ಏನಿದು ಸೆಪ್ಸಿಸ್?: ಕಾರಣಗಳು ಮತ್ತು ಲಕ್ಷಣಗಳು ಇಲ್ಲಿವೆ

Update: 2019-12-05 14:44 GMT

ನೀವು ಅತಿಯಾಗಿ ಬೆವರುತ್ತೀರಾ?, ನೀವು ಆಗಾಗ್ಗೆ ಜ್ವರದಿಂದ ಬಳಲುತ್ತೀರಾ?, ಉಸಿರಾಟ ಕ್ಷಿಪ್ರವಾಗುತ್ತಿದೆಯೇ? ಈ ಲಕ್ಷಣಗಳು ಸೆಪ್ಸಿಸ್‌ನ್ನು ಸೂಚಿಸಬಹುದು. ಕನ್ನಡದಲ್ಲಿ ತೀವ್ರ ನಂಜು ಎಂದು ಹೇಳಬಹುದಾದ ಸೆಪ್ಸಿಸ್ ಶರೀರದ ರೋಗ ನಿರೋಧಕ ವ್ಯವಸ್ಥೆಯು ದುರ್ಬಲಗೊಂಡು ಉಂಟಾಗುವ ಅಪಾಯಕಾರಿ ಸ್ಥಿತಿಯಾಗಿದೆ.

ಯಾವುದೇ ಸೋಂಕು ಉಂಟಾದಾಗ ಸಾಮಾನ್ಯವಾಗಿ ರೋಗ ನಿರೋಧಕ ವ್ಯವಸ್ಥೆಯು ರೋಗಕಾರಕಗಳನ್ನು ಕೊಲ್ಲಲು ರಾಸಾಯನಿಕಗಳನ್ನು ರಕ್ತದಲ್ಲಿ ಬಿಡುಗಡೆಗೊಳಿಸುತ್ತದೆ. ಆದರೆ ಸೆಪ್ಸಿಸ್‌ನಲ್ಲಿ ಈ ಪ್ರತಿವರ್ತನೆಯು ಸಮತೋಲನವನ್ನು ಕಳೆದುಕೊಳ್ಳುತ್ತದೆ ಮತ್ತು ಬದಲಾವಣೆಗಳಿಗೆ ಕಾರಣವಾಗಿ ಹಲವಾರು ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುವ ಸಾಧ್ಯತೆಯಿರುತ್ತದೆ.

ಕಾರಣಗಳು: ಸೋಂಕು ಸೆಪ್ಸಿಸ್‌ಗೆ ಕಾರಣವಾಗುತ್ತದೆ. ಮೂತ್ರಪಿಂಡ ಸೋಂಕು,ಹೊಟ್ಟೆಯ ಸೋಂಕು, ನ್ಯುಮೋನಿಯಾ, ರಕ್ತದಲ್ಲಿ ಸೋಂಕು ಇವುಗಳಿಂದ ವ್ಯಕ್ತಿಯು ಬಳಲುತ್ತಿರುವಾಗ ಸೆಪ್ಸಿಸ್ ಉಂಟಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ.

ಲಕ್ಷಣಗಳು: ಅತಿಯಾದ ಜ್ವರ,ಹೊಟ್ಟೆಯ ಭಾಗದಲ್ಲಿ ಅತಿಯಾಗಿ ಬೆವರುವಿಕೆ,ತಲೆ ಸುತ್ತುವಿಕೆ,ಅತಿಸಾರ,ಮಾತನಾಡಲು ಕಷ್ಟ,ಉಸಿರಾಟದ ತೊಂದರೆ ಇವು ಸೆಪ್ಸಿಸ್‌ನ ವಿಶಿಷ್ಟ ಲಕ್ಷಣಗಳಾಗಿವೆ.

ಪ್ರಜ್ಞಾಶೂನ್ಯತೆ,ಉಸಿರಾಟಕ್ಕೆ ಸಮಸ್ಯೆ,ಬಳಲಿಕೆ ಅಥವಾ ಅತಿಯಾದ ನಿಶ್ಶಕ್ತಿ,ಶರೀರದ ತಾಪಮಾನ ಕಡಿಮೆಯಾಗಿ ನಡುಕ,ಕಡಿಮೆ ಮೂತ್ರ ವಿಸರ್ಜನೆ,ಚರ್ಮದ ಬಣ್ಣ ಕಳೆದುಕೊಳ್ಳುವಿಕೆ,ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಸಿತ,ಹೃದಯದ ಕಾರ್ಯಗಳಲ್ಲಿ ಏರುಪೇರು ಇವು ಸೆಪ್ಸಿಸ್‌ನ ಇತರ ಲಕ್ಷಣಗಳಲ್ಲಿ ಸೇರಿವೆ.

