ಇಂತಹವರು ಬಡವರ ಉದ್ಧಾರ ಮಾಡಿಯಾರೇ?

Update: 2019-11-21 18:16 GMT

ಅಹಮದ್‌ನಗರದಲ್ಲಿ 25 ಜನವರಿ 1937ರಂದು ಮೊದಲೇ ಜಾಹೀರಗೊಳಿಸಿದಂತೆ ಅಸ್ಪಶ್ಯ ಸಮಾಜದ ಅಹಮದ್‌ನಗರ ಜಿಲ್ಲಾ ಪರಿಷತ್ತನ್ನು, ಅಖಿಲ ಭಾರತೀಯ ಅಸ್ಪಶ್ಯ ಸಮಾಜದ ಏಕಮೇವ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಈ ಪರಿಷತ್ತಿಗೆ ಅಂದಾಜು 5-6 ಸಾವಿರದಷ್ಟು ಜನಸಮುದಾಯ ಸೇರಿತ್ತು. ಎಲ್ಲಿ ನೋಡಿದರಲ್ಲಿ ಆನಂದವೇ ಆನಂದ. ಜನರು ಡಾ.ಬಾಬಾ ಸಾಹೇಬ್ ಆಗಮನವನ್ನು ಕಾತುರತೆಯಿಂದ ನಿರೀಕ್ಷಿಸುತ್ತಿದ್ದರು. ಕೆಲವು ಸ್ಪಶ್ಯ ಮತ್ತು ಅಧಿಕಾರಿ ವರ್ಗವೂ ಹಾಜರಾಗಿತ್ತು. ಬಾಬಾಸಾಹೇಬರು ಬೆಳಗ್ಗೆ ಎಂಟು ಗಂಟೆಗೆ ಆಗಮಿಸಬೇಕಿತ್ತು. ಆದರೆ ಮಧ್ಯಾಹ್ನ ಹನ್ನೆರಡಾದರೂ ಬರದೇ ಇದ್ದಾಗ ಸವರ್ಣೀಯರಲ್ಲಿ ನಿರಾಶೆ ಉಂಟಾಗತೊಡಗಿತು. ಆದರೂ ಅವರಲ್ಲಿ ನಿರಂತರ ಉತ್ಸಾಹ ಮತ್ತು ಸಂತಸ ಎದ್ದು ಕಾಣುತ್ತಿತ್ತು. ಮತ್ತೆ ಮತ್ತೆ ಜನರ ನಿಭಿಡತೆ ವೃದ್ಧಿಗೊಂಡು ಬಾಬಾಸಾಹೇಬರ ದರ್ಶನಕ್ಕೆಂದು ಜನರು ತೀವ್ರ ಆಸಕ್ತಿಯಿಂದ ಕಾಯುತ್ತ ಕುಳಿತಿದ್ದರು.

ಬಾಬಾ ಸಾಹೇಬರು ಆಗಮಿಸುವ ಮಾರ್ಗದಲ್ಲಿ ಅವರನ್ನು ಸ್ವಾಗತಿಸಲು ಫಸ್ಟ್ ಲೈನ್ ಸ್ಕೌಟ್ ಬ್ಯಾಂಡ್ ಮತ್ತು ಸ್ಕೌಟ್, ರಾಧಿಯ ತೋಟದ ಬಲಭೀಮ ಸ್ಕೌಟ್, ಮಾತಂಗ ಪ್ರಭೃತಿ ಮಂಡಳ ಸ್ಕೌಟ್, ಮಾಳಿವಾಡಾ, ದರೇವಾಡಿಯ ಸ್ಕೌಟ್, ಪೇವಶನ ಲೈನ್ ಕ್ಯಾಂಪ್‌ನಲ್ಲಿಯ ಮಾತಂಗ ಸ್ಕೌಟ್, ಬಾಕೋಡಿ ಸ್ಕೌಟ್ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಸ್ಕೌಟ್‌ಗಳು ಬ್ಯಾಂಡ್ ಜೊತೆಗೆ ಜನರು ಹಾಜರಿದ್ದರು. ಸರಿಯಾಗಿ 2 ಗಂಟೆಗೆ ಬಾಬಾಸಾಹೇಬರು ವಾಹನದಲ್ಲಿ ಆಗಮಿಸುತ್ತಿದ್ದಂತೆ ವಾದ್ಯಗಳ ಗರ್ಜನೆ ಮುಗಿಲುಮುಟ್ಟಿತು. ಜಯಘೋಷ ಮೊಳಗಹತ್ತಿತ್ತು. ಬಾಬಾಸಾಹೇಬರ ಜೊತೆ ವಾಹನದಲ್ಲಿ ಪ್ರಭಾಕರ ರೋಹಮ್ ಸಾಹೇಬ, ಬಿ.