ಅಪಾಯಕಾರಿ ಮೂತ್ರನಾಳದ ಸೋಂಕಿನ ಲಕ್ಷಣಗಳನ್ನು ತಿಳಿದುಕೊಳ್ಳಿ

Update: 2019-12-19 18:32 GMT

ಮೂತ್ರನಾಳ ಸೋಂಕು ಅಥವಾ ಯುಟಿಐ ಸಾಮಾನ್ಯವಾಗಿ ಮಹಿಳೆಯರನ್ನು ಕಾಡುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯ ಕುರಿತು ಜನರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳಿವೆ. ಈ ಸಮಸ್ಯೆ ಕೇವಲ ಮಹಿಳೆಯರಿಗೆ ಸೀಮಿತ ಎಂಬ ನಂಬಿಕೆ ಜನರಲ್ಲಿದೆ,ಆದರೆ ಇದು ನಿಜವಲ್ಲ. ಪುರುಷರು ಮತ್ತು ಮಕ್ಕಳಲ್ಲಿಯೂ ಯುಟಿಐ ಉಂಟಾಗಬಹುದು. ಆದರೆ ದೈಹಿಕ ಸ್ವರೂಪದಿಂದಾಗಿ ಯುಟಿಐ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎನ್ನುವುದು ನಿಜ. ಗುದದ್ವಾರ ಮತ್ತು ಮೂತ್ರ ವಿಸರ್ಜನಾ ನಾಳದ ಸಾಮೀಪ್ಯದಿಂದಾಗಿ ಮಲದಂತಹ ಹೊಲಸಿನ ಕೆಲಭಾಗ ಮೂತ್ರವ್ಯವಸ್ಥೆಯನ್ನು ಸೇರಿಕೊಳ್ಳುತ್ತದೆ ಮತ್ತು ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸೋಂಕನ್ನುಂಟು ಮಾಡುತ್ತವೆ.

ಪುರುಷರು ಮತ್ತು ಮಕ್ಕಳಲ್ಲಿ ಯುಟಿಐಗೆ ಕಾರಣಗಳು

  ಸ್ವಚ್ಛತೆಯ ಕೊರತೆ ಮತ್ತು ಮೂತ್ರಪಿಂಡ ಕಲ್ಲುಗಳು ಪುರುಷರು ಮತ್ತು ಮಕ್ಕಳು ಯುಟಿಐಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಇದಲ್ಲದೆ ದೀರ್ಘಕಾಲಿಕ ಮಧುಮೇಹವೂ ಯುಟಿಐಗೆ ಕಾರಣವಾಗುತ್ತದೆ. ಯುಟಿಐನ ಆರಂಭಿಕ ಲಕ್ಷಣಗಳು ಕಂಡು ಬಂದರೆ ಅಂತಹ ವ್ಯಕ್ತಿಗಳು ಹೆಚ್ಚೆಚ್ಚು ನೀರನ್ನು ಸೇವಿಸಲು ಆರಂಭಿಸಬೇಕು. ಮುಖ್ಯವಾದದ್ದೆಂದರೆ ಸ್ವಯಂ ವೈದ್ಯರಾಗದೆ ಒಳ್ಳೆಯ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳಬೇಕು.

 ಯುಟಿಐ ಅನ್ನು ಗುರುತಿಸುವುದು ಹೇಗೆ?

 ಮೂತ್ರ ವಿಸರ್ಜನೆ ಸಂದರ್ಭದಲ್ಲಿ ಉರಿ,ನೋವು ಮತ್ತು ತುರಿಕೆ,ಪದೇ ಪದೇ ಟಾಯ್ಲೆಟ್‌ಗೆ ಹೋಗಬೇಕೆಂಬ ತುಡಿತ, ಮೂತ್ರಕ್ಕೆ ಅತಿಯಾದ ವಾಸನೆ,ಪೇಲವ ಹಳದಿ ಬಣ್ಣದ ಮೂತ್ರ,ನಡುಕದೊಂದಿಗೆ ಜ್ವರ,ಹಸಿವು ಕಡಿಮೆಯಾಗುವುದು, ನಿಶ್ಶಕ್ತಿ ಮತ್ತು ಸ್ಥಿತಿ ತೀವ್ರ ಹದಗೆಟ್ಟಿದ್ದರೆ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಇವು ಯುಟಿಐನ ಪ್ರಮುಖ ಲಕ್ಷಣಗಳಾಗಿವೆ. ಈ ಪೈಕಿ ಯಾವುದೇ ಒಂದು ಲಕ್ಷಣ ಗೋಚರವಾದರೂ ವಿಳಂಬಿಸದೆ ವೈದ್ಯರನ್ನು ಸಂಪರ್ಕಿಸಬೇಕು. ಸೋಂಕಿನ ನಿಜವಾದ ಕಾರಣವನ್ನು ತಿಳಿದುಕೊಳ್ಳಲು ಮೂತ್ರ ಪರೀಕ್ಷೆಯ ಬಳಿಕವೇ ವೈದ್ಯರು ಚಿಕಿತ್ಸೆಯನ್ನು ಆರಂಭಿಸುತ್ತಾರೆ.

ಗರ್ಭಾವಸ್ಥೆಯಲ್ಲಿ ಯುಟಿಐ ಅಪಾಯವು ಹೆಚ್ಚುತ್ತದೆಯೇ?

