ಡಯಾಬಿಟಿಸ್ ನಿಮಗೆ ಗೊತ್ತಿರಬಹುದು, ಆದರೆ ಡಯಾಬಿಟಿಸ್ ಇನ್ಸಿಪಿಡಸ್ ಎಂದರೇನು ಎನ್ನುವುದು ಗೊತ್ತೇ?

Update: 2019-11-16 12:44 GMT

ಡಯಾಬಿಟಿಸ್ ಅಥವಾ ಮಧುಮೇಹ ಮತ್ತು ಡಯಾಬಿಟಿಸ್ ಇನ್ಸಿಪಿಡಸ್ (ಡಿಐ) ಎರಡೂ ಭಿನ್ನವಾಗಿವೆ. ಡಿಐ ಅಪರೂಪದ ಅನಾರೋಗ್ಯ ಸ್ಥಿತಿಯಾಗಿದ್ದು,ಶರೀರದಲ್ಲಿ ದ್ರವಗಳ ಅಸಮತೋಲನ ಇದರ ವೈಶಿಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿ ಮೂತ್ರಪಿಂಡಗಳು ವಿಪರೀತ ಪ್ರಮಾಣದಲ್ಲಿ ಮೂತ್ರವನ್ನು ಉತ್ಪಾದಿಸುತ್ತವೆ ಮತ್ತು ಹೆಚ್ಚೆಚ್ಚು ದ್ರವಗಳನ್ನು ಸೇವಿಸುವುದು ಅಗತ್ಯವಾಗುತ್ತದೆ. ಈ ಸ್ಥಿತಿಯಿಂದ ಬಳಲುತ್ತಿರುವ ವ್ಯಕ್ತಿಯು ಸಾಮಾನ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ಸಲ ಮೂತ್ರವನ್ನು ವಿಸರ್ಜಿಸುತ್ತಾನೆ. ಹೀಗಾಗಿ ಡಿಐ ಅನ್ನು ಸರಳವಾಗಿ ಅತಿಮೂತ್ರ ರೋಗ ಎನ್ನಬಹುದು.

ಡಿಐ ಹೆಚ್ಚು ಸಾಮಾನ್ಯವಲ್ಲದ ಮೂತ್ರಪಿಂಡ ರೋಗವಾಗಿದ್ದು,ಪ್ರತಿ 25,000 ಜನರಲ್ಲಿ ಒಬ್ಬರನ್ನು ಕಾಡುತ್ತದೆ. ಆಗಾಗ್ಗೆ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ ಮಧುಮೇಹ ಮತ್ತು ಡಿಐ ಈ ಎರಡೂ ಪ್ರಕರಣಗಳಲ್ಲಿ ಸಾಮಾನ್ಯ ಲಕ್ಷಣಗಳಾಗಿರುವುದರಿಂದ ಇವೆರಡೂ ಹೇಗೆ ಭಿನ್ನ ಎಂಬ ಪ್ರಶ್ನೆ ಕಾಡುವದು ಸಹಜ.

ವ್ಯಕ್ತಿಯ ರಕ್ತದಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಾಗಿದ್ದು,ಶಕ್ತಿಗಾಗಿ ಅದನ್ನು ಬಳಸಿಕೊಳ್ಳಲು ಶರೀರಕ್ಕೆ ಸಾಧ್ಯವಾಗದಿದ್ದಾಗ ಅಂತಹ ಸ್ಥಿತಿಯನ್ನು ನಾವು ಮಧುಮೇಹ ಎಂದು ಕರೆಯುತ್ತೇವೆ. ಡಿಐ ರೋಗಿಗಳಲ್ಲಿ ರಕ್ತದಲ್ಲಿ ಗ್ಲುಕೋಸ್ ಮಟ್ಟ ಸಾಮಾನ್ಯವಾಗಿರುತ್ತದೆ, ಆದರೆ ಮೂತ್ರಪಿಂಡಗಳ ಕಾರ್ಯ ನಿರ್ವಹಣೆ ತಾಳ ತಪ್ಪಿರುತ್ತದೆ ಮತ್ತು ಇದು ಶರೀರದಲ್ಲಿ ದ್ರವಗಳ ಅಸಮತೋಲನವನ್ನುಂಟು ಮಾಡುತ್ತದೆ. ಹೀಗಾಗಿ ವ್ಯಕ್ತಿಯು ಯಾವುದೇ ರೂಪದ ಮಧುಮೇಹ ಹೊಂದಿರದಿದ್ದರೂ ಡಿಐನಿಂದ ಬಳಲುತ್ತಿರುವ ಸಾಧ್ಯತೆಯಿರುತ್ತದೆ.