ಎಸ್. ಕದಮ್, ಕರ್ಜತ್, ಎಸ್.ಆರ್. ಸಾಳವೆ ಅಹಮದ್‌ನಗರ, ವಿಠ್ಠಲರಾವ್ ಗಾಯಕವಾಡ, ನಗರಕರ ಅವರಿದ್ದರು. ಬಾಬಾಸಾಹೇಬರಿಗೆ ಎಲ್ಲ ಸ್ಕೌಟ್‌ನವರು ಗೌರವ ವಂದನೆ ಸಲ್ಲಿಸಿದರು. ದೊಡ್ಡಸಂಖ್ಯೆಯಲ್ಲಿ ಸೇರಿದ್ದ ಜನರು ಅತಿವೈಭವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಲ್ಲಿ ಮಹಿಳೆಯರ ಗುಂಪು ಬಾಬಾಸಾಹೇಬರಿಗೆೆ ಹೂಮಾಲೆ ಅರ್ಪಿಸಿ ಹೂ ಚೆಲ್ಲುತ್ತಿದ್ದರು. ಮೆರವಣಿಗೆ ಮುಗಿದ ನಂತರ ಬಾಬಾಸಾಹೇಬರು ವೇದಿಕೆಗೆ ಬಂದರು. ಸಭೆ ಪ್ರಾರಂಭವಾಯಿತು. ಪರಿಷತ್ತಿನ ಸೆಕ್ರೆಟರಿ ರಂಗನಾಥ ಮಾರುತಿ ರಾವ್ ಸೂರ್ಯವಂಶಿಯವರು ನೆರೆದ ಜನರನ್ನು ಅಭಿನಂದಿಸಿದರು. ಡಾ. ಬಾಬಾಸಾಹೇಬರು ಅಹಮದ್‌ನಗರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಕ್ಕೆ ಅವರಿಗೆ ಕೃತಜ್ಞತೆ ಅರ್ಪಿಸಿದರು ಆ ಬಳಿಕ ಡಾ. ಬಾಬಾಸಾಹೇಬರು ಭಾಷಣ ಮಾಡಲು ಎದ್ದು ನಿಂತಾಗ ಎಲ್ಲೆಡೆ ಅವರ ಹೆಸರಿನ ಜಯಘೋಷ ಮೊಳಗಿತು. ಚಪ್ಪಾಳೆಯ ಸುರಿಮಳೆಯಾಯಿತು. ಡಾ. ಬಾಬಾಸಾಹೇಬ ಅಂಬೇಡ್ಕರರು ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು:

ಬಂಧುಗಳೆ- ಭಗಿನಿಯರೆ,
   ಇಂದಿನ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಜನಸಮುದಾಯ ಮತ್ತು ಒಟ್ಟಾರೆ ಅಹಮದ್‌ನಗರ ಜಿಲ್ಲೆಯ ಎಲ್ಲ ಜನರ ಉತ್ಸಾಹ ಕಂಡು ನನಗೆ ಆನಂದವಾಗಿದೆ. ಇವತ್ತಿನ ಈ ಸಭೆಯು ಪ್ರಭಾಕರ ಜನಾರ್ದನ ರೋಹಮ್‌ರ ಚುನಾವಣೆ ಸಂದರ್ಭದಲ್ಲಿ ಸೇರಿದೆ ಎಂಬುದು ತಮಗೆ ತಿಳಿದ ಸಂಗತಿ. ಆದರೂ ಯಾವ ಅರ್ಥದಲ್ಲಿ ನನ್ನ ಪಕ್ಷದ ಪರವಾಗಿ ಯಾವ್ಯಾವ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇನೆಯೋ ಆ ಅರ್ಥದಲ್ಲಿ ಅವರಿಗೆ ನೆರವಾಗುವುದು ನನ್ನ ಕರ್ತವ್ಯವಾಗಿದೆ.

