ಗ್ರೀನ್ ಟೀ ಸೇವನೆಯ ಆರೋಗ್ಯಲಾಭಗಳು ಗೊತ್ತೇ?

Update: 2019-12-13 17:07 GMT

ಚಹಾ ವಿಶ್ವದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಪಾನೀಯವಾಗಿದೆ. ಭಾರತದಲ್ಲಿ ಚಹಾ ನೀರಿನ ನಂತರ ಅತ್ಯಂತ ಜನಪ್ರಿಯವಾದ ಪಾನೀಯವಾಗಿದೆ. ಹೆಚ್ಚಿನವರ ದಿನ ಪ್ರಾರಂಭವಾಗುವುದೇ ಚಹಾ ಸೇವನೆಯಿಂದ. ಇತ್ತೀಚಿಗೆ ಈ ದಿನಚರಿಯಲ್ಲಿ ಕೊಂಚ ಬದಲಾವಣೆಯಾಗುತ್ತಿದೆ. ಜನರು ಮಾಮೂಲು ಚಹಾಕ್ಕಿಂತ ಹಲವಾರು ಆರೋಗ್ಯಲಾಭಗಳನ್ನು ನೀಡುವ ಗ್ರೀನ್ ಟೀ ಅನ್ನು ಇಷ್ಟಪಡಲು ಆರಂಭಿಸಿದ್ದಾರೆ. ಇಲ್ಲಿವೆ ಅಂತಹ ಕೆಲವು ಆರೋಗ್ಯಲಾಭಗಳ ಕುರಿತು ಮಾಹಿತಿಗಳು......

►ವಯಸ್ಸಾಗುವುದರ ವಿರುದ್ಧ ಹೋರಾಡುತ್ತದೆ

  ಚರ್ಮದ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಮೂಲಿಕೆ ಉತ್ಪನ್ನಗಳಲ್ಲಿ ಗ್ರೀನ್ ಟೀ ಬಳಕೆಯಾಗುತ್ತದೆ. ಅದರಲ್ಲಿರುವ ವಯಸ್ಸಾಗುವುದನ್ನು ನಿರೋಧಿಸುವ ಮತ್ತು ಉರಿಯೂತ ನಿರೋಧಕ ಗುಣಗಳು ಬಿಸಿಲಿನಿಂದ ಹಾನಿ, ದದ್ದುಗಳು ಮತ್ತು ಸುಕ್ಕುಗಳಂತಹ ಹಾನಿಗಳ ವಿರುದ್ಧ ರಕ್ಷಣೆಯನ್ನು ನೀಡುವ ಮೂಲಕ ವಯಸ್ಸಾಗುತ್ತಿರುವ ಲಕ್ಷಣಗಳನ್ನು ದೂರಮಾಡುತ್ತವೆ. ಗ್ರೀನ್ ಟೀಯಲ್ಲಿರುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳಾದ ಪಾಲಿಫಿನಾಲ್‌ಗಳು ಉತ್ಕರ್ಷಣದಿಂದ ಉಂಟಾಗುವ ಹಾನಿಯನ್ನು ತಡೆಯುತ್ತವೆ ಮತ್ತು ಅಕಾಲ ವಯಸ್ಸಾಗುವಿಕೆಯ ವಿರುದ್ಧ ರಕ್ಷಣೆ ನೀಡುತ್ತವೆ.

►ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಗ್ರೀನ್ ಟೀಯಲ್ಲಿರುವ ಪಾಲಿಫಿನಾಲ್‌ಗಳು ಅಪಧಮನಿಗಳ ಆರೋಗ್ಯಕ್ಕೆ ಪೂರಕವಾಗಿದ್ದು ಹೃದಯವನ್ನು ಹಾನಿಯಿಂದ ರಕ್ಷಿಸುತ್ತವೆ. ದಿನಕ್ಕೆ 2ರಿಂದ 3 ಕಪ್ ಗ್ರೀನ್ ಟೀ ಕುಡಿಯುವದರಿಂದ ಹೃದ್ರೋಗವುಂಟಾಗುವ ಅಪಾಯದಿಂದ ದೂರವಿರಬಹುದು ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಉತ್ಕರ್ಷಣ ನಿರೋಧಕಗಳು ಶರೀರದಲ್ಲಿಯ ಹಾನಿಕಾರಕ ವಿಷವಸ್ತುಗಳನ್ನು ನಿವಾರಿಸುವಲ್ಲಿ ನೆರವಾಗುವ ಮೂಲಕ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತವೆ ಮತ್ತು ಹೃದಯಾಘಾತದ ಅಪಾಯಗಳನ್ನು ಕಡಿಮೆ ಮಾಡುತ್ತವೆ.

