ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಈ ಸಮಸ್ಯೆಗಳಿಂದ ಪಾರಾಗಬಹುದು

Update: 2019-11-25 14:33 GMT
ಸಾಂದರ್ಭಿಕ ಚಿತ್ರ

ತಲೆಗೆ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡುವುದು ತಲೆನೋವನ್ನು ಶಮನಗೊಳಿಸುತ್ತದೆ,  ಒತ್ತಡವನ್ನು ತಗ್ಗಿಸುತ್ತದೆ ಮತ್ತು ದಣಿವಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ದಿನವಿಡೀ ದೈಹಿಕ ಚಟುವಟಿಕೆಗಳು ಮತ್ತು ಕೆಲಸದ ಒತ್ತಡ ಕಾಲುಗಳಲ್ಲಿ ಸೆಳೆತ ಮತ್ತು ನೋವನ್ನುಂಟು ಮಾಡುತ್ತವೆ. ಪಾದಗಳಿಗೆ ಮಸಾಜ್ ಮಾಡುವುದು ಈ ನೋವಿನಿಂದ ಪಾರಾಗಲು ಅತ್ಯಂತ ಸರಳ ಉಪಾಯವಾಗಿದೆ. ಪಾದಗಳ ಮಸಾಜ್ ನೆಮ್ಮದಿ ನೀಡುವುದು ಮಾತ್ರವಲ್ಲ,ಇತರ ಆರೋಗ್ಯ ಸಮಸ್ಯೆಗಳಿಂದ ಪಾರಾಗಲೂ ನೆರವಾಗುತ್ತದೆ. ಪ್ರತಿ ದಿನ ರಾತ್ರಿ ಮಲಗುವ ಮುನ್ನ 10-15 ನಿಮಿಷಗಳ ಕಾಲ ಪಾದಗಳಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆಯು ಉತ್ತಮಗೊಳ್ಳಲು ನೆರವಾಗುತ್ತದೆ. ಈ ಸರಳ ಮಸಾಜ್‌ನ ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ......

► ಕಡಿಮೆ ರಕ್ತದೊತ್ತಡ ಸಮಸ್ಯೆ

ನಮ್ಮ ಶರೀರವು ಸುಗಮವಾಗಿ ಕಾರ್ಯ ನಿರ್ವಹಿಸಲು ನೀರಿನ ಅಂಶದ ಕೊರತೆಯಾಗದಿರುವುದು ಮುಖ್ಯವಾಗಿದೆ. ಶರೀರವು ಬಹುಬೇಗ ನಿರ್ಜಲೀಕರಣಗೊಳ್ಳುವವರಲ್ಲಿ ನೀವು ಒಬ್ಬರಾಗಿದ್ದರೆ ನಿಮ್ಮ ರಕ್ತದೊತ್ತಡದ ಕಡೆಗೂ ಗಮನವಿರಿಸಿ. ಕಾರಣಗಳು ಮತ್ತು ಇತರ ಅಂಶಗಳನ್ನು ಆಧರಿಸಿ ರಕ್ತದೊತ್ತಡವನ್ನು ವಿವಿಧ ವರ್ಗಗಳಲ್ಲಿ ವಿಂಗಡಿಸಬಹುದು. ನಿಂತುಕೊಂಡಾಗ ದಿಢೀರನೆ ರಕ್ತದೊತ್ತಡ ಕಡಿಮೆಯಾಗುವುದು,ಊಟದ ಬಳಿಕ,ಮಾನಸಿಕ ಅಥವಾ ಮಿದುಳು ರೋಗದಿಂದ ಅಥವಾ ನರಮಂಡಳಕ್ಕೆ ಉಂಟಾಗಿರುವ ಹಾನಿಯಿಂದ ರಕ್ತದೊತ್ತಡ ಕುಸಿಯುವುದು ಇವು ಇಂತಹ ಅಂಶಗಳಲ್ಲಿ ಸೇರಿವೆ. ನಿಮ್ಮ ರಕ್ತದೊತ್ತಡವು ಕಡಿಮೆಯಾಗಿದ್ದರೆ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಇದು ಶರೀರದಲ್ಲಿ ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಸುಖನಿದ್ರೆಯನ್ನು ನೀಡುತ್ತದೆ.

