ಬಾಯಿ ದುರ್ವಾಸನೆಗೆ ಕಾರಣಗಳಿಲ್ಲಿವೆ

Update: 2019-12-06 13:56 GMT

ಹೆಲಿಟಾಸಿಸ್ ಅಥವಾ ದುರ್ಗಂಧ ಶ್ವಾಸವು ಅದನ್ನು ಹೊಂದಿರುವ ವ್ಯಕ್ತಿಗೆ ಮತ್ತು ಇತರರಿಗೆ ಮುಜುಗರವನ್ನುಂಟು ಮಾಡುವ ಜೊತೆಗೆ ಕೆಲವು ಪ್ರಕರಣಗಳಲ್ಲಿ ಆತಂಕಕ್ಕೂ ಕಾರಣವಾಗಬಲ್ಲದು. ಕೆಟ್ಟ ಉಸಿರಿನೊಂದಿಗೆ ಹೋರಾಡಲು ಚ್ಯೂಯಿಂಗ್ ಗಮ್,ಮಿಂಟ್, ಮೌತ್‌ವಾಷ್‌ನಂತಹ ಹಲವಾರು ಉತ್ಪನ್ನಗಳಿವೆ ನಿಜ,ಆದರೆ ಇವೆಲ್ಲ ತಾತ್ಕಾಲಿಕ ಕ್ರಮಗಳಾಗಿವೆಯೇ ಹೊರತು ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವುದಿಲ್ಲ.

ಕೆಲವು ಆಹಾರಗಳು,ಅನಾರೋಗ್ಯ ಮತ್ತು ಚಟಗಳು ದುರ್ಗಂಧ ಶ್ವಾಸವನ್ನುಂಟು ಮಾಡುವ ಕಾರಣಗಳಲ್ಲಿ ಸೇರಿವೆ.

ಲಕ್ಷಣಗಳು

ಕಾರಣವನ್ನು ಅವಲಂಬಿಸಿ ಕೆಟ್ಟ ಉಸಿರಿನ ವಾಸನೆಗಳು ಭಿನ್ನವಾಗಿರುತ್ತವೆ. ಕೆಲವರ ಬಾಯಿ ಸ್ವಲ್ಪವೇ ವಾಸನೆಯನ್ನು ಹೊರಡಿಸುತ್ತಿರಬಹುದು ಅಥವಾ ಕೆಟ್ಟ ವಾಸನೆ ಇಲ್ಲದಿರಬಹುದು,ಆದರೂ ಅತಿಯಾಗಿ ಚಿಂತೆ ಮಾಡುತ್ತಿರುತ್ತಾರೆ. ಹೆಚ್ಚಿನವರಿಗೆ ತಮ್ಮ ಬಾಯಿಯು ದುರ್ವಾಸನೆಯನ್ನು ಬೀರುವುದು ಗೊತ್ತೇ ಇರುವುದಿಲ್ಲ. ಏಕೆಂದರೆ ವ್ಯಕ್ತಿಗೆ ತನ್ನ ಉಸಿರು ಕೆಟ್ಟ ವಾಸನೆ ಬೀರುತ್ತದೆ ಎನ್ನುವುದನ್ನು ಸ್ವಯಂ ಆಗಿ ತಿಳಿದುಕೊಳ್ಳುವುದು ಕಷ್ಟ,ಹೀಗಾಗಿ ಆಪ್ತರನ್ನು ಕೇಳಿ ದುರ್ವಾಸನೆಯಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ವೈದ್ಯರನ್ನು ಯಾವಾಗ ನೋಡಬೇಕು?

ನೀವು ಕೆಟ್ಟ ಉಸಿರು ಹೊಂದಿದ್ದರೆ ಹಲ್ಲು ಮತ್ತು ಬಾಯಿ ಸ್ವಚ್ಛಗೊಳಿಸಿಕೊಳ್ಳುವ ವಿಧಾನವನ್ನು ಪುನರ್‌ಪರಿಶೀಲಿಸಿಕೊಳ್ಳಿ. ಪ್ರತಿ ಬಾರಿ ಆಹಾರ ಸೇವನೆಯ ಬಳಿಕ ಹಲ್ಲುಗಳು ಮತ್ತು ನಾಲಿಗೆಯನ್ನು ಉಜ್ಜಿಕೊಳ್ಳುವುದು,ಡೆಂಟಲ್ ಫ್ಲಾಸ್ ಬಳಕೆ ಮತ್ತು ಯಥೇಚ್ಛ ನೀರಿನ ಸೇವನೆ ಸೇರಿದಂತೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳಿ. ಇಷ್ಟಾದ ಬಳಿಕವೂ ಬಾಯಿಯ ದುರ್ವಾಸನೆ ಹಾಗೆಯೇ ಉಳಿದುಕೊಂಡಿದ್ದರೆ ನಿಮ್ಮ ದಂತವೈದ್ಯರನ್ನು ಭೇಟಿಯಾಗಬೇಕಾಗುತ್ತದೆ. ಗಂಭೀರ ಆರೋಗ್ಯ ಸ್ಥಿತಿಯೊಂದು ಬಾಯಿಯ ದುರ್ವಾಸನೆಗೆ ಕಾರಣವಾಗಿದೆ ಎಂದು ಶಂಕೆಯುಂಟಾದರೆ ಅವರು ಕಾರಣವನ್ನು ಕಂಡುಕೊಳ್ಳಲು ನಿಮ್ಮನ್ನು ತಜ್ಞವೈದ್ಯರ ಬಳಿಗೆ ಕಳುಹಿಸಬಹುದು.

