ಮೈಗ್ರೇನ್ ಕುರಿತ ಸುಳ್ಳುಗಳು ಮತ್ತು ಸತ್ಯಗಳು

Update: 2019-11-23 16:38 GMT

ಮೈಗ್ರೇನ್ ನೋವು ಅದನ್ನು ಅನುಭವಿಸಿದವರಿಗೇ ಗೊತ್ತು. ತಲೆನೋವು ಮೈಗ್ರೇನ್‌ನ ಒಂದು ಲಕ್ಷಣವಾಗಿದೆ ಅಷ್ಟೇ. ವಾಕರಿಕೆ,ಬೆಳಕಿಗೆ ಸಂವೇದನಾಶೀಲತೆ, ಏಕಾಗ್ರತೆಗೆ ಕಷ್ಟ, ತಲೆ ಸುತ್ತುವಿಕೆ, ನಿಶ್ಶಕ್ತಿ ಮತ್ತು ವಾಂತಿ ಇವು ಮೈಗ್ರೇನ್‌ನ ಇತರ ಲಕ್ಷಣಗಳಾಗಿವೆ.

ಮೈಗ್ರೇನ್ ನೋವು ನಾಲ್ಕು ಗಂಟೆಗಳಿಂದ ಹಿಡಿದು ಮೂರು ದಿನಗಳವರೆಗೂ ಕಾಡುತ್ತಿರುತ್ತದೆ. ಕೆಲವರಲ್ಲಿ ಇದು ಇನ್ನೂ ಸುದೀರ್ಘ ಅವಧಿಗೆ ಮುಂದುವರಿಯಬಹುದು. ಮೈಗ್ರೇನ್ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಅಲ್ಲದೆ ಅದು ಕುಟುಂಬದಲ್ಲಿಯ ವಂಶವಾಹಿಗಳು ಮತ್ತು ಮಿದುಳಿನಲ್ಲಿಯ ಬದಲಾವಣೆಗಳೊಂದಿಗೂ ತಳುಕು ಹಾಕಿಕೊಂಡಿದೆ. ದಣಿವು,ಪ್ರಖರ ಬೆಳಕು,ತಲೆನೋವುಗಳು,ಹವಾಮಾನ ಬದಲಾವಣೆಗಳು ಇತ್ಯಾದಿಗಳಂತಹ ವಿವಿಧ ಕಾರಣಗಳೂ ಮೈಗ್ರೇನ್‌ನ್ನು ಉಂಟು ಮಾಡುತ್ತವೆ. ಮೈಗ್ರೇನ್‌ಗೆ ಸಂಬಂಧಿಸಿದಂತೆ ಜನರಲ್ಲಿ ಕೆಲವು ಮಿಥ್ಯೆಗಳು ಅಥವಾ ತಪ್ಪುಗ್ರಹಿಕೆಗಳಿವೆ. ಇಂತಹ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ....

► ಮೈಗ್ರೇನ್ ಕೇವಲ ತಲೆನೋವು ಅಷ್ಟೇ

- ಹೆಚ್ಚಿನ ಜನರು ಮೈಗ್ರೇನ್ ಎಂದರೆ ಕೇವಲ ತಲೆನೋವು ಎಂದು ಭಾವಿಸಿರುತ್ತಾರೆ.ಆದರೆ ಇದು ಸಂಪೂರ್ಣ ತಪ್ಪು ಗ್ರಹಿಕೆ. ಮೈಗ್ರೇನ್ ನರಶಾಸ್ತ್ರೀಯ ಕಾಯಿಲೆಯಾಗಿದ್ದು,ಮಿದುಳಿನಲ್ಲಿಯ ಸಾಂದರ್ಭಿಕ,ಕಾರ್ಯಕಾರಿ ಮತ್ತು ರಚನಾತ್ಮಕ ಬದಲಾವಣೆಗಳೊಂದಿಗೆ ಗುರುತಿಸಿಕೊಂಡಿದೆ. ತಲೆನೋವಿನ ಕಾಯಿಲೆಗಳಿಗಾಗಿ ಅಂತರರಾಷ್ಟ್ರೀಯ ವರ್ಗೀಕರಣ ಮಾರ್ಗಸೂತ್ರವಿದ್ದು,ತಲೆನೋವಿನ ತೀವ್ರತೆಯನ್ನು ಅಳೆಯಲು ವೈದ್ಯರು ಇದನ್ನು ಬಳಸುತ್ತಾರೆ. ಮೈಗ್ರೇನ್‌ನಿಂದ ನರಳತ್ತಿರುವವರಲ್ಲಿ ನೋವಿನ ತೀವ್ರತೆಯನ್ನು ತಿಳಿದುಕೊಳ್ಳಲು ಹಲವಾರು ಸ್ಥಾಪಿತ ಮಾನದಂಡಗಳಿವೆ. ಮೈಗ್ರೇನ್ ತಲೆನೋವಿಗಿಂತ ಭಿನ್ನವಾಗಿದ್ದು,ಎರಡರಲ್ಲಿಯೂ ಅವಧಿ,ತೀವ್ರತೆ ಮತ್ತು ಲಕ್ಷಣಗಳಲ್ಲಿ ವ್ಯತ್ಯಾಸಗಳಿವೆ.

