ಅಸಹಾಯಕ ಪ್ರಜಾಪ್ರಭುತ್ವದ ಪ್ರಾಣ ಸಂಕಟ

Update: 2019-11-17 18:18 GMT

ಭಾರತದ ಪ್ರಜಾಪ್ರಭುತ್ವ ಹಿಂದೆಂದೂ ಕಂಡರಿಯದ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ದೇಶದ ಜನರೇ ಎಚ್ಚೆತ್ತು ಈ ಜನತಂತ್ರವನ್ನು ಕಾಪಾಡಬೇಕಾಗಿದೆ. ಶಾಸಕಾಂಗ, ಕಾರ್ಯಾಂಗ ಸೇರಿರುವ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ನ್ಯಾಯಾಂಗವನ್ನು ಬಳಸಿಕೊಂಡು ಜನತಾಂತ್ರಿಕ ವ್ಯವಸ್ಥೆಗೆ ಗಂಡಾಂತರ ತಂದಿವೆ ಅಂದರೆ ಅತಿಶಯೋಕ್ತಿಯಲ್ಲ. ಜನರೇ ಈಗ ಜನತಂತ್ರದ ರಕ್ಷಣೆಗೆ ಮುಂದಾಗಬೇಕಾಗಿದೆ. 


ಕಳೆದ ಏಳು ದಶಕಗಳ ಕಾಲಾವಧಿಯಲ್ಲಿ ಹಲವಾರು ಅಗ್ನಿ ಪರೀಕ್ಷೆಗಳಲ್ಲಿ ಪಾರಾಗಿ ಬಂದ ಭಾರತದ ಪ್ರಜಾಪ್ರಭುತ್ವ ಈಗ ತೀವ್ರ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಪ್ರಜೆಗಳ ಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದವರ ಕೈಗೆ ಪ್ರಭುತ್ವದ ಅಧಿಕಾರ ಸೂತ್ರ ಸಿಕ್ಕಿದೆ. ಇದರ ಪರಿಣಾಮವಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳು ಅಪಾಯದಲ್ಲಿವೆ. ಈವರೆಗೆ ಉಳಿದ ಕಡೆ ಅನ್ಯಾಯವಾದರೂ ಕೊನೆಗೆ ಸುಪ್ರೀಂ ಕೋರ್ಟ್ ಇದೆ ಎಂಬ ಧೈರ್ಯವಿತ್ತು. ಈಗ ಅದೂ ಅಲುಗಾಡುತ್ತಿದೆ.

ಸುಪ್ರೀಂ ಕೋರ್ಟ್ ತೀರ್ಪುಗಳ ಬಗ್ಗೆ ಎಲ್ಲರಿಗೂ ಗೌರವವಿದೆ, ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ ಇತ್ತೀಚೆಗೆ ನೀಡಿರುವ ತೀರ್ಪುಗಳ ಬಗ್ಗೆ ಇದೇಕೆ ಹೀಗೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ತೀರ್ಪು, ಕರ್ನಾಟಕ ವಿಧಾನಸಭೆಯ 17 ಶಾಸಕರ ಅನರ್ಹತೆಗೆ ಸಂಬಂಧಿಸಿದ ತೀರ್ಪು, ಶಬರಿಮಲೈ ಅಯ್ಯಪ್ಪ ದೇಗುಲದ ಒಳಗೆ ಮಹಿಳೆಯರ ಪ್ರವೇಶದ ಕುರಿತು ಬಂದ ತೀರ್ಪು ಇವೆಲ್ಲ ಅನೇಕ ಸಂದೇಹಗಳಿಗೆ ಕಾರಣವಾಗಿವೆ. ಜನತಂತ್ರದ ಆರೋಗ್ಯದ ದೃಷ್ಟಿಯಿಂದ ಈ ಸಂದೇಹಗಳು ನಿವಾರಣೆಯಾಗಿ ನ್ಯಾಯಾಂಗದ ಮೇಲೆ ಜನರ ನಂಬಿಕೆ ಅಬಾಧಿತವಾಗಿ ಉಳಿಯಬೇಕಾಗಿದೆ.