 ಸೆಪ್ಸಿಸ್ ಯಾವುದೇ ವಯಸ್ಸಿನ ಜನರನ್ನು ಬಾಧಿಸುತ್ತದೆ,ಆದರೆ ಹಿರಿಯ ನಾಗರಿಕರು,ಗರ್ಭಿಣಿಯರು,ದುರ್ಬಲ ರೋಗ ನಿರೋಧಕ ವ್ಯವಸ್ಥೆ ಹೊಂದಿದವರು ಮತ್ತು ಒಂದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ನ್ಯುಮೋನಿಯಾ, ಜೀರ್ಣಾಂಗ ಸೋಂಕು, ಮೂತ್ರಪಿಂಡ ಸೋಂಕು ಅಥವಾ ರಕ್ತದಲ್ಲಿ ಸೋಂಕು ಸೇರಿದಂತೆ ಯಾವುದೇ ವಿಧದ ಸೋಂಕು ವೈರಸ್ ,ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಸೋಂಕು ಸೆಪ್ಸಿಸ್‌ಗೆ ಕಾರಣವಾಗುತ್ತದೆ. ವ್ಯಕ್ತಿಯು ಇಂತಹ ಸೋಂಕಿಗೊಳಗಾಗಿದ್ದರೆ ಮತ್ತು ಮೇಲಿನ ಲಕ್ಷಣಗಳು ಕಾಣಿಸಿಕೊಂಡಿದ್ದರೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ರೋಗವನ್ನು ತಡೆಯಬಹುದು.

ಸದಾ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಇದರಿಂದ ಆ್ಯಂಟಿ ಬಯಾಟಿಕ್ ಪ್ರತಿರೋಧಿ ಸೂಕ್ಷ್ಮಜೀವಿಗಳು ಮತ್ತು ಸೋಂಕು ನಮ್ಮ ಶರೀರವನ್ನು ಪ್ರವೇಶಿಸುವುದನ್ನು ತಡೆಯಬಹುದು. ಸಣ್ಣ ಗಾಯವೂ ಸೋಂಕು ಮತ್ತು ಸೆಪ್ಸಿಸ್‌ಗೆ ಕಾರಣವಾಗಬಲ್ಲದು. ಹೀಗಾಗಿ ಗಾಯಗಳನ್ನು ಮುಕ್ತವಾಗಿ ಬಿಡಬಾರದು ಮತ್ತು ಅವುಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಪ್ರೊಬಯಾಟಿಕ್ಸ್ ಅಥವಾ ಮಾನವಸ್ನೇಹಿ ಬ್ಯಾಕ್ಟೀರಿಯಾಗಳನ್ನೊಳಗೊಂಡ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಇದು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನ ವರ್ಧಿಸುತ್ತದೆ ಮತ್ತು ಆಕ್ರಮಣಕಾರಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಟಕ್ಕೆ ನೆರವಾಗುತ್ತದೆ. ಸತುವು ಮತ್ತು ಸೆಲೆನಿಯಂ ಅನ್ನು ಒಳಗೊಂಡ ಆಹಾರದ ಸೇವನೆ ಒಳ್ಳೆಯದು. ಮಾಂಸ,ಮೊಟ್ಟೆ ಮತ್ತು ಅಣಬೆಯಂತಹ ಈ ಆಹಾರಗಳು ಸೆಪ್ಸಿಸ್‌ನ ತಡೆ ಮತ್ತು ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕಿತ್ತಳೆ,ಬ್ರಾಕೊಲಿ,ಶುಂಠಿ,ಬದಾಮಿಯಂತಹ ಆಹಾರಗಳ ಸೇವನೆಯು ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ ಮತ್ತು ಸೆಪ್ಸಿಸ್‌ಗೆ ಕಾರಣವಾಗುವ ಸೋಂಕುಗಳನ್ನು ತಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News