ರೋಹಮ್ ಅವರಿಗೆ ಅಹಮದ್‌ನಗರ ಜಿಲ್ಲೆಯ ಮಹಾರ-ಮಾದಿಗ ಸಮುದಾಯದ ವಿರೋಧವಿಲ್ಲವೆಂಬುದು ಸಂತಸದ ಸಂಗತಿ. ಕೇವಲ ಸಮಗಾರರ ವಿರೋಧವಿದೆ. ಆದರೆ ಅದರ ಬಗ್ಗೆ ಚಿಂತಿಸಬೇಡಿರಿ. ಅವರ ಅಭ್ಯರ್ಥಿಗೆ ಮೂಲತಃ ಮತವನ್ನೇ ನೀಡಬೇಡಿರಿ, ಇದನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಅಸ್ಪಶ್ಯರ ಹಕ್ಕುಗಳು ಸರ್ವ ಅಸ್ಪಶ್ಯರಲ್ಲಿ ವಿಭಜಿಸಿವೆ ಎಂಬ ಮಾತು ನಿಜ. ಆದರೆ ಈ ಸಮಗಾರ ಸಮುದಾಯದವರು ಆರಂಭದಿಂದಲೂ ನನ್ನ ಯಾವುದೇ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಇದಷ್ಟೇ ಅಲ್ಲ, ನಾನು ದುಂಡುಮೇಜಿನ ಪರಿಷತ್ತಿನಲ್ಲಿ ಸ್ಪಶ್ಯ ಹಿಂದೂಗಳ ಸಂಗಡ ಮತ್ತು ಸರಕಾರದ ಜೊತೆ ಜಗಳಕ್ಕಿಳಿದಾಗ, ಅಂಬೇಡ್ಕರ್ ನಮ್ಮ ನಾಯಕರಲ್ಲ, ಅವರ ಅನಿಸಿಕೆಗಳನ್ನು ತಾವು ಒಪ್ಪಕೂಡದು ಎಂದು ಈ ಜನರು ಪಾರ್ಲಿಮೆಂಟಿಗೆ ತಂತಿಸಂದೇಶ ಕಳಿಸಿದ್ದರಲ್ಲದೆ ನಾಶಿಕ ಸತ್ಯಾಗ್ರಹ ಆರಂಭಗೊಂಡಿದ್ದಾಗ ನಮ್ಮ ಜನರ ಮೇಲಾದ ಸ್ಪಶ್ಯರ ಕಲ್ಲು ಇಟ್ಟಿಗೆ ತೂರಾಟದಲ್ಲಿ ಇವರೂ ಶಾಮೀಲಾಗಿದ್ದರು. ಇದು ನನಗೆ ಚೆನ್ನಾಗಿ ಗೊತ್ತು. ಆದ್ದರಿಂದ ತಾವು ಯೋಚಿಸಿರಿ. ಯಾವ ಜನರು ನನ್ನ ಕೆಲಸಕ್ಕೆ ಅಡ್ಡಿಪಡಿಸುವರೋ ಅಥವಾ ಕಾಂಗ್ರೆಸಿನ ಬಗಲಲ್ಲಿ ತೂರಿಕೊಂಡು ನನ್ನ ಕಾರ್ಯಚಟುವಟಿಕೆಗಳ ಮಾರ್ಗದಲ್ಲಿ ಮುಳ್ಳನ್ನು ಹಾಸುತ್ತಾರೋ ಅಂಥವರನ್ನು ನಮ್ಮವರೆಂದು ಕರೆಯಲು ಹೇಗೆ ಸಾಧ್ಯ? ಮತ್ತೆ ಅವರೂ ಸಹ ನಮ್ಮನ್ನು ಯಾಕೆ ಯಾಚಕರಾಗಿ ನೋಡಬೇಕು? ಈಚೆಗೂ ಸಹ ಪ್ರತಿಯೊಂದು ಜಾಗದಲ್ಲಿ ಈ ಸಮಗಾರ ಸಮುದಾಯದವರು ಕಾಂಗ್ರೆಸ್ ಟಿಕೆಟ್ಟಿನ ಮೇಲೆ ಸ್ಪರ್ಧಿಸಿ ನಮ್ಮಪಕ್ಷದ ಅಭ್ಯರ್ಥಿಯನ್ನು ಓಪನ್‌ಆಗಿ ವಿರೋಧಿಸುತ್ತಿದ್ದಾರೆ. ನಿಮ್ಮ ಜಿಲ್ಲೆಯೊಳಗೆ ರೋಹಮ್ ಅವರನ್ನು ವಿರೋಧಿಸಲೆಂದೇ ಸೋನವಣೆ ಎಂಬ ಹೆಸರಿನ ಗೃಹಸ್ಥ ಸ್ಪರ್ಧಿಸಿದ್ದಾರೆ.

