಾರದ ಮೇಲೆ ನಿಂತಿದೆ. ರೈತರ-ಕಾರ್ಮಿಕರ ಹಿತ ರಕ್ಷಣೆಯನ್ನು ನಾವು ಎಷ್ಟು ಪ್ರೀತಿಯಿಂದ ಮಾಡಬಲ್ಲೆವೋ ಅಷ್ಟು ಪ್ರೀತಿಯಿಂದ ಕಾಂಗ್ರೆಸ್‌ಗೆ ಮಾಡಲಿಕ್ಕೆ ಸಾಧ್ಯವಿಲ್ಲ. ತಳ ಸಮುದಾಯ, ದೀನರು ಮತ್ತು ಶ್ರಮಜೀವಿಗಳ ಹಿತ ರಕ್ಷಣೆಯೇ ನಮ್ಮ ಪಕ್ಷದ ಮುಖ್ಯ ಉದ್ದೇಶವಾಗಿದೆ. ತತ್ವದ ವಿಚಾರದಲ್ಲಿ ಯಾವುದೇ ರಾಜಿ ಹೊಂದಾಣಿಕೆ ಮಾಡಿಕೊಳ್ಳದೆ ಯಾವುದೇ ಪಕ್ಷದೊಂದಿಗೆ ಸಮಾಜದ ಹಿತಾಸಕ್ತಿಗಾಗಿ ಸಹಕರಿಸುತ್ತೇವೆ.

ಅದೇ ರೀತಿ ಅಸ್ಪಶ್ಯ ಜಾತಿಯನ್ನು ಬಿಟ್ಟು ಬೇರೆ ಜಾತಿಯ ಜನರೊಂದಿಗೆ ಹೊಂದಾಣಿಕೆಗೇಕೆ ಸಿದ್ಧವಾದೆ? ಎಂದೂ ಕೂಡ ನನ್ನನ್ನು ಪ್ರಶ್ನಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳುವುದು ಏನೆಂದರೆ, ನೂತನ ಸಂವಿಧಾನಕ್ಕೆ ಅನುಗುಣವಾಗಿ ರಚನೆಯಾಗುವ ಶಾಸಕಾಂಗ ಮಂಡಳಿಯಲ್ಲಿ ಒಟ್ಟು 175 ಸದಸ್ಯರ ಆಯ್ಕೆಯಾಗಬೇಕಾಗುತ್ತದೆ. ಈ 175 ಸದಸ್ಯರ ಪೈಕಿ 15 ಸದಸ್ಯರು ಅಸ್ಪಶ್ಯ ಜಾತಿಗೆ ಸೇರಿದವರು ಆಗಿರುತ್ತಾರೆ. ಈ ಹದಿನೈದು ಸದಸ್ಯರ ನೆರವಿಲ್ಲದೆ ಬೇರೆ ಯಾರಿಗೂ ಕೆಲಸ ಮಾಡಲು ಬರುವುದಿಲ್ಲ. ಹೀಗಾಗಿ ನಮ್ಮ ನೆರವಿಗೆ ಇನ್ನೂ ಹೆಚ್ಚಿನ ಜನರ ಅಗತ್ಯವಿದ್ದು, ಈ ಜನರೂ ಕೂಡ ನಮ್ಮ ಮಿತ್ರರಾಗಿರಬೇಕು. ಈ ನಿಟ್ಟಿನಲ್ಲಿ ನಾವು ಯಾವ ಯಾವ ಸ್ಪಶ್ಯ ವ್ಯಕ್ತಿಗಳು ನಮ್ಮನ್ನು ತಮ್ಮವರು ಎಂದು ಭಾವಿಸಿ ಸಹಾಯದ ಹಸ್ತ ಚಾಚಿದ್ದಾರೋ ಮತ್ತು ನಮಗಾಗಿ ಸ್ವಾರ್ಥ ತ್ಯಾಗ ಮಾಡಿದಂತಹವರನ್ನು ಆಯ್ಕೆ ಮಾಡಿ ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು.