ಅದೇ ರೀತಿ ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಬಂದ ತೀರ್ಪು ಕೂಡ ಸಂದೇಹಕ್ಕೆ ಕಾರಣವಾಗಿದೆ. ಈ ದೇಶದಲ್ಲಿ ಪ್ರಭಾವಿ ರಾಜಕಾರಣಿಗಳಿಗೆ ಸಂಬಂಧಿಸಿದಂತೆ ಹಲವಾರು ತೀರ್ಪುಗಳು ಬಂದಿವೆ. ಇಂದಿರಾ ಗಾಂಧಿಯಂಥವರೂ ನ್ಯಾಯಾಲಯದ ತೀರ್ಪಿಗೆ ಮಣಿದು ಜೈಲಿಗೆ ಹೋಗಿ ಬಂದಿದ್ದಾರೆ. ಕೇವಲ ಅರವತ್ತು ಕೋಟಿ ರೂಪಾಯಿ ಬೊಫೋರ್ಸ್ ಹಗರಣದಲ್ಲಿ ರಾಜೀವ್ ಗಾಂಧಿ ಅಂಥವರು ವಿನಾಕಾರಣ ಸಿಕ್ಕು ಒದ್ದಾಡಿದ್ದಾರೆ. ಹಿಂದು ಪತ್ರಿಕೆಯ ಎನ್.ರಾಮ್ ಆಗ ಮಾಡಿದ ವರದಿ ಕೇಂದ್ರದ ಕಾಂಗ್ರೆಸ್ ಸರಕಾರದ ಬುಡವನ್ನೇ ಅಲ್ಲಾಡಿಸಿತ್ತು. ಆದರೆ, ಈಗ ಅದರ ನೂರಾರು ಪಟ್ಟು ದೊಡ್ಡದಾದ ರಫೇಲ್ ಹಗರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಕೇಂದ್ರ ಸರಕಾರದ ಸೂತ್ರ ಹಿಡಿದವರು ಸಂಭ್ರಮಿಸುವಂತಾಗಿದೆ. ಮೋದಿ ಸರಕಾರದ ವಿರುದ್ಧ ರಫೇಲ್ ಹಗರಣದ ಬಗ್ಗೆ ‘ಚೌಕಿದಾರ್ ಚೋರ್ ಹೈ’ ಎಂದು ರಾಹುಲ್ ಗಾಂಧಿ ಮಾಡಿದ ಟೀಕೆಗಾಗಿ ಸುಪ್ರೀಂ ಕೋರ್ಟ್ ಅವರನ್ನೇ ತರಾಟೆಗೆ ತೆಗೆದುಕೊಂಡಿದೆ. ಇದನ್ನೇ ಹಿಡಿದುಕೊಂಡು ಬಿಜೆಪಿ ಕಾರ್ಯಕರ್ತರು ದೇಶವ್ಯಾಪಿ ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಒತ್ತಾಯಿಸಿ ಬೀದಿಗಿಳಿದು ಚಳವಳಿ ನಡೆಸಿ ಅವರ ಪ್ರತಿಕೃತಿ ದಹನ ಮಾಡುತ್ತಿದ್ದಾರೆ.

ಇನ್ನು ಅಯೋಧ್ಯೆಯ ಬಾಬರಿ ಮಸೀದಿ ತೀರ್ಪಿನಲ್ಲಿ ಮಸೀದಿಯ ನಾಶ ತಪ್ಪು ಎಂದು ಹೇಳಿ ಧ್ವಂಸಕ್ಕೆ ಕಾರಣರಾದವರ ಸಂಘಟನೆಗಳಿಗೆ ವಿವಾದಿತ ಭೂಮಿಯನ್ನು ನೀಡಬೇಕೆಂದು ತೀರ್ಪು ನೀಡಿದೆ. ಕರ್ನಾಟಕ ವಿಧಾನ ಸಭೆಯ 17 ಶಾಸಕರನ್ನು ವಿಧಾನಸಭಾಧ್ಯಕ್ಷರು ಅನರ್ಹಗೊಳಿಸಿದ್ದನ್ನು ಎತ್ತಿ ಹಿಡಿಯುತ್ತಲೇ ಇದೇ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.