ಕಾರಣಗಳು

ಹೆಚ್ಚಿನ ದುರ್ವಾಸನೆಗಳು ಬಾಯಿಯಿಂದಲೇ ಆರಂಭಗೊಳ್ಳುತ್ತವೆ ಮತ್ತು ಇತರ ಹಲವಾರು ಸಂಭಾವ್ಯ ಕಾರಣಗಳಿವೆ.

 ಆಹಾರ: ಹಲ್ಲುಗಳು ಮತ್ತು ಅವುಗಳ ಸುತ್ತಮುತ್ತ ಆಹಾರ ಕಣಗಳ ವಿಭಜನೆಯು ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ನಾತಕ್ಕೆ ಕಾರಣವಾಗುತ್ತದೆ. ಈರುಳ್ಳಿ,ಬೆಳ್ಳುಳ್ಳಿ,ಸಂಬಾರ ವಸ್ತುಗಳಂತಹ ಆಹಾರಗಳು ಕೆಟ್ಟ ಉಸಿರಿಗೆ ಕಾರಣವಾಗಬಲ್ಲವು. ಈ ಆಹಾರಗಳು ಜೀರ್ಣಗೊಂಡ ಬಳಿಕ ರಕ್ತವನ್ನು ಸೇರಿಕೊಳ್ಳುತ್ತವೆ,ನಂತರ ಶ್ವಾಸಕೋಶಗಳಿಗೆ ರವಾನೆಯಾಗುತ್ತವೆ ಮತ್ತು ಉಸಿರಿಗೆ ಕೆಟ್ಟ ವಾಸನೆಯನ್ನುಂಟು ಮಾಡುತ್ತವೆ.

 ತಂಬಾಕು ಉತ್ಪನ್ನಗಳು: ಧೂಮ್ರಪಾನವು ತನ್ನದೇ ಆದ ಅಹಿತಕರವಾದ ದುರ್ಗಂಧ ಶ್ವಾಸವನ್ನುಂಟು ಮಾಡುತ್ತದೆ. ಧೂಮ್ರಪಾನಿಗಳು ಮತ್ತು ಇತರ ತಂಬಾಕು ಉತ್ಪನ್ನಗಳನ್ನು ತಿನ್ನುವವರು ಕೆಟ್ಟ ಉಸಿರಿಗೆ ಇನ್ನೊಂದು ಕಾರಣವಾಗಿರುವ ವಸಡಿನ ರೋಗಗಳಿಗೆ ಗುರಿಯಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ.

ಬಾಯಿಯ ಅಸ್ವಚ್ಛತೆ: ನೀವು ಪ್ರತಿದಿನ ಹಲ್ಲುಗಳ ಬ್ರಷಿಂಗ್ ಮತ್ತು ಫ್ಲಾಸಿಂಗ್ ಮಾಡದಿದ್ದರೆ ಆಹಾರದ ಕಣಗಳು ಹಲ್ಲುಗಳ ಸಂದುಗಳಲ್ಲಿ ಉಳಿದುಕೊಳ್ಳುತ್ತವೆ ಮತ್ತು ಕೊಳೆತು ದುರ್ವಾಸನೆಗೆ ಕಾರಣವಾಗುತ್ತವೆ. ಬಣ್ಣರಹಿತ ಪಾಚಿಯ ಪೊರೆ ಹಲ್ಲುಗಳನ್ನು ಆವರಿಸಿಕೊಳ್ಳುತ್ತದೆ. ಬ್ರಷ್ ಮಾಡಿ ಈ ಪಾಚಿಯನ್ನು ನಿವಾರಿಸದಿದ್ದರೆ ಅದು ವಸಡುಗಳನ್ನು ಕೆರಳಿಸುತ್ತದೆ ಮತ್ತು ಅಂತಿಮವಾಗಿ ಹಲ್ಲುಗಳು ಮತ್ತು ವಸಡುಗಳ ನಡುವೆ ಇನ್ನಷ್ಟು ಪಾಚಿಯ ಸೃಷ್ಟಿಗೆ ಕಾರಣವಾಗುತ್ತದೆ. ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಲಿಗೆಗೂ ಹರಡುತ್ತವೆ.