► ಡಿಐಗೆ ಕಾರಣಗಳು

ನಮ್ಮ ಶರೀರದ ಸುಮಾರು ಶೇ.55ರಿಂದ ಶೇ.60 ರಷ್ಟು ಭಾಗವು ನೀರಿನಿಂದ ರೂಪುಗೊಂಡಿರುತ್ತದೆ. ಶರೀರದಲ್ಲಿರುವ ಹಲವಾರು ವ್ಯವಸ್ಥೆಗಳು ಅದರಲ್ಲಿರುವ ನೀರನ್ನು ಸಮತೋಲನಗೊಳಿಸಲು ನೆರವಾಗುತ್ತವೆ. ಹೈಪೊಥಲಾಮಸ್ ಅಥವಾ ಮಸ್ತಿಷ್ಕ ನಿಮ್ನಾಂಗವು ಸ್ರವಿಸುವ ಆ್ಯಂಟಿ ಡೈಯುರೇಟಿಕ್ ಹಾರ್ಮೋನ್ ಆಗಿರುವ ವಾಸೊಪ್ರೆಸೀನ್ (ಎವಿಪಿ ಅಥವಾ ಎಡಿಎಚ್) ಶರೀರದಲ್ಲಿಯ ನೀರನ್ನು ನಿಯಂತ್ರಿಸಿ ಅದರ ನಷ್ಟವನ್ನು ತಡೆಯುತ್ತದೆ. ಈ ಹಾರ್ಮೋನ್ ಬಾಯಾರಿಕೆಯನ್ನು ಮತ್ತು ಎಷ್ಟು ನೀರನ್ನು ಸೇವಿಸಬೇಕು ಎನ್ನುವುದನ್ನೂ ನಿರ್ಧರಿಸುತ್ತದೆ. ವ್ಯಕ್ತಿಗೆ ಬಾಯಾರಿಕೆಯುಂಟಾದಾಗ ಅಥವಾ ಶರೀರಕ್ಕೆ ಹೆಚ್ಚು ನೀರು ಅಗತ್ಯವಾದಾಗ ಮಿದುಳು ಹೆಚ್ಚಿನ ಎವಿಪಿ ಉತ್ಪಾದನೆಗೆ ಸಂಕೇತಗಳನ್ನು ರವಾನಿಸುತ್ತದೆ. ಎವಿಪಿಯು ಹೆಚ್ಚು ನೀರನ್ನು ಸೇವಿಸುವಂತೆ ಮತ್ತು ಮೂತ್ರದ ಉತ್ಪಾದನೆಯನ್ನು ಕನಿಷ್ಠಗೊಳಿಸುವಂತೆ ಪ್ರೇರೇಪಿಸುತ್ತದೆ. ಇನ್ನೊಂದೆಡೆ ಶರೀರದಲ್ಲಿ ಸಾಕಷ್ಟು ನೀರಿದ್ದಾಗ ಎಇಪಿ ಉತ್ಪಾದನೆಯನ್ನು ಕಡಿಮೆಗೊಳಿಸುವಂತೆ ಸಂಕೇತಗಳನ್ನು ರವಾನಿಸುತ್ತದೆ ಮತ್ತು ಇದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ ಮತ್ತು ಹೆಚ್ಚುವರಿ ನೀರು ಮೂತ್ರದ ರೂಪದಲ್ಲಿ ಶರೀರದಿಂದ ವಿಸರ್ಜಿಸಲ್ಪಡುತ್ತದೆ. ಈ ರೀತಿಯಲ್ಲಿ ಶರೀರದಲ್ಲಿಯ ನೀರಿನ ಮಟ್ಟವು ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಡಿಐನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಕೆಲವು ಸ್ಥಿತಿಗಳಿಂದಾಗಿ ನೀರು ನಿಯಂತ್ರಣ ವ್ಯವಸ್ಥೆಯು ವ್ಯತ್ಯಯಗೊಂಡಿರುತ್ತದೆ. ಇದು ಅತಿಯಾದ ಮೂತ್ರ ಉತ್ಪಾದನೆ ಮತ್ತು ಬಾಯಾರಿಕೆಗೆ ಕಾರಣವಾಗುತ್ತದೆ.