1992ರಲ್ಲಿ ಬಾಬರಿ ಮಸೀದಿಯನ್ನು ಕರಸೇವಕರು ನೆಲಸಮಗೊಳಿಸಿದ್ದನ್ನು ಸುಪ್ರೀಂ ಕೋರ್ಟ್ ಒಪ್ಪಿದೆ. ಸಂಘಪರಿವಾರದ ಸಂಘಟನೆಗಳು ಮಸೀದಿ ಉರುಳಿಸುವ ಮೂಲಕ ಕಾನೂನಿಗೆ ಭಂಗ ತಂದವು ಎಂದೂ ಕೂಡ ಕೋರ್ಟ್ ಒಪ್ಪಿದೆ. ವಿವಾದಾಸ್ಪದ ಜಾಗದಲ್ಲಿ ರಾಮಲಲ್ಲಾ ಮೂರ್ತಿಗಳನ್ನು ತಂದಿಟ್ಟಿರುವುದನ್ನೂ ಒಪ್ಪಿದೆ. ಎಲ್ಲ ಒಪ್ಪಿದ ನಂತರ ಮಸೀದಿ ಕೆಡವಿದವರಿಗೇ ನಂಬಿಕೆ ಆಧಾರದಲ್ಲಿ ಜಾಗದ ಒಡೆತನ ಬಿಟ್ಟುಕೊಟ್ಟಿದೆ. ಇಲ್ಲಿ ಮುಖ್ಯವಾಗಿ ಧಾರ್ಮಿಕ ನಂಬಿಕೆ ಹಾಗೂ ಶ್ರದ್ಧೆಗಳನ್ನು ಸಾಕ್ಷಿಯಾಗಿ ಪರಿಗಣಿಸಿ ತೀರ್ಪು ನೀಡಲಾಗಿದೆ. ಇಲ್ಲಿ ಸಾಕ್ಷಾಧಾರಗಳಿಗಿಂತ ನಂಬಿಕೆ ಶ್ರದ್ಧೆಗಳಿಗೆ ಆದ್ಯತೆ ನೀಡಲಾಗಿದೆ.

ಇದು 150 ವರ್ಷಗಳ ಹಿಂದಿನ ವಿವಾದವಾಗಿದ್ದರೂ ಕೂಡ ಇದಕ್ಕೊಂದು ಜೀವ ಬಂದು ಆಂದೋಲನದ ರೂಪ ತಾಳಿದ್ದು 80ರ ದಶಕದಲ್ಲಿ. ಆಗಿನ ವಿ.ಪಿ.ಸಿಂಗ್ ಸರಕಾರ ಹಿಂದುಳಿದವರಿಗೆ ಮೀಸಲು ಸೌಕರ್ಯ ನೀಡುವ ಮಂಡಲ್ ಆಯೋಗದ ವರದಿ ಜಾರಿಗೆ ತರಲು ಹೊರಟಾಗ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿಯವರು ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಗೆ ರಥಯಾತ್ರೆ ಹೊರಟರು. ಇದರಲ್ಲಿ ರಾಮಭಕ್ತಿಗಿಂಥ ಓಟ್ ಬ್ಯಾಂಕ್ ರಾಜಕೀಯ ಮುಖ್ಯವಾಗಿತ್ತು.

ವಿವಾದದ ಸ್ಥಳದಲ್ಲಿ 1949ರಲ್ಲಿ ರಾಮ ಮತ್ತು ಸೀತೆಯ ಮೂರ್ತಿಗಳನ್ನು ರಹಸ್ಯವಾಗಿ ಇರಿಸಿದ್ದನ್ನು, 1992ರಲ್ಲಿ ಬಾಬರಿ ಮಸೀದಿ ಕೆಡವಿದ್ದನ್ನು ಕಾನೂನು ಬಾಹಿರ ಎಂದು ಹೇಳಿ ಅದೇ ಜಾಗವನ್ನು ಮಂದಿರ ನಿರ್ಮಾಣ ಮಾಡಲು ಹಿಂದುತ್ವ ವಾದಿ ಸಂಘಟನೆಗಳಿಗೆ ನೀಡಿರುವುದು ವಿರೋಧಾಭಾಸದಿಂದ ಕೂಡಿದೆ. ವಿವಾದಿತ ಜಾಗದಲ್ಲಿ ರಾಮ ಮಂದಿರ ಕಟ್ಟಿಸಲು ಮೂರು ತಿಂಗಳ ಒಳಗಾಗಿ ಒಂದು ಟ್ರಸ್ಟ್ ರಚಿಸುವಂತೆ, ಭೂಮಿಯ ಒಡೆತನವನ್ನು ಆ ಟ್ರಸ್ಟ್‌ಗೆನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ ಆದೇಶ ನೀಡಿದೆ. ಮತನಿರಪೇಕ್ಷ ರಾಷ್ಟ್ರದಲ್ಲಿ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ಮಂದಿರ ನಿರ್ಮಾಣ ಮಾಡುವ ಹೊಣೆಯನ್ನು ಸರಕಾರಕ್ಕೆ ವಹಿಸಿದ್ದು ಕೂಡ ಆಶ್ಚರ್ಯ ಉಂಟು ಮಾಡಿದೆ.