ಬಾಯಿಯ ಶುಷ್ಕತೆ

ಜೊಲ್ಲು ಕೆಟ್ಟ ವಾಸನೆಯನ್ನುಂಟು ಮಾಡುವ ಆಹಾರ ಕಣಗಳನ್ನು ನಿವಾರಿಸುವ ಮೂಲಕ ಬಾಯಿಯ ಸ್ವಚ್ಛತೆಗೆ ನೆರವಾಗುತ್ತದೆ. ಜೊಲ್ಲಿನ ಉತ್ಪಾದನೆ ಕಡಿಮೆಯಾದಾಗ ಬಾಯಿ ಒಣಗಿರುತ್ತದೆ ಮತ್ತು ಇದು ದುರ್ವಾಸನೆಗೆ ಕಾರಣವಾಗಬಲ್ಲದು. ಸಾಮಾನ್ಯವಾಗಿ ರಾತ್ರಿ ವೇಳೆ ನಿದ್ರೆಯಲ್ಲಿರುವಾಗ ಬಾಯಿಯು ಒಣಗಿರುತ್ತದೆ ಮತ್ತು ಇದೇ ಕಾರಣದಿಂದ ಹೆಚ್ಚಿನವರಲ್ಲಿ ಬೆಳಿಗ್ಗೆ ಎದ್ದಾಗ ಬಾಯಿ ವಾಸನೆ ಹೊಡೆಯುತ್ತದೆ ಮತ್ತು ಬಾಯಿ ತೆರೆದಿಟ್ಟುಕೊಂಡು ಮಲಗಿದ್ದರೆ ಸ್ಥಿತಿ ಇನ್ನಷ್ಟು ಹದಗೆಟ್ಟಿರುತ್ತದೆ. ದೀರ್ಘ ಕಾಲದಿಂದ ಬಾಯಿ ಒಣಗುತ್ತಿದ್ದರೆ ಜೊಲ್ಲಿನ ಗ್ರಂಥಿಗಳ ಸಮಸ್ಯೆ ಮತ್ತು ಕೆಲವು ರೋಗಗಳು ಅದಕ್ಕೆ ಕಾರಣವಾಗಿರುತ್ತವೆ.

ಔಷಧಿಗಳು: ಕೆಲವು ಔಷಧಿಗಳು ಪರೋಕ್ಷವಾಗಿ ಕೆಟ್ಟ ಉಸಿರಿಗೆ ಕಾರಣವಾಗುತ್ತವೆ. ಕೆಲವು ಔಷಧಿಗಳು ಶರೀರದಲ್ಲಿ ವಿಭಜನೆಗೊಂಡು ರಾಸಾಯನಿಕಗಳನ್ನು ಬಿಡುಗಡೆಗೊಳಿಸುತ್ತವೆ ಮತ್ತು ಇವು ಉಸಿರಿಗೆ ಕೆಟ್ಟ ವಾಸನೆಯನ್ನು ನೀಡಬಲ್ಲವು.

 ಬಾಯಿಯಲ್ಲಿ ಸೋಂಕು: ದಂತಕ್ಷಯ,ವಸಡು ರೋಗ ಅಥವಾ ಬಾಯಿ ಹುಣ್ಣು,ಬಾಯಿಯ ಶಸ್ತ್ರಚಿಕಿತ್ಸೆ ಮೂಲಕ ಹಲ್ಲನ್ನು ತೆಗೆದ ಬಳಿಕ ಉಳಿದುಕೊಂಡ ಗಾಯ ಇವುಗಳೂ ಕೆಟ್ಟ ಉಸಿರನ್ನುಂಟು ಮಾಡುತ್ತವೆ.

ಇತರ ಬಾಯಿ,ಮೂಗು ಮತ್ತು ಗಂಟಲು ಸಮಸ್ಯೆಗಳು: ಕೆಲವೊಮ್ಮೆ ಕೆಟ್ಟ ಉಸಿರಿಗೆ ಟಾನ್ಸಿಲ್‌ಗಳಲ್ಲಿ ರೂಪುಗೊಳ್ಳುವ ಸಣ್ಣ ಕಲ್ಲುಗಳು ಕಾರಣವಾಗುತ್ತವೆ. ಈ ಕಲ್ಲುಗಳು ವಾಸನೆಯನ್ನು ಸೂಸುವ ಬ್ಯಾಕ್ಟೀರಿಯಾಗಳಿಂದ ಆವೃತವಾಗಿರುತ್ತವೆ. ಮೂಗು,ಸೈನಸ್‌ಗಳು ಮತ್ತು ಗಂಟಲಿನಲ್ಲಿಯ ಸೋಂಕುಗಳೂ ಕೆಟ್ಟ ಉಸಿರನ್ನುಂಟು ಮಾಡುತ್ತವೆ.

ಇತರ ಕಾರಣಗಳು: ಕೆಲವು ವಿಧದ ಕ್ಯಾನ್ಸರ್,ಚಯಾಪಚಯ ಸಮಸ್ಯೆಯಂತಹ ಕಾಯಿಲೆಗಳೂ ಕೆಟ್ಟ ಉಸಿರಿಗೆ ಕಾರಣವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News