ಮಹಿಳೆಯರು ಗರ್ಭ ಧರಿಸಿದ ಅವಧಿಯಲ್ಲಿ ಶರೀರದಲ್ಲಿ ಪ್ರೊಜೆಸ್ಟಿರಾನ್ ಹಾರ್ಮೋನ್ ಮಟ್ಟವು ಗಣನೀಯವಾಗಿ ಹೆಚ್ಚುತ್ತದೆ ಮತ್ತು ಇದು ಯುಟಿಐಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ವಾಸ್ತವದಲ್ಲಿ ಈ ಹಾರ್ಮೋನ್ ಗಭಾಶಯವನ್ನು ಗರ್ಭಾವಸ್ಥೆಗೆ ಸಜ್ಜುಗೊಳಿಸುತ್ತದೆ ಮತ್ತು ಗರ್ಭಾಶಯ ಹಾಗೂ ಮೂತ್ರಕೋಶದ ಸ್ನಾಯುಗಳನ್ನು ಸಡಿಲಿಸುತ್ತದೆ. ಇದರ ಪರಿಣಾಮವಾಗಿ ಮೂತ್ರದ ಹರಿವು ನಿಧಾನಗೊಳ್ಳುತ್ತದೆ. ಈ ಕಾರಣದಿಂದಾಗಿ ಗರ್ಭಾವಸ್ಥೆಯಲ್ಲಿ ಯುಟಿಐ ಜೊತೆ ಮೂತ್ರಪಿಂಡ ಸೋಂಕಿನ ಅಪಾಯವೂ ಹೆಚ್ಚುತ್ತದೆ. ಆದ್ದರಿಂದ ಗರ್ಭಿಣಿಯರು ವೈಯಕ್ತಿಕ ನೈಮರ್ಲ್ಯದ ಬಗ್ಗೆ ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

ನವಜಾತ ಶಿಶುಗಳೂ ಇಂತಹುದೇ ಸಮಸ್ಯೆಗಳನ್ನು ಹೊಂದಿರಬಹುದು, ಆದ್ದರಿಂದ ಅವುಗಳಿಗೆ ಸ್ನಾನ ಮಾಡಿಸುವಾಗ ವೈಯಕ್ತಿಕ ನೈರ್ಮಲ್ಯದ ಬಗ್ಗೆ ವಿಶೇಷ ಎಚ್ಚರಿಕೆಯನ್ನು ವಹಿಸುವುದು ಅಗತ್ಯವಾಗುತ್ತದೆ. ಗಂಡುಮಕ್ಕಳ ಮೂತ್ರ ವ್ಯವಸ್ಥೆಯಲ್ಲಿ ಜನ್ಮಜಾತ ದೋಷಗಳಿದ್ದರೂ ಯುಟಿಐ ಸಮಸ್ಯೆಗೆ ಗುರಿಯಾಗಬಹುದು.

ಸಾರ್ವಜನಿಕ ಶೌಚಾಲಯ ಬಳಕೆಯಿಂದ ಯುಟಿಐ ಉಂಟಾಗುತ್ತದೆಯೇ?

ಸ್ವಚ್ಛತೆಯಿಲ್ಲದ ಸಾರ್ವಜನಿಕ ಅಥವಾ ಖಾಸಗಿ ಶೌಚಾಲಯಗಳು ಯುಟಿಐಗೆ ಕಾರಣವಾಗಬಲ್ಲವು. ಆದ್ದರಿಂದ ಸಾರ್ವಜನಿಕ ಶೌಚಾಲಯ ಮೇಲ್ನೋಟಕ್ಕೆ ಸ್ವಚ್ಛವಾಗಿರುವಂತೆ ಕಂಡುಬಂದರೂ ಬಳಕೆಗೆ ಮೊದಲು ಅದನ್ನು ಚೆನ್ನಾಗಿ ಫ್ಲಷ್ ಮಾಡುವುದು ಅಗತ್ಯ. ಬಳಕೆಗೆ ಮುನ್ನ ಟಾಯ್ಲೆಟ್ ಸ್ಯಾನಿಟೈಜರ್ ಬಳಸಿದರೆ ಒಳ್ಳೆಯದು.

ಯುಟಿಐ ತಡೆಯಲು ಕೆಲವು ಟಿಪ್ಸ್

ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಕಾಳಜಿಯಿರಲಿ. ಮನೆಯಲ್ಲಿಯ ಟಾಯ್ಲೆಟ್‌ಗಳ ಸ್ವಚ್ಛತೆ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಯಾವಾಗಲೂ ಹತ್ತಿಯ ಒಳಉಡುಪುಗಳನ್ನು ಧರಿಸಬೇಕು. ದಂಪತಿಗಳ ಪೈಕಿ ಯಾರಿಗಾದರೂ ಒಬ್ಬರಿಗೆ ಯುಟಿಐ ಸೋಂಕು ಇದ್ದರೆ ದೈಹಿಕ ಸಂಬಂಧ ಬೇಡವೇ ಬೇಡ. ಸದಾ ಹೆಚ್ಚೆಚ್ಚು ನೀರು ಸೇವಿಸುತ್ತಿರಬೇಕು. ಏನಾದರೂ ಸಮಸ್ಯೆ ಕಂಡುಬಂದರೆ ವಿಳಂಬಿಸದೆ ವೈದ್ಯರನ್ನು ಸಂಪರ್ಕಿಸಬೇಕು. ನೀರು,ಮಜ್ಜಿಗೆ,ಲಸ್ಸಿ ಮತ್ತು ಹಣ್ಣಿನ ರಸಗಳಂತಹ ದ್ರವಗಳನ್ನು ಯಥೇಚ್ಛವಾಗಿ ಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News