ಅದೇನೆ ಇರಲಿ, ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ರಾಮ ಜನ್ಮ ಭೂಮಿ ವಿವಾದವೇನೋ ಇತ್ಯರ್ಥ ಆಗಬಹುದು. ಆದರೆ ಇಂಥ ವಿವಾದಗಳಿಂದ ರಾಜಕೀಯ ಲಾಭ ಮಾಡಿಕೊಂಡವರು. ಅಂತಿಮವಾಗಿ ಸಕಲರಿಗೂ ಸಮಾನಾವಕಾಶ ನೀಡಿದ ಸಂವಿಧಾನವನ್ನು ಹೂತು ಹಾಕಿ ಮನುವಾದಿ ಹಿಂದೂರಾಷ್ಟ್ರ ಕಟ್ಟಲು ಹೊರಟವರು ಇಷ್ಟಕ್ಕೆ ಸುಮ್ಮನಾಗುವರೇ ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

ಈ ವಿವಾದದಿಂದ ದೇಶದ ಶಾಂತಿ ಮತ್ತು ನೆಮ್ಮದಿ ಕದಡಿತ್ತು. ಅದು ಸರಿ ಹೋಗಲಿ ಎಂದು ಸೌಹಾರ್ದದ ಕಾಳಜಿಯಿಂದ ನಂಬಿಕೆ ಹಾಗೂ ವಿಶ್ವಾಸವನ್ನು ಆಧರಿಸಿ ಈ ತೀರ್ಪು ನೀಡಿದ್ದರೂ ನಾಳೆ ಇದರ ದುರುಪಯೋಗ ಆಗದಿರದೆಂದು ಗ್ಯಾರಂಟಿ ಏನು? ಇದೇ ರೂಲಿಂಗ್ ಮುಂದಿಟ್ಟು ಕಾಶಿ, ಮಥುರಾ ವಿವಾದಗಳಿಗೆ ಕೋರ್ಟ್‌ಗೆ ಹೋದರೆ ಯಾರು ಜವಾಬ್ದಾರಿ? ಅಯೋಧ್ಯೆ ರೀತಿಯಲ್ಲೇ ಶಬರಿಮಲೈ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿವಾದವನ್ನು ಮರುಪರಿಶೀಲನೆ ಮಾಡುವಂತೆ ರಾಮಲಲ್ಲಾ ಪರ ವಕೀಲರಾದ ಕೆ.ಎನ್. ಭಟ್ ಈಗಾಗಲೇ ಹೇಳಿದ್ದಾರೆ. ಹಿಂದೂಗಳ ನಂಬಿಕೆ ಆಧಾರದಲ್ಲಿ ಅಯೋಧ್ಯೆಯ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಟ್ಟಂತೆ ಶಬರಿಮಲೈ ದೇಗುಲದಲ್ಲಿ ಹಿಂದೂಗಳ ಭಾವನೆಯನ್ನು ಗೌರವಿಸಿ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಇವರು ಪಟ್ಟು ಹಿಡಿದರೆ ಏನು ಮಾಡುವುದು?