ಈ ವಿಚಾರದಲ್ಲಿ ತರ್ಕ-ಕುತರ್ಕ ಬೆಳೆಸಿ ವಿನಾಕಾರಣ ಸಮಯ ಹಾಳು ಮಾಡಬೇಡಿ. ನಮ್ಮ ಪಕ್ಷದಿಂದ ಸಿದ್ಧಪಡಿಸಿದ ಕಾರ್ಯಕ್ರಮದ ರೂಪುರೇಷೆ ಪೂರ್ಣಗೊಳಿಸುವುದಕ್ಕೆ ನಮ್ಮಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ವಿವಾದ, ಹೊಡೆದಾಟಗಳನ್ನು ಬದಿಗಿರಿಸಬೇಕು. ಶಿಸ್ತು ಮತ್ತು ತತ್ವಕ್ಕೆ ತಕ್ಕಂತೆ ನಮ್ಮ ನಡತೆ ಇದ್ದರೆ ಇಲ್ಲಿಯವರೆಗೆ ನನ್ನಿಂದ ಸಮಾಜಕ್ಕೆ ಆಗಿರುವ ಸ್ವಲ್ಪ ಕೆಲಸ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗುತ್ತದೆ. ತತ್ವ ಮತ್ತು ಶಿಸ್ತಿಗಾಗಿ ಹೋರಾಡುವುದಕ್ಕೆ ನಾನು ಕಾನೂನು ಮಂಡಳಿಯ ಚುನಾವಣೆಯಲ್ಲಿ ಪಾಲ್ಗೊಂಡರೂ ತೊಂದರೆ ಇಲ್ಲ. ಆದರೆ ಮುಂಬೈ ಜಿ ವಾರ್ಡ್ ಮತ್ತು ಉಪನಗರ ವಿಭಾಗದಿಂದ ಸ್ಪರ್ಧಿಸಿರುವ ನಮ್ಮ ಅಭ್ಯರ್ಥಿ ಕಾಖೋಖೆ ಅವರನ್ನು ಆಯ್ಕೆ ಮಾಡಬೇಕು. ಅದರಲ್ಲಿಯೇ ನಿಮ್ಮ ಕಲ್ಯಾಣ ಇದೆ. ಅದರಲ್ಲಿಯೇ ನಿಮ್ಮ ಎಲ್ಲ ಮಾನ-ಮರ್ಯಾದೆ ಇದೆ. ಇನ್ನು ಮುಂದೆ ನಾವೆಲ್ಲರೂ ಒಂದೇ ಎಂಬ ಉಜ್ವಲ ಭಾವನೆಯನ್ನು ಹೃದಯದಲ್ಲಿ ಬೆಳೆಸಿಕೊಂಡು ನಿರಂತರ ಜಾಗೃತವಾಗಿ ಇರಿ.

ಇದೀಗ ಇನ್ನೊಂದು ಮಹತ್ವದ ಸಂಗತಿ ಪ್ರಸ್ತಾಪಿಸುತ್ತೇನೆ. ನಾನು ಆಯ್ಕೆ ಮಾಡಿರುವ ಎಲ್ಲ ಅಭ್ಯರ್ಥಿಗಳು ಮಹಾರ್ ಜಾತಿಯವರಿದ್ದು ಬೇರೆ ಜಾತಿಯ ಜನರನ್ನು ಏಕೆ ಆಯ್ಕೆ ಮಾಡಲಿಲ್ಲ? ಹೌದು! ನಿಜವಾಗಿ ಹೇಳಬೇಕೆಂದರೆ ನಾವು ಈ ವಿಷಯದಲ್ಲಿ ಅಷ್ಟು ಆಳವಾಗಿ ಚಿಂತಿಸಬೇಕಿಲ್ಲ. ಆದರೂ ಕೂಡ ರಾಷ್ಟ್ರೀಯ ಹರಿಜನ ಪಕ್ಷ ಸ್ಥಾಪಿಸಿ ಈ ಆರೋಪ ಮಾಡಿರುವ ಅವರಿಗಾದರೂ ಉತ್ತರಿಸಲೇಬೇಕಿದೆ. ಈ ರಾಷ್ಟ್ರೀಯ ಹರಿಜನ ಪಕ್ಷದವರನ್ನು ನಾನು ‘ಲೇಭಾಗು’ ಎಂದೇ ಸಂಬೋಧಿಸುತ್ತೇನೆ. ಇವರು ಚಮ್ಮಾರರು ಎನ್ನುವ ಕಾರಣಕ್ಕೆ ನಾನು ನನ್ನ ಪಕ್ಷದಿಂದ ಅವರನ್ನು ಹೊರಗೆ ಹಾಕಿಲ್ಲ. ಅವರಿಗೆ ಹೇಗೆ ಬೇಕೋ ಹಾಗೇ ಅರಚಿಕೊಳ್ಳಬಹುದು. ಅದರ ಬಗ್ಗೆ ನನಗೆ ಸ್ವಲ್ಪವೂ ಬೇಸರ ಇಲ್ಲ. ಅವರನ್ನು ಆಯ್ಕೆ ಮಾಡದಿರುವುದಕ್ಕೆ ಕಾರಣ ಎಂದರೆ ಅವರ ಲಂಪಟತನ. ಎಲ್ಲಿ ಏನು ಸಿಗುತ್ತದೋ ಅಲ್ಲಿಗೆ ಹೋಗುವುದು, ತತ್ವ ಶಿಸ್ತಿನ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಏನು ಸಿಗುತ್ತದೋ ಅದನ್ನು ಉಡಿಯಲ್ಲಿ ಕಟ್ಟಿಕೊಳ್ಳುವುದು ನಂತರ ಪರಾರಿಯಾಗುವುದೇ ಇವರ ಧರ್ಮ. ನಾವು ಮಹಾಡ್ ಸತ್ಯಾಗ್ರಹ ಮಾಡಿದೆವು. ಸ್ವಾವಲಂಬನೆಗೆ ವಿವಿಧ ಚಳವಳಿ ಮಾಡಿದೆವು. ನಾಸಿಕ್‌ನಲ್ಲಿ ಸತ್ಯಾಗ್ರಹ ಮಾಡಿದೆವು. ಹೆಚ್ಚಿಗೆ ಏಕೆ ಪುಣೆ ಒಪ್ಪಂದದ ಉದಾಹರಣೆ ತೆಗೆದುಕೊಳ್ಳಿ. ನಾವು ತತ್ವಕ್ಕಾಗಿ ಪ್ರಾಣ ಬಿಡುವುದಕ್ಕೆ ಸಿದ್ಧವಾಗಿ ಕಾಂಗ್ರೆಸ್ ಮತ್ತು ಅದರ ಪಂಚಪ್ರಾಣ ಮಹಾತ್ಮ್ಮಾ ಗಾಂಧೀಜಿ ಅವರೊಂದಿಗೆ ಜಗಳ ಮಾಡುತ್ತಿದ್ದರೆ ಇವರು ಈ ರಾಷ್ಟ್ರೀಯ ಹರಿಜನರು ಶತ್ರು ಪಾಳಯದಲ್ಲಿ ಸ್ವಸ್ಥದಿಂದ ಕುಳಿತಿದ್ದರು.

ಇಂತಹ ಲೇಭಾಗು ಜನರಿಗೆ ಅವರ ಪಾಲನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಅವರಿಗೆ ಏನಾದರೂ ನೀಡಬೇಕೆಂದು ನಾವೇಕೆ ಉದಾರತೆ ತೋರಬೇಕು? ವಟಗುಟ್ಟುವಿಕೆಯಿಂದ ತಮ್ಮ ಜೀವನ ಸಾಗಿಸಬೇಕು