► ಮೈಗ್ರೇನ್‌ಗೆ ಕೆಫೀನ್ ಕಾರಣ

- ಕೆಫೀನ್ ಮೈಗ್ರೇನ್‌ಗೆ ಯಾವಾಗಲೂ ಕಾರಣವಲ್ಲ,ಬದಲಿಗೆ ಕೆಲವು ಅತ್ಯಂತ ಪರಿಣಾಮಕಾರಿ ತಲೆನೋವಿನ ಔಷಧಿಗಳಲ್ಲಿ ಕೆಫೀನ್‌ನ್ನು ಬಳಸಲಾಗುತ್ತದೆ. ಹಲವಾರು ರೋಗಿಗಳಿಗೆ ಕಾಫಿ ಅಥವಾ ಸೋಡಾದಂತಹ ಕೆಫೀನ್‌ಯುಕ್ತ ಪಾನೀಯಗಳ ಸೇವನೆಯಿಂದ ತಲೆನೋವು ಕಡಿಮೆಯಾಗುತ್ತದೆ.

► ಮೈಗ್ರೇನ್ ಮಹಿಳೆಯರು ಮತ್ತು ವಯಸ್ಕರನ್ನು ಮಾತ್ರ ಕಾಡುತ್ತದೆ

- ಐದು ವರ್ಷಕ್ಕೂ ಕಡಿಮೆ ಪ್ರಾಯದ ಮಕ್ಕಳಿಗೂ ಮೈಗ್ರೇನ್ ಉಂಟಾಗಬಹುದು ಮತ್ತು ಅವರು ತೀವ್ರ ಮೈಗ್ರೇನ್ ತಲೆನೋವುಗಳನ್ನು ಅನುಭವಿಸಬಹುದು. ಮಹಿಳೆಯರಿಗೆ ಮೈಗ್ರೇನ್ ಉಂಟಾಗುವ ಸಾಧ್ಯತೆಯು ಮೂರು ಪಟ್ಟು ಅಧಿಕವಾಗಿರುತ್ತದೆ,ಆದರೆ ಪುರುಷರೂ ಮೈಗ್ರೇನ್‌ಗೆ ಗುರಿಯಾಗುತ್ತಾರೆ.

ಶೇ.18ರಿಂದ ಶೇ.20ರಷ್ಟು ಮಹಿಳೆಯರು ಮತ್ತು ಶೇ.8ರಿಂದ ಶೇ.10ರಷ್ಟು ಮಹಿಳೆಯರು ಮೈಗ್ರೇನ್‌ನಿಂದ ಬಳಲುತ್ತಿರುತ್ತಾರೆ.

►  ಮೈಗ್ರೇನ್‌ನಿಂದ ಪಾರಾಗಲು ಹೆಚ್ಚೆಚ್ಚು ಔಷಧಿಗಳನ್ನು ಸೇವಿಸಬೇಕು

- ದುರದೃಷ್ಟವಶಾತ್ ಜನರು ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ಹೆಚ್ಚೆಚ್ಚು ಔಷಧಿಗಳನ್ನು ಸೇವಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಸ್ಥಿತಿಯು ಇನ್ನಷ್ಟು ಹದಗೆಡಬಹುದು. ತೀವ್ರ ಮೈಗ್ರೇನ್ ಶಮನಕ್ಕಾಗಿ ಅತಿಯಾದ ಔಷಧಿಗಳ ಸೇವನೆಯು ಭವಿಷ್ಯದಲ್ಲಿ ಪದೇ ಪದೇ ಇನ್ನಷ್ಟು ತೀವ್ರ ಮೈಗ್ರೇನ್‌ಗಳಿಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮೈಗ್ರೇನ್ ನಿವಾರಣೆಗೆ ಕ್ರಮಗಳು

ಮದ್ಯ,ಗ್ಲುಟೆನ್,ಮೊನೊಸೋಡಿಯಂ ಗ್ಲುಟಾಮೇಟ್ ಮತ್ತು ಹಿಸ್ಟಮೈನ್ ಸಮೃದ್ಧ ಆಹಾರಗಳು,ಡಾರ್ಕ್ ಚಾಕಲೇಟ್ ಇತ್ಯಾದಿಗಳು ಮೈಗ್ರೇನ್ ಕಾರಕಗಳಲ್ಲಿ ಸೇರಿವೆ. ಹೀಗಾಗಿ ಮೈಗ್ರೇನ್ ಅಪಾಯದಿಂದ ಪಾರಾಗಲು ಇವುಗಳ ಸೇವನೆಯನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು

ಮೈಗ್ರೇನ್ ಕಾರಣವನ್ನು ತಿಳಿದುಕೊಂಡು ಅದರ ನಿವಾರಣೆಯು ಈ ತಲೆನೋವಿಗೆ ಅತ್ಯುತ್ತಮ ಪರಿಹಾರ ಮಾರ್ಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News