ಸಂಘ ಪರಿವಾರ ರಾಮ ಜನ್ಮ ಭೂಮಿಯ ಜೊತೆಗೆ ಮಥುರಾ, ಕಾಶಿ ವಿವಾದಗಳನ್ನು ಮುಂದೆ ಮಾಡಿತ್ತು. ವಿಶ್ವ ಹಿಂದೂ ಪರಿಷತ್ತು ಇಂಥ ಮೂರು ಸಾವಿರ ವಿವಾದಾತ್ಮಕ ಪ್ರಾರ್ಥನಾ ಸ್ಥಳಗಳ ಪಟ್ಟಿ ಮಾಡಿದೆ. ಈಗ ಆ ವಿವಾದಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಭಾಗವತರು ಮತ್ತು ಪೇಜಾವರ ಸ್ವಾಮಿಗಳು ಹೇಳಿದ್ದರೂ ಅವುಗಳನ್ನು ಸಂಪೂರ್ಣವಾಗಿ ಕೈ ಬಿಡುವುದಿಲ್ಲ ಎಂದು ಅವರು ಹೇಳಿಲ್ಲ. ಈ ವಿವಾದಾತ್ಮಕ ಪ್ರಶ್ನೆಗಳಿಗೆ ಕೈ ಹಾಕುವುದಿಲ್ಲ ಎಂದು ಈಗ ಹೇಳಿದ್ದರೂ ಇವರನ್ನು ನಂಬಲು ಆಗುವುದಿಲ್ಲ. ಬಾಬರಿ ಮಸೀದಿಗೆ ಏನೂ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರಲಿಲ್ಲವೇ?

ಅಯೋಧ್ಯೆಯ ವಿವಾದಾಸ್ಪದ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡುವ ಮೂಲಕ ಇತಿಹಾಸದ ತಪ್ಪನ್ನು ಸರಿಪಡಿಸಬೇಕೆಂದು ಸಂಘಪರಿವಾರ ಆಗಾಗ ಪ್ರತಿಪಾದಿಸುತ್ತ ಬಂದಿದೆ. ಅದೇ ವಾದದ ಎಳೆ ಹಿಡಿದು ಚರಿತ್ರೆಯ ತಪ್ಪುಗಳನ್ನು ಸರಿಪಡಿಸಲು ಹೊರಟರೆ ಇಡೀ ದೇಶ ಸಂಘರ್ಷದಲ್ಲಿ ಮುಳುಗುತ್ತದೆ. ಭರತ ಭೂಮಿಯಲ್ಲಿ ಹಿಂದೂ ಮುಸ್ಲಿಂ ಸಂಘರ್ಷ ಮಾತ್ರ ನಡೆದಿಲ್ಲ. ಇಲ್ಲಿ ಬೌದ್ಧ, ವೈಷ್ಣವ, ಶೈವ, ಜೈನರ ನಡುವೆ ಸಂಘರ್ಷಗಳಾಗಿ ರಕ್ತದ ಹೊಳೆ ಹರಿದಿದೆ. ಸಾವಿರಾರು ಬೌದ್ಧ ವಿಹಾರಗಳನ್ನು, ಜೈನ ಬಸದಿಗಳನ್ನು ನಾಶ ಮಾಡಿ ಭಗ್ನಗೊಳಿಸಿ ಶಿವ, ವಿಷ್ಣು ಮಂದಿರಗಳನ್ನಾಗಿ ಮಾಡಲಾಗಿದೆ. ಇವೆಲ್ಲ ನಾಳೆ ವಿವಾದಗಳ ಸ್ವರೂಪ ತಾಳಿ ನ್ಯಾಯಾಲಯದ ಮುಂದೆ ಬಂದರೆ ನ್ಯಾಯಾಲಯ ಯಾವ ತೀರ್ಪು ನೀಡುತ್ತದೆ?