ಕೆಲವು ಸ್ಪಶ್ಯರು ಹೇಳುತ್ತಾರೆ, ಸೋನವಣೆ ಬಿ.ಎ., ಎಲ್.ಎಲ್.ಬಿ. ಉತ್ತೀರ್ಣರು, ಆದರೆ ರೋಹಮ್ ಕೇವಲ ಮೆಟ್ರಿಕ್ ಕಲಿತವರು ಅಂತ, ಆದರೆ ಇಂತಹ ಲಕ್ಷಲಕ್ಷ ಬಿ.ಎ.ಯನ್ನು ಹೂತುಬಿಟ್ಟು ಉಳಿಯೋ ರೋಹಮ್‌ರ ಬೆನ್ನಹಿಂದೆ ನಾನೀದ್ದೇನಲ್ಲ. ಶ್ರೀ ಸೋನವಣೆ ಯಾವುದೇ ಪಕ್ಷದಿಂದ ಸ್ಪರ್ಧಿಸಿಲ್ಲ. ಅದಕ್ಕೆ ಅವರು ನಿಮ್ಮ ಕೆಲಸವನ್ನು ಏನನ್ನೂ ಮಾಡದೇ ಹೋದರೆ ಯಾರನ್ನು ಹೊಣೆ ಮಾಡುತ್ತೀರಿ? ರೋಹಮ್ ಅವರು ನನ್ನ ಸ್ವತಂತ್ರ ಮಜೂರ ಪಕ್ಷದ ವತಿಯಿಂದ ಸ್ಪರ್ಧಿಸಿರುವುದರಿಂದ ಅವರ ಕಾರ್ಯನಿರ್ವಹಣೆಯ ಜವಾಬ್ದಾರಿ ನನ್ನ ಮೇಲಿದೆ. ಆದ್ದರಿಂದ ನೀವು ನಿಮ್ಮ ಮೂರು ಮತಗಳನ್ನು ರೋಹಮ್‌ರ ಕುದುರೆ ಚಿತ್ರದೆದುರು ಒತ್ತಿನೀಡಿರಿ. ಈ ದೇಶದಲ್ಲಿ ಅನೇಕ ಬಲಿಷ್ಠ ಹಾಗೂ ಸುಶಿಕ್ಷಿತ ಪಕ್ಷಗಳಿವೆ. ಹಾಗೆ ನನ್ನದೂ ಒಂದು ಪುಟ್ಟ ಸ್ವತಂತ್ರ ಮಜೂರಪಕ್ಷವಿದೆ. ಇದಕ್ಕಿಂತ ಕೆಲವು ಪಕ್ಷಗಳು ಇವೆಯಲ್ಲ, ಅವರ ಮತ್ತು ನನ್ನಲ್ಲಿ ಅಜಗಜಾಂತರವಿದೆ. ಬಾನು ಭುವಿಯ ಅಂತರವಿದೆ. ಇನ್ನು ಕೆಲವು ಪಕ್ಷಗಳಲ್ಲಿ ಸ್ವಲ್ಪ ಅಂತರ. ಕಾಂಗ್ರೆಸ್ ಮತ್ತು ನನ್ನ ಪಕ್ಷದಲ್ಲಿರುವ ಅಂತರವಿಷ್ಟೆ. ಕಾಂಗ್ರೆಸ್ ಶ್ರೀಮಂತ ಅಭ್ಯರ್ಥಿ ನಿಲ್ಲಿಸಿದರೆ, ನಾನು ನನ್ನ ಪಕ್ಷದಿಂದ ಬಡ ಅಭ್ಯರ್ಥಿಯನ್ನು ಸ್ಪರ್ಧೆಗೆ ನಿಲ್ಲಿಸಿರುವೆ. ತತ್ವಕ್ಕೆ ಭಂಗ ಬರದಿರಲೆಂದು ನಾನು ನನ್ನ ಸಮಾಜದ ಸಿರಿವಂತರನ್ನು ಬಿಟ್ಟುಬಿಟ್ಟೆ. ಆದಕಾರಣ ಅವರು ನನ್ನ ಮೇಲೆ ಕೋಪಗೊಂಡಿದ್ದಾರೆ. ರೋಷವಿದೆ. ನನ್ನ ತತ್ವಗಳಿಗಾಗಿ ನನಗೆ ಅವರು ಮಹತ್ವವೆನಿಸುವುದಿಲ್ಲ.

