ಶ್ವಾಸಕೋಶ ಕ್ಯಾನ್ಸರ್‌ನ ಈ ಎಂಟು ಲಕ್ಷಣಗಳು ನಿಮಗೆ ತಿಳಿದಿರಲಿ

Update: 2019-11-27 13:06 GMT

ಭಾರತದಲ್ಲಿ ಹೊಸದಾಗಿ ವರದಿಯಾಗುವ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.6.9ರಷ್ಟು ಪ್ರಕರಣಗಳು ಶ್ವಾಸಕೋಶದ್ದಾಗಿರುತ್ತವೆ. ಈ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಲ್ಲಿ ಲಕ್ಷಣಗಳು ನಂತರದ ಹಂತಗಳಲ್ಲಿ ಮಾತ್ರ ಪ್ರಕಟಗೊಳ್ಳುತ್ತವೆ. ದುರದೃಷ್ಟವಶಾತ್ ಎಷ್ಟೋ ಜನರಲ್ಲಿ ಸುದೀರ್ಘ ಕಾಲ ರೋಗವು ಪತ್ತೆಯಾಗುವುದೇ ಇಲ್ಲ. ಶ್ವಾಸಕೋಶ ಕ್ಯಾನ್ಸರ್‌ನ ಲಕ್ಷಣಗಳು ಕ್ಷಯ,ನ್ಯುಮೋನಿಯಾ,ಅಲರ್ಜಿ ಮತ್ತು ಶೀತದಂತಹ ಇತರ ರೋಗಗಳ ಲಕ್ಷಣಗಳನ್ನೇ ಹೋಲುವುದು ಇದಕ್ಕೆ ಕಾರಣ. ಶ್ವಾಸಕೋಶ ಕ್ಯಾನ್ಸರ್‌ನ ಕೆಲವು ಲಕ್ಷಣಗಳು ಶ್ವಾಸಕೋಶಗಳು ಅಥವಾ ಉಸಿರಾಟಕ್ಕೆ ಸಂಬಂಧಿಸಿದಂತೆ ಕಾಣುವುದೂ ಇಲ್ಲ.

 ಎಂಟು ಪ್ರಮುಖ ಲಕ್ಷಣಗಳ ಕುರಿತು ಮಾಹಿತಿಯಲ್ಲಿದೆ. ಇವುಗಳಲ್ಲಿ ಯಾವುದೇ ಒಂದು ಲಕ್ಷಣ ಕಂಡು ಬಂದರೂ ಶಂಕೆಯನ್ನು ನಿವಾರಿಸಿಕೊಳ್ಳಲು ತಜ್ಞವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

► ನಿಲ್ಲದ ಅಥವಾ ದಿನೇ ದಿನೇ ತೀವ್ರಗೊಳ್ಳುತ್ತಿರುವ ಕೆಮ್ಮು

ಹೊಸದಾಗಿ ಕೆಮ್ಮು ಆರಂಭಗೊಂಡಿದೆ ಮತ್ತು ಔಷಧಿಗಳನ್ನು ಸೇವಿಸಿದರೂ ನಿಲ್ಲುತ್ತಿಲ್ಲ ಎಂದಿದ್ದರೆ ಕಾಳಜಿ ವಹಿಸಿ. ಇದು ಶ್ವಾಸಕೋಶ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಒಣ ಕೆಮ್ಮು ಇರಬಹುದು ಅಥವಾ ಕಫದೊಂದಿಗಿನ ಕೆಮ್ಮು ಇರಬಹುದು, ಎಡೆಬಿಡದೆ ಕಾಡುತ್ತಿದ್ದರೆ ಅದನ್ನು ಕಡೆಗಣಿಸಬೇಡಿ.

► ಕೆಮ್ಮಿನೊಂದಿಗೆ ರಕ್ತ ಅಥವಾ ತುಕ್ಕಿನ ಬಣ್ಣದ ಉಗುಳು ಅಥವಾ ಕಫ ಬರುತ್ತಿದ್ದರೆ

ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತದೆ. ಅಲ್ಪಪ್ರಮಾಣದ ರಕ್ತವು ಉಗುಳಿಗೆ ತುಕ್ಕಿನ ಬಣ್ಣ ನೀಡಿದ್ದರೆ ಅಥವಾ ಕೆಮ್ಮಿದಾಗ ರಕ್ತ ಬರುತ್ತಿದ್ದರೆ ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ.

► ಉಸಿರಾಟದ ತೊಂದರೆ

ಉಸಿರಾಟದ ತೊಂದರೆಯ ಅನುಭವವಾದರೆ ಅಥವಾ ಮನೆ ಅಥವಾ ಕಚೇರಿಯಲ್ಲಿ ಮಾಮೂಲಾಗಿ ಮೆಟ್ಟಿಲುಗಳನ್ನು ಹತ್ತುವಾಗ ಏದುಸಿರು ಬರುತ್ತಿದ್ದರೆ ವೈದ್ಯರ ಸಲಹೆ ಪಡೆಯಿರಿ. ಶ್ವಾಸಕೋಶ ಕ್ಯಾನ್ಸರ್ ಶ್ವಾಸನಾಳವನ್ನು ಸಂಕುಚಿತಗೊಳಿಸುವ ಮೂಲಕ ಅಥವಾ ಶ್ವಾಸಕೋಶದ ಹೊರಗೆ ದ್ರವವನ್ನು ಉತ್ಪಾದಿಸಿ ಅದು ಶ್ವಾಸಕೋಶಗಳನ್ನು ಆವರಿಸಿಕೊಳ್ಳುವಂತೆ ಮಾಡುವ ಮೂಲಕ ಉಸಿರಾಟವನ್ನು ಕಷ್ಟವಾಗಿಸುತ್ತದೆ.

