ನೀವು ಹೇರ್ ಡೈ ಬಳಸುತ್ತೀರಾ?: ಹಾಗಿದ್ದರೆ ಖಂಡಿತ ಇದನ್ನು ಓದಿ

Update: 2019-12-08 17:25 GMT

ಹೇರ್ ಡೈ ಅಥವಾ ಕೂದಲಿನ ಬಣ್ಣವನ್ನು ಪುರುಷರೂ ಬಳಸುತ್ತಾರೆ,ಮಹಿಳೆಯರೂ ಬಳಸುತ್ತಾರೆ. ಈ ಹೇರ್ ಡೈಗಳಲ್ಲಿ ಬಳಸಲಾಗುವ ರಾಸಾಯನಿಕಗಳು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ. ಅಮೋನಿಯಾದ ಜೊತೆಗೆ ಫಾರ್ಮಾಲ್ಡಿಹೈಡ್,ಪಿ-ಫಿನೈಲಿನ್‌ಡೈಅಮೈನ್(ಪಿಪಿಡಿ),ಕೋಲ್ ಟಾರ್, ರೆಸಾರ್ಸಿನಾಲ್ ಮತ್ತು ಯುಜಿನಾಲ್ ಹೇರ್ ಡೈನಲ್ಲಿರುತ್ತವೆ. ಈ ಎಲ್ಲ ರಾಸಾಯನಿಕಗಳು ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳೊಂದಿಗೆ ನಂಟು ಹೊಂದಿವೆ. ಈ ಬಗ್ಗೆ ಮಾಹಿತಿಯಿಲ್ಲಿದೆ......

ಶ್ವಾಸಕೋಶ ಮತ್ತು ಮೂತ್ರಪಿಂಡ ಸಮಸ್ಯೆಗಳು

ಹೇರ್ ಡೈಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಕೆಯಾಗುವ ಪಿಪಿಡಿಯು ಮೂತ್ರಕೋಶ ಕ್ಯಾನ್ಸರ್,ಶ್ವಾಸಕೋಶ ಮತ್ತು ಮೂತ್ರಪಿಂಡ ಸಮಸ್ಯೆಗಳೊಂದಿಗೆ ಗುರುತಿಸಿಕೊಂಡಿದೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಂತೆ ತಿಂಗಳಿಗೊಮ್ಮೆ ಹೇರ್ ಡೈ ಬಳಸುವವರು ಮೂತ್ರಕೋಶ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಎದುರಿಸುತ್ತಿರುತ್ತಾರೆ. ಹೇರ್ ಡೈನ ಬಣ್ಣವು ಕಪ್ಪು ಮತ್ತು ಕಂದು,ಹೀಗೆ ಗಾಢವಾದಷ್ಟೂ ಈ ಅಪಾಯವು ಇನ್ನಷ್ಟು ಹೆಚ್ಚುತ್ತದೆ.

 ಉಸಿರಾಟದ ಸಮಸ್ಯೆಗಳು

 ಹೇರ್ ಡೈನಲ್ಲಿ ಬಳಕೆಯಾಗಿರುವ ಅಮೋನಿಯಾ ಬ್ಲೀಚ್ ಪರಿಣಾಮಕ್ಕಾಗಿ ಹೈಡ್ರೋಜನ್ ಪೆರಾಕ್ಸೈಡ್‌ನೊಂದಿಗೆ ಮಿಶ್ರಗೊಂಡಿರುತ್ತದೆ. ಈ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಅಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳನ್ನು ಉಂಟು ಮಾಡಬಹುದು. ಈಗಾಗಲೇ ಈ ಸಮಸ್ಯೆಗಳನ್ನು ಹೊಂದಿರುವವರು ಹೇರ್ ಡೈ ಬಳಸಿದರೆ ಲಕ್ಷಣಗಳು ಇನ್ನಷ್ಟು ತೀವ್ರಗೊಳ್ಳಬಹುದು.

ಹಾರ್ಮೋನ್‌ಗಳ ಅಸಮತೋಲನ

ಹೇರ್ ಡೈನಲ್ಲಿರುವ ರೆಸಾರ್ಸಿನಾಲ್ ರಾಸಾಯನಿಕವು ಶರೀರದಲ್ಲಿ ಹಾರ್ಮೋನ್‌ಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಯುರೋಪಿಯನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯಂತೆ ದೀರ್ಘ ಕಾಲ ಹೇರ್ ಡೈ ಬಳಕೆಯು ಟೆಸ್ಟೋಸ್ಟಿರಾನ್ ಮಟ್ಟದಲ್ಲಿ ಏರಿಕೆಯೊಂದಿಗೆ ಗುರುತಿಸಿಕೊಂಡಿದೆ. ಹೇರ್ ಡೈ ಅನ್ನು ಎಂದಿಗೂ ಬಳಸದ ಮಹಿಳೆಯರಿಗೆ ಹೋಲಿಸಿದರೆ 10 ವರ್ಷ ಮತ್ತು ಅದಕ್ಕೂ ಹೆಚ್ಚು ಸಮಯದಿಂದ ಹೇರ್ ಡೈ ಬಳಸುತ್ತಿರುವ ಮಹಿಳೆಯರಲ್ಲಿ ಟೆಸ್ಟೋಸ್ಟಿರಾನ್ ಮಟ್ಟವು ಶೇ.14ರಷ್ಟು ಹೆಚ್ಚಿದ್ದುದು ಅಧ್ಯಯನದಲ್ಲಿ ಕಂಡು ಬಂದಿದೆ.