ಈ ತೀರ್ಪು ಮುಂದಿನ ಇತರ ತೀರ್ಪುಗಳಿಗೆ ಮಾದರಿಯಾಗಬಾರದೆಂದು ಸುಪ್ರೀಂ ಕೋರ್ಟ್ ಹೇಳಿದ್ದೇನೋ ನಿಜ. ಆದರೆ ಮತ್ತೆ ಇಂಥ ವಿವಾದಗಳನ್ನು ಕೆರಳಿಸದಂತೆ ಸಂಘಪರಿವಾರದ ಸಂಘಟನೆಗಳಿಗೆ ಅದು ಎಚ್ಚರಿಕೆ ನೀಡಿಲ್ಲ, ಷರತ್ತನ್ನೂ ವಿಧಿಸಿಲ್ಲ. ಆದ್ದರಿಂದ ಈ ಆತಂಕ ಸದಾ ತಲೆಯ ಮೇಲೆ ತೂಗುತ್ತಲೇ ಇರುತ್ತದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಬಿಜೆಪಿ ಸೇರಿದಂತೆ ಸಂಘಪರಿವಾರದ ನಾಯಕರು ಕಾನೂನಿಗೆ ವಿರುದ್ಧವಾಗಿ, ಅಕ್ರಮವಾಗಿ ಹಗಲು ಗೂಂಡಾಗಿರಿಯಿಂದ ಬಾಬರಿ ಮಸೀದಿ ಧ್ವಂಸದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ರಾಜಕೀಯ ಲಾಭ ಪಡೆದವರಲ್ಲಿ ರಾಮ ಭಕ್ತಿ ಲವ ಲೇಶವೂ ಇರುವುದಿಲ್ಲ.

ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ನಂತರವಾದರೂ ಆರೆಸ್ಸೆಸ್ ತನ್ನ ದಾರಿಯನ್ನು ಬದಲಿಸಿಕೊಳ್ಳುವುದೇ ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ತನ್ನ ಹಿಂದೂ ರಾಷ್ಟ್ರ ನಿರ್ಮಾಣದ ಗೋಳ್ವಾಲ್ಕರ್, ಸಾವರ್ಕರ್ ಸಿದ್ಧಾಂತವನ್ನು ಅದು ಬಿಟ್ಟು ಕೊಡುವುದೇ? ಆ ಸಿದ್ಧಾಂತವನ್ನು ಅದು ಬಿಟ್ಡುಕೊಡದಿದ್ದರೆ ಈ ದೇಶಕ್ಕೆ ಎಂದೂ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಆದರೆ, ಅದು ಬಹಿರಂಗವಾಗಿ ಏನೂ ಹೇಳುವುದಿಲ್ಲ. ಅದರ ಗುರಿ ಅಖಂಡ ಹಿಂದೂ ರಾಷ್ಟ್ರ ನಿರ್ಮಾಣವಾಗಿದೆ. ಬಾಬಾಸಾಹೇಬರು ರೂಪಿಸಿದ ಈ ಸಂವಿಧಾನವನ್ನು ಬದಲಿಸುವುದಾಗಿದೆ, ಮೀಸಲಾತಿ ರದ್ದುಪಡಿಸಿ ಮನುವಾದಿ ವ್ಯವಸ್ಥೆ ತರುವುದಾಗಿದೆ. ಇದು ಆರೋಪ ಮಾತ್ರ ಎಂದಾದರೆ ಆರೆಸ್ಸೆಸ್ ತನ್ನನ್ನು ತಾನು ಬದಲಾವಣೆ ಮಾಡಿಕೊಂಡು ಬಹುಮುಖಿ ಭಾರತದ ವಾಸ್ತವವನ್ನು ಒಪ್ಪಿಕೊಳ್ಳಲು ಮುಂದಾಗಲಿ.

ಒಟ್ಟಾರೆ ಭಾರತದ ಪ್ರಜಾಪ್ರಭುತ್ವ ಹಿಂದೆಂದೂ ಕಂಡರಿಯದ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ದೇಶದ ಜನರೇ ಎಚ್ಚೆತ್ತು ಈ ಜನತಂತ್ರವನ್ನು ಕಾಪಾಡಬೇಕಾಗಿದೆ. ಶಾಸಕಾಂಗ, ಕಾರ್ಯಾಂಗ ಸೇರಿರುವ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ನ್ಯಾಯಾಂಗವನ್ನು ಬಳಸಿಕೊಂಡು ಜನತಾಂತ್ರಿಕ ವ್ಯವಸ್ಥೆಗೆ ಗಂಡಾಂತರ ತಂದಿವೆ ಅಂದರೆ ಅತಿಶಯೋಕ್ತಿಯಲ್ಲ. ಜನರೇ ಈಗ ಜನತಂತ್ರದ ರಕ್ಷಣೆಗೆ ಮುಂದಾಗಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News