ಏನಿದು ಇಲೆಕ್ಟ್ರೋಲೈಟ್ ಡಿಸಾರ್ಡರ್?: ಇಲ್ಲಿವೆ ಕಾರಣಗಳು ಮತ್ತು ಲಕ್ಷಣಗಳು

Update: 2019-11-28 14:53 GMT

ಇಲೆಕ್ಟ್ರೋಲೈಟ್ ಅಥವಾ ವಿದ್ಯುದ್ವಿಚ್ಛೇದ್ಯಗಳು ನಮ್ಮ ಶರೀರದಲ್ಲಿರುವ ಪೋಷಕಾಂಶಗಳಾಗಿದ್ದು ನರಗಳು ಮತ್ತು ಸ್ನಾಯುಗಳ ಕಾಯ ನಿರ್ವಹಣೆ,ರಕ್ತ ಆಮ್ಲೀಯತೆಯ ಸಮತೋಲನ,ಶರೀರದ ಜಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುವ ಜೊತೆಗೆ ಹಾನಿಗೀಡಾದ ಅಂಗಾಂಶಗಳ ಪುನರ್‌ನಿರ್ಮಾಣಕ್ಕೆ ನೆರವಾಗುತ್ತವೆ.

ವಿದ್ಯುದ್ವಿಚ್ಛೇದ್ಯಗಳು ರಕ್ತ,ಮೂತ್ರ ಮತ್ತು ಶರೀರದಲ್ಲಿಯ ದ್ರವಗಳಲ್ಲಿ ಇರುತ್ತವೆ. ಆದರೆ ಕೆಲವೊಮ್ಮೆ ವಿದ್ಯುದ್ವಿಚ್ಛೇದ್ಯಗಳ ಅಸಮತೋಲನವು ಇಲೆಕ್ಟ್ರೋಲೈಟ್ ಡಿಸಾರ್ಡರ್ ಅಥವಾ ವಿದ್ಯುದ್ವಿಚ್ಛೇದ್ಯಅಸ್ವಸ್ಥತೆಗಳಿಗೆ ಕಾರಣವಾಗುತ್ತವೆ.

ಸೋಡಿಯಂ,ಕ್ಯಾಲ್ಸಿಯಂ,ಕ್ಲೋರೈಡ್,ಫಾಸ್ಫೇಟ್,ಪೊಟ್ಯಾಷಿಯಂ ಮತ್ತು ಮ್ಯಾಗ್ನಿಷಿಯಂ ನಮ್ಮ ಶರೀರದಲ್ಲಿರುವ ವಿದ್ಯುದ್ವಿಚ್ಛೇದ್ಯಗಳಾಗಿವೆ. ಶರೀರವು ಸರಿಯಾಗಿ ಕಾರ್ಯನಿರ್ವಹಿಸಲು ಈ ವಿದ್ಯುದ್ವಿಚ್ಛೇದ್ಯಗಳ ಮಟ್ಟ ಸ್ಥಿರವಾಗಿರುವುದು ಅಗತ್ಯವಾಗಿದೆ. ವಿದ್ಯುದ್ವಿಚ್ಛೇದ್ಯಗಳ ಮಟ್ಟ ಅತ್ಯಂತ ಹೆಚ್ಚು ಅಥವಾ ಅತ್ಯಂತ ಕಡಿಮೆ ಆಗಿದ್ದಾಗ ವಿದ್ಯುದ್ವಿಚ್ಛೇದ್ಯಅಸ್ವಸ್ಥತೆ ಉಂಟಾಗುತ್ತದೆ.

ಉದಾಹರಣೆಗೆ ಶರೀರದಲ್ಲಿಯ ಸ್ನಾಯುಗಳು ಸಂಕುಚಿತಗೊಳ್ಳಲು ಪೊಟ್ಯಾಷಿಯಂ,ಕ್ಯಾಲ್ಸಿಯಂ ಮತ್ತು ಸೋಡಿಯಂ ಅಗತ್ಯವಾಗಿವೆ. ಈ ವಿದ್ಯುದ್ವಿಚ್ಛೇದ್ಯಗಳ ಅಸಮತೋಲನವಿದ್ದಾಗ ಸ್ನಾಯುಗಳು ದುರ್ಬಲಗೊಳ್ಳುತ್ತವೆ ಅಥವಾ ಸ್ನಾಯುಗಳ ಅತಿಯಾದ ಸಂಕುಚನ ಉಂಟಾಗುತ್ತದೆ. ಅತಿಸಾರ,ವಾಂತಿ ಅಥವಾ ವ್ಯಾಯಾಮದ ವೇಳೆ ಬೆವರುವಿಕೆಯಂತಹ ವಿವಿಧ ಕಾರಣಗಳಿಂದಾಗಿ ವಿದ್ಯುದ್ವಿಚ್ಛೇದ್ಯಗಳಲ್ಲಿ ಅಸಮತೋಲನವುಂಟಾಗುತ್ತದೆ. ಕೆಲವೊಮ್ಮೆ ಇದು ಕೋಮಾ,ಸೆಳೆತ ಮತ್ತು ಹೃದಯ ಸ್ತಂಭನದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಲೆಕ್ಟ್ರೋಲೈಟ್ ಡಿಸಾರ್ಡರ್‌ನ ನಿರ್ದಿಷ್ಟ ವಿಧವನ್ನು ಅವಲಂಬಿಸಿ ನಿಖರ ಕಾರಣವು ವಿಭಿನ್ನವಾಗಿರಬಹುದು.