► ತೂಕ ಇಳಿಸಲು ನೆರವಾಗುತ್ತದೆ

ಗ್ರೀನ್ ಟೀ ಶರೀರದ ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ಕರಗಿಸಲು ಹಾಗೂ ಒಟ್ಟಾರೆ ದೈಹಿಕ ನೋಟವನ್ನು ಹೆಚ್ಚಿಸಲು ನೆರವಾಗುತ್ತದೆ.

► ಮಿದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

 ಗ್ರೀನ್ ಟೀ ಮಿದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ವೃದ್ಧಾಪ್ಯದಲ್ಲಿ ಮಿದುಳಿಗೆ ರಕ್ಷಣೆಯನ್ನೂ ನೀಡುತ್ತದೆ. ಅದರಲ್ಲಿನ ಜೈವಿಕ ಕ್ರಿಯಾಶೀಲ ಸಂಯುಕ್ತಗಳು ನ್ಯೂರಾನ್‌ಗಳ ರಕ್ಷಣೆಗೆ ನೆರವಾಗುತ್ತವೆ. ಅಲ್ಲದೆ ಗ್ರೀನ್ ಟೀ ಸೇವಿಸದ ಹಿರಿಯ ವ್ಯಕ್ತಿಗಳಲ್ಲಿ ಗ್ರಹಣ ಶಕ್ತಿ ಕುಂಠಿತಗೊಳ್ಳುತ್ತದೆ.

►ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

 ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸಲು ಮತ್ತು ತನ್ಮೂಲಕ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸಲು ಗ್ರೀನ್ ಟೀ ನೆರವಾಗುತ್ತದೆ ಎನ್ನುವುದನ್ನು ಇತ್ತೀಚಿನ ಸಂಶೋಧನೆಗಳು ತೋರಿಸಿವೆ. ದೀರ್ಘಾವಧಿಯಲ್ಲಿ ಟೈಪ್ 2 ಮಧುಮೇಹ ಉಂಟಾಗುವ ಅಪಾಯವನ್ನೂ ಅದು ಕಡಿಮೆಗೊಳಿಸಬಹುದು.

ಸೋಂಕುಗಳನ್ನು ತಡೆಯುತ್ತದೆ

 ಗ್ರೀನ್ ಟೀ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮತ್ತು ವೈರಸ್‌ಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಹೊಂದಿರುವದರಿಂದ ಸೋಂಕುಗಳಿಗೆ ಗುರಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತದೆ

 ಕೆಲವು ವಿಧಗಳ ಕ್ಯಾನ್ಸರ್‌ನೊಂದಿಗೆ ಗುರುತಿಸಿಕೊಂಡಿರುವ ಆ್ಯಂಟಿ-ಅಪೊಪ್ಟೊಟಿಕ್ ಪ್ರೋಟಿನ್ ಅನ್ನು ಗ್ರೀನ್ ಟೀ ಪ್ರತಿಬಂಧಿಸುತ್ತದೆ. ಅಲ್ಲದೆ ಅದರಲ್ಲಿರುವ ಪಾಲಿಫಿನಾಲ್‌ಗಳು ಶರೀರದಲ್ಲಿಯ ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸುವಲ್ಲಿ ನೆರವಾಗುತ್ತವೆ. ಈ ಫ್ರೀ ರ್ಯಾಡಿಕಲ್‌ಗಳು ಕ್ಯಾನ್ಸರ್‌ಕಾರಕ ಸಂಯುಕ್ತಗಳೊಂದಿಗೆ ಸೇರಿಕೊಂಡು ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಹೆಚ್ಚಿಸುವ ಸಂಯುಕ್ತಗಳಾಗಿವೆ.

► ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ

ಗ್ರೀನ್ ಟೀ ತಲೆಗೂದಲಿಗೂ ಅದ್ಭುತ ಲಾಭಗಳನ್ನು ನೀಡುತ್ತದೆ. ಅದರಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ,ಕೂದಲು ಉದುರುವುದನ್ನು ತಗ್ಗಿಸುತ್ತವೆ ಮತ್ತು ಕೂದಲಿಗೆ ಉತ್ತಮ ಹೊಳಪನ್ನು ನೀಡುತ್ತವೆ. ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನೂ ಗ್ರೀನ್ ಟೀ ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News