► ಪಿಎಂಎಸ್ ಸಮಯದಲ್ಲಿ

ಪಿಎಂಎಸ್ ಸಿಂಡ್ರೋಮ್ ಅಥವಾ ಮುಟ್ಟಿನ ಮುಂಚಿನ ದಿನಗಳಲ್ಲಿಯ ಸಂಕಟ ಅದನ್ನು ಅನುಭವಿಸುವ ಮಹಿಳೆಯರಿಗೇ ಗೊತ್ತು. ಈ ಸಮಯದಲ್ಲಿ ಸಿಡುಕುತನ ಹೆಚ್ಚುತ್ತದೆ,ಸರಿಯಾಗಿ ನಿದ್ರೆ ಬರುವುದಿಲ್ಲ,ಜೊತೆಗೆ ಪ್ರಾಣವನ್ನು ಹಿಂಡುವ ನೋವು ಕಾಡುತ್ತಿರುತ್ತದೆ. ಯಾವುದೇ ಔಷಧಿಯು ಇದನ್ನು ಪರಿಣಾಮಕಾರಿಯಾಗಿ ಶಮನಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಪಾದಗಳ ಮಸಾಜ್ ಮಾಡಿದರೆ ಎಲ್ಲ ಚಿಂತೆಗಳು ಮತ್ತು ನೋವು ದೂರವಾಗುತ್ತವೆ.

► ರಕ್ತ ಪರಿಚಲನೆಗೆ

ಶರೀರದ ಅಂಗಾಂಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆ ಹಾಗೂ ಶರೀರದಲ್ಲಿಯ ವಿಷವಸ್ತುಗಳ ನಿವಾರಣೆ ರಕ್ತದ ಪ್ರಮುಖ ಕಾರ್ಯವಾಗಿದೆ. ಮಲಗುವ ಮುನ್ನ ಕೆಲ ನಿಮಿಷಗಳ ಕಾಲ ಪಾದಗಳಿಗೆ ಮಸಾಜ್ ಮಾಡುವುದರಿಂದ ಕ್ಷಣಮಾತ್ರದಲ್ಲಿ ಒತ್ತಡದಿಂದ ಮುಕ್ತಿಯನ್ನು ಪಡೆಯಬಹುದು. ಇದು ನಿರಾಳತೆಯನ್ನುಂಟು ಮಾಡುವುದು ಮಾತ್ರವಲ್ಲ,ಚೆನ್ನಾಗಿ ನಿದ್ರೆಯನ್ನೂ ನೀಡುತ್ತದೆ. ಜೊತೆಗೆ ಸೂಕ್ತ ರಕ್ತ ಪರಿಚಲನೆಯು ಸ್ನಾಯುಗಳ ಸೆಳೆತಗಳು ಮತ್ತು ಬಳಲಿಕೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಪಾದಗಳಿಗೆ ಮಸಾಜ್ ಮಾಡುವುದು ಹೇಗೆ?

ಯಾವುದೇ ಮಸಾಜ್ ಎಣ್ಣೆಯನ್ನು ಅಂಗೈಯಲ್ಲಿ ಹಾಕಿಕೊಂಡು ಹಲವಾರು ನಿಮಿಷಗಳ ಕಾಲ ಪಾದಗಳಿಗೆ ಸರಿಯಾಗಿ ತಿಕ್ಕಿರಿ. ಬಳಿಕ ಬೆರಳುಗಳಿಂದ ಕಣಕಾಲಿನವರೆಗೆ ಮೃದುವಾಗಿ,ಆದರೆ ದೃಢವಾಗಿ ತಟ್ಟಿ. ಅಂತಿಮವಾಗಿ ಕಾಲುಗಳ ಕೆಳಭಾಗಕ್ಕೂ ಮಸಾಜ್ ನೀಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News