ಎನ್ನುವವರ ಆರೋಪಗಳಿಗೆ ಮತ್ತು ಕಂಗಾಲುತನ ವರ್ತನೆಗೆ ಚಿಂತೆ ಮಾಡಬೇಕು ಎಂದು ನನಗೆ ಅನ್ನಿಸುವುದಿಲ್ಲ. ಇಷ್ಟೇ ಅಲ್ಲ ಪುಣೆ ಒಪ್ಪಂದಕ್ಕೆ ಮುನ್ನ ಗಾಂಧೀಜಿ ಅವರು ತಮ್ಮ ಪ್ರಾಣ ಪಣಕ್ಕೆ ಹಚ್ಚಿದ ಮೇಲೆ ಇವರಿಗೆ ಗಾಂಧೀಜಿಯ ಪ್ರಾಣ ಉಳಿಸುವುದಕ್ಕೆ ಕಾನೂನು ಮಂಡಳಿಯಲ್ಲಿ ಸ್ಥಾನಗಳು ಬೇಡವಾಗಿದ್ದವು. ಈಗ ನನ್ನ ಪ್ರಯತ್ನದ ಫಲವಾಗಿ ಲಭಿಸಿರುವ ಸ್ಥಾನಗಳನ್ನು ಇವರು ಏಕೆ ಕೇಳಬೇಕು? ನಿಜವಾಗಿ ಹೇಳಬೇಕೆಂದರೆ ರಾಷ್ಟ್ರೀಯ ಹರಿಜನ ಮುಖಂಡ ಎಂದು ಹೇಳಿಕೊಳ್ಳುವ ಶ್ರೀ ನಾರಾಯಣರಾವ್ ಕಾಜರೋಳಕರ್ ಅವರು ಸಮಯ ಬಂದರೆ ವೀರ ಸಾವರ್ಕರ್ ಉಡಿಯಲ್ಲೂ ಹೋಗಿ ಕುಳಿತುಕೊಳ್ಳಬಹುದು. ಪಿ.ಬಾಳು ಅವರು ದೇಶಭಕ್ತ ವಲ್ಲಭಬಾಯಿ ಪಟೇಲ್ ಅವರ ಮಡಿಲಿನಲ್ಲಿ ಕೊಸರಾಡುವುದನ್ನು ನೋಡಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ಪಕ್ಷದ ಮುಂದಿನ ಗತಿ ಏನು ಆಗುತ್ತದೆ ಎಂದು ಈಗ ಹೇಳಿ ಉಪಯೋಗವಿಲ್ಲ. ಇಂತಹ ವಸ್ತುಸ್ಥಿತಿಯ ಮೇಲೆ ಯಾರಾದರೂ ಬೆಳಕು ಚೆಲ್ಲಿದ್ದಾರಾ? ಇಲ್ಲಿಯವರೆಗೆ ನಮ್ಮ ಪಕ್ಷಕ್ಕಾಗಿ ನೆರವಾಗಿರುವ ಮತ್ತು ನಮ್ಮ ಕೆಲಸದ ಯಶಸ್ಸಿಗಾಗಿ ಶ್ರಮವಹಿಸಿದ ಶಿವಶಂಕರ್ ಮಾಸ್ತರ್ ಅವರು ಚಮ್ಮಾರ ಜಾತಿಯಲ್ಲಿ ಓರ್ವ ಪ್ರಮುಖರಾಗಿದ್ದಾರೆ. ದುರ್ದೈವದ ಕಾರಣ ಮುನ್ಸಿಪಾಲಿಟಿ ಸಮಿತಿಯಿಂದ ಕಾನೂನು ಮಂಡಳಿಯ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅವಕಾಶ ಲಭಿಸದ ಕಾರಣ ಅವರನ್ನು ನಮ್ಮ ಪಕ್ಷದ ಅಭ್ಯರ್ಥಿ ಎಂದು ಘೋಷಿಸಲು ಆಗಲಿಲ್ಲ.