ಕಾಂಗ್ರೆಸ್ ತಾನು ಬಡವರ ಪರವಾದವ ಎಂದು ಹೇಳುತ್ತದೆ ಮತ್ತು ಫಿರೋದಿಯಾನಂಥ ಶ್ರೀಮಂತ ಮಾರವಾಡಿಯನ್ನು ಸ್ಪರ್ಧೆಗಿಳಿಸುತ್ತದೆ. ಆದರೆ ನೀವು ಯೋಚಿಸಿ, ಯಾವ ಮಾರವಾಡಿ ಖೊಟ್ಟಿ ಕಾಗದಪತ್ರಗಳನ್ನು ಸಿದ್ಧಪಡಿಸಿ ಮತ್ತು ನಿಮ್ಮ ಹೆಬ್ಬೆಟ್ಟು ಒತ್ತಿಕೊಂಡು ಹೊಲಗದ್ದೆ ಮನೆಮಾರು ಕಬಳಿಸುವನೋ ಆ ಮಾರವಾಡಿ ಬಡವ, ರೈತರ, ಕಾರ್ಮಿಕ ಕೂಲಿಗಳ ಏಳಿಗೆಯನ್ನು ಮಾಡಬಹುದೆಂದು ನಿಮಗೆ ಅನಿಸುತ್ತದೆಯೇ? ಕಾಂಗ್ರೆಸ್‌ಗೆ ತನ್ನ ಬಂಡವಾಳದಾರರನ್ನು ಉಳಿಸಿಬೇಕಿದೆ ಮತ್ತು ನಿಮಗೆ ಹಾನಿಯುಂಟು ಮಾಡುವುದಾಗಿದೆ. ಆದಕಾರಣ ಅವರ ಪೊಳ್ಳುಮಾತುಗಳಿಗೆ ಬಲಿಯಾಗಬೇಡಿರಿ. ನೀವು ತಮ್ಮ ಪಕ್ಷದ ಕುರಿತು ಚಿಂತಿಸಿರಿ ಮತ್ತು ಸ್ವತಂತ್ರ ಮಜೂರ ಪಕ್ಷದ ಅಭ್ಯರ್ಥಿ ರೋಹಮ್ ಅವರಿಗೇ ನಿಮ್ಮೆಲ್ಲ ಮತಗಳನ್ನು ನೀಡಿರಿಯೆಂದು ವಿನಂತಿಸಿಕೊಳ್ಳ್ಳುವೆ. ಕೊನೆಗೆ ಅಹಮದ್‌ನಗರ ಕ್ಯಾಂಪ್‌ನ ಸ್ಕೌಟ್ ತಂಡದವರನ್ನು ಅಭಿನಂದಿಸದೆ ಇರಲಾರೆ. ನಿಮ್ಮೌಳಗೆ ಶೂರತನ ತುಂಬಲು ಸ್ಕೌಟ್ ಒಂದು ಸಾಧನ. ಅದಕ್ಕೆ ಪ್ರತಿ ಹಳ್ಳಿಗಳಲ್ಲಿ ಜನರೂ ಸಹ ಸ್ಕೌಟ್ ಉಡುಪುಗಳನ್ನು ತಮ್ಮ 11 ವರ್ಷದ ಮೇಲಿನ ಮಕ್ಕಳಿಗೆ ನೀಡಿ ಉತ್ಸಾಹ ತುಂಬಬೇಕು. ಈ ಧೋತರಗಳು ಬೇಡ. ಈ ಧೋತರಗಳು ನಮಗೆ ತುಂಬಾ ಹಾನಿಯುಂಟು ಮಾಡಿವೆ. ಇಂದು ಈ ನೂರಾರು ಸ್ಕೌಟ್‌ನವರನ್ನು ನೋಡಿ ತುಂಬ ಖುಷಿಯಾಗಿದೆ. ಮತ್ತೊಮ್ಮ ನಿಮ್ಮನ್ನು ಮನಸಾರೆ ಅಭಿನಂದಿಸುವೆ.