► ಎದೆ ನೋವು

ಆಳವಾಗಿ ಉಸಿರಾಡಿದಾಗ,ಕೆಮ್ಮುವಾಗ ಅಥವಾ ನಗೆಯಾಡುವಾಗ ಎದೆ ನೋಯುತ್ತಿದ್ದರೆ ಎಚ್ಚರಿಕೆ ಅಗತ್ಯ. ಶ್ವಾಸಕೋಶದ ಟ್ಯೂಮರ್ ತನ್ನ ಗಾತ್ರದಿಂದಾಗಿ ಅಥವಾ ಸುತ್ತಲಿನ ಶ್ವಾಸಕೋಶದ ಭಿತ್ತಿಗಳನ್ನು ಅಥವಾ ಪಕ್ಕೆಲಬುಗಳನ್ನು ಆಕ್ರಮಿಸಿಕೊಂಡು ಎದೆನೋವಿಗೆ ಅಥವಾ ಬೆನ್ನುನೋವಿಗೂ ಕಾರಣವಾಗುತ್ತದೆ.

► ತೂಕದಲ್ಲಿ ಇಳಿಕೆ,ಹಸಿವು ಕ್ಷೀಣ

ಕಾರಣವಿಲ್ಲದೆ ದೇಹತೂಕದಲ್ಲಿ ಇಳಿಕೆ ಮತ್ತು ಹಸಿವು ಕ್ಷೀಣಗೊಳ್ಳುವುದಕ್ಕೆ ನಿಮ್ಮ ಶರೀರದಲ್ಲಿ ಆಗಿರುವ ಬದಲಾವಣೆ ಕಾರಣವಾಗಿರಬಹುದು. ದೇಹತೂಕವನ್ನು ಇಳಿಸಲು ನೀವು ಯಾವುದೇ ಪ್ರಯತ್ನವನ್ನು ಮಾಡಿರದಿದ್ದರೂ ಇಂತಹ ಯಾವುದೇ ಬದಲಾವಣೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

► ಧ್ವನಿಯಲ್ಲಿ ಕರ್ಕಶತೆ

ಧ್ವನಿಯಲ್ಲಿ ದಿಢೀರ್ ಬದಲಾವಣೆಯಾದರೆ,ಅದು ಕರ್ಕಶಗೊಂಡಿದ್ದರೆ ಖಂಡಿತ ಕಡೆಗಣಿಸಕೂಡದು. ಶ್ವಾಸಕೋಶದ ಕ್ಯಾನ್ಸರ್ ಇದ್ದಾಗ ಟ್ಯೂಮರ್ ಅಥವಾ ದುಗ್ಧಗ್ರಂಥಿಗಳು ಧ್ವನಿಪೆಟ್ಟಿಗೆಯನ್ನು ನಿಯಂತ್ರಿಸುವ ನರಕ್ಕೆ ವ್ಯತ್ಯಯವನ್ನುಂಟು ಮಾಡುವುದು ಧ್ವನಿಯನ್ನು ಕರ್ಕಶಗೊಳಿಸುತ್ತದೆ.

► ಪದೇ ಪದೇ ಎದೆ ಸೋಂಕುಗಳು

ಇತ್ತೀಚಿಗೆ ನ್ಯುಮೋನಿಯಾ ಅಥವಾ ಬ್ರಾಂಕೈಟಿಸ್‌ನಂತಹ ಶ್ವಾಸನಾಳ ಸೋಂಕುಗಳು ಪದೇ ಪದೇ ಬಾಧಿಸುತ್ತಿದ್ದರೆ ಅದು ಶ್ವಾಸಕೋಶ ಕ್ಯಾನ್ಸರ್‌ನ್ನು ಸೂಚಿಸಬಹುದು,ಇದಕ್ಕಾಗಿ ಸೂಕ್ತ ವೈದ್ಯಕೀಯ ತಪಾಸಣೆ ಅಗತ್ಯವಾಗುತ್ತದೆ. ಚಿಕಿತ್ಸೆಯ ಬಳಿಕವೂ ನ್ಯುಮೋನಿಯಾ ಗುಣವಾಗದಿದ್ದರೆ ಅದಕ್ಕೆ ಒಳಗೆ ಕಾಡುತ್ತಿರುವ ಶ್ವಾಸಕೋಶ ಕ್ಯಾನ್ಸರ್ ಕಾರಣವಾಗಿರಬಹುದು.

► ಬಳಲಿಕೆ ಮತ್ತು ನಿಶ್ಶಕ್ತಿ

ಯಾವುದೇ ದೈಹಿಕ ಚಟುವಟಿಕೆಗಳು ಇಲ್ಲದಿದ್ದಾಗಲೂ ಬಳಲಿಕೆ ಮತ್ತು ನಿಶ್ಶಕ್ತಿ ಕಾಣಿಸಿಕೊಳ್ಳುತ್ತಿದ್ದರೆ ಕೆಲವೊಮ್ಮೆ ಅದು ಶ್ವಾಸಕೋಶ ಕ್ಯಾನ್ಸರ್ ಅಥವಾ ಇತರ ಯಾವುದಾದರೂ ಕ್ಯಾನ್ಸರ್‌ನ್ನು ಸೂಚಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News