► ಡಿಐನಲ್ಲಿ ವಿಧಗಳು

ಡಿಐನಲ್ಲಿ ಎರಡು ಪ್ರಮುಖ ವಿಧಗಳಿವೆ

1: ಕ್ರೇನಿಯಲ್ ಅಥವಾ ಹೈಪೊಥಲಾಮಿಕ್ ಡಿಐ: ಟ್ಯೂಮರ್,ಉರಿಯೂತ,ಪಿಟ್ಯೂಟರಿ ಅಥವಾ ಕಫ ಸ್ರಾವಕ,ಬೆಳವಣಿಗೆಗೆ ಮುಖ್ಯ ಪ್ರಭಾವ ಬೀರುವ ನಿರ್ನಾಳ ಗ್ರಂಥಿಯ ಬಳಿ ಶಸ್ತ್ರಚಿಕಿತ್ಸೆ ಅಥವಾ ಅಪಘಾತದಿಂದ ಗಾಯದಂತಹ ಸ್ಥಿತಿಗಳಲ್ಲಿ ಕ್ರೇನಿಯಲ್ ಡಿಐ ಉಂಟಾಗುತ್ತದೆ. ಇಂತಹ ಸ್ಥಿತಿಗಳಲ್ಲಿ ಎವಿಪಿ ಉತ್ಪಾದನೆ ಕಡಿಮೆಯಾಗುತ್ತದೆ ಮತ್ತು ಇದರಿಂದಾಗಿ ನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಬಳಸಿಕೊಳ್ಳಲು ಮೂತ್ರಪಿಂಡಗಳಿಗೆ ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಹೆಚ್ಚುವರಿ ನೀರು ಮೂತ್ರ ಮತ್ತು ನಿರ್ಜಲೀಕರಣದ ಮೂಲಕ ನಷ್ಟಗೊಳ್ಳುತ್ತದೆ.

2: ನೆಫ್ರೊಜನಿಕ್ ಡಿಐ: ಇಲ್ಲಿ ಎವಿಪಿ ಸಾಮಾನ್ಯ ಮಟ್ಟದಲ್ಲಿ ಉತ್ಪಾದನೆಯಾಗುತ್ತದೆ,ಆದರೆ ಅದು ರವಾನಿಸುವ ಸಂಕೇತಗಳಿಗೆ ಪ್ರತಿಕ್ರಿಯಿಸಲು ಮೂತ್ರಪಿಂಡಗಳು ಅಸಮರ್ಥವಾಗಿರುತ್ತವೆ. ಪರಿಣಾಮವಾಗಿ ನೀರು ಹೀರುವಿಕೆ ಕಡಿಮೆಯಾಗುತ್ತದೆ ಮತ್ತು ಮೂತ್ರ ಉತ್ಪಾದನೆ ಹೆಚ್ಚುತ್ತದೆ. ವಂಶವಾಹಿ ಪರಿವರ್ತನೆ,ದೀರ್ಘಕಾಲಿಕ ಮೂತ್ರಪಿಂಡ ರೋಗಗಳು,ಅತಿಯಾದ ಕ್ಯಾಲ್ಸಿಯಂ ಮಟ್ಟ ಅಥವಾ ಔಷಧಿಗಳ ಅಡ್ಡ ಪರಿಣಾಮ ಮೂತ್ರಪಿಂಡಗಳು ಎವಿಪಿ ಹಾರ್ಮೋನ್‌ನ ಸಂಕೇತಗಳಿಗೆ ಪ್ರತಿಕ್ರಿಯಿಸದಿರಲು ಮೂಲಕಾರಣವಾಗಿರುತ್ತದೆ.