ಹೀಗೆ ಹೇಳಿದ ಅವರು ಭಾಷಣ ಮುಗಿಸಿದರು. ಆಗ ಚಪ್ಪಾಳೆ ಸದ್ದು ಮುಗಿಲು ಮುಟ್ಟಿತು. ಜಯಕಾರ ಮೊಳಗಿತು. ಬ್ಯಾಂಡು, ಕಹಳೆ, ತುತ್ತೂರಿ ಮುಂತಾದ ವಾದ್ಯಗಳಿಂದ ಭವ್ಯವಾದ ವೇದಿಕೆ ನಿನಾದಗೊಂಡು ದಣದಣಿಸಿತು. ಅವರು ಅಹಮದ್‌ನಗರ ಕ್ಯಾಂಪ್ ಫಸ್ಟ್ ಲೈನ್ ಸ್ಕೌಟ್ ಟ್ರೂಪ್, ರಾಯಿತೋಟದ ಬಲಭೀಮ ಸ್ಕೌಟ್, ಪ್ರಗತಿಮಾತಂಗ ಮಂಡಳಿ, ಮಾಳಿವಾಡ ಸ್ಕೌಟ್, ದರೇವಾಡಿ ಸ್ಕೌಟ್, ಬಾಕೋಡಿ ಸ್ಕೌಟ್, ಸದರ ಕ್ಯಾಂಪ್ ಮಾತಂಗ ಸ್ಕೌಟ್ ಮುಂತಾದ ಸ್ಕೌಟುಗಳಿಗೆ ಯಶಸ್ಸು ಕೋರಿದ ಅಭಿಪ್ರಾಯವನ್ನು ಬರೆದುಕೊಟ್ಟರು. ಆನಂತರ ಪ್ರಭಾಕರ ಜನಾರ್ದನ ರೋಹಮ್ ಅವರು ಡಾ. ಬಾಬಾಸಾಹೇಬ ಅಂಬೇಡ್ಕರರು ಅಹಮದ್‌ನಗರ ಜಿಲ್ಲೆಗೆ ಭೇಟಿ ನೀಡಿದ್ದಕ್ಕೆ ಕೃತಜ್ಞತೆ ಹೇಳಿದರು. ‘‘ಸೇರಿದ ಎಲ್ಲ ಜನರು, ಮತದಾರರು ನನ್ನ ಮೇಲಿಟ್ಟ ಪ್ರೀತಿ-ವಿಶ್ವಾಸ, ನಿಷ್ಠೆಗೆ ನಾನು ಎಲ್ಲ ಸಮಾಜದವರಿಗೆ ಅತ್ಯಂತ ಋಣಿಯಾಗಿರುವೆ. ನಮ್ಮ ಅಹಮದ್‌ನಗರ ಜಿಲ್ಲೆಯ ಚುನಾವಣೆಯ ಬಾಬತ್ತಿನಲ್ಲಿ ತೋರಿದ ಸಾಹಸವು ಅತ್ಯಂತ ಪ್ರಶಂಸನೀಯವಾಗಿದ್ದು ಅಭಿನಂದನೆಗೆ ಪಾತ್ರವಾಗಿದೆ.’’ ಹೀಗೆ ಸ್ಫೂರ್ತಿದಾಯಕ ಮಾತುಗಳನ್ನು ರೋಹಮ್ ಆಡಿದರು. ಬಳಿಕ ಡಾ. ಬಾಬಸಾಹೇಬ ಅಂಬೇಡ್ಕರ್ ಅವರ ಹಸ್ತದಿಂದ ಸ್ಕೌಟ್‌ಗಳ ಕ್ಯಾಪ್ಟನ್‌ಗಳು, ವ್ಯಾಯಾಮ ಮಂಡಳಿಯ ಶಿಕ್ಷಕ, ಬ್ಯಾಂಡ್ ಮಾಸ್ತರ್‌ರಿಗೆ ಬೆಳ್ಳಿಪದಕವನ್ನು ನೀಡಲಾಯಿತು. ಕೊನೆಗೆ ಎಲ್ಲ ಸಂಸ್ಥೆಗಳ ಪರವಾಗಿ ಬಾಬಾಸಾಹೇಬರಿಗೆ ಮಾಲಾರ್ಪಣೆ ಮಾಡಲಾಯಿತು. ಆನಂತರ ಬಾಬಾಸಾಬೇಬರ ಜಯಕಾರಗಳೊಂದಿಗೆ ಈ ಬೃಹತ್ ಸಭೆ ಕೊನೆಗೊಂಡಿತು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News