ನಿಜವಾಗಿಯೂ ಹೇಳಬೇಕು ಎಂದರೆ ಕಾನೂನು ಮಂಡಳಿಗೆ ಹೋಗಿ ಅಲ್ಲಿ ಕೆಲಸ ಮಾಡುವುದಕ್ಕಿಂತ ನನಗೆ ಹೊರಗೆ ಇದ್ದುಕೊಂಡು ಕೆಲಸ ಮಾಡುವುದು ಇಷ್ಟವಾಗುತ್ತದೆ. ಈಗ ನನ್ನ ಎದುರು ಧರ್ಮಾಂತರದ ಪ್ರಶ್ನೆ ಇದೆ. ಹೊಸ ಕಾಲೇಜಿನ ಬಗ್ಗೆ ವಿಚಾರ ಮಾಡಬೇಕಿದೆ. ಹೀಗೆ ಅನೇಕ ಸಾರ್ವಜನಿಕ ಕೆಲಸಗಳಿವೆ. ಆದರೂ ಕೂಡ ನಿಮ್ಮ ಎಲ್ಲರ ಇಚ್ಛೆಯ ಮೇರೆಗೆ ನಾನು ಈ ಹೊಸ ಪಕ್ಷದ ಮುಖಾಂತರ ಕಾನೂನು ಮಂಡಳಿಗೆ ಸೇರುವುದಕ್ಕೆ ತೀರ್ಮಾನಿಸಿದ್ದೇನೆ. ನನ್ನ ಈ ನಿರ್ಧಾರಕ್ಕೆ ಅಡ್ಡ ಬರುವ ಉದ್ದೇಶದಿಂದ ಕಾಂಗ್ರೆಸ್ ಮಗ್ಗಲು ಮುಳ್ಳಿನಂತೆ ಕೆಲಸ ಮಾಡಲಿದೆ ಎನ್ನುವುದು ನನಗೆ ಮನದಟ್ಟಾಗಿದೆ. ಹಣಬಲದ ಮೇಲೆ ನನ್ನ ವಿರುದ್ಧ ಕೆಲಸ ಮಾಡುವುದಕ್ಕೆ ಕಾಂಗ್ರೆಸ್ ಯತ್ನಿಸಬಹುದು ಮತ್ತು ಅಂತಹ ಕೆಲಸಗಳನ್ನು ಅವರು ಈಗಾಗಲೇ ಆರಂಭಿಸಿದ್ದಾರೆ. ಹೀಗಾಗಿ ತಾವು ಎಲ್ಲರೂ ಶಿಸ್ತಿನಿಂದ ಸಂಘಟನೆಯಾಗಬೇಕು ಮತ್ತು ಈ ಸಂದರ್ಭದಲ್ಲಿ ನಿಮ್ಮ ಪ್ರತಿಯೊಬ್ಬರ ಮತಗಳು ನನಗೆ ಲಭಿಸಬೇಕು. ಆಯ್ಕೆಯಾಗುವುದಕ್ಕಾಗಿ ನನ್ನ ತಾತ್ವಿಕ ನಿಲುವುಗಳಿಂದ ಹಿಂದೆ ಸರಿಯಲಾರೆ ಎನ್ನುವ ವಿಚಾರ ನಿಮ್ಮ ಗಮನದಲ್ಲಿ ಇರಲಿ. ತಾವಾಗಿಯೇ ಯಾರೂ ನಮಗೆ ನೆರವಾಗುವುದಿಲ್ಲ.

ಇಂತಹ ಸಂದರ್ಭದಲ್ಲಿ ಪಿತೂರಿಗೆ ಬಲಿ ಬೀಳಲೇಬಾರದು. ಯಾರಿಗೆ ಅಭ್ಯರ್ಥಿ ಆಗುವುದಕ್ಕೆ ಅವಕಾಶ ಲಭಿಸಿಲ್ಲವೋ ಅಂತಹ ಅತೃಪ್ತ ವ್ಯಕ್ತಿಗಳು ಪಿತೂರಿ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕನಿಷ್ಠ ಸ್ವಾಭಿಮಾನಕ್ಕಾಗಿಯಾದರೂ ಅವರ ಪಿತೂರಿಗೆ ಬಲಿಯಾಗಬೇಡಿ. ನೀವೇ ವಿಚಾರ ಮಾಡಿ ಯಾವ ಗಿಡದ ನೆರಳಿನಿಂದ ನಮಗೆ ಸಂಪೂರ್ಣ ತೃಪ್ತಿ ಸಿಗುತ್ತದೋ, ಆ ನೆರಳು ಹಾಳು ಮಾಡಬೇಕೋ, ನೆರಳು ನೀಡುವ ಆ ರೆಂಬೆ ಕತ್ತರಿಸಿ ಹಾಕುವಂತಹ ದುಷ್ಟತನ ನೀವು ಮಾಡುವುದಿಲ್ಲವೆಂದು ನನಗೆ ಖಾತ್ರಿ ಇದೆ. ಯಾರು ಕುಹಕ ವಿಚಾರಗಳಿಂದ ದುಷ್ಟತನದ ಕೆಲಸ ಮಾಡುವುದಕ್ಕೆ ಪ್ರವೃತ್ತರಾಗಿದ್ದಾರೋ ಅವರಿಗೆ ಯಾವ ಪ್ರಮಾಣದ ಯಶಸ್ಸು ಲಭಿಸುತ್ತದೆ ಎನ್ನುವುದರ ಬಗ್ಗೆ ನನಗೆ ಸಂಶಯ ಇದೆ. ಆದ್ದರಿಂದ ಈ ಎಲ್ಲ ಕಾರಸ್ಥಾನಗಳಿಂದ ದೂರವಾಗಿ ಉಳಿದು ನಾನು, ನನ್ನ ಸಂಗಡಿಗರ ನೆರವಿನಿಂದ ರೂಪಿಸಿರುವ ಕಾರ್ಯಕ್ರಮದ ರೂಪುರೇಷೆಯನ್ನು ತಮ್ಮ ಎದುರು ಇರಿಸುತ್ತಿದ್ದೇನೆ. ಈ ಕೆಲಸವನ್ನು ಸಮತಾ ಸೈನಿಕ ದಳದ ಸೈನಿಕರು ಅತ್ಯಂತ ಶಿಸ್ತಿನಿಂದ ಮಾಡಬೇಕಿದೆ.

ನಮಗೆ ಪ್ರಬಲ ಶತ್ರುವಿನೊಂದಿಗೆ ಹೋರಾಟಕ್ಕೆ ಇಳಿಯಬೇಕಿದೆ. ಈ ಕೆಲಸಕ್ಕಾಗಿ ಕನಿಷ್ಠ ಏನಿಲ್ಲವೆಂದರೂ ಎರಡು ಸಾವಿರ ಸಮತಾ ಸೈನಿಕರನ್ನು ಈ ನಗರದಲ್ಲಿ ತಯಾರು ಮಾಡಬೇಕಿದೆ. ನಮ್ಮ ಹತ್ತಿರ ಸಾಕಷ್ಟು ಮನುಷ್ಯ ಬಲ ಇದ್ದರೆ, ಶಿಸ್ತು ಮತ್ತು ಸಂಘಟನೆಯಿಂದ ಎಂತಹದ್ದೆ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಮಾರ್ಗ ಕಂಡುಕೊಳ್ಳುವುದಕ್ಕೆ ಎಂದಿಗೂ ಸಮಸ್ಯೆಯಾಗುವುದಿಲ್ಲ. ನನ್ನ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸೇರಿದಂತೆ ಇತರ ಹಿತಶತ್ರುಗಳು ಸಾಕಷ್ಟು ಕಾರಸ್ಥಾನ ಮಾಡಿ ಅವರ ಹಾದಿಯಲ್ಲಿನ ಕಂಟಕ ದೂರ ಮಾಡುವುದಕ್ಕೆ ಯತ್ನಿಸುತ್ತಿದ್ದಾರೆ. ವಾರ್ಡಿನಲ್ಲಿರುವ ಪ್ರತಿಯೊಬ್ಬ ಅಸ್ಪಶ್ಯ ಮತದಾರ ತಪ್ಪದೇ ನನಗೆ ಮತ ಹಾಕುತ್ತಾನೆ ಎನ್ನುವುದು ನನಗೆ ಖಾತ್ರಿ ಇದೆ ಮತ್ತು ಈ ಕೆಲಸವನ್ನು ಸಮತಾ ಸೈನಿಕ ದಳದ ಸೈನಿಕರು ತಾವೇ ಖುದ್ದಾಗಿ ಕೈಗೆತ್ತಿಕೊಳ್ಳಬೇಕು. ನನ್ನ ಅನುಪಸ್ಥಿತಿಯಲ್ಲೂ ಸಮತಾ ಸೈನಿಕ ದಳದ ಪ್ರತಿಯೊಬ್ಬ ಯೋಧ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾನೆಂದು ನನಗೆ ಖಾತ್ರಿ ಇದೆ. ಈ ಕೆಲಸಕ್ಕಾಗಿ ನಾನೊಂದು ಕಮಿಟಿಯನ್ನು ನೇಮಕ ಮಾಡಿದ್ದು, ಅದರ ನೆರವಿನಿಂದ ನೀವು ನಿಮ್ಮ ಕರ್ತವ್ಯ ನಿರ್ವಹಿಸಬಲ್ಲಿರಿ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News