► ಡಿಐ ಲಕ್ಷಣಗಳು

ಅತಿಯಾದ ಬಾಯಾರಿಕೆ,ಅತಿಯಾದ ಮೂತ್ರ ಉತ್ಪಾದನೆ ಅಂದರೆ ಸುಮಾರು ಪ್ರತಿ-15-20 ನಿಮಿಷಕ್ಕೆ ಮೂತ್ರ ವಿಸರ್ಜನೆ,ದಣಿವು,ಏಕಾಗ್ರತೆಗೆ ಕಷ್ಟ,ಕೆರಳುವಿಕೆ,ನಿರ್ಜಲೀಕರಣ,ಶುಷ್ಕ ಚರ್ಮ,ಸ್ನಾಯುಗಳಲ್ಲಿ ನಿಶ್ಶಕ್ತಿ,ಅನಿಯಂತ್ರಿತ ಮೂತ್ರ ವಿಸರ್ಜನೆ ಇತ್ಯಾದಿಗಳು ಡಿಐ ಲಕ್ಷಣಗಳಲ್ಲಿ ಸೇರಿವೆ.

ಡಿಐ ಮಕ್ಕಳಲ್ಲಿ ಉಂಟಾದರೆ ಬೆಳವಣಿಗೆ ಕುಂಠಿತ,ಅತಿಯಾದ ಅಳು,ಹೈಪರ್‌ಥರ್ಮಿಯಾ ಅಥವಾ ಶರೀರದ ಅತಿಯಾದ ತಾಪಮಾನ,ಹಸಿವು ಕ್ಷೀಣ,ತೂಕ ಇಳಿಕೆ ಮತ್ತು ಮಲಬದ್ಧತೆ ಇವು ಲಕ್ಷಣಗಳಾಗಿರುತ್ತವೆ.

► ಡಿಐ ಉಂಟು ಮಾಡುವ ತೊಂದರೆಗಳು

ಡಿಐ ಸ್ಥಿತಿಯಲ್ಲಿ ಶರೀರದಲ್ಲಿ ದ್ರವಗಳು ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ನಷ್ಟಗೊಳ್ಳುತ್ತವೆ. ಈ ನಷ್ಟದ ಪ್ರಮಾಣ ಹೆಚ್ಚಾದರೆ ನಿರ್ಜಲೀಕರಣವುಂಟಾಗುತ್ತದೆ ಮತ್ತು ತಲೆ ಸುತ್ತುವಿಕೆ,ವಾಕರಿಕೆ,ಬಳಲಿಕೆ,ಚರ್ಮ ಒಣಗುವುದು,ಎಲೆಕ್ಟ್ರೋಲೈಟ್ ಅಥವಾ ವಿದುದ್ವಿಚ್ಚೇಧ ಅಸಮತೋಲನ,ಬಾಯಾರಿಕೆ,ಮಾನಸಿಕ ಕ್ರಿಯೆಗೆ ಅಡ್ಡಿಯಂತಹ ಲಕ್ಷಣಗಳು ಗೋಚರವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News