ಅಲರ್ಜಿಕ್ ಕಾಂಟ್ಯಾಕ್ಟ್ ಡರ್ಮಟೈಟಿಸ್

ಹೇರ್ ಡೈನಲ್ಲಿರುವ ರಾಸಾಯನಿಕ ಪಿಪಿಡಿಯು ಚರ್ಮದಲ್ಲಿ ಹೀರಿಕೊಳ್ಳಲ್ಪಡುತ್ತದೆ ಮತ್ತು ಅಲರ್ಜಿಕ್ ಕಾಂಟ್ಯಾಕ್ಟ್ ಡರ್ಮಟೈಟಿಸ್ ಅಥವಾ ಅಲರ್ಜಿಕಾರಕಗಳ ಸ್ಪರ್ಶದಿಂದ ಉಂಟಾಗುವ ಚರ್ಮದುರಿತಕ್ಕೆ ಕಾರಣವಾಗುತ್ತದೆ.

 ಭ್ರೂಣಕ್ಕೆ ಹಾನಿ

ಮಹಿಳೆಯರು ಗರ್ಭಾವಸ್ಥೆಯಲ್ಲಿರುವಾಗ ಹೇರ್ ಡೈ ಬಳಕೆಯು ಅವರಿಗೆ ಮತ್ತು ಅವರ ಗರ್ಭದಲ್ಲಿರುವ ಭ್ರೂಣಕ್ಕೆ ಸುರಕ್ಷಿತವಲ್ಲ. ಗರ್ಭಿಣಿಯರು ಮತ್ತು ಹಾಲೂಡಿಸುವ ತಾಯಂದಿರು ಹೇರ್ ಡೈ ಬಳಸುವುದು ಅವರಿಗೆ,ಭ್ರೂಣಕ್ಕೆ ಮತ್ತು ಶಿಶುವಿನ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎನ್ನುವುದನ್ನು ಇಂಟರ್‌ನ್ಯಾಷನಲ್ ಜರ್ನಲ್ ಆರ್ಫ ಟ್ರೈಕಾಲಜಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ದೃಢಪಡಿಸಿದೆ.

ಕ್ಯಾನ್ಸರ್

ಹೇರ್ ಡೈನಲ್ಲಿರುವ ಫಾರ್ಮಾಲ್ಡಿಹೈಡ್,ಕೋಲ್ ಟಾರ್ ಮತ್ತು ಇತರ ಅಪಾಯಕಾರಿ ರಾಸಾಯನಿಕಗಳು ಮೂತ್ರಕೋಶ ಕ್ಯಾನ್ಸರ್,ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ನಂತಹ ವಿವಿಧ ಕ್ಯಾನ್ಸರ್‌ಗಳೊಂದಿಗೆ ತಳುಕು ಹಾಕಿಕೊಂಡಿವೆ.

ಹೇರ್ ಡೈ ಬಳಸುವಾಗ ಮುನ್ನೆಚ್ಚರಿಕೆ ಕ್ರಮಗಳು: ತಲೆಗೂದಲಿಗೆ ಬಣ್ಣ ಹಚ್ಚಿಕೊಳ್ಳಲೇಬೇಕೆಂಬ ಅನಿವಾರ್ಯತೆ ನಿಮಗಿದ್ದರೆ ಪರ್ಮನೆಂಟ್ ಹೇರ್ ಡೈಯನ್ನು ಎಂದಿಗೂ ಬಳಸಬೇಡಿ,ಅದರ ಬದಲು ಸೆಮಿ ಪರ್ಮನೆಂಟ್ ಹೇರ್ ಡೈಯನ್ನು ಬಳಸಿ. ಕೂದಲಿಗೆ ಬಣ್ಣವನ್ನು ಹಚ್ಚಿಕೊಳ್ಳುವ ಮುನ್ನ ಕಿವಿಯ ಹಿಂಭಾಗದ ಚರ್ಮಕ್ಕೆ ಹಚ್ಚಿಕೊಂಡು ಪ್ಯಾಚ್ ಟೆಸ್ಟ್ ಮಾಡಿ. ಉರಿ ಅಥವಾ ಬೇರೆ ಯಾವುದೇ ಅಹಿತಕರ ಅನುಭವಾಗಿರದಿದ್ದರೆ ಮಾತ್ರ ಮುಂದುವರಿಯಿರಿ. ಆದರೆ ಯಾವುದೇ ವಿಧದ ಹೇರ್ ಡೈ ಬಳಸುವ ಮುನ್ನ ಚರ್ಮವೈದ್ಯರ ಸಲಹೆ ಪಡೆದುಕೊಳ್ಳುವುದು ಅತ್ಯುತ್ತಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News