► ಇಲೆಕ್ಟ್ರೋಲೈಟ್ ಡಿಸಾರ್ಡರ್‌ನಲ್ಲಿ ವಿಧಗಳು

ಕ್ಯಾಲ್ಸಿಯಂ:ಹೈಪರ್‌ಕ್ಯಾಲ್ಸಿಮಿಯಾ ಮತ್ತು ಹೈಪೊಕ್ಯಾಲ್ಸಿಮಿಯಾ

ಮ್ಯಾಗ್ನೀಷಿಯಂ:ಹೈಪರ್‌ಮ್ಯಾಗ್ನಿಸಿಮಿಯಾ ಮತ್ತು ಹೈಪೊಮ್ಯಾಗ್ನಿಸಿಮಿಯಾ

ಪೊಟ್ಯಾಷಿಯಂ:ಹೈಪರ್‌ಕಲೆಮಿಯಾ ಮತ್ತು ಹೈಪೊಕಲೆಮಿಯಾ

ಕ್ಲೋರೈಡ್:ಹೈಪರ್‌ಕ್ಲೋರೆಮಿಯಾ ಮತ್ತು ಹೈಪೊಕ್ಲೋರೆಮಿಯಾ

ಫಾಸ್ಫೇಟ್:ಹೈಪರ್‌ಫಾಸ್ಫೇಟಿಮಿಯಾ ಮತ್ತು ಹೈಪೊಫಾಸ್ಫೇಟಿಮಿಯಾ

ಸೋಡಿಯಂ:ಹೈಪರ್‌ನೇಟ್ರಿಮಿಯಾ ಮತ್ತು ಹೈಪೊನೇಟ್ರಿಮಿಯಾ

(ಹೈಪರ್ ಆಯಾ ವಿದುದ್ವಿಚ್ಛೇದದ ಹೆಚ್ಚಿನ ಮಟ್ಟವನ್ನು ಮತ್ತು ಹೈಪೊ ಕಡಿಮೆ ಮಟ್ಟವನ್ನು ಸೂಚಿಸುತ್ತದೆ)

► ಇಲೆಕ್ಟ್ರೋಲೈಟ್ ಡಿಸಾರ್ಡರ್‌ನ ಲಕ್ಷಣಗಳು

ವೇಗವಾದ ಹೃದಯಬಡಿತ, ಬಳಲಿಕೆ, ವಾಕರಿಕೆ, ವಾಂತಿ, ಅತಿಸಾರ, ಅನಿಯಮಿತ ಹೃದಯಬಡಿತ, ಹೊಟ್ಟೆನೋವು, ಕೆರಳುವಿಕೆ ಅಥವಾ ಕಿರಿಕಿರಿಯಾಗುವುದು, ಸ್ನಾಯು ನಿಶ್ಶಕ್ತಿ, ಸ್ನಾಯು ನೋವು, ಸೆಳವುಗಳು, ತಲೆನೋವು, ಮರಗಟ್ಟುವಿಕೆ ಮತ್ತು ಗೊಂದಲ ಇವು ಇಲೆಕ್ಟ್ರೋಲೈಟ್ ಡಿಸಾರ್ಡರ್‌ನ ಲಕ್ಷಣಗಳಾಗಿವೆ.

► ಅಪಾಯಗಳು

ವಿದ್ಯುದ್ವಿಚ್ಛೇದ್ಯ ಅಸ್ವಸ್ಥತೆಯು ಮೂತ್ರಪಿಂಡ ರೋಗಗಳು,ಥೈರಾಯ್ಡ್ ಕಾಯಿಲೆ,ಅಡ್ರನಲ್ ಗ್ರಂಥಿ ಕಾಯಿಲೆ,ಮದ್ಯಪಾನದಿಂದ ಸ್ವಸ್ಥತೆ,ರಕ್ತ ಕಟ್ಟಿ ಹೃದಯ ಸ್ತಂಭನ,ಲಿವರ್ ಸಿರೊಸಿಸ್ ಇತ್ಯಾದಿ ಅಪಾಯಗಳನ್ನುಂಟು ಮಾಡಬಲ್ಲದು.

► ಇಲೆಕ್ಟ್ರೋಲೈಟ್ ಡಿಸಾರ್ಡರ್‌ನ್ನು ತಡೆಯುವುದು ಹೇಗೆ?

ದೀರ್ಘ ಸಮಯದಿಂದ ಅತಿಸಾರ, ವಾಂತಿ ಮತ್ತು ಬೆವರುವಿಕೆಯನ್ನು ಅನುಭವಿಸಿದ್ದರೆ ಹೆಚ್ಚೆಚ್ಚು ದ್ರವಗಳನ್ನು ಸೇವಿಸುತ್ತಿರಬೇಕು. ಅಗತ್ಯ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಸಮೃದ್ಧವಾಗಿ ಹೊಂದಿರುವ ಆಹಾರಗಳ ಸೇವನೆಯು ಮುಖ್ಯ. ವ್ಯಾಯಾಮದ ನಂತರ ಹಿತವಾದ ಪ್ರಮಾಣದಲ್ಲಿ ಸ್ಪೋರ್ಟ್ಸ್ ಡ್ರಿಂಕ್‌ನ್ನು ಸೇವಿಸಿದರೆ ಅದು ಬೆವರಿನ ಮೂಲಕ ನಷ್ಟವಾಗಿರುವ ವಿದ್ಯುದ್ವಿಚ್ಛೇದ್ಯಗಳ ಭರ್